ಎಸ್ಸಿಎಸ್ಪಿ-ಟಿಎಸ್ಪಿ ಅನುದಾನ ಬಳಕೆ ಮಾಡದಿದ್ದರೆ ಕಠಿಣ ಕ್ರಮ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ದಲಿತ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಎಸ್ಸಿಎಸ್ಪಿ-ಟಿಎಸ್ಪಿ ಅಡಿ ಅನುದಾನ ಆಯಾ ವರ್ಷವೇ ಖರ್ಚು ಮಾಡಬೇಕು. ಈ ಸಂಬಂಧ ನಿರ್ಲಕ್ಷ್ಯ ತೋರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ರಾಜ್ಯ ಪರಿಷತ್ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, "ಇಡೀ ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಲು ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಮಾಡಿರುವುದು ನಮ್ಮ ಸರಕಾರ ಮಾತ್ರ. ಇದರಿಂದ 2024-25ನೆ ಸಾಲಿಗೆ ಎಸ್ಸಿಎಸ್ಪಿ-ಟಿಎಸ್ಪಿ ಅಡಿ ಒಟ್ಟಾರೆ 39,121 ಕೋಟಿ ರೂ.ಅನುದಾನ ಒದಗಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಇದು ಶೇ.11ರಷ್ಟು ಅಂದರೆ 3,897 ಕೋಟಿ ರೂ.ಹೆಚ್ಚಳವಾಗಿದೆ. ಎಸ್ಸಿಎಸ್ಪಿ ಅಡಿ 27,673.96 ಕೋಟಿ ರೂ.ಹಾಗೂ ಟಿಎಸ್ಪಿ ಅಡಿ 11447.50 ಕೋಟಿ ರೂ.ಒದಗಿಸಲಾಗಿದೆ ಎಂದು ತಿಳಿಸಿದರು.
ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಮುಖ್ಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 8,480 ಕೋಟಿ ರೂ., ಇಂಧನ ಇಲಾಖೆಗೆ 5026 ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ 4,174 ಕೋಟಿ ರೂ., ಕಂದಾಯ ಇಲಾಖೆಗೆ 3,403 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಇಲಾಖೆಗೆ 3,163 ಕೋಟಿ ರೂ. ಒದಗಿಸಲಾಗಿದೆ.
ಕಳೆದ ವರ್ಷ 35221.84 ಕೋಟಿ ರೂ. ಆಯವ್ಯಯ ಹಂಚಿಕೆಗೆ ಎದುರಾಗಿ ಶೇ.97.23ರಷ್ಟು ಹಣ ಬಿಡುಗಡೆಗೆಯಾಗಿದ್ದು, ಅದರಲ್ಲಿ ಶೇ.99.64ರಷ್ಟು ಸಾಧನೆಯಾಗಿದೆ. ಈ ಅನುದಾನ ಯಾವ ಕಾರಣಕ್ಕೂ ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಇನ್ನೂ, ಉಳಿಕೆ ಹಣ ವ್ಯಯವಾಗಬಾರದು. ಅದೇ ವರ್ಷ ವೆಚ್ಚವಾಗಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನಿಗಮಗಳಲ್ಲಿ ಹಣ ವೆಚ್ಚವಾಗಿಲ್ಲ. ಇದಕ್ಕೆ ಶಾಸಕರು ಪಟ್ಟಿ ಕೊಡಲಿಲ್ಲ ಎಂಬ ಕಾರಣ ನೀಡುತ್ತಾರೆ. ನಿಗಮಗಳ ಅಧ್ಯಕ್ಷರು ಹಾಗೂ ಸಂಬಂಧಿಸಿದ ಸಚಿವರು, ಶಾಸಕರು ಫಲಾನುಭವಿಗಳ ಪಟ್ಟಿ ಒದಗಿಸುವಂತೆ ಮನವೊಲಿಸಬೇಕು. ಈ ಯೋಜನೆಗಳ ಮೌಲ್ಯಮಾಪನದಿಂದ ಶೇ.65 ರಷ್ಟು ಉಪಯೋಗವಾಗಿರುವುದು ಕಂಡು ಬರುತ್ತದೆ. ಸೆಕ್ಷನ್ 7(ಡಿ) ಕೈಬಿಡಲಾಗಿದೆ. ಇದರಿಂದಾಗಿ ಈ ಯೋಜನೆಯ ಸಂಪೂರ್ಣ ವೆಚ್ಚ ಈ ಸಮುದಾಯದವರಿಗೇ ಬಳಕೆಯಾಗಲಿದೆ ಎಂದು ವಿವರಿಸಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಬಸಂತಪ್ಪ, ಶ್ರೀನಿವಾಸ್, ಪಿ.ಎಂ.ನರೇಂದ್ರಸ್ವಾಮಿ, ಕೃಷ್ಣಾ ನಾಯಕ್, ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಸಂಸದ ಸುನಿಲ್ ಬೋಸ್, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಡಾ.ಶಾಲಿನಿ ರಜನೀಶ್ ಗೋಯೆಲ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಹಾಗೂ ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ನಿರ್ಲಕ್ಷ್ಯ ವಹಿಸಿದರೆ ಕ್ರಮ: ಪರಿಶಿಷ್ಟ ಅನುದಾನ ಸದ್ಬಳಕೆಯಲ್ಲಿ ಶೇ.100 ಸಾಧನೆ ಆಗಬೇಕು. ಇದರಲ್ಲಿ ನಿರ್ಲಕ್ಷ್ಯ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಎಸ್ಸಿಪಿ-ಟಿಎಸ್ಪಿ ಕಾಯ್ದೆಯಲ್ಲಿದ್ದ 7 ‘ಡಿ’ ರದ್ದು ಮಾಡಿದ ರೀತಿಯಲ್ಲೇ 7 ‘ಸಿ’ ಕೂಡ ರದ್ದು ಮಾಡಬೇಕು ಎನ್ನುವ ಶಾಸಕ ನರೇಂದ್ರಸ್ವಾಮಿ ಸಲಹೆ ನೀಡಿದ್ದಾರೆ. ಈ ಸಲಹೆಯ ಸಾಧಕ-ಭಾದಕಗಳನ್ನು ಪರಿಶೀಲಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.