ಬಿಜೆಪಿ ಗೆಲುವುಗಳು ಮತ್ತು ಇವಿಎಂ ಭ್ರಾಂತಿಗಳು?

ಎಲ್ಲಿಯ ತನಕ ವಿರೋಧ ಪಕ್ಷಗಳು ತಮ್ಮ ನೈಜ ದೌರ್ಬಲ್ಯಗಳನ್ನು ತಿದ್ದಿಕೊಳ್ಳದೆ ಇವಿಎಂ ಅನ್ನು ದೂರುತ್ತಾ ಕೂರುತ್ತವೋ ಅಲ್ಲಿಯತನಕ ಬಿಜೆಪಿಯವರ ವಿಜಯಯಾತ್ರೆ ನಿರಾತಂಕವಾಗಿ ಮುಂದುವರಿಯುತ್ತದೆ. ಒಂದು ವೇಳೆ ಇವಿಎಂ ರದ್ದಾಗಿ ಬ್ಯಾಲೆಟ್ ಪೇಪರ್ ವ್ಯವಸ್ಥೆಯೇ ಜಾರಿಗೆ ಬಂದರೂ ಅದರ ಅತ್ಯಧಿಕ ಲಾಭವಾಗುವುದು ತಳಮಟ್ಟದಲ್ಲಿ ಅತ್ಯಧಿಕ ಹಣಬಲ, ತೋಳ್ಬಲ ಹಾಗೂ ಅಧಿಕಾರಿ ವಲಯಗಳ ಮೇಲೆ ಅತ್ಯಧಿಕ ಸೈದ್ಧಾಂತಿಕ ಪ್ರಭಾವ ಹೊಂದಿರುವ ಬಿಜೆಪಿಗೇ ವಿನಾ ದುರ್ಬಲವಾದ ಪಕ್ಷಗಳಿಗಲ್ಲ.

Update: 2023-12-28 06:51 GMT
Editor : Thouheed | Byline : ಶಿವಸುಂದರ್

Photo: PTI 

ಭಾಗ- 2

ಇವಿಎಂ ಮಾದರಿಯಲ್ಲಿ ಚುನಾವಣಾ ಪಕ್ಷಗಳ ಸಮ್ಮುಖದಲ್ಲಿ ಮತ್ತು ಅವರ ಸಮ್ಮತಿಯೊಂದಿಗೆ ನಡೆಯುವ ಇವಿಎಂ ಸ್ಯಾಂಪ್ಲಿಂಗ್, ಪೂರ್ವಭಾವಿ ಅಣಕು ಮತದಾನ, ಸ್ಪರ್ಧಿಗಳ ಚಿಹ್ನೆಯನ್ನು ಇವಿಎಂ ನಲ್ಲಿ ದಾಖಲಿಸಲು ತೆಗೆದುಕೊಳ್ಳುವ ಕೆಲವು ಆಡಳಿತಾತ್ಮಕ ಕ್ರಮಗಳು ಕೂಡಾ ತಾಂತ್ರಿಕ ರಿಗ್ಗಿಂಗ್‌ಗಳನ್ನು ಇಲ್ಲವಾಗಿಸುತ್ತದೆ ಎಂದು ಅವರು ಪ್ರತಿಪಾದಿಸುತ್ತಾರೆ. ಇದಲ್ಲದೆ ಇವಿಎಂಗಳಲ್ಲಿ ಸ್ಪರ್ಧಿಗಳ ಹೆಸರನ್ನು ದಾಖಲಿಸುವಾಗ ಪಕ್ಷಗಳ ಹೆಸರಿನ ಕಾಗುಣಿತದ ಅನುಕ್ರಮಣಿಕೆಯನ್ನು ಅನುಸರಿಸುವುದಿಲ್ಲ. ಪ್ರತೀ ಕ್ಷೇತ್ರದ ಸ್ಪರ್ಧಿಗಳ ಹೆಸರುಗಳ ಕಾಗುಣಿತದ ಅನುಕ್ರಮಣಿಕೆಯನ್ನು ಅನುಸರಿಸಲಾಗುತ್ತದೆ. ಅದು ಪ್ರತೀ ಕ್ಷೇತ್ರಕ್ಕೂ ಬದಲಾಗುತ್ತಾ ಹೋಗುತ್ತದೆ. ಇದೂ ದೊಡ್ಡ ಮಟ್ಟದ ತಾಂತ್ರಿಕ ರಿಗ್ಗಿಂಗ್ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ.

ಇವಲ್ಲದೆ 2013ರಲ್ಲಿ ಸುಪ್ರೀಂ ಕೋರ್ಟ್ ಇವಿಎಂನ ಜೊತೆಜೊತೆಗೆ ‘ವೋಟರ್ ವೆರಿಫಯಬಲ್ ಪೇಪರ್ ಆಡಿಟ್ ಟ್ರಯಲ್’ (ವಿವಿಪ್ಯಾಟ್) ಯಂತ್ರವನ್ನು ಎಂದರೆ ಇವಿಎಂ ಯಂತ್ರದಲ್ಲಿ ವೋಟು ಹಾಕಿದಾಗ ತಾನು ಹಾಕಿದ ಪಕ್ಷಕ್ಕೆ ಮತಚಲಾವಣೆಯಾಗಿದೆಯೇ ಎಂದು ತೋರಿಸುವ ಮತ್ತು ಅದರ ಕಾಗದ ದಾಖಲೆಯನ್ನು ಸಂಗ್ರಹಿಸುವ ಯಂತ್ರವನ್ನು ಬಳಸಬೇಕೆಂದೂ ಕಡ್ಡಾಯ ಮಾಡಿದೆ. 2014ರಲ್ಲಿ ಪ್ರಯೋಗಾರ್ಥವಾಗಿ ಶುರುವಾದ ವಿವಿಪ್ಯಾಟ್‌ನ ಬಳಕೆ ಈಗ ಎಲ್ಲೆಡೆಯೂ ಕಡ್ಡಾಯವಾಗಿದೆ. ಅಲ್ಲದೆ ಪ್ರತೀ ಅಸೆಂಬ್ಲಿ ಕ್ಷೇತ್ರದಲ್ಲಿ ಒಂದು ಇವಿಎಂ ಯಂತ್ರದಂತೆ ದೇಶಾದ್ಯಂತ 4,400 ಇವಿಎಂ ಎಣಿಕೆಯು ವಿವಿಪ್ಯಾಟ್ ಎಣಿಕೆಯ ಜೊತೆ ತಾಳೆಯಾಗಬೇಕಿದೆ. ಇದಲ್ಲದೆ 21 ವಿರೋಧ ಪಕ್ಷಗಳು ಸುಪ್ರೀಂ ಕೋರ್ಟಿಗೆ ಅಹವಾಲೊಂದನ್ನು ಸಲ್ಲಿಸಿ ಅಸೆಂಬ್ಲಿ ಕ್ಷೇತ್ರಕ್ಕೆ ಒಂದರಂತಲ್ಲದೆ ಶೇ.50ರಷ್ಟು ವಿವಿಪ್ಯಾಟ್ ಸಂಗ್ರಹವನ್ನು ಇವಿಎಂ ಮತಗಳೊಂದಿಗೆ ತಾಳೆಯಾಗುವುದು ಕಡ್ಡಾಯಗೊಳಿಸಬೇಕೆಂದು ಮನವಿ ಸಲ್ಲಿಸಿದ್ದವು. ಸುಪ್ರೀಂ ಕೋರ್ಟು ಅದನ್ನು ಪ್ರಾಯಶಃ ಪುರಸ್ಕರಿಸಿ ಪ್ರತೀ ಅಸೆಂಬ್ಲಿ ಕ್ಷೇತ್ರಕ್ಕೆ ಒಂದರ ಬದಲು ಐದು ವಿವಿಪ್ಯಾಟ್‌ಗಳನ್ನು ತಾಳೆ ಮಾಡಬೇಕೆಂದು ಆದೇಶಿಸಿದೆ. ಆದರೆ ಇದರ ಬಗ್ಗೆ ವಿರೋಧ ಪಕ್ಷಗಳು ಮತ್ತೊಮೆ ಮೇಲ್ಮನವಿ ಸಲ್ಲಿಸಿ ಶೇ.50ರಷ್ಟು ವಿವಿಪ್ಯಾಟ್ ತಾಳೆ ಆಗಬೇಕೆಂದು ಮರುಮನವಿ ಮಾಡಿವೆ.

ಇದನ್ನೂ ಓದಿ : ಬಿಜೆಪಿ ಗೆಲುವುಗಳು ಮತ್ತು ಇವಿಎಂ ಭ್ರಾಂತಿಗಳು? | ಭಾಗ- 1

 https://www.varthabharati.in/taxonomy/term/100061/bjp-victories-and-evm-illusions-1983683

ಇದು ಇಲ್ಲಿಯವರೆಗಿನ ಕಥೆ.

ಆದರೆ ಇದು ಭಾರತದ ಚುನಾವಣಾ ಪ್ರಜಾತಂತ್ರದ ಇತರ ಮೂಲಭೂತ ಸಮಸ್ಯೆಗಳನ್ನೂ ಬಗೆಹರಿಸಿಬಿಟ್ಟಿವೆಯೆಂದೇನಲ್ಲ. ಈಗಲೂ ಮತಪಟ್ಟಿಯಲ್ಲಿ ಮಹಿಳೆಯರ ಮತ್ತು ಮುಸ್ಲಿಮರ ಹೆಸರುಗಳೇ ಮಾಯವಾಗುವ, ಮತಗಟ್ಟೆಗೆ ಬರದಂತೆ ಬೆದರಿಸುವ ಅಥವಾ ದುಡ್ಡುಕೊಟ್ಟು ಅವರ ಗುರುತುಚೀಟಿಗಳನ್ನು ಅಡ ಇಟ್ಟುಕೊಳ್ಳುವ ಚುನಾವಣಾ ಅಕ್ರಮಗಳು ನಿರಾತಂಕವಾಗಿ ನಡೆಯುತ್ತಲೇ ಇವೆ. ಆದರೆ ಅದು ಮತಗಟ್ಟೆಯ ಹೊರಗೆ ಮುಂದುವರಿಯುತ್ತಿರುವ ಅಕ್ರಮಗಳು. ಆದರೆ ಮತಗಟ್ಟೆಯ ಒಳಗೆ ಬ್ಯಾಲೆಟ್ ಪೇಪರ್ ವ್ಯವಸ್ಥೆಯಲ್ಲಿ ಬಲಪ್ರಯೋಗ ಮತ್ತು ಭ್ರಷ್ಟಾಚಾರದ ಮೂಲಕ ನಡೆಯುತ್ತಿದ್ದ ಮತಗಟ್ಟೆ ವಶ ಮತ್ತು ರಿಗ್ಗಿಂಗ್ ನಂತಹ ಚುನಾವಣಾ ಅಕ್ರಮಗಳು ಇವಿಎಂ ವ್ಯವಸ್ಥೆಯಲ್ಲಿ ನಡೆಯುತ್ತಿಲ್ಲ. ಅಷ್ಟು ಮಾತ್ರ ನಿಜ.

ಆದರೆ ಚಲಾಯಿತ ಮತಗಳೇ ಮತ್ತೊಂದು ಪಕ್ಷಕ್ಕೆ ವರ್ಗಾಯಿಸಿ ಬಿಡುವಂಥ ತಾಂತ್ರಿಕ ರಿಗ್ಗಿಂಗ್‌ಗಳು ನಡೆಯಬಹುದಾದ ಸಾಧ್ಯತೆಗಳು ಇಲ್ಲವೇ ಇಲ್ಲ ಎನ್ನುವ ಬಗ್ಗೆ ವಿರೋಧ ಪಕ್ಷಗಳಿಗಿನ್ನೂ ಖಾತರಿ ಬರುತ್ತಿಲ್ಲ.

ಅದಕ್ಕೆ ಕಾರಣಗಳೂ ಇವೆ. ಏಕೆಂದರೆ ಇತ್ತೀಚೆಗೆ ನಡೆದ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಕೆಲವೊಂದು ನಿರ್ದಿಷ್ಟ ಬೂತುಗಳಲ್ಲಿ ಹಾಕಿದ ಮತಗಳೆಲ್ಲಾ ಬಿಜೆಪಿಗೆ ಹೋದ ದೂರುಗಳು ದಾಖಲಾಗಿವೆ. ಕೆಲವೊಂದು ಕಡೆ ಅಣಕು ಮತದಾನ ನಡೆಸುವಾಗಲೂ ಇದೇ ರೀತಿ ಪತ್ರಕರ್ತರ ಎದುರಿಗೇ ಹಾಕಿದ ಮತಗಳೆಲ್ಲಾ ಬಿಜೆಪಿಗೆ ಹೋದದ್ದು ವರದಿಯಾಗಿದೆ. ಮಹಾರಾಷ್ಟ್ರದ ಕಾರ್ಪೊರೇಷನ್ ಚುನಾವಣೆಗಳಲ್ಲಿ ಸ್ಪರ್ಧಿಯೊಬ್ಬರಿಗೆ ಸೊನ್ನೆ ಮತಗಳು ಬಂದಿವೆ. ಅಂದರೆ ತಾನೂ ಕೂಡ ತನಗೆ ವೋಟು ಹಾಕಿಕೊಂಡಿಲ್ಲವೇ ಎಂದು ಅವರು ಹೈಕೋರ್ಟಿನಲ್ಲಿ ಇವಿಎಂ ವಿರುದ್ಧ ದಾವೆ ಹೂಡಿದ್ದಾರೆ.

ಸಿಟಿಜನ್ಸ್ ಕಮಿಟಿಯ ಸಮಗ್ರ ವರದಿ

ಭಾರತದ ಚುನಾವಣಾ ಪ್ರಜಾತಂತ್ರ ಎದುರಿಸುತ್ತಿರುವ ಈ ಗಂಭೀರ ವಿಶ್ವಾಸದ ಬಿಕ್ಕಟ್ಟಿನ ಬಗ್ಗೆ ಈ ದೇಶದ ಗಣ್ಯರು, ವಿದ್ವಾಂಸರನ್ನು ಕೂಡಿದ ನಾಗರಿಕ ಸಮಿತಿಯೊಂದು ಇದರ ಬಗ್ಗೆ ಇತೀಚೆಗೆ ಕೂಲಂಕಶವಾದ ಅಧ್ಯಯನ ನಡೆಸಿ 2021ರ ಎಪ್ರಿಲ್‌ನಲ್ಲಿ ದೇಶದ ಮುಂದೆ ವರದಿಯೊಂದನ್ನು ಮುಂದಿಟ್ಟಿದೆ. ಪ್ರಾಯಶಃ ಸದ್ಯಕ್ಕೆ ಇವಿಎಂ ಬಗ್ಗೆ ಎದ್ದಿರುವ ವಿವಾದಕ್ಕೆ ಈ ಸಮಿತಿ ಈ ಸಂದರ್ಭಕ್ಕೆ ಸಾಧ್ಯ ಇರುವ ವೈಜ್ಞಾನಿಕ ಹಾಗೂ ಪ್ರಜಾತಾಂತ್ರಿಕ ಸುಧಾರಣಾ ಪರಿಹಾರಗಳನ್ನು ಒದಗಿಸಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

ಆ ಸಮಿತಿ ಏನು ಶಿಫಾರಸು ಮಾಡಿದೆ ಎಂದು ಅರ್ಥ ಮಾಡಿಕೊಳ್ಳುವ ಮುನ್ನ ಈ ಸಮಿತಿಯಲ್ಲಿ ಇದ್ದ ಸದಸ್ಯರು ಯಾರ್ಯಾರು ಎಂದು ತಿಳಿದುಕೊಳ್ಳುವುದು ಒಳಿತು.

ಸಮಿತಿ ಸದಸ್ಯರು: ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಮದನ್ ಲೋಕೂರ್, ದೇಶದ ಪ್ರಥಮ ಪ್ರಧಾನ ಆರ್‌ಟಿಐ ಕಮಿಷನರ್ ಹಾಗೂ ಹಿರಿಯ ಅಧಿಕಾರಿ ವಜಾಹತ್ ಹಬೀಬುಲ್ಲ, ಮದ್ರಾಸ್ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಹರಿಪರಂಧಾಮನ್, ಅರ್ಥಶಾಸ್ತ್ರಜ್ಞ ಮತ್ತು ಜೆಎನ್‌ಯುವಿನ ನಿವೃತ್ತ ಪ್ರೊಫೆಸರ್ ಅರುಣ್ ಕುಮಾರ್, ಅಶೋಕಾ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಪ್ರೊ. ಸುಭಾಶಿಶ್ ಬ್ಯಾನರ್ಜಿ, ಹಿರಿಯ ಪತ್ರಕರ್ತೆ ಪಮೇಲ್ ಫಿಲಿಪೋಸ್, ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತರೂ ಆದ ಜಾನ್ ದಯಾಳ್, ಮಹಾರಾಷ್ಟ್ರ ಸರಕಾರದ ಮಾಜಿ ಕಾರ್ಯದರ್ಶಿ ಸುಂದರ್ ಬರುವಾ, ಭಾರತ ಸರಕಾರದ ನಿವೃತ್ತ ಹಿರಿಯ ಅಧಿಕಾರಿ ಎಂ.ಜಿ. ದೇವಶ್ಯಾಮ್.

ಇವರು ಕೊಟ್ಟಿರುವ ವರದಿಯ ಪೂರ್ಣಪಾಠವನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಪಡೆದುಕೊಳ್ಳಬಹುದು:

https://www.cse.iitd.ac.in/~suban/reports/CCEpaper.pdf

ಈ ಸಮಿತಿಯು ಸರಕಾರದಿಂದ, ಸಾರ್ವಜನಿಕರಿಂದ, ವಿಜ್ಞಾನಿಗಳಿಂದ, ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಿಂದ ಪ್ರತಿಪಾದನೆಗಳನ್ನು ಆಹ್ವಾನಿಸಿ ಅವುಗಳನ್ನು ಸಮಿತಿಯ ಒಳಗಿನ ಹಾಗೂ ಹೊರಗಿನ ಪರಿಣಿತರ ಮತ್ತು ವಿಶ್ಲೇಷಕರ ಪರಿಶೀಲನೆಗೆ ಒಳಪಡಿಸಿ ಅಂತಿಮವಾಗಿ ಈ ಕೆಳಗಿನ ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಿದೆ.

-ಒಟ್ಟಾರೆಯಾಗಿ ಸಮಿತಿಯು ಇವಿಎಂ ವ್ಯವಸ್ಥೆಯನ್ನು ಸಾರಾಸಗಟಾಗಿ ತಿರಸ್ಕರಿಸಿ ಬ್ಯಾಲೆಟ್ ಪದ್ಧತಿಗೆ ಮರಳಬೇಕೆಂದು ಹೇಳಿಲ್ಲವಾದರೂ ಇವಿಎಂ ವ್ಯವಸ್ಥೆ ಜನರ ಹಾಗೂ ಪ್ರಜಾತಂತ್ರದ ವಿಶ್ವಾಸಗಳಿಸಿಕೊಳ್ಳಬೇಕೆಂದರೆ ಸಾಕಷ್ಟು ಸುಧಾರಣೆಯನ್ನು ತುರ್ತಾಗಿ ಮಾಡಬೇಕೆಂದು ಆಗ್ರಹಿಸಿದೆ.

ಯಾವ ತಂತ್ರಜ್ಞಾನವೂ ಶಾಶ್ವತವಾಗಿ ದೋಷ ಅಥವಾ ದುರ್ಬಳಕೆ ಮುಕ್ತ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ಇವಿಎಂ ತಂತ್ರಜ್ಞಾನ ಇನ್ನೂ ವಿಕಾಸಗೊಳ್ಳುತ್ತಿದ್ದು ಈವರೆಗೆ ನಮಗೆ ಗೊತ್ತಿರುವ ಹ್ಯಾಕಿಂಗ್ ತಂತ್ರಜ್ಞಾನದಲ್ಲಿ ದುರ್ಬಳಕೆ ಸಾಧ್ಯವಿಲ್ಲ ಎಂದಷ್ಟೇ ಹೇಳಲು ಸಾಧ್ಯ. ಅದರಲ್ಲೂ ಐಟಿ ತಂತ್ರಜ್ಞಾನ ಅತ್ಯಂತ ವೇಗವಾಗಿ ಮತ್ತು ಮುಕ್ತವಾಗಿ ಬೆಳೆಯುತ್ತಿರುವ ತಂತ್ರಜ್ಞಾನವಾಗಿದೆ. ಹ್ಯಾಕಿಂಗ್ ತಂತ್ರಜ್ಞಾನ ಅದಕ್ಕಿಂತ ವೇಗವಾಗಿ ಬೆಳೆಯುತ್ತಿದೆ. ಮತ್ತದರ ಪ್ರಥಮ ಲಾಭವನ್ನು ಅಧಿಕಾರಸ್ಥರು ಮತ್ತು ಹಣವಂತರು ಪಡೆಯಬಲ್ಲರು. ಈ ವಾಸ್ತವವನ್ನು ಸರಕಾರ, ಆಯೋಗ ಮತ್ತು ಕೋರ್ಟುಗಳು ಪರಿಗಣಿಸಬೇಕು.

- ಆದ್ದರಿಂದ ಇಡೀ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು. ಈ ಪ್ರಕ್ರಿಯೆಯಲ್ಲಿ ಬಳಸುವ ಎಲ್ಲಾ ತಂತ್ರಜ್ಞಾನ, ಸಾಫ್ಟ್‌ವೇರ್ ಇನ್ನಿತ್ಯಾದಿ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಮತ್ತು ಅದನ್ನು ಸ್ವತಂತ್ರ ವಿಚಕ್ಷಣೆಗೆ ಒಳಪಡಿಸಬೇಕು. ಚುನಾವಣಾ ಆಯೋಗವು ಪರಿಣಿತರ ಮೇಲಿನ ಅವಲಂಬನೆಗಿಂತ ಪ್ರಜಾತಾಂತ್ರಿಕ ಪ್ರಕ್ರಿಯೆಗಳ ಮೇಲೆ ಹೆಚ್ಚು ಅವಲಂಬಿಸಬೇಕು.

- ಇವಿಎಂ ತಂತ್ರಜ್ಞಾನದಲ್ಲಿ ಬಳಸುವ ಡಿಜಿಟಲ್ ತಂತ್ರಜ್ಞಾನದ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗಳು ಸ್ವತಂತ್ರವಾಗಿರಬೇಕು ಮತ್ತು ಸರಕಾರ ರಹಸ್ಯ ಪ್ರಕ್ರಿಯೆಯ ಹೆಸರಲ್ಲಿ ಅದರ ಪರಿಣಾಮವನ್ನು ಸ್ವತಂತ್ರವಾಗಿ ಪರಿಶೀಲಿಸಲು ತಡೆಯೊಡ್ಡಬಾರದು.

-ವೋಟಿನ ನಂತರದ ಮತಯಂತ್ರಗಳ ಡಿಜಿಟಲ್ ಬೀಗಮುದ್ರೆ ಹಾಗೂ ಡಿಜಿಟಲ್ ಪ್ರಸರಣೆಗಳ ಅಸಾಧ್ಯತೆಯು ಸಹ ಸಾರ್ವಜನಿಕ ವಿಚಕ್ಷಣೆಗೆ ಒಳಪಡಬೇಕು.

- ಮತಚಲಾವಣೆ ಮಾಡಿದ ನಂತರದಲ್ಲಿ ವಿವಿಪ್ಯಾಟ್ ಮುದ್ರಿಕೆಯು ತಾನು ಚಲಾಯಿಸಿದ ಮತಕ್ಕೆ ವಿಭಿನ್ನವಾದ ಮತವನ್ನು ತೋರಿಸಿತು ಎಂದು ಮತದಾರರು ನೀಡುವ ದೂರನ್ನು ಸ್ವತಂತ್ರವಾಗಿ ಬಗೆಹರಿಸುವ ವ್ಯವಸ್ಥೆ ಇರಬೇಕು. ಈಗಿರುವಂತೆ ದೂರು ಸಾಬೀತಾಗದಿದ್ದಲ್ಲಿ ಮತದಾರನಿಗೆ ಶಿಕ್ಷೆ ಕೊಡುವಂತಹ ವ್ಯವಸ್ಥೆ ರದ್ದಾಗಬೇಕು.

-ವಿವಿಪ್ಯಾಟ್ ಮತ್ತು ಇವಿಎಂಗಳ ತಾಳೆಯಲ್ಲಿ ವ್ಯತ್ಯಾಸ ಬಂದರೆ ವಿವಿಪ್ಯಾಟ್ ಎಣಿಕೆಯೇ ಮಾನ್ಯವಾಗಬೇಕು ಮತ್ತು ಎಲ್ಲಾ ತಾಳೆಗಳೂ ಪೂರ್ತಿಯಾಗದೆ ಚುನಾವಣಾ ಆಯೋಗ ಫಲಿತಾಂಶವನ್ನು ಘೋಷಿಸಬಾರದು.

ಹಾಗೂ ಇದರ ಜೊತೆಗೆ ವಿರೋಧ ಪಕ್ಷಗಳೂ ಒತ್ತಾಯಿಸುತ್ತಿರು ವಂತೆ ಶೇ. 50 ಇವಿಎಂಗಳ ವಿವಿಪ್ಯಾಟ್ ತಾಳೆಯಾಗದೆ ಫಲಿತಾಂಶ ವನ್ನು ಘೋಷಿಸದಂತೆ ತಡೆಯೊಡ್ಡುವುದನ್ನು ಸಹ ಪರಿಗಣಿಸಬೇಕು.

ಒಟ್ಟಾರೆಯಾಗಿ ನೋಡುವುದಾದರೆ ಇವಿಎಂ ವ್ಯವಸ್ಥೆಯು ಬ್ಯಾಲೆಟ್ ಪೇಪರ್ ವ್ಯವಸ್ಥೆಯಲ್ಲಿದ್ದ ಬಹುಪಾಲು ಅಕ್ರಮಗಳನ್ನು ತಡೆಗಟ್ಟಿದೆಯೆಂಬುದು ಸತ್ಯ. ಹೀಗಾಗಿ ಮತ್ತೆ ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಮರಳಬೇಕೆನ್ನುವ ವಾದ ಮತದಾರರ ದೃಷ್ಟಿಯಲ್ಲಿ ಮತ್ತು ಪ್ರಜಾತಂತ್ರದ ದೃಷ್ಟಿಯಲ್ಲಿ ಆತ್ಮಹತ್ಯಾಕಾರಿ.

ಆದರೆ ಅದೇ ಸಮಯದಲ್ಲಿ ಇವಿಎಂ ಫೂಲ್ ಪ್ರೂಫ್ ಎನ್ನುವುದು ಸಹ ನಯವಂಚನೆ ಮತ್ತು ಮುಠ್ಠಾಳತನ.

ಆದ್ದರಿಂದ ಇವಿಎಂ ಯಂತ್ರಗಳ ತಾಂತ್ರಿಕ ದುರ್ಬಳಕೆಗಳ ಸಾಧ್ಯತೆಗಳ ಬಗ್ಗೆ ಕಣ್ಣಾಗಿದ್ದುಕೊಂಡು ಅದರ ಸತತ ಸುಧಾರಣೆಯನ್ನು ಮಾಡುತ್ತಿರಬೇಕು ಮತ್ತು ಸದ್ಯದ ಸಂದರ್ಭದಲ್ಲಿ ಮತದಾರರಲ್ಲಿ ಮತ್ತು ವಿರೋಧಪಕ್ಷಗಳಲ್ಲಿ ವಿಶ್ವಾಸ ಮೂಡಿಸಬಹುದಾದ ಶೇ.50 ವಿವಿಪ್ಯಾಟ್ ತಾಳೆಯನ್ನು ಕಡ್ಡಾಯ ಮಾಡುವುದರ ಜೊತೆಗೆ ಸಿಟಿಜನ್ಸ್ ಕಮಿಟಿಯ ಶಿಫಾರಸುಗಳನ್ನು ಕಡ್ಡಾಯವಾಗಿ ಜಾರಿ ಮಾಡಬೇಕು. ಇದು ತುರ್ತಾಗಿ ಆಗಲೇಬೇಕಿರುವ ಚುನಾವಣಾ ಸುಧಾರಣೆಯಾಗಿದೆ.

ಇವಿಎಂನ ಇತರ ಅಪಾಯಗಳು

ಇವಿಎಂ ಸುತ್ತ ಇರುವ ಚರ್ಚೆಗಳು ಕೇವಲ ಅದರ ತಾಂತ್ರಿಕ ರಿಗ್ಗಿಂಗ್ ಸಾಧ್ಯತೆಯ ಸುತ್ತ ಮಾತ್ರ ಕೇಂದ್ರೀಕರಿಸಿವೆ. ಆದರೆ ಇವಿಎಂನಿಂದ ಪ್ರಜಾತಂತ್ರಕ್ಕೆ ಮತ್ತು ಮತದಾರರಿಗೆ ಮತ್ತೊಂದು ದೊಡ್ಡ ಅಪಾಯವಾಗುತ್ತಿದೆ. ಒಂದು ಅರ್ಥಪೂರ್ಣ ಚುನಾವಣಾ ವ್ಯವಸ್ಥೆ ನಿಂತಿರುವುದೇ ಮತದಾರರ ರಹಸ್ಯವನ್ನು ಕಾಪಾಡುವುದರಲ್ಲಿ. ಆದರೆ ಇವಿಎಂ ವ್ಯವಸ್ಥೆಯು ಹೆಚ್ಚೂ ಕಡಿಮೆ ಯಾವ ಬೀದಿ ಅಥವಾ ಯಾವ ವಾರ್ಡು ಯಾರಿಗೆ ಮತಮಾಡಿರಬಹುದೆಂಬ ಸಂಪೂರ್ಣ ವಿವರಗಳನ್ನು ಬಯಲು ಮಾಡುತ್ತದೆ. ಒಂದು ಬೂತಿನ ಒಂದು ಇವಿಎಂ ಯಂತ್ರದಲ್ಲಿ 3,000 ಮತಗಳು ಶೇಖರವಾಗುತ್ತವೆ ಮತ್ತು ನಿರ್ದಿಷ್ಟ ಬೂತಿನ ಮತದಾರರು ಯಾರ್ಯಾರೆಂಬ ಪಟ್ಟಿಯನ್ನು ಚುನಾವಣಾ ಕಚೇರಿಯೇ ಎಲ್ಲಾ ರಾಜಕೀಯ ಪಕ್ಷಗಳಿಗೂ ನೀಡಿರುತ್ತದೆ. ಮತ ಎಣಿಕೆಯಾಗುವಾಗ ಯಾವ್ಯಾವ ಇವಿಎಂನಲ್ಲಿ ಯಾವ್ಯಾವ ಪಕ್ಷಕ್ಕೆ ಎಷ್ಟೆಷ್ಟು ಮತಗಳು ದೊರೆತವೆಂಬ ಬೂತುವಾರು ಮತ್ತು ಇವಿಎಂವಾರು ವಿವರಗಳು ಪಕ್ಷಗಳಿಗೆ ದೊರೆಯುತ್ತವೆ. ಇದನ್ನು ಆಧರಿಸಿಯೇ ಮೇನಕಾ ಗಾಂಧಿ ತನಗೆ ವೋಟು ಹಾಕದ ಮತದಾರರಿಗೆ ಶಾಸ್ತಿ ಮಾಡುವುದಾಗಿ ಹೇಳಿದ್ದು. ಇದನ್ನು ತಪ್ಪಿಸಬೇಕೆಂದರೆ ಒಂದು ಕ್ಷೇತ್ರದ ಎಲ್ಲ ಮತಗಳನ್ನು ಒಟ್ಟೀಕರಿಸಿ ಎಣಿಕೆ ಮಾಡುವ ತಂತ್ರಜ್ಞಾನದ (ಟೋಟಲೈಸರ್) ಅಗತ್ಯವಿದೆ. ರಾಜಕೀಯ ಪಕ್ಷಗಳು ಇವಿಎಂನ ಈ ಅಪಾಯವನ್ನು ತಪ್ಪಿಸಲು ಕೂಡಲೇ ಆಗ್ರಹಿಸಬೇಕು.

ಬಿಜೆಪಿಯ ಗೆಲುವಿಗೆ ಈಗ ಇವಿಎಂ ದುರ್ಬಳಕೆಯ ಅಗತ್ಯವಿದೆಯೇ?

ಜೊತೆಗೆ ಕೋಮುವಾದಿ ಧ್ರುವೀಕರಣದ ದುಷ್ಟ ಯೋಜನೆಗಳು, ಸುಳ್ಳು ಸುದ್ದಿಗಳ ಕಾರ್ಖಾನೆಗಳು ಮತ್ತವರ ಸಾಕು ಮಾಧ್ಯಮಗಳು, ಕಾರ್ಪೊರೇಟ್ ಹಣಬಲ, ಆರೆಸ್ಸೆಸ್ ಸಂಘಟನಾ ಬಲದ ಜೊತೆಗೆ ಸದಾ ಸನ್ನದ್ಧವಾಗಿರುವ ಅವರ ಚುನಾವಣಾ ಯಂತ್ರಾಂಗಕ್ಕೆ ಯಾವ ವಿರೋಧ ಪಕ್ಷವೂ ಸಾಟಿಯಿಲ್ಲದಿರುವುದರಿಂದ ಸದ್ಯಕ್ಕಂತೂ ಅವರಿಗೆ ಇವಿಎಂ ಅನ್ನು ದುರ್ಬಳಕೆ ಮಾಡಿಕೊಳ್ಳುವ ತುರ್ತು ಕೂಡ ಎದುರಾಗಿಲ್ಲ. ಏಕೆಂದರೆ ವಿರೋಧ ಪಕ್ಷಗಳ ರಾಜಕೀಯ-ಸೈದ್ಧಾಂತಿಕ-ಸಂಘಟನಾತ್ಮಕ ದೌರ್ಬಲ್ಯವೇ ಬಿಜೆಪಿಗೆ ಜಯದ ಮೇಲೆ ಜಯವನ್ನು ತಟ್ಟೆಯಲ್ಲಿಟ್ಟುಕೊಡುತ್ತಿರುವಾಗ ಇವಿಎಂ ದುರ್ಬಳಕೆಯ ಅಗತ್ಯವೇ ಅವರಿಗೆ ಉಂಟಾಗಿಲ್ಲ.

ಅಷ್ಟು ಮಾತ್ರವಲ್ಲ. ಎಲ್ಲಿಯ ತನಕ ವಿರೋಧ ಪಕ್ಷಗಳು ತಮ್ಮ ನೈಜ ದೌರ್ಬಲ್ಯಗಳನ್ನು ತಿದ್ದಿಕೊಳ್ಳದೆ ಇವಿಎಂ ಅನ್ನು ದೂರುತ್ತಾ ಕೂರುತ್ತವೋ ಅಲ್ಲಿಯತನಕ ಬಿಜೆಪಿಯವರ ವಿಜಯಯಾತ್ರೆ ನಿರಾತಂಕವಾಗಿ ಮುಂದುವರಿಯುತ್ತದೆ. ಒಂದು ವೇಳೆ ಇವಿಎಂ ರದ್ದಾಗಿ ಬ್ಯಾಲೆಟ್ ಪೇಪರ್ ವ್ಯವಸ್ಥೆಯೇ ಜಾರಿಗೆ ಬಂದರೂ ಅದರ ಅತ್ಯಧಿಕ ಲಾಭವಾಗುವುದು ತಳಮಟ್ಟದಲ್ಲಿ ಅತ್ಯಧಿಕ ಹಣಬಲ, ತೋಳ್ಬಲ ಹಾಗೂ ಅಧಿಕಾರಿ ವಲಯಗಳ ಮೇಲೆ ಅತ್ಯಧಿಕ ಸೈದ್ಧಾಂತಿಕ ಪ್ರಭಾವ ಹೊಂದಿರುವ ಬಿಜೆಪಿಗೇ ವಿನಾ ದುರ್ಬಲವಾದ ಪಕ್ಷಗಳಿಗಲ್ಲ.

ವಿರೋಧ ಪಕ್ಷಗಳ ವೈಫಲ್ಯಕ್ಕೆ ಇವಿಎಂ ಕಾರಣವಲ್ಲ

ಅಂತಿಮವಾಗಿ ಇವಿಎಂಗಳ ಸಂಭಾವ್ಯ ದೋಷಗಳು ವಿರೋಧ ಪಕ್ಷಗಳ ವಾಸ್ತವ ರಾಜಕೀಯ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳುವ ನೆಪಗಳಾಗಬಾರದು. ಸಮಾಜದಲ್ಲಿ ಬಿಜೆಪಿಯು 1980ರಿಂದಲೂ ಏಕಪಕ್ಷೀಯವಾಗಿ ಬೆಳೆಯುತ್ತಿದೆ. ಇತರ ಎಲ್ಲಾ ಪಕ್ಷಗಳ ಸಾಮರ್ಥ್ಯ ಏಕಪಕ್ಷೀಯವಾಗಿ ಕುಗ್ಗುತ್ತಿದೆ. 1984ರಲ್ಲಿ 1.5 ಕೋಟಿ ಮತದಾರರ ಬೆಂಬಲ ಪಡೆದಿದ್ದ ಬಿಜೆಪಿ ಇವಿಎಂ ಬಳಕೆ 1998ರಲ್ಲಿ ಶುರುವಾಗುವ ಮುನ್ನವೇ 10 ಕೋಟಿ ಮತದಾರರ ಬೆಂಬಲವನ್ನು ಪಡೆದುಕೊಂಡಿತ್ತು. ಅದು 2014ರಲ್ಲಿ 17 ಕೋಟಿಗೆ ಏರಿತು. 2019ರಲ್ಲಿ 23 ಕೋಟಿ.. ಅದಕ್ಕೆ ಕಾರಣ ಬಿಜೆಪಿಗಿರುವ ಕಾರ್ಪೊರೇಟ್ ಧನ ಬಲ, ಮಾಧ್ಯಮ ಬಲ. ಕೋಮು ಧ್ರುವೀಕರಣ ನೀತಿಯಿಂದಾಗಿ ಹೆಚ್ಚುತ್ತಿರುವ ಉನ್ಮತ್ತ ಜನಬಲ. ಅದಕ್ಕೆ ತದ್ವಿರುದ್ಧವಾಗಿ ವಿರೋಧ ಪಕ್ಷಗಳು ಬಿಜೆಪಿ ಮುಂದಿಟ್ಟ ಹಿಂದುತ್ವ ಅಜೆಂಡಾಗಳ ಸಾಫ್ಟ್ ನಕಲಿಗಳಂತೆ ಕೆಲಸ ಮಾಡುತ್ತವೆಯೇ ವಿನಾ ಜನರ ಮಧ್ಯೆ ನಿಂತು ಫ್ಯಾಶಿಸ್ಟ್ ರಾಜಕಾರಣಕ್ಕೆ ಪರ್ಯಾಯವಾದ ಜನರಾಜಕಾರಣವನ್ನು ರೂಪಿಸುತ್ತಿಲ್ಲ. ಈ ವಿರೋಧ ಪಕ್ಷಗಳು ಅದನ್ನು ಮಾಡಬಲ್ಲವು ಎಂದು ನಿರೀಕ್ಷಿಸುವುದೂ ತಪ್ಪೇ.

ಹೀಗಾಗಿ ವಿರೋಧ ಪಕ್ಷಗಳು ತಮ್ಮ ಸೋಲಿಗೆ ಇವಿಎಂ ಅನ್ನು ಮಾತ್ರ ದೂರುವುದು ಆತ್ಮವಂಚನೆ ಮತ್ತು ಆತ್ಮಘಾತುಕವಾದೀತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News