ಹಂದಿ, ಕೋಳಿ ಸಾಕಾಣಿಕೆ ಪ್ರೋತ್ಸಾಹಿಸಲು ರೈತರಿಗೆ ತರಬೇತಿ: ಸಿಎಂ ಸಿದ್ದರಾಮಯ್ಯ

Update: 2024-02-16 11:20 GMT

Photo: X/@CMofKarnataka

ಬೆಂಗಳೂರು: ರೈತ ಮಹಿಳೆಯರಲ್ಲಿ ಹೈನುಗಾರಿಕೆ ಪ್ರೋತ್ಸಾಹಿಸಲು ಹಸು, ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಮಹಿಳೆಯರಿಗೆ ಸರಕಾರದಿಂದಲೇ ಶೇ.6ರ ಬಡ್ಡಿ ಸಹಾಯಧನ ನೀಡಲಾಗುವುದು. ಹಂದಿ ಮತ್ತು ಕೋಳಿ ಸಾಕಾಣಿಕೆ ಪ್ರೋತ್ಸಾಹಿಸಲು ಆಸಕ್ತ ರೈತರಿಗೆ ತರಬೇತಿ ನೀಡುವ ಮೂಲಕ ರೈತರ ಆದಾಯ ಹೆಚ್ಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಆಯವ್ಯಯ ಮಂಡನೆ ಮಾಡಿದ ಅವರು, ‘ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿಯೂ ಮುಂದುವರೆಸಿ 10ಸಾವಿರ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು. ಅಮೃತ ಮಹಲ್/ಹಳ್ಳಿಕಾರ್/ಖಿಲಾರಿ ರಾಸುಗಳನ್ನು ಸಂವರ್ಧನೆ ಮಾಡಿ ಉತ್ಕೃಷ್ಟ ಕರುಗಳನ್ನು ಒದಗಿಸಲಾಗುವುದು ಎಂದರು.

‘ಜಿಲ್ಲಾ ಹಂತದಲ್ಲಿರುವ ತಜ್ಞ ಪಶುವೈದ್ಯಕೀಯ ಪಾಲಿಕ್ಲಿನಿಕ್‍ಗಳನ್ನು ತಾಲೂಕು ಹಂತಕ್ಕೆ ವಿಸ್ತರಿಸಲು ಕ್ರಮವಹಿಸಲಾಗುವುದು. ಪ್ರಥಮ ಹಂತದಲ್ಲಿ ರಾಜ್ಯದ ಆಯ್ದ 20ತಾಲೂಕುಗಳ ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್‍ಗಳನ್ನಾಗಿ ಮೇಲ್ದರ್ಜೆಗೇರಿಸಲು 10ಕೋಟಿ ರೂ.ಒದಗಿಸಲಾಗುವುದು. ಬಾಡಿಗೆ ಮತ್ತು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 200ಪಶುವೈದ್ಯ ಸಂಸ್ಥೆಗಳಿಗೆ 100ಕೋಟಿ ರೂ.ವೆಚ್ಚದಲ್ಲಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಅವರು ಪ್ರಕಟಿಸಿದರು.

ಪರಂಪರಾಗತವಾಗಿ ಕುರಿ/ಮೇಕೆ ಸಾಕಾಣಿಕೆದಾರರ ರಕ್ಷಣೆಗೆ ವಲಸೆ ಕುರಿಗಾಹಿಗಳ ಮತ್ತು ಸ್ವತ್ತುಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ ಜಾರಿಗೊಳಿಸಲಾಗುವುದು. ಸಂಚಾರಿ ಕುರಿಗಾಹಿಗಳು ಇರುವ ಜಾಗದಲ್ಲೇ ಅವರ ಕುರಿ, ಮೇಕೆಗಳಿಗೆ ಸರಕಾರಿ ವೈದ್ಯರಿಂದ ಲಸಿಕೆ ಹಾಕಲಾಗುವುದು. ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಸಂಚಾರಿ ಕುರಿಗಾಹಿಗಳ ಮಕ್ಕಳಿಗೆ ಸರಕಾರಿ ವಸತಿ ಶಾಲೆಗಳಲ್ಲಿ ಪ್ರವೇಶಕ್ಕೆ ಆದ್ಯತೆ ನೀಡಿ ವಿದ್ಯಾರ್ಥಿ ವೇತನ ನೀಡಲಾಗುವುದು. ಪುತ್ತೂರು ಪಶುವೈದ್ಯಕೀಯ ಕಾಲೇಜಿನ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಕಾಲೇಜನ್ನು ಕಾರ್ಯಾರಂಭ ಮಾಡಲಾಗುವುದು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News