ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಜನರ ಜೀವನ ದುಸ್ತರವಾಗಿದೆ: ಬಸವರಾಜ ಬೊಮ್ಮಾಯಿ

Update: 2023-07-22 10:38 GMT

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಜೀವನ ದುಸ್ತರ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ವಿದ್ಯುತ್ ದರ ಹೆಚ್ಚಳ ಮಾಡಿದರು. ಎಲ್ಲ ಕಾಯಿಪಲ್ಯೆ ದರ ಹೆಚ್ಚಳ ಆಗಿದೆ. ಈಗ ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಆಗಸ್ಟ್ 1ರ ನಂತರ ಸೈಟ್, ಕಾರು, ಹೊಸ ಮನೆ ಖರೀದಿ ದರವೂ ಹೆಚ್ಚಳ‌ವಾಗಲಿದೆ ಎಂದು ಹೇಳಿದರು.

ದ್ವೇಷದ ರಾಜಕಾರಣ ಎಲ್ಲಿಗೆ ಹೋಗುತ್ತಿದೆ ಅನ್ನುವುದು ಗೊತ್ತಾಗುತ್ತಿಲ್ಲ. ಪಿಎಸ್ ಐ ಹಗರಣ ನಾವೇ ಹೊರಗೆ ತಂದು ಸಿಐಡಿ ತನಿಖೆಗೆ ಆದೇಶ ಮಾಡಿದ್ದೆವು. ಪ್ರಕರಣದಲ್ಲಿ ಎಡಿಜಿಪಿ ಹುದ್ದೆಯ ಅಧಿಕಾರಿಯನ್ನು ಜೈಲಿಗೆ ಕಳುಹಿಸಿದ್ದೇವೆ.‌ಈ ಹಗರಣದಲ್ಲಿ ಕಾಂಗ್ರೆಸ್ ನವರು ಇದ್ದಾರೆ. ಪ್ರಕರಣದ ತನಿಖೆ ನಡೆದು ಕೊರ್ಟ್‌ ನಲ್ಲಿದೆ‌.‌ ಈ ಸಂದರ್ಭ ಮತ್ತೆ ತನಿಖೆಗೆ ಆದೇಶ ಮಾಡಿರುವುದು ದ್ವೇಷ ರಾಜಕೀಯವನ್ನು ತೋರಿಸುತ್ತದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯವರು ಗೋಡ್ಸೆ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಲಿ ಅಂತ ಹೇಳಿದ್ದಾರೆ‌‌. ನಕಲಿ ಗಾಂಧಿಗಳ ಜಪ ಮಾಡುತ್ತಿರುವವರು ಕಾಂಗ್ರೆಸ್ ನವರು. ಗಾಂದೀಜಿಯನ್ನು ಹೆಚ್ಚು ದುರುಪಯೋಗ ಮಾಡಿ ಕೊಂಡವರು ಕಾಂಗ್ರೆಸ್ ನವರು. ಗಾಂಧೀಜಿ ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅನ್ನು ವಿಸರ್ಜಿಸಿ ಅಂತ ಹೇಳಿದ್ದರು. ಯಾಕೆಂದರೆ ಕಾಂಗ್ರೆಸ್ ನವರಿಗೆ ದೇಶ ಆಳಲು ಬರುವುದಿಲ್ಲ ಅಂತ. ಆದರೆ, ಇವರು ಗಾಂಧೀಜಿ‌ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News