ತಾರತಮ್ಯ ರಹಿತ ತೆರಿಗೆ ಹಂಚಿಕೆ, ರೈತರ ಬೆಳೆಗಳಿಗೆ ಎಂಎಸ್‍ಪಿ ನಿಗದಿಪಡಿಸುಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಿದ ರಾಜ್ಯ ಸರಕಾರ

Update: 2024-02-22 15:28 GMT

ಬೆಂಗಳೂರ : ‘ಕರ್ನಾಟಕ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ, ನಾಗರಿಕರ ಹಿತರಕ್ಷಣೆಯಲ್ಲಿ ಸಮಾನ ಹಂಚಿಕೆಯ ಮತ್ತು ತಾರತಮ್ಯ ರಹಿತ ಆರ್ಥಿಕ ಸಂಪನ್ಮೂಲ(ತೆರಿಗೆ)ಗಳ ಹಂಚಿಕೆಯ ನಿಲುವುಗಳನ್ನು ತೆಗೆದುಕೊಳ್ಳುವುದು ಹಾಗೂ ರೈತರ ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ(ಎಂಎಸ್‍ಪಿ) ನಿಗದಿಪಡಿಸಲು ಕೇಂದ್ರ ಸರಕಾರ ಶಾಸನ ರೂಪಿಸಬೇಕು’ ಎಂದು ಆಗ್ರಹಿಸಿ, ಪ್ರತಿಪಕ್ಷಗಳ ಸದಸ್ಯರ ಧರಣಿ-ಗದ್ದಲದ ಮಧ್ಯೆ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಗುರುವಾರ ವಿಧಾನಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದ ಎರಡು ಪ್ರತ್ಯೇಕ ನಿರ್ಣಯಗಳಿಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಧರಣಿ ನಡುವೆಯೆ ಅಂಗೀಕಾರ ಪಡೆಯಲಾಯಿತು.

‘ನಿರ್ಣಯ-1’, ತಾರತಮ್ಯ ರಹಿತವಾಗಿ ತೆರಿಗೆ ಹಂಚಿಕೆ ಮಾಡಬೇಕು: ಒಂದು ದಶಕದಿಂದ ಕೇಂದ್ರ ಸರಕಾರವು, ಹಣಕಾಸು ಆಯೋಗಳು ಶಿಫಾರಸ್ಸು ಮಾಡಿದ ಅನುದಾನ ನೀಡುವಲ್ಲಿ, ಬರ ಪರಿಹಾರದ ಮಾನದಂಡಗಳ ಪ್ರಕಾರ ಕೇಂದ್ರ ಸರಕಾರದ ಪಾಲನ್ನು ನೀಡುವಲ್ಲಿ, ಹಣಕಾಸು ಹಂಚಿಕೆಯಲ್ಲಿ ಪಕ್ಷಪಾತ ಮಾಡುತ್ತಿರುವ ಅನೇಕ ನಿದರ್ಶನಗಳು ಕರ್ನಾಟಕ ಜನತೆಯ ಗಮನಕ್ಕೆ ಬಂದಿದೆ.

ಅಭಿವೃದ್ಧಿ ವಂಚಿತ ಮತ್ತು ಬಡ ರಾಜ್ಯಗಳಿಗೆ ಹೆಚ್ಚಿನ ಅನುದಾನ ದೊರಕಬೇಕೆಂಬ ಕಲ್ಪನೆಯ ಜೊತೆಜೊತೆಗೆ ಅತ್ಯುತ್ತಮ ಪ್ರಗತಿ ಸಾಧಿಸಿರುವ ರಾಜ್ಯಗಳಿಗೆ ಅನ್ಯಾಯ ಮಾಡಬಾರದು ಎಂಬ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಕೇಂದ್ರ ಸರಕಾರ ಪಾಲಿಸುತ್ತಿಲ್ಲವೆಂಬುದು ಕರ್ನಾಟಕದಂತಹ ಪ್ರಗತಿಪರ ರಾಜ್ಯಗಳಿಗೆ ಕೊಡಲಿ ಪೆಟ್ಟು ಹಾಕಿದಂತಾಗುತ್ತಿದೆ.

ರಾಜ್ಯಕ್ಕೆ 14ನೆ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಶೇ.4.713 ರಷ್ಟು ತೆರಿಗೆ ಹಂಚಿಕೆಯಾಗಿದ್ದರೆ, 15ನೆ ಹಣಕಾಸು ಆಯೋಗದ ಶಿಫಾರಸ್ಸಿನ ಅಡಿಯಲ್ಲಿ ಶೇ.3.647ರಷ್ಟು ತೆರಿಗೆ ಹಂಚಿಕೆಯಾಗಿದೆ. 15ನೆ ಹಣಕಾಸು ಆಯೋಗ ಅನುಸರಿಸಿದ ಮಾನದಂಡಗಳ ಆಧಾರದ ಮೇಲೆ ತೆರಿಗೆ ಹಂಚಿಕೆಯನ್ನು ನಿರ್ಧರಿಸಲಾಗಿದ್ದರಿಂದ ಕರ್ನಾಟಕಕ್ಕೆ ಶೇ.1.066ರಷ್ಟು ಅಂದರೆ 2020-21ರಿಂದ 2025-26ರ ವರೆಗೆ 68,700 ರೂ.ಗಳು ನಷ್ಟವಾಗಿದೆ.

‘ಒಂದು ದೇಶ ಒಂದು ತೆರಿಗೆ’ ಹೆಸರಿನಲ್ಲಿ ಜಿ.ಎಸ್.ಟಿ ತೆರಿಗೆಯ ಅವೈಜ್ಞಾನಿಕ ಅನುಷ್ಠಾನದಿಂದ ರಾಜ್ಯದ ತೆರಿಗೆ ಸಂಗ್ರಹಣೆಯು ಕಡಿಮೆಯಾಗಿದೆ. ರಾಜ್ಯದ ಜಿಎಸ್‍ಟಿ ತೆರಿಗೆ ಸಂಗ್ರಹಣೆ ಕೇಂದ್ರ ಸರಕಾರ ಅಂದಾಜಿಸಿದ್ದ ಶೇ.14ರಷ್ಟು ಬೆಳವಣಿಗೆಯನ್ನು ತಲುಪಿಲ್ಲ. ಆದರೂ ಕೇಂದ್ರ ಸರಕಾರವು ರಾಜ್ಯಗಳಿಗೆ ನೀಡುವ ಜಿಎಸ್‍ಟಿ ಪರಿಹಾರವನ್ನು ನಿಲ್ಲಿಸಿದೆ. ಇದರಿಂದಾಗಿ, ರಾಜ್ಯಕ್ಕೆ 2023-24ರ ವರೆಗೆ 59,274 ಕೋಟಿ ರೂ.ನಷ್ಟವಾಗಿದೆ.

ಕೇಂದ್ರದ ಪುರಸ್ಕೃತ ಯೋಜನೆಗಳಿಗೆ ದೊರಕಬೇಕಾದ ಅನುದಾನ ಕೂಡ ಗಣನೀಯವಾಗಿ ಕಡಿತಗೊಂಡಿದೆ. 2018-19ಕ್ಕೆ ಹೋಲಿಸಿದರೆ 2023-24ರಲ್ಲಿ ಕೇಂದ್ರದ ಬಜೆಟ್ ಗಾತ್ರವು ದುಪ್ಪಟ್ಟಾದರೂ ಕೇಂದ್ರದಿಂದ ರಾಜ್ಯಕ್ಕೆ ದೊರೆಯುವ ಸಹಾಯಾನುದಾನದಲ್ಲಿ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚಳ ಕಂಡಿಲ್ಲ.

ಹಣಕಾಸು ಆಯೋಗವು ಕೇಂದ್ರ ಹಾಗೂ ರಾಜ್ಯಗಳ ನಡುವೆ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ಶಿಫಾರಸ್ಸು ನೀಡುತ್ತದೆ. ತೆರಿಗೆಯ ಜೊತೆಗೆ ಸೆಸ್ ಮತ್ತು ಸರ್ಚಾರ್ಜ್‍ಗಳನ್ನು ಸಂಗ್ರಹಿಸುವ ಮೂಲಕ ಕೇಂದ್ರ ಸರಕಾರವು ರಾಜಸ್ವ ಸಂಗ್ರಹಣೆ ಮಾಡುತ್ತದೆ. ಕೇಂದ್ರ ಸರಕಾರವು ಸಂಗ್ರಹಿಸುವ ಈ ಸೆಸ್ ಮತ್ತು ಸಚಾರ್ಜ್ ಗಳು ರಾಜ್ಯಗಳಿಗೆ ಹಂಚಿಕೆಯಾಗದ ಕಾರಣ ನಮ್ಮ ರಾಜ್ಯಕ್ಕೆ 2017-18 ರಿಂದ 2023-24ರವರೆಗೂ ಅಂದಾಜು 45,322 ಕೋಟಿ ರೂ.ಗಳು ನಷ್ಟವಾಗಿದೆ.

ಅವೈಜ್ಞಾನಿಕ ಜಿಎಸ್‍ಟಿ ವ್ಯವಸ್ಥೆ, ಸೆಸ್ ಮತ್ತು ಸರ್ಚಾರ್ಜ್‍ಗಳನ್ನು ಹೇರಿಕೆ ಮಾಡಿ ತೆರಿಗೆ ಪಾಲಿನಲ್ಲಿ ನಷ್ಟ, 15ನೇ ಹಣಕಾಸು ಆಯೋಗದ ಶಿಫಾರಸ್ಸುಗಳಂತೆ ವಿಶೇಷ ಹಾಗೂ ರಾಜ್ಯ ಕೇಂದ್ರಿತ ಅನುದಾನವನ್ನು ನೀಡದಿರುವುದು ಮತ್ತು 15ನೇ ಹಣಕಾಸು ಆಯೋಗವು ಹಿಂದಿನ ಹಣಕಾಸು ಆಯೋಗಕ್ಕಿಂತ ಶೇ.23ರಷ್ಟು ಕಡಿಮೆ ಪಾಲನ್ನು ಹಂಚಿಕೆ ಮಾಡಿದ್ದರಿಂದ 2017-18 ರಿಂದ ನಮಗೆ 1,78,189 ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಈ ಎಲ್ಲ ಕಾರಣಗಳಿಂದ ರಾಜ್ಯಕ್ಕೆ ಉಂಟಾಗಿರುವ ಆರ್ಥಿಕ ನಷ್ಟ ಹಾಗೂ ಅನ್ಯಾಯವನ್ನು ಸರಕಾರವು ಖಂಡಿಸುತ್ತದೆ.

ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ, ನಾಗರೀಕರ ಹಿತರಕ್ಷಣೆಯಲ್ಲಿ ಸಮಾನ ಹಂಚಿಕೆಯ ಮತ್ತು ತಾರತಮ್ಯ ರಹಿತ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯ ನಿಲುವುಗಳನ್ನು ಕೇಂದ್ರ ಸರಕಾರ ತೆಗೆದುಕೊಳ್ಳಬೇಕು ಮತ್ತು ಕರ್ನಾಟಕ ಜನತೆಯ ಹಿತರಕ್ಷಣೆಯ ವಿಷಯದಲ್ಲಿ ಯಾವುದೇ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಈ ಸದನ ಒಕ್ಕೂರಲಿನಿಂದ ಒತ್ತಾಯಿಸುತ್ತದೆ ಎಂದು ಎಚ್.ಕೆ. ಪಾಟೀಲ್ ನಿರ್ಣಯ ಮಂಡಿಸಿದರು.

‘ನಿರ್ಣಯ-2’, ಕೃಷಿ ಉತ್ಪನ್ನಗಳಿಗೆ ಎಂಎಸ್‍ಪಿ ನಿಗದಿಪಡಿಸಬೇಕು: ರೈತರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ವಯ ಕೃಷಿಕನ ಸಾಗುವಳಿ ವೆಚ್ಚದ ಶೇ.50ರಷ್ಟನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಬೇಕೆಂದು ತನ್ಮೂಲಕ ಹಸಿರು ಕ್ರಾಂತಿಯನ್ನು ಸಾಧಿಸಿ ರಾಷ್ಟ್ರದಲ್ಲಿ ಕೃಷಿಯನ್ನು ಅವಲಂಬಿತ ಉದ್ಯೋಗವನ್ನಾಗಿ ನಿರೀಕ್ಷಿಸಬಹುದೆಂಬ ನಿರೀಕ್ಷೆಯನ್ನು ಸಾಧಿಸುವಲ್ಲಿ ಪ್ರಗತಿಯನ್ನು ಸಾಧಿಸಿಲ್ಲ ಅಥವಾ ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆಯನ್ನು ತರುವಲ್ಲಿ ವಿಫಲವಾಗಿವೆ.

ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಲಾಭಾಂಶದ ಬೆಂಬಲ ಬೆಲೆಯನ್ನು ಸುನಿಶ್ಚಿತಗೊಳಿಸುವ (ಗ್ಯಾರಂಟಿ) ಮತ್ತು ರೈತನ ಉತ್ಪನ್ನಗಳ ಬೆಲೆಯನ್ನು ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ನಿರ್ಧರಿಸುವಂತೆ ಒತ್ತಾಯಿಸಿ, ಭಾರತದಾದ್ಯಂತ ರೈತರು ಚಳವಳಿ, ಆಂದೋಲನ ಮತ್ತು ಹೋರಾಟ ನಡೆಸುವುದು ಅನಿವಾರ್ಯವಾಗಿದೆ.

ರಾಷ್ಟ್ರದ ಅನ್ನದಾತರೆನ್ನಿಸಿಕೊಳ್ಳುವ ಮತ್ತು ಅರ್ಥವ್ಯವಸ್ಥೆಯ ಸರ್ವಾಂಗೀಣ ಅಭಿವೃದ್ಧಿಯ ಬೇರ್ಪಡಿಸಲಾಗದ ಭಾಗವಾಗಿರುವ ಕೃಷಿಕರ ಆದಾಯವನ್ನು ಸಂರಕ್ಷಿಸುವ ತನ್ಮೂಲಕ ಕೃಷಿಯನ್ನು ಲಾಭದಾಯಕಗೊಳಿಸುವ ಉದ್ದೇಶದಿಂದ ವಾಣಿಜ್ಯ ಬೆಳೆಗಳಿಗೆ ಬೆಲೆ ನಿಗದಿಪಡಿಸುವ ಮಾನದಂಡವನ್ನು ಇತರೆ ಕೃಷಿ ಉತ್ಪನ್ನಗಳಿಗೂ ಅನುಸರಿಸುವ ಕ್ರಮಗಳನ್ನು ಕರ್ನಾಟಕ ಬೆಂಬಲಿಸುತ್ತಲೆ ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರದ ಕ್ರಮಗಳು ರೈತ ವಿರೋಧಿ ನೀತಿಯಾಗಿ ರೈತನಿಗೆ ಕನಿಷ್ಠ ಬೆಂಬಲ ಬೆಲೆ ದೊರಕದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿವೆ.

ಈ ಹಿನ್ನೆಲೆಯಲ್ಲಿ ರೈತರ ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರಕಾರ ಶಾಸನ ರೂಪಿಸುವಂತೆ ಈ ಸದನ ಒಕ್ಕೂರಲಿನಿಂದ ಒತ್ತಾಯಿಸುತ್ತದೆ. ರೈತರೊಂದಿಗೆ ಸಂಘರ್ಷದ ಹಾದಿ ತುಳಿಯದೆ ಅತ್ಯಂತ ನ್ಯಾಯಯುತವಾದ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಸದನ ಒತ್ತಾಯಿಸುತ್ತದೆ ಎಂದು ಎಚ್.ಕೆ.ಪಾಟೀಲ್ ನಿರ್ಣಯ ಮಂಡನೆ ಮಾಡಿದರು.

ಸರಕಾರದ ನಡೆಗೆ ವಿಪಕ್ಷಗಳ ಆಕ್ರೋಶ: ‘ಕೇಂದ್ರ ಸರಕಾರಕ್ಕೆ ಒತ್ತಾಯಿಸಿ ಎರಡು ಪ್ರತ್ಯೇಕ ನಿರ್ಣಯಗಳನ್ನು ವಿಧಾನಸಭೆಯಲ್ಲಿ ಮಂಡಿಸಿದ ರಾಜ್ಯ ಸರಕಾರದ ನಡೆಗೆ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಬಜೆಟ್ ಭಾಷಣದಲ್ಲಿಯೂ ಕೇಂದ್ರ ಸರಕಾರವನ್ನು ಟೀಕಿಸಿರುವ ರಾಜ್ಯ ಸರಕಾರವು ಈಗ ಪ್ರತ್ಯೇಕವಾಗಿ ನಿರ್ಣಯಗಳನ್ನು ಕೈಗೊಂಡಿರುವುದು ಸರಿಯಲ್ಲ ಎಂದು ರಾಜ್ಯ ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News