30 ಡಿವೈಎಸ್ಪಿ, 132 ಇನ್‍ಸ್ಪೆಕ್ಟರ್ ಗಳ ವರ್ಗಾವಣೆ
ಬೆಂಗಳೂರು: ರಾಜ್ಯದ ವಿವಿಧೆಡೆ ಪೊಲೀಸ್ ಇಲಾಖೆಯ 30 ಡಿವೈಎಸ್ಪಿಗಳು ಹಾಗೂ 132 ಇನ್‍ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಇದೇ ವೇಳೆ ಮೂವರು ಡಿವೈಎಸ್ಪಿ ವರ್ಗಾವಣೆಯನ್ನು ರದ್ದುಗೊಳಿಸಲಾಗಿದ್ದು, ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಡೈರೆಕ್ಟರ್ ಜನರಲ್ ಮತ್ತು ಇನ್‍ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರ ಪರವಾಗಿ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಅವರು ಆದೇಶ ಹೊರಡಿಸಿದ್ದು, ಸಂಬಂಧಪಟ್ಟ ಘಟಕಾಧಿಕಾರಿಗಳು, ವರ್ಗಾವಣೆಗೊಂಡ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ವರ್ಗಾಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಯು.ಡಿ. ಕೃಷ್ಣಕುಮಾರ್ ಅವರನ್ನು ಬಿಡಿಎ ಡಿವೈಎಸ್‍ಪಿಯನ್ನಾಗಿ, ಎಚ್.ಬಿ.ರಮೇಶ್ ಕುಮಾರ್ ಅವರನ್ನು ವಿ.ವಿ.ಪುರಂ ಉಪವಿಭಾಗದ ಎಸಿಪಿಯನ್ನಾಗಿ, ಎಂ.ಎನ್.ನಾಗರಾಜ್ ಅವರನ್ನು ಸಿಸಿಬಿ ಎಸಿಪಿಯನ್ನಾಗಿ, ಅನುಷರಾಣಿ ಡಿಸಿಆರ್ ಇ, ಮೈಸೂರು ಎಸಿಪಿಯನ್ನಾಗಿ ಸೇರಿದಂತೆ ಒಟ್ಟು 30 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಲಾಗಿದೆ.
ಸ್ವರ್ಣ ಜಿ.ಎಸ್ ಅವರನ್ನು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಗೆ, ರವಿಕಿರಣ್ ಎಸ್.ಎಸ್. ಅವರನ್ನು ಬೆಂಗಳೂರಿನ ಸಂಪಗಿರಾಮನಗರ ಪೊಲೀಸ್ ಠಾಣೆಗೆ, ಅನಿತಾಕುಮಾರಿ ಎಂ. ಅವರನ್ನು ಬೆಂಗಳೂರಿನ ಮಹದೇವಪುರ ಸಂಚಾರ ಪೊಲೀಸ್ ಠಾಣೆಗೆ, ಶ್ರೀಧರ್ ಕೆ.ವಿ. ಅವರನ್ನು ಮೈಸೂರಿನ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆಗೆ ಸೇರಿದಂತೆ 132 ಪೊಲೀಸ್ ಇನ್‍ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಲಾಗಿದೆ.
ಡಿವೈಎಸ್ಪಿಗಳಾದ ಶಿವಕುಮಾರ್ ಟಿ.ಎಂ., ಸೈಯದ್ ರೋಷನ್ ಜಮೀರ್, ಸುಮೀತ್ ಎ.ಆರ್ ಅವರುಗಳನ್ನು ವರ್ಗಾವಣೆಯಿಂದ ರದ್ದುಗೊಳಿಸಿ ಆದೇಶದಲ್ಲಿ ತಿಳಿಸಲಾಗಿದೆ.