ವಿಧಾನ ಪರಿಷತ್ತಿನ ಶಿಕ್ಷಕರ-ಪದವೀಧರ ಕ್ಷೇತ್ರದ ಚುನಾವಣೆ : ಅಂತಿಮ ಕಣದಲ್ಲಿ 78 ಅಭ್ಯರ್ಥಿಗಳು

Update: 2024-05-20 15:24 GMT

ಸಾಂದರ್ಭಿಕ ಚಿತ್ರ | PC : PTI 

ಬೆಂಗಳೂರು : ವಿಧಾನ ಪರಿಷತ್ತಿನ ಶಿಕ್ಷಕರು ಹಾಗೂ ಪದವೀಧರರ ಆರು ಕ್ಷೇತ್ರಗಳಿಗೆ ಜೂ.3ರ ಬೆಳಗ್ಗೆ 8 ರಿಂದ ಸಂಜೆ 4ರ ವರೆಗೆ ನಡೆಯಲಿರುವ ಚುನಾವಣೆಯಲ್ಲಿ ಅಂತಿಮವಾಗಿ 78 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು ಇಂದು(ಸೋಮವಾರ) 12 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದುಕೊಂಡರು.

ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 19, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 15, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 15, ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 8, ನೈಋತ್ಯ ಪದವೀಧರ ಕ್ಷೇತ್ರದಲ್ಲಿ 10, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಸೇರಿದಂತೆ ಒಟ್ಟು 78 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮತದಾರರ ಪಟ್ಟಿ ಹಾಗೂ ಮತಗಟ್ಟೆಗಳ ವಿವರವನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ವೆಬ್‍ಸೈಟ್ ceo.karnataka.gov.in (https://ceo.karnatakla.gov.in/TGC_Electionroll2024) ಹಾಗೂ ಸಂಬಂಧಪಟ್ಟ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾ ಚುನಾವಣಾಧಿಕಾರಿ ಕಚೇರಿಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.

ಪದವೀಧರ ಕ್ಷೇತ್ರಗಳು: ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 99,121 ಪುರುಷ, 57,483 ಮಹಿಳೆ ಹಾಗೂ 19 ಇತರರು ಸೇರಿದಂತೆ ಒಟ್ಟು 1,56,623 ಮತದಾರರಿದ್ದಾರೆ. ನೈಋತ್ಯ ಪದವೀಧರ ಕ್ಷೇತ್ರದಲ್ಲಿ 43,720 ಪುರುಷ, 41,369 ಮಹಿಳೆ ಹಾಗೂ ಓರ್ವ ಇತರರು ಸೇರಿದಂತೆ 85,090 ಮತದಾರರಿದ್ದಾರೆ. ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 58,791 ಪುರುಷ, 63,055 ಮಹಿಳೆ ಹಾಗೂ 14 ಇತರರು ಸೇರಿದಂತೆ ಒಟ್ಟು 1,21,860 ಮತದಾರರಿದ್ದಾರೆ.

ಶಿಕ್ಷಕರ ಕ್ಷೇತ್ರಗಳು: ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 15,820 ಪುರುಷ, 9489 ಮಹಿಳೆಯರು ಸೇರಿ 25,309 ಮತದಾರರಿದ್ದಾರೆ. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 10,487 ಪುರುಷ, 12,915 ಮಹಿಳೆಯರು ಸೇರಿ 23,402 ಮತದಾರರಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 11,998 ಪುರುಷ, 9550 ಮಹಿಳೆ ಹಾಗೂ ಓರ್ವ ಇತರರು ಸೇರಿದಂತೆ ಒಟ್ಟು 21,549 ಮತದಾರರಿದ್ದಾರೆ.

ಮತಗಟ್ಟೆಗಳ ವಿವರ: ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿನ ದಾವಣಗೆರೆ-7, ಚಿತ್ರದುರ್ಗ-6, ತುಮಕೂರು-16, ಚಿಕ್ಕಬಳ್ಳಾಪುರ-10 ಹಾಗೂ ಕೋಲಾರ-7 ಸೇರಿದಂತೆ 47 ಮತಗಟ್ಟೆಗಳು, ನೈಋತ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿನ ಕೊಡಗು-5, ಚಿಕ್ಕಮಗಳೂರು-12, ದಕ್ಷಿಣ ಕನ್ನಡ-16, ಉಡುಪಿ-10, ಶಿವಮೊಗ್ಗ-32 ಹಾಗೂ ದಾವಣಗೆರೆ-4 ಸೇರಿದಂತೆ 79 ಮತಟ್ಟೆಗಳು, ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿನ ಚಾಮರಾಜನಗರ-5, ಹಾಸನ-10, ಮಂಡ್ಯ-9, ಮೈಸೂರು-20 ಸೇರಿದಂತೆ 44 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಬೆಂಗಳೂರು ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿನ ಬೆಂಗಳೂರು ಕೇಂದ್ರ-20, ಬೆಂಗಳೂರು ಉತ್ತರ-22, ಬೆಂಗಳೂರು ದಕ್ಷಿಣ-17, ಬೆಂಗಳೂರು ಗ್ರಾಮಾಂತರ-25, ಬೆಂಗಳೂರು ನಗರ-47, ರಾಮನಗರ-28 ಸೇರಿದಂತೆ 159 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ನೈಋತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿನ ಚಿಕ್ಕಮಗಳೂರು-13, ದಕ್ಷಿಣ ಕನ್ನಡ-24, ದಾವಣಗೆರೆ-8, ಕೊಡಗು-6, ಶಿವಮೊಗ್ಗ-38, ಉಡುಪಿ-19 ಸೇರಿದಂತೆ 108, ಈಶಾನ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿನ ಬಳ್ಳಾರಿ-24, ಬೀದರ್-33, ಗುಲ್ಬರ್ಗ-47, ಕೊಪ್ಪಳ-24, ರಾಯಚೂರು29, ವಿಜಯನಗರ-21, ಯಾದಗಿರಿ-16 ಸೇರಿದಂತೆ ಒಟ್ಟು 194 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

ಈಶಾನ್ಯ ಪದವೀಧರ ಕ್ಷೇತ್ರ: ಅಮರನಾಥ್ ಪಾಟೀಲ್(ಬಿಜೆಪಿ), ಚಂದ್ರಕಾಂತ್ ಪಾಟೀಲ್(ಕಾಂಗ್ರೆಸ್).

ಬೆಂಗಳೂರು ಪದವೀಧರ ಕ್ಷೇತ್ರ: ಅ.ದೇವೇಗೌಡ(ಬಿಜೆಪಿ), ರಾಮೋಜಿಗೌಡ(ಕಾಂಗ್ರೆಸ್).

ಆಗ್ನೇಯ ಶಿಕ್ಷಕರ ಕ್ಷೇತ್ರ: ವೈ.ಎ.ನಾರಾಯಣಸ್ವಾಮಿ(ಬಿಜೆಪಿ), ಡಿ.ಟಿ.ಶ್ರೀನಿವಾಸ್(ಕಾಂಗ್ರೆಸ್).

ನೈಋತ್ಯ ಶಿಕ್ಷಕರ ಕ್ಷೇತ್ರ:ಎಸ್.ಎಲ್.ಭೋಜೇಗೌಡ(ಜೆಡಿಎಸ್), ಕೆ.ಕೆ.ಮಂಜುನಾಥ್ ಕುಮಾರ್(ಕಾಂಗ್ರೆಸ್).

ನೈಋತ್ಯ ಪದವೀಧರ ಕ್ಷೇತ್ರ:ಡಾ.ಧನಂಜಯ ಸರ್ಜಿ(ಬಿಜೆಪಿ), ಆಯನೂರು ಮಂಜುನಾಥ್(ಕಾಂಗ್ರೆಸ್), ರಘುಪತಿ ಭಟ್(ಪಕ್ಷೇತರ).

ದಕ್ಷಿಣ ಶಿಕ್ಷಕರ ಕ್ಷೇತ್ರ: ವಿವೇಕಾನಂದ(ಜೆಡಿಎಸ್), ಮರಿತಿಬ್ಬೇಗೌಡ(ಕಾಂಗ್ರೆಸ್), ವಾಟಾಳ್ ನಾಗರಾಜ್(ಕನ್ನಡ ಚಳವಳಿ ವಾಟಾಳ್ ಪಕ್ಷ)

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News