ಉತ್ತರ ವರ್ಸಸ್ ದಕ್ಷಿಣವೋ ಅಥವಾ ಬಂಡವಾಳಶಾಹಿ ವರ್ಸಸ್ ಭಾರತವೋ?

ಉತ್ತರ ವರ್ಸಸ್ ದಕ್ಷಿಣ ಎಂಬ ಬೈನರಿಗಳನ್ನು ಆಳುವವರ್ಗ ಉದ್ದೇಶ ಪೂರ್ವಕವಾಗಿ ಹೆಚ್ಚಿಸುತ್ತಿರುವ ಈ ಸಂದರ್ಭದಲ್ಲಿ ಮೇಲಿನ ಅಧ್ಯಯನದಲ್ಲಿರುವ ಅಂಶಗಳನ್ನು ಗಮನಿಸದಿದ್ದರೆ ಭಾರತದೊಳಗಿನ ಅಸಮ ಅಭಿವೃದ್ಧಿಯ ಬಗ್ಗೆ ನಮ್ಮ ಗ್ರಹಿಕೆ ಅಪೂರ್ಣವಾಗುತ್ತದೆ ಮಾತ್ರವಲ್ಲ, ಒಕ್ಕಣ್ಣ ನೋಟವೂ ಆಗುತ್ತದೆ ಹಾಗೂ ದುರಭಿಮಾನಿ ರಾಷ್ಟ್ರೀಯತಾ ವಾದಕ್ಕೂ ಎಡೆ ಮಾಡಿಕೊಡಬಹುದು. ವಾಸ್ತವದಲ್ಲಿ ಈ ಅಂಶವನ್ನು ದಕ್ಷಿಣದ ಧ್ವನಿಗಳು ಉಪೇಕ್ಷೆ ಮಾಡುತ್ತಿರುವುದರಿಂದಲೇ... ದಕ್ಷಿಣದ ಧ್ವನಿಗಳ ವಿರುದ್ಧ ಉತ್ತರವನ್ನು ಎತ್ತಿ ಕಟ್ಟಲು ಬಿಜೆಪಿ ಈ ಅಂಶವನ್ನು ಬಳಸಿಕೊಳ್ಳಲು ಪ್ರಾರಂಭಿಸಿದೆ. ಇದು ಅಪಾಯಕಾರಿ.

Update: 2024-10-02 05:51 GMT
Editor : Thouheed | Byline : ಶಿವಸುಂದರ್

ಕರ್ನಾಟಕಕ್ಕೆ ಹಾಗೂ ದಕ್ಷಿಣ ರಾಜ್ಯಗಳಿಗೆ ಮೋದಿ ಸರಕಾರ ಮಾಡುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕಿರುವುದು ಇಂದಿನ ತುರ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೂ ಅದೇ ಸಮಯದಲ್ಲಿ ಡಿಲಿಮಿಟೇಶನ್ ಆದ ನಂತರ ಭಾರತದ ರಾಜಕಾರಣದಲ್ಲಿ ದಕ್ಷಿಣದ ರಾಜಕೀಯ ಪ್ರಭಾವ ಇನ್ನಷ್ಟು ಕಡಿಮೆ ಆಗುವುದರ ಬಗ್ಗೆಯೂ ಆತಂಕಕ್ಕೆ ಸಾಕಷ್ಟು ಕಾರಣಗಳಿವೆ.

ಆದರೆ ಈ ತಾರತಮ್ಯದ ಮೂಲ ಕಾರಣಗಳೇನು ಮತ್ತು ಅಸಲಿ ಫಲಾನುಭವಿಗಳು ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳದಿದ್ದರೆ ಶತ್ರುಗಳನ್ನು ಸ್ನೇಹಿತರೆಂದೂ, ಸ್ನೇಹಿತರನ್ನು ಶತ್ರುಗಳೆಂದೂ ಭಾವಿಸಿಬಿಡುವ ಅಪಾಯವಿದೆ. ಅಂತಹ ಅಪಾಯಕಾರಿ ದೃಷ್ಟಿಕೋನಗಳು ಮನೆ ಮಾಡಿದಾಗ ತಾರತಮ್ಯಗಳು ಭಾವನಾತ್ಮಕ ಆಯಾಮ ಪಡೆದುಕೊಂಡು ಅಸಲಿ ಶತ್ರುಗಳಿಗೆ ಲಾಭವಾಗುತ್ತಾ ಬಂದಿರುವುದಕ್ಕೆ ಭಾರತದ ಇತಿಹಾಸದಲ್ಲಿ ನೂರಾರು ಉದಾಹರಣೆಗಳಿವೆ.

ಹೀಗಾಗಿ ದಕ್ಷಿಣದ ಬಗ್ಗೆ ಮೋದಿ ಸರಕಾರ ತೋರಿಸುತ್ತಿರುವ ತಾರತಮ್ಯಗಳ ಹಿಂದಿನ ಆಸಕ್ತಿಯೇನು? ಭಾರತದ ಅಭಿವೃದ್ಧಿ ಇತಿಹಾಸದಲ್ಲಿ ಸ್ವಾತಂತ್ರ್ಯ ಪೂರ್ವ ದಲ್ಲಿ ಮತ್ತು ಸ್ವಾತಂತ್ರ್ಯಾನಂತರದಲ್ಲಿ ಕೆಲವು ರಾಜ್ಯಗಳು ಮಾತ್ರ ಸಾಪೇಕ್ಷವಾಗಿ ಮುಂದವರಿದಿರುವುದಕ್ಕೆ ದಕ್ಷಿಣ ರಾಜ್ಯಗಳ ಸರಕಾರಗಳು ಹಾಗೂ ಮುಂಚೂಣಿ ನಾಯಕರು ವಾದಿಸುವಂತೆ ಅಲ್ಲಿನ ಸರಕಾರಗಳ ಪ್ರಗತಿಪರ ಧೋರಣೆಗಳು ಕಾರಣವೇ? ಹಾಗಿದ್ದಲ್ಲಿ ಉತ್ತರದ ಬಿಹಾರ-ಉತ್ತರ ಪ್ರದೇಶಗಳಿಗೆ ಹೋಲಿಸಿದಲ್ಲಿ ಅಭಿವೃದ್ಧಿ ಹೊಂದಿರುವ ದಕ್ಷಿಣ ರಾಜ್ಯಗಳ ಹಲವು ಭಾಗಗಳು ಬಿಹಾರ ಹಾಗೂ ಉತ್ತರ ಪ್ರದೇಶಗಳಂತೆಯೇ ಇರುವುದು ಏಕೆ?

ಮೋದಿ ಸರಕಾರದಲ್ಲಿ ಎದ್ದು ಕಾಣುತ್ತಿರುವ ತಾರತಮ್ಯಗಳು ದಕ್ಷಿಣದಿಂದ ಕಿತ್ತು ಉತ್ತರವನ್ನು ಬೆಳೆಸಬೇಕು ಎಂಬ ಉತ್ತರ ಪಕ್ಷಪಾತಿ ಧೋರಣೆಯಿಂದ ಪ್ರೇರಿತವಾಗಿದೆಯೇ? ಹಾಗಿದ್ದಲ್ಲಿ ಉತ್ತರ ಭಾರತದ ಸಾಮಾನ್ಯ ಜನರು ಈ ‘ಪಕ್ಷಪಾತ’ದಿಂದ ಲಾಭ ಪಡೆದಿದ್ದಾರೆಯೇ ಅಥವಾ ಅದೊಂದು ಕೇವಲ ಕಲ್ಪಿತ ಆವೇಶವೇ? ಅಸಲು ಪ್ರಾದೇಶಿಕ ತಾರತಮ್ಯದ ಮೂಲ ಪ್ರಾದೇಶಿಕ ಪಕ್ಷಪಾತವೋ? ಲಾಭಕೋರ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯ ಪರಿಣಾಮವೋ?

ಈ ಪ್ರಶ್ನೆಗಳಿಗೆ ಪಡೆದುಕೊಳ್ಳುವ ಸರಿಯಾದ ಉತ್ತರಗಳು ಮಾತ್ರ ಪ್ರಾದೇಶಿಕ ತಾರತಮ್ಯ ಮತ್ತು ಅಸಮತೋಲನಗಳಿಂದ ನೈಜ ಪರಿಹಾರಗಳನ್ನು ಒದಗಿಸಬಲ್ಲದು. ಇಲ್ಲವಾದಲ್ಲಿ ಭಾವಾವೇಶದ ಕಥನಗಳು ಮಹಾರಾಷ್ಟ್ರದಲ್ಲಿ ಶಿವಸೇನೆ ಮಾಡಿದಂತೆ ಪ್ರಾದೇಶಿಕ ದುರಭಿಮಾನ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟು ಎಲ್ಲಾ ತಾರತಮ್ಯಗಳನ್ನು ಮುಂದುವರಿಯಲು ಕಾರಣವಾಗಬಹುದು.

ವಸಾಹತುಶಾಹಿ ಆರ್ಥಿಕತೆ ಮತ್ತು ಆಂತರಿಕ ವಸಾಹತುಗಳು

ವಾಸ್ತವದಲ್ಲಿ ಭಾರತವು ಸ್ವಾತಂತ್ರ್ಯಾನಂತರ ಅನುಸರಿಸಿದ ಬಂಡವಾಳ ಶಾಹಿ/ಪ್ರಭುತ್ವ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯಲ್ಲೇ ಪ್ರಾದೇಶಿಕ ತಾರತಮ್ಯದ ಬೀಜಗಳು ಅಡಕವಾಗಿದ್ದವು ಮತ್ತು ಅದರ ಮೂಲ ಬ್ರಿಟಿಷ್ ವಸಹಾತುಶಾಹಿಗಳು ಹಾಕಿಕೊಟ್ಟ ವಸಾಹತುವಾದಿ ಬಂಡವಾಳ ಶಾಹಿ ಅಭಿವೃದ್ಧಿ ಮಾದರಿ...

ಉದಾಹರಣೆಗೆ:

ಬ್ರಿಟಿಷರು ಇಡೀ ಭಾರತವನ್ನು ಬ್ರಿಟನ್‌ನ ಬಂಡವಾಳಶಾಹಿ ಉದ್ಯಮಕ್ಕೆ ಅಗ್ಗದ ಕಚ್ಚಾವಸ್ತುಗಳನ್ನು ಪೂರೈಸುವ ವಸಾಹತುವಾಗಿ ಭಾರತವನ್ನು ಪುನರ್ ರೂಪಿಸಿದರು. ನಂತರದಲ್ಲಿ ಅಗ್ಗದ ಕಚ್ಚಾವಸ್ತು ಮತ್ತು ಅಗ್ಗದ ಶ್ರಮವನ್ನು ಇಲ್ಲಿಯೇ ಬಳಸಿ ಉತ್ಪಾದಿಸಿ ಜಗತ್ತಿಗೆ ರಫ್ತು ಮಾಡುವ ಉದ್ದೇಶದಿಂದ ತಮ್ಮ ವಸಾಹತುಶಾಹಿ-ಬಂಡವಾಳಶಾಹಿ ಉದ್ಯಮಗಳಿಗೆ ಅನುಕೂಲವಾಗಿ ಕೆಲವು ಪ್ರದೇಶಗಳನ್ನು ಮಾತ್ರ ಬೆಳೆಸಿದರು. ಪ್ರಧಾನವಾಗಿ ಸರಕು ಸಾಗಾಟಕ್ಕೆ ಸಲೀಸಾಗಿದ್ದ ಕಡಲ ತೀರಗಳನ್ನು ರಾಜಧಾನಿಯಾಗಿ ಹೊಂದಿದ್ದ ಮದ್ರಾಸ್ ಪ್ರೆಸಿಡೆನ್ಸಿ, ಬಾಂಬೆ ಪ್ರೆಸಿಡೆನ್ಸಿ ಹಾಗೂ ಕೋಲ್ಕತಾ ಕೇಂದ್ರದ ಬಂಗಾಳ ಪ್ರೆಸಿಡೆನ್ಸಿ ಪ್ರದೇಶಗಳು ಉಳಿದ ಪ್ರದೇಶಗಳಿಗಿಂತ ಹೆಚ್ಚಿನ ವಸಾಹತುಶಾಹಿ ಅಭಿವೃದ್ಧಿ ಕಂಡವು. ಇದರ ಭಾಗವಾಗಿಯೇ ಆ ಪ್ರದೇಶಗಳ ಮೇಲ್ಜಾತಿ-ಬಲಿಷ್ಠ ಸಮುದಾಯಗಳು ಆಡಳಿತ ಮತ್ತು ಶಿಕ್ಷಣಗಳ ಲಾಭ ಪಡೆದು ಉಳಿದ ಪ್ರದೇಶಗಳ ಜನರಿಗಿಂತ ‘ಮುಂದುವರಿದರು’.

ಆ ಪ್ರದೇಶಗಳಲ್ಲಿ ತಮ್ಮ ಲಾಭ ಹೆಚ್ಚಿಸಿಕೊಳ್ಳಲು ರೈಲು, ರಸ್ತೆ, ಶಿಕ್ಷಣ, ನೌಕರಶಾಹಿ ಬೆಳೆಸಿದರು. ತಮ್ಮ ವಸಾಹತು ಅಧಿಕಾರ ಬಳಸಿ ಈ ಪ್ರದೇಶಗಳಿಗೆ ಅಗ್ಗದ ಕಾರ್ಮಿಕರನ್ನೂ ತಂದರು. ಖನಿಜ ಮತ್ತಿತರ ಸಂಪನ್ಮೂಲಗಳನ್ನು ಹೊತ್ತು ಹಾಕಿದರು.

ಆದರೆ....

ಸ್ವಾತಂತ್ರ್ಯಾನಂತರದಲ್ಲಿ ಈ ವಸಾಹತುವಾದಿ ಬಂಡವಾಳಶಾಹಿ ಅಭಿವೃದ್ಧಿ ಮಾದರಿ ಬದಲಾಗಿ ಆಯಾ ಪ್ರದೇಶಗಳಲ್ಲಿ ಲಭ್ಯವಿದ್ದ ಸಂಪನ್ಮೂಲಗಳ ಮೇಲೆ ಅಲ್ಲಿನ ಜನರ ಒಡೆತನ ಖಾತರಿಯಾಗಬೇಕಿತ್ತು ಮತ್ತು ಅದು ಪ್ರಧಾನವಾಗಿ ಅಲ್ಲಿನ ಜನರ ಅಭಿವೃದ್ಧಿಗೆ ಬಳಕೆಯಾಗಬೇಕಿತ್ತು. ಅದಕ್ಕಾಗಿ ಸರ್ವತೋಮುಖ ಫೆಡರಲ್ ಸಮಾಜವಾದಿ ಅಭಿವೃದ್ಧಿ ರಾಜಕಾರಣ ಅಗತ್ಯವಿತ್ತು.

ಅಧಿಕಾರ ಬದಲಿಸಿದ ಸ್ವಾತಂತ್ರ್ಯ ಅಭಿವೃದ್ಧಿ ಮಾದರಿಯನ್ನು ಬದಲಿಸಿತೇ?

ಆದರೆ ಸ್ವಾತಂತ್ರ್ಯಾನಂತರವೂ ಭಾರತ ಅನುಸರಿಸಿದ್ದು ಬಂಡವಾಳಶಾಹಿ/ ಪ್ರಭುತ್ವ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯೇ. ಅದನ್ನೇ ಮಿಶ್ರ ಆರ್ಥಿಕ ವ್ಯವಸ್ಥೆಯೆಂದೂ, ಸಮಾಜವಾದಿ ಅಭಿವೃದ್ಧಿ ಮಾದರಿಯೆಂದೂ ಭಾವಿಸುತ್ತಾ ಬಂದಿರುವುದುಂಟು. ಆದರೆ ಅಧಿಕಾರ ಹಸ್ತಾಂತರವಾಗಿದ್ದು ಪ್ರಧಾನವಾಗಿ ಬಂಡವಾಳ ಶಾಹಿ-ಭೂ ಮಾಲಕ ಶಕ್ತಿಗಳಿಗೆ ಅಲ್ಲವೇ? ಹೀಗಾಗಿ ವಸಾಹತುಶಾಹಿಗಳು ಬಿಟ್ಟು ಹೋದ ಆರ್ಥಿಕ-ರಾಜಕೀಯ ಅಡಿಪಾಯಗಳು ಹೆಚ್ಚು ಬದಲಾಗಲೇ ಇಲ್ಲ... ಈವರೆಗೂ...!

ಹೀಗಾಗಿ ವಸಾಹತು ಕಾಲದ ದಕ್ಷಿಣದ ಸಾಪೇಕ್ಷಾ ಅಭಿವೃದ್ಧಿ ಮತ್ತು ಉತ್ತರದ ಅನಭಿವೃದ್ಧಿ ಎರಡೂ ಹಾಗೆಯೇ ಮುಂದುವರಿದವು.

ಸ್ವಾತಂತ್ರ್ಯಾನಂತರವೂ ದಕ್ಷಿಣವು ಉತ್ತರಕ್ಕಿಂತ ಸಾಪೇಕ್ಷವಾಗಿ ಹೆಚ್ಚು ಅಭಿವೃದ್ಧಿ ಹೊಂದಲು ಒಂದು ಕಾರಣ ಖನಿಜ ಸಂಪನ್ಮೂಲಗಳಲ್ಲಿ ಶ್ರೀಮಂತವಾಗಿದ್ದ ಪೂರ್ವ ಹಾಗೂ ಮಧ್ಯ ಭಾರತ ರಾಜ್ಯಗಳಿಗೆ ಯಾವುದೇ ಪರಿಹಾರ ಕೊಡದೆ ಆ ರಾಜ್ಯದ ಖನಿಜಗಳನ್ನು ಅಗ್ಗದ ದರದಲ್ಲಿ /ಸಬ್ಸಿಡಿ ದರಗಳಲ್ಲಿ ಈಗಾಗಲೇ ಅಭಿವೃದ್ಧಿ ಹೊಂದಿರುವ ದಕ್ಷಿಣ ರಾಜ್ಯಗಳಿಗೆ ಸರಬರಾಜು ಮುಂದುವರಿಸಿದ್ದು.

ಅದೇ ರೀತಿ ಖನಿಜ ಸಂಪನ್ಮೂಲ ಹೊಂದಿದ್ದ ಈ ರಾಜ್ಯಗಳಿಗೆ ಖನಿಜಗಳ ಹೊರ ಸಾಗಾಟದಿಂದ ಯಾವುದೇ ಲಾಭವಾಗದಂತೆ Freight Equalisation Scheme (FES) ರೂಪಿಸಿದ್ದು ಕೂಡ ಈ ರಾಜ್ಯಗಳ ಹಿಂದುಳಿದಿರುವಿಕೆಗೆ ಮತ್ತು ದಕ್ಷಿಣ ರಾಜ್ಯಗಳ ಮುಂದುವರಿಕೆಗೆ ಒಂದು ಪ್ರಮುಖ ಕಾರಣವಾಗಿ ಪರಿಣಮಿಸಿದೆ.

ಈ FES ಎಂಬ ಸ್ವತಂತ್ರ ಭಾರತದ ಪಕ್ಷಪಾತಿ ಬಂಡವಾಳಶಾಹಿ ಅಭಿವೃದ್ಧಿ ಯೋಜನೆಯಿಂದಾಗಿ ಖನಿಜ ಶ್ರೀಮಂತ ಬಿಹಾರ, ಜಾರ್ಖಂಡ್, ಒಡಿಶಾ ಇನ್ನಿತ್ಯಾದಿ ರಾಜ್ಯಗಳು ಹೇಗೆ ಲಾಭ ವಂಚಿತವಾದವು ಮತ್ತು ತಮಿಳುನಾಡು, ಆಂಧ್ರ ಇನ್ನಿತ್ಯಾದಿ ದಕ್ಷಿಣ ರಾಜ್ಯಗಳು ವಿಶೇಷ ಲಾಭವನ್ನು ಪಡೆದು ಹೇಗೆ ಸಾಪೇಕ್ಷ ಅಭಿವೃದ್ಧಿ ಹೊಂದಿದವು ಎಂಬುದನ್ನು 2018ರ ಈ ಸಂಶೋಧನಾ ಬರಹ ಸ್ಪಷ್ಟ ಪಡಿಸುತ್ತದೆ.

ಆ ಲೇಖನದ ಕೊಂಡಿ: https://barrett.dyson.cornell.edu/NEUDC/paper_316.pdf

ಉತ್ತರ ವರ್ಸಸ್ ದಕ್ಷಿಣ ಎಂಬ ಬೈನರಿಗಳನ್ನು ಆಳುವವರ್ಗ ಉದ್ದೇಶ ಪೂರ್ವಕವಾಗಿ ಹೆಚ್ಚಿಸುತ್ತಿರುವ ಈ ಸಂದರ್ಭದಲ್ಲಿ ಮೇಲಿನ ಅಧ್ಯಯನದಲ್ಲಿರುವ ಅಂಶಗಳನ್ನು ಗಮನಿಸದಿದ್ದರೆ ಭಾರತದೊಳಗಿನ ಅಸಮ ಅಭಿವೃದ್ಧಿಯ ಬಗ್ಗೆ ನಮ್ಮ ಗ್ರಹಿಕೆ ಅಪೂರ್ಣವಾಗುತ್ತದೆ ಮಾತ್ರವಲ್ಲ, ಒಕ್ಕಣ್ಣ ನೋಟವೂ ಆಗುತ್ತದೆ ಹಾಗೂ ದುರಭಿಮಾನಿ ರಾಷ್ಟ್ರೀಯತಾ ವಾದಕ್ಕೂ ಎಡೆ ಮಾಡಿಕೊಡಬಹುದು.

ವಾಸ್ತವದಲ್ಲಿ ಈ ಅಂಶವನ್ನು ದಕ್ಷಿಣದ ಧ್ವನಿಗಳು ಉಪೇಕ್ಷೆ ಮಾಡುತ್ತಿರು ವುದರಿಂದಲೇ... ದಕ್ಷಿಣದ ಧ್ವನಿಗಳ ವಿರುದ್ಧ ಉತ್ತರವನ್ನು ಎತ್ತಿ ಕಟ್ಟಲು ಬಿಜೆಪಿ ಈ ಅಂಶವನ್ನು ಬಳಸಿಕೊಳ್ಳಲು ಪ್ರಾರಂಭಿಸಿದೆ. ಇದು ಅಪಾಯಕಾರಿ.

ಪ್ರಾದೇಶಿಕ ತಾರತಮ್ಯದ ಮೂಲ ಬಂಡವಾಳಶಾಹಿ ಅಭಿವೃದ್ಧಿ ಮಾದರಿ..

ಪ್ರಾದೇಶಿಕ ತಾರತಮ್ಯದ ಮೂಲವಿರುವುದು ಬಂಡವಾಳಶಾಹಿ ಲಾಭವನ್ನು ಹೆಚ್ಚಿಸಲು ಶ್ರಮ ಹಾಗೂ ಪ್ರಾಕೃತಿಕ ಸಂಪನ್ಮೂಲಗಳನ್ನು ಅಗ್ಗದ ದರದಲ್ಲಿ ಪಡೆದುಕೊಳ್ಳಲು ಬಂಡವಾಳಶಾಹಿ ಪ್ರಭುತ್ವ ರೂಪಿಸುವ ಅಭಿವೃದ್ಧಿ ಮಾದರಿ ಮತ್ತು ಯೋಜನೆಗಳಲ್ಲಿ...ಇಡೀ ಭಾರತವನ್ನು ಒಂದೇ ಮಾರುಕಟ್ಟೆಯಾಗಿ, ಸಂಪನ್ಮೂಲಗಳ ವಸಾಹತುವಾಗಿ ಬಂಡವಾಳ ಶಾಹಿಗಳಿಗೆ ತೆರೆದಿಡುವ ರಾಜಕೀಯದಲ್ಲಿ ಮತ್ತು ಅದರ ಭಾಷಿಕ ಮತ್ತು ಸಾಂಸ್ಕೃತಿಕ ರಾಜಕಾರಣದಲ್ಲಿ...

ಆದ್ದರಿಂದಲೇ ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿರುವ ರಾಜ್ಯಗಳಲ್ಲೂ ಅಗ್ಗದ ಶ್ರಮವನ್ನು ಸರಬರಾಜು ಮಾಡುವ ಆಯಾ ರಾಜ್ಯದ ಹಿಂದುಳಿದ ಪ್ರದೇಶಗಳು ಅದೇ ರಾಜ್ಯದಲ್ಲಿರುವ ಮೆಟ್ರೊಗಳಲ್ಲಿರುವ ಉದ್ಯಮಗಳಿಗೆ ಅಗ್ಗದ ಕಚ್ಚಾವಸ್ತು ಮತ್ತು ಅಗ್ಗದ ಶ್ರಮವನ್ನು ಒದಗಿಸುವ ಆಂತರಿಕ ವಸಾಹತುಗಳಾಗಿಯೇ ಉಳಿದುಕೊಂಡಿವೆ.

ಉದಾಹರಣೆಗೆ ಕರ್ನಾಟಕವು ಉತ್ತರ ಭಾರತಕ್ಕಿಂತ ಜಿಡಿಪಿ ಮತ್ತಿತರ ಬಂಡವಾಳಶಾಹಿ ಅಭಿವೃದ್ಧಿ ಮಾನದಂಡಗಳಲ್ಲಿ ಸಾಕಷ್ಟು ಮುಂದುವರಿದಿದೆ. ಆದರೆ ಕರ್ನಾಟಕದ ಜಿಡಿಪಿಯ ಶೇ.30ಕ್ಕಿಂತ ಜಾಸ್ತಿ ಬರುವುದು ಬೆಂಗಳೂರು ನಗರದಿಂದಲೇ. ಅರ್ಥಾತ್ ಕರ್ನಾಟಕದ ಅಭಿವೃದ್ಧಿಯೆಂಬುದು ಸೀಮಿತವಾಗಿರುವುದು ಬೆಂಗಳೂರು ಮತ್ತು ಆಸುಪಾಸುಗಳಲ್ಲಿ ಮಾತ್ರ. ಏಕೆಂದರೆ ಈ ದೇಶದ ಹಾಗೂ ರಾಜ್ಯದ ಅಬಿವೃದ್ಧಿಯ ಡ್ರೈವಿಂಗ್ ಸೀಟಿನಲ್ಲಿ ಇರುವುದು ಲಾಭ ಹೆಚ್ಚಿಸಿಕೊಳ್ಳವುದೇ ಪರಮ ಉದ್ದೇಶವಾಗಿರುವ ಖಾಸಗಿ ಬಂಡವಾಳಶಾಹಿ ಶಕ್ತಿಗಳು. ಖಾಸಗಿ ಬಂಡವಾಳವು ಅತಿ ಕಡಿಮೆ ಹೂಡಿಕೆ ಮಾಡಿ ಅತಿ ಹೆಚ್ಚು ಲಾಭ ತರುವ ಅವಕಾಶಗಳನ್ನು ಹುಡುಕುತ್ತದೆ. ಅದಕ್ಕೆ ಅದು ಉತ್ತಮ ರಸ್ತೆ, ಸಂಪರ್ಕ ಇತ್ಯಾದಿ ಭೌತಿಕ ಸಂಪನ್ಮೂಲಗಳಿರುವ ಹಾಗೂ ಕೌಶಲ್ಯ, ಶಿಕ್ಷಣ ಪಡೆದಿರುವ ಮಾನವ ಸಂಪನ್ಮೂಲಗಳಿರುವ ಪ್ರದೇಶಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತದೆ. ಬಂಡವಾಳಶಾಹಿ ಪರ ಸರಕಾರವೂ ಅದಕ್ಕೆ ಪೂರಕವಾದ ಕಾನೂನುಗಳನ್ನೇ ಮಾಡುತ್ತದೆ. ಹೀಗಾಗಿ ಕರ್ನಾಟಕದಲ್ಲಿ ಬೆಂಗಳೂರು ಪ್ರದೇಶ ಅಭಿವೃದ್ಧಿ ಹೊಂದಿದರೂ, ಉಳಿದ ಪ್ರದೇಶಗಳು ಬಿಹಾರ, ಉತ್ತರ ಪ್ರದೇಶಗಳಂತೆ ಉಳಿದುಕೊಂಡಿವೆ ಮತ್ತು ಬದುಕಿನ ಸಲುವಾಗಿ ಹಿಂದುಳಿದ ಕರ್ನಾಟಕದಿಂದ ಮುಂದುವರಿದ ಬೆಂಗಳೂರಿಗೆ ಅಗ್ಗದ ದರದಲ್ಲಿ ಕಾರ್ಮಿಕರಾಗಿ ಕೆಲಸ ಮಾಡಲು ವಲಸೆ ಬರುತ್ತಲೇ ಇರುತ್ತಾರೆ. ಈ ವಲಸೆ ಕಾರ್ಮಿಕರಿಗೆ ಕಡಿಮೆ ಕೂಲಿ ಕೊಟ್ಟು ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳುವ ಬಂಡವಾಳಶಾಹಿಗಳು ತಮ್ಮ ಸಾಮರ್ಥ್ಯ, ತಾಂತ್ರಿಕ ನಿಪುಣತೆಯಿಂದ ಯಶಸ್ಸು ಪಡೆಯುತ್ತಿದ್ದೇವೆಂದು ಜನರನ್ನು ನಂಬಿಸುತ್ತಾರೆ ಹಾಗೂ ಹಿಂದುಳಿದ ಪ್ರದೇಶದ ಅಥವಾ ರಾಜ್ಯಗಳ ಹಿಂದುಳಿದಿರುವಿಕೆಗೆ ಹಿಂದುಳಿದ ಜನರ ಹಿಂದುಳಿದ ಮನಸ್ಥಿತಿಯೇ ಕಾರಣವೆಂದು ಪ್ರತಿಪಾದಿಸುತ್ತಾರೆ.

ಹೀಗಾಗಿ ಇದು ಖಾಸಗಿ ಬಂಡವಾಳಶಾಹಿ ಆಧಾರಿತ ಅಭಿವೃದ್ಧಿ ಮಾದರಿಯ ದುಷ್ಪರಿಣಾಮ. ಎಲ್ಲಿಯವರೆಗೆ ಇದನ್ನು ಬದಲಿಸಿ ಸಾರ್ವಜನಿಕ ಹೂಡಿಕೆಯ ಮೂಲಕ ಯೋಜಿತ ಸರ್ವತೋಮುಖ ಅಭಿವೃದ್ಧಿಯ ಸಮಾಜವಾದಿ ಧೋರಣೆಯ ಅಭಿವೃದ್ಧಿ ಪಥವನ್ನು ಅನುಸರಿಸುವುದಿಲ್ಲವೋ ಅಲ್ಲಿಯವರೆಗೆ ಈ ಅಸಮ ಅಭಿವೃದ್ಧಿಯನ್ನು ತಪ್ಪಿಸಲಾಗದು.

ಈ ಅಸಮ ಅಭಿವೃದ್ಧಿಯ ಬಂಡವಾಳಶಾಹಿ ಬೀಜಗಳನ್ನು ವಸಾಹತುಶಾಹಿಗಳೇ ಬಿತ್ತಿದ್ದರೂ, ಸ್ವಾತಂತ್ರ್ಯಾನಂತರವೂ ಕಾಂಗ್ರೆಸ್ ಅದನ್ನು ಮೂಲಭೂತವಾಗಿ ಬದಲಿಸದೆ ಮುಂದುವರಿಸಿತು. 1991ರ ಜಾಗತೀಕರಣ ನೀತಿಗಳ ಯುಗದಲ್ಲಿ ಈ ಅಸಮ ಅಭಿವೃದ್ಧಿ ಇನ್ನಷ್ಟು ವ್ಯವಸ್ಥಿತವಾಯಿತು ಮತ್ತು ಅದು ಈಗ ಮೋದಿ ಅವಧಿಯಲ್ಲಿ ಇನ್ನಷ್ಟು ಅತಿರೇಕಕ್ಕೆ ಹೋಗಿದೆ. ತುರ್ತಾಗಿ ಈ ಅತಿರೇಕವನ್ನು ವಿರೋಧಿಸಬೇಕೆನ್ನುವುದು ನಿಜವಾದರೂ ದೇಶದ ಅಭಿವೃದ್ಧಿಯ ದಿಕ್ಕು ಬದಲಾಗದೆ ಮೋದಿ ಕಾಲದ ವಿಶೇಷವಾದ ದಕ್ಷಿಣ ತಾರತಮ್ಯವಾಗಲೀ, ದಕ್ಷಿಣ ರಾಜ್ಯಗಳೊಳಗಿನ ಪ್ರಾದೇಶಿಕ ತಾರತಮ್ಯಗಳಾಗಲೀ ಬದಲಾಗದು.

ದಕ್ಷಿಣದ ಸುಲಿಗೆ ನಡೆದಿದೆ, ಆದರೆ ಉತ್ತರ ಅಭಿವೃದ್ಧಿಯಾಗಿದೆಯೇ?

ಖಂಡಿತಾ ಇಲ್ಲ. ಉತ್ತರದ ಸಾಮಾನ್ಯ ಜನರು ಕೂಡ ದಕ್ಷಿಣದ ಜನರಷ್ಟೇ ಈ ಅಭಿವೃದ್ಧಿ ಮಾದರಿಯ ಬಲಿಪಶುಗಳು ಅಥವಾ ಆರ್ಥಿಕತೆಯಲ್ಲಿ ಮೋದಿ ಕಾಲದಲ್ಲಿ ಉತ್ತರದ ಜನತೆ ದಕ್ಷಿಣಕ್ಕಿಂತ ಹೆಚ್ಚು ಬಲಿಪಶುಗಳಾಗಿದ್ದಾರೆ ಎಂದರೂ ತಪ್ಪಿಲ್ಲ. ಅದಕ್ಕೆ ಉತ್ತರದಿಂದ ಹೊಟ್ಟೆಪಾಡಿಗಾಗಿ ದಕ್ಷಿಣಕ್ಕೆ ಲಕ್ಷ ಲಕ್ಷ ಸಂಖ್ಯೆಗಳಲ್ಲಿ ವಲಸೆ ಬರುತ್ತಿರುವ ವಿದ್ಯಮಾನವೇ ಸಾಕ್ಷಿ. ಇದಕ್ಕೆ ಕಾರಣ ದಕ್ಷಿಣದ ಹೆಚ್ಚುವರಿ ಸುಲಿಗೆ ಉತ್ತರದ ಜನಸಾಮಾನ್ಯರ ಅಭಿವೃದ್ಧಿಗೆ ವ್ಯಯವಾಗಿಲ್ಲ. ಹೇಗೆ ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟು ಉಳಿದ ಪ್ರದೇಶಗಳು ಹಿಂದುಳಿದಿರುವುದಕ್ಕೆ ಎಲ್ಲರಂತೆ ತೆರಿಗೆ ಕಟ್ಟುವ ಕರ್ನಾಟಕದ ಇತರ ಪ್ರದೇಶಗಳ ಜನರು ಕಾರಣವಲ್ಲವೋ, ಹಾಗೆಯೇ ಉತ್ತರ ಭಾರತದ ಸಾಮಾನ್ಯ ಜನರೂ ಅಲ್ಲಿನ ಹಿಂದುಳಿದಿರುವಿಕೆಗೆ ಕಾರಣವಲ್ಲ. ಉತ್ತರ ಭಾರತದ ಜನರ ತೆರಿಗೆಯ ಹಣವೂ ಒಳಗೊಂಡಂತೆ ದಕ್ಷಿಣದಿಂದ ಹೆಚ್ಚುವರಿಯಾಗಿ ಸುಲಿಗೆ ಮಾಡಿರುವ ದುಡ್ಡನ್ನು ಮೋದಿ ಸರಕಾರ ಉದ್ಯಮಿಗಳ ಲಾಭಕೋರ ಸೌಕರ್ಯಗಳಿಗೆ ವ್ಯಯಿಸುತ್ತಿರುವುದೇ ಅವುಗಳ ಅನಭಿವೃದ್ಧಿಗೆ ಕಾರಣ.

ಹಾಗೆ ನೋಡಿದರೆ ಭಾಷೆಯ ವಿಷಯದಲ್ಲೂ ದಕ್ಷಿಣದ ಕನ್ನಡ, ತೆಲುಗು, ತಮಿಳು, ಮಲಯಾಳಂಗಳ ಮೇಲೆ ಹಿಂದಿ ಸವಾರಿ ಮಾಡುತ್ತಿದೆಯೇ ವಿನಾ ನುಂಗಿಹಾಕಿಲ್ಲ. ಆದರೆ ಹಿಂದಿ ಉತ್ತರ ಭಾರತದ ಮೈಥಿಲಿ, ಮಗಾಹಿ, ಬುಂದೇಲ್ ಖಂಡಿ ಇನ್ನಿತರ ಭಾಷೆಗಳನ್ನು ನುಂಗಿ ಹಾಕಿಯಾಗಿದೆ. ಹೀಗೆ ಹಿಂದಿ ಸಾಮ್ರಾಜ್ಯಶಾಹಿಯ ಮೊದಲ ಬಲಿಪಶುಗಳೂ ಕೊಡದ ಉತ್ತರ ಭಾರತದ ಹಲವು ಜನಪದಗಳೇ..

ಅದರ ಅರಿವು ಅವರಿಗಾಗದಂತೆ ಹಿಂದುತ್ವದ ಅಮಲು ತಡೆಯುತ್ತಿದೆ ಎಂಬುದು ಬೇರೆ ವಿಷಯ.

ಹೀಗಾಗಿ, ಇಡೀ ಭಾರತದ ಈ ಅಸಮಾನ ತಾರತಮ್ಯಪೂರಿತ ಪ್ರಾದೇಶಿಕ ಶೋಷಣೆಯ ಅತಿ ದೊಡ್ಡ ಪ್ರೇರಕರು, ಶೋಷಕರು ಮತ್ತು ಫಲಾನುಭವಿಗಳು ಕ್ರೋನಿ ಬಂಡವಾಳಶಾಹಿಗಳೇ. ಅವರೇ ಭಾರತ ಪ್ರಭುತ್ವದ ಅಸಲಿ ಸಂಚಾಲಕರು.

ಇಂದಿನ ಸಂದರ್ಭದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಈ ಕ್ರೋನಿ ಬಂಡವಾಳಶಾಹಿಗಳ ಮತ್ತು ಹಿಂದುತ್ವವಾದಿ ಸರ್ವಾಧಿಕಾರದ ಪ್ರಧಾನ ಸಾಧನಗಳು ಹಾಗೂ ಆದ್ದರಿಂದ ಭಾರತದ ಎಲ್ಲಾ ಜನರ ಪ್ರಧಾನ ಶತ್ರುಗಳು.

ಆದರೆ ಕ್ರೋನಿ ಬಂಡವಾಳಶಾಹಿಗಳ ಕೊಬ್ಬಿಸುವಲ್ಲಿ ಮತ್ತು ಭಾರತವು ಫೆಡರಲ್ ಒಕ್ಕೂಟವಾಗದೆ ಬಂಡವಾಳಶಾಹಿ ಏಕಾಧಿಪತ್ಯ ಹೆಚ್ಚುತ್ತಾ ಹೋಗುವಲ್ಲಿ ಕಾಂಗ್ರೆಸ್‌ನ ಪಾತ್ರವೂ ದೊಡ್ಡದೇ. ಏಕೆಂದರೆ ಕೇಂದ್ರೀಕೃತ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯ ವಿಷಯದಲ್ಲಿ ಕಾಂಗ್ರೆಸ್‌ಗೂ-ಬಿಜೆಪಿಗೂ ಹೆಚ್ಚು ವ್ಯತ್ಯಾಸವೇನೂ ಇಲ್ಲ. ಆಗಲೂ- ಈಗಲೂ.

ಹಾಗೂ ಕಾಂಗ್ರೆಸ್‌ನ ‘ಉದಾರವಾದಿ’ ಭಾರತೀಯ ರಾಷ್ಟ್ರವಾದದಲ್ಲೂ ಇದ್ದ ಹಿಂದೂವಾದಿ ಹಾಗೂ ಕೇಂದ್ರವಾದಿ ಧೋರಣೆಗಳೇ ಸಂಘಿಗಳ ಹಿಂದುತ್ವವಾದಿ ಏಕ ರಾಷ್ಟ್ರವಾದಿ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟಿವೆ.

ಹಾಗೆಯೇ ಈವರೆಗೆ ಅಧಿಕಾರಕ್ಕೆ ಬಂದಿದ್ದ/ಬಂದಿರುವ ಯಾವುದೇ ಪ್ರಾದೇಶಿಕ ಪಕ್ಷಗಳು ಈ ತಾರತಮ್ಯದ ಮತ್ತು ಪಕ್ಷಪಾತಿ ಅಭಿವೃದ್ಧಿ ಮಾದರಿಯನ್ನು ವಿರೋಧಿಸಿಲ್ಲ.

ಹೀಗಾಗಿ ದಕ್ಷಿಣ ರಾಜ್ಯಗಳಿಗೆ ಮತ್ತು ಜನರಿಗೆ ಆಗುತ್ತಿರುವ ತಾರತಮ್ಯಕ್ಕೆ ಕೇಂದ್ರದ ಕ್ರೋನಿ ಬಂಡವಾಳ ಶಾಹಿ ಪರ ಮತ್ತು ಹಿಂದುತ್ವವಾದಿ ನೀತಿಗಳು ಕಾರಣ. ಅದರಿಂದ ಉತ್ತರದ ಜನರಿಗೆ ಯಾವ ಲಾಭವೂ ಆಗಿಲ್ಲ.. ಆಗುವುದೂ ಇಲ್ಲ..

ಸಮಾಜವಾದಿ ಕನ್ನಡ ಅಸ್ಮಿತೆಯಿಂದ ಮಾತ್ರ ಪರಿಹಾರ

ಮುಂದೆಯೂ ಈ ವಾಸ್ತವಗಳನ್ನು ಗುರುತಿಸದ ಯಾವುದೇ ಪ್ರಾದೇಶಿಕ ಅಸ್ಮಿತೆಗಳು ಪ್ರಾದೇಶಿಕ ಸಮಾನತೆಗೆ ನ್ಯಾಯ ಒದಗಿಸುವುದಿಲ್ಲ.

ಅದೇ ರೀತಿ ಡಿಲಿಮಿಟೇಷನ್ ನಂತರದಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಸಂಸತ್ತಿನಲ್ಲಿ ಉತ್ತರ ಭಾರತದ ರಾಜಕೀಯ ಪ್ರಾತಿನಿಧ್ಯ ಹೆಚ್ಚಾಗಿ ದಕ್ಷಿಣದ ರಾಜಕೀಯ ಪ್ರಾತಿನಿಧ್ಯ ಈಗಿರುವುದಕ್ಕಿಂತ ಕಡಿಮೆಯಾಗುತ್ತದೆ. ಇದು ಉತ್ತರದ ಮೇಲೆ ದಕ್ಷಿಣದ ಆಕ್ರೋಶವನ್ನು ಹೆಚ್ಚಿಸಲು ಬಳಕೆಯಾಗುತ್ತದೆ.

1971ರಿಂದ ಸಂಸತ್ ಸದಸ್ಯರ ಸಂಖ್ಯೆ ಜನಸಂಖ್ಯೆ ಏರಿಕೆಗೆ ತಕ್ಕಂತೆ ಹೆಚ್ಚಿಲ್ಲ. ಹೀಗಾಗಿ ಅಂದು ಎಲ್ಲಾ ರಾಜ್ಯಗಳಲ್ಲೂ ತಲಾ 8-10 ಲಕ್ಷ ಜನರಿಗೆ ಒಬ್ಬ ಸಂಸದರಿದ್ದದ್ದು ಕೇರಳದಂತಹ ಜನಸಂಖ್ಯೆ ನಿಯಂತ್ರಣ ಮಾಡಿರುವ ರಾಜ್ಯಗಳಲ್ಲಿ ಈಗಲೂ 10-12 ಲಕ್ಷ ಜನರಿಗೆ ಒಬ್ಬ ಸಂಸದರಿದ್ದರೆ, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ 15-20 ಲಕ್ಷ ಜನರಿಗೆ ಒಬ್ಬ ಪ್ರತಿನಿಧಿಯಂತಾಗಿದೆ. ಇದು ಕೂಡ ಪ್ರಜಾತಂತ್ರಕ್ಕೆ ವಿರುದ್ಧವಾದದ್ದು. ಆದರೆ ಜನಸಂಖ್ಯೆಗೆ ತಕ್ಕಂತೆ ಹೆಚ್ಚಿಸಿದರೆ ಉತ್ತರ-ದಕ್ಷಿಣ ರಾಜಕೀಯ ಅಸಮತೆ ಹೆಚ್ಚುವುದೂ ನಿಜ.

ಆದರೆ ಇದಕ್ಕೆ ಪರಿಹಾರ ಉತ್ತರದ ಜನರಿಗೆ ಹೆಚ್ಚು ಪ್ರಾತಿನಿಧ್ಯ ಕೊಡಬಾರದು ಎಂಬುದರಲ್ಲಿಲ್ಲ. ಪ್ರಜಾತಾಂತ್ರಿಕ ಪ್ರಾತಿನಿಧ್ಯ ಕೊಡುತ್ತಲೇ ಅಸಮತೋಲನವಾಗದ ಪ್ರಜಾತಾಂತ್ರಿಕ ಮಾರ್ಗವನ್ನು ಹುಡುಕಬೇಕು. ಇಲ್ಲದಿದ್ದಲ್ಲಿ ಈ ಪ್ರಜಾತಾಂತ್ರಿಕ ಸಮಸ್ಯೆಯನ್ನು ಅಳುವವರ್ಗಗಳು ಪರಸ್ಪರ ಆಕ್ರೋಶ ಮತ್ತು ದುರಭಿಮಾನಕ್ಕೆ ಹಾಗೂ ಅಪ್ರಜಾತಾಂತ್ರಿಕ ಹಾಗೂ ಫ್ಯಾಶಿಸ್ಟ್ ಪರಿಹಾರಗಳಿಗೆ ಭೂಮಿಕೆಯಾಗಿಯೂ ಬಳಸಿಕೊಳ್ಳಬಲ್ಲರು.

ಆದ್ದರಿಂದ ಕೇಂದ್ರದ ಕ್ರೋನಿ ಬಂಡವಾಳಶಾಹಿ ಮತ್ತು ಹಿಂದಿ-ಹಿಂದುತ್ವ ವಾದಿ ಫ್ಯಾಶಿಸ್ಟ್ ಸರ್ವಾಧಿಕಾರದ ವಿರುದ್ಧ ಅತ್ಯಗತ್ಯವಾಗಿ ಮರುಜೀವ ಪಡೆಯಬೇಕಿರುವ ಕನ್ನಡ-ಕನ್ನಡಿಗ-ಕರ್ನಾಟಕದ ಸ್ವಾಭಿಮಾನಿ ಹೋರಾಟವು ತನ್ನ ಶತ್ರುಗಳ್ಯಾರು ಮತ್ತು ಮಿತ್ರರು ಯಾರು ಎಂಬ ಬಗ್ಗೆ ಯಾವುದೇ ಗೊಂದಲವಿಲ್ಲದೆ ಸ್ಪಷ್ಟಪಡಿಸಿಕೊಳ್ಳಬೇಕಿರುವುದೂ ಕೂಡ ತುರ್ತಿನ ವಿಷಯವಾಗಿದೆ.

ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News