ಕೋಮು ಗಲಭೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತ: ಸಚಿವ ಪ್ರಿಯಾಂಕ್ ಖರ್ಗೆ

Update: 2023-07-20 18:40 GMT

ಬೆಂಗಳೂರು, ಜು.20: ಕಳೆದ ರಾಜ್ಯ ಬಿಜೆಪಿ ಸರಕಾರವು ಕೋಮುವಾದ, ಆತಂಕ, ಮತೀಯ ಗಲಭೆ ಮಾಡಿ, ಇಲ್ಲಿಗೆ ಕೈಗಾರಿಕೆಗಳು ಬರದೇ ರಾಜ್ಯದ ಅಭಿವೃದ್ಧಿ ಕುಂಠಿತವಾಗುವಂತೆ ಮಾಡಿತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಗುರುವಾರ ವಿಧಾನ ಪರಿಷತ್‍ನಲ್ಲಿ 2023-24ನೆ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಸದಸ್ಯ ಎಸ್.ರವಿ ಅವರು ಮಾತನಾಡುತ್ತಿದ್ದಾಗ ಮಧ್ಯಪ್ರವೇಶಿಸಿ ಇದಕ್ಕೆ ಪೂರಕವಾಗಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕಳೆದ ಬಿಜೆಪಿ ಸರಕಾರದಿಂದ ಆಗಿರುವ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಎರಡ್ಮೂರು ವರ್ಷಗಳಾದರೂ ಬೇಕು ಎಂದು ಹೇಳಿದರು.

ಆಪಲ್ ಕಂಪೆನಿಯ ಬಿಡಿಭಾಗ ತಯಾರಿಕಾ ಕಾರ್ಖಾನೆ ತಂದಿದ್ದು ದೇಶದಲ್ಲೇ ನಾವು ಮೊದಲು. ಆದರೆ, ಬಿಜೆಪಿ ಸರಕಾರದ ಭ್ರಷ್ಟಾಚಾರ, ಕೋಮುವಾದದಿಂದಾಗಿ ವ್ಯಾಪಾರ ಬಿದ್ದು ಹೋಗಿದೆ. ಇಂದು ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದೇವೆ. ತಮಿಳುನಾಡು ಮೊದಲ ಸ್ಥಾನ ಪಡೆದಿದೆ. ಈಗ ಸರಿಪಡಿಸುವುದೇ ನಮಗೆ ಸವಾಲು ಎಂದರು.

ಪರಿಷತ್‍ನ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಯಾವುದೋ ಸಂದರ್ಭದಲ್ಲಿ ತಪ್ಪು ನಿರ್ಧಾರ ಕೈಗೊಂಡು ಬೇಡದವರ ಕೈ ಹಿಡಿದು ಬಿಟ್ಟೆ. ನನಗೆ ಎಲ್ಲೋ ಮನಸ್ಸಿಗೆ ಚುಚ್ಚುತಿತ್ತು. ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿರಿ. ನನ್ನ ತಪ್ಪಿಗೆ ನಾನು ಮೈಸೂರಿನಲ್ಲಿ ಪ್ರಾಯಶ್ಚಿತ ಮಾಡಿಕೊಂಡಿದ್ದೇನೆ. ಇಂದು ಇಲ್ಲಿ ಸುಮ್ಮನೆ ಕುಳಿತಿದ್ದೇನೆ ಎಂದು ಹೇಳಿದರು.

40 ವರ್ಷ ಉತ್ತಮ ರಾಜಕಾರಣ ಮಾಡಿ, ಎಲ್ಲೋ ಎಡವಿಬಿಟ್ಟೆ, ತಪ್ಪು ಮಾಡಿದೆ ಎನ್ನುವ ಕೊರಗು ಕಾಡಿದೆ. ಮನಸ್ಸು ಭಾರವಾಗಿದೆ. ಆದರೂ ತಪ್ಪಾಗಿದ್ದು ಮನಸ್ಸಿನಲ್ಲಿ ಕೊರಗು ಉಳಿದುಕೊಂಡಿದೆ. ಇಂದು ಸದನದಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟು ಮನಸ್ಸು ಹಗುರಾಗುವಂತೆ ಮಾಡಿದಿರಿ ಎಂದು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News