ಸೆ. 23ರಿಂದ 2 ದಿನಗಳ ಕಥಾ ಕಮ್ಮಟ

Update: 2023-09-22 15:44 GMT

ಬೆಂಗಳೂರು, ಸೆ. 22: ಬೆಂಗಳೂರಿನ ಓದುಗರ ವೇದಿಕೆ ‘ಈ ಹೊತ್ತಿಗೆ’ಯ ದಶಮಾನೋತ್ಸವದ ನಿಮಿತ್ತ, ಬಳ್ಳಾರಿಯ ಅರಿವು ಸಂಸ್ಥೆ ಮತ್ತು ಮರ್ಚೆಡ್‌ ಟ್ರಸ್ಟ್‌ನ ಸಹಯೋಗದಲ್ಲಿ ಸೆ. 23 ಮತ್ತು 24ರಂದು ನಗರದ ಗುಗ್ಗರಹಟ್ಟಿಯಲ್ಲಿರುವ ಜ್ಞಾನಾಮೃತ ಪದವಿಪೂರ್ವ ಕಾಲೇಜಿನಲ್ಲಿ ಎರಡು ದಿನಗಳ ಕಥಾ ಕಮ್ಮಟವನ್ನು ಏರ್ಪಡಿಸಲಾಗಿದೆ.

ವಿಮರ್ಶಕಿ ಮತ್ತು ಬರಹಗಾರ್ತಿ ಡಾ. ಎಂ ಎಸ್ ಆಶಾದೇವಿ ಈ ಕಥಾ ಕಮ್ಮಟದ ನಿರ್ದೇಶಕರಾಗಿದ್ದಾರೆ. ಈ ಕಥಾ ಕಮ್ಮಟದಲ್ಲಿ ಬಳ್ಳಾರಿ ಸಹಿತ ವಿವಿ‘ ಜಿಲ್ಲೆಗಳಿಂದ 37 ಜನ ಕಥೆಗಾರರು, ಕಥಾಸಕ್ತರು ಹಾಗೂ 7 ಜನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಕಥಾ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಥೆಗಾರ, ವಿಮರ್ಶಕ ಎಸ್ ದಿವಾಕರ್, ಡಾ. ಅಮರೇಶ್ ನುಗಡೋಣಿ, ಜಯಶ್ರೀ ಕಾಸರವಳ್ಳಿ, ಪದ್ಮನಾಭ ಭಟ್, ಅನುಪಮಾ ಪ್ರಸಾದ್ ಅವರು ಭಾಗವಹಿಸಲಿದ್ದಾರೆ. ಸೆ. 23ರಂದು ಬೆಳಗ್ಗೆ 9:30ಕ್ಕೆ ಜ್ಞಾನಾಮೃತ ಪದವಿಪೂರ್ವ ಕಾಲೇಜಿನಲ್ಲಿ ಕಥಾ ಕಮ್ಮಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉದ್ಘಾಟನೆಯನ್ನು ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ನೆರವೇರಿಸಲಿದ್ದಾರೆ. ಈ ಹೊತ್ತಿಗೆ ಸಂಸ್ಥೆಯ ಸಂಸ್ಥಾಪಕ ಅಭಿನೇತ್ರಿ, ಬರಹಗಾರ್ತಿ ಜಯಲಕ್ಷ್ಮೀ ಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರಿವು ಸಂಸ್ಥೆಯ ಕಾರ್ಯದರ್ಶಿ ಡಾ. ಅರವಿಂದ ಪಟೇಲ್, ಮರ್ಚೆಡ್ ಟ್ರಸ್ಟ್ ಅಧ್ಯಕ್ಷ ಎಂ. ಜಿ. ಗೌಡ  ಭಾಗವಹಿಸಲಿದ್ದಾರೆ. ಡಾ. ಸುಮಾ ಗುಡಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಸೆ.24ರಂದು ಸಂಜೆ ಕಮ್ಮಟದ ಸಮಾರೋಪವು ಎಸ್ ದಿವಾಕರ್ ಅವರಿಂದ ನೆರವೇರಲಿದ್ದು, ಕವಿ ಆರಿಫ್ ರಾಜ ಅವರು ಕಾರ್ಯಕ್ರಮದ ಅತಿಥಿಯಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News