ಭಾರತದ ಬಂಡವಾಳಶಾಹಿಗಳ ಮುಖಗಳು ಮತ್ತು ಮುಖವಾಡಗಳು

Update: 2024-10-17 06:09 GMT
Editor : Thouheed | Byline : ಶಿವಸುಂದರ್

ಭಾಗ- 2

1991ರ ನಂತರದ ಕೊಲೆಗಡುಕ ಬಂಡವಾಳಶಾಹಿ ಯುಗದ ನೇತಾರ

1991ರಲ್ಲಿ ಸೋವಿಯತ್ ಒಕ್ಕೂಟ ಕುಸಿದ ನಂತರದಲ್ಲಿ ನವ ವಸಾಹತುಶಾಹಿ ಅಮೆರಿಕ ಪ್ರಾಯೋಜಿತ, ಅಮೆರಿಕನ್ ಮಾದರಿ ಕೊಲೆಗಡುಕ ಬಂಡವಾಳಶಾಹಿ ವ್ಯವಸ್ಥೆಯನ್ನು ವಿಶ್ವಬ್ಯಾಂಕ್, ಐಎಂಎಫ್ ಮತ್ತು ವಿಶ್ವವಾಣಿಜ್ಯ ಸಂಸ್ಥೆಗಳು ಭಾರತದಂತಹ ಬಡದೇಶಗಳ ಮೇಲೂ ಹೇರಲಾರಂಭಿಸಿತು. ಭಾರತವೂ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ನೇತೃತ್ವದಲ್ಲಿ ಆವರೆಗೆ ನೆಪಮಾತ್ರಕ್ಕಾದರೂ ಇದ್ದ ದೇಶರಕ್ಷಕ, ಜನಪರ ನೀತಿಗಳನ್ನು ಕಿತ್ತು ಹಾಕಿ ಖಾಸಗೀಕರಣ-ಉದಾರೀಕರಣ-ಜಾಗತೀಕರಣ ನೀತಿಗಳ ಮೂಲಕ ಈ ಕೊಲೆಗಡುಕ ಬಂಡವಾಳಶಾಹಿ ವ್ಯವಸ್ಥೆಯನ್ನು ಜಾರಿ ಮಾಡಲಾರಂಭಿಸಿತು.

ಇದರ ಪ್ರಧಾನ ಅಂಶಗಳು:

ಸರಕಾರದ ಸ್ವತ್ತುಗಳನ್ನು ಖಾಸಗಿಯವರಿಗೆ ಪರಭಾರೆ ಮಾಡುವುದು, ಸರಕಾರಿ ರಂಗವನ್ನು ಮುಚ್ಚುವುದು, ತೆರಿಗೆ ಹಣ, ಬ್ಯಾಂಕು ಬಂಡವಾಳದ ಮೊದಲ ಹಕ್ಕುದಾರರು ದೊಡ್ದ ಬಂಡವಾಳಿಗರು, ವಿದೇಶಿ ಮತ್ತು ಸ್ವದೇಶಿ ಬಂಡವಾಳಿಗರ ಪ್ರವೇಶಕ್ಕೆ ಇದ್ದ ಎಲ್ಲಾ ಅಡೆತಡೆಗಳ ನಿವಾರಣೆ ಹಾಗೂ ಬಂಡವಾಳಶಾಹಿ ಲಾಭಕ್ಕೆ ಪೂರಕವಾಗಿ ಎಲ್ಲಾ ಕಾರ್ಮಿಕ, ಅರಣ್ಯ ಇತ್ಯಾದಿ ಕಾನೂನುಗಳನ್ನು ಬದಲಿಸಿ ಸಾರದಲ್ಲಿ ಪ್ರಕೃತಿಯ ಮೇಲೆ ಮತ್ತು ಕಾರ್ಮಿಕರ ಮೇಲೆ ಬಂಡವಾಳಶಾಹಿ ಸುಲಿಗೆಯನ್ನು ಸರ್ವಾಧಿಕಾರವನ್ನು ಕಾನೂನುಬದ್ಧಗೊಳಿಸುವ ಆಳ್ವಿಕೆ. ಸಂವಿಧಾನದಲ್ಲಿದ್ದ ಕಲ್ಯಾಣ ರಾಜ್ಯದ ಪರಿಕಲ್ಪನೆಗೆ ತದ್ವಿರುದ್ಧವಾಗಿ ಒಂದು ಬಂಡವಾಳಶಾಹಿ ಸರ್ವಾಧಿಕಾರವನ್ನು ಖಾಯಂಗೊಳಿಸುವ ಪೊಲೀಸು ರಾಜ್ಯದ ಜಾರಿ.

ಹಾಗೆ ನೋಡಿದರೆ ಬಂಡವಾಳಶಾಹಿ ವ್ಯವಸ್ಥೆಯೇ ಹಲವರನ್ನು ಸುಲಿದು ಕೆಲವರು ಬೆಳೆಯುವ ಅಮಾನವೀಯ ವ್ಯವಸ್ಥೆ. ಹೀಗಾಗಿ ನೀತಿಯುತ ಬಂಡವಾಳಶಾಹಿ ಎನ್ನುವ ಪದವೇ ತದ್ವಿರುದ್ಧ ಪದಗಳ ಸಮೂಹ. ಆದರೆ ಮೇಲ್ನೋಟಕ್ಕೆ ಕಾಣುವಂತೆ 91ರ ನಂತರ ಜಾರಿಯಾದದ್ದು ಅದಕ್ಕಿಂತಲೂ ಘೋರವಾದ ಕೊಲೆಗಡುಕ ಬಂಡವಾಳಶಾಹಿ ವ್ಯವಸ್ಥೆ.

ಇದೇ ಕಾಲಘಟ್ಟದಲ್ಲೇ, 1991ರಲ್ಲಿ ರತನ್ ಟಾಟಾರವರು ಟಾಟಾ ಸಮೂಹದ ನೇತಾರರಾಗಿ ಅಧಿಕಾರ ಸ್ವೀಕರಿಸಿದರು.

ಭಾರತವು ಹೊರಳಿಕೊಂಡ ಈ ಕೊಲೆಗಡುಕ ಬಂಡವಾಳಶಾಹಿ ವ್ಯವಸ್ಥೆಯ ಯುಗದ ಬಗ್ಗೆ ನೀತಿಯುತ ಬಂಡವಾಳಶಾಹಿ ಎಂಬ ಹೆಗ್ಗಳಿಕೆಯ ಟಾಟಾ ಉದ್ಯಮದ ನಿಲುವು ಮತ್ತು ಪ್ರತಿಕ್ರಿಯೆ ಏನಿತ್ತು?

ವಾಸ್ತವದಲ್ಲಿ ಈ ನೀತಿಯ ಪ್ರಮುಖ ಪ್ರತಿಪಾದಕರು ಮತ್ತು ಫಲಾನುಭವಿಗಳು ಟಾಟಾ ಉದ್ಯಮವೇ ಆಗಿತ್ತು. ಆಗ ವಿದೇಶಿ ಬಂಡವಾಳಕ್ಕೆ ಇಡಿಯಾಗಿ ಅವಕಾಶ ಕೊಡಬೇಕೆ ಎಂಬ ಬಗ್ಗೆ ಬೃಹತ್ ಬಂಡವಾಳ ಶಾಹಿಗಳ ಬಾಂಬೆ ಕ್ಲಬ್ ಮತ್ತು ಕೋಲ್ಕತಾ ಕ್ಲಬ್‌ಗಳ ವಾಗ್ವಾದಗಳಲ್ಲಿ ಟಾಟಾ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆ ಪರವಾದ ನಿಲುವನ್ನು ಹೊಂದಿದ್ದರು. ಅದೇ ರೀತಿ ಅರಣ್ಯಗಳಿಂದ ಆದಿವಾಸಿಗಳನ್ನು ಎತ್ತಂಗಡಿ ಮಾಡಿ ಖನಿಜ ಸಂಪತ್ತಿನ ಲೂಟಿ ಮಾಡಲು ಬೇಕಾದ ಕಾನೂನು ರಚಿಸುವುದರಲ್ಲಿ, ಬ್ಯಾಂಕ್ ಬಂಡವಾಳವು ಸಾಮಾನ್ಯ ಜನರಿಗಿಂತ ಜಾಸ್ತಿ ದೊಡ್ಡ ಉದ್ಯಮಿಗಳಿಗೆ ದಕ್ಕಬೇಕೆಂಬ ನೀತಿಯನ್ನು ರೂಪಿಸುವುದರಲ್ಲಿ, ಬಂದರು, ಏರ್‌ಪೋರ್ಟ್ ಇನ್ನಿತರ ಎಲ್ಲಾ ಸಾರ್ವಜನಿಕ ಸಂಸ್ಥೆಗಳನ್ನು ಹಂತಹಂತವಾಗಿ ಖಾಸಗೀಕರಿಸುವ, ಕಾರ್ಮಿಕ ಕಾನೂನುಗಳನ್ನು ಸಂಪೂರ್ಣವಾಗಿ ಮಾಲಕರ ಪರಗೊಳಿಸುವ ಎಲ್ಲಾ ಬದಲಾವಣೆಗಳಲ್ಲೂ ರತನ್ ಟಾಟಾರವರು ‘ದೇಶದ ಹಿತಾಸಕ್ತಿ’ಯ ಹೆಸರಿನಲ್ಲಿ ಬಂಡವಾಳಶಾಹಿ ಹಿತಾಸಕ್ತಿಯನ್ನು ಪ್ರತಿಪಾದಿಸಿ ಅಂತಹ ಬದಲಾವಣೆಗಳು ಕಾನೂನಾಗಲು ಶ್ರಮಿಸಿದರು.

ಇದೇ ಅವಧಿಯಲ್ಲಿ ಕಾರ್ಮಿಕರ ಪ್ರತಿಭೆಯನ್ನು ಹೊರಗುತ್ತಿಗೆಗೆ ಕೊಟ್ಟು ದುಡಿಸಿ ಲಾಭಗಳಿಸಿಕೊಳ್ಳುವ ಅತ್ಯಂತ ಅನೀತಿಯುತ ‘ಬಾಡಿ ಶಾಪಿಂಗ್’ ಉದ್ಯಮದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಅನ್ನು ರತನ್ ಟಾಟಾ ಪ್ರಾರಂಭಿಸಿದರು ಮತ್ತು ಅದನ್ನು ಜಗತ್ತಿನಾದ್ಯಂತ ವಿಸ್ತರಿಸಿದರು. ಆ ನಂತರ ಅದೇ ಮಾದರಿಯನ್ನು ಇನ್ಫೋಸಿಸ್, ವಿಪ್ರೋಗಳು ಮುಂದುವರಿಸಿದರು.

ವ್ಯಕ್ತಿಗಳು ಎಷ್ಟೇ ಸಜ್ಜನರಾಗಿದ್ದರೂ ಲಾಭವೇ ಪ್ರಧಾನವಾಗಿರುವ ಕೊಲೆಗಡುಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮೌಲ್ಯಗಳನ್ನು, ಸಂಸ್ಥೆಗಳನ್ನು, ಕಾರ್ಮಿಕರನ್ನು, ದೇಶದ ಸಂಪತ್ತನ್ನು ಬಲಿಗೊಡದೆ ಬೆಳೆಯರು.

ಹೀಗಾಗಿಯೇ 1991ರ ನಂತರದಲ್ಲಿ ಟಾಟಾ ಇತಿಹಾಸವೂ ದಲಿತರ-ಆದಿವಾಸಿಗಳ ರಕ್ತಸಿಕ್ತ ಇತಿಹಾಸವೇ ಆಗಿದೆ. ಕಾರ್ಮಿಕರ ಅಸಹಾಯಕ ನಿಟ್ಟುಸಿರಿನ ಇತಿಹಾಸವೇ ಆಗಿದೆ.

1996ರಲ್ಲಿ ಬದಲಾದ ಅರಣ್ಯ ನೀತಿಗಳ ಲಾಭವನ್ನು ಬಳಸಿಕೊಂಡು ಟಾಟಾ ತಮ್ಮ ಉಕ್ಕು ಉದ್ಯಮವನ್ನು ಒಡಿಶಾದ ಗೋಪಾಲ್‌ಪುರಕ್ಕೆ ವಿಸ್ತರಿಸಿದರು. ಆದರೆ ಅಲ್ಲಿ ಆದಿವಾಸಿಗಳನ್ನು ಎತ್ತಂಗಡಿ ಮಾಡದೆ ಉದ್ಯಮ ಸ್ಥಾಪನೆ ಸಾಧ್ಯವಿರಲಿಲ್ಲ. ಮೊದಲಿದ್ದ ಕಾನೂನುಗಳು ಆ ಅವಕಾಶ ಕೊಡುತ್ತಿರಲಿಲ್ಲ. 91ರ ನಂತರದ ಕೊಲೆಗಡುಕ ಕಾನೂನುಗಳು ಆದಿವಾಸಿಗಳನ್ನು ‘ರಾಷ್ಟ್ರೀಯ ಹಿತಾಸಕ್ತಿಯ’ ಹೆಸರಿನಲ್ಲಿ ಬಲವಂತವಾಗಿ ಎತ್ತಂಗಡಿ ಮಾಡುವ ಅವಕಾಶವಿತ್ತಿತು. ಇಲ್ಲಿ ರಾಷ್ಟ್ರೀಯ ಹಿತಾಸಕ್ತಿ ಅಂದರೆ ಆದಿವಾಸಿಗಳ ಹಿತಾಸಕ್ತಿಯಲ್ಲವಲ್ಲ. ಕೇವಲ ಟಾಟಾ-ಬಿರ್ಲಾ-ಅದಾನಿ-ಅಂಬಾನಿ ಇತ್ಯಾದಿಗಳ ಹಿತಾಸಕ್ತಿ.

ಇದೇ 1991ರ ನಂತರ ಬದಲಾದ ಭಾರತದ ಸಾರಾಂಶ. ಆದರೆ ಆದಿವಾಸಿಗಳು ಹೋರಾಡಿದರು. ಆದರೆ ಅವರ ನಾಯಕರು ಗುಟ್ಟಾಗಿ ಕೊಲೆಯಾದರು. ಕೊನೆಗೆ ಟಾಟಾ ಕಾರ್ಖಾನೆ ಪಕ್ಕದ ಕಳಿಂಗಪುರಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಬೃಹತ್ ಆದಿವಾಸಿಗಳ ಹೋರಾಟವನ್ನು ಬಗ್ಗು ಬಡಿದು 12 ಆದಿವಾಸಿಗಳನ್ನು ಕೊಂದು ಟಾಟಾ ಉಕ್ಕು ಕಾರ್ಖಾನೆಯನ್ನು ‘ನೀತಿವಂತ’ ಟಾಟಾ ಸ್ಥಾಪಿಸಿದರು.

ಹಾಗೆಯೇ, ದುಡಿದ ಶ್ರಮಕ್ಕೆ ತಕ್ಕ ಕೂಲಿ ಮತ್ತು ಭದ್ರತೆ ಒದಗಿಸುವುದು ಮಾನವೀಯ ನೀತಿಯಲ್ಲವೇ? ಆದರೆ ಅದಕ್ಕೆ ತದ್ವಿರುದ್ಧವಾಗಿ ಬದಲಾದ ಕಾರ್ಮಿಕ ನೀತಿಗಳ ಸೌಲಭ್ಯವನ್ನು ಬಳಸಿಕೊಂಡು ಕಾರ್ಮಿಕರನ್ನು ದೊಡ್ಡ ಮಟ್ಟದಲ್ಲಿ ‘ನೀತಿವಂತ’ ಟಾಟಾ ಉದ್ಯಮಗಳು ಕಿತ್ತೊಗೆದವು. ಉದಾಹರಣೆಗೆ ಕೇವಲ ಮೂರು ವರ್ಷಗಳಲ್ಲಿ ಟಾಟಾ ಕಾರ್ಖಾನೆಗಳಲ್ಲಿ ಪರ್ಮನೆಂಟ್ ಕಾರ್ಮಿಕರ ಸಂಖ್ಯೆ 30 ಸಾವಿರದಷ್ಟು ಇಳಿಯಿತು. ಅಲ್ಲದೆ ದೊಡ್ಡ ಸಂಖ್ಯೆಯಲ್ಲಿ ಯಾವುದೇ ಸೌಲಭ್ಯಗಳಿಲ್ಲದ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿದವರಲ್ಲಿ ಟಾಟಾ ಉದ್ಯಮವೇ ಮೊದಲಿಗ.

ಟಾಟಾಗಳ ಎಥಿಕ್ಸ್‌ಗಳ ಸೋಗಲಾಡಿತನ ಎದ್ದು ಕಾಣುವುದು, ಭೋಪಾಲ್ ದುರಂತಕ್ಕೆ ಕಾರಣವಾದ ಕಂಪೆನಿಯ ಮೇಲಿನ ಹೊರೆಗಳನ್ನು ಕಡಿಮೆ ಮಾಡುವಲ್ಲಿ ಟಾಟಾ ವಹಿಸಿದ ಪಾತ್ರ. ಅಮೆರಿಕದ ಯುನಿಯನ್ ಕಾರ್ಬೈಡ್ ಕಂಪೆನಿಯ ಲಾಭಾಸಕ್ತ ಬೇಜವಾಬ್ದಾರಿಯ ಕಾರಣಕ್ಕಾಗಿ 1984 ಡಿಸೆಂಬರ್‌ನಲ್ಲಿ ಅದರ ಭೋಪಾಲ್ ಘಟಕದಲ್ಲಿ ವಿಷಾನಿಲ ಸೋರಿಕೆಯಾಗಿ ತತ್‌ಕ್ಷಣದಲ್ಲಿ ಸಾವಿರಾರು ಜನ ಸತ್ತರು. ಲಕ್ಷಾಂತರ ಜನ ಈಗಲೂ ಒಂದಿಲ್ಲೊಂದು ಬಾಧೆಗೆ ಒಳಗಾಗಿದ್ದಾರೆ. ನಂತರ ಅದನ್ನು ಅಮೆರಿಕದ ಮತ್ತೊಂದು ರಾಸಾಯನಿಕ ಕಂಪೆನಿಯಾದ ಡೌ ಕಂಪೆನಿ ಕೊಂಡುಕೊಂಡಿತು. ಆದರೆ ಅದು ಯುನಿಯನ್ ಕಾರ್ಬೈಡ್ ಕಂಪೆನಿ ಮಾಡಿದ ಅನಾಹುತದ ಜವಾಬ್ದಾರಿ ಮತ್ತು ಪರಿಹಾರದ ಜವಾಬ್ದಾರಿ ಹೊರಲು ನಿರಾಕರಿಸಿತು. ಆಗ ಟಾಟಾ ಕಂಪೆನಿ ದೇಶದ ಜನರ ಪರವಾಗಿ ನಿಲ್ಲದೆ ಡೌ ಕಂಪೆನಿ ಪರವಾಗಿ ಭೋಪಾಲ್ ಘಟಕವನ್ನು ಶುದ್ಧೀಕರಿಸುವ ಚೌಕಾಸಿ ಮಾಡಿತು. ಏಕೆಂದರೆ ಡೌ ಕಂಪೆನಿಗೆ ಅಮೆರಿಕದಲ್ಲಿ ಟಾಟಾದ ಟಿಸಿಎಸ್ ಕಂಪೆನಿಯೊಂದಿಗೆ ಸುದೀರ್ಘ ಒಪ್ಪಂದವಾಗಿತ್ತು.

ಇದಲ್ಲದೆ ಟಾಟಾ ಕಾರ್ಖಾನೆಯಿರುವ ಜಮ್‌ಶೆಡ್ ಪುರವನ್ನು ಚುನಾಯಿತ ಆಡಳಿತವಿರುವ ಮುನಿಸಿಪಾಲಿಟಿ ಮಾಡಲು ಟಾಟಾಗಳು ದೊಡ್ಡ ವಿರೋಧವನ್ನು ವ್ಯಕ್ತಪಡಿಸುತ್ತಾ ಬಂದಿವೆ. ಈಗಲೂ ಇಡೀ ಭಾರತದಲ್ಲಿ ಚುನಾಯಿತ ಆಡಳಿತವಿಲ್ಲದ ಉದ್ಯಮವೊಂದು ಆಡಳಿತ ನಡೆಸುವ ಏಕೈಕ ನಗರ ಜಮ್‌ಶೆಡ್ ಪುರವಾಗಿದೆ. ಈಗ ಬೆಂಗಳೂರಿನಲ್ಲಿರುವ ಇಲೆಕ್ಟ್ರಾನಿಕ್ಸ್ ಸಿಟಿಯ ಉದ್ಯಮಿಗಳೂ ಅದೇ ಅಪ್ರಜಾತಾಂತ್ರಿಕ ಬಂಡವಾಳಶಾಹಿ ಸರ್ವಾಧಿಕಾರದ ಆಡಳಿತ ಮಾದರಿ ಬೇಕೆಂದು ಆಗ್ರಹಿಸುತ್ತಿದ್ದಾರೆ.

2002ರಲ್ಲಿ ಮೋದಿ ನೇತೃತ್ವದಲ್ಲಿ ಗುಜರಾತ್ ನರಮೇಧ ನಡೆದಾಗ ಪ್ರಾರಂಭದಲ್ಲಿ ಭಾರತದ ಬಹುಪಾಲು ದೊಡ್ಡ ಬಂಡವಾಳಿಗರು ಮೋದಿಯನ್ನು ತೀವ್ರವಾಗಿ ವಿಮರ್ಶಿಸಿ ಹೂಡಿಕೆ ಬಹಿಷ್ಕಾರ ಹಾಕಿದ್ದರು. ಆದರೆ 2008ರಲ್ಲಿ ಗುಜರಾತ್‌ನ ಮೋದಿ ಸರಕಾರ ಯಾವ ರಾಜ್ಯಗಳು ಕೊಡದಷ್ಟು ಭೂಮಿ, ಬಡ್ಡಿ ರಹಿತ ಬೃಹತ್ ಸಾಲ ಮತ್ತು ಲಾಭದ ಅವಕಾಶಗಳನ್ನು ಕೊಟ್ಟ ತಕ್ಷಣ ಹೂಡಿಕೆ ಬಹಿಷ್ಕಾರವನ್ನು ಮುರಿದು ನರಮೇಧದ ಗುಜರಾತಿನಲ್ಲಿ ನ್ಯಾನೊ ಕಾರು ಕಾರ್ಖಾನೆ ಹಾಕಿದ ಮೊದಲಿಗರು ರತನ್ ಟಾಟಾ.

ಅಷ್ಟು ಮಾತ್ರವಲ್ಲ.. ನರಮೇಧದ ಮೋದಿಯನ್ನು ಭಾರತದ ಅಭಿವೃದ್ಧಿ ಪುರುಷ ಎಂದು ಹಾಡಿ ಹೊಗಳಿ ಮೋದಿಯ ಮತ್ತು ನವ ಉದಾರವಾದಿ ಹಿಂದುತ್ವದ ದಿಲ್ಲಿ ಪ್ರವೇಶ ಸುಗಮಗೊಳಿಸಿದವರಲ್ಲಿ ಅದಾನಿಯನ್ನು ಬಿಟ್ಟರೆ ಬಹುದೊಡ್ಡ ಪಾತ್ರ ರತನ್ ಟಾಟಾ ಅವರಿಗಿದೆ.

ಅಲ್ಲದೆ... ಹಿಂದೂತ್ವವಾದಿಗಳು ಸಂವಿಧಾನ ವಿರೋಧಿಯಾಗಿ ಅಸ್ಸಾಮ್‌ನಲ್ಲಿ ಜಾರಿ ಮಾಡುತ್ತಿರುವ ಎನ್‌ಆರ್‌ಸಿ ಯೋಜನೆಗೂ ಟಾಟಾ ಅವರದ್ದೇ ತಾಂತ್ರಿಕ ಮತ್ತು ಡಿಜಿಟಲ್ ಬೆನ್ನೆಲುಬು.

ಮೊನ್ನೆಮೊನ್ನೆ

ಇಲೆಕ್ಟ್ರಾಲ್ ಬಾಂಡಡ್ ಹಗರಣದಲ್ಲಿ ಬಿಜೆಪಿಗೆ ಅತಿ ಹೆಚ್ಚು ದೇಣಿಗೆ ಕೊಟ್ಟು ಅತಿ ಹೆಚ್ಚು ಪ್ರತ್ಯುಪಕಾರವನ್ನು ಪಡೆದವರಲ್ಲಿ ಕೂಡ ಇತರ ದೊಡ್ಡ ಬಂಡವಳಿಗಾರೊಂದಿಗೆ ಟಾಟಾ ಉದ್ಯಮವೂ ಮುಂಚೂಣಿಯಲ್ಲಿದೆ..

‘ನೀತಿವಂತ’ ಟಾಟಾಗಳ ಸೋಗಲಾಡಿತನಕ್ಕೆ ಮತ್ತೊಂದು ಉದಾಹರಣೆ ಅವರ ಇಸ್ರೇಲ್ ನೀತಿ. ಇಸ್ರೇಲ್ 2005ರಲ್ಲಿ ಫೆಲೆಸ್ತೀನ್‌ನ ಮೇಲೆ ನಿರಂತರ ದಾಳಿ ಮಾಡುತ್ತಾ ಗಾಝಾ ಪಟ್ಟಿಯನ್ನು ಬಹಿರಂಗ ಸೆರೆಮನೆಯಾಗಿಸಿದಾಗ ಯಾವ ನೀತಿ ದ್ವಂದ್ವಗಳನ್ನು ಇಟ್ಟುಕೊಳ್ಳದೆ ಇಸ್ರೇಲ್‌ನಲ್ಲಿ ಉದ್ಯಮವನ್ನು ವಿಸ್ತರಿಸಿದ ಮೊದಲಿಗರು ಟಾಟಾಗಳೇ.

CSR-ಶೋಷಣೆಗೆ ಸೇವೆಯ ಮುಖವಾಡ

ಈ ಬಂಡವಾಳಶಾಹಿ ಬರ್ಬರತೆ ಕಾಣಿಸದಂತೆ ಮಾಡಲೆಂದೇ 2000ದಿಂದ Corporate Social Resposibility-CSR- ಎಂಬ ಸೋಗಲಾಡಿ ಕಾರ್ಪೊರೇಟ್ ಸಮಾಜಸೇವೆ ಎಂಬ ಯೋಜನೆ ಜಾರಿಗೆ ಬಂದಿದೆ. ಇದರ ಪ್ರಕಾರ ಲಾಭ ಮಾಡುವ ಕಾರ್ಪೊರೇಟ್ ಉದ್ಯಮಗಳು ತಮ್ಮ ಲಾಭದ ಶೇ.2ರಷ್ಟನ್ನು ಸಾರ್ವಜನಿಕ ಕಲ್ಯಾಣಕ್ಕೆ ಬಳಸಬೇಕು. ಹಲವಾರು ಉದ್ಯಮಗಳು ಇದನ್ನು ಗಿಡನೆಡಲು, ಕುಡಿಯುವ ನೀರು, ಶಾಲೆ ದತ್ತು ಇನ್ನಿತ್ಯಾದಿ ಕಾರ್ಯಕ್ರಮಗಳಿಗೆ ಬಳಸಿ ಜನರಲ್ಲಿ ತಾವು ಮಾಡುತ್ತಿರುವ ಶೋಷಣೆಯನ್ನು ಮರೆಸಿ ಬಂಡವಾಳಶಾಹಿ ಶೋಷಣೆಗೆ ಮತ್ತು ವ್ಯವಸ್ಥೆಗೆ ಸಾಮಾಜಿಕ ಮನ್ನಣೆ ಗಳಿಸಿಕೊಳ್ಳುತ್ತವೆ.

ಟಾಟಾ ಇದರಲ್ಲಿಯೂ ಮುಂದಾಳು. ಹೀಗಾಗಿಯೇ ರತನ್ ಟಾಟಾ ನಿಧನರಾದ ನಂತರ ಕಳಿಂಗನಗರದಲ್ಲಿ ನಡೆದ ಮತ್ತು ನಡೆಯುತ್ತಿರುವ ದಮನದ ಬದಲಿಗೆ ಅಥವಾ ದೇಶದ ಅರಣ್ಯ ಸಂಪತ್ತನ್ನು ಕಾರ್ಪೊರೇಟ್ ಉದ್ಯಮಿಗಳು ಸುಲಿಯುತ್ತಿರುವ ಕಥನಗಳ ಬದಲಿಗೆ ಅವರ ಉದ್ಯಮದಲ್ಲಿ ಕೆಲಸ ಪಡೆದ ದಲಿತರ-ಆದಿವಾಸಿಗಳ ಕತೆ ಹೆಚ್ಚು ಪ್ರಚಾರ ಪಡೆಯುತ್ತದೆ.

1991ರ ನಂತರದ ಟಾಟಾ ಸಾಮ್ರಾಜ್ಯದ ಇತಿಹಾಸ ಇಂತಹ ನೂರಾರು ರಕ್ತಸಿಕ್ತ ಕತೆಗಳನ್ನು ಹೊಂದಿದೆ. ಕೇವಲ ಟಾಟಾ ಸಾಮ್ರಾಜ್ಯವಲ್ಲ. ಎಲ್ಲಾ ಬೃಹತ್ ಕಾರ್ಪೊರೇಟ್ ಉದ್ಯಮಗಳ ಕತೆಗಳಲ್ಲೂ 1991ರ ನಂತರದ ಆದಿವಾಸಿ ಭಾರತದ, ದಲಿತ ಭಾರತದ, ಕಾರ್ಮಿಕ ಭಾರತದ ಸುಟ್ಟ ಹೊಗೆಯ ವಾಸನೆ ದಟ್ಟವಾಗಿ ಸಿಗುತ್ತದೆ.

ಬಂಡವಾಳಶಾಹಿ ವ್ಯವಸ್ಥೆಯೇ ಅನೀತಿಯುತವಾದದ್ದು. ಅದರಲ್ಲೂ 91ರ ನಂತರದ ಬಂಡವಾಳಶಾಹಿ ಜಗತ್ತು ಕೊಲೆಗಡುಕ ಜಗತ್ತು. ಅದರಲ್ಲಿ ಜನಪರತೆ ಅಥವಾ ಕಡಿಮೆ ದುಷ್ಟತೆ ಹುಡುಕುವುದು ಅಸಹಾಯಕ ಆತ್ಮವಂಚನೆ.

ಹೀಗಾಗಿ ಇಂದೋ ಮುಂದೋ ಪ್ರಕೃತಿ, ಸಮಾಜ ಮತ್ತು ಮನುಷ್ಯತ್ವ ಉಳಿಯಬೇಕೆಂದರೆ ಬಂಡವಾಳಶಾಹಿ ಅಳಿದು ಎಲ್ಲರೂ ಎಲ್ಲರಿಗಾಗಿ ಬದುಕುವ ಸಮಾಜವಾದಿ ವ್ಯವಸ್ಥೆ ಕಟ್ಟಬೇಕು. ಬೇರೆ ಪರ್ಯಾಯವಿಲ್ಲ.

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News