ಹರ್ಯಾಣದಲ್ಲಿ ಒಳಮೀಸಲಾತಿಯ ಬಗ್ಗೆ ಬಿಜೆಪಿಯ ಕಪಟ ನಾಟಕ ಮತ್ತು ಕಾಂಗ್ರೆಸಿನ ವಂಚನೆ

Update: 2024-08-25 09:17 GMT

ಹರ್ಯಾಣ ರಾಜ್ಯದ ವಿಧಾನ ಸಭೆಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ೯೦ ಶಾಸಕರ ವಿಧಾನ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಈ ಬಾರಿ 25 ಸೀಟುಗಳನ್ನು ಗಳಿಸುವುದು ಕಷ್ಟ ಎಂದು ಎಲ್ಲಾ ಸಮೀಕ್ಷೆಗಳೂ ಹೇಳುತ್ತಿವೆ. ಇದರ ಪೂರ್ವ ಸೂಚನೆ ಲೋಕಸಭಾ ಚುನಾವಣೆಯಲ್ಲೇ ದೊರೆತಿದೆ. 2019ರ ಚುನಾವಣೆಯಲ್ಲಿ ಬಿಜೆಪಿ ಹರ್ಯಾಣದ ಎಲ್ಲ್ಲ 10ಸೀಟುಗಳನ್ನು ಗೆದ್ದುಕೊಂಡಿತ್ತು. 2024ರ ಚುನಾವಣೆಯಲ್ಲಿ ಬಿಜೆಪಿ 10ರಲ್ಲಿ ಐದು ಸ್ಥಾನವನ್ನು ಕಳೆದುಕೊಂಡಿದ್ದರೆ, ಕಾಂಗ್ರೆಸ್ ಐದು ಸ್ಥಾನವನ್ನು ಭರ್ಜರಿಯಾಗಿ ಗೆದ್ದುಕೊಂಡಿತು.

ವಾಸ್ತವದಲ್ಲಿ ಚುನಾವಣೆಗೆ ಮುನ್ನ ಅಲ್ಲಿ ಮುಖ್ಯಮಂತ್ರಿಯಾಗಿದ್ದ ಜಾಟ್ ಸಮುದಾಯದ ಖಟ್ಟರ್ ಅವರನ್ನು ಬದಲಿಸಿ ಬಿಜೆಪಿ ಒಬಿಸಿ ಸಮುದಾಯಕ್ಕೆ ಸೇರಿದ್ದ ನಾಯಬ್ ಸಿಂಗ್ ಸೈನಿಯವರನ್ನು ಮುಖ್ಯಮಂತ್ರಿ ಮಾಡಿತ್ತು. ಆದರೂ ಹೆಚ್ಚಿಗೆ ಉಪಯೋಗವಾಗಿರಲಿಲ್ಲ.

ಈಗ ಹರ್ಯಾಣದ ವಿಧಾನಸಭಾ ಚುನಾವಣಾ ಘೋಷಣೆಯಾದ ನಂತರ ಶತಾಯ ಗತಾಯ ಗೆಲ್ಲಲು ದಲಿತ ಸಮುದಾಯವನ್ನು ಪುಸಲಾಯಿಸಲು ಬಿಜೆಪಿ ಪ್ರಯತ್ನಗಳನ್ನು ಪ್ರಾರಂಭಿಸಿದೆ. ಅದರ ಭಾಗವಾಗಿಯೇ ಒಳಮೀಸಲಾತಿಯ ಬಗ್ಗೆ ಬಿಜೆಪಿ ಸರಕಾರದ ಘೋಷಣೆ.

ಬಿಜೆಪಿ-ಒಳಮೀಸಲಾತಿ ಘೋಷಣೆಯ ಕಪಟ ನಾಟಕ:

ಚುನಾವಣಾ ಆಯೋಗವು ಹರ್ಯಾಣದಲ್ಲಿ ಆಗಸ್ಟ್ 16ರಂದೇ ಚುನಾವಣೆಯನ್ನು ಘೋಷಿಸಿತು. ಹೀಗಾಗಿ ಆಗಸ್ಟ್ 16ರಿಂದಲೇ ಹರ್ಯಾಣದಲ್ಲಿ ಚುನಾವಣಾ ನೀತಿ ಸಂಹಿತೆಯೂ ಜಾರಿಯಾಗಿದೆ. ಚುನಾವಣಾ ನೀತಿ ಸಂಹಿತೆಯ VII (6)(a) ಪ್ರಕಾರ:

"...From the time elections are announced by Commission, Ministers and other authorities shall not (a) announce any financial grants in any form or promises thereof;..

ಅಂದರೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ಆಡಳಿತಾರೂಢ ಸರಕಾರವು ಯಾವುದೇ ಭರವಸೆಗಳನ್ನು ಕೊಡುವಂತಿಲ್ಲ.ಆದರೆ ಹರ್ಯಾಣದ ಬಿಜೆಪಿ ಸರಕಾರದ ಕ್ಯಾಬಿನೆಟ್ ಆಗಸ್ಟ್ ೧೮ರಂದು ಒಳಮೀಸಲಾತಿಯ ಪರವಾಗಿ ಘೋಷಣೆ ಮಾಡಿದೆ. ಅಂದರೆ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಒಳಮೀಸಲಾತಿ ಘೋಷಿಸಿದೆ. ಹೀಗಾಗಿ ಈ ಘೋಷಣೆಗೆ ಮಾನ್ಯತೆ ಇಲ್ಲ. ಇದು ಕೇವಲ ಚುನಾವಣಾ ಪ್ರಯೋಜನದ ದುರುದ್ದೇಶದ ಘೋಷಣೆ ಬಿಟ್ಟರೆ ಇದರಲ್ಲಿ ಬಿಜೆಪಿಗೆ ಬದ್ಧತೆಯಿಲ್ಲ. ಎರಡನೆಯದಾಗಿ ಬಿಜೆಪಿ ಸರಕಾರ ಆಗಸ್ಟ್ 9ರಂದು ರಾಜ್ಯದ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ರಾಜ್ಯದಲ್ಲಿ ಒಳಮೀಸಲಾತಿಯನ್ನು ಹೇಗೆ ಅನ್ವಯಿಸಬಹುದು ಎಂಬ ಬಗ್ಗೆ ಸಲಹೆ ನೀಡಲು ಆದೇಶಿಸಿತ್ತು. ಸುಪ್ರೀಂ ಆದೇಶದ ಪ್ರಕಾರ ಒಳಮೀಸಲಾತಿ ಫಲಾನುಭವಿಗಳನ್ನು ಗುರುತಿಸಲು ಪರಿಶಿಷ್ಟ ಜಾತಿಗಳೊಳಗೆ ಸಾಪೇಕ್ಷ ಹಿಂದುಳಿದಿರುವಿಕೆ ಮತ್ತು ಸರಕಾರಿ ಸೇವೆಗಳ ಪ್ರಾತಿನಿಧ್ಯದಲ್ಲಿ ಅನುಪಾತ ಇವುಗಳ ಬಗ್ಗೆ empirical, quantifible ದತ್ತಾಂಶ ಇರಬೇಕು. ಅದಿಲ್ಲದೆ ಸರಕಾರಗಳು ರಾಜಕೀಯ ಉದ್ದೇಶದಿಂದ ಬೇಕಾಬಿಟ್ಟಿ ಒಳಮೀಸಲಾತಿ ಘೋಷಿಸುವಂತಿಲ್ಲ. ಅಂಥಾ ಯಾವುದೇ ಘೋಷಣೆಗಳು ನ್ಯಾಯಾಂಗದ ಪರಿವೀಕ್ಷಣೆಗೆ ಒಳಪಡುತ್ತದೆ. ಸೂಕ್ತ ರೀತಿಯಲ್ಲಿ ದತ್ತಾಂಶಗಳಿಲ್ಲ ಎಂದರೆ ಅಂಥ ಆದೇಶಗಳು ಅನೂರ್ಜಿತವಾಗುತ್ತವೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹರ್ಯಾಣದ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಬಿಜೆಪಿ ಸರಕಾರ ಆಗಸ್ಟ್ 9ಕ್ಕೆ ಸಲಹೆ ನೀಡಲು ಆದೇಶ ನೀಡಿದ್ದರೆ , ಆಗಸ್ಟ್ ೧೮ಕ್ಕೆ ಸರಕಾರ ಒಳಮೀಸಲಾತಿಯನ್ನು ಘೋಷಿಸಿದೆ.

ಪರಿಶಿಷ್ಟದೊಳಗಿನ 36 ಜಾತಿಗಳನ್ನು Deprived Scheduled Castes ಎಂದು ಪರಿಗಣಿಸಿ ಅವುಗಳಿಗೆ ಒಳಮೀಸಲಾತಿ ಘೋಷಿಸಿದೆ. ಆದರೆ ಇದಕ್ಕೆ ಪೂರಕವಾದ ದತ್ತಾಂಶಗಳನ್ನು ಪ್ರಕಟಿಸಿಲ್ಲ. ಹೀಗಾಗಿ ಇದು ಸುಪ್ರೀಂ ಹೇಳಿದ ಹಾಗೆ ರಾಜಕೀಯ ಉದ್ದೇಶದಿಂದ ಬೇಕಾಬಿಟ್ಟಿ ಮಾಡಿರುವ ಘೋಷಣೆಯೇ ಆಗಿರುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಬಿಜೆಪಿಯ ಈ ಘೋಷಣೆಯಲ್ಲಿ ಒಳಮೀಸಲಾತಿಯ ಬಗೆಗಿನ ಬದ್ಧತೆಗಿಂತ ಬರಲಿರುವ ಚುನಾವಣೆಯಲ್ಲಿ ಒಬಿಸಿ ಮತ್ತು ದಲಿತರಲ್ಲಿನ ಈ 36 ಜಾತಿಗಳನ್ನು ಒಲಿಸಿಕೊಳ್ಳುವ ಕಪಟ ನಾಟಕವೇ ಈ ತರಾತುರಿಯಲ್ಲಿ ಎದ್ದು ಕಾಣುತ್ತದೆ. ಅಷ್ಟು ಮಾತ್ರವಲ್ಲ. ಒಳಮೀಸಲಾತಿಯ ಬಗ್ಗೆ ಚುನಾವಣಾ ಅತಂತ್ರ ಎದುರಿಸುತ್ತಿರುವ ಹರ್ಯಾಣ ಬಿಟ್ಟರೆ ಮಿಕ್ಕ ಯಾವ ಸುಸ್ಥಿರ ಬಿಜೆಪಿ ಶಾಸಿತ ರಾಜ್ಯಗಳೂ-ಮಧ್ಯಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ, ಗುಜರಾತ್.. ಇತ್ಯಾದಿಗಳೂ- ಒಳಮೀಸಲಾತಿಯ ಬಗ್ಗೆ ಈವರೆಗೆ ನಿಲುವನ್ನು ಘೋಷಿಸಿಲ್ಲ. ಕ್ರಮಗಳನ್ನು ಘೋಷಿಸಿಲ್ಲ. ಹಾಗೆಯೇ ಬಿಜೆಪಿಯ ರಾಷ್ಟ್ರೀಯ ನಾಯಕತ್ವ ಕೂಡ ಇದರ ಬಗ್ಗೆ ಯಾವುದೇ ನಿಲುವಿಗೂ ಬಂದಿಲ್ಲ ಎಂದೇ ಸ್ಪಷ್ಟಪಡಿಸಿದೆ. ಆದ್ದರಿಂದ ಹರ್ಯಾಣದ ಬಿಜೆಪಿ ಸರಕಾರದ ಒಳಮೀಸಲಾತಿ ಘೋಷಣೆಯು ಒಂದು ಕಪಟ ನಾಟಕ ಮತ್ತು ದಲಿತರ ಆತಂಕಗಳ ಚುನಾವಣಾ ದುರ್ಬಳಕೆಯೇ ಹೊರತು ಮತ್ತೇನಿಲ್ಲ.

ಕಾಂಗ್ರೆಸಿನ ದಲಿತ ವಂಚನೆ

ಚುನಾವಣಾ ದುರುದ್ದೇಶಗಳಿಗೆ ಬಿಜೆಪಿ ಒಳಮೀಸಲಾತಿಯ ಪರವಾದ ಕಪಟ ನಾಟಕವಾಡಿದರೆ ಕಾಂಗ್ರೆಸ್ ಬಹಿರಂಗವಾಗಿ ಒಳಮೀಸಲಾತಿಗೆ ವಿರೋಧವನ್ನೇ ವ್ಯಕ್ತಪಡಿಸಿ ದಲಿತರಿಗೆ ವಂಚಿಸುತ್ತಿದೆ. ಹರ್ಯಾಣದ ಬಿಜೆಪಿ ಸರಕಾರದ ಒಳಮೀಸಲಾತಿ ಕಪಟ ಘೋಷಣೆಗೆ ಪ್ರತಿಕ್ರಿಯಿಸುತ್ತಾ ಹರ್ಯಾಣದ ಕಾಂಗ್ರೆಸ್ ನಾಯಕರು ಒಳಮೀಸಲಾತಿ ದಲಿತರನ್ನು ಒಡೆದಾಳುವ ಕುತಂತ್ರ ಎಂದು ಘೋಷಿಸಿ ತನ್ನ ಒಳಮೀಸಲಾತಿ ವಿರೋಧಿ ನಿಲುವನ್ನು ಬಹಿರಂಗಗೊಳಿಸಿಕೊಂಡಿದೆ.ರಾಷ್ಟ್ರ ಮಟ್ಟದಲ್ಲೂ ಒಳಮೀಸಲಾತಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ಸಮಿತಿ ಮಾಡಲಾಗುವುದು. ಆ ಸಮಿತಿಯ ವರದಿಯ ನಂತರವೇ ಒಳಮೀಸಲಾತಿಯ ಬಗ್ಗೆ ಅಂತಿಮ ನಿಲುವು ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿ ದಲಿತರು ಇತ್ತ ಭರವಸೆಗೆ ಕಾಂಗ್ರೆಸ್ ದ್ರೋಹ ಬಗೆದಿದೆ.

ಒಳಮೀಸಲಾತಿಗೆ ಮತ್ತು ಪಾಲು ಹೆಚ್ಚಳಕ್ಕೆ ಐಕ್ಯ ಹೋರಾಟದ ಅಗತ್ಯ. ಒಳಮೀಸಲಾತಿಯು ಮೀಸಲಾತಿಯ ವಿಸ್ತರಣೆ. ಮೀಸಲಾತಿಯು ಸಾಮಾಜಿಕ ನ್ಯಾಯದ ಸಾಧನ. ಹೀಗಾಗಿ ಸಾಮಾಜಿಕ ನ್ಯಾಯದ ಪರವಾಗಿರುವ ಎಲ್ಲರೂ ಒಟ್ಟಾಗಿ ಹೋರಾಡುವ ಅಗತ್ಯವಿದೆ. ಈ ಚುನಾವಣಾ ಪಕ್ಷಗಳ ವಂಚನೆಗಳಿಂದಾಗಿ ಒಳಮೀಸಲಾತಿ ಕೈಗೆ ಸಿಕ್ಕರೂ ಬಾಯಿಗೆ ದಕ್ಕದ ಪರಿಸ್ಥಿತಿ ಈಗ ಉಂಟಾಗಿದೆ. ಹಲವು ದಲಿತ ಸಂಘಟನೆಗಳಲ್ಲೂ ಸಂವಿಧಾನ ವಿರೋಧಿಯಾದ ಬಿಜೆಪಿ ಒಳಮೀಸಲಾತಿಯ ಮೂಲಕ ಮೀಸಲಾತಿಯನ್ನು ಮತ್ತು ಸಂವಿಧಾನವನ್ನು ರದ್ದು ಮಾಡುವ ಹುನ್ನಾರ ನಡೆಸಿರಬಹುದೇ ಎಂಬ ಅನುಮಾನವಿದೆ.

ಮತ್ತೊಂದೆಡೆ ಮೀಸಲಾತಿಯನ್ನು ಸಂಕುಚಿತಗೊಳಿಸಿರುವ ಶೇ.50ರ ಮೇಲ್ಮಿತಿ, ಬ್ಯಾಕ್ ಲಾಗ್ ಭರ್ತಿಗಾಗಿಯೂ ಒಟ್ಟು ಹೋರಾಟದ ಅಗತ್ಯವಿದೆ. ಹಾಗೆಯೇ ಮೀಸಲಾತಿಯನ್ನೇ ನಿರರ್ಥಕಗೊಳಿಸುತ್ತಿರುವ ಖಾಸಗೀಕರಣದ ವಿರುದ್ಧವೂ ದೊಡ್ಡ ಜನಹೋರಾಟ ಮಾಡದೆ ಒಳಮೀಸಲಾತಿ ಇರಲಿ. ಮೀಸಲಾತಿಯೇ ಅರ್ಥ ಕಳೆದುಕೊಳ್ಳುವ ಪರಿಸ್ಥಿತಿ ಇದೆ. ಹೀಗಾಗಿ ಮೀಸಲಾತಿ ಮತ್ತು ಒಳಮೀಸಲಾತಿಯ ಪರವಾಗಿ ದಲಿತರ ಮತ್ತು ಶೋಷಿತರ ನಡುವೆ ಏಕಾಭಿಪ್ರಾಯ ಮತ್ತು ಒಗ್ಗಟ್ಟು ಏರ್ಪಡುವುದು ಇಂದಿನ ತುರ್ತಿನ ಅಗತ್ಯವಾಗಿದೆ. ರಾಜಕೀಯ ಪಕ್ಷಗಳ ಚುನಾವಣಾ ಹುನ್ನಾರಗಳನ್ನು ಅರ್ಥ ಮಾಡಿಕೊಂಡು ಶೋಷಿತ ಜನ ಸಮುದಾಯಗಳೇ ಒಂದಾಗಿ ಮುಂದಾಗುವ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಶಿವ ಸುಂದರ್

contributor

Similar News