ಮಣಿಪುರದಲ್ಲಿ ಮಹಿಳಾ ದೌರ್ಜನ್ಯ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದವರ ಮೇಲಿನ ಪ್ರಕರಣದ ವಿಚಾರಣೆ ರದ್ದುಗೊಳಿಸಿದ ಹೈಕೋರ್ಟ್

Update: 2024-10-17 08:29 GMT

ಬೆಂಗಳೂರು: ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದ್ದ ವಿಮಲಾ ಕೆ., ಅಕೈ ಪದ್ಮಾಶಾಲಿ, ಗುಲಾಬ್ ಪಾಷಾ ಸೇರಿದಂತೆ ಇತರರ ವಿರುದ್ಧ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಮಣಿಪುರದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ದೌರ್ಜನ್ಯ ಎಸಗಿದ್ದನ್ನು ವಿರೋಧಿಸಿ ಬೆಂಗಳೂರು ನಗರದ ಟೌನ್ ಹಾಲ್ ಬಳಿ ವಿಮಲಾ ಕಲಾಗಾರ್ ಶರ್ಮಾ, ಅಕೈ ಪದ್ಮಾಶಾಲಿ, ಗುಲಾಬ್ ಪಾಷಾ, ಮಾಲಿನಿ ಮೇಸ್ತ, ವಿನಯ್ ಕೆ., ಮನೋಹರೇಲವರ್ತಿ, ಮೈತ್ರೇಯಿ ಕೃಷ್ಣನ್ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿದ್ದರು. ಆದರೆ ನಗರದಲ್ಲಿ ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಪ್ರತಿಭಟನೆ ಮಾಡಲು ಅವಕಾಶವಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶವನ್ನು ಪ್ರತಿಭಟನಾಕಾರರು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಎಸ್.ಜೆ. ಪಾರ್ಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಅಧೀನ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು.

ಅಧೀನ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿ ವಿಚಾರಣೆಯನ್ನು ರದ್ದುಗೊಳಿಸಿ ಆದೇಶಿದೆ.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಬೆಂಗಳೂರು ಪೊಲೀಸರು ಆಯುಕ್ತರು ಟೌನ್ ಹಾಲ್ ಎದುರು ಪ್ರತಿಭಟನೆ ಮಾಡುವುದನ್ನು ನಿರ್ಬಂಧಿಸಿ ಆದೇಶಿಸಿದ್ದಾರೆ. ಆದ್ದರಿಂದ ಕಾನೂನು ಪ್ರಕಾರ ಅವರೇ ದೂರು ನೀಡಬೇಕು. ಅದರೆ ಇಲ್ಲಿ ಎಸ್.ಜೆ. ಪಾರ್ಕ್ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಎಫ್ಐಆರ್ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆ ರದ್ದು ಮಾಡುವಂತೆ ಮನವಿ ಮಾಡಿದರು. ವಾದ ಆಲಿಸಿದ ಹೈಕೋರ್ಟ್ ಮೇಲಿನಂತೆ ಆದೇಶ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News