ನಾಗಮಂಗಲದ ಕೋಮಗಲಭೆಗಳು ಮತ್ತು ಸಂಘಿ ಮಂಡಲದ ಯೋಜನೆಗಳು

Update: 2024-09-18 06:59 GMT
Editor : Mushaveer | Byline : ಶಿವಸುಂದರ್

ಮೊದಲನೇ ಹಂತದಲ್ಲಿ ಅದು ಜಾತಿ, ಪ್ರತಿಷ್ಠೆ, ಪಕ್ಷಾಂತರ ಎಲ್ಲವನ್ನು ಬಳಸಿಕೊಂಡು ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತದೆ. ಕೂಡಲೇ ಎರಡನೇ ಹಂತದ ಹಿಂದುತ್ವೀಕರಣವನ್ನು ಪ್ರಾರಂಭಿಸುತ್ತದೆ. ಹೀಗಾಗಿ ಮೇಲ್ನೋಟಕ್ಕೆ ಕರಾವಳಿಯಷ್ಟು ಕೋಮು ಧ್ರುವೀಕರಣವು ದಕ್ಷಿಣ ಕರ್ನಾಟಕದಲ್ಲಿ ಕಾಣದಿ ದ್ದರೂ ಅದು ಅದೇ ಪ್ರಕ್ರಿಯೆಯ ಮೊದಲ ಹಂತ ಎಂಬುದನ್ನು ಮರೆಯಬಾರದು. ಹೀಗಾಗಿ ದಕ್ಷಿಣ ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲೂ, ಬಿಜೆಪಿ ಠೇವಣಿ ಕಳೆದುಕೊಂಡಿರುವ ಕಡೆಗಳಲ್ಲೂ ಬಿಜೆಪಿಯ ವೋಟು ಶೇರು ಹೆಚ್ಚಾಗಿರುವುದು ಮತ್ತು ಅಲ್ಲೆಲ್ಲಾ ಹಿಂದುತ್ವೀಕರಣದ ಎರಡನೇ ಹಂತದ ಛಾಯೆಗಳು ಕಾಣುತ್ತಿರುವುದು, ಪ್ರಜಾತಂತ್ರವಾದಿಗಳಲ್ಲಿ ಆತಂಕ ಹುಟ್ಟಿಸಬೇಕೇ ವಿನಾ ಸಮಾಧಾನವನ್ನಲ್ಲ. ಮಂಡ್ಯ ಭಾಗದಲ್ಲಿ ಯೋಜಿತವಾಗಿ ನಡೆಯುತ್ತಿರುವ ಕೋಮು ಗಲಭೆಗಳಾದರೂ ಆ ಹುಸಿ ಸಮಾಧಾನವನ್ನು ಒಡೆದು ಹಾಕಬೇಕು.

ನಾಗಮಂಗಲದಲ್ಲಿ ನಡೆದ ಕೋಮು ಗಲಭೆಗಳು ಮೈಸೂರು ಪ್ರಾಂತದ ಕೋಮು ಸೌಹಾರ್ದ ಪರಂಪರೆಯ ಅಭೇದ್ಯತೆಯ ಬಗ್ಗೆ ಕಟ್ಟಿಕೊಂಡಿದ್ದ ಮಿಥ್ಯೆಗಳನ್ನು ಮತ್ತೊಮ್ಮೆ ಒಡೆದಿದೆ.

ಕರ್ನಾಟಕದ ಇತರ ಪ್ರಾಂತಗಳಿಗೆ ಹೋಲಿಸಿದರೆ ಹಳೆ ಮೈಸೂರು ಪ್ರಾಂತ ಹಲವಾರು ಐತಿಹಾಸಿಕ ಕಾರಣಗಳಿಂದಾಗಿ ಸಂಘಿ ಅಜೆಂಡಾಗಳಿಗೆ ಅಷ್ಟು ಉತ್ಸಾಹದಾಯಕ ಪ್ರತಿಕ್ರಿಯೆಯೇನೂ ತೋರಿರಲಿಲ್ಲ. ಹೀಗಾಗಿಯೇ ಈ ಭಾಗದಲ್ಲಿ ಬಿಜೆಪಿಯೂ ಇತ್ತೀಚಿನವರೆಗೂ ವಿಶೇಷ ಸಾಧನೆಯನ್ನೇನೂ ತೋರಿರಲಿಲ್ಲ.

ಆದರೆ ಕಳೆದ ಮೂವತ್ತು ವರ್ಷಗಳಲ್ಲಿ ಅದರಲ್ಲೂ ಮೋದಿ ಕಾಲಘಟ್ಟದಲ್ಲಿ ಹಳೆ ಮೈಸೂರು ಮತ್ತು ವಿಶೇಷವಾಗಿ ಮಂಡ್ಯ ಜಿಲ್ಲೆಯ ರಾಜಕೀಯ- ಆರ್ಥಿಕತೆಯಲ್ಲಿ ಮತ್ತು ಸಮಾಜೋ ಸಂಸ್ಕೃತಿಯಲ್ಲಿ ಬರುತ್ತಿರುವ ಬದಲಾವಣೆಗಳು ಇದುವರೆಗೆ ರೂಪುಗೊಂಡಿದ್ದ ಈ ಸಮತೋಲನವನ್ನು ಬದಲಿಸಲು ಪ್ರಾರಂಭಿಸಿದೆ.

ಪ್ರಧಾನವಾಗಿ ವಿಶೇಷ ಏರುಪೇರಿಲ್ಲದ ರೈತವಾರಿ ಕೃಷಿ ವ್ಯವಸ್ಥೆಯು ಹುಟ್ಟು ಹಾಕಿದ್ದ ರಾಜಕೀಯ ಮತ್ತು ಸಂಸ್ಕೃತಿಗಳಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿ ನವ ಉದಾರವಾದಿ ಆರ್ಥಿಕತೆ ಸೃಷ್ಟಿಸಿರುವ ಕೃಷಿ ಬಿಕ್ಕಟ್ಟು, ವಲಸೆ, ನಿರುದ್ಯೋಗ, ಬದುಕಿನ ಮತ್ತು ಐಡೆಂಟಿಟಿ ಬಿಕ್ಕಟ್ಟುಗಳು, ಅವು ಹುಟ್ಟು ಹಾಕಿರುವ ವ್ಯಕ್ತಿಗತ ಮತ್ತು ಸಾಮಾಜಿಕ ಆತಂಕಗಳು, ಪ್ರಬಲ ಜಾತಿಗಳ ಮೇಲ್‌ಸ್ತರಗಳ ಬ್ರಾಹ್ಮಣೀಕರಣ, ನಾಥಪಂಥೀಯ ಒಕ್ಕಲಿಗ ಮಠಗಳ ಹಿಂದುತ್ವೀಕರಣ, ಪ್ರಗತಿಪರ ಚಳವಳಿಗಳ ಜಡತೆ ಮತ್ತು ನಿಧಾನ ನಿಷ್ಕ್ರಿಯತೆ ಮತ್ತು ಬಲಪಂಥೀಯ ಶಕ್ತಿಗಳ ಉತ್ಸಾಹ, ಸಂಪನ್ಮೂಲ ಮತ್ತು ವಿನಾಶಕಾರಿ ಕ್ರಿಯಾಶೀಲತೆಗಳು ಮಂಡ್ಯದ ರಾಜಕಾರಣದಲ್ಲಿ ಹಲವು ಮೂಲಭೂತ ಬದಲಾವಣೆಗಳನ್ನು ತರುತ್ತಿರುವುದು ಕಳೆದ ಕೆಲವು ವರ್ಷಗಳಲ್ಲಿ ಕಣ್ಣಿದ್ದವರಿಗೆ ಕಣ್ಣಿಗೆ ರಾಚುವಷ್ಟು ಸ್ಪಷ್ಟವಾಗಿ ಕಾಣತೊಡಗಿವೆ.

2018ರ ವಿಧಾನ ಸಭಾ ಚುನಾವಣೆಯಲ್ಲಿ ಪ್ರಬಲ ಒಕ್ಕಲಿಗ ಮೇಲ್ ಸ್ತರದ ವರ್ಗ ರಾಜ್ಯಕ್ಕೆ ಕುಮಾರ ಸ್ವಾಮಿ, ದೇಶಕ್ಕೆ ನರೇಂದ್ರ ಮೋದಿ ಎಂದು ಘೋಷಿಸಿದ್ದು, ಅಹಿಂದ ರಾಜಕಾರಣವನ್ನು ಸೋಲಿಸಲು ಬಲಿಷ್ಠ ಜಾತಿಗಳು ಒಗ್ಗೂಡಿದ್ದು, ಕಳೆದ ಹತ್ತು ವರ್ಷಗಳಿಂದ ಸಂಘಪರಿವಾರಿಗರು ಟಿಪ್ಪುವಿನ ರಾಜಧಾನಿ ಶ್ರೀರಂಗಪಟ್ಟಣವನ್ನು ಯೋಜಿತವಾಗಿ ನಿರಂತರ ಕೋಮು ಉದ್ವಿಘ್ನ ಪರಿಸ್ಥಿತಿಯಲ್ಲಿಟ್ಟಿರುವುದು, 2023ರ ಚುನಾವಣೆಯಲ್ಲಿ ಆ ಕ್ಷೇತ್ರದಲ್ಲಿ ಸೋತ ಬಿಜೆಪಿ ಅಭ್ಯರ್ಥಿಯು ಕಳೆದ ಚುನಾವಣೆಗಿಂತ ನಾಲ್ಕು ಪಟ್ಟು ಹೆಚ್ಚು ವೋಟುಗಳನ್ನು ಪಡೆದುಕೊಂಡಿರುವುದು..

..ಚುನಾವಣೆಯಲ್ಲಿ ಟಿಪ್ಪು ಇತಿಹಾಸ ಬದಲಿಸಲು ಉರಿಗೌಡ, ನಂಜೇಗೌಡರನ್ನು ಕಣಕ್ಕೆ ಇಳಿಸುವ ವಿಫಲವಾದ ಪ್ರಯತ್ನ ಮಾಡಿದ್ದು, 2023ರ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಜೆಡಿಎಸ್ ಬಿಜೆಪಿಯ ಜೊತೆ 2024ರ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಮಾತ್ರವಲ್ಲದೆ ಸೈದ್ಧಾಂತಿಕವಾಗಿಯೂ ಸಂಘಿ ಫ್ಯಾಶಿಸ್ಟರ ಮುಸ್ಲಿಮ್ ದ್ವೇಷಿ ಬ್ರಾಹ್ಮಣೀಯ ಹಿಂದುತ್ವದ ಜೊತೆಗೆ ಕೈಗೂಡಿಸಿದ್ದು, ರೈತ ಸಂಘದ ಪ್ರಮುಖ ಕೇಂದ್ರವಾಗಿದ್ದ ಪಾಂಡವಪುರದಲ್ಲಿ ಆರೆಸ್ಸೆಸ್ ತನ್ನ ಪ್ರಾಂತ ಕಚೇರಿ ತೆರೆದಿರುವುದು, ಚುನಾವಣೆಯಾದ ಸ್ವಲ್ಪ ತರುಣದಲ್ಲೇ ದಲಿತ ಸಂಘರ್ಷ ಸಮಿತಿ ಮತ್ತು ರೈತ ಸಂಘಗಳ ಪ್ರಭಾ ವಲಯದಲ್ಲಿದ್ದ ಕೆರೆಗೋಡುವಿನಲ್ಲಿ ಭಗವಾಧ್ವಜ ಹಾರಿಸಿ ಕೋಮು ಉದ್ವಿಘ್ನತೆ ಸೃಷ್ಟಿಸಿದ್ದು..ಇತ್ಯಾದಿಗಳು ಮಂಡ್ಯ-ಮೈಸೂರು ಭಾಗದ ಸಾಮಾಜಿಕ ಹಾಗೂ ರಾಜಕೀಯ ಹಿಂದುತ್ವವಾದದೆಡೆಗೆ ಹೊರಳಿಕೊಳ್ಳುತ್ತಿರುವ ಉದಾಹರಣೆಗಳು.

ನಾಗಮಂಗಲದಲ್ಲಿ ನಡೆದ ಕೋಮು ಗಲಭೆ ಈ ವಿದ್ಯಮಾನದ ಮುಂದುವರಿದ ಭಾಗವೇ ವಿನಾ ಅದಕ್ಕೆ ಅಪವಾದವಲ್ಲ. ಗಣೇಶೋತ್ಸವದ ದಿನ ಕೋಮು ಗಲಭೆ ಕೆರಳಲು ತತ್‌ಕ್ಷಣದ ಕಿಡಿ ಅಥವಾ ಕಲ್ಲು ಎಲ್ಲಿಂದಲೇ ಬಿದ್ದಿದ್ದರೂ ಉಳಿದ ಚಿತ್ರಕಥೆ ಈಗಾಗಲೇ ಸಂಘಿಗಳು ನಿಶ್ಚಯಿಸಿದ್ದ ರೀತಿಯಲ್ಲೇ ಯೋಜಿತವಾಗಿ ನಡೆದಿದೆ. ಏಕೆಂದರೆ ಅದು ಸಂಘ ಪರಿವಾರ ಸಮಾಜದಲ್ಲಿ ತನ್ನ ಸಂಘಟನಾತ್ಮಕ ಮತ್ತು ರಾಜಕೀಯ ಹಿಡಿತಗಳನ್ನು ಸಾಧಿಸಲು ರೂಪಿಸಿಕೊಂಡಿರುವ ಯೋಜಿತ ತಂತ್ರಗಳ ಭಾಗ.

ವಾಸ್ತವದಲ್ಲಿ ಕರಾವಳಿಯು ಇಂದು ತಲುಪಿರುವ ದ್ವೇಷದ ತಾರಕಸ್ಥಿತಿಯನ್ನು ಮುಟ್ಟುವ ಮೂವತ್ತು ವರ್ಷಗಳ ಹಿಂದೆ ಮಂಡ್ಯ-ಮೈಸೂರುಗಳಂತೆ ಕೋಮು ಸಹಜೀವನವನ್ನು ನಡೆಸುತ್ತಿತ್ತು. ಕರಾವಳಿ ಪ್ರಯೋಗಾಲಯ ಸಂಘಿಗಳಿಗೆ ತಮ್ಮ ದ್ವೇಷ ರಾಜಕಾರಣವನ್ನು ಸಮಾಜದಲ್ಲಿ ಬೇರೂರಿಸಲು ಬೇಕಾದ ನೀಲ ನಕ್ಷೆಯನ್ನು ಒದಗಿಸಿಕೊಟ್ಟಿದೆ. ಅದೇ ಪ್ರಯೋಗವನ್ನು ಅವರು ಈಗ ಮಂಡ್ಯದಲ್ಲೂ ದೂರಗಾಮಿ ದೃಷ್ಟಿಯಿಟ್ಟುಕೊಂಡು ಹಂತಹಂತವಾಗಿ ಜಾರಿ ಮಾಡುತ್ತಿದ್ದಾರೆ.

ಆದ್ದರಿಂದ ಈಗಲಾದರೂ ಯಾವುದೇ ಉಪೇಕ್ಷೆ ಮಾಡದೆ ಸಂಘಿಗಳ ಮತ್ತು ಅದರ ರಾಜಕೀಯ ಅಂಗವಾದ ಬಿಜೆಪಿಯ (1980ಕ್ಕೆ ಮುಂಚೆ ಭಾರತೀಯ ಜನ ಸಂಘ) ಬೆಳವಣಿಗೆಯ ಇತಿಹಾಸ ಮತ್ತು ವಿವಿಧ ಹಂತಗಳಲ್ಲಿ ಅವರು ಅನುಸರಿಸುವ ತಂತ್ರಗಳನ್ನು ಅರಿತು ಅದನ್ನು ಸೋಲಿಸಲು ಬೇಕಾದ ರಾಜಕೀಯ ಹಾಗೂ ತಳಮಟ್ಟದ ಸಂಘಟನೆಗಳನ್ನು ಕಟ್ಟಲು ಮುಂದಾಗಬೇಕಿದೆ.

ಕರ್ನಾಟಕದಲ್ಲಿ ಬಿಜೆಪಿ ತುಳಿದ ಹಾದಿ ಬೆಳೆಯುತ್ತಿರುವ ರೀತಿ

ಕರ್ನಾಟಕದಲ್ಲಿ ಬಿಜೆಪಿಯ ಮೂಲ ರೂಪವಾದ ಭಾರತೀಯ ಜನಸಂಘ 1952ರ ಮೊದಲ ಚುನಾವಣೆಯಿಂದಲೂ ಕರ್ನಾಟಕದಲ್ಲಿ ಸ್ಪರ್ಧಿಸುತ್ತಾ ಬಂದಿದೆ. ಮೊದಲೆರಡು ದಶಕಗಳಲ್ಲಿ ಹುಬ್ಬಳ್ಳಿ, ಬೀದರ್, ಬೆಂಗಳೂರು, ಕೋಲಾರ ಮತ್ತು ಕರಾವಳಿ ವಲಯಗಳ ಹತ್ತಾರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾ ಬಂದ ಜನಸಂಘ ಸರಾಸರಿ ಶೇ.2-5ರಷ್ಟು ವೋಟುಗಳನ್ನು ಪಡೆದುಕೊಳ್ಳುತ್ತಾ, ಕೆಲವು ಕ್ಷೇತ್ರಗಳಲ್ಲಿ ದೂರದ ಎರಡನೆಯ ಅಥವಾ ಮೂರನೆಯ ಸ್ಥಾನವನ್ನು ಪಡೆದುಕೊಂಡಿದೆ. 1967ರ ಚುನಾವಣೆಯಲ್ಲಿ ಮೊತ್ತ ಮೊದಲ ಬಾರಿಗೆ ಶಾಸನ ಸಭೆಯಲ್ಲಿ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿತು. ಇಲ್ಲೇ ಹೋಲಿಕೆಗೆ ಹೇಳಬೇಕೆಂದರೆ 1957ರ ಚುನಾವಣೆಯೊಂದನ್ನು ಬಿಟ್ಟರೆ (ಆ ಚುನಾವಣೆಯಲ್ಲಿ ಜನಸಂಘಕ್ಕೆ ಶೇ. 1.34ರಷ್ಟು ವೋಟುಗಳು ಬಂದರೆ, ಸಿಪಿಐ ಪಕ್ಷಕ್ಕೆ ಶೇ. 1.92 ವೋಟುಗಳು ಬಂದಿತ್ತು) ಈವರೆಗೆ ನಡೆದ ಯಾವ ಚುನಾವಣೆಗಳಲ್ಲೂ ಕರ್ನಾಟಕದ ಎಡಪಕ್ಷಗಳು ರಾಜ್ಯದಲ್ಲಿ ಬಿಜೆಪಿಗಿಂತ ಹೆಚ್ಚಿನ ವೋಟುಗಳನ್ನು ಪಡೆದುಕೊಳ್ಳಲೇ ಇಲ್ಲ.

ಅದೇನೇ ಇರಲಿ, 1980ರಲ್ಲಿ ತುರ್ತುಸ್ಥಿತಿಯ ನಂತರ, ಜನತಾ ಪರ್ವದ ಅವಸಾನದ ನಂತರ ಭಾರತೀಯ ಜನತಾ ಪಕ್ಷವಾಗಿ ಅವತಾರವೆತ್ತಿದ ಬಿಜೆಪಿ ಕರ್ನಾಟಕದಲ್ಲಿ 1983ರಲ್ಲಿ ಶೇ. 7.83ರಷ್ಟು ವೋಟುಗಳನ್ನು ಪಡೆದು 18 ಸೀಟುಗಳನ್ನು ಪಡೆಯಿತು. ಆನಂತರ 1985ರ ಚುನಾವಣೆಯಲ್ಲಿ ಮತ್ತೆ ಕುಸಿಯಿತು. ಆದರೆ 1989ರ ಚುನಾವಣೆಯಲ್ಲಿ ಶೇ. 4ರಷ್ಟು ವೋಟುಗಳನ್ನು ಪಡೆದು 4 ಸೀಟುಗಳನ್ನು ಪಡೆದ ಬಿಜೆಪಿ ನಂತರದ ದಶಕಗಳಲ್ಲಿ ರಾಜ್ಯಾದ್ಯಂತ ಮತ್ತು ದೇಶಾದ್ಯಂತ ಅನುಸರಿಸಿದ ಹಲವು ಹಂತಗಳ ಹಿಂದುತ್ವ ವಿಸ್ತರಣಾ ಯೋಜನೆಗಳ ಭಾಗವಾಗಿ ತನ್ನ ಮತಬೆಂಬಲವನ್ನು ವಿಸ್ತರಿಸಿಕೊಳ್ಳುತ್ತಾ ಹೋಯಿತು.

1994ರಲ್ಲಿ ಶೇ. 17ರಷ್ಟು ವೋಟು ಮತ್ತು 40 ಸೀಟುಗಳು, 1999ರಲ್ಲಿ ಶೇ. 20.69ರಷ್ಟು ವೋಟು ಮತ್ತು 44 ಸೀಟುಗಳು, 2004ರಲ್ಲಿ ಶೇ.28.33 ರಷ್ಟು ವೋಟುಗಳು ಮತ್ತು 79 ಸೀಟುಗಳನ್ನು ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. 2008ರಲ್ಲಿ ಶೇ. 33.86ರಷ್ಟು ವೋಟು ಮತ್ತು 110 ಸೀಟುಗಳನ್ನು ಪಡೆಯಿತು. 2013ರಲ್ಲಿ ಮೂರಾಗಿ ಛಿದ್ರಗೊಂಡರೂ ಬಿಜೆಪಿಯ ಒಟ್ಟಾರೆ ಮತಪ್ರಮಾಣ ಮಾತ್ರ ಅಷ್ಟೇ ಇತ್ತು. 2018ರಲ್ಲಿ ಶೇ. 36.2ರಷ್ಟು ವೋಟು ಮತ್ತು 104 ಸೀಟುಗಳು ಮತ್ತು 2023ರಲ್ಲಿ ಶೇ. 36ರಷ್ಟು ವೋಟುಗಳು ಹಾಗೆ ಇದ್ದರೂ ಸೀಟುಗಳು ಮಾತ್ರ 66ಕ್ಕೆ ಕುಸಿಯಿತು. ಆದರೆ 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಪಂಡಿತರ ನಿರೀಕ್ಷೆ ಮೀರಿ ಶೇ. 46 ವೋಟು ಮತ್ತು 28 ಸಂಸತ್ ಕ್ಷೇತ್ರಗಳಲ್ಲಿ 17 ಸೀಟುಗಳನ್ನು ಪಡೆದುಕೊಂಡಿತು.

ಈ ಹಿನ್ನೆಲೆಯಲ್ಲಿ ಸ್ಥೂಲವಾಗಿ ಹೇಳಬಹುದಾದರೆ 1989ರ ನಂತರ ಸಂಘಪರಿವಾರ ಮತ್ತು ಬಿಜೆಪಿ ಕರ್ನಾಟಕದಲ್ಲೂ ಮತ್ತು ದೇಶದಲ್ಲೂ ಮೂರು ಹಂತದಲ್ಲಿ ಬೆಳೆಯುತ್ತಾ ಹೋಗುತ್ತಿದೆ.

ಮೊದಲ ಹಂತ- ಗುಪ್ತ ಸೂಚಿಗಳು, ದೊಡ್ಡ ನಾಟಕಗಳು

ಮೊದಲ ಹಂತದಲ್ಲಿ ಅದು ತಾನು ಹೊಸದಾಗಿ ಪ್ರವೇಶಿಸುವ ಪ್ರದೇಶದಲ್ಲಿ ತನ್ನ ವರ್ಚಸ್ಸು ಮತ್ತು ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ತಾನು ಸಂಸ್ಕಾರಿ, ಪ್ರಾಮಾಣಿಕ ದೈವಭೀರು, ಭ್ರಷ್ಟಾಚಾರ ವಿರೋಧಿ, ದೇಶಭಕ್ತ ಪಕ್ಷವೆಂದು ಬಿಂಬಿಸಿಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಇತರ ಪಕ್ಷಗಳ ಗಣ್ಯರನ್ನು ಮತ್ತು ಸಮಾಜದ ಗಣ್ಯ ಮಾನ್ಯರನ್ನು, ಚಿತ್ರನಟರನ್ನು, ನಿವೃತ್ತ ಸೇನಾಧಿಕಾರಿ-ಅಧಿಕಾರಶಾಹಿಯನ್ನು ಸೇರಿಸಿಕೊಂಡು ತನ್ನ ಇಮೇಜನ್ನು ಗಟ್ಟಿಗೊಳಿಸಿಕೊಳ್ಳುತ್ತದೆ ಹಾಗೂ ಪ್ರಧಾನ ಧಾರೆ ಪಕ್ಷ ಅರ್ಥಾತ್ ಕಾಂಗ್ರೆಸ್‌ನಿಂದ ನಿರ್ಲಕ್ಷ್ಯಕ್ಕೊಳಗಾದ ಜಾತಿ, ಸಮುದಾಯಗಳನ್ನು ಸ್ಥಾನಮಾನ ಮತ್ತು ಆಮಿಷಗಳನ್ನು ಒಡ್ಡಿ ಆಕರ್ಷಿಸುತ್ತದೆ.

1989ರಲ್ಲಿ ಲಿಂಗಾಯತ ನಾಯಕ ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಬಂಗಾರಪ್ಪನವರನ್ನು ಮುಖ್ಯಮಂತ್ರಿ ಮಾಡಿದ ಮೇಲೆ ಲಿಂಗಾಯತರಿಗೆ ಕಾಂಗ್ರೆಸ್‌ನ ಬಗ್ಗೆ ಇದ್ದ ಅಸಮಾಧಾನ ತಾರಕಕ್ಕೆ ಹೋಗಿರುವುದನ್ನು ಅರ್ಥಮಾಡಿಕೊಂಡ ಬಿಜೆಪಿ ಕೂಡಲೇ ಯಡಿಯುರಪ್ಪನವರನ್ನು ಬಿಜೆಪಿಯ ಅಧ್ಯಕ್ಷರನ್ನಾಗಿ ಮಾಡಿ ಲಿಂಗಾಯತ ಮಠಗಳ ಒಲವನ್ನು ಕ್ರೋಡೀಕರಿಸಿತು. ಅದೇ ಕಾಲಘಟ್ಟದಲ್ಲಿ ಸಾಮಾಜಿಕ ನ್ಯಾಯದ ಹರಿಕಾರರೆಂದೇ ರಾಜ್ಯದಲ್ಲಿ ಹೆಸರಾಗಿದ್ದ ಎಲ್.ಜಿ. ಹಾವನೂರು, ಅರ್ಥಶಾಸ್ತ್ರಜ್ಞ ವೆಂಕಟಗಿರಿಗೌಡ ಇನ್ನಿತರ ಗಣ್ಯಮಾನ್ಯರನ್ನು ಬಿಜೆಪಿಗೆ ಸೇರಿಸಿಕೊಂಡಿತು. ಆ ಕಾಲಘಟ್ಟದಲ್ಲಿ ತಾನು ಕೇವಲ ಜನಪರ, ರೈತಪರ ಎಂಬ ಇಮೇಜನ್ನು ಮಾತ್ರ ಮುಂದಿಡುತ್ತಾ ತನ್ನ ಹಿಂದುತ್ವವಾದಿ ಪ್ರಚಾರವನ್ನು ಸಂಘಪರಿವಾರದ ಇತರ ಅಂಗಗಳ ಮೂಲಕ ಗುಪ್ತವಾಗಿ ಮಾಡಿಸುತ್ತಾ ಹೋಯಿತು. ಇದು ಮೊದಲ ಹಂತ.

ಈ ಮೊದಲ ಹಂತದಲ್ಲಿ ಅದರ ಕೊಮುವಾದಿ ಅಜೆಂಡಾಗಳು ಆ ಪ್ರದೇಶದಲ್ಲಿ ಜನರ ಅರಿವಿಗೆ ಬಾರದಂತೆ ನಡೆದುಕೊಳ್ಳುತ್ತದೆ. ಬಿಜೆಪಿಗೆ ಸೇರುವವರು ಕೂಡ ಕೇವಲ ಜಾತಿ-ವ್ಯಕ್ತಿ ಪ್ರತಿಷ್ಠೆ ಇತ್ಯಾದಿಗಳಿಗೆ ಮೊದಲು ಸೇರಿಕೊಳ್ಳುತ್ತಾರೆ. ಆದರೆ ಸೇರಿಕೊಂಡವರಿಗೆ ಸ್ಥಾನಮಾನ ಕೊಟ್ಟು ಉಳಿಸಿಕೊಳ್ಳುವುದು ಎಲ್ಲಾ ಪಕ್ಷಗಳು ಮಾಡುತ್ತದಾದರೂ ಬಿಜೆಪಿ ಭಿನ್ನವಾಗುವುದು ಅದರ ಆರೆಸ್ಸೆಸ್ ವ್ಯವಸ್ಥೆಯ ಕಾರಣಕ್ಕಾಗಿ.

ಎರಡನೇ ಹಂತ- ಸಮ್ಮತದ ಹಿಂದುತ್ವೀಕರಣ

ಉದಾಹರಣೆಗೆ ಒಮ್ಮೆ ಲಿಂಗಾಯತರು ಕಾಂಗ್ರೆಸ್ ವಿರೋಧದ ಕಾರಣಗಳಿಂದ ಬಿಜೆಪಿಯ ತೆಕ್ಕೆಗೆ ದೊಡ್ಡ ಮಟ್ಟದಲ್ಲಿ ಹೋದ ನಂತರ ಸಂಘಪರಿವಾರದ ಅಂಗ ಸಂಸ್ಥೆಗಳು ಲಿಂಗಾಯತ ಮಠಗಳು ಮತ್ತು ಅದರ ಮೇಲ್ವರ್ಗದ ಸಮಾಜದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಹಲವು ವಿಷಯಗಳನ್ನು ಆಧರಿಸಿ ಸಂಘಟಿಸುತ್ತದೆ. ಉದಾಹರಣೆಗೆ ವಿಶ್ವ ಹಿಂದೂ ಪರಿಷತ್ ಎಲ್ಲಾ ಲಿಂಗಾಯತ-ವೀರಶೈವ ಮಠಾಧೀಶರನ್ನು ಹಿಂದೂಗಳೆಂದು ಏಕರೂಪೀಕರಿಸಿ ಹಿಂದುತ್ವ ರಕ್ಷಣೆಗೆ ಒಂದೇ ವೇದಿಕೆಯ ಮೇಲೆ ತರುತ್ತದೆ. ನಿಧಾನವಾಗಿ ಲಿಂಗಾಯತರಲ್ಲಿ ಇದ್ದ ಬ್ರಾಹ್ಮಣ್ಯ ವಿರೋಧವನ್ನು ಮಣಿಸುತ್ತಾ ಹಿಂದೂಗಳನ್ನಾಗಿಸುತ್ತದೆ. ಸಂಘಿಗಳು ಹೊರತಂದಿರುವ ವಚನ ದರ್ಶನ ಈ ಯೋಜನೆಯ ಮುಂದುವರಿದ ಭಾಗ. ಸಮುದಾಯದ ಉದ್ಯಮಿಗಳು ಮತ್ತು ಮೇಲ್‌ವರ್ಗಗಳು ಶೈಕ್ಷಣಿಕ ಹಾಗೂ ಇತರ ಸೇವಾ ಕ್ಷೇತ್ರಗಳ ಸಾಮ್ರಾಜ್ಯಗಳನ್ನೇ ಕಟ್ಟಿಕೊಂಡು ಪ್ರಭುತ್ವದ ಬೆಂಬಲ ಮತ್ತು ಸಹಕಾರವನ್ನು ಆಶ್ರಯಿಸಿರುವುದು ಕೂಡ ಸಮುದಾಯದೊಳಗಿನ ಈ ವರ್ಗಗಳು ಕಾಯಕ-ದಾಸೋಹಗಳನ್ನು ಮರೆತು ಸ್ವಾರ್ಥ ಮತ್ತು ಆಸ್ತಿಗಳ ಪಟ್ಟಭದ್ರ ಹಿತಾಸಕ್ತಿಗಳನ್ನು ರೂಢಿಸಿಕೊಂಡು ಬ್ರಾಹ್ಮಣೀಕರಣಗೊಂಡಿವೆ.

ಈ ಎಲ್ಲದರ ಪರಿಣಾಮವಾಗಿಯೇ ಅವರು ಹಿಂದುತ್ವದ ಅಜೆಂಡಾಗಳ ಸಮ್ಮತ ವಕ್ತಾರರಾಗುತ್ತಾರೆ. ಇದು ಎರಡನೇ ಹಂತ.

ಇದೇ ಹಂತ ಈಗ ದಕ್ಷಿಣ ಕರ್ನಾಟಕದಲ್ಲಿ ವಿಶೇಷವಾಗಿ ಒಕ್ಕಲಿಗರ ನಡುವೆ ಚಾಲ್ತಿಯಲ್ಲಿದೆ. ಒಕ್ಕಲಿಗರು ಆರಾಧಿಸುವ ಆದಿ ಚುಂಚನಗಿರಿ ಮಠದ ಹಿರಿಯ ಸ್ವಾಮೀಜಿ ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷರಾಗಿದ್ದುದು ಇದೇ ಪ್ರಕ್ರಿಯೆಯ ಭಾಗ. ಅವರ ಮಠಗಳು ಸಂಸ್ಕೃತೀಕರಣ ಮತ್ತು ಬ್ರಾಹ್ಮಣೀಕರಣವಾಗಿರುವುದು ಮಾತ್ರವಲ್ಲದೆ ರಾಜಕೀಯವಾಗಿ ಬಹಿರಂಗವಾದ ನಿಲುವು ತೆಗೆದುಕೊಳ್ಳದೆ ಇದ್ದರೂ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದುತ್ವಕ್ಕೆ ಪೂರಕವಾಗಿಯೇ ಕೆಲಸ ಮಾಡುತ್ತಿವೆ. ಉರಿಗೌಡ-ನಂಜೇಗೌಡ ವಿಷಯದಲ್ಲಿ ಪ್ರಭಾವಿ ಕಾಂಗ್ರೆಸ್ ಮತ್ತು ಜೆಡಿಎಸ್ ಹಿರಿಯ ಒಕ್ಕಲಿಗ ನಾಯಕರು ಸ್ಪಷ್ಟ ನಿಲುವು ತೆಗೆದುಕೊಂಡಿದ್ದರಿಂದ ಆದಿ ಚುಂಚನಗಿರಿ ಮಠವೂ ಇದರ ಬಗ್ಗೆ ನಿಲುವು ತೆಗೆದುಕೊಂಡಿತಾದರೂ, ಮೋದಿಯ ಬಗ್ಗೆ, ಹಿಂದುತ್ವದ ಬಗ್ಗೆ ಮಠದ್ದು ಮತ್ತು ಒಕ್ಕಲಿಗ ಸಮುದಾಯದ ಪ್ರತಿಷ್ಠಿತರದ್ದು ಈಗಲೂ ಬಹಿರಂಗವಾದ ಮೃದು ನಿಲುವು. ಪಠ್ಯಪರಿಷ್ಕರಣೆ ಸಂದರ್ಭದಲ್ಲಿ ಲಿಂಗಾಯತ ಮಠಗಳು ಬಸವಣ್ಣನ ಬಗ್ಗೆ, ಒಕ್ಕಲಿಗ ಮಠಗಳು ಕುವೆಂಪು ಬಗ್ಗೆ ಮಾತಾಡಿದವು ಮತ್ತು ಅದನ್ನು ಪರಿಷ್ಕರಿಸಿದ ನಂತರ ಸುಮ್ಮನಾದವು. ಆದರೆ ಟಿಪ್ಪುವಿನ ಪಠ್ಯ ಹಾಗೂ ಟಿಪ್ಪು ನೆನಪುಗಳ ಮೇಲೆ ನಿರಂತರವಾಗಿ ಬಿಜೆಪಿ ಮಾಡುತ್ತಿದ್ದ ದಾಳಿಗಳನ್ನು ಇವರು ಯಾರೂ ಖಂಡಿಸಲಿಲ್ಲ.

ಇದು ಹಿಂದುತ್ವೀಕರಣ ಎರಡನೇ ಹಂತದ ಮತ್ತೊಂದು ಉದಾಹರಣೆ. ಇದರ ಪರಿಣಾಮವಾಗಿಯೇ ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರು ಕಳೆದ ಚುನಾವಣೆಗಳಲ್ಲಿ ಮೊದಲಿಗಿಂತ ಹೆಚ್ಚಿನ ವೋಟುಗಳನ್ನು ಬಿಜೆಪಿಗೆ ಹಾಕಿರುವುದು ಕಾಕತಾಳೀಯವಲ್ಲ. 2024ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ ಅಧಿಕೃತ ಹೊಂದಾಣಿಕೆ ಮಾಡಿಕೊಂಡ ನಂತರದಲ್ಲಿ ಒಕ್ಕಲಿಗ ಸಮುದಾಯದ ಹಿಂದುತ್ವೀಕರಣ ಹಾಗೂ ಸಂಘೀಕರಣ ತೀವ್ರಗತಿಯನ್ನು ಪಡೆದುಕೊಂಡಿದೆ. ಅದಕ್ಕೆ ಒಕ್ಕಲಿಗ ಸ್ತರದಲ್ಲಿ ಇರುವ ದಲಿತ ಮತ್ತು ಮುಸ್ಲಿಮರ ಬಗ್ಗೆ ಇದ್ದ ಗುಪ್ತ ಅಸಹನೆ ಮತ್ತು ಅನುಮಾನಗಳೂ ಭೂಮಿಕೆ ಒದಗಿಸಿವೆ.

ಮೂರನೇ ಹಂತ- ಉಗ್ರಗಾಮಿ ಹಿಂದುತ್ವ

ಇನ್ನು ಮೂರನೇ ಹಂತ ಕರಾವಳಿಯಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ನಾವು ನೋಡುತ್ತಿರುವ ವಿದ್ಯಮಾನ. ಈ ಹಂತದಲ್ಲಿ ಸಾಮಾನ್ಯವಾಗಿ ಎಂಥದ್ದೇ ಭ್ರಷ್ಟಾಚಾರ, ಅನ್ಯಾಯಗಳು, ಬದುಕಿನ ಸಮಸ್ಯೆಗಳು, ಮಾನವತೆಯನ್ನು ಬೆಚ್ಚಿಬೀಳಿಸುವ ಕ್ರೌರ್ಯಗಳು ಹಿಂದುತ್ವದ ದ್ವೇಷ ರಾಜಕಾರಣಕ್ಕೆ ಬಲಿಬಿದ್ದವರನ್ನು ಎಚ್ಚರಿಸಲಾರದಷ್ಟು ಜನರನ್ನು ಕುರುಡಾಗಿಸುತ್ತವೆ. ಕರಾವಳಿಯಲ್ಲಿ ಬಿಜೆಪಿಗೆ 2023ರಲ್ಲಿ ಮತ್ತು 2024ರಲ್ಲಿ ಸಾಪೇಕ್ಷವಾಗಿ ಕಡಿಮೆಯಾದ ವೋಟುಗಳು ತಾವು ಬಯಸುವಷ್ಟು ಬಿಜೆಪಿ ಉಗ್ರ ಹಿಂದುತ್ವವಾದಿ ಆಗಿಲ್ಲ ಎಂಬ ಅಸಮಾಧಾನದ ದ್ಯೋತಕವೇ ವಿನಾ ಕರಾವಳಿ ಸೆಕ್ಯುಲರ್ ಆದ ದ್ಯೋತಕವಲ್ಲ.

ಹೀಗೆ ಬಿಜೆಪಿಯ ಒಂದನೇ ಹಂತದಿಂದ, ಎರಡನೇ ಹಂತಕ್ಕೆ, ಎರಡನೇ ಹಂತದಿಂದ ಮೂರನೇ ಹಂತಕ್ಕೆ ಸರಾಗವಾಗಿ ಬೆಳೆಯುತ್ತಿರುವುದರಿಂದಲೇ ಅದರ ವೋಟು ಶೇರು ಕೂಡ ಸ್ಥಿರವಾಗಿ ಬೆಳೆಯುತ್ತಿದೆ ಹಾಗೂ ಕೋಮುವಾದದ ವಿರುದ್ಧ ಕರ್ನಾಟಕದಲ್ಲಿ ಅಲ್ಲಲ್ಲಿ ಪ್ರಜಾತಂತ್ರವಾದಿಗಳು ಎಂದಿನಂತೆ ನಡೆಸಿದ ಪ್ರತಿಭಟನೆಗಳನ್ನು ಹಾಗೂ ದಲಿತರು ಮತ್ತು ಮುಸ್ಲಿಮರು ತೋರಿದ ಪ್ರತಿರೋಧಗಳನ್ನು ಹೊರತುಪಡಿಸಿ ಎದ್ದು ಕಾಣುವಂಥ ವಿಶೇಷವಾದ ವಿರೋಧವೇನೂ ವ್ಯಕ್ತವಾಗಿರಲಿಲ್ಲ.

ಕರ್ನಾಟಕದಲ್ಲಿ ಸಂಘೀ ರಾಜಕಾರಣ ಕಿತ್ತೂರು ಹಾಗೂ ಮಧ್ಯ ಕರ್ನಾಟಕದಲ್ಲಿ ಎರಡನೇ ಹಂತವನ್ನು ತಲುಪಿ ಮೂರನೇ ಹಂತದ ಕಡೆ ಧಾವಿಸುತ್ತಿದೆ. ಕರಾವಳಿ ಮೂರನೇ ಹಂತದಲ್ಲಿದೆ.

ಬೆಂಗಳೂರು, ಕಲ್ಯಾಣ ಮತ್ತು ದಕ್ಷಿಣ ಕರ್ನಾಟಕಗಳಲ್ಲಿ ಮೊದಲ ಹಂತದಿಂದ ರಭಸವಾಗಿ ಎರಡನೇ ಹಂತಕ್ಕೆ ಧಾವಿಸುತ್ತಿದೆ. ಶ್ರೀರಂಗಪಟ್ಟಣ, ಕೆರೆಗೋಡು, ಈಗ ನಾಗಮಂಗಲ ಅದಕ್ಕೆ ಉದಾಹರಣೆಗಳು.

ಮೊದಲನೇ ಹಂತದಲ್ಲಿ ಅದು ಜಾತಿ, ಪ್ರತಿಷ್ಠೆ, ಪಕ್ಷಾಂತರ ಎಲ್ಲವನ್ನು ಬಳಸಿಕೊಂಡು ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತದೆ. ಕೂಡಲೇ ಎರಡನೇ ಹಂತದ ಹಿಂದುತ್ವೀಕರಣವನ್ನು ಪ್ರಾರಂಭಿಸುತ್ತದೆ. ಹೀಗಾಗಿ ಮೇಲ್ನೋಟಕ್ಕೆ ಕರಾವಳಿಯಷ್ಟು ಕೋಮು ಧ್ರುವೀಕರಣವು ದಕ್ಷಿಣ ಕರ್ನಾಟಕದಲ್ಲಿ ಕಾಣದಿದ್ದರೂ ಅದು ಅದೇ ಪ್ರಕ್ರಿಯೆಯ ಮೊದಲ ಹಂತ ಎಂಬುದನ್ನು ಮರೆಯಬಾರದು. ಹೀಗಾಗಿ ದಕ್ಷಿಣ ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲೂ, ಬಿಜೆಪಿ ಠೇವಣಿ ಕಳೆದುಕೊಂಡಿರುವ ಕಡೆಗಳಲ್ಲೂ ಬಿಜೆಪಿಯ ವೋಟು ಶೇರು ಹೆಚ್ಚಾಗಿರುವುದು ಮತ್ತು ಅಲ್ಲೆಲ್ಲಾ ಹಿಂದುತ್ವೀಕರಣದ ಎರಡನೇ ಹಂತದ ಛಾಯೆಗಳು ಕಾಣುತ್ತಿರುವುದು, ಪ್ರಜಾತಂತ್ರವಾದಿಗಳಲ್ಲಿ ಆತಂಕ ಹುಟ್ಟಿಸಬೇಕೇ ವಿನಾ ಸಮಾಧಾನವನ್ನಲ್ಲ. ಮಂಡ್ಯ ಭಾಗದಲ್ಲಿ ಯೋಜಿತವಾಗಿ ನಡೆಯುತ್ತಿರುವ ಕೋಮು ಗಲಭೆಗಳಾದರೂ ಆ ಹುಸಿ ಸಮಾಧಾನವನ್ನು ಒಡೆದು ಹಾಕಬೇಕು.

ಸಂಘೀ ಫ್ಯಾಶಿಸಂ ಅಜೇಯವಲ್ಲ- ಆದರೆ ಜನಸಂಘಟನೆಗೆ ಪರ್ಯಾಯವಿಲ್ಲ

ಅದರ ಅರ್ಥ ಬಿಜೆಪಿ ಅಜೇಯವೆಂದಲ್ಲ. ಆದರೆ ಕಾಂಗ್ರೆಸ್‌ನ ರಾಜಕಾರಣ, ಸಿದ್ಧಾಂತ ಮತ್ತು ಸಂಘಟನೆಗಳಿಗೆ-ರಾಹುಲ್ ಕಾಲದಲ್ಲೂ-ಸಂಘೀ ಹಿಂದುತ್ವವನ್ನು ಸೋಲಿಸುವುದಿರಲಿ ಎದುರಿಸುವ ಇರಾದೆಯೂ ಇಲ್ಲವೆಂಬುದು ಕಳೆದ ಒಂದೊವರೆ ವರ್ಷದ ಕಾಂಗ್ರೆಸ್ ಆಡಳಿತ ಮತ್ತಷ್ಟು ಸ್ಪಷ್ಟ ಪಡಿಸಿದೆ. ಹಾಗೆ ನೋಡಿದರೆ ಕಾಂಗ್ರೆಸ್‌ನ ರಾಜೀವಾದಿ, ಮೃದು ಹಿಂದುತ್ವವಾದಿ ರಾಜಕಾರಣವೇ ಸಂಘಿ ಕೋಮುವಾದ ಮಾನ್ಯತೆ ಮತ್ತು ಬಲವನ್ನು ತಂದುಕೊಟ್ಟಿರುವುದು ಐತಿಹಾಸಿಕ ಸತ್ಯ.

ಏಕೆಂದರೆ ಫ್ಯಾಶಿಸಂ ಹುಟ್ಟುವುದು ಕೇವಲ ಸಾಂಸ್ಕೃತಿಕ ಕಾರಣಗಳಿಂದಲ್ಲ. ಅದರ ಮೂಲವಿರುವುದು ಜನರ ಬದುಕಿನ ಸಂಕಷ್ಟಗಳನ್ನು ಹಾಗೂ ಆತಂಕಗಳನ್ನು ಹೆಚ್ಚಿಸುವ ಆರ್ಥಿಕ-ಸಾಮಾಜಿಕ ನೀತಿಗಳಲ್ಲಿ. ಕಾಂಗ್ರೆಸ್-ಬಿಜೆಪಿ ಎಲ್ಲರೂ ಸ್ವರ ಸಮ್ಮತಿಯಿಂದ ಜಾರಿಗೆ ತಂದಿರುವ ಕಾರ್ಪೊರೇಟ್ ಕ್ರೋನಿ ನವ ಉದಾರವಾದಿ ಆರ್ಥಿಕ ನೀತಿಗಳು, ಬ್ರಾಹ್ಮಣಶಾಹಿ ಸಾಮಾಜಿಕ ನೀತಿಗಳು ಬಹುಸಂಖ್ಯಾತ ಜನರ ಬಿಕ್ಕಟ್ಟು ಮತ್ತು ಆತಂಕಗಳನ್ನು ಹೆಚ್ಚಿಸಿ ಫ್ಯಾಶಿಸ್ಟರಿಗೆ ಹೆದ್ದಾರಿ ತೆರೆದು ಕೊಡುತ್ತಿದೆ. ಇವುಗಳನ್ನು ಆಮೂಲಾಗ್ರವಾಗಿ ಜನಮುಖಿಯಾಗಿ ಸಮಾಜವಾದಿಯಾಗಿ ಬದಲಿಸದೆ ಫ್ಯಾಶಿಸ್ಟರ ಬೆಳವಣಿಗೆ ತಡೆಯಲಾಗುವುದಿಲ್ಲ. ತಡೆದರೂ ಅದು ಕೇವಲ ತಾತ್ಕಾಲಿಕ ಮಾತ್ರ.

ಹೀಗಾಗಿ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿ ವ್ಯವಸ್ಥೆಯನ್ನು ಬದಲಿಸುವ ಪ್ರಬಲವಾದ, ದಮನಿತ ಜನರಲ್ಲಿ ಬೇರುಬಿಟ್ಟ ಪ್ರಜಾತಾಂತ್ರಿಕ ಚಳವಳಿಯ ಮೂಲಕ ಮಾತ್ರ ಹಿಂದುತ್ವ ಫ್ಯಾಶಿಸಂ ಅನ್ನು ಸೋಲಿಸಲು ಸಾಧ್ಯ.

ಆದರೆ ದುರದೃಷ್ಟವಶಾತ್ ಇಂತಹ ಚಳವಳಿಯನ್ನು ಮಾಡುತ್ತಾ ಬಂದಿದ್ದ ಎಡಪಕ್ಷಗಳು ಈಗ ಏದುಸಿರು ಬಿಡುತ್ತಿವೆ. ಅವುಗಳ ಗಟ್ಟಿ ನೆಲೆಯಿದ್ದ ಪ್ರದೇಶದಲ್ಲಿ ಇಂದು ಎಡಪಕ್ಷಗಳಿಗಿಂತ ಹತ್ತಾರು ಪಟ್ಟು ಹೆಚ್ಚು ವೋಟುಗಳನ್ನು ಬಿಜೆಪಿ ಪಡೆಯುತ್ತಿದೆ.

ಮತ್ತೊಂದು ಕಡೆ ಕರ್ನಾಟಕದ ಯಾವ ಜನಚಳವಳಿಗಳಿಗೂ ಲಕ್ಷಾಂತರ ಜನರನ್ನು ಸಂಘಟಿಸಿ ಸರಕಾರಕ್ಕೆ ಮತ್ತು ಸಂಘೀ ಫ್ಯಾಶಿಸಂಗೆ ಸವಾಲು ಹಾಕುವ ಸಾಮರ್ಥ್ಯ ಈಗ ಉಳಿದಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಮಾತ್ರವಲ್ಲ ಕಾಂಗ್ರೆಸ್ ಸರಕಾರದ ಅವಧಿಯಲ್ಲೂ ಸಹ ಫ್ರೀಡಂ ಪಾರ್ಕ್ ನಿರ್ಬಂಧವನ್ನು ಮುರಿದು ಗಟ್ಟಿ ಹೋರಾಟವನ್ನು ಮಾಡಿ ಸರಕಾರವನ್ನು ಮಣಿಸುವಷ್ಟು ಪ್ರತಿರೋಧ ಶಕ್ತಿ ತೋರಿದ ಹೋರಾಟಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಇದು ಯಾರ ವಿಮರ್ಶೆಯೂ ಅಲ್ಲ. ಸಾಮೂಹಿಕ ಆತ್ಮ ವಿಮರ್ಶೆ.

ಹೀಗಾಗಿ ಎಲ್ಲಿಯ ತನಕ ಒಂದು ಬಲವಾದ ಜನಚಳವಳಿ ಕಟ್ಟುತ್ತಾ ಜನರಲ್ಲಿ ತಲೆಯಲ್ಲಿರುವ ಹಿಂದುತ್ವವನ್ನು ತೆಗೆದು ಒಂದು ನೈಜ ಪ್ರಜಾತಾಂತ್ರಿಕ ಆಶಯಗಳುಳ್ಳ ನಾವು ಈ ದೇಶದ ಜನತೆಯನ್ನು ಕಟ್ಟಲಾಗುವುದಿಲ್ಲವೋ, ಅಲ್ಲಿಯವರೆಗೆ ಹಿಂದುತ್ವಕ್ಕಿರಲಿ ಬಿಜೆಪಿಗೂ ಚುನಾವಣಾ ಸೋಲಿರುವುದಿಲ್ಲ. ಇದ್ದರೂ ಅದು ಕೇವಲ ತಾತ್ಕಾಲಿಕ. ಅದೇ ಸಮಕಾಲೀನ ಸತ್ಯ.

ನಾಗಮಂಗಲದ ಕೋಮು ಗಲಭೆ ಮತ್ತೊಮ್ಮೆ ಅ ಎಚ್ಚರಿಕೆಯನ್ನು ನೀಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ಶಿವಸುಂದರ್

contributor

Similar News