ಸುಪ್ರೀಂಕೋರ್ಟ್ ತೀರ್ಪಿನ ನಂತರವೂ ಒಳಮೀಸಲಿಗೆ ಬಿಜೆಪಿ-ಕಾಂಗ್ರೆಸ್‌ಗಳ ಒಡಕು ದೃಷ್ಟಿಯೇಕೆ?
ಒಳಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ನೀಡಿರುವುದು ರಾಜ್ಯ ಸರಕಾರಗಳಿಗಾದ್ದರಿಂದ ಆ ಬಗ್ಗೆ ಕೇಂದ್ರ ಸರಕಾರದ ಪಾತ್ರವಿಲ್ಲ ಎಂಬುದು ಅದಕ್ಕೆ ಬಿಜೆಪಿಗರು ನೀಡುತ್ತಿರುವ ನೆಪ. ಆದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಯಾವ ಮುಖ್ಯಮಂತ್ರಿಗಳೂ ಈವರೆಗೆ ಒಳಮೀಸಲಾತಿ ಜಾರಿಯ ಬಗ್ಗೆ ಒಂದೂ ಅಧಿಕೃತ ಹೇಳಿಕೆಯನ್ನು ನೀಡಲಿಲ್ಲವೇಕೆ? ಬಿಜೆಪಿ ಕೂಡ ಈವರೆಗೆ ಹೇಳಿಕೆ ನೀಡಿಲ್ಲವೇಕೆ? ಬದಲಿಗೆ ಬಿಜೆಪಿಯ ಮಿತ್ರಪಕ್ಷಗಳೂ ಮತ್ತು ಬಿಜೆಪಿ ಪೋಷಿತ ಸಂಘಟನೆಗಳು ಸುಪ್ರೀಂ ಕೋರ್ಟಿನಲ್ಲಿ ತೀರ್ಪಿನ ವಿರುದ್ಧ ಅರ್ಜಿ ಹಾಕುವ ಸನ್ನಾಹದಲ್ಲಿರುವುದೇಕೆ?
ಕಳೆದ ಆಗಸ್ಟ್ ಒಂದಕ್ಕೆ ಭಾರತದ ಸುಪ್ರೀಂಕೋರ್ಟಿನ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠ 6:1 ಬಹುಮತದೊಂದಿಗೆ ಪರಿಶಿಷ್ಟ ಜಾತಿಗಳೊಳಗೆ ಒಳಮೀಸಲಾತಿಯನ್ನು ಒದಗಿಸುವ ರಾಜ್ಯಗಳ ಅಧಿಕಾರವನ್ನು ಎತ್ತಿಹಿಡಿದು ಆದೇಶವನ್ನು ಪ್ರಕಟಿಸಿತು. ಆ ಆದೇಶ ಪ್ರಕಟವಾಗಿ ಮೂರು ವಾರಗಳೇ ಕಳೆಯುತ್ತಾ ಬಂದಿದ್ದರೂ ಒಳಮೀಸಲಾತಿ ಒದಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಬೇಕಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತೀರ್ಪಿನ ಬಗ್ಗೆ ಇನ್ನೂ ತಮ್ಮ ಅಂತಿಮ ನಿಲುವನ್ನೇ ಪ್ರಕಟಪಡಿಸಿಲ್ಲ. ಈ ನಡುವೆ ಕೇಂದ್ರದ ಆಡಳಿತರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಎಲ್‌ಜೆಪಿ ಪಕ್ಷ ಇಡೀ ತೀರ್ಪನ್ನೇ ಸಾರಾಸಗಟಾಗಿ ತಿರಸ್ಕರಿಸಿ ಮೇಲ್‌ಮನವಿ ಹಾಕುವುದಾಗಿ ಘೋಷಿಸಿದ್ದರೆ, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟದ ಸದಸ್ಯ ಪಕ್ಷ ಆರ್‌ಜೆಡಿ ಕೂಡ ಒಳಮೀಸಲಾತಿ ತೀರ್ಪನ್ನು ವಿರೋಧಿಸಿದೆ. ಎರಡೂ ಒಕ್ಕೂಟದ ಹೊರಗಿರುವ ಬಿಎಸ್‌ಪಿ ಕೂಡ ತೀರ್ಪನ್ನು ವಿರೋಧಿಸಿದೆ. ಈ ಮಧ್ಯೆ ಬಿಜೆಪಿಯ ಜೊತೆ ಹೊಕ್ಕಳುಬಳ್ಳಿ ಸಂಬಂಧ ಹೊಂದಿರುವ ದೇಶದ 20 ಪ್ರಭಾವಿ ದಲಿತ ಬುದ್ಧಿಜೀವಿಗಳು, ಯುಟ್ಯೂಬರ್‌ಗಳು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಅಯೋಗದ ಅಧ್ಯಕ್ಷರನ್ನು ಭೇಟಿಯಾಗಿ ತೀರ್ಪಿನ ವಿರುದ್ಧ ಕೇಂದ್ರ ಸರಕಾರ ಮೇಲ್ ಮನವಿ ಹೋಗಬೇಕೆಂದು ಒತ್ತಾಯಿಸಿದ್ದಾರೆ. ನ್ಯಾಷನಲ್ ಕನ್ಫೆಡರೇಶನ್ ಆಫ್ ದಲಿತ್ ಆ್ಯಂಡ್ ಆದಿವಾಸಿ ಆರ್ಗನೈಶೇಶನ್ಸ್ ಎಂಬ ಸಂಸ್ಥೆ ಆಗಸ್ಟ್ 21ರಂದು ತೀರ್ಪಿನ ವಿರುದ್ಧ ದೇಶವ್ಯಾಪಿ ಹೋರಾಟಕ್ಕೆ ಕರೆಕೊಟ್ಟಿದೆ.
ಮತ್ತೊಂದು ಕಡೆ ಜಾತಿ ವಿನಾಶವಾದಿ ಪ್ರಗತಿಪರ ವಿದ್ವಾಂಸರುಗಳಲ್ಲಿ ಹಲವು ಪ್ರಮುಖರು ಈ ತೀರ್ಪಿನಿಂದ ದಲಿತ ಐಕ್ಯತೆಯಲ್ಲಿ ಇನ್ನಷ್ಟು ಬಿರುಕುಗಳು ಮೂಡಬಹುದೆಂಬ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ಮಧ್ಯೆ ತೀರ್ಪನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ ತ್ವರಿತವಾಗಿ ಜಾರಿ ಮಾಡುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಕರ್ನಾಟಕದ ಸಿದ್ದರಾಮಯ್ಯನವರು ಮತ್ತು ತೆಲಂಗಾಣದ ರೇವಂತ್ ರೆಡ್ಡಿಯವರು ಪ್ರಾರಂಭದ ಘೋಷಣೆಯ ನಂತರ ಮೌನವಹಿಸಿದ್ದಾರೆ.
ಈ ಹಿನ್ನೆಯಲ್ಲಿ ಕೈಗೆ ಬಂದ ಒಳಮೀಸಲಾತಿಯ ತುತ್ತು ಬಾಯಿಗೆ ಬರದಂತೆ ಆಗಬಹುದೇ ಎಂಬ ಆತಂಕ ಈವರೆಗೆ ತಾರತಮ್ಯಕ್ಕೆ ಗುರಿಯಾಗುತ್ತಾ ಬಂದಿರುವ ಸಮುದಾಯಗಳಲ್ಲಿ ಹುಟ್ಟಿಕೊಂಡಿದೆ.
ತೀರ್ಪು ಪ್ರಕಟವಾದ ಪ್ರಾರಂಭದ ದಿನಗಳಲ್ಲಿ ಒಳಮೀಸಲಾತಿ ಪರವಾಗಿ ಆದೇಶ ನೀಡಿರುವ ಆರು ನ್ಯಾಯಾಧೀಶರಲ್ಲಿ ನಾಲ್ವರು ಕೆನೆಪದರ ನೀತಿಯನ್ನು ಪರಿಶಿಷ್ಟ ಜಾತಿ ಮೀಸಲಾತಿಗೂ ಅನ್ವಯಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿರುವುದು ಸಹಜವಾಗಿಯೇ ತೀರ್ಪಿನ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ವಾಸ್ತವದಲ್ಲಿ ನ್ಯಾಯಾಲಯದ ಮುಂದೆ ಪರಿಶಿಷ್ಟರಿಗೆ ಕೆನೆಪದರ ಅನ್ವಯಿಸಬೇಕೇ ಎಂಬ ಪ್ರಶ್ನೆಯೇ ಇರಲಿಲ್ಲ. ಪೀಠದ ಲೀಡಿಂಗ್ ಜಡ್ಜ್ ಆಗಿದ್ದ ಮುಖ್ಯ ನ್ಯಾಯಾಧೀಶ ಚಂದ್ರಚೂಡರು ಪ್ರಕರಣದ ಬಗ್ಗೆ ರೂಪಿಸಿದ ಪ್ರಶ್ನೆಗಳಲ್ಲೂ ಕೆನಪದರವನ್ನು ಪರಿಶಿಷ್ಟರಿಗೆ ಅನ್ವಯಿಸಬೇಕೆಂಬ ಪ್ರಶ್ನೆ ಇರಲಿಲ್ಲ. ಹೀಗಾಗಿಯೇ ಲೀಡಿಂಗ್ ಆದೇಶವನ್ನು ನೀಡಿದ ನ್ಯಾ. ಚಂದ್ರಚೂಡ್ ಮತ್ತು ನ್ಯಾ. ಮನೋಜ್ ಮಿಶ್ರಾ ಅವರ ತೀರ್ಪಿನಲ್ಲಿ ಕೆನೆಪದರದ ಬಗ್ಗೆ ಯಾವುದೇ ಮಾರ್ಗದರ್ಶನ ಅಥವಾ ಆದೇಶವಿಲ್ಲ. ಆದರೂ ಒಳಮೀಸಲಾತಿಯ ಪರವಾದ ಆದೇಶ ಕೊಟ್ಟಿರುವ ಇತರ ನಾಲ್ವರು ನ್ಯಾಯಾಧೀಶರು ಅಪ್ರಾಸಂಗಿಕವಾಗಿ ಕೆನೆಪದರವನ್ನು ಪರಿಶಿಷ್ಟರಿಗೆ ಅನ್ವಯಿಸುವ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಬಹಳಷ್ಟು ಪತ್ರಿಕೆಗಳು ಆದೇಶದ ಬಗ್ಗೆ ವರದಿ ಮಾಡುತ್ತಾ ಕೆನಪದರದ ಬಗ್ಗೆ ಈ ನಾಲ್ವರು ನ್ಯಾಯಾಧೀಶರ ಅಭಿಪ್ರಾಯಗಳನ್ನು ಆದೇಶದ ಭಾಗವೆಂಬಂತೆ ಪ್ರಕಟಿಸಿದ್ದು ಕೂಡ ತೀರ್ಪು ಬಂದ ನಂತರದ ದಿನಗಳಲ್ಲಿ ವ್ಯಾಪಕವಾಗಿ ಹುಟ್ಟಿಕೊಂಡ ಗೊಂದಲಗಳಿಗೆ ಕಾರಣವಾಯಿತು. ಆನಂತರ ಅದು ಕೆಲವು ನ್ಯಾಯಾಧೀಶರ ಅನಗತ್ಯ ಹಾಗೂ ಅಪ್ರಾಸಂಗಿಕ ಅಭಿಪ್ರಾಯಗಳೇ ಹೊರತು ಆದೇಶವಲ್ಲ ಎಂದು ಸ್ಪಷ್ಟಗೊಳ್ಳುತ್ತಾ ಹೋಯಿತು.
ಆದರೂ ಬಿಜೆಪಿ ಮತ್ತು ಕಾಂಗ್ರೆಸ್, ಬಿಎಸ್‌ಪಿಯಂಥ ಹಲವು ಪಕ್ಷಗಳು ಕೆನಪದರದ ಬಗ್ಗೆ ಕೆಲವು ನ್ಯಾಯಾಧೀಶರ ಆದೇಶವಲ್ಲದ ಅಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಇಡೀ ಒಳಮೀಸಲಾತಿ ಆದೇಶವನ್ನೇ ವಿರೋಧಿಸಲು ಅಥವಾ ಅದರ ಅನುಷ್ಠಾನದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ದಿನಗಳೆದಂತೆ ಸ್ಪಷ್ಟವಾಗುತ್ತಿದೆ. ಈ ಪಕ್ಷಗಳ ಹುನ್ನಾರವನ್ನು ಅರ್ಥಮಾಡಿಕೊಳ್ಳದಿದ್ದರೆ ಸಾಮಾಜಿಕ ನ್ಯಾಯ ಕನ್ನಡಿಯ ಗಂಟಾಗಿಯೇ ಉಳಿದು ಬಿಡುವ ಅಪಾಯವಿದೆ.
ಬಿಜೆಪಿ: ಮೌನ ಮತ್ತು ನಿಷ್ಕ್ರಿಯತೆಯ ನಿಧಾನ ದ್ರೋಹ
ಒಳಮೀಸಲಾತಿಯ ಪರವಾದ ತೀರ್ಪನ್ನು ಕೊಟ್ಟಿದ್ದು ಸುಪ್ರೀಂ ಕೋರ್ಟೇ ಆಗಿದ್ದರೂ ಹಾಗೂ ಅದಕ್ಕೆ ಒಳಮೀಸಲಾತಿಯ ಹಿಂದಿರುವ ಸಾಂವಿಧಾನಿಕ ಹಾಗೂ ಸಹಜ ನ್ಯಾಯದ ಮಾನದಂಡಗಳ ಬಗ್ಗೆ ಜನಾಭಿಪ್ರಾಯ ರೂಪಿಸಿದ್ದು ಶೋಷಿತ ಸಮುದಾಯದ ಸಂಘಟನೆಗಳು ಮತ್ತು ಅವರ ಹೋರಾಟಗಳೇ ಆಗಿದ್ದರೂ ಬಿಜೆಪಿ ಮತ್ತು ಅದರ ಶ್ರೇಯಸ್ಸು ತಮಗೇ ಸೇರಬೇಕೆನ್ನುವ ರೀತಿಯಲ್ಲಿ ಕರ್ನಾಟಕದಲ್ಲಿ ಮತ್ತು ದೇಶಾದ್ಯಂತ ಪ್ರಚಾರ ಮಾಡುತ್ತಿವೆ. ಹಾಗೆ ನೋಡಿದರೆ ಒಂದೇ ವಾರದಲ್ಲಿ ಇಡಬ್ಲ್ಯುಎಸ್ ಮೀಸಲಾತಿಗೆ ಸಂವಿಧಾನ ತಿದ್ದುಪಡಿ ತಂದ ಮೋದಿ ಸರಕಾರ ಒಳಮೀಸಲಾತಿ ತರಲು ಸುಪ್ರೀಂಕೋರ್ಟಿನ ತೀರ್ಪಿನ ತನಕ ಕಾಯುವ ಅಗತ್ಯವೇ ಇರಲಿಲ್ಲ.
ಅದೇನೇ ಇರಲಿ. ತೀರ್ಪು ಬಂದ ನಂತರವಾದರೂ ಬಿಜೆಪಿ ತೀರ್ಪಿನ ಬಗ್ಗೆ ಮತ್ತು ಅದರ ಅನುಷ್ಠಾನದ ಬಗ್ಗೆ ಈವರೆಗೆ ಒಂದು ಅಧಿಕೃತ ನಿಲುವನ್ನು ವ್ಯಕ್ತಪಡಿಸಿಲ್ಲ. ಬದಲಿಗೆ ತೀರ್ಪು ಬಂದು 11 ದಿನಗಳಾದ ನಂತರ ಆಗಸ್ಟ್ 12ರಂದು ಸರಕಾರದ ಪರವಾಗಿ ಹೇಳಿಕೆ ನೀಡಿರುವ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಕ್ಯಾಬಿನೆಟ್ ಮಂತ್ರಿ ವೀರೇಂದ್ರ ಕುಮಾರ್ ಅವರು ‘‘ಕೇಂದ್ರ ಸರಕಾರವು ಕೆನಪದರ ನೀತಿಯ ವಿರುದ್ಧ ಬಲವಾದ ನಿಲುವು ತೆಗೆದುಕೊಂಡಿದೆ’’ ಎಂದು ಹೇಳುತ್ತಾ ಬಂದರೇ ವಿನಾ ಒಳಮೀಸಲಾತಿಯ ಬಗ್ಗೆ ಕೇಳಿದ ಪ್ರಶ್ನೆಗಳಿಗೆಲ್ಲಾ ಜಾರಿಕೆಯ ಉತ್ತರ ನೀಡತೊಡಗಿದರು. ಆದರೆ ಪತ್ರಕರ್ತರು ಪಟ್ಟು ಹಿಡಿದು ಪ್ರಶ್ನಿಸಿದಾಗ ‘‘ಸದ್ಯಕ್ಕೆ ನಾವು ಕೆನೆಪದರ ನೀತಿಯ ಬಗ್ಗೆ ಮಾತ್ರ ನಿಲುವು ತೆಗೆದುಕೊಂಡಿದ್ದೇವೆ’’ ಎಂದು ನೇರವಾಗಿಯೇ ಒಳಮೀಸಲಾತಿಯ ಬಗ್ಗೆ ನಿಲುವು ತೆಗೆದುಕೊಂಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
(https://www.thehindu.com/news/national/loud-in-its-opposition-to-creamy-layer-centre-takes-a-guarded-position-on-supreme-courts-sub-quota-verdict/article68517086.ece)
ಕಳೆದ ವರ್ಷ ತೆಲಂಗಾಣದ ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿಯವರು ಒಳಮೀಸಲಾತಿ ಹೋರಾಟದ ಮುಖಂಡ ಮಂದ ಕೃಷ್ಣ ಮಾದಿಗ ಅವರನ್ನು ಬಹಿರಂಗವಾಗಿ ಅಪ್ಪಿಕೊಂಡು ಆದಷ್ಟು ಬೇಗ ಒಳಮೀಸಲಾತಿ ಜಾರಿ ಮಾಡುವುದಾಗಿ ಚುನಾವಣಾ ಪೂರ್ವ ಭರವಸೆಯನ್ನು ನೀಡಿದ್ದರು. ಹೈದರಾಬಾದ್‌ನಲ್ಲಿ ಆ ಸಭೆ ನಡೆದ ಒಂದೇ ವಾರದಲ್ಲಿ ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿಯ ನೇತೃತ್ವದಲ್ಲಿ ಇದಕ್ಕಾಗಿ ಒಂದು ಉನ್ನತ ಮಟ್ಟದ ಸಮಿತಿಯನ್ನೂ ಕೂಡ ರಚಿಸಿದರು. ಆದರೆ ಆ ಸಮಿತಿ ಚುನಾವಣೆಗೆ ಮುಂಚೆ ಒಮ್ಮೆ ಸಭೆ ಸೇರಿದ್ದು ಬಿಟ್ಟರೆ ಮತ್ತೆ ಸಭೆ ಸೇರಲೇ ಇಲ್ಲ. ಮೂರನೇ ಮೋದಿ ಸರಕಾರ ಜೂನ್ 9ಕ್ಕೆ ರಚಿತವಾದರೂ ಮಂತ್ರಿಗಳು, ಕಾರ್ಯದರ್ಶಿಗಳೆಲ್ಲಾ ಅವರವರೇ ಇದ್ದರೂ ಆ ಸಮಿತಿ ಈವರೆಗೆ ಸಭೆ ಸೇರಿಲ್ಲ. ಆಗಸ್ಟ್ 1ಕ್ಕೆ ಸುಪ್ರೀಂ ಕೋರ್ಟ್ ತೀರ್ಮಾನ ಬಂದು ಮೂರು ವಾರಗಳು ಕಳೆಯುತ್ತಾ ಬಂದರೂ ಆ ಸಮಿತಿ ಸಭೆ ಸೇರುವ ಯೋಚನೆಯನ್ನು ಮಾಡಿಲ್ಲ ಎಂದರೆ ಮೋದಿ ಸರಕಾರಕ್ಕೆ ಒಳಮೀಸಲಾತಿ ಎಂಬುದು ವೋಟಿನ ದಾಳವಾಗಿತ್ತೇ ವಿನಾ ಸಾಮಾಜಿಕ ನ್ಯಾಯ ಒದಗಿಸುವ ಸಾಧನವಾಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಅಷ್ಟು ಮಾತ್ರವಲ್ಲ. ಪರಿಶಿಷ್ಟ ಜಾತಿಗಳ ಹಿತ ಸಾಧನೆಯ ಕಾವಲು ಕಾಯಲು ಸಾಂವಿಧಾನಿಕ ಸಂಸ್ಥೆಯಾದ ನ್ಯಾಷನಲ್ ಕಮಿಷನ್ ಫಾರ್ ಶೆಡ್ಯೂಲ್ಡ್ ಕಾಸ್ಟ್ಸ್ (ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ) ಇದೆ. 2024ರ ಮಾರ್ಚ್‌ನಲ್ಲಿ ಅದಕ್ಕೆ ಗುಜರಾತಿನ ಬಿಜೆಪಿಯ ವಕ್ತಾರರಾಗಿದ್ದ ಕಿಶೋರ್ ಮಕ್ವಾನ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸುಪೀಂ ತೀರ್ಪು ಬಂದು ಎರಡು ವಾರಗಳ ನಂತರವೂ ಅವರು ಆಯೋಗವು ತೀರ್ಪಿನ ಬಗ್ಗೆ ಅಂತಿಮ ನಿಲುವಿಗೆ ಬಂದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
(https://www.thehindu.com/news/national/not-formed-an-opinion-yet-on-sub-categorisation-of-scheduled-castes-for-quota-head-of-national-sc-panel-says/article68525243.ece)
ತಮ್ಮನ್ನು ಭೇಟಿಯಾದ ಪರಿಶಿಷ್ಟ ಮುಖಂಡರಿಗೂ ಪ್ರಧಾನಿ ಮೋದಿಯವರು ‘ಕೆನೆಪದರದ ವಿರೋಧ’ವನ್ನು ಖಾತರಿ ಪಡಿಸಿದ್ದಾರೆಯೇ ವಿನಾ ಒಳಮೀಸಲಾತಿಯ ಜಾರಿಯನ್ನಲ್ಲ. ಒಳಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ನೀಡಿರುವುದು ರಾಜ್ಯ ಸರಕಾರಗಳಿಗಾದ್ದರಿಂದ ಆ ಬಗ್ಗೆ ಕೇಂದ್ರ ಸರಕಾರದ ಪಾತ್ರವಿಲ್ಲ ಎಂಬುದು ಅದಕ್ಕೆ ಬಿಜೆಪಿಗರು ನೀಡುತ್ತಿರುವ ನೆಪ. ಆದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಯಾವ ಮುಖ್ಯಮಂತ್ರಿಗಳೂ ಈವರೆಗೆ ಒಳಮೀಸಲಾತಿ ಜಾರಿಯ ಬಗ್ಗೆ ಒಂದೂ ಅಧಿಕೃತ ಹೇಳಿಕೆಯನ್ನು ನೀಡಲಿಲ್ಲವೇಕೆ? ಬಿಜೆಪಿ ಕೂಡ ಈವರೆಗೆ ಹೇಳಿಕೆ ನೀಡಿಲ್ಲವೇಕೆ? ಬದಲಿಗೆ ಬಿಜೆಪಿಯ ಮಿತ್ರಪಕ್ಷಗಳೂ ಮತ್ತು ಬಿಜೆಪಿ ಪೋಷಿತ ಸಂಘಟನೆಗಳು ಸುಪ್ರೀಂ ಕೋರ್ಟಿನಲ್ಲಿ ತೀರ್ಪಿನ ವಿರುದ್ಧ ಅರ್ಜಿ ಹಾಕುವ ಸನ್ನಾಹದಲ್ಲಿರುವುದೇಕೆ?
ಹೀಗಾಗಿ ಒಳಮೀಸಲಾತಿ ಜಾರಿಯ ಬಗ್ಗೆ ಬಿಜೆಪಿಯ ಸೋಗಲಾಡಿತನ ಮತ್ತು ಒಳಮೀಸಲಾತಿಯೆಂಬ ಸಾಮಾಜಿಕ ನ್ಯಾಯ ತತ್ವಕ್ಕೆ ಮಾಡುತ್ತಿರುವ ಮಹಾದ್ರೋಹದ ಬಗ್ಗೆ ಶೋಷಿತ ಸಮುದಾಯ ಮೈಯೆಲ್ಲಾ ಎಚ್ಚರದಿಂದಿರುವ ಅಗತ್ಯವಿದೆ.
ಕಾಂಗ್ರೆಸ್: ಖರ್ಗೆ ಸಮಿತಿಯೆಂಬ ನಾಟಕವೇಕೆ?
ಒಳಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಮಾನ ಘೋಷಿಸಿದ ತಕ್ಷಣ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದನ್ನು ಸ್ವಾಗತಿಸಿದ್ದರು ಮತ್ತು ತ್ವರಿತವಾಗಿ ಜಾರಿ ಮಾಡುವ ಭರವಸೆ ನೀಡಿದ್ದರು. ಹಾಗೆಯೇ ತೆಲಂಗಾಣದ ಮುಖ್ಯಮಂತ್ರಿ ಒಳಾಮೀಸಲಾತಿ ಜಾರಿ ಮಾಡುವ ಪ್ರಥಮ ರಾಜ್ಯ ತೆಲಂಗಾಣವಾಗಲಿದೆ ಎಂದು ಘೋಷಿಸಿದ್ದರು.
ಆದರೆ ದಿನಗಳೆದಂತೆ ಅವರಿಬ್ಬರೂ ಮೌನವಾದರು. ಏಕೆಂದರೆ ಕಾಂಗ್ರೆಸ್ ಹೈಕಮಾಂಡ್ ಇದರ ಬಗ್ಗೆ ಇನ್ನೂ ಒಂದು ನಿಲುವಿಗೇ ಬಂದಿಲ್ಲ. ಆದರೆ ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಮತ್ತು ಲೋಕಸಭಾ ಚುನಾವಣೆಯ ಸಂದರ್ಭಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಒಳಮೀಸಲಾತಿಯ ಪರವಾಗಿ ಸ್ಪಷ್ಟ ಭರವಸೆಯನ್ನು ನೀಡಿತ್ತು.
ಅಷ್ಟು ಮಾತ್ರವಲ್ಲ. ತೀರ್ಪು ಪ್ರಕಟವಾದ ಮೊದಲ ನಾಲ್ಕೈದು ದಿನಗಳ ಕಾಲ ಕಾಂಗ್ರೆಸ್ ನಾಯಕರೆಲ್ಲಾ ಕೆನೆಪದರದ ಅಭಿಪ್ರಾಯಗಳನ್ನು ವಿರೋಧಿಸುತ್ತಾ ಸಮಯ ಕಳೆದರೇ ವಿನಾ ಒಳಮೀಸಲಾತಿ ಆದೇಶದ ಬಗ್ಗೆ ಚರ್ಚೆಯನ್ನೇ ಮಾಡಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ಖರ್ಗೆಯವರಂತೂ ಕೆನಪದರದ ವಿರೋಧವನ್ನು ಮುಂದುಮಾಡಿ ಇಡೀ ತೀರ್ಪೇ ದಲಿತ ವಿರೋಧಿ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು.
(https://indianexpress.com/article/india/govt-nullified-sc-creamy-layer-judgement-parliament-kharge-9506482/)
ಅಂತಿಮವಾಗಿ ಆಗಸ್ಟ್ 13ರಂದು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ದಿಲ್ಲಿಯಲ್ಲಿ ನಡೆದ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಘಟಕದ ಅಧ್ಯಕ್ಷರುಗಳು ಮತ್ತು ರಾಜ್ಯದ ಉಸ್ತುವಾರಿಗಳ ವಿಸ್ತೃತ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಒಳಮೀಸಲಾತಿಯ ಬಗ್ಗೆ ಸಿದ್ದರಾಮಯ್ಯ ಮತ್ತು ರೇವಂತ್ ರೆಡ್ಡಿಯವರು ತೋರಿದ ಉತ್ಸಾಹಕ್ಕೆ ವಿರುದ್ಧವಾದ ನಿಲುವನ್ನು ತೆಗೆದುಕೊಂಡಿದೆ. ಈ ಸಭೆಯಲ್ಲಿ ಒಳಮೀಸಲಾತಿಯ ಜಾರಿಯ ಬಗ್ಗೆ ಏನು ತೀರ್ಮಾನ ತೆಗೆದುಕೊಂಡಿದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಡುತ್ತಾ,
‘‘ತೀರ್ಪಿನ ಅಧ್ಯಯನದ ಬಗ್ಗೆ ಖರ್ಗೆಯವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು. ಆ ಬಳಿಕವೇ ಒಳಮೀಸಲಾತಿಯ ಕುರಿತು ಪಕ್ಷದ ನಿಲುವನ್ನು ಅಂತಿಮಗೊಳಿಸಲಾಗುವುದು’’ ಎಂದು ಕಾಂಗ್ರೆಸ್ ಅಧಿಕೃತವಾಗಿ ಹೇಳಿದೆ.
ಆದರೆ ಸಿದ್ದರಾಮಯ್ಯ ಮತ್ತು ರೇವಂತ್ ರೆಡ್ಡಿಯವರು ವ್ಯಕ್ತಪಡಿಸಿರುವ ಅಭಿಪ್ರಾಯಗಳ ಬಗ್ಗೆ ಕೇಳಿದಾಗ:
‘‘ಪಕ್ಷವು ಯಾವ ತೀರ್ಮಾನವನ್ನು ತೆಗೆದುಕೊಳ್ಳುತ್ತದೆಯೋ ಅದನ್ನು ರೇವಂತ್ ರೆಡ್ಡಿ ಸೇರಿದಂತೆ ಎಲ್ಲರೂ ಪಾಲಿಸಬೇಕು’’ ಎಂದು ಖಡಕ್ಕಾಗಿ ಉತ್ತರ ಕೊಟ್ಟಿದ್ದಾರೆ.
ಹೀಗೆ ಕಾಂಗ್ರೆಸ್ ಪಕ್ಷ ಕೂಡ ಒಳಮೀಸಲಾತಿಯ ಜಾರಿಯ ಬಗ್ಗೆ ನಿಧಾನ ದ್ರೋಹದ ಹಾದಿ ಹಿಡಿದಿರುವುದು ಸ್ಪಷ್ಟ.
ದುಷ್ಪರಿಣಾಮಗಳನ್ನು ನೆನೆದು ಒಳಮೀಸಲಾತಿಯ ಅಗತ್ಯವನ್ನು ಮರೆಯುವ ಹಿತೈಷಿ ವಿದ್ವಾಂಸರು
ಬಿಜೆಪಿ ಮತ್ತು ಕಾಂಗ್ರೆಸ್‌ಗಳ ಭಿನ್ನ ಭಿನ್ನ ದ್ರೋಹಗಳ ನಡೆಗಳ ಬಗ್ಗೆ ಎಚ್ಚರವಿರುವಂತೆ ಒಳಮೀಸಲಾತಿಯ ದೂರಗಾಮಿ ದುಷ್ಪರಿಣಾಮಗಳ ಬಗ್ಗೆ ಕೆಲವು ಹಿತೈಷಿ ವಿದ್ವಾಂಸರು ಮುಂದಿಡುತ್ತಿರುವ ಕೆಲವು ವಾದಗಳನ್ನು ಕೂಡ ಪರಿಶೀಲಿಸುವ ಅಗತ್ಯವಿದೆ. ಈ ವಿದ್ವಾಂಸರುಗಳೆಲ್ಲರೂ ಸಾಮಾಜಿಕ ನ್ಯಾಯದ ಪರವಾಗಿಯೇ ಇರುವರು ಮತ್ತು ಬಂಡವಾಳವಾದ ಮತ್ತು ಬ್ರಾಹ್ಮಣವಾದದ ಬಗ್ಗೆ ದೇಶದ ಜಾಗೃತಿಯನ್ನು ಕಾಪಿಟ್ಟುಕೊಂಡು ಬಂದವರು. ಇವರು ಒಂದು ಬಗೆಯ ಅಂಬೇಡ್ಕರ್ ವಾದಿಗಳೇ. ಇಂದಿನ ಸಂದರ್ಭದ ಖಾಸಗೀಕರಣ ಮತ್ತು ನವ ಉದಾರವಾದಿ ಆರ್ಥಿಕತೆಯ ದಾಳಿ ದಲಿತರನ್ನು ಮತ್ತು ಮೀಸಲಾತಿಯನ್ನು ಮತ್ತಷ್ಟು ನಿತ್ರಾಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಇದು ದಲಿತರೆಲ್ಲರ ಐಕ್ಯತೆ ಗಟ್ಟಿಯಾಗಬೇಕಿರುವ ಹೊತ್ತು. ಈ ಸಂದರ್ಭದಲ್ಲಿ ದಲಿತರೆಲ್ಲರೂ ಒಂದೇ ಅಲ್ಲ, ಎಂದು ಅವರನ್ನು ಮತ್ತಷ್ಟು ಛಿದ್ರಗೊಳಿಸುವ ಸುಪ್ರೀಂ ತೀರ್ಪು ಮೀಸಲಾತಿಯ ಲಾಭವನ್ನು ಸಮುದಾಯಕ್ಕೆ ಒದಗಿಸುವುದಕ್ಕಿಂತ ದಲಿತರ ಒಡಕನ್ನು ಹೆಚ್ಚಿಸುತ್ತದೆ ಮತ್ತು ಅದರ ಲಾಭವನ್ನು ಹಿಂದುತ್ವವಾದಿಗಳು ಮತ್ತು ಕಾರ್ಪೊರೇಟ್ ಶಕ್ತಿಗಳು ಮಾಡಿಕೊಳ್ಳುತ್ತವೆ ಎಂಬುದು ಈ ವಿದ್ವಾಂಸರ ಕಾಳಜಿ.
ಇದರ ಹಿಂದಿರುವ ಎಚ್ಚರವನ್ನು ಪರಿಗಣಿಸುತ್ತಲೇ, ದಲಿತ ಸಮುದಾಯ ಸದ್ಯದ ಪಾಲಿನ ಹೋರಾಟವನ್ನು ದೂರಗಾಮಿ ಸಮಾನತೆಯ ಆಶಯದೊಂದಿಗೆ ಬೆಸೆಯುವುದು, ದಲಿತ ಐಕ್ಯತೆಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ಚಿಂತಿಸಬೇಕು.
ಆದರೆ ಈ ವಿದ್ವಾಂಸರು ದೂರಗಾಮಿ ದುಷ್ಪರಿಣಾಮವನ್ನು ನೆನೆಯುತ್ತಾ ತುರ್ತಿನ ಒಳಮೀಸಲಾತಿಯ ಅಗತ್ಯವನ್ನು ಮರೆಯುತ್ತಿರುವುದು ಕೂಡ ತಪ್ಪು ತಿಳವಳಿಕೆಯಾಗಿದೆ. ಎಲ್ಲಾ ಶೋಷಿತರ ಐಕ್ಯತೆ ತುಂಬಾ ಮುಖ್ಯ. ಆದರೆ ಅದು ಐತಿಹಾಸಿಕವಾಗಿ ಶೋಷಿತರಲ್ಲೂ ಸಮಾಜಿಕ ತಾರತಮ್ಯಗಳಿವೆ ಎಂಬ ವಾಸ್ತವವನ್ನು ಮರೆಸಬಾರದು. ಆ ತಾರತಮ್ಯಗಳಿವೆ ಎಂಬುದನ್ನು ಒಪ್ಪಿಕೊಳ್ಳುವುದು ಮತ್ತು ಅದರ ನಿವಾರಣೆಗೆ ಒಳಮೀಸಲಾತಿಯಂತಹ ಸಾಧನಗಳಿಗೆ ಬೆಂಬಲಿಸುವುದು ದೂರಗಾಮಿ ಐಕ್ಯತೆಯನ್ನು ಸಾಧಿಸಲು ಅತ್ಯಂತ ಮುಖ್ಯವಾದ ತಾತ್ವಿಕ ಭೂಮಿಕೆಯಾಗಿದೆ.
ಒಟ್ಟಿನಲ್ಲಿ ಒಳಮೀಸಲಾತಿಯ ಜಾರಿಗಾಗಿ ದಶಕಗಳಿಂದ ಕಾಯುತ್ತಿರುವ ಶೋಷಿತ ಸಮುದಾಯಗಳು ಒಳಮೀಸಲಾತಿಯ ಪರವಾಗಿ ಬಂದಿರುವ ತೀರ್ಪಿನಿಂದ ಸಮಾಧಾನಗೊಂಡು ಸಂಭ್ರಮಿಸುವ ಕಾಲವಿನ್ನೂ ಬಂದಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರುವಂತೆ ಮಾಡಿಕೊಳ್ಳಲು ಮತ್ತು ಮತ್ತೊಮ್ಮೆ ಆಳುವ ಪಕ್ಷಗಳ ದ್ರೋಹಕ್ಕೆ ಬಲಿಯಾಗದಿರಲು ಶೋಷಿತ ಸಮುದಾಯ ಮತ್ತು ಪ್ರಜ್ಞಾವಂತ ನಾಗರಿಕರು ಒಟ್ಟುಗೂಡಿ ತೀರ್ಪಿನ ತ್ವರಿತ ಜಾರಿಗೆ ದೊಡ್ಡ ಹೋರಾಟವನ್ನು ಕಟ್ಟುವ ತುರ್ತಿದೆ.