ತುಮಕೂರು: ಮೌಢ್ಯಾಚರಣೆಗೆ ನವಜಾತ ಶಿಶು ಬಲಿ

Update: 2023-07-27 10:00 GMT

ತುಮಕೂರು, ಜು.26: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ನವಜಾತ ಶಿಶು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವುದು ವರದಿಯಾಗಿದೆ.

ತುಮಕೂರು ತಾಲೂಕು ಮಲ್ಲೇನಹಳ್ಳಿಯಲ್ಲಿ ಇರುವ ಕಾಡುಗೊಲ್ಲ ಸಮುದಾಯದ ಮೂಢನಂಬಿಕೆಗೆ ಬಾಣಂತಿ ಹಾಗೂ ನವಜಾತ ಶಿಶುವನ್ನು ಗ್ರಾಮದ ಹೊರಗೆ ಗುಡಿಸಲಿನಲ್ಲಿ ಇರಿಸಲಾಗಿತ್ತು ಎನ್ನಲಾಗಿದೆ. ಈ ವಿಷಯ ತಿಳಿದು ತಹಶೀಲ್ದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಯಹಶೀಲ ಅಧಿಕಾರಿಗಳು ಎಷ್ಟೇ ಮನವೊಲಿಸದರೂ ಪ್ರಯೋಜವಾಗಿರಲಿಲ್ಲ. ಶುಕ್ರವಾರ ಮಗುವಿನಲ್ಲಿ ಕಾಣಿಸಿಕೊಂಡ ಅನಾರೋಗ್ಯದ ಪರಿಣಾಮ ಜಿಲ್ಲಾ ಆಸ್ಪತ್ರೆಯ ಎನ್‌ಐಸಿಯುನಲ್ಲಿ ಮಗುವನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗೇ ಮಗು ಶನಿವಾರ ಮೃತಪಟ್ಟಿದೆ.

ಮಗು ಸಾವನ್ನಪ್ಪಿದ ನಂತರ ತಾಯಿಯನ್ನು ಮತ್ತೆ ಊರಿಗೆ ಕರೆದುಕೊಂಡು ಬಂದಿದ್ದರೂ ಊರ ಒಳಗೆ ಸೇರಿಸಿಕೊಂಡಿಲ್ಲ, ಅದೇ ಗುಡಿಸಲಿನಲ್ಲಿ ಇಟ್ಟಿದ್ದಾರೆ. ಸದ್ಯ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಬಾಣಂತಿಯನ್ನು ಒಂಟಿಯಾಗಿ ಗುಡಿಸಲಿನಲ್ಲಿ ಇರಿಸಲಾಗಿದೆ.

ವಿವರ: ತೋವಿನಕೆರೆಯಿಂದ ಮಲ್ಲೇನಹಳ್ಳಿಗೆ ಬರುವ ಗರ್ಭೀಣಿಯನ್ನು ಮೊದಲಿಗೆ ಬೆಳ್ಳಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೇ ಕರೆದುಕೊಂಡು ಹೋಗಲಾಗುತ್ತದೆ. ನಂತರ 8 ತಿಂಗಳ ಗರ್ಭೀಣಿಗೆ ಆರೋಗ್ಯ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಇಲ್ಲಿಯೇ ಜೂ.20ರಂದು ಹೆರಿಗೆ ಮಾಡಿಸಲಾಗಿದೆ. ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಮೊದಲ ಮಗು ಗಂಡು-1.35 ಕೆಜಿ, ಎರಡನೇ ಮಗು-1.5 ಕೆಜಿ ತೂಕವಿದ್ದು, ಜೂ.22ರಂದು ಗಂಡು ಮಗು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಮೃತಪಟ್ಟಿದೆ. ಬಳಿಕ ಜು.15ರವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗ್ರಾಮಕ್ಕೆ ತೆರಳಿದ್ದು, ಗ್ರಾಮದ ಹೊರ ಇರುವ ಗುಡಿಸಲಿನಲ್ಲಿ ಬಾಣಂತಿ ಹಾಗೂ ಇನ್ನೊಂದು ಮಗುವನ್ನು ಇರಿಸಲಾಗಿತ್ತು ಎನ್ನಲಾಗಿದೆ.

ಹವಾಮಾನ ವೈಪರೀತ್ಯ ಹಾಗೂ ವ್ಯತ್ಯಾಸದಿಂದ ಅವಧಿಗೂ ಮೊದಲೇ ಜನಿಸಿದ್ದ ನಿಗದಿತ ತೂಕವೂ ಇಲ್ಲದ ಮಗುವಿನಲ್ಲಿ ಕಾಣಿಸಿಕೊಂಡ ಆನಾರೋಗ್ಯದಿಂದ ಸ್ಥಳೀಯ ಆಶಾ ಕಾರ್ಯಕರ್ತೆಯ ಮೂಲಕ ಜು.20ರಂದು ಜಿಲ್ಲಾ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು.

ಮಗುವಿನ ತೀವ್ರವಾದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎನ್‌ಐಸಿಯು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತಾಯಿ ಹೆರಿಗೆ ವಾರ್ಡ್‌ನಲ್ಲಿ ಆರೈಕೆಯಲ್ಲಿದ್ದರು. ಜು.22ರಂದು ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಜು.23ರಂದು ತಾಯಿಯನ್ನು ಕೂಡ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿಕೊಂಡು ಮತ್ತೇ ಅದೇ ಗುಡಿಸಿಲಿನಲ್ಲಿ ಇರಿಸಿದ್ದಾರೆ ಎನ್ನಲಾಗಿದೆ.

ಕಾಡುಗೊಲ್ಲ ಸಮುದಾಯದವರು ಬಾಣಂತಿಯರನ್ನು ಗ್ರಾಮದ ಒಳಗೆ ಸೇರಿಸದೆ ಊರ ಹೊರಗಿನ ಗುಡಿಸಿಲಿನಲ್ಲಿ ವಾಸ ಮಾಡಲು ಸೂಚಿಸುತ್ತಾರೆ ಇದು ಅವರ ಕಟ್ಟುಪಾಡು ಆಗಿದೆ ಎನ್ನಲಾಗಿದೆ. ಯಾರು ಎಷ್ಟೇ ಹೇಳಿದರೂ ಕೇಳದೆ ಎರಡು ಮಕ್ಕಳು ಸಾವನ್ನಪ್ಪಿದರೂಸಂಪ್ರದಾಯದ ಹೆಸರಿನಲ್ಲಿ ಜೀವಗಳ ಜೊತೆ ಚೆಲ್ಲಾಟವಾಡುತ್ತಿರುವುದು ವಿಪರ್ಯಾಸವೇ ಸರಿ.

ಸುಪ್ರೀಂ ಕೋರ್ಟ್‌ನಲ್ಲೇ ತೀರ್ಮಾನವಾಗಲಿ, ಎಲ್ಲ ಗೊಲ್ಲರ ಹಟ್ಟಿಗಳಿಗೂ ಏಕಕಾಲಕ್ಕೆ ಸೂತಕ ಮಹಿಳೆಯರು ಪ್ರವೇಶ ಮಾಡಿದರೇ ಮಾತ್ರ ನಾವು ಅವಕಾಶ ನೀಡುತ್ತೇವೆ ಎಂಬುವುದು ಗೊಲ್ಲರ ಹಟ್ಟಿಗಳ ಮುಖಂಡರದ್ದು ಮಂಡವಾದವಾಗಿದೆ ಎನ್ನಲಾಗಿದೆ.

 

ಚಿತ್ರ- ಗುಡಿಸಲಿನಲ್ಲಿ ತಾಯಿ ಮತ್ತು ಮಗು 
Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News