ಆರೆಸ್ಸೆಸ್ ನ ವೈದಿಕ ಸಿದ್ಧಾಂತದ ವಿರುದ್ಧ ಧ್ವನಿ ಎತ್ತಬೇಕಿದೆ: ಮಾವಳ್ಳಿ ಶಂಕರ್

Update: 2023-08-27 14:31 GMT

ಹರಿಹರ: ಚಡ್ಡಿ ಮತ್ತು ಕೋಲಿನಿಂದ ದೇಶದ ಅಭಿವೃದ್ಧಿ ಸಾಧ್ಯವೆಂದು ಆರೆಸ್ಸೆಸ್ ಹೊರಟಿದ್ದು, ಅದು ತನ್ನ ಗುರಿ ತಲುಪುವುದಿಲ್ಲ. ದೇಶದೆಲ್ಲೆಡೆ ವೈದಿಕಶಾಹಿ ಪ್ರಭುತ್ವ ಸಾಧಿಸುತ್ತಾ, ದಲಿತ, ಶೋಷಿತರಾಗಿರುವ ಬಹುಸಂಖ್ಯಾತರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಆರೆಸ್ಸೆಸ್ ನ ಈ ಸಿದ್ಧಾಂತ ಸೋಲಿಸುವ ಶಕ್ತಿ ದಸಂಸಗಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದ್ದಾರೆ.

ತಾಲೂಕಿನ ಹನಗವಾಡಿ ಸಮೀಪದ ಮೈತ್ರಿ ವನದ ಪ್ರೊ.ಬಿ.ಕೃಷ್ಣಪ್ಪ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿಯಿಂದ ರವಿವಾರ ಆಯೋಜಿಸಿದ್ದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ರಾಜ್ಯಮಟ್ಟದ ಅಧ್ಯಯನ ಶಿಬಿರದ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬುದ್ಧ, ಬಸವ, ಡಾ.ಅಂಬೇಡ್ಕರ್, ಸಾವಿತ್ರಿಬಾ ಫುಲೆ, ನಾಲ್ವಡಿ, ಕುವೆಂಪು, ಪ್ರೊ.ಬಿ.ಕೃಷ್ಣಪ್ಪರಂತಹ ಮಹನೀಯರು ಇದೇ ವೈದಿಕ ಸಿದ್ಧಾಂತದ ವಿರುದ್ಧ ಧ್ವನಿ ಎತ್ತಿದ್ದರು. ಅಂತಹವರ ಧ್ವನಿಯನ್ನು ನಮ್ಮ ಧ್ವನಿಯಾಗಿಸಿ ದಲಿತ ಹೋರಾಟ, ಚಳವಳಿಗಳನ್ನು ರೂಪಿಸಿ ಜಾಗೃತಿ ಮೂಡಿಸಬೇಕಿದೆ ಎಂದು ಮಾವಳ್ಳಿ ಶಂಕರ್ ಸಲಹೆ ನೀಡಿದರು.

ಸಿಎಂ ಆಪ್ತ ಸಹಾಯಕ ಡಾ.ವೆಂಕಟೇಶ್ ನೆಲ್ಲುಕುಂಟೆ ಮಾತನಾಡಿ, ದಾರ ಧಾರಣೆ ಮಾಡಿದವರು 2,300 ವರ್ಷಗಳಿಂದ ಬಹು ಸಂಖ್ಯಾತ ಭಾರತೀಯರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಾ ಬಂದಿದ್ದಾರೆ. ಇದರ ಪರಿಣಾಮವಾಗಿ ದಾರ ಹಾಕಿಕೊಂಡವರಿಗೆ ದೇಶದ ಶಿಕ್ಷಣ, ಸಂಪತ್ತು, ಅಧಿಕಾರ ಸಿಕ್ಕಿತು. ದೇಶದ ಬಹುಸಂಖ್ಯಾತರು ಗುಲಾಮಗಿರಿ, ಜೀತ, ಬಡತನ, ನಿರಕ್ಷರತೆ, ಹಿಂಸೆಯಲ್ಲಿ ಬೆಂದು ಹೋಗಿದ್ದಾರೆಂದು ನುಡಿದರು.

ಕಳೆದ 20 ವರ್ಷಗಳಿಂದ ದೇಶದಲ್ಲಿ ಬಟ್ಟೆ, ಊಟ, ಸಾಮಾನ್ಯ ಮಟ್ಟದ ಶಿಕ್ಷಣ ಸಿಗುತ್ತಿದೆ. ಇದು ದೊಡ್ಡ ಬದಲಾವಣೆಯಾಗಿದೆ. ಆದರೆ, ಗುಣಮಟ್ಟದ ಶಿಕ್ಷಣದಿಂದ ಈಗಲೂ ಬಡವರು ವಂಚಿತರಾಗಿದ್ದಾರೆ. ಬರೆಯಲು ಬಾರದಿರುವ ಕೆಲವರು ನಮ್ಮ ವಿವಿಗಳಲ್ಲಿ ಅಧ್ಯಾಪಕರಾಗಿದ್ದಾರೆ. ಇಂತಹವರಿಮದ ನಮ್ಮ ಮಕ್ಕಳು ಯಾವ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವೆಂದು ಪ್ರಶ್ನಿಸಿದರು.

ಜ್ಞಾನವೊಂದೇ ನಮಗೆ ಕಾಪಾಡಲು ಸಾಧ್ಯ. ಇದನ್ನು ಡಾ.ಅಂಬೇಡ್ಕರ್ರವರು ಒತ್ತಿ ಹೇಳಿದ್ದರು. ಹೀಗಾಗಿ ಗುಣಮಟ್ಟದ ಶಿಕ್ಷಣ ಬೇಕು. ಆಗ ಮಾತ್ರ ದೀಪದಿಂದ ದೀಪ ಹಚ್ಚಬಹುದು. ಎಲ್ಲಾ ಭಾರತೀಯರಿಗೂ ಜ್ಞಾನದ ಹರಿವು ಆಗಬೇಕೆಂದರೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂದು ಡಾ.ವೆಂಕಟೇಶ್ ಹೇಳಿದರು.

ಬೆಂಗಳೂರಿನ ಜಿನ್ನಿ, ಗೊಲ್ಲಹಳ್ಳಿ ಶಿವಪ್ರಸಾದ್, ಡಿಂಗ್ರಿ ಭರತ್, ದೊಡ್ಮಲೆ ರವಿ ತಂಡದ ಹಾಡುಗಳು ಜನಮನ ಸೆಳದವು. ಸಮಾವೇಶದಲ್ಲಿ ಮೈತ್ರಿವನದ ಟ್ರಸ್ಟ್ ನ ಟ್ರಸ್ಟಿ ರುದ್ರಪ್ಪ ಹನಗವಾಡಿ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ, ನಾಗಣ್ಣ ಬಡಿಗೇರ್, ದಸಂಸ ಜಿಲ್ಲಾ ಸಂಚಾಲಕ ಬಿ.ದುಗ್ಗಪ್ಪ, ನಾಗಪ್ಳರ ಮಂಜುನಾಥ, ನಿವೃತ್ತ ಐಎಎಸ್ ಅಧಿಕಾರಿ ಈ.ವೆಂಕಟಯ್ಯ, ನಾಗರಾಜ್ ರಾಚಪ್ಪ, ರಾಯಚೂರಿನ ನಾಗರಾಜ್, ಬೆಂಗಳೂರಿನ ನಿರ್ಮಲ, ಸಂತೋಷ್ ನೋಟದವರ್, ರಾಜನಹಳ್ಳಿ ಮಂಜಪ್ಪ ಜಿ.ಎಂ., ಮಂಜುನಾಥ ಎಂ. ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದಲಿತರ ಜಾಗೃತಿಯಿಂದಾಗಿ ರಾಜ್ಯದಲ್ಲಿ ರಾಜಕೀಯ ಬದಲಾವಣೆ ತರಲಾಗಿದೆ. 2024ರ ಲೋಕಸಭಾ ಚುನಾವಣೆ ಎಂಬ ಮಹಾಕದನದಲ್ಲೂ ದಲಿತರು, ಪ್ರಗತಿಪರರು ಒಂದಾಗಿ ದೇಶದಲ್ಲೂ ರಾಜಕೀಯ ಬದಲಾವಣೆ ತರಬೇಕಿದೆ. ಎನ್ಆರ್ಸಿ, ಸಿಎಎಯಂತಹ ಕಾನೂನು ಹಿಡಿದು ದೇಶ ವಾಸಿಗಳಲ್ಲಿ ಭಯ ಮೂಡಿಸಿರುವ ಸರಕಾರಕ್ಕೆ ಸೂಕ್ತ ಉತ್ತರ ನೀಡುವ ಕಾಲ ಬಂದಿದೆ.

- ಮಾವಳ್ಳಿ ಶಂಕರ್, ದಸಂಸ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News