ಗೌರಿ- ಬೆಂದು ಬೆಳಕಾಗುವ ಮಾದರಿ

ಬದುಕಿನ ಪಯಣದಲ್ಲಿ ವೈಯಕ್ತಿಕ, ಕೌಟುಂಬಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಬಿಕ್ಕಟ್ಟುಗಳ ಬೆಂಕಿಯಲ್ಲಿ ಬಿದ್ದಾಗಲೆಲ್ಲಾ ಆಕೆ ಅಪ್ಪಟ ಚಿನ್ನವಾಗಿ ಹೊರಬಂದಿದ್ದಾರೆ. ತಾನು ನಂಬಿದ ಮೌಲ್ಯಗಳಿಗಾಗಿ ತನ್ನ ಸ್ವಂತ ಸುಖ, ನೆಮ್ಮದಿಗಳಿಗೆ ಎರವಾಗಿದ್ದಾರೆ. ಆ ಸಮಯದಲ್ಲಿ ಆಕೆಯ ಮುಂದೆ ಮುಂದಿನ ದಾರಿಯೇನೂ ಸ್ಪಷ್ಟವಾಗಿರಲಿಲ್ಲ. ಆದರೆ ರಾಜಿ-ಅವಕಾಶವಾದಗಳ ಹಂಗಿನ ಅರಮನೆಗಿಂತ ಅನಿಶ್ಚಿತವಾದ ಆದರೆ ನ್ಯಾಯಯುತವಾದ, ತ್ಯಾಗ ಬಲಿದಾನ ಮತ್ತು ನಿತ್ಯ ಯಾತನೆಗಳಿಂದ ಕೂಡಿದ ದಾರಿಯನ್ನೇ ಆಯ್ಕೆ ಮಾಡಿಕೊಂಡರು... ಬೆಟ್ಟವೇರಿ ಕೂರದೆ ಅತ್ಯಂತ ಸಲೀಸಾಗಿ ತನ್ನನ್ನು ತಾನು ಆತ್ಮವಿಮರ್ಶೆಯ ನಿಕಷಕ್ಕೆ ಒಡ್ಡಿಕೊಂಡು ಜಗವೇ ಬೆರಗಾಗುವಂತೆ ಬದಲಾದರು....

Update: 2024-09-04 05:23 GMT
Editor : Thouheed | Byline : ಶಿವಸುಂದರ್

ನಾಳೆ ಸೆಪ್ಟಂಬರ್ -5. ದಮನಿತ ಜನರ ವಿಶ್ವಾಸದ ಸಂಗಾತಿ ಗೌರಿ ಲಂಕೇಶ್ ಹತ್ಯೆಯಾಗಿ ನಾಳೆಗೆ ಏಳು ವರ್ಷ. ಗೌರಿಯವರು ಕರ್ನಾಟಕ ಕಂಡ ದಿಟ್ಟ ಪತ್ರಕರ್ತೆ ಮಾತ್ರವಲ್ಲ. ಪತ್ರಕರ್ತರು ನಿಷ್ಪಕ್ಷಪಾತಿಯಾಗಿರಬೇಕು ಎಂಬ ಬೂಸಾ ತಿಳುವಳಿಕೆಯನ್ನು ಅವರ ತಂದೆಯಂತೆ ಲೇವಡಿ ಮಾಡುತ್ತಾ, ಅವರ ತಂದೆ ಪಿ. ಲಂಕೇಶರಿಗಿಂತ ಬದ್ಧವಾಗಿ ಮತ್ತು ಪ್ರಬುದ್ಧವಾಗಿ ಸತ್ಯ ಹಾಗೂ ನ್ಯಾಯಗಳ ಪಕ್ಷಪಾತಿಯಾಗಿ ನಿಂತ ಸತ್ಯವಾದಿ ಪತ್ರಕರ್ತೆ. ಪತ್ರಕರ್ತರು ಈ ದೇಶದ ನಾಗರಿಕರು ಎಂದಾದ ಮೇಲೆ ಈ ದೇಶದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕಾದದ್ದೇ ಪತ್ರಕರ್ತರ ವೃತ್ತಿಧರ್ಮ ಎಂದು ಗೌರಿ ಭಾವಿಸಿದ್ದರು ಮತ್ತು ಹಾಗೆಯೇ ಬದುಕಿದ್ದರು. ಅದೇ ಕಾರಣಕ್ಕೆ ಪನ್ಸಾರೆ, ದಾಭೋಲ್ಕರ್, ಪ್ರೊ. ಕಲಬುರ್ಗಿಯವರಂತೆ ಸಂವಿಧಾನ ವಿರೋಧಿ ಸನಾತನ ಶಕ್ತಿಗಳ ಗುಂಡಿಗೆ ಬಲಿಯಾದರು.

ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೆಲವು ಭರವಸೆಗಳಿಗೆ ಕಾರಣವಾಗಿದ್ದರೆ ಹಲವು ಭ್ರಮನಿರಸನಗಳಿಗೆ ಕಾರಣವಾಗಿವೆ.

ಸಂವಿಧಾನ ಮತ್ತು ಕ್ಷಾತ್ರ ಧರ್ಮ ಸಾಧನ

ಈ ಮಧ್ಯೆ ಗೌರಿ ಹತ್ಯೆಯ ಆರೋಪಿಗಳನ್ನು ಬಂಧಿಸಲು, ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಹಿರಿಯ ಪೊಲೀಸ್ ಅಧಿಕಾರಿ ಬಿ.ಕೆ.ಸಿಂಗ್ ಮತ್ತು ಅನುಚೇತ್ ಅವರ ನೇತೃತ್ವದಲ್ಲಿ ರಚಿಸಿದ ಎಸ್‌ಐಟಿ ಶ್ರಮವಹಿಸಿ, ಜಾಣ್ಮೆ, ತಂತ್ರಜ್ಞಾನ ಮತ್ತು ಕೌಶಲ್ಯಗಳನ್ನು ಬಳಸಿ 18 ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳೆಲ್ಲರೂ ಅತ್ಯಂತ ಕರ್ಮಠ ಹಾಗೂ ಭಯೋತ್ಪಾದಕ ಹಿಂದುತ್ವವಾದಿ ಸಂಘಟನೆಯಾದ ‘ಸನಾತನ ಸಂಸ್ಥೆ’ ಮತ್ತು ‘ಹಿಂದೂ ಜನಜಾಗೃತಿ ವೇದಿಕೆ’ಯಿಂದ ಪ್ರಭಾವಿತರೆಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ.

ಇದೇ ತಂಡವೇ ದೇಶದ ಪ್ರಖ್ಯಾತ ವಿಚಾರವಾದಿಗಳು ಮತ್ತು ಜನಪರ ಬುದ್ಧಿಜೀವಿಗಳಾದ ಗೋವಿಂದ್ ಪನ್ಸಾರೆ, ನರೇಂದ್ರ ದಾಭೋಲ್ಕರ್ ಮತ್ತು ಪ್ರೊ. ಕಲಬುರ್ಗಿಯವರನ್ನು ಹತ್ಯೆ ಮಾಡಿ ರುವುದನ್ನು ಪೊಲೀಸರು ಸಂಗ್ರಹಿಸಿರುವ ಸಾಕ್ಷ್ಯಗಳು ಸ್ಪಷ್ಟಪಡಿಸಿವೆ.

ಹಿಂದೂ ಧರ್ಮವನ್ನು ಟೀಕಿಸುವ ಮತ್ತು ವಿಮರ್ಶಿಸುವ ವಿಚಾರವಾದಿಗಳನ್ನು ದುರ್ಜನರೆಂದು ವರ್ಗೀಕರಿಸಿ ಅವರ ನಿರ್ಮೂಲನೆ ಮಾಡುವುದು ಧಾರ್ಮಿಕ ಸೇವೆ ಎಂದು ಬಣ್ಣಿಸುವ ಸನಾತನ ಸಂಸ್ಥೆಯ ಮಾರ್ಗದರ್ಶಿ ಪುಸ್ತಕವಾದ ‘ಕ್ಷಾತ್ರ ಧರ್ಮ ಸಾಧನ’ ಹಾಗೂ ಸನಾತನ ಸಂಸ್ಥೆಯ ಪತ್ರಿಕೆಯಾದ ‘ಸನಾತನ ಪ್ರಭಾತ’ ಎಲ್ಲಾ ಆರೋಪಿಗಳ ತಂಗುದಾಣಗಳಲ್ಲೂ ದೊರೆತಿದೆ.

21ನೇ ಶತಮಾನದಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂಬ ಅವಸರದಲ್ಲಿ ಅಡ್ಡಿಗಳನ್ನೆಲ್ಲಾ ನಿವಾರಿಸಿಕೊಳ್ಳಲು ಹೊರಟಿದ್ದ ಈ ಸಂಸ್ಥೆಯ ಮುಖ್ಯಸ್ಥ ಜಯಂತ್ ಆಠವಳೆಯವರನ್ನು ನರೇಂದ್ರ ಮೋದಿಯವರು 2013ರಲ್ಲಿ ಹೃತ್ಪೂರ್ವಕವಾಗಿ ಅಭಿನಂದಿಸಿದ್ದರು. ಹಿಂದೂ ಧರ್ಮವನ್ನು ವಿಮರ್ಶೆ ಮಾಡುವವರೆಲ್ಲಾ ಹಿಂದೂ ವಿರೋಧಿ ದುರ್ಜನರೆಂಬ ಭಯೋತ್ಪಾದಕ ಸಿದ್ಧಾಂತದ ಭಾಗವಾಗಿ ಅವರು ವಿಚಾರವಾದಿಗಳನ್ನು ಕೊಲ್ಲುತ್ತಾ, ಗೋವಾ, ಮಹಾರಾಷ್ಟ್ರಗಳಲ್ಲಿ ತಮಗೆ ಹಿಂದೂ ವಿರೋಧಿ ಎಂದು ತೋರಿದ ಚಿತ್ರ ಪ್ರದರ್ಶನ ಮಾಡುತ್ತಿದ್ದ ಚಿತ್ರಮಂದಿರಗಳಲ್ಲಿ ಬಾಂಬ್‌ಗಳನ್ನೂ ಸ್ಫೋಟಿಸಲು ಪ್ರಾರಂಭಿಸಿದ್ದರು. ಅಷ್ಟು ಮಾತ್ರವಲ್ಲ. ಗೌರಿ ಹತ್ಯೆಯ ಚಾರ್ಜ್‌ಶೀಟ್‌ನಲ್ಲಿ ಹೇಳಿರುವಂತೆ 2016ರ ವೇಳೆಗೆ ಈ ಗುಂಪಿಗೆ ಮಾಲೆಗಂವ್, ಸಂರೆತಾ ಎಕ್ಸ್‌ಪ್ರೆಸ್ ಮತ್ತು ಮಕ್ಕಾ ಮಸೀದಿಗಳಲ್ಲಿ ಬಾಂಬ್ ಸ್ಫೋಟಿಸಿದ್ದ ‘ಅಭಿನವ್ ಭಾರತ್’ ಸಂಸ್ಥೆಯೂ ಬಾಂಬ್ ಹಾಗೂ ಇತರ ಸ್ಫೋಟಕ ತರಬೇತಿಗಳನ್ನು ಕೊಡಲು ಪ್ರಾರಂಭಿಸಿತ್ತು. ಹಾಗೂ ಕರ್ನಾಟಕವನ್ನೂ ಒಳಗೊಂಡಂತೆ ದೇಶಾದ್ಯಂತ ಜನಪರ ಹಾಗೂ ವಿಚಾರವಾದದ ಪ್ರಚಾರದಲ್ಲಿ ತೊಡಗಿರುವ 70ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲು ಪಟ್ಟಿ ತಯಾರಿಸಿದ್ದರೆಂಬುದು ಗೌರಿ ಹತ್ಯಾ ತನಿಖೆಯಲ್ಲಿ ತಿಳಿದುಬಂದಿದೆ.

ಗೌರಿ ಹತ್ಯೆಯ ತನಿಖೆಯ ಭಾಗವಾಗಿ ಈ ಎಲ್ಲಾ ಆರೋಪಿಗಳನ್ನು ಬಂಧಿಸುವ ವೇಳೆಯಲ್ಲಿ ಅವರಲ್ಲಿ ಹಲವರು ಕರ್ನಾಟಕದಲ್ಲಿ ಪ್ರಖ್ಯಾತ ವಿಚಾರವಾದಿಗಳಾದ ನರೇಂದ್ರ ನಾಯಕ್ ಮತ್ತು ಕೆ.ಎಸ್. ಭಗವಾನ್ ಅವರ ಹತ್ಯೆಗೆ ಸಂಚು ರೂಪಿಸುತ್ತಿದ್ದರೆಂಬುದು ತನಿಖೆಯ ವೇಳೆಯಲ್ಲಿ ಬಯಲಾಗಿದೆ.

ಹೀಗಾಗಿ ಗೌರಿ ತಾನು ಸತ್ತು ಹಲವು ಅಮೂಲ್ಯ ಜೀವಗಳನ್ನು ಉಳಿಸಿದಂತಾಗಿದೆ.

ಆರೋಪಿಗಳು ಸಿಕ್ಕರು.. ನ್ಯಾಯ?

ಇವೆಲ್ಲಾ ಇದ್ದಿದ್ದರಲ್ಲಿ ಸಮಾಧಾನ ಪಟ್ಟುಕೊಳ್ಳಬಹುದಾದ ವಿಚಾರಗಳೇ ಆಗಿದ್ದರೂ ಗೌರಿ ಹತ್ಯಾ ತನಿಖೆ ಮುಗಿದು 2018ರ ನವೆಂಬರ್‌ನಲ್ಲೇ ಚಾರ್ಜ್‌ಶೀಟ್ ದಾಖಲಿಸಿದರೂ 2022ರ ತನಕ ವಿಚಾರಣೆಯೇ ಪ್ರಾರಂಭವಾಗಲಿಲ್ಲ. ಚಾರ್ಜ್‌ಶೀಟ್ ಪ್ರಕಾರ ಪ್ರಕರಣದಲ್ಲಿ 400ಕ್ಕೂ ಹೆಚ್ಚು ಸಾಕ್ಷಿಗಳು ಮತ್ತು ಸಾವಿರಕ್ಕೂ ಹೆಚ್ಚು ಪುರಾವೆಗಳಿವೆ. ಆದರೂ ವಿಚಾರಣೆ ಆಮೆಗತಿಯಲ್ಲಿ ನಡೆದಿರುವುದರಿಂದ ಈವರೆಗೆ ಕೇವಲ 137 ಸಾಕ್ಷಿಗಳ ವಿಚಾರಣೆಯಾಗಿದೆ. ವಿಚಾರಣೆ ತ್ವರಿತಗತಿಯಲ್ಲಿ ನಡೆದು ಶಿಕ್ಷೆಯಾಗಬೇಕೆಂಬ ಉದ್ದೇಶದಿಂದ ಪ್ರಾಸಿಕ್ಯೂಶನ್ ವಕೀಲ ಪ್ರಖ್ಯಾತ ಜನಪರ ಅಡ್ವೊಕೇಟ್ ಬಾಲನ್ ಅವರು ಅಷ್ಟು ಮುಖ್ಯವಲ್ಲದ ನೂರಕ್ಕೂ ಹೆಚ್ಚು ಸಾಕ್ಷಿಗಳನ್ನು ಕೈಬಿಡಲು ಸಿದ್ಧವೆಂದು ಕೋರ್ಟಿಗೆ ತಿಳಿಸಿದ್ದಾರೆ.

ಆದರೂ ವಿಚಾರಣೆ ಮುಗಿಯಲು ಇನ್ನೂ ಸಾಕಷ್ಟು ವಿಳಂಬವಾಗುತ್ತದೆ ಎಂಬ ವಾದವನ್ನು ಮುಂದಿಟ್ಟು ಈಗಾಗಲೇ ನಾಲ್ವರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ವಿಚಾರಣೆ ಮುಗಿಯುವ ತನಕ ಆರೋಪಿಗೆ ಜಾಮೀನು ನಿರಾಕರಿಸುವುದನ್ನು ಮಾನವ ಹಕ್ಕುಗಳ ಕಾರ್ಯಕರ್ತೆಯಾಗಿದ್ದ ಗೌರಿಯೂ ಒಪ್ಪುತ್ತಿರಲಿಲ್ಲ. ಆದರೆ ವಿಳಂಬ ವಿಚಾರಣೆ ಹಾಗೂ ಚಾರ್ಜ್‌ಶೀಟ್ ದಾಖಲಾದ ನಂತರBail Is the Norm, Jail is the Exception ಎಂಬ ಸಹಜ ನ್ಯಾಯದ ತತ್ವವನ್ನು ಹಿಂದುತ್ವವಾದಿ ಆರೋಪಿಗಳಿಗೆ ಮಾತ್ರ ವಿಸ್ತರಿಸುವ ನ್ಯಾಯಾಂಗ, ಸುಳ್ಳು ಕೇಸುಗಳಲ್ಲಿ ಹಲವು ವರ್ಷಗಳಿಂದ ಜೈಲುಗಳಲ್ಲಿ ಕೊಳೆಯುತ್ತಿರುವ ಪ್ರಜಾತಂತ್ರವಾದಿ ಹೋರಾಟಗಾರರಿಗೆ ಏಕೆ ವಿಸ್ತರಿಸುವುದಿಲ್ಲ? ಎಂಬ ಪ್ರಶ್ನೆಯನ್ನು ನಾಗರಿಕರು ನ್ಯಾಯಾಂಗವನ್ನು ಗಟ್ಟಿಸಿ ಕೇಳಬೇಕಿದೆ. ಇತ್ತೀಚಿನ ಕೆಲವು ಉದಾಹರಣೆಗಳಲ್ಲಿ ಪ್ರಖ್ಯಾತ ರಾಜಕಾರಣಿಗಳಿಗೆ ಈ ಸಹಜ ನ್ಯಾಯವನ್ನು ವಿಸ್ತರಿಸಿ ಜಾಮೀನು ನೀಡಿದ್ದರೂ, ಭೀಮಾ ಕೋರೆಗಾಂವ್, ದಿಲ್ಲಿ ದಂಗೆ ಪ್ರಕರಣಗಳಲ್ಲಿ ಆರೋಪಿತರಾದ ಪ್ರಜಾತಂತ್ರವಾದಿ ಕಾರ್ಯಕರ್ತರಿಗೆ ಜಾಮೀನು ನಿರಾಕರಿಸುವುದು ಮುಂದುವರಿಯುತ್ತಲೇ ಇದೆ. ಹೀಗಾಗಿ ಕತ್ತಲು ಕಳೆದಿದೆ ಎಂದು ಕೋಳಿ ಕೂಗುತ್ತಿದ್ದರೂ ಬೆಳಕು ಮಾತ್ರ ಬಹುಪಾಲು ದೇಶಕ್ಕೆ ಬಂದೇ ಇಲ್ಲ. ಆದರೂ ಒಂದು ಬಗೆಯ ದಣಿವರಿಕೆ ಹಾಗೂ ಆತ್ಮವಂಚಕ ನಿರಾಳಕ್ಕೆ ಪ್ರತಿರೋಧ ಶಕ್ತಿಗಳೂ ಒಳಗಾಗುತ್ತಿರುವುದು ಈ ಗೌರಿ ದಿನದಂದು ವ್ಯಾಕುಲ ಹುಟ್ಟಿಸುತ್ತದೆ.

ವಾಸ್ತವವಾಗಿ 2022ರಲ್ಲಿ ವಿಚಾರಣೆ ಪ್ರಾರಂಭವಾದಾಗಲಿಂದಲೂ ಗೌರಿ ಹತ್ಯಾ ಆರೋಪದ ವಿಚಾರಣೆಗೆ ಪ್ರತ್ಯೇಕ ಹಾಗೂ ವಿಶೇಷ ಕೋರ್ಟ್ ಸ್ಥಾಪಿಸಬೇಕೆಂದು ಆಗ್ರಹಿಸುತ್ತಲೇ ಬರಲಾಗಿದೆ. ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಅದರ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ. 2023ರಲ್ಲಿ ಸಿದ್ದರಾಮಯ್ಯನವರ ಸರಕಾರ ಪ್ರತ್ಯೇಕ ಕೋರ್ಟ್ ಸ್ಥಾಪಿಸುವ ಬಗ್ಗೆ ತಾತ್ವಿಕ ಒಪ್ಪಿಗೆಯನ್ನು ನೀಡಿದ್ದರೂ, ಈವರೆಗೆ ಅ ನಿಟ್ಟಿನಲ್ಲಿ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ.

ವಿಷಾದದ ಸಂಗತಿಯೆಂದರೆ ಈ ಬೆಳವಣಿಗೆಗಳು ಗೌರಿ ಹತ್ಯೆಯ ನಂತರದ ಏಳು ವರ್ಷಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ತಕ್ಕಂತೆಯೇ ಇದೆ.

ಹುಸಿ ಬೆಳಕಿನ ಸಮಾಧಾನ?

2024ರ ಲೋಕಸಭಾ ಚುನಾವಣೆ ಮೋದಿತ್ವದ ಮುನ್ನಡೆಗೆ ಲಗಾಮು ಹಾಕಿ ಸಂಸದೀಯ ವಿರೋಧಕ್ಕೆ ಶಕ್ತಿ ತುಂಬಿದೆ. ಸಂಸತ್ತಿನಲ್ಲಿ ವಿರೋಧದ ಹೂಂಕಾರವು ಒಂದು ಸಮಾಧಾನ ತರುತ್ತಿದೆ. ಆದರೆ ಅದನ್ನು ಹೊರತುಪಡಿಸಿದರೆ ಒಟ್ಟಾರೆ ಈ ದೇಶದ ಅಲ್ಪಸಂಖ್ಯಾತರು, ದಲಿತರು, ರೈತರು ಹಾಗೂ ಇನ್ನಿತರ ವರ್ಗಗಳ ಮೇಲೆ ನಡೆಯುತ್ತಿರುವ ಸಾಂಸ್ಥಿಕ ದೌರ್ಜನ್ಯ ಹಾಗೂ ವಂಚನೆಗಳು, ಆರ್ಥಿಕತೆಯ ಅದಾನೀಕರಣ ಇತ್ಯಾದಿಗಳು ಮೋದಿಗೆ 400 ಸೀಟು ಬಂದಿದೆಯೆಂಬಂತೆಯೇ ಸಾಗುತ್ತಿದೆ. ವಿರೋಧ ಪಕ್ಷಗಳು ಆಳ್ವಿಕೆಯಲ್ಲಿರುವ ರಾಜ್ಯಗಳಲ್ಲೂ ಕ್ರೋನಿ ಕ್ಯಾಪಿಟಲಿಸಮ್ ಹಾಗೂ ಬ್ರಾಹ್ಮಣೀಯ ಹಿಂದುತ್ವದ ಪ್ರತ್ಯಕ್ಷ ಹಾಗೂ ಪರೋಕ್ಷ ಆಳ್ವಿಕೆಯೇ ಮುಂದುವರಿದಿದೆ.

ಫ್ಯಾಶಿಸ್ಟ್ ಶಕ್ತಿಗಳು ಒಂದು ಹೆಜ್ಜೆ ಹಿಂದಿಟ್ಟು ಎರಡು ಪಟ್ಟು ಶಕ್ತಿಯೊಂದಿಗೆ ಅಪ್ಪಳಿಸುವ ಸಿದ್ಧತೆಯಲ್ಲಿ ತೊಡಗಿರುವಂತೆ ಕಾಣುತ್ತಿದ್ದರೆ ಬಹುಪಾಲು ಪ್ರಜಾತಾಂತ್ರಿಕ ಹಾಗೂ ಪ್ರಗತಿಪರ ಶಕ್ತಿಗಳು ದಣಿವಿನಿಂದಲೋ, ದೃಷ್ಟಿದೋಷದಿಂದಲೋ ಕಾಂಗ್ರೆಸನ್ನು ಸಕಲ ಅಪಾಯ ನಿವಾರಣಿ ಎಂಬಂತೆ ಭಾವಿಸಿ ಆತ್ಮವಂಚಕ ನಿರಾಳ ಅನುಭವಿಸುತ್ತಿವೆ ಹಾಗೂ ಪ್ರತಿರೋಧದ ಸ್ಪೇಸನ್ನು ಸಂಪೂರ್ಣವಾಗಿ ಬಿಜೆಪಿಗೆ ಬಿಟ್ಟುಕೊಟ್ಟು ಅದರ ಬಲವರ್ಧನೆಗೆ ಪರೋಕ್ಷವಾಗಿ ಕಾರಣರಾಗುತ್ತಿವೆ.

2004ರಲ್ಲೂ ವಾಜಪೇಯಿ ನೇತೃತ್ವದ ಬಿಜೆಪಿ ಸೋತು ಕಾಂಗ್ರೆಸ್ ನೇತೃತ್ಬದ ಯುಪಿಎ ಸರಕಾರ ರಚನೆಯಾದಾಗ ಇದೇ ಬಗೆಯ ಭ್ರಾಂತಿ ದೇಶವನ್ನು ಆವರಿಸಿತ್ತು. ಅದರ ಬಗ್ಗೆ ‘ಗೌರಿ ಲಂಕೇಶ್’ ಪತ್ರಿಕೆಯಲ್ಲೂ ಗೌರಿ ಚರ್ಚೆಗೆ ಅನುವು ಮಾಡಿಕೊಟ್ಟಿದ್ದರು. ಆದರೆ ಕಾಂಗ್ರೆಸ್ ಆನಂತರದ ಹತ್ತುವರ್ಷಗಳಲ್ಲಿ ತನ್ನ ಭ್ರಷ್ಟತೆ, ಕಾರ್ಪೊರೇಟ್ ಪರ, ಮೃದು ಹಿಂದುತ್ವದ ನೀತಿಗಳ ಮೂಲಕ 2014ರಲ್ಲಿ ಬಿಜೆಪಿ ದುಪ್ಪಟ್ಟು ಶಕ್ತಿಯೊಂದಿಗೆ ಮೋದಿಯ ರೂಪದಲ್ಲಿ ಅಧಿಕಾರಕ್ಕೆ ಬರಲು ಅನುವು ಮಾಡಿಕೊಟ್ಟಿತು.

ಈಗ ಮತ್ತೊಮ್ಮೆ ಅದೇ ಚಕ್ರ ಸುತ್ತುತ್ತಿದೆ. ಹಾಗೆ ನೋಡಿದರೆ 2024ರಲ್ಲಿ ಬಿಜೆಪಿ ಸೋತಿಲ್ಲ. ಸಂಖ್ಯಾಬಲ ಕಡಿಮೆಯಾಗಿದೆ. ಅದರ ವೋಟು ಶೇರು ಸ್ಥಿರವಾಗಿದೆ ಅಥವಾ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಕಡಿಮೆಯಾಗುತ್ತಿಲ್ಲ. ಹೀಗಾಗಿ ದೇಶಕ್ಕೆ ಮತ್ತು ಪ್ರಜಾತಂತ್ರಕ್ಕೆ ಇರುವ ಅಪಾಯ ಹಾಗೇ ಇದೆ.

ಆದರೆ ರಾಹುಲ್ ಗಾಂಧಿ ನೇತೃತ್ವ ಮತ್ತು ಬಿಜೆಪಿಯನ್ನು ವಿರೋಧಿಸುತ್ತಾ ಅದರೊಡನೆ ಕೈಗೂಡಿಸಿರುವ ಕೆಲವು ಪ್ರಾಮಾಣಿಕ ಶಕ್ತಿಗಳು ಕಾಂಗ್ರೆಸನ್ನು ಬದಲಿಸುತ್ತಾ ಫ್ಯಾಶಿಸಂ ಅನ್ನು ಸೋಲಿಸಬಲ್ಲವು ಎಂಬ ಮತ್ತೊಂದು ಮೋಹಕ ಅಲೆಗೆ ಈ ದೇಶದ ಪ್ರತಿರೋಧ ಶಕ್ತಿಗಳು ಬಲಿಯಾಗುತ್ತಿರುವಂತಿದೆ. ಕಾಂಗ್ರೆಸ್ ಆಳ್ವಿಕೆಯಲ್ಲಿರುವ ಕರ್ನಾಟಕ ಇನ್ನಿತ್ಯಾದಿ ರಾಜ್ಯಗಳಲ್ಲಿ ಕಾಂಗ್ರೆಸ್ ಆಳ್ವಿಕೆ ಹಾಗೂ 2024ರ ಚುನಾವಣೆಯ ಸಂದರ್ಭದಲ್ಲೇ ಪರೋಕ್ಷವಾಗಿ ಕೋಮುವಾದಿ ವಿರೋಧದ ಪ್ರಚಾರಕ್ಕೆ ಹೇರಲಾದ ನಿರ್ಬಂಧ, ಸಂಪತ್ತು ಹಂಚಿಕೆಯ ವಿಷಯದಲ್ಲಿ ಸ್ಯಾಮ್ ಪಿತ್ರೋಡರ ಪ್ರತಿಪಾದನೆಯನ್ನು ನಿರಾಕರಿಸಿದ್ದು, ಒಳಮೀಸಲಾತಿ ಇತ್ಯಾದಿ ವಿಷಯಗಳಲ್ಲಿ ವಿಳಂಬ ವಂಚನೆಯ ಧೋರಣೆ..ಇತ್ಯಾದಿ ..ಇವೆಲ್ಲವೂ ರಾಹುಲ್-ಖರ್ಗೆಯವರ ಕಾಂಗ್ರೆಸ್‌ನಲ್ಲಿ ಸೂರು ಬದಲಾಗಿದ್ದರೂ ಅಡಿಪಾಯ ಹಳೆಯದೇ ಎಂದು ಸಾಬೀತು ಪಡಿಸುತ್ತಿದೆ. ಆದರೂ ಈ ದೇಶದ ಪ್ರಗತಿಪರ ಗಣಕ್ಕೆ ಗಾಂಧಾರಿ ಕುರುಡು ಆವರಿಸಿದೆ.

ಹಿಂದುತ್ವ ಫ್ಯಾಶಿಸಂನ ಅಪಾಯ ನಿವಾರಣೆಯಾಗಬೇಕೆಂದರೆ ಜನಮಾನಸದಲ್ಲಿ ಬೇರುಬಿಡುತ್ತಿರುವ ಹಿಂದುತ್ವವಾದಿ ದ್ವೇಷ ಸಿದ್ಧಾಂತವನ್ನು ಕಿತ್ತೊಗೆಯಬೇಕು. ಅದಕ್ಕೆ ಜನರಲ್ಲಿ ಬೇರುಬಿಟ್ಟಿರುವ ಚಳವಳಿ ಗಟ್ಟಿಯಾಗಬೇಕು. ಅದಾಗಬೇಕೆಂದರೆ ಸಂಘಟನೆಗಳಲ್ಲಿ ಸಂದರ್ಭದ ಬಗ್ಗೆ ಗೊಂದಲವಿರದ ಸ್ಪಷ್ಟತೆ, ಸಂದರ್ಭ ಬೇಡುವಂತಹ ಸಿದ್ಧತೆ, ನೈತಿಕತೆ ಮತ್ತು ಬದ್ಧತೆಗಳು ಬೇಕು.

ಜನರ ಶತ್ರುವಿನ ಬಳಿ ಹಣಬಲ, ಅಧಿಕಾರ ಎಲ್ಲವೂ ಇದ್ದಾಗಲೂ ಅವ್ಯಾವುವೂ ಇಲ್ಲದ ಜನಚಳವಳಿಗಳು ಇತಿಹಾಸದಲ್ಲಿ ಜನಶತ್ರುಗಳನ್ನು ಸೋಲಿಸಿರುವುದು ನಿಸ್ವಾರ್ಥ, ತ್ಯಾಗ, ಧೈರ್ಯ, ಬದ್ಧತೆಗಳು ಕೊಡುವ ನೈತಿಕ ಬಲದಿಂದ. ಆ ನೈತಿಕತೆಯ ಆಧಾರದಲ್ಲಿ ಕಟ್ಟುವ ಸಮರಶೀಲ ಜನಸಂಘಟನೆಗಳಿಂದ.

ಗೌರಿ ಲಂಕೇಶರು ತಮ್ಮ ಜೀವನದಲ್ಲಿ ಜನರ ಬಗ್ಗೆ ಇದ್ದ ಅಪಾರ ಪ್ರೀತಿ ಹಾಗೂ ಬದಲಾಗಬೇಕೆಂಬ ಬದ್ಧತೆಗಳಿಂದಲೇ ತಮಗೇ ಗೊತ್ತಿಲ್ಲದೆ ಆ ಸ್ಪಷ್ಟತೆ, ಬದ್ಧತೆ, ನೈತಿಕ ಧೈರ್ಯವನ್ನು ರೂಢಿಸಿಕೊಂಡು ಮಾದರಿಯಾದರು.

ಅಪರಾಧವೇ ಅಧಿಕಾರವೇರಿರುವಾಗ, ಬಾಯಿದ್ದು ಸುಮ್ಮನಿದ್ದವರೆಲ್ಲಾ ಅಪರಾಧಿಗಳೇ ಎಂಬುದನ್ನು ಗೌರಿ ತಮ್ಮ ಜೀವನದ ಮಾರ್ಗದರ್ಶಿ ಸೂತ್ರ ಮಾಡಿಕೊಂಡಿದ್ದರು.

ಗೌರಿಯೆಂಬ ದಾರಿ

ಬದುಕಿನ ಪಯಣದಲ್ಲಿ ವೈಯಕ್ತಿಕ, ಕೌಟುಂಬಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಬಿಕ್ಕಟ್ಟುಗಳ ಬೆಂಕಿಯಲ್ಲಿ ಬಿದ್ದಾಗಲೆಲ್ಲಾ ಆಕೆ ಅಪ್ಪಟ ಚಿನ್ನವಾಗಿ ಹೊರಬಂದಿದ್ದಾರೆ. ತಾನು ನಂಬಿದ ಮೌಲ್ಯಗಳಿಗಾಗಿ ತನ್ನ ಸ್ವಂತ ಸುಖ, ನೆಮ್ಮದಿಗಳಿಗೆ ಎರವಾಗಿದ್ದಾರೆ. ಆ ಸಮಯದಲ್ಲಿ ಆಕೆಯ ಮುಂದೆ ಮುಂದಿನ ದಾರಿಯೇನೂ ಸ್ಪಷ್ಟವಾಗಿರಲಿಲ್ಲ. ಆದರೆ ರಾಜಿ-ಅವಕಾಶವಾದಗಳ ಹಂಗಿನ ಅರಮನೆಗಿಂತ ಅನಿಶ್ಚಿತವಾದ ಆದರೆ ನ್ಯಾಯಯುತವಾದ, ತ್ಯಾಗ ಬಲಿದಾನ ಮತ್ತು ನಿತ್ಯ ಯಾತನೆಗಳಿಂದ ಕೂಡಿದ ದಾರಿಯನ್ನೇ ಆಯ್ಕೆ ಮಾಡಿಕೊಂಡರು...

ಬೆಟ್ಟವೇರಿ ಕೂರದೆ ಅತ್ಯಂತ ಸಲೀಸಾಗಿ ತನ್ನನ್ನು ತಾನು ಆತ್ಮವಿಮರ್ಶೆಯ ನಿಕಷಕ್ಕೆ ಒಡ್ಡಿಕೊಂಡು ಜಗವೇ ಬೆರಗಾಗುವಂತೆ ಬದಲಾದರು....

ತಾನು ಕಟ್ಟಿಕೊಂಡಿದ್ದ comfort zone ಒಳಗೆ ಕೂತುಕೊಂಡು ಸತ್ಯ ಮತ್ತು ನ್ಯಾಯದ ದಾರಿಯಲ್ಲಿ ನಡೆಯಲಾಗದು ಎಂದು ಗೊತ್ತಾದಾಗ ಅತ್ಯಂತ ಸಲೀಸಾಗಿ ಅದರಿಂದ ಹೊರಬಂದು ಕಷ್ಟದ ದಾರಿಯನ್ನು ಆಯ್ಕೆ ಮಾಡಿಕೊಂಡರು.

ಆ ಕಾರಣಕ್ಕಾಗಿ ಚಳವಳಿಗಳಿಗೂ, ನಾಯಕರಿಗೂ ಸಹ ಗೌರಿ ನಡೆದು ತೋರಿದ ಗುರುವೂ ಆಗಿಬಿಟ್ಟರು.

ಇಂದಿನ ಮಬ್ಬುಗತ್ತಲಿನ ಸಂದರ್ಭದಲ್ಲಂತೂ ಎಷ್ಟು ಜನರು ತಮ್ಮ ಬದುಕಿನಲ್ಲಿ ಇಂತಹ ಮುಳ್ಳುಹಾದಿಯ ನೈತಿಕ ಆಯ್ಕೆಯನ್ನು ಮಾಡಿಕೊಳ್ಳಬಲ್ಲರು?

ಆದರೆ ಅಂಥಾ ಆಯ್ಕೆಗಳಿಗೆ ಸಿದ್ಧವಿರುವ ವ್ಯಕ್ತಿಗಳು ಕಟ್ಟಬಲ್ಲ ಜನಸಮರದಿಂದ, ಚಳವಳಿಗಳಿಂದ ಮಾತ್ರ ಇಂದಿನ ಫ್ಯಾಶಿಸಂ ಅನ್ನು ಸೋಲಿಸಲು ಸಾಧ್ಯ ..

ತನ್ನವರನ್ನು, ಪ್ರಭುತ್ವವನ್ನು, ಎದುರುಹಾಕಿಕೊಂಡು ಸತ್ಯದ ಜೊತೆಗೆ ನಿಲ್ಲಲು ಧೈರ್ಯವಿರಬೇಕು.

ಆ ಧೈರ್ಯಕ್ಕೆ ನೈತಿಕತೆ ಇರಬೇಕು. ಅಂಥಾ ಧೈರ್ಯ ಮಾತ್ರ ಸಾವಿನ ಅಂಜಿಕೆಯನ್ನು ಮೀರುವಂತೆ ಮಾಡುತ್ತದೆ. ಆಗ ಮಾತ್ರ ಸರ್ವಾಧಿಕಾರ ಮತ್ತು ಫ್ಯಾಶಿಸಂ ಅಂಜುತ್ತದೆ...

ಪ್ರಾಯಶಃ ಗೌರಿಯನ್ನು ನೆನೆಯುವುದೆಂದರೆ...

ಗೌರಿ ನಡೆದು ತೋರಿದಂತೆ ಅಂಥಾ ನೈತಿಕ ಧೈರ್ಯವನ್ನು ಪಡೆದುಕೊಳ್ಳುವುದೇ ಆಗಿದೆ.

ಹಾಗೆಂದರೆ..

-ನಮ್ಮ ನಮ್ಮ comfort zoneಗಳಿಂದ ಹೊರಬಂದು,

-ನಮ್ಮ ನಮ್ಮ ಸಿದ್ಧತೆಗಳಿಗೆ ತಕ್ಕಂತೆ ಸಿದ್ಧಾಂತಗಳನ್ನು ರೂಪಿಸದೆ ಮತ್ತು ನಮ್ಮ ಮುಂದಿರುವ ಗಂಭೀರ ಸವಾಲನ್ನು ಅದಕ್ಕೆ ತಕ್ಕಂತೆ ವ್ಯಾಖ್ಯಾನಿಸದೆ

-ಮುಂದಿರುವ ಶತ್ರು ವಿನ ಸಮಗ್ರ ಸ್ವರೂಪವನ್ನು ಹೇಗಿದೆಯೋ ಹಾಗೆ ಅರ್ಥ ಮಾಡಿಕೊಳ್ಳುವುದು ಹಾಗೂ ಅದರ ವಿರುದ್ಧದ ಸಂಘರ್ಷ ಏನು ಕೇಳುತ್ತದೋ ಅದಕ್ಕೆ ತಕ್ಕಹಾಗೆ ಸಿದ್ಧವಾಗುವುದೇ ಆಗಿದೆ..

ಇದು ವೈಯಕ್ತಿಕ ನೆಲೆಯಲ್ಲೂ ಆಗಬೇಕಾದ ರೂಪಾಂತರ....

ಬಡತನದ ಬೆಂಕಿ, ಜಾತಿ ಅಪಮಾನದ ಬೆಂಕಿ, ಲಿಂಗ ತಾರತಮ್ಯದ ಬೆಂಕಿ, ಧಾರ್ಮಿಕ ಅಪಮಾನದ ಬೆಂಕಿ, ಅಸಮಾನತೆ-ಅಭದ್ರತೆಯ ಬೆಂಕಿ....

ಗೌರಿಯ ಅಂತರಂಗವನ್ನು ಬೇಯಿಸಿತ್ತು.

ಆ ಬೆಂಕಿಗೆ ತನ್ನನ್ನು ತಾನು ಒಡ್ಡಿಕೊಂಡೇ ಗೌರಿ ಗೌರಿಯಾದಳು ..

ಆ ಮೂಲಕ ಅಂತರಂಗ -ಬಹಿರಂಗ ವೆಂಬ ಭಿನ್ನವಿಲ್ಲದೆ ಬದುಕಿದ್ದಳು..

ನೊಂದವರ ನೋವಿನ ಬಗ್ಗೆ ದೂರದಿಂದ ಕರುಣೆ ತೋರದೆ ತಾನೇ ಅನುಭವಿಸಿದರು..

ಹೀಗಾಗಿ ನೊಂದವರನ್ನು ಎಷ್ಟು ಪ್ರೀತಿಸಿದರೋ, ಅಷ್ಟೇ ತೀವ್ರವಾಗಿ ನೋವಿಗೆ ಕಾರಣವಾದ ಶಕ್ತಿಗಳನ್ನು ದ್ವೇಷಿಸಿದರು...

ಆದ್ದರಿಂದಲೇ ಅಂಥಾ ಬಿಕ್ಕಟ್ಟುಗಳು ಎದುರಾದರೂ ...

ಸುಡುಸತ್ಯಗಳಿಗೆ ಸಂಯಮದ ನೀರೆರಚಲಿಲ್ಲ

ಬೆತ್ತಲೆಯ ಜಗತ್ತಿಗೆ ವಿದ್ವತ್ತಿನ ಬಟ್ಟೆ ತೊಡಿಸಲಿಲ್ಲ..

ಸತ್ಯೋತ್ತರ ಮಿಥ್ಯೆಗಳಿಗೆ ಮಾಹಿತಿಯೆಂಬ ಮುದ್ರೆಯೊತ್ತಲಿಲ್ಲ...

ಕಂಡದ್ದನ್ನು ಕಂಡಹಾಗೆಯಲ್ಲದೆ ಮತ್ತೇನನ್ನೂ ಬರೆಯಲಿಲ್ಲ...

ತಾನು ನಂಬಿಕೊಂಡ ಮೌಲ್ಯಗಳಿಗಾಗಿ ತನ್ನ comfort zoneನಿಂದ ಹೊರಬಂದು...

ಕರಗಿದಳು, ಕೊರಗಿದಳು, ಕಣ್ಣೀರಾದಳು..ಕನಲಿದಳು ಕದನಕ್ಕಿಳಿದಳು

ಅಮ್ಮನಾದಳು, ಗುರುವಾದಳು, ಪದವಾದಳು, ಅರ್ಥವಾದಳು.. ಅನ್ವರ್ಥವಾದಳು.

ಕಪ್ಪಾದಳು, ಕೆಂಪಾದಳು, ನೀಲಿಯಾದಳು, ಹಸಿರಾದಳು , ಬಿಳಿಯಾದಳು. ಕಾಮನಬಿಲ್ಲಾದಳು.

ಭರವಸೆಯಾದಳು, ಸಾಧ್ಯತೆಯಾದಳು, ಅಮರಳಾದಳು

ಸಾವಿರದ ಗೌರಿಯಾದಳು.. ಸಾವಿರಾರು ಗೌರಿಯಾದಳು..

ಕತ್ತಲು ಕಾರ್ಗತ್ತಲಾಗುತ್ತಿರುವ ಈ ಸಂದರ್ಭದಲ್ಲಿ...

ಭರವಸೆಗಳು ಭ್ರಮನಿರಸನಗಳಾಗುತ್ತಿರುವ ಈ ಸಂದರ್ಭದಲ್ಲಿ...

ಹೊಸ ಭರವಸೆಗಳು ಬರಬೇಕಿರುವುದು ಹೊರಗಿನಿಂದಲ್ಲ. ನಮ್ಮೊಳಗಿನಿಂದಲೇ..

ಅದು ಸಾಧ್ಯವಾಗುವುದು ಚಳವಳಿಗಳು ಮತ್ತು ನಾಯಕರು ಗೌರಿ ಬದುಕಿದಂತೆ ಬದುಕಿದಾಗ ..

ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News