ವಂಚಕರು ಮೋದಿ ಹೆಸರನ್ನೇ ಬಳಸುವುದೇಕೆ: ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ವಂಚಿಸಿದ್ದ ಪ್ರಕರಣದ 3ನೇ ಆರೋಪಿಯಾಗಿರುವ ಅಭಿನವ ಹಾಲವೀರಪ್ಪ ಸ್ವಾಮೀಜಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ 1.50 ಕೋಟಿ ರೂ. ಪಡೆದಿದ್ದ ಬ್ಗಗೆ ತನಿಖೆಯಿಂದ ಬಹಿರಂಗವಾಗಿದೆ.
ಈ ವಿಚಾರವನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಯಿಸಿರುವ ಕಾಂಗ್ರೆಸ್, ʼʼವಂಚಕರಿಗೆ, ಭ್ರಷ್ಟಾಚಾರಿಗಳಿಗೆ, ಅತ್ಯಾಚಾರಿಗಳಿಗೆ ಮೋದಿ ಹೆಸರೇ ಪ್ರಿಯವಾಗುವುದೇಕೆ?ʼʼ ಎಂದು ಪ್ರಶ್ನೆ ಮಾಡಿದೆ.
ʼʼವಂಚಕರು ಮೋದಿ ಹೆಸರನ್ನೇ ಬಳಸುವುದೇಕೆ? ಫ್ರಿಡಂ 251 ಮೊಬೈಲ್ ವಂಚಕರೂ ಮೋದಿ ಹೆಸರನ್ನೇ ಬಳಸಿ ಟೋಪಿ ಹಾಕಿದ್ದರು. ಟಿಕೆಟ್ ಹಗರಣದ ಸ್ವಾಮಿಯೂ ಮೋದಿ ಹೆಸರನ್ನೇ ಬಳಸಿ ಟೋಪಿ ಹಾಕಿದ್ದಾನೆ. ಮೋದಿ ಹೆಸರು ಎಂದರೆ ವಂಚನೆಗೆ ಸಿಗುವ ಲೈಸೆನ್ಸ್ ಆಗಿದೆಯೇ ಬಜೆಪಿ ʼʼ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಬರೆದುಕೊಂಡಿದೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲವೀರಪ್ಪ ಸ್ವಾಮೀಜಿಯನ್ನು ವಿಚಾರಣೆ ನಡೆಸಿದ್ದ ಸಿಸಿಬಿ ಪೊಲೀಸರು, ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಲಿಖಿತ ಹೇಳಿಕೆ ಪಡೆದು, ಬೆಂಗಳೂರು ಹಾಗೂ ಹಿರೇಹಡಗಲಿಯಲ್ಲಿ ಮಹಜರು ನಡೆಸಿದ್ದರು. ಇನ್ನು ಪ್ರಕರಣದ ಆರೋಪಿಗಳಿಂದ ಇಲ್ಲಿಯವರೆಗೆ ನಗದು, ಚಿನ್ನ ಸೇರಿ ಒಟ್ಟು 2 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.