ಸಿಎಎ: ಮುಸ್ಲಿಮರ ಎದೆಗಿರಿಯುವ, ಹಿಂದೂಗಳ ಬೆನ್ನಿಗಿರಿಯುವ ತ್ರಿಶೂಲದ ಅಲಗು

ಮೊನ್ನೆ ಬಿಡುಗಡೆಯಾಗಿರುವ ನಿಯಮಾವಳಿಗಳ ಪ್ರಕಾರ ಪ್ರತಿಯೊಬ್ಬ ಸಂತ್ರಸ್ತರ ಅರ್ಜಿಯನ್ನು ಸಕ್ಷಮ ಅಧಿಕಾರಿ ಸಮಿತಿ ಪರಿಶೀಲಿಸುತ್ತದೆ. ನಿಯಮಗಳಡಿಯಲ್ಲಿ ಕಾಗದ ಪತ್ರವಿಲ್ಲದ ಹಿಂದೂಗಳಿಗೆ ವಿಶೇಷ ಸೌಲಭ್ಯವನ್ನೇನೂ ಒದಗಿಸಲಾಗಲ್ಲ. ಅಧಿಕಾರಿಗಳು ಹಿಂದೂಗಳ ಪರವಾಗಿ ಉದಾರವಾಗಿ ವರ್ತಿಸುತ್ತಾರೆನ್ನುವುದು ನಿಜವೇ ಆದರೂ ಕಾಗದ ಪತ್ರವಿಲ್ಲದ ದಲಿತರು ಮತ್ತು ಆದಿವಾಸಿಗಳ ಬಗ್ಗೆ ಉದಾರವಾಗಿರುವುದಿಲ್ಲ ಎನ್ನುವುದು ಅಷ್ಟೇ ನಿಜ. ಆಗ ಆಸ್ತಿವಂತ, ಪ್ರಬಲ, ಪಾಸ್‌ಪೋರ್ಟ್ ಇತ್ಯಾದಿಗಳನ್ನು ಹೊಂದಿರುವ ಹಿಂದೂಗಳು ಮಾತ್ರ ಈ ದೇಶದ ನಾಗರಿಕರಾಗುತ್ತಾರೆ. ಬಡ ಹಿಂದೂಗಳಲ್ಲ. ಹೀಗಾಗಿ ಈ ಸಿಎಎ-ಎನ್‌ಪಿಆರ್-ಎನ್‌ಆರ್‌ಸಿ ಎಂಬ ತ್ರಿಶೂಲವು ಮುಸ್ಲಿಮರ ರಾಜಕೀಯ ನಾಗರಿಕತ್ವವನ್ನು ರದ್ದು ಮಾಡುವುದರ ಜೊತೆಗೆ ಬಡ ಹಿಂದೂಗಳ ಆರ್ಥಿಕ ನಾಗರಿಕತ್ವವನ್ನು ಕೂಡಾ ರದ್ದು ಪಡಿಸುತ್ತದೆ.

Update: 2024-03-13 04:31 GMT
Editor : Thouheed | Byline : ಶಿವಸುಂದರ್

ಭಾಗ- 1

ನಿರೀಕ್ಷೆಯಂತೆ ಚುನಾವಣೆಗೆ ಸ್ವಲ್ಪ ಮುಂಚೆ ಮೋದಿ ಸರಕಾರ Citizenship Amendment Act- ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಾವಳಿಗಳನ್ನು ಜಾರಿ ಮಾಡಿದೆ. 2019ರಲ್ಲೇ ಸಿಎಎ ಕಾಯ್ದೆ ಜಾರಿಯಾಗಿತ್ತು. ಅದರ ವಿರುದ್ಧ ದೇಶಾದ್ಯಂತ ಅಭೂತಪೂರ್ವ ಹೋರಾಟಗಳು ನಡೆದಿತ್ತು. 2020ರಲ್ಲಿ ಕೋವಿಡ್ ಸಾಂಕ್ರಾಮಿಕ ದಾಳಿ ಮಾಡಿರದಿದ್ದರೆ ಹೋರಾಟವು ತಾರ್ಕಿಕ ಅಂತ್ಯ ಕಾಣುತ್ತಿತ್ತು. ಈ ಕಾರಣಗಳಿಗಾಗಿ ಸಿಎಎ ಕಾನೂನು ಜಾರಿಯಾದರೂ ನಿಯಮಾವಳಿಗಳನ್ನು ಸರಕಾರ ಜಾರಿ ಮಾಡಿರಲಿಲ್ಲ.

ಪೌರತ್ವ ತಿದ್ದುಪಡಿ ಕಾಯ್ದೆಯು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಮತೀಯ ಕಿರುಕುಳಕ್ಕೆ ಗುರಿಯಾಗಿ ಆಶ್ರಯ ಹುಡುಕಿಕೊಂಡು ಭಾರತಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಮತಸ್ಥ ನಿರಾಶ್ರಿತರಿಗೆ ಮಾತ್ರ ಭಾರತದ ನಾಗರಿಕತ್ವವನ್ನು ನೀಡುವ ಕಾಯ್ದೆಯಾಗಿದೆ.

ಅರ್ಥಾತ್ ಆ ದೇಶಗಳಲ್ಲಿನ ಮುಸ್ಲಿಮ್ ಮತಕ್ಕೆ ಸೇರಿದ ಇತರ ಅಲ್ಪಸಂಖ್ಯಾತ ಮುಸ್ಲಿಮ್ ಪಂಗಡಗಳು ಬಹುಸಂಖ್ಯಾತ ಮುಸ್ಲಿಮ್ ಮತೀಯರ ಮತ್ತು ಸರಕಾರದ ಸಾಂಸ್ಥಿಕ ಕಿರುಕುಳಕ್ಕೆ ಗುರಿಯಾಗಿದ್ದರೂ ಮೋದಿ ಸರಕಾರ ಅವರಿಗೆ ಆಶ್ರಯವನ್ನು ಮತ್ತು ನಾಗರಿಕತ್ವವನ್ನು ನಿರಾಕರಿಸುತ್ತದೆ. ಅದಕ್ಕೆ ಏಕೈಕ ಕಾರಣ ಅವರು ಮುಸ್ಲಿಮರಾಗಿರುವುದು.

ಅಹ್ಮದೀಯರು, ಹಝಾರಗಳು ಹಾಗೂ

ಶಿಯಾ ಸಂತ್ರಸ್ತರಿಗೇಕೆ ಸಿಎಎ ಇಲ್ಲ?

ಆದರೆ ಅದೇ ಮೂರು ದೇಶಗಳಲ್ಲಿ ಅಹ್ಮದೀಯರು, ಹಝಾರಗಳು ಹಾಗೂ ಶಿಯಾ ಪಂಗಡಗಳಿಗೆ ಸೇರಿದ ಅಲ್ಪಸಂಖ್ಯಾತ ಮುಸ್ಲಿಮ್ ಪಂಗಡಗಳು ಅಲ್ಲಿನ ಸರಕಾರ ಹಾಗೂ ಬಹುಸಂಖ್ಯಾತ ಮುಸ್ಲಿಮ್ ಸಮಾಜದಿಂದ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆಂದು ಮೋದಿ ಸರಕಾರವೇ 2018ರ ಸೆಪ್ಟಂಬರ್‌ನಲ್ಲಿ ವಿಶ್ವಸಂಸ್ಥೆಗೆ ದೂರಿತ್ತಿತ್ತು.

ಉದಾಹರಣೆಗೆ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಮುಸ್ಲಿಮರ ಪರಿಸ್ಥಿತಿ ಇನ್ನೂ ಭೀಕರ. ಅಫ್ಘಾನಿಸ್ತಾನದಲ್ಲಿ ಹಲವು ಬಗೆಯ ಜನಾಂಗಗಳು ಹಾಗೂ ಹಲವು ಬಗೆಯ ಮುಸ್ಲಿಮರು ವಾಸ ಮಾಡುತ್ತಾರೆ. ಅವರಲ್ಲಿ ಸುನ್ನಿ ಸಂಪ್ರದಾಯದ ಮುಸ್ಲಿಮರು ಬಹುಸಂಖ್ಯಾತರು ಹಾಗೂ ಶೇ. 10-12ರಷ್ಟು ಅಲ್ಪಸಂಖ್ಯಾತ ಶಿಯಾ ಸಂಪ್ರದಾಯದ ಹಝಾರ ಮುಸ್ಲಿಮರಿದ್ದಾರೆ. ಇದಲ್ಲದೆ ತಾಜಾಕ್, ಉಜಬೆಕ್, ಐಮ್ಯಾಕ್, ಪಾಮಿರಿ, ಕಿರ್ಗಿಜ್, ಟರ್ಕ್ಮೆನ್, ನೂರಿಸ್ತಾನೀ, ಬಲೂಚ್ ಇನ್ನಿತ್ಯಾದಿ ಹಲವು ಜನಾಂಗಗಳಿಗೆ ಸೇರಿದ ಅಲ್ಪಸಂಖ್ಯಾತ ಮುಸ್ಲಿಮರಿದ್ದಾರೆ.

ತಾಲಿಬಾನಿಗಳು ಇಸ್ಲಾಮಿನ ಸುನ್ನಿ ಸಂಪ್ರದಾಯದ ಪಸ್ತೂನ್ ಜನಾಂಗಕ್ಕೆ ಸೇರಿದವರು. ಅವರಿಗೆ ಅಲ್ಪಸಂಖ್ಯಾತ ಶಿಯಾ ಸಂಪ್ರದಾಯದ ಹಝಾರ ಮುಸ್ಲಿಮರ ಮೇಲೆ ಐತಿಹಾಸಿಕ-ಪೌರಾಣಿಕ ಧರ್ಮ ದ್ವೇಷವಿದೆ.

ಈ ಹಿಂದೆಯೂ 1996-2001ರ ನಡುವೆ ತಾಲಿಬಾನಿಗಳು ಅಧಿಕಾರದಲ್ಲಿದ್ದಾಗ ಅಫ್ಘಾನಿಸ್ತಾನದ ಮಝಾರ್ ಪ್ರಾಂತದಲ್ಲಿ ವಾಸಿಸುವ ಹಝಾರ ಮುಸ್ಲಿಮರ ಮೇಲೆ ಹತ್ಯಾಕಾಂಡವನ್ನೇ ನಡೆಸಿದ್ದರು. 1998ರಲ್ಲಿ ತಾಲಿಬಾನಿನ ಕಮಾಂಡರ್ ಮೌಲ್ವಿ ಮುಹಮ್ಮದ್ ಹನೀಫ್ ‘‘ಹಝಾರಗಳು ಮುಸ್ಲಿಮರಲ್ಲ. ಅವರನ್ನು ಕೊಲ್ಲಬಹುದು’’ ಎಂದು ಆದೇಶ ನೀಡಿದ್ದ.

ಹೀಗಾಗಿಯೇ 1998ರಲ್ಲಿ ಮಝಾರೆ-ಷರೀಫ್‌ನಲ್ಲಿ ಸಾವಿರಾರು ಹಝಾರ ಮುಸ್ಲಿಮರ ಮಾರಣಹೋಮವೇ ನಡೆದಿತ್ತು.

2001ರ ನಂತರದಲ್ಲಿ ಅಫ್ಘಾನಿಸ್ತಾನ ಅಮೆರಿಕದ ನಿಯಂತ್ರಣದಲ್ಲಿದ್ದರೂ, ಮಜರ್ ಪ್ರಾಂತದಲ್ಲಿ ISIS ಮತ್ತು ಅಲ್‌ಖಾಯಿದಾಗಳು ಹಝಾರ ನಾಯಕರ ಕೊಲೆಗಳನ್ನು ಮುಂದುವರಿಸಿದ್ದವು.

ಹೀಗಾಗಿ ಇಂದು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ದಮನದ ಕಾರಣಕ್ಕಾಗಿ ಯಾರಿಗಾದರೂ ಆಶ್ರಯದ ಅಗತ್ಯವಿದ್ದರೆ ಅದು ಅಫ್ಘಾನಿಸ್ತಾನದ ಹಝಾರ ಶಿಯಾ ಮುಸ್ಲಿಮರಿಗೆ.

ಬಾಂಗ್ಲಾ ಹಿಂದೂಗಳು ಧಾರ್ಮಿಕ ಸಂತ್ರಸ್ತರಲ್ಲ- ವಾಜಪೇಯಿ!

ಅಷ್ಟು ಮಾತ್ರವಲ್ಲ. ಸಿಎಎ ಮೂಲಕ ಇಸ್ಲಾಮಿಕ್ ರಾಷ್ಟ್ರಗಳನ್ನು ಕ್ರೂರಿ ರಾಷ್ಟ್ರಗಳೆಂದು ಬಿಂಬಿಸುವ ಮತ್ತೊಂದು ಉದ್ದೇಶ ಬಿಜೆಪಿ ಸರಕಾರಕ್ಕಿದೆ. ಆದರೆ ವಾಸ್ತವವೆಂದರೆ ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಪ್ರಕರಣಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿದೆಯೆಂದು ಮೋದಿ ಸರಕಾರದ ವಿದೇಶಾಂಗ ಮಂತ್ರಿಯಾಗಿದ್ದ ಸುಷ್ಮಾ ಸ್ವರಾಜ್ ಅವರೇ 2016 ರಲ್ಲಿ ರಾಜ್ಯ ಸಭೆಗೆ ತಿಳಿಸಿದ್ದರು.

ಅಷ್ಟು ಮಾತ್ರವಲ್ಲ. ಬಾಂಗ್ಲಾದೇಶದ ಹಿಂದೂ ವಲಸಿಗರಿಗೆ ಪೌರತ್ವ ಕೊಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಡುತ್ತಾ ಈ ಹಿಂದೆಯೇ ವಾಜಪೇಯಿ ಸರಕಾರವೇ ಮತ್ತೊಂದು ಸತ್ಯವನ್ನು ಹೇಳಿತ್ತು. ಈ ವಿಷಯದ ಬಗ್ಗೆ ನೇಮಕವಾಗಿದ್ದ ಆಗಿನ ವಿರೋಧ ಪಕ್ಷದ ನಾಯಕ ಪ್ರಣಬ್ ಮುಖರ್ಜಿ ಸಮಿತಿಯ ಮುಂದೆ ಸರಕಾರದ ಅಭಿಪ್ರಾಯವನ್ನು ದಾಖಲು ಮಾಡುತ್ತಾ ವಾಜಪೇಯಿ ಸರಕಾರವು:

‘‘ಇತ್ತೀಚಿನ ದಿನಗಳಲ್ಲಿ ನೆರೆಹೊರೆ ದೇಶಗಳಿಂದ ಭಾರತಕ್ಕೆ ವಲಸೆ ಬರುತ್ತಿರುವವರು ಆರ್ಥಿಕ ಕಾರಣಗಳಿಗಾಗಿ ಬರುತ್ತಿದ್ದಾರೆಯೇ ವಿನಾ ಧಾರ್ಮಿಕ ದೌರ್ಜನ್ಯದ ನಿರಾಶ್ರಿತರಾಗಲ್ಲ. ಆದ್ದರಿಂದ ಅಂತಹವರಿಗೆ ಪೌರತ್ವ ನೀಡುವುದಕ್ಕೆ ಯಾವ ಸಮರ್ಥನೆಗಳೂ ಇಲ್ಲ’’ ಎಂದು ಹೇಳಿತ್ತು.

ಪ್ರಣಬ್ ವರದಿಗೆ ಸರಕಾರ ಕೊಟ್ಟ ಹೇಳಿಕೆಯ ಉಲ್ಲೇಖ:

6.1.2 The Ministry further stated that it is pertinent to mention that in the recent years people from neighbouring countries are coming to India more for economic reasons rather than as refugees. Since people are coming as illegal migrants for economic reasons, there is no justification to grant them citizenship in India.

ಇದು ಎರಡು ನಾಲಿಗೆಯ ಬಿಜೆಪಿ ಸರಕಾರದ ವಾದಗಳು. ಬಿಜೆಪಿಯು ಮುಸ್ಲಿಮರಿಗಿಂತ ಹಿಂದೂಗಳಿಗೆ ಶತ್ರುಗಳು ಎಂಬುದಕ್ಕೆ ಇದಕ್ಕಿಂತ ದೊಡ್ಡ ಪುರಾವೆಯ ಅಗತ್ಯವಿದೆಯೇ?

(ಪ್ರಣಬ್ ಮುಖರ್ಜಿ ಸಮಿತಿಯ ಪೂರ್ಣ ಪಾಠ ಈ ವೆಬ್ ವಿಳಾಸದಲ್ಲಿ ದೊರೆಯುತ್ತದೆ: http://164.100.47.5/rs/book2/reports/home_aff/107threport.htm)

ಹೀಗೆ ಧಾರ್ಮಿಕ ಸಂತ್ರಸ್ತರಲ್ಲದ ವಿದೇಶಿ ಹಿಂದೂಗಳಿಗೆ ನಾಗರಿಕತ್ವ ಕೊಡಲು ಮುಂದಾಗಿರುವ ಮೋದಿ ಸರಕಾರ ನಿಜವಾದ ಧಾರ್ಮಿಕ ಸಂತ್ರಸ್ತರಾಗಿರುವ ಆ ಮೂರು ದೇಶಗಳ ಮುಸ್ಲಿಮರನ್ನು ಮುಸ್ಲಿಮರು ಎನ್ನುವ ಏಕೈಕ ಕಾರಣಕ್ಕೆ ಸಿಎಎಯಿಂದ ಹೊರಗಿಟ್ಟಿದೆ. ಹೀಗಾಗಿ ಸಿಎಎಯ ಅಸಲಿ ಉದ್ದೇಶ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾದವರಿಗೆ ಆಶ್ರಯ ಕೊಡುವುದಕ್ಕಿಂತ ಹೆಚ್ಚಾಗಿ ಮುಸ್ಲಿಮರನ್ನು ಸಾಂಸ್ಥಿಕವಾಗಿ ಹೊರಗುಳಿಸಿ ಭಾರತವು ಹಿಂದೂಗಳಿಗೆ ಮಾತ್ರ ಸಹಜ ತವರು ಮನೆ ಎಂಬ ಧೋರಣೆಯನ್ನು ಪ್ರತಿಪಾದಿಸುವುದೇ ಆಗಿದೆ.

ಆದರೆ ಭಾರತದ ಸಂವಿಧಾನದ ಪ್ರಕಾರ ಭಾರತ ಸರಕಾರ ನಾಗರಿಕತ್ವವನ್ನು ನೀಡುವಾಗ ಧರ್ಮಾಧಾರಿತ ಪಕ್ಷಪಾತ ಮಾಡುವುದು ಅಪರಾಧ. ಆದರೂ ಮುಸ್ಲಿಮ ಸಂತ್ರಸ್ತರ ಬಗ್ಗೆ ಪಕ್ಷಪಾತ ಮಾಡುವ ಈ ಕಾಯ್ದೆಯನ್ನು ಭಾರತದ ಸಂಸತ್ತು ಪಾಸು ಮಾಡಿದೆ. ಸಂವಿಧಾನದಲ್ಲಿ ಅಡಕವಾಗಿರುವ ಧರ್ಮ ನಿರಪೇಕ್ಷತೆಯ ತತ್ವವನ್ನು ಸಂಪೂರ್ಣವಾಗಿ ನಿರಾಕರಿಸುವ ದೊಡ್ಡ ಸಂಘಿ ಹುನ್ನಾರ ಇದರ ಹಿಂದಿದೆ.

ಸಿಎಎ-ಎನ್‌ಪಿಆರ್-ಎನ್‌ಆರ್‌ಸಿ

ಹಿಂದೂ ರಾಷ್ಟ್ರದ ತ್ರಿಶೂಲದ ಮೂರು ಅಲಗುಗಳು

ಮೋದಿ ಸರಕಾರ ಈಗ ಜಾರಿಗೆ ತಂದಿರುವ ಸಿಎಎ ನೀತಿ ಮತ್ತು ನಿಯಮಾವಳಿಗಳು, ಅದು 2025ರಲ್ಲಿ ಸೆನ್ಸಸ್ ಜೊತೆಗೆ ತರಲಿರುವ ಎನ್‌ಪಿಆರ್-ಎನ್‌ಆರ್‌ಸಿ- ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಮತ್ತು ರಾಷ್ಟ್ರೀಯ ನಾಗರಿಕ ರಿಜಿಸ್ಟರ್‌ಗಳೆಂಬ ತ್ರಿಶೂಲದ ಭಾಗ. ವಾಸ್ತವವಾಗಿ ಇದನ್ನು ಅತ್ಯಂತ ಸ್ಪಷ್ಟವಾಗಿಯೇ ಗೃಹಮಂತ್ರಿ ಅಮಿತ್ ಶಾ ‘‘ಕ್ರೊನಾಲಜಿ ಸಮಜ್ಲೀಜಿಯೇ’’ ಎಂಬ ಕುಖ್ಯಾತ ಭಾಷಣದಲ್ಲಿ ಸ್ಪಷ್ಟಪಡಿಸಿದ್ದರು.

ಈ ದೇಶದಲ್ಲಿ ಹುಟ್ಟಿದವರೆಲ್ಲ ಈ ದೇಶದ ನಾಗರಿಕರು ಮತ್ತು ಈ ದೇಶದ ನಾಗರಿಕರೆಲ್ಲರಿಗೂ ಈ ದೇಶದ ಆರ್ಥಿಕ-ರಾಜಕೀಯ-ಸಾಮಾಜಿಕ ಬದುಕಿನಲ್ಲಿ ಸರಿ ಸಮಾನ ಪಾಲಿದೆ ಎಂಬುದು ನಮ್ಮ ಸಂವಿಧಾನದ ಮೂಲ ಆಶಯ ಹಾಗೂ ಸಂಸತ್ತು ಕೂಡಾ ಬದಲಿಸಲಾಗದ ಸಂವಿಧಾನದ ಮೂಲರಚನೆ. ಆದರೆ ಆ ಮೂಲಭೂತ ಆಶಯವನ್ನೇ ಮೋದಿ ಸರಕಾರ ಸಿಎಎ-ಎನ್‌ಪಿಆರ್-ಎನ್‌ಆರ್‌ಸಿ ಕಾಯ್ದೆಗಳ ಮೂಲಕ ಉಲ್ಲಂಘಿಸಲು ಮುಂದಾಗಿದೆ.

2003-04ರಲ್ಲಿ ವಾಜಪೇಯಿ ಸರಕಾರ ಎನ್‌ಪಿಆರ್-ಎನ್‌ಆರ್‌ಸಿ ಕಾನೂನನ್ನು ಜಾರಿಗೆ ತಂದಿತು. ಅದರ ಪ್ರಕಾರ ಸರಕಾರವು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ತಾನು ಈ ದೇಶದ ನಾಗರಿಕ ಎಂದು ಸಾಬೀತು ಪಡಿಸಿಕೊಳ್ಳಲು ಸರಕಾರಕ್ಕೆ ತನ್ನ ಮತ್ತು ತನ್ನ ಪೋಷಕರ ಜನನಪ್ರಮಾಣ ಹಾಗೂ ವಾಸ ಪ್ರಮಾಣವನ್ನು ಕೊಡುವುದನ್ನು ಕಡ್ಡಾಯಗೊಳಿಸಿತು.

ದೇಶದಲ್ಲಿ ವಾಸಿಸುತ್ತಿರುವ ಎಲ್ಲಾ ಜನರ ಪಟ್ಟಿಯನ್ನು ಸೆನ್ಸಸ್ ಜೊತೆಗೆ ತಯಾರಿಸುವ ಎನ್‌ಪಿಆರ್ ಸಿದ್ಧಪಡಿಸುತ್ತದೆ. ಆ ನಂತರದಲ್ಲಿ ಸರಕಾರ ಕೇಳುವ ಕಾಗದ ಪತ್ರಗಳನ್ನು ಒದಗಿಸಿದವರನ್ನು ಮಾತ್ರ ನಾಗರಿಕರೆಂದು ಪರಿಗಣಿಸಿ ಎನ್‌ಆರ್‌ಸಿಯನ್ನು ಸಿದ್ಧಪಡಿಸಲಾಗುವುದು.

ಆದರೆ ಸರಕಾರವನ್ನು ಮೆಚ್ಚಿಸುವ ಕಾಗದಪತ್ರಗಳನ್ನು ಈ ದೇಶದ ಮುಸ್ಲಿಮರು ಮಾತ್ರವಲ್ಲ ಬಡ ಹಿಂದೂಗಳು ಕೂಡ ಕೊಡಲಾಗುವುದಿಲ್ಲ.

ಏಕೆಂದರೆ ಕೇವಲ ರೇಷನ್ ಕಾರ್ಡು, ವೋಟರ್ ಕಾರ್ಡು, ಆಧಾರ್ ಕಾರ್ಡುಗಳು ನಾಗರಿಕತ್ವದ ಪುರಾವೆಗಳಲ್ಲ ಎಂದು 2019ರಲ್ಲೇ ಸರಕಾರ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ. ಸರಕಾರದ ಪ್ರಕಾರ ಪಾಸ್‌ಪೋರ್ಟ್, ಆಸ್ಪತ್ರೆಯ ಜನನ ಪ್ರಮಾಣ ಪತ್ರ ಅಥವಾ ಆಸ್ತಿ ಕ್ರಯ ಅಥವಾ ವಿಕ್ರಯ ಪತ್ರಗಳು ಅಥವಾ ಕೋರ್ಟಿನಲ್ಲಿರುವ ಕ್ರಿಮಿನಲ್ ಅಥವಾ ಸಿವಿಲ್ ಪ್ರಕರಣಗಳು ಮಾತ್ರ ನಾಗರಿಕತ್ವಗಳನ್ನು ಸಾಬೀತು ಪಡಿಸುವ ಮೂಲಭೂತ ಕಾಗದ ಪತ್ರಗಳು.

ಅರ್ಥಾತ್ ಈ ದೇಶದ ಆಸ್ತಿವಂತರು ಮಾತ್ರ ಈ ದೇಶದ ನಾಗರಿಕರು ಎಂದು ಮೋದಿ ಸರಕಾರ ಕಾನೂನು ಮಾಡುತ್ತಿದೆ. ಹೀಗಾಗಿ ಇದು ಕೇವಲ ಮುಸ್ಲಿಮರಿಗೆ ಮಾತ್ರ ಸಂಬಂಧಪಟ್ಟ ವಿಷಯವಲ್ಲ. ಈ ದೇಶದ ಎಲ್ಲಾ ಧರ್ಮೀಯ ಬಡವರಿಗೂ ಎನ್‌ಪಿಆರ್-ಎನ್‌ಆರ್‌ಸಿ ಆರ್ಥಿಕ ನಾಗರಿಕತ್ವವನ್ನು ನಿರಾಕರಿಸುತ್ತದೆ.

ಹೀಗಾಗಿಯೇ ಅಸ್ಸಾಮಿನಲ್ಲಿ ಎನ್‌ಆರ್‌ಸಿ ಜಾರಿಯಾದಾಗ 19 ಲಕ್ಷ ಜನರು ಹೊರಗುಳಿದರು. ಅದರಲ್ಲಿ 11 ಲಕ್ಷ ಜನ ಹಿಂದೂಗಳು. ಆಗ ಮೋದಿ ಸರಕಾರ ಮತ್ತೊಂದು ಅತ್ಯಂತ ಹೀನಾಯ ಕೋಮುವಾದಿ ಕುತಂತ್ರವನ್ನು ಬಳಸಿತು. ಅದರ ಫಲಶೃತಿಯೇ ಈ ಸಿಎಎ.

ಸಿಎಎ-ಎನ್‌ಆರ್‌ಸಿ ಭಾರತೀಯ ಮುಸ್ಲಿಮರಿಗೆ

ಎರಡನೇ ದರ್ಜೆ ನಾಗರಿಕತ್ವ?

ಎನ್‌ಪಿಆರ್-ಎನ್‌ಆರ್‌ಸಿ ನೀತಿಗಳ ಪ್ರಕಾರ ಕಾಗದ ಪತ್ರವಿಲ್ಲದಿದ್ದರೆ ನಾಗರಿಕತ್ವವಿಲ್ಲ. ಆದರೆ ಅಮಿತ್ ಶಾ ಅವರ ಪ್ರಖ್ಯಾತ ‘‘ಕ್ರೊನಾಲಜಿ ಸಮಜ್ಲೀಜಿಯೇ’’ ಭಾಷಣದ ಪ್ರಕಾರ ಕಾಗದ ಪತ್ರವಿರದ ಹಿಂದೂಗಳಿಗೆ ಸಿಎಎ ಕಾಯ್ದೆ ಮೂಲಕ ನಾಗರಿಕತ್ವ ನೀಡಲಾಗುವುದು. ಏಕೆಂದರೆ ಸಿಎಎ ಕಾಯ್ದೆ ಹಿಂದೂ ವಲಸಿಗರನ್ನು ನಿರಾಶ್ರಿತರೆಂದೂ, ಮುಸ್ಲಿಮ್ ವಲಸಿಗರನ್ನು ‘ಅಕ್ರಮ ವಲಸಿಗ’ರೆಂದು ಪರಿಗಣಿಸುತ್ತದೆ. ಮೋದಿ ಸರಕಾರ ಕೊಡುತ್ತಿರುವ ಭರವಸೆಯ ಪ್ರಕಾರ ಎನ್‌ಆರ್‌ಸಿಯಲ್ಲಿ ಕಾಗದ ಪತ್ರವಿಲ್ಲದೆ ಹಿಂದೂಗಳು ಹೊರಗುಳಿಯಲ್ಪಟ್ಟರೂ ಅವರಿಗೆ ಸಿಎಎ ಮೂಲಕ ನಾಗರಿಕತ್ವ ಕೊಡಲಾಗುವುದು.

ಆಗ ಈ ದೇಶದ ವಾಸಿಗಳೇ ಆಗಿದ್ದರೂ ಕಾಗದ ಪತ್ರ ನೀಡಲಾಗದ ಮುಸ್ಲಿಮರು ಮಾತ್ರ ತನ್ನಿಂತಾನೆ ‘‘ಅಕ್ರಮ ವಲಸಿಗ’’ರಾಗುತ್ತಾರೆ.

ಆದರೆ ಈ ದೇಶದಲ್ಲಿ ಅಂದಾಜು 20 ಕೋಟಿ ಮುಸ್ಲಿಮರಿದ್ದಾರೆ. ಅವರಲ್ಲಿ ಶೇ. 10ರಷ್ಟು ಕಾಗದ ಪತ್ರ ಒದಗಿಸದಿದ್ದರೂ 2 ಕೋಟಿ ಜನರಾಗುತ್ತಾರೆ. ಅಷ್ಟು ಜನರನ್ನು ಜೈಲಿನಲ್ಲೂ ಇಡಲಾಗುವುದಿಲ್ಲ. ಹಾಗೆಯೇ ಬೇರೆ ಯಾವುದೇ ದೇಶಗಳಿಗೆ ಕಳಿಸಲೂ ಆಗುವುದಿಲ್ಲ. ಏಕೆಂದರೆ ಅವರು ಬೇರೆ ದೇಶದವರೆಂದೂ ಭಾರತ ಸಾಬೀತು ಮಾಡಲೂ ಆಗುವುದಿಲ್ಲ. ಆಗ ಉಳಿಯುವುದೊಂದೇ-ಅವರ ನಾಗರಿಕತ್ವವು ರದ್ದಾಗಿ ಭಾರತದಲ್ಲೇ ಅವರು ಎರಡನೇ ದರ್ಜೆ ನಾಗರಿಕರಾಗಿ-ಯಾವುದೇ ಹಕ್ಕು ಅಥವಾ ಅಧಿಕಾರಗಳಿಲ್ಲದೆ- ಪ್ರಾಣಿಗಳಂತೆ ಬದುಕುವಂತೆ ಮಾಡುವುದು.

ಇದೇ ಸಾವರ್ಕರ್ ಹಾಗೂ ಸಂಘಿ ಫ್ಯಾಶಿಸ್ಟರ ಬಹುದಿನಗಳ ಕನಸೂ ಆಗಿತ್ತು. ಅದು ಈ ಕಾಯ್ದೆಗಳ ಮೂಲಕ ಈಡೇರುತ್ತಿದೆ.

ಸಿಎಎ-ಹಿಂದೂಗಳಿಗೆ ಹುಸಿ ಆಮಿಷ

ಆದರೆ ಇದು ಬಡ ಹಿಂದೂಗಳನ್ನೂ ಇರಿಯುವ ತ್ರಿಶೂಲವಾಗಿದೆ. ಏಕೆಂದರೆ ಸಿಎಎ ಮೂಲಕ ಕಾಗದ ಪತ್ರವಿಲ್ಲದ ಹಿಂದೂಗಳಿಗೆ ನಾಗರಿಕತ್ವ ನೀಡುವ ಭರವಸೆಯನ್ನು ಮೋದಿ ಸರಕಾರ ನೀಡಿದ್ದರೂ ಸಿಎಎ ಸೌಲಭ್ಯ ಸಿಗುವುದು ಬಾಂಗ್ಲಾ ದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ಸಂತ್ರಸ್ತ ಹಿಂದೂಗಳಿಗೆ ಹೊರತು ಕಾಗದ ಪತ್ರವಿಲ್ಲದ ಭಾರತೀಯ ಹಿಂದೂಗಳಿಗಲ್ಲ.

ಮೊನ್ನೆ ಬಿಡುಗಡೆಯಾಗಿರುವ ನಿಯಮಾವಳಿಗಳ ಪ್ರಕಾರ ಪ್ರತಿಯೊಬ್ಬ ಸಂತ್ರಸ್ತರ ಅರ್ಜಿಯನ್ನು ಸಕ್ಷಮ ಅಧಿಕಾರಿ ಸಮಿತಿ ಪರಿಶೀಲಿಸುತ್ತದೆ. ನಿಯಮಗಳಡಿಯಲ್ಲಿ ಕಾಗದ ಪತ್ರವಿಲ್ಲದ ಹಿಂದೂಗಳಿಗೆ ವಿಶೇಷ ಸೌಲಭ್ಯವನ್ನೇನೂ ಒದಗಿಸಲಾಗಲ್ಲ. ಅಧಿಕಾರಿಗಳು ಹಿಂದೂಗಳ ಪರವಾಗಿ ಉದಾರವಾಗಿ ವರ್ತಿಸುತ್ತಾರೆನ್ನುವುದು ನಿಜವೇ ಆದರೂ ಕಾಗದ ಪತ್ರವಿಲ್ಲದ ದಲಿತರು ಮತ್ತು ಆದಿವಾಸಿಗಳ ಬಗ್ಗೆ ಉದಾರವಾಗಿರುವುದಿಲ್ಲ ಎನ್ನುವುದು ಅಷ್ಟೇ ನಿಜ. ಆಗ ಆಸ್ತಿವಂತ, ಪ್ರಬಲ, ಪಾಸ್‌ಪೋರ್ಟ್ ಇತ್ಯಾದಿಗಳನ್ನು ಹೊಂದಿರುವ ಹಿಂದೂಗಳು ಮಾತ್ರ ಈ ದೇಶದ ನಾಗರಿಕರಾಗುತ್ತಾರೆ. ಬಡ ಹಿಂದೂಗಳಲ್ಲ.

ಹೀಗಾಗಿ ಈ ಸಿಎಎ-ಎನ್‌ಪಿಆರ್-ಎನ್‌ಆರ್‌ಸಿ ಎಂಬ ತ್ರಿಶೂಲವು ಮುಸ್ಲಿಮರ ರಾಜಕೀಯ ನಾಗರಿಕತ್ವವನ್ನು ರದ್ದು ಮಾಡುವುದರ ಜೊತೆಗೆ ಬಡ ಹಿಂದೂಗಳ ಆರ್ಥಿಕ ನಾಗರಿಕತ್ವವನ್ನು ಕೂಡಾ ರದ್ದು ಪಡಿಸುತ್ತದೆ.

ಆದ್ದರಿಂದ ಹಿಂದೂ-ಮುಸ್ಲಿಮರೆನ್ನದೆ ಮೋದಿ ಸರಕಾರದ ಈ ಫ್ಯಾಶಿಸ್ಟ್ ಸಿಎಎ-ಎನ್‌ಪಿಆರ್-ಎನ್‌ಆರ್‌ಸಿ-ನೀತಿ-ನಿಯಮಾವಳಿಗಳ ವಿರುದ್ಧ ಒಗ್ಗೂಡಬೇಕಾಗಿದೆ. ಭಾರತವನ್ನು ಉಳಿಸಿಕೊಳ್ಳಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News