ಬಲಪಂಥೀಯ ಬೆಂಬಲಿಗ ಪತ್ರಕರ್ತೆ ಸ್ವಾತಿ ಚಂದ್ರಶೇಖರ್ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ವಕ್ತಾರೆಯಾಗಿ ನೇಮಕ
ಬೆಂಗಳೂರು: ಬುಧವಾರ ಬಲಪಂಥೀಯ ಬೆಂಬಲಿಗ ಪತ್ರಕರ್ತೆ ಸ್ವಾತಿ ಚಂದ್ರಶೇಖರ್, ಬಿಜೆಪಿ ಸಂಸದ ಸಂಗಣ್ಣ ಕರಡಿ ಮತ್ತು ಬೆಳಗಾವಿ ಗ್ರಾಮೀಣ ಮಾಜಿ ಶಾಸಕ ಶಿವಪುತ್ರ ಮಳಗಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಸೇರಿದ್ದಾರೆ.
ಸ್ವಾತಿ ಚಂದ್ರಶೇಖರ್ ಅವರ ಫೇಸ್ಬುಕ್ ಪ್ರೊಫೈಲ್‌ನಲ್ಲಿ ಅವರು ಟಿವಿ5 ನ್ಯೂಸ್‌ನ ದಿಲ್ಲಿ ಬ್ಯುರೋ ಮುಖ್ಯಸ್ಥೆ ಎಂದು ತಿಳಿಸಲಾಗಿದೆ. ಆಕೆ ಕಾಂಗ್ರೆಸ್ ಸೇರಿದ ಬೆನ್ನಿಗೇ ಆಕೆಯನ್ನು ಪಕ್ಷದ ವಕ್ತಾರೆಯನ್ನಾಗಿ ನೇಮಿಸಲಾಗಿದೆ.
ಆಕೆಯ ಹಿನ್ನೆಲೆ ಮತ್ತು ಆಕೆಯ ಸಾಮಾಜಿಕ ಜಾಲತಾಣ ಚಟುವಟಿಕೆಗಳನ್ನು ಗಮನಿಸಿದಾಗ ಆಕೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯ ಕಟ್ಟಾ ಬೆಂಬಲಿಗರೆಂದು ಕಂಡು ಬರುತ್ತದೆ. ಆಕೆ ತಮ್ಮ ಪೋಸ್ಟ್‌ಗಳಲ್ಲಿ ಬಿಜೆಪಿ ನಾಯಕರಾದ ಅಡ್ವಾಣಿ, ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ತಮ್ಮ ಪ್ರಖರ ಹಿಂದುತ್ವ ಧೋರಣೆಗೆ ಹೆಸರಾಗಿರುವ ಸಂಸದ ತೇಜಸ್ವಿ ಸೂರ್ಯ ಅವರನ್ನು ಬೆಂಬಲಿಸಿರುವುದೂ ತಿಳಿದು ಬರುತ್ತದೆ.
ಬಿಜೆಪಿ ಕಟ್ಟಾ ಬೆಂಬಲಿಗರಾಗಿದ್ದುದು ತಿಳಿದಿದ್ದೂ ಸ್ವಾತಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಬೆನ್ನಿಗೇ ಆಕೆಯನ್ನು ತನ್ನ ವಕ್ತಾರೆಯನ್ನಾಗಿ ನೇಮಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವೊದಗಿಸಿದೆ.