ದೊಡ್ಡ ನಾಯಕನಿಗೆ ಇಷ್ಟೊಂದು ಹೊಟ್ಟೆಕಿಚ್ಚು ಇರಬಾರದು: ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್‌ ಹೇಳಿಕೆಗೆ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಆಕ್ಷೇಪ

Update: 2023-09-12 15:50 GMT

ಬೆಂಗಳೂರು: ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರ ಹೇಳಿಕೆಗೆ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗದ ನಾಗೇನಹಳ್ಳಿಯಲ್ಲಿ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಈಶ್ವರಾನಂದಪುರಿ ಶ್ರೀ, ʼʼದೊಡ್ಡ ನಾಯಕನಿಗೆ ಇಷ್ಟೊಂದು ಹೊಟ್ಟೆಕಿಚ್ಚು ಇರಬಾರದು. ಸಿದ್ಧರಾಮಯ್ಯ ಕುರುಬರನ್ನೇ ಬೆಳೆಸಿದ್ದಾರೆ ಎಂದಿದ್ದಾರೆ ಹರಿಪ್ರಸಾದ್ ಹಾಗೆ ಮಾತಾಡಬಾರದಿತ್ತು. ಸಿದ್ಧರಾಮಯ್ಯ ಮೊದಲನೆ ಬಾರಿ ಮುಖ್ಯಮಂತ್ರಿ ಆಗಿದ್ದಾಗ, ಅವರ ಸಚಿವ ಸಂಪುಟದಲ್ಲಿ ಬಹಳ ಜನ ಕುರುಬರು ಮಂತ್ರಿಗಳಾಗಿರಲಿಲ್ಲ. ಸಿದ್ಧರಾಮಯ್ಯ ಜಾತಿ ರಾಜಕಾರಣ ಮಾಡಲಿಲ್ಲ. ಸಣ್ಣ ಸಮುದಾಯಗಳಿಗೂ ಸಿದ್ಧರಾಮಯ್ಯ ಅವಕಾಶ ನೀಡಿದ್ದಾರೆʼʼ ಎಂದು ಅವರು ಹೇಳಿದರು.

ʼʼಬಡವರು, ಹಿಂದುಳಿದವರು, ದಲಿತರು, ಮಹಿಳೆಯರ ಪರ ಧ್ವನಿ ಆದರು. ಹರಿಪ್ರಸಾದ್ ಜನರಿಗೆ ತಪ್ಪು ಸಂದೇಶ ರವಾನಿಸಿದ್ದು, ಈ ಬಗ್ಗೆ ನಾವು ಮಾತಾಡದಿದ್ದರೆ ಜನರಿಗೆ ಸತ್ಯ ಗೊತ್ತಾಗುವುದಿಲ್ಲ. ಸಿದ್ಧರಾಮಯ್ಯ ಮನೆಗೆ ಮಾರಿ ಪರರಿಗೆ ಉಪಕಾರಿʼʼ ಎಂದು ಹರಿಪ್ರಸಾದ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಸಭೆಯಲ್ಲಿ ಬಿ.ಕೆ ಹರಿಪ್ರಸಾದ್ ಸಿದ್ದರಾಮಯ್ಯ ಅವರ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News