ಮಹಾರಾಷ್ಟ್ರದಂತೆ ಒಂದೇ ರಾತ್ರಿಯಲ್ಲಿ ರಾಜ್ಯ ಸರಕಾರ ಪತನವಾಗಬಹುದು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ
ಬೆಳಗಾವಿ, ಅ.30: ರಾಜ್ಯ ಸರಕಾರ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುವಲ್ಲಿ ವಿಫಲವಾಗಿದೆ. ಆದುದರಿಂದ, ನಮ್ಮ ಪಕ್ಷದ ವಿರುದ್ಧ ‘ಆಪರೇಷನ್ ಕಮಲ’ದ ಆರೋಪ ಮಾಡಲಾಗುತ್ತಿದೆ. ಮಹಾರಾಷ್ಟ್ರ ಮಾದರಿಯಲ್ಲಿ ರಾಜಕೀಯ ಬೆಳವಣಿಗೆಗಳು ನಡೆದರೆ ಒಂದೇ ರಾತ್ರಿಯಲ್ಲಿ ರಾಜ್ಯ ಸರಕಾರ ಪತನವಾಗಬಹುದು ಎಂದು ಮಾಜಿ ಸಚಿವ, ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.
ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಾವು ಯಾವುದೆ ರೀತಿಯ ಆಪರೇಷನ್ ಮಾಡುತ್ತಿಲ್ಲ. ನಾವು ಅಧಿಕಾರಕ್ಕೆ ಬರಬೇಕಾದರೆ ಸಾಕಷ್ಟು ಜನ ಶಾಸಕರು ಬೇಕು. ಆದರೆ, ಮಹಾರಾಷ್ಟ್ರ ಮಾದರಿಯಲ್ಲಿ ಬೆಳವಣಿಗೆ ಆದರೆ ಸರಕಾರ ಬದಲಾಗಬಹುದು ಎಂದರು.
ಅಕ್ರಮ ಆಸ್ತಿಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನಲ್ಲಿ ಹಿನ್ನಡೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಶೀಘ್ರವೆ ಮಾಜಿ ಆಗಲಿದ್ದಾರೆ. ಒಂದು ರೂಪಾಯಿ ತಿಂದವರನ್ನೆ ಜೈಲಿಗೆ ಹಾಕುತ್ತಾರೆ. ಡಿ.ಕೆ.ಶಿವಕುಮಾರ್ ಅವರದ್ದು ನೂರಾರು ಕೋಟಿ ರೂ.ಗಳ ಅಕ್ರಮ ಇದೆ. ಐದು ವರ್ಷದಲ್ಲಿ ಇವರ ಆಸ್ತಿ ಐದು ಪಟ್ಟು ಹೆಚ್ಚಾಗಿದ್ದು ಹೇಗೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಬೇಕಲ್ಲ ಎಂದು ಅವರು ಹೇಳಿದರು.
2019ರಲ್ಲಿ ಅನಿವಾರ್ಯ ಕಾರಣಗಳಿಂದಾಗಿ, ಡಿ.ಕೆ.ಶಿವಕುಮಾರ್ ಅವರ ಸರ್ವಾಧಿಕಾರಿ ಧೋರಣೆ, ಸೊಕ್ಕಿನ ಪ್ರವೃತ್ತಿಯಿಂದಾಗಿ ಸರಕಾರ ಬೀಳಿಸಿದೆವು. ಮಲ್ಲಿಕಾರ್ಜುನ ಖರ್ಗೆ ಅಥವಾ ಸಿದ್ದರಾಮಯ್ಯ ವಿರುದ್ಧ ನಾವು ಏನು ಮಾಡಿಲ್ಲ. ಆದರೆ, ಈಗ ಡಿ.ಕೆ.ಶಿವಕುಮಾರ್ ನಾಟಕ ಮಂಡಳಿಯ ಸದಸ್ಯರು ಬಿಜೆಪಿ ನಾಯಕರು ಶಾಸಕರಿಗೆ 50, 100 ಕೋಟಿ ರೂ. ಆಮಿಷವೊಡ್ಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ನಿನ್ನೆಯೂ ಭೇಟಿ ಮಾಡಿದ್ದೆ. ಸರಿಯಾದ ಸಮಯಕ್ಕೆ ಅವರು ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತಾರೆ. ಆದರೆ, ನಾನು ಯಾವುದೆ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಹೋಗುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ರಾಜ್ಯಕ್ಕೆ ಅಂಬೇಡ್ಕರ್ ಹೆಸರಿಡಿ: ವಿಜಯಪುರ ಜಿಲ್ಲೆಗೆ ಬಸವಣ್ಣನವರ ಹೆಸರಿಡುವ ಕುರಿತು ನಡೆಯುತ್ತಿರುವ ಚರ್ಚೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಾಲ್ಮೀಕಿ, ಬಸವಣ್ಣ, ಚನ್ನಮ್ಮ ಸೇರಿದಂತೆ ಅನೇಕ ಮಹನೀಯರನ್ನು ಅವರ ಇತಿಹಾಸದಿಂದ ನಾವು ತಿಳಿದುಕೊಂಡಿದ್ದೇವೆ. ಆದರೆ, ಅಂಬೇಡ್ಕರ್ ಅವರ ಜೀವನ, ಸಾಧನೆ ನಮ್ಮ ಮುಂದಿದೆ. ಆದುದರಿಂದ, ರಾಜ್ಯಕ್ಕೆ ಅಂಬೇಡ್ಕರ್ ನಾಡು ಎಂದು ಕರೆಯುವುದು ಸೂಕ್ತ ಎಂದರು.
ಇನ್ನು ಕರ್ನಾಟಕ ರಾಜ್ಯಕ್ಕೆ ಬಸವಣ್ಣನ ನಾಡು ಎಂದು ಹೆಸರಿಡಲು ಸಚಿವ ಎಂಪಿ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದಕ್ಕೆ ರಮೇಶ್ ಜಾರಕೊಹೊಳಿ ಪ್ರತಿಕ್ರಿಯಿಸಿ, ಬಸವಣ್ಣ ಅನ್ನೋದಕ್ಕಿಂತ ಅಂಬೇಡ್ಕರ್ ಹೆಸರಿಡಲು ನನ್ನ ಮನವಿ ಎಂದರು.