ಮುರುಘಾ ಮಠಕ್ಕೆ ನ್ಯಾಯಾಧೀಶರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದ ಹೈಕೋರ್ಟ್

Update: 2023-07-03 13:38 GMT

ಬೆಂಗಳೂರು, ಜು.3: ಚಿತ್ರದುರ್ಗ ಮುರುಘಾ ಮಠಕ್ಕೆ ಚಿತ್ರದುರ್ಗದ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ್ದ ಸರಕಾರದ ಕ್ರಮವನ್ನು ರದ್ದುಪಡಿಸಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಎಚ್.ಏಕನಾಥ್ ಎಂಬುವರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.

ಅಲ್ಲದೆ, ಮಠದ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶರು ಜು.4ರಂದುಬೆಳಗ್ಗೆ ಅಧಿಕಾರ ಸ್ವೀಕರಿಸಲು ನ್ಯಾಯಪೀಠ ಸೂಚನೆ ನೀಡಿದೆ. ಅಲ್ಲದೆ, ತಾತ್ಕಾಲಿಕವಾಗಿ ನೇಮಕಗೊಂಡಿರುವ ಆಡಳಿತಾಧಿಕಾರಿಗಳು(ಜಿಲ್ಲಾ ನ್ಯಾಯಾಧೀಶರು) ಮುರುಘಾ ಮಠ ಮತ್ತು ಮಠದ ಅಧೀನದ ಶಿಕ್ಷಣ ಸಂಸ್ಥೆಗಳ ದಿನ ನಿತ್ಯದ ವ್ಯವಹಾರಗಳನ್ನು ನೋಡಿಕೊಳ್ಳಬೇಕು. ಆದರೆ, ಯಾವುದೇ ನೀತಿ ನಿರೂಪಣೆಗಳನ್ನು ಮಾಡಲು ಮುಂದಾಗಬಾರದು. ಇದಕ್ಕೆ ಜಿಲ್ಲಾಧಿಕಾರಿಗಳು ಅಗತ್ಯವಿರುವ ಸಹಕಾರವನ್ನು ನೀಡಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿ ವಿಚಾರಣೆಯನ್ನು ಜು.18ಕ್ಕೆ ಮುಂದೂಡಿದೆ.

ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಪೀಠಾಧಿಪತಿ ಮತ್ತು ಎಸ್‍ಜೆಎಂ ವಿದ್ಯಾಪೀಠದ ಅಧ್ಯಕ್ಷರೂ ಆದ ಶಿವಮೂರ್ತಿ ಮುರುಘರಾಜೇಂದ್ರ ಶರಣರು ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೊಕ್ಸೊ), ಅತ್ಯಾಚಾರ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News