ಮಲ ಹೊರುವ ಪದ್ಧತಿ ಇನ್ನೂ ಜೀವಂತ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್
ಬೆಂಗಳೂರು: ‘ಸಂಪೂರ್ಣವಾಗಿ ನಿಷೇಧವಿದ್ದರೂ ಮಲ ಹೊರುವುದು ಹಾಗೂ ಮಲ ತೆಗೆಯುವ ಪದ್ಧತಿ ಜೀವಂತ’ ಎಂಬ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಸ್ವಯಂ ಪ್ರೇರಿತವಾಗಿ ಪರಿಗಣಿಸಿ ಪ್ರಕರಣ ದಾಖಲಿಸಲು ರಿಜಿಸ್ಟ್ರಾರ್ ಗೆ ಹೈಕೋರ್ಟ್ ನಿರ್ದೇಶಿಸಿದೆ.
ನ್ಯಾಯಾಲಯದ ಕಲಾಪ ಆರಂಭವಾಗುತ್ತಿದ್ದಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠವು, ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಲು ನಿರ್ದೇಶಿಸಿದೆ. ಅಮಿಕಸ್ ಕ್ಯೂರಿಯನ್ನಾಗಿ ವಕೀಲ ಶ್ರೀಧರ ಪ್ರಭು ಅವರನ್ನು ನೇಮಕ ಮಾಡಿ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರು, ಇದೊಂದು ಆತಂಕಕಾರಿ ಸುದ್ದಿ, ಇದು ಪ್ರತಿಯೊಬ್ಬ ವ್ಯಕ್ತಿಯ ಆತ್ಮಸಾಕ್ಷಿಯನ್ನು ಕೆಣಕುತ್ತದೆ. ಸ್ವಾತಂತ್ರ್ಯ ಬಂದು ಹಲವು ದಶಕಗಳು ಕಳೆದ ನಂತವೂ ಕೆಳ ಸಮುದಾಯದಲ್ಲಿ ಜನಿಸಿದ, ತನ್ನದಲ್ಲದ ದುರದೃಷ್ಟಕ್ಕೆ ಅವರು ಈ ಕೆಲಸ ಮಾಡಬೇಕಿದೆ. ಇದು ಮಾನವೀಯತೆಗೆ ನಾಚಿಕೆಯಾಗುವ ಸಂಗತಿಯಲ್ಲವೇ? ಈ ಕಾರಣಕ್ಕಾಗಿ ನಾವೆಲ್ಲ ಇಲ್ಲಿ ಇದ್ದೇವೆಯೇ? ಎಂದು ಪೀಠವು ಮೌಖಿಕವಾಗಿ ಹೇಳಿತು.
ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದಾನೆ ಎಂಬ ಕಾರಣಕ್ಕೆ ಪ್ರಾಣಿ, ಪಕ್ಷಿಗಳಿಗಿಂತ ಕೆಟ್ಟದಾಗಿ ನಡೆಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇಂದು ಯಂತ್ರೋಪಕರಣ ಇದ್ದು ಹೀಗೇಕೆ? ಮಲಗುಂಡಿ ಸ್ವಚ್ಛಗೊಳಿಸಲು ಒಂದು ತಾಸಿಗೆ ಎರಡು ಸಾವಿರ ರೂಪಾಯಿ ವೆಚ್ಚವಾಗುತ್ತದೆಯಷ್ಟೇ ಎಂದು ತಿಳಿಸಿದರು.
ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು, ನಮ್ಮಲ್ಲಿರುವುದು ಯಂತ್ರದ ಸಮಸ್ಯೆಯಲ್ಲ. ಮನಸ್ಥಿತಿಯದ್ದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯ ನ್ಯಾಯಮೂರ್ತಿ ಅವರು, ಇಂತಹ ಸಂಗತಿಗಳನ್ನು ಕೇಳಿದರೇ ನಿದ್ರೆಯೇ ಬರುವುದಿಲ್ಲ. ಸಮಾಜದಲ್ಲಿ ಇದೆಲ್ಲಾ ನಡೆಯುತ್ತಿರುವುದನ್ನು ನೋಡಿದಾಗ ಬೇರೆ ವಿಚಾರಗಳ ಬಗ್ಗೆ ಗಮನ ಕೊಡಲು ಮನಸ್ಸೇ ಬರುವುದಿಲ್ಲ. ಇತ್ತೀಚೆಗಷ್ಟೇ ಯಶಸ್ವಿ ಚಂದ್ರಯಾನವಾಗಿದೆ. ಅದು ನಮಗೆ ಹೆಮ್ಮೆಯ ವಿಚಾರವಾಗಿದೆ. ಅದರೆ, ಇದೇ ಸಂದರ್ಭದಲ್ಲಿ ನಮ್ಮ ಸಹೋದರರನ್ನು ನಾವು ಮನುಷ್ಯರು ಎಂದೇಕೆ ಪರಿಗಣಿಸುತ್ತಿಲ್ಲ. ಈ ಬೆಳವಣಿಗೆಯಿಂದ ತಂತ್ರಜ್ಞಾನದ ಅಭಿವೃದ್ಧಿ ವ್ಯರ್ಥವಾದಂತಲ್ಲವೇ ಎಂದು ತಿಳಿಸಿದರು. ಅಲ್ಲದೆ, ಈ ಅರ್ಜಿಯನ್ನು ವಿಚಾರಣೆಗೆ ಸೋಮವಾರಕ್ಕೆ ಪಟ್ಟಿ ಮಾಡಬೇಕು ಎಂದು ನ್ಯಾಯಪೀಠವು ನಿರ್ದೇಶಿಸಿತು.