ಭಾರತದ ಬಂಡವಾಳಶಾಹಿಗಳ ಮುಖಗಳು ಮತ್ತು ಮುಖವಾಡಗಳು

ರತನ್ ಟಾಟಾರವರ ಸಾವಿನ ನಂತರದ ವಿದ್ಯಮಾನಗಳು ಬಯಲು ಮಾಡಿರುವುದು ಈ ದೇಶದ ವಿವೇಕದ ಮೇಲೆ ಬಂಡವಾಳಶಾಹಿ ಯಾಜಮಾನ್ಯವನ್ನು. ಏಕೆಂದರೆ ಬಂಡವಾಳಶಾಹಿ ವ್ಯವಸ್ಥೆ ಆಳುವುದು ಕೇವಲ ಪೊಲೀಸರ ಬೂಟುಗಳಿಂದಲ್ಲ. ಬದಲಿಗೆ ಶೋಷಿತರಲ್ಲಿ ಕೀಳರಿಮೆ ಮತ್ತು ಶೋಷಣೆಯ ಬಗ್ಗೆ ವಾಲಂಟರಿ ಸಮ್ಮತಿಯನ್ನು ಉತ್ಪಾದಿಸುವ ಹೆಜೊಮೊನಿ-ಸೈದ್ಧಾಂತಿಕ ಯಾಜಮಾನ್ಯದ ಮೂಲಕ. ಆದ್ದರಿಂದ ಬಂಡವಾಳಶಾಹಿಯನ್ನು ಸೋಲಿಸಬೇಕೆಂದರೆ ಮೊದಲಿಗೆ ಬಂಡವಾಳಶಾಹಿಯ ಬೌದ್ಧಿಕ ಯಾಜಮಾನ್ಯದಿಂದಲೂ ಬಿಡುಗಡೆ ಹೊಂದಬೇಕಿರುತ್ತದೆ.

Update: 2024-10-16 04:45 GMT
Editor : Thouheed | Byline : ಶಿವಸುಂದರ್

ಭಾಗ- 1

ಭಾರತದ ಕಾರ್ಪೊರೇಟ್ ಬಂಡವಾಳಶಾಹಿ ಕುಳಗಳಲ್ಲಿ ಪ್ರಮುಖರಾಗಿದ್ದ ರತನ್ ಟಾಟಾರವರು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1992ರಿಂದ ಟಾಟಾ ಉದ್ಯಮಗಳ ನಾಯಕತ್ವ ವಹಿಸಿದ್ದ ರತನ್ ಟಾಟಾ ಅವರಿಗೆ ಭಾರತದ ಕಾರ್ಪೊರೇಟ್ ಬಂಡವಾಳಶಾಹಿ ಇತಿಹಾಸದಲ್ಲಿ ಮಾತ್ರವಲ್ಲ ಭಾರತದ ಜನಸಾಮಾನ್ಯರ ಇತಿಹಾಸದಲ್ಲೂ ಒಂದು ಪ್ರಮುಖ ಪಾತ್ರವಿದೆ. ಏಕೆಂದರೆ 1991ರಿಂದ ಭಾರತದ ಜನಸಾಮಾನ್ಯರ ಇತಿಹಾಸವನ್ನು ಮತ್ತು ಭವಿಷ್ಯವನ್ನು ಸಂಪೂರ್ಣವಾಗಿ ಬರೆಯುತ್ತಿರುವುದು ಭಾರತದ ಕಾರ್ಪೊರೇಟ್ ಬಂಡವಾಳಶಾಹಿಗಳೇ. ಏಕೆಂದರೆ ಭಾರತದ ಪ್ರಭುತ್ವ ಆ ಅಧಿಕಾರವನ್ನು ಸಾಂವಿಧಾನಿಕವಾಗಿಯೇ ಅವರಿಗೆ ವಹಿಸಿಬಿಟ್ಟಿದೆ.

ಆದರೆ 1991ರ ನಂತರ ಭಾರತದ ರೈತರ, ಕಾರ್ಮಿಕರ, ಆದಿವಾಸಿಗಳ, ಸಣ್ಣಪುಟ್ಟ ವ್ಯಾಪಾರಿ-ಉದ್ಯಮಿಗಳ, ದಲಿತರ, ಶೋಷಿತ ಮಹಿಳೆಯರ, ವಿದ್ಯಾರ್ಥಿಗಳ ಮತ್ತು ಯುವಜನರ ಬದುಕು ಮತ್ತು ಭವಿಷ್ಯಗಳು ಹೆಚ್ಚೆಚ್ಚು ಅತಂತ್ರವಾಗುತ್ತಾ ಹೋಗಿದೆ. ಕಳೆದ ಹತ್ತು ವರ್ಷಗಳಲ್ಲಿ ಅದು ಇನ್ನಷ್ಟು ದಾರುಣವಾಗಿದೆ. ಇದರ ಪ್ರಧಾನ ಕಾರಣಕರ್ತರು ದೇಶದ ರಾಜಕೀಯ ನಾಯಕತ್ವ ವಹಿಸಿರುವ ಸರಕಾರಗಳು ಮತ್ತು ಸರಕಾರಗಳ ನೀತಿಗಳನ್ನು ಕಾರ್ಪೊರೇಟ್ ಲಾಭಕ್ಕೆ ತಕ್ಕಂತೆ ರೂಪಿಸುತಾ, ಪ್ರಭಾವಿಸುತ್ತಾ ಆರ್ಥಿಕ ನಾಯಕತ್ವ ವಹಿಸಿರುವ ರತನ್ ಟಾಟಾರಂತಹ ಬೃಹತ್ ಕಾರ್ಪೊರೇಟ್ ಉದ್ಯಮಿಗಳು. ಆದರೆ ಜನರ ಬವಣೆಗೆ ಕಾರಣರಾದ ರಾಜಕೀಯ ನಾಯಕರು ಎಷ್ಟೇ ಜನಪ್ರಿಯರಾದರೂ ಅವರ ರಾಜಕೀಯ ಹಾಗೂ ತೀರ್ಮಾನಗಳ ಬಗ್ಗೆ ಒಂದಿಷ್ಟಾದರೂ ಟೀಕೆ ಮತ್ತು ವಿಮರ್ಶೆಗಳು ಕೇಳಿ ಬರುತ್ತವೆ. ಆದರೆ ಜನರ ಬವಣೆಗೆ ಕಾರಣರಾಗಿರುವ ಮತ್ತು ಅದರ ಪ್ರಧಾನ ಫಲಾನುಭವಿಗಳೂ ಆಗಿರುವ ಉದ್ಯಮಿಗಳ ಬಗ್ಗೆ ವಾಸ್ತವಿಕ ವಿಮರ್ಶೆಗಳೇ ಕಂಡು ಬರುವುದಿಲ್ಲ.

ರತನ್ ಟಾಟಾ ರವರ ನಿಧನದ ನಂತರವೂ ಇದೇ ಬಗೆಯ ಉಘೆ ಉಘೆ ಭಜನೆಗಳೇ ಟಿವಿ ಮತ್ತು ಮುದ್ರಣ ಮಾಧ್ಯಮಗಳನ್ನು ಆವರಿಸಿಕೊಂಡಿದ್ದವು. ಅದರಲ್ಲಿ ಹಲವು ಪ್ರಗತಿಪರ ಧೋರಣೆಯ ವ್ಯಕ್ತಿ ಮತ್ತು ಸಂಸ್ಥೆಗಳೂ ಸಹಭಾಗಿಯಾಗಿದ್ದವು.

ಇದಕ್ಕೆ ಹಲವಾರು ವಾಸ್ತವಿಕ ಕಾರಣಗಳಿವೆ:

1.ಮೋದಿ ಕಾಲದಲ್ಲಿ ಸರಕಾರದೊಡನೆ ಇರುವ ಸಾಮೀಪ್ಯವನ್ನು ಮತ್ತು ಮೈತ್ರಿಯನ್ನು ಬಳಸಿಕೊಂಡು ಕಾನೂನುಗಳನ್ನು ಒಗ್ಗಿಸಿ ಬಗ್ಗಿಸಿ ಕಾನೂನುಬಾಹಿರ ಸೌಲಭ್ಯ, ಪ್ರೋತ್ಸಾಹ ಲಾಭ ಪಡೆದುಕೊಂಡಿರುವ ಅದಾನಿ ಮತ್ತು ಅಂಬಾನಿಗಳಿಗೆ ಹೋಲಿಸಿದರೆ ಟಾಟಾ ಗುಂಪು ನೀತಿಬದ್ಧ ಉದ್ಯಮ ನೀತಿಗಳನ್ನು ಅನುಸರಿಸುತ್ತಾ ಬಂದಿದೆ ಎಂಬ ತಪ್ಪು ತಿಳುವಳಿಕೆ ಅಥವಾ ಮೂಢನಂಬಿಕೆ.

2. ಟಾಟಾ ಗುಂಪು ‘ಉಪ್ಪಿನಿಂದ-ಉಪಗ್ರಹದ ತನಕ’ ದೇಶಕ್ಕೆ ಬೇಕಿರುವ ಎಲ್ಲವನ್ನು ಉತ್ಪಾದನೆ ಮಾಡುತ್ತಾ ರಾಷ್ಟ್ರ ನಿರ್ಮಾಣಕ್ಕೆ ಸಹಾಯ ಮಾಡಿದೆ ಎಂಬ ಆಳುವವರ್ಗದ ಬಂಡವಾಳಶಾಹಿ ಪರ ಕಥನವನ್ನು ಅವಿಮರ್ಶಾತ್ಮಕವಾಗಿ ಒಪ್ಪಿಕೊಂಡಿರುವುದು. ಇದಕ್ಕೆ ಭಾರತದ ಸ್ವಾತಂತ್ರ್ಯಾನಂತರದ ಇತಿಹಾಸದಲ್ಲಿ ಸಾರ್ವಜನಿಕ ಉದ್ಯಮಗಳು ದೇಶವನ್ನು ಕಟ್ಟಿರುವ ಬಗ್ಗೆ ಹಾಗೂ ಅವುಗಳನ್ನು ವ್ಯವಸ್ಥಿತವಾಗಿ ಸರ್ವನಾಶ ಮಾಡಿ ಈ ಟಾಟಾದಂತಹ ಉದ್ಯಮಗಳು ಬೆಳೆದ ಇತಿಹಾಸವನ್ನು ಮರೆತಿರುವುದು, ಮರೆಮಾಚುತ್ತಿರುವುದೂ ಒಂದು ಕಾರಣವಾದರೆ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಮೂಡಿಸಲಾಗಿರುವ ಬೆರಗು ಹಾಗೂ ಸಮಾಜವಾದಿ ಪರಿಕಲ್ಪನೆಯ ಬಗ್ಗೆ ಬೆಳೆಸಿರುವ ಪೂರ್ವಗ್ರಹಗಳೂ ಮತ್ತೊಂದು ಕಾರಣ. ಅದರಲ್ಲೂ ಸೋವಿಯತ್ ರಶ್ಯದ ಕುಸಿತದ ನಂತರ ಬಂಡವಾಳಶಾಹಿ ವ್ಯವಸ್ಥೆಯೇ ಮನುಕುಲದ ಚರಮ ಸೀಮೆ ಎಂಬ ಆಸ್ಥಾನ ಪಂಡಿತರ ಪ್ರಭುತ್ವ ಪೋಷಿತ ವ್ಯವಸ್ಥಿತ ಪ್ರಚಾರಗಳಿಂದಾಗಿ ಬಂಡವಾಳಶಾಹಿ ಸುಲಿಗೆಯನ್ನು ಶೋಷಣೆಯೆಂದು ಭಾವಿಸದೆ ಉಪಕಾರವೆಂದು ಭಾವಿಸುವ ಗ್ರಹಿಕೆಯು ಜಾಗತಿಕ ವಿದ್ಯಮಾನವೇ ಆಗಿಬಿಟ್ಟಿದೆ.

3.ಮೂರನೆಯದಾಗಿ ಟಾಟಾ ಗುಂಪು ಶೈಕ್ಷಣಿಕ, ವೈಜ್ಞಾನಿಕ ಸಂಸ್ಥೆಗಳ ಸ್ಥಾಪನೆಗಳನ್ನೂ ಒಳಗೊಂಡಂತೆ ಇತರ ಸಾರ್ವಜನಿಕ ಸೇವೆಗಳಲ್ಲೂ ತೊಡಗಿಕೊಂಡು ಜನಸೇವೆ ಮಾಡುತ್ತಿವೆ ಹಾಗೂ ತನ್ನ ಉದ್ಯಮಗಳಲ್ಲಿ ಸಮಾಜದ ದಮನಿತ ಸಮುದಾಯಗಳಿಗೆ ಇತರರಿಗಿಂತ ಹೆಚ್ಚು ಅವಕಾಶ ಕೊಡುತ್ತವೆ ಎಂಬ ಅರ್ಧ ಸತ್ಯಗಳು ಹುಟ್ಟುಹಾಕಿರುವ ‘ಜನಸೇವಕ ಉದ್ಯಮಿ’, ‘ಜನೋದ್ಯಮಿ’ ಎಂಬ ಪ್ರಭಾವಳಿಗಳೂ ಕಾರಣವಾಗಿವೆ.

ಇವೆಲ್ಲವೂ ಕೆಲವು ದಶಕಗಳ ಹಿಂದೆ ಕವಿ ಸಿದ್ಧಲಿಂಗಯ್ಯನವರ ಹಾಡಿನಲ್ಲಿ ಇದ್ದ ‘‘ಯಾರಿಗೆ ಬಂತು? ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ? ಟಾಟಾ ಬಿರ್ಲಾರ ಜೇಬಿಗೆ ಬಂತು 47ರ ಸ್ವಾತಂತ್ರ್ಯ’’ ಎಂಬ ಕಾಮನ್ ಸೆನ್ಸ್ ವಿವೇಕವನ್ನು ಹಿಮ್ಮೆಟ್ಟಿಸಿ ಪಂಡಿತರಿಂದ ಪಾಮರರಾದಿಯಾಗಿ ಎಲ್ಲರೂ ಟಾಟಾ ಭಜನೆಯಲ್ಲಿ ತೊಡಗುವಂತೆ ಮಾಡಿದೆ.

ಹೀಗಾಗಿ ರತನ್ ಟಾಟಾರವರ ಸಾವಿನ ನಂತರದ ವಿದ್ಯಮಾನಗಳು ಬಯಲು ಮಾಡಿರುವುದು ಈ ದೇಶದ ವಿವೇಕದ ಮೇಲೆ ಬಂಡವಾಳಶಾಹಿ ಯಾಜಮಾನ್ಯವನ್ನು. ಏಕೆಂದರೆ ಬಂಡವಾಳಶಾಹಿ ವ್ಯವಸ್ಥೆ ಆಳುವುದು ಕೇವಲ ಪೊಲೀಸರ ಬೂಟುಗಳಿಂದಲ್ಲ. ಬದಲಿಗೆ ಶೋಷಿತರಲ್ಲಿ ಕೀಳರಿಮೆ ಮತ್ತು ಶೋಷಣೆಯ ಬಗ್ಗೆ ವಾಲಂಟರಿ ಸಮ್ಮತಿಯನ್ನು ಉತ್ಪಾದಿಸುವ ಹೆಜೊಮೊನಿ-ಸೈದ್ಧಾಂತಿಕ ಯಾಜಮಾನ್ಯದ ಮೂಲಕ. ಆದ್ದರಿಂದ ಬಂಡವಾಳಶಾಹಿಯನ್ನು ಸೋಲಿಸಬೇಕೆಂದರೆ ಮೊದಲಿಗೆ ಬಂಡವಾಳಶಾಹಿಯ ಬೌದ್ಧಿಕ ಯಾಜಮಾನ್ಯದಿಂದಲೂ ಬಿಡುಗಡೆ ಹೊಂದಬೇಕಿರುತ್ತದೆ. ಜಾತಿ ದಾಸ್ಯದಿಂದ ಬಿಡುಗಡೆಯಾಗಬೇಕೆಂದರೆ ಬ್ರಾಹ್ಮಣ್ಯ ಹಾಗೂ ನವಬ್ರಾಹ್ಮಣ್ಯದ ಸೈದ್ಧಾಂತಿಕ ಸಂಕೋಲೆಗಳಿಂದ ಬಿಡಿಸಿಕೊಳ್ಳುವ ಅಗತ್ಯವಿರುವಂತೆ. ಅಂಬೇಡ್ಕರ್ ಹೇಳುವಂತೆ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿಯಿಂದ ವಿಮೋಚನೆಯಾಗದೆ ಈ ದೇಶದ ದಮನಿತರಿಗೆ ವಿಮೋಚನೆಯಿಲ್ಲ. ಬಂಡವಾಳಶಾಹಿ ಯಾಜಮಾನ್ಯದಿಂದ ಸಮಾಜವಾದಿ ನೆಲೆಯಿಂದಲ್ಲದೆ ಮೃದು ಬಂಡವಾಳಶಾಹಿ ಹತಾರಗಳ ಮೂಲಕ ಬಿಡುಗಡೆ ಹೊಂದಲು ಸಾಧ್ಯವಿಲ್ಲ.

ಹೀಗಾಗಿ ಭಾರತದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ಟಾಟಾಗಳ ಪಾತ್ರದ ವರ್ಗ ಹಿತಾಸಕ್ತಿಯನ್ನು ಅರಿಯುವ ಮೂಲಕ ಬಂಡವಾಳಶಾಹಿ ಬೌದ್ಧಿಕ ಯಾಜಮಾನ್ಯದಿಂದ ಹೊರಬರುವ ಪ್ರಯತ್ನ ಪಡಬಹುದು.

ಬ್ರಿಟಿಷರ ಹಡಗೇರಿ ಬೆಳೆದ ಟಾಟಾ ಸಾಮ್ರಾಜ್ಯ

ಸ್ವಾತಂತ್ರ್ಯ ಪೂರ್ವದ ಇತಿಹಾಸದ ಬಗ್ಗೆ ಮತ್ತು ಸ್ವಾತಂತ್ರ್ಯಾ ನಂತರದ ಪ್ರಾರಂಭಿಕ ದಶಕಗಳಲ್ಲಿ ಆಗಿನ ಭಾರತದ ಪ್ರಮುಖ ಉದ್ಯಮಿಗಳಾಗಿದ್ದ ಟಾಟಾ ಮತ್ತು ಬಿರ್ಲಾಗಳ ಬಗ್ಗೆ ಕಟ್ಟಿರುವ ಕಥನವೇನೆಂದರೆ ಅವರು ಬ್ರಿಟಿಷ್ ವಿರೋಧಿಯಾಗಿದ್ದರು ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವಾಗಿದ್ದರು. ಆದ್ದರಿಂದ ಅವರು ದೇಶಭಕ್ತ ರಾಷ್ಟ್ರೀಯ ಬಂಡವಾಳಶಾಹಿಗಳಾಗಿದ್ದರು ಎಂಬುದು.

ಆದರೆ ಇದಕ್ಕಿಂತ ತಿರುಚಿದ ಇತಿಹಾಸ ಮತ್ತೊಂದಿಲ್ಲ. ಬ್ರಿಟಿಷರು ಭಾರತದಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಿಸಲು ಹಾಗೂ ಜಗತ್ತಿನಾದ್ಯಂತ ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬೇಕಿದ್ದ ಸರಕು ಸರಬರಾಜುಗಳನ್ನು ಮಾಡುತ್ತಿದ್ದ ವರ್ತಕರು ಟಾಟಾ ಮತ್ತು ಬಿರ್ಲಾಗಳು. ಬ್ರಿಟಿಷ್ ಸಾಮ್ರಾಜ್ಯವನ್ನು ಉಳಿಸಲು ಮತ್ತು ಬೆಳೆಸಲು ಬೇಕಾದ ವ್ಯಾಪಾರಿ ಸಹಾಯ ಮಾಡುತ್ತಲೇ ಈ ಉದ್ಯಮಿಗಳು ತಮ್ಮ ಲಾಭವನ್ನು ಹೆಚ್ಚಿಸಿಕೊಂಡರು. ಮುಂದೆ ಉದ್ಯಮವನ್ನು ಸ್ಥಾಪಿಸಲು ಬೇಕಾದ ಮೂಲ ಬಂಡವಾಳವನ್ನೂ ಸಂಚಯಿಸಿಕೊಂಡರು. ಅದರಲ್ಲೂ ಟಾಟಾ ಮತ್ತು ಬಿರ್ಲಾಗಳು ಚೀನಾವನ್ನು ಸೋಲಿಸಲು ಬ್ರಿಟಿಷ್ ವಸಾಹತುಶಾಹಿಗಳು ಚೀನಾವನ್ನು ಅಫೀಮು ಮತ್ತರನ್ನಾಗಿಸಲು ಪ್ರಾರಂಭಿಸಿದ ಅಫೀಮು ವ್ಯಾಪಾರದಲ್ಲೂ ಪ್ರಮುಖ ಪಾಲುದಾರರಾಗಿದ್ದರು. ಟಾಟಾಗಳಂತೂ ಆಗಿನ ಅಬಿಸೀನಿಯಾ ಅಥವಾ ಈಗಿನ ಎಥಿಯೋಪಿಯಾದಲ್ಲಿ ಬ್ರಿಟಿಷ್ ಸೈನ್ಯ ಮತ್ತು ಯುದ್ಧಕ್ಕೆ ಬೇಕಾದ ಎಲ್ಲಾ ಸರಕುಗಳನ್ನು ದುಪ್ಪಟ್ಟು ಬೆಲೆಯಲ್ಲಿ ಮಾರಿ ಅಪಾರ ಸಂಪತ್ತು ಕೂಡಿಹಾಕಿಕೊಂಡರು. 1911ರಲ್ಲಿ ಬ್ರಿಟಿಷರ ಸಹಕಾರ ಮತ್ತು ಬಂಡವಾಳ ಸಹಾಯದೊಂದಿಗೆ ಜಮ್‌ಶೆಡ್‌ಪುರದಲ್ಲಿ ಟಾಟಾ ಅವರು ಸ್ಥಾಪಿಸಿದ ಟಾಟಾ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯು ಭಾರತ ಮತ್ತು ಬೇರೆ ದೇಶಗಳಲ್ಲಿದ್ದ ಬ್ರಿಟಿಷ್ ಸೇನಾ ಯಂತ್ರಾಂಗಕ್ಕೆ ಉಕ್ಕಿನ ಶಕ್ತಿಯನ್ನು ತಂದುಕೊಟ್ಟಿತ್ತು.

ಹೀಗೆ ಬ್ರಿಟಿಷ್ ವಸಾಹತುಶಾಹಿಗಳಿಗೂ ಮತ್ತು ಟಾಟಾಗಳಂತಹ ದೊಡ್ಡ ಉದ್ಯಮಿಗಳಿಗೂ ಇದ್ದದ್ದು ಅವಲಂಬಿತ ಸಂಬಂಧವೇ ವಿನಾ ವೈರತ್ವವಲ್ಲ. ಅದಕ್ಕೆ ತದ್ವಿರುದ್ಧವಾಗಿ ಅಖಂಡ ಭಾರತದುದ್ದಕ್ಕೂ ತಲೆ ಎತ್ತುತ್ತಿದ್ದ ಹಲವಾರು ಸಣ್ಣ ಪುಟ್ಟ ಉದ್ಯಮಿಗಳಿಗೆ ಬ್ರಿಟಿಷರೆಂದರೆ ದ್ವೇಷವಿತ್ತು. ಅವರಲ್ಲಿ ಹಲವರು ಸ್ವಾತಂತ್ರ್ಯ ಹೋರಾಟಕ್ಕೆ ಸಹಾಯ ಮಾಡುತ್ತಿದ್ದರು ಅಥವಾ ಭಾಗವಹಿಸುತ್ತಿದ್ದರು. ಆದರೆ ಟಾಟಾ-ಬಿರ್ಲಾಗಳು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲೂ ರಾಜಕೀಯ ಸ್ವದೇಶಿ ಮತ್ತು ಆರ್ಥಿಕ ಸ್ವದೇಶಿ ಬೇರೆಬೇರೆ ಎಂದೇ ವಾದ ಮಾಡುತ್ತಿದ್ದರು. ಹೇಗೆ ಹಿಂದೂ ರಾಷ್ಟ್ರದ ಹೆಸರಲ್ಲಿ ಬ್ರಿಟಿಷ್ ಸೇನೆಯನ್ನು ಗಟ್ಟಿಗೊಳಿಸಲು ಹಿಂದೂ ಯುವಕರನ್ನು ಬ್ರಿಟಿಷ್ ಸೇನೆಗೆ ನೇಮಕಾತಿ ಮಾಡಿಸಿಕೊಳ್ಳುವ ಗುತ್ತಿಗೆ ಪಡೆದಿದ್ದ ಸಾವರ್ಕರ್‌ರನ್ನು ಬ್ರಿಟಿಷ್ ವಿರೋಧಿ ಎನ್ನಲು ಸಾಧ್ಯವಿಲ್ಲವೋ ಅದೇ ಕಾರಣಕ್ಕೆ ಟಾಟಾ-ಬಿರ್ಲಾಗಳಂತಹ ಬೃಹತ್ ಉದ್ಯಮಿಗಳನ್ನೂ ರಾಷ್ಟ್ರೀಯವಾದಿ ಬಂಡವಾಳಶಾಹಿಗಳೆನ್ನಲು ಸಾಧ್ಯವಿಲ್ಲ. ಭಾರತದ ಈ ದೊಡ್ಡ ಬಂಡವಾಳಶಾಹಿಗಳು ಹುಟ್ಟಿದ್ದೇ ಬ್ರಿಟಿಷ್ ವಶಾಹತುಶಾಹಿಗಳ ಬೆಂಬಲ ಮತ್ತು ಸಹಕಾರದಿಂದ.

ಸ್ವಾತಂತ್ರ್ಯೋತ್ತರ ಮಿಶ್ರ ಆರ್ಥಿಕತೆ- ರೋಡು ಸರಕಾರದ್ದು, ಕಾರು ಟಾಟಾ-ಬಿರ್ಲಾಗಳದ್ದು!

ಸ್ವಾತಂತ್ರ್ಯಾನಂತರದಲ್ಲಿ ಭಾರತದ ಸಂವಿಧಾನದ ಆಶಯ ಸಮಾಜವಾದಿ ಸಮಾಜದ ಸೃಷ್ಟಿಯೆಂದು ಬರೆದುಕೊಂಡಿದ್ದರೂ ಅವೆಲ್ಲವನ್ನು ಹಕ್ಕಾಗಿಸದೆ ಜಾರಿ ಮಾಡಲು ಸರಕಾರವನ್ನು ಒತ್ತಾಯಿಸಲಾಗದ ಪ್ರಭುತ್ವ ನಿರ್ದೇಶನದ ತತ್ವಗಳಲ್ಲಿ ಸೇರಿಸಲಾಯಿತು. ಹೀಗಾಗಿ ಸ್ವಾತಂತ್ರ್ಯಾನಂತರದ ಹಲವು ದಶಕಗಳವರೆಗೆ ಭೂಮಾಲಕತ್ವವೂ ರದ್ದಾಗಲಿಲ್ಲ. ಬಂಡವಾಳಶಾಹಿಯೂ ಬೆಳೆಯಿತು ಮತ್ತು ಬಲಿಯಿತು. ಇದನ್ನು ಸಾಧ್ಯಗೊಳಿಸಲು ಮಿಶ್ರ ಅರ್ಥಿಕತೆಯೆಂಬ ವ್ಯವಸ್ಥೆಯನ್ನು ಟಾಟಾ ನೇತೃತ್ವದ ಭಾರತದ ದೊಡ್ಡ ಬಂಡವಾಳಶಾಹಿಗಳು ಪ್ರತಿಪಾದಿಸಿದ್ದನ್ನು ಭಾರತದ ಪ್ರಭುತ್ವ ಚಾಚೂ ತಪ್ಪದೆ ಅನುಸರಿಸಿತು.

ಮಿಶ್ರ ಅರ್ಥಿಕತೆಯ ಸಾರವಿಷ್ಟೇ. ಭಾರತದ ಖಾಸಗಿ ಬಂಡವಾಳಶಾಹಿಗಳ ಬಳಿ ಬಂಡವಾಳವು ಕಡಿಮೆ ಇರುವುದರಿಂದ ದೇಶಕ್ಕೆ ಅಗತ್ಯವಿರುವ ದೊಡ್ಡ ದೊಡ್ಡ ಉದ್ಯಮಗಳನ್ನು ಜನರ ತೆರಿಗೆ ದುಡ್ಡಿನಲ್ಲೂ ಸಾರ್ವಜನಿಕ ರಂಗದಲ್ಲಿ ಕಟ್ಟಲಾಗುವುದು. ಅದಕ್ಕೆ ಬೇಕಿರುವ ಸರಬರಾಜು ಮತ್ತು ಉತ್ಪನ್ನಗಳನ್ನು ಆಧರಿಸಿ ಖಾಸಗಿ ಬಂಡವಾಳಶಾಹಿ ರಂಗ ಬೆಳೆಯಲು ಸರಕಾರ ಅವಕಾಶ ಮಾಡಿಕೊಡಬೇಕು. ಅಂದರೆ ಸರಕಾರವೇ ಟಾಟಾ ಮತ್ತು ಬಿರ್ಲಾಗಳನ್ನು ಪೋಷಿಸುವ, ಬೆಳೆಸುವ ಜವಾಬ್ದಾರಿ ಹೊತ್ತಿತು ಮತ್ತು ದೊಡ್ದ ರೀತಿಯಲ್ಲಿ ಉತ್ತೇಜನ, ಸಹಾಯ ಮತ್ತು ಸಹಕಾರಗಳನ್ನು ಕೊಟ್ಟು ಈ ದೊಡ್ಡ ಉದ್ಯಮಿಗಳನ್ನು ಬೆಳೆಸಲಾಯಿತು. ಅವರ ಬಂಡವಾಳ ಶಕ್ತಿ ಬೆಳೆದ ನಂತರ ಸರಕಾರ ತಾನು ಜನರ ತೆರಿಗೆಯಲ್ಲಿ ಬೆಳೆಸಿದ ಉದ್ಯಮಗಳನ್ನೆಲಾ ಅವರಿಗೆ ಬಿಟ್ಟುಕೊಡಬೇಕೆನ್ನುವ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯನ್ನೇ ಮಿಶ್ರ ಭಾಷೆಯಲ್ಲಿ ಮಿಶ್ರ ಆರ್ಥಿಕತೆಯೆಂದು ಕರೆಯಲಾಯಿತು. ಉಪ್ಪಿನಿಂದ ಉಪಗ್ರಹದ ತನಕ ಸಾರ್ವಜನಿಕ ಕ್ಷೇತ್ರದಲ್ಲೇ ಉತ್ಪಾದನೆ ಮಾಡುತ್ತಿದ್ದರೂ ಅದನ್ನು ಒಂದು ಹಂತದ ನಂತರ ಲಾಭ, ಯಂತ್ರಾಂಗ, ಭೂಮಿ, ಬಂಡವಾಳ ಮತ್ತು ಮಾರುಕಟ್ಟೆ ಸಮೇತ ಆಗ ಟಾಟಾ-ಬಿರ್ಲಾಗಳಿಗೆ ಇದೀಗ ಅವರ ಜೊತೆಜೊತೆಗೆ ಅಂಬಾನಿ-ಅದಾನಿಗಳಿಗೆ ಬಿಟ್ಟುಕೊಟ್ಟು ಕೊಬ್ಬಿಸಲಾಗುತ್ತಿದೆ.

ಹೀಗಾಗಿ ಸ್ವಾತಂತ್ರ್ಯದ ಮೊದಲ ದಶಕಗಳಲ್ಲಿ ಟಾಟಾ-ಬಿರ್ಲಾಗಳು ಆಗಿನ ಕಾಂಗ್ರೆಸ್ ಮತ್ತು ಜನತಾ ಪಕ್ಷಗಳ ವಿಶೇಷ ಕೃಪಾಕಟಾಕ್ಷಕ್ಕೆ ಪಾತ್ರರಾಗಿದ್ದ ಕ್ರೋನಿಗಳಾಗಿದ್ದರೆ ಇದೀಗ ಮೋದಿ ಕಾಲದಲ್ಲಿ ಅವರ ಜೊತೆಜೊತೆಗೆ ಸ್ವಲ್ಪ ಅವರಿಗಿಂತ ಹೆಚ್ಚಾಗಿ ಮೋದಿ ಸರಕಾರದ ಕ್ರೋನಿಗಳಾಗಿದ್ದಾರೆ. ಹೀಗಾಗಿ ಕ್ರೋನಿ ಬಂಡಾವಾಳಶಾಹಿ ಎನ್ನುವುದು ಬಂಡವಾಳಶಾಹಿಯ ಅಂತರ್ಗತ ಭಾಗವೇ. ಭಾರತದಲ್ಲಂತೂ ಅದು ಇನ್ನಷ್ಟು ಸ್ಪಷ್ಟ. ಸಂವಿಧಾನದ ಆಶಯ ಮತ್ತು ನಿಯಮಗಳಿಗೆ ವ್ಯತಿರಿಕ್ತವಾಗಿಯೇ ಆಗ ಕಾಂಗ್ರೆಸ್ ಮತ್ತು ಜನತಾಗಳು ಟಾಟಾ-ಬಿರ್ಲಾಗಳನ್ನು ಬೆಳೆಸಿದರು. ಇದೀಗ ಕಾನೂನು ಒಗ್ಗಿಸಿ ಬಗ್ಗಿಸಿ ಆದಾನಿ-ಅಂಬಾನಿಗಳನ್ನು ಬೆಳೆಸಲಾಗುತ್ತಿದೆ. ಹಾಗೆಂದು ಮೋದಿ ಕೃಪಾಕಟಾಕ್ಷದಲ್ಲಿ ಟಾಟಾಗಳು ಇಲ್ಲವೆಂತಲ್ಲ. ನ್ಯಾನೋ ಕಾರಿಗೆ ರೋಡು ಹಾಸಿದ್ದೇ ಆಗಿನ ಗುಜರಾತ್ ಮುಖ್ಯಮಂತ್ರಿ ಮೋದಿ.

ತುರ್ತುಸ್ಥಿತಿ ಮತ್ತು ಟಾಟಾ ಮೆಮೊರಾಂಡಮ್

ಭಾರತದ ಪ್ರಜಾತಂತ್ರದಲ್ಲಿ ಅಂತರ್ಗತವಾಗಿರುವ ಸರ್ವಾಧಿಕಾರಿ ಧೋರಣೆಯನ್ನು ಹೊರಗೆ ತಂದದ್ದು ಇಂದಿರಾಗಾಂಧಿ ಜಾರಿ ಮಾಡಿದ ತುರ್ತುಸ್ಥಿತಿ. ಅದನ್ನು ಈಗ 77ರಲ್ಲಿ ತೆರವು ಮಾಡಿದರೂ ದೇಶದ ಬಹುಪಾಲು ಭಾಗಗಳ ಬದುಕುಗಳೂ ಶಾಶ್ವತ ತುರ್ತುಸ್ಥಿತಿಯಲ್ಲೇ ಇವೆ. ಮೋದಿ ಬಂದ ಮೇಲೆ ಅದು ಜಾಸ್ತಿಯಾಗಿದೆ. ಆದರೆ ಪ್ರಜಾತಂತ್ರದ ಎಥಿಕ್ಸ್‌ಗಳಿಗೆ ತದ್ವಿರುದ್ಧವಾಗಿದ್ದ ತುರ್ತುಸ್ಥಿತಿಯ ಸಂದರ್ಭದಲ್ಲಿ ನೀತಿವಂತ ಬಂಡವಾಳಶಾಹಿ-Ethical Capitalist- ಎಂದೆಲ್ಲಾ ಹೊಗಳಿಕೆಗಳಿಗೆ ಗುರಿಯಾಗಿರುವ ಟಾಟಾಗಳ ಪಾತ್ರವೇನಿತ್ತು?

ಮೊದಲನೆಯದಾಗಿ ಭಾರತದ ದೊಡ್ಡ ಬಂಡವಾಳಶಾಹಿಗಳಾಗಿರುವ ಟಾಟಾ, ಬಿರ್ಲಾಗಳು ಈ ರಾಜಕೀಯ ಸರ್ವಾಧಿಕಾರವನ್ನು ಬಂಡವಾಳಶಾಹಿಯ ಸರ್ವಾಧಿಕಾರವನ್ನಾಗಿ ಮಾಡಿಕೊಂಡರು. ದೇಶದೆಲ್ಲೆಡೆ ಪೊಲೀಸ್ ರಾಜ್ಯ ಸ್ಥಾಪಿತವಾಗಿರುವುದರಿಂದ ಮತ್ತು ಮುಷ್ಕರ, ಹರತಾಳಗಳು ನಿಷೇಧವಾಗಿರುವುದರಿಂದ ಕಾರ್ಮಿಕರಲ್ಲಿ ಶಿಸ್ತು ಬರಲಾರಂಭಿಸಿದೆ. ಇದರಿಂದ ರೈಲುಗಳೂ ಸರಿಯಾದ ಸಮಯಕ್ಕೆ ಬರುತ್ತಿವೆ. ಇದರಿಂದ ದೇಶದ ಅಭಿವೃದ್ಧಿಯಾಗಲಿದೆಯೆಂದೂ ಸರ್ವಾಧಿಕಾರಿ ಇಂದಿರಾಗಾಂಧಿಯನ್ನು ಹೃತ್ಪೂರ್ವಕವಾಗಿ ಪ್ರಶಂಸಿಸಿದರು.

ಮತ್ತೊಂದೆಡೆ ಬ್ಯಾಂಕ್ ರಾಷ್ಟ್ರೀಕರಣದಿಂದ ದೇಶದ ಎಲ್ಲಾ ಜನರ ಸಣ್ಣಪುಟ್ಟ ಉಳಿತಾಯವೂ ದೊಡ್ಡ ಇಡುಗಂಟಾಗಿ ಬಂಡವಾಳವಾಗಿ ದೊರೆಯಲು ಪ್ರಾರಂಭಿಸಿತು. ಇದರ ಲಾಭದ ಅಂದಾಜು ಇದ್ದ ಆಗಿನ ಟಾಟಾ ಸಮೂಹದ ಅಧ್ಯಕ್ಷ ಜೆ.ಆರ್.ಡಿ. ಟಾಟಾ ಅವರು ಆಗ ಇಂದಿರಾಗಾಂಧಿಗೆ ‘ಟಾಟಾ ಮೆಮೋರಾಂಡಮ್’ ಒಂದನ್ನು ಸಲ್ಲಿಸಿದರು. ಅದರಲ್ಲಿ ಈ ಬ್ಯಾಂಕ್ ಬಂಡವಾಳವನ್ನು ದೊಡ್ಡ ಉದ್ಯಮಿಗಳಿಗೆ ಕಡಿಮೆ ದರದಲ್ಲಿ ಒದಗಿಸುವ, ಸರಕಾರಿ-ಖಾಸಗಿ ಪ್ರಾಯೋಜಕತ್ವದಲ್ಲಿ ಉದ್ಯಮಗಳನ್ನು ನಡೆಸುವ, ಸರಕಾರಿ ಉದ್ಯಮಗಳನ್ನು ಖಾಸಗಿಯವರಿಗೆ ಬಿಟ್ಟುಕೊಡುವ ಒಟ್ಟಿನಲ್ಲಿ ಸಾರ್ವಜನಿಕ ಕ್ಷೇತ್ರವನ್ನು ಕೊಂದು ಲಾಭಕೋರ ಖಾಸಗಿ ಕ್ಷೇತ್ರವನ್ನು ಬೆಳೆಸುವ ಅತ್ಯಂತ ಅನೀತಿಯುತ ರಹದಾರಿಯನ್ನು ನೀತಿಯುತ ಬಂಡವಾಳಶಾಹಿ ಎಂಬ ಹೆಗ್ಗಳಿಕೆಯ ಟಾಟಾ ಮುಂದಿಟ್ಟರು.

1980ರ ನಂತರ ಎರಡನೇ ಬಾರಿ ಇಂದಿರಾ ಗಾಂಧಿ ಪ್ರಧಾನಿಯಾದ ಮೇಲೆ ಹಾಗೂ 1985ರಿಂದ ರಾಜೀವ್ ಗಾಂಧಿ ಅನುಸರಿಸಿದ ನೀತಿಗಳಲ್ಲೇ ಸಾರ್ವಜನಿಕ ಕ್ಷೇತ್ರವನ್ನು ಖಾಸಗಿ ಲಾಭಕ್ಕೆ ಬಲಿಯಾಗಿಸುವ ಅತ್ಯಂತ Unethical Capitalismನ ಅನುಷ್ಠಾನವೇ ಆಗಿತ್ತು. ಅದರ ಪ್ರಮುಖ ರೂವಾರಿ ಮತ್ತು ಫಲಾನುಭವಿ ಈ ಟಾಟಾ ಸಮೂಹವೇ ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News