ನಾಳೆಯಿಂದ(ಮೇ 29) ಶಾಲೆ ಆರಂಭ | ಮೊದಲ ದಿನವೇ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ

Update: 2024-05-28 14:38 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯಾದ್ಯಂತ ಇಂದು(ಮೇ 29) ಪ್ರಾಥಮಿಕ ಹಾಗೂ ಫ್ರೌಡಶಾಲೆಗಳು ಪುನಾರಾಂಭವಾಗುತ್ತಿದ್ದು, ಮೊದಲ ದಿನವೇ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಗುತ್ತಿದೆ. ಮಕ್ಕಳು, ಶಿಕ್ಷಕರು ಒಂದೂವರೆ ತಿಂಗಳಿಂದ ಬೇಸಿಗೆ ರಜೆಯನ್ನು ಮುಗಿಸಿ ಶಾಲೆಗೆ ಬರಲಿದ್ದಾರೆ. ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಪ್ರಾರಂಭೋತ್ಸವಕ್ಕೆ ಸಿದ್ಧತೆಯನ್ನು ನಡೆಸಲಾಗಿದೆ.

ಶಾಲಾ ಪ್ರಾರಂಭೋತ್ಸವದೊಂದಿಗೆ ಮೊದಲ ದಿನ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಶಾಲೆಗಳಲ್ಲಿ ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ, ಬಿಸಿಯೂಟ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇಡೀ ಶಾಲೆಯನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸಬೇಕು ಎಂದು ಮುಖ್ಯಶಿಕ್ಷಕರುಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.

ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಅವರಿಗೆ ಹೂ, ಚಾಕೊಲೇಟ್ ಸೇರಿದಂತೆ ಯಾವುದಾದರೂ ಸಿಹಿ ನೀಡಿ ಸ್ವಾಗತಿಸಬೇಕು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಹಕಾರದೊಂದಿಗೆ ಈ ಕಾರ್ಯಕ್ರಮ ಕೈಗೊಳ್ಳಬೇಕು. ಮೊದಲ ದಿನ ಬಿಸಿಯೂಟದೊಂದಿಗೆ ಮಕ್ಕಳಿಗೆ ಸಿಹಿಯನ್ನೂ ವಿತರಣೆ ಮಾಡಬೇಕು ಎಂದು ಇಲಾಖಾ ಆಯುಕ್ತರು ಸೂಚನೆ ನೀಡಿದ್ದಾರೆ.

ಈ ಬಾರಿ ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಎರಡು ಜೊತೆ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ನೀಡತ್ತದೆ. ಈಗಾಗಲೇ ಸಮವಸ್ತ್ರ ಪೂರ್ಣ ಪ್ರಮಾಣದಲ್ಲಿ ತಾಲ್ಲೂಕು ಮಟ್ಟಕ್ಕೆ ರವಾನೆಯಾಗಿದ್ದು, ಪಠ್ಯಪುಸ್ತಕಗಳನ್ನು ಕೂಡ ಶೇ.75ರಿಂದ 80ರಷ್ಟು ಸರಬರಾಜು ಮಾಡಲಾಗಿದೆ.

ಈಗಾಗಲೇ ಶಾಲೆಗೆ ಬಂದಿರುವ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಮೊದಲನೇ ದಿನವೇ ವಿತರಿಸಬೇಕು. ಅಂದು ಶಾಲಾ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಕರೆಯಿಸಿ ಅವರಿಂದಲೇ ಪುಸ್ತಕ, ಸಮವಸ್ತ್ರ ವಿತರಿಸಬೇಕು. ಇದರಿಂದ ಮಕ್ಕಳು ಶಾಲೆಗೆ ಬರಲು ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆಯು ಮಾಹಿತಿಯನ್ನು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News