ಬೆಂಗಳೂರು ಬಂದ್‌ ಗೆ ಬೆಂಬಲವಿಲ್ಲ, ಸೆ.29ಕ್ಕೆ ʼಕರ್ನಾಟಕ ಬಂದ್ʼ: ವಾಟಾಳ್ ನಾಗರಾಜ್

Update: 2023-09-25 15:08 GMT

ಬೆಂಗಳೂರು, ಸೆ.25: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡಬಾರದೆಂದು ಒತ್ತಾಯಿಸಿ ಕರೆ ನೀಡಿದ್ದ ನಾಳೆಯ ಬೆಂಗಳೂರು ಬಂದ್ ಹೋರಾಟಕ್ಕೆ ಬೆಂಬಲ ಸೂಚಿಸದ ಕನ್ನಡ ಒಕ್ಕೂಟವು, ಸೆ.29(ಶುಕ್ರವಾರ) ‘ಅಖಂಡ ಕರ್ನಾಟಕ ಬಂದ್’ ಮಾಡುವುದಾಗಿ ಘೋಷಿಸಿದೆ.

ಸೋಮವಾರ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ರೈತ ಹಾಗೂ ಕನ್ನಡ ಪರ ಹೋರಾಟಗಾರರು, ‘ಮಂಗಳವಾರ ಬೆಂಗಳೂರು ಬಂದ್ ನಡೆಸಿದರೆ, ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಾಗಿ, ಸೆ.29ಕ್ಕೆ ‘ಕರ್ನಾಟಕ ಬಂದ್’ ನಡೆಸಿ ಪ್ರಧಾನಿ ಮೋದಿ, ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಪ್ರಕಟಿಸಿದರು.

ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಒಕ್ಕೂಟದ ವಾಟಾಳ್ ನಾಗರಾಜ್, ‘ಮಂಗಳವಾರ ಬೆಂಗಳೂರು ಬಂದ್ ಕರೆ ನೀಡಿದ್ದು, ಇದರಲ್ಲಿ ರಾಜಕೀಯ ಪಕ್ಷಗಳ ಕೈವಾಡ ಇದೆ. ಹಾಗಾಗಿ, ಯಾವುದೇ ಕಾರಣಕ್ಕೂ ಈ ಬಂದ್ ಬೆಂಬಲ ನೀಡಲ್ಲ. ಬದಲಾಗಿ ಸೆ.29ರಂದು ಕರ್ನಾಟಕ ಬಂದ್ ನಡೆಸಲಾಗುವುದು ಎಂದು ಹೇಳಿದರು.

ಇನ್ನೂ, ಬೆಂಗಳೂರು ಬಂದ್ ಹೋರಾಟದಲ್ಲಿ ಯಾವುದೇ ಕಾರಣಕ್ಕೂ ಪಾಲ್ಗೊಳ್ಳುವುದಿಲ್ಲ. ಈ ಬಂದ್ ನಡೆಸುವ ಮುನ್ನ ನಮ್ಮೊಂದಿಗೆ ಯಾವುದೇ ರೀತಿಯ ಚರ್ಚೆ ನಡೆಸಿಲ್ಲ. ಜೊತೆಗೆ ಮಂಗಳವಾರ ಬೆಂಗಳೂರು ಬಂದ್ ಬಿಟ್ಟು ಸೆ.29ಕ್ಕೆ ಕರ್ನಾಟಕ ಬಂದ್ ನಡೆಸಿ ಪರಿಣಾಮಕಾರಿಯಾಗಿ ಒಗ್ಗೂಡಿ ಹೋರಾಟ ನಡೆಸೋಣ ಎಂದು ಮನವಿ ಮಾಡಿಕೊಂಡರು ಒಪ್ಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ಬಂದ್ ನಡೆಸಿದರೆ ಬರೀ ನಗರ ವಲಯಕ್ಕೆ ಮಾತ್ರ ಈ ಹೋರಾಟ ಸೀಮಿತವಾಗಲಿದೆ. ಆದರೆ ಕಾವೇರಿ ನದಿ ನೀರು ಬೆಂಗಳೂರು ಮಾತ್ರವಲ್ಲದೆ ನಾಲ್ಕೈದು ಜಿಲ್ಲೆಗಳ ವಿಷಯವಾಗಿದೆ. ಜೊತೆಗೆ ಇದು ಇಡೀ ರಾಜ್ಯದ ಮೇಲೆ ಪರಿಣಾಮ ಬೀರುವ ಜಲ ವಿವಾದ ಆಗಿದ್ದು, ಇದಕ್ಕೆ ಉತ್ತರ ಕರ್ನಾಟಕ ಭಾಗದ ಜನರು ಸಹ ಬೆಂಬಲ ಸೂಚಿಸಲಿದ್ದಾರೆ.ಹಾಗಾಗಿ ಕರ್ನಾಟಕ ಬಂದ್ ಒಂದೇ ಅಗತ್ಯವಿದ್ದು, ಇದಕ್ಕೆ ಸರಿಸುಮಾರು 1200ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಅಧಿಕೃತವಾಗಿ ಬೆಂಬಲ ನೀಡಿವೆ ಎಂದು ಅವರು ತಿಳಿಸಿದರು.

ಕನ್ನಡಪರ ಹೋರಾಟಗಾರ ಸಾರಾ ಗೋವಿಂದು ಮಾತನಾಡಿ, ‘ಶುಕ್ರವಾರ ಅಖಂಡ ಕರ್ನಾಟಕ ಬಂದ್ ಮಾಡುತ್ತೇವೆ. ಇದಕ್ಕೆ ಎಲ್ಲ ರೀತಿಯ ಸಂಘಟನೆಗಳು ಬೆಂಬಲ ಸೂಚಿಸಿವೆ. ಆದರೆ ಮಂಗಳವಾರ ಬೆಂಗಳೂರು ಹೋರಾಟ ಆಮ್ ಆದ್ಮಿ ಪಕ್ಷಕ್ಕೆ ಸೀಮಿತವಾಗಿದೆ. ಅಲ್ಲದೆ, ಅವರು ಈ ಹಿಂದೆ ಕನ್ನಡ, ನಾಡು, ನುಡಿ, ಜಲಕ್ಕೆ ನೀಡಿದ ಕೊಡುಗೆಗಳೇನು ಎಂದು ಪ್ರಶ್ನಿಸಿದರು.

ರೈತನಾಯಕ ಬಡಗಲಪುರ ನಾಗೇಂದ್ರ ಮಾತನಾಡಿ, ‘ಕರ್ನಾಟಕ ಬಂದ್‍ಗೆ ನಮ್ಮ ಒಮ್ಮತಾ ಬೆಂಬಲ ಇದೆ. ಅಂದು ರೈತರ ನಾಯಕರು ಈ ಹೋರಾಟದಲ್ಲಿ ಪಾಲ್ಗೊಂಡು ಬಂದ್ ಯಶಸ್ವಿಗೊಳಿಸುವುದು ಮಾತ್ರವಲ್ಲದೆ, ಆಡಳಿತ ನಡೆಸುತ್ತಿರುವ ಸರಕಾರಗಳಿಗೆ ಬಿಸಿ ಮುಟ್ಟಿಸುತ್ತೇವೆ’ ಎಂದರು.

ಕನ್ನಡಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಮಾತನಾಡಿ, ಕಾವೇರಿ ವಿಚಾರವಾಗಿ ಒಂದೇ ದಿನ, ಒಂದೇ ಬಂದ್ ಹೋರಾಟ ನಡೆಯಬೇಕು. ಅದೇ ಕಾರಣಕ್ಕಾಗಿ ಶುಕ್ರವಾರ ಅಖಂಡ ಕರ್ನಾಟಕದ ಬಂದು ಹೋರಾಟಕ್ಕೆ ಕರೆ ನೀಡಲಾಗಿದೆ. ಅಂದು ಸಾವಿರಾರು ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ನುಡಿದರು. ಇನ್ನೂ, ಸಭೆಯಲ್ಲಿ ಪಾಲ್ಗೊಂಡಿದ್ದ ನೂರಕ್ಕೂ ಅಧಿಕ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ ಗೆ ಬೆಂಬಲಿಸುವುದಾಗಿ ಘೋಷಿಸಿದರು.

ಸೆ.29ರಂದು ಕರ್ನಾಟಕ ಬಂದ್ ಬೆಂಬಲಿಸಿ, ರಾಜಧಾನಿ ಬೆಂಗಳೂರಿನ ಟೌನ್‍ಹಾಲ್ ಮುಂಭಾಗದಿಂದ ಫ್ರೀಡಂ ಪಾರ್ಕ್‍ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಆನಂತರ ಕಾವೇರಿ ನದಿ ನೀರು ಹರಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಕೆ ಮಾಡಲಾಗುವುದು ಎಂದು ವಾಟಾಳ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News