ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಚನ್ನಪಟ್ಟಣ ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲು

Update: 2024-09-09 17:55 GMT

ಚನ್ನಪಟ್ಟಣ: ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಚನ್ನಪಟ್ಟಣ ಬಿಜೆಪಿ ಗ್ರಾಮಾಂತರ ಮಂಡಳದ ಅಧ್ಯಕ್ಷನ ವಿರುದ್ಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.

ಸಂತ್ರಸ್ತ ಮಹಿಳೆ ನೀಡಿದ ದೂರಿನನ್ವಯ ತೂಬಿನಕೆರೆಯ ಟಿ.ಎಸ್.ರಾಜು ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಸೆ.7ರಂದು ಗಣೇಶ ಮೂರ್ತಿ ವಿಸರ್ಜನೆ ಮಹಿಳೆಯೊಬ್ಬರಿಗೆ ಆರೋಪಿ ಟಿ.ಎಸ್.ರಾಜು ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.

ಬೆಂಗಳೂರಿನಲ್ಲಿ ನೆಲೆಸಿರುವ ಮಹಿಳೆ, ಚೌತಿ ಹಬ್ಬದ ಹಿನ್ನೆಲೆಯಲ್ಲಿ ತವರು ಮನೆಯಾದ ತೂಬಿನಕೆರೆಗೆ ಆಗಮಿಸಿದ್ದರು. ಸೆ.7ರಂದು ಗ್ರಾಮದಲ್ಲಿ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಸಲುವಾಗಿ ಮೆರವಣಿಗೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆ ರಾತ್ರಿ 11:40ರ ಸುಮಾರಿಗೆ ಮನೆ ಮುಂದೆ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಟಿ.ಎಸ್.ರಾಜು ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ. ಮೊಬೈಲ್ ಫೋನ್‍ನಲ್ಲಿ ತನ್ನ ಪೋಟೋ ತೆಗೆದು ತನ್ನ ಸ್ನೇಹಿತರಿಗೆ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.

ಈ ಹಿಂದೆಯೂ ಆರೋಪಿ ಟಿ.ಎಸ್. ರಾಜು ಅಸಭ್ಯವಾಗಿ ವರ್ತಿಸಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಪಕ್ಷದಿಂದ ಅಮಾನತು: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಟಿ.ಎಸ್.ರಾಜುನನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ ಸೋಮವಾರ ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News