ಹಿಂದಿ ದಬ್ಬಾಳಿಕೆಯ ಮೂಲ ಭಾರತದ ಸಂವಿಧಾನದಲ್ಲೇ ಇದೆಯೇ?

ಹಿಂದಿ ಭಾಷೆಯ ಬಳಕೆಯನ್ನು ಈ ದೇಶದ ಸಂವಿಧಾನ ಒಂದು ದೇಶದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಯ ವಿಷಯವನ್ನಾಗಿ ಪರಿಗಣಿಸುತ್ತದೆ. ಹೀಗಾಗಿಯೇ ಹಿಂದಿಯೇತರ ಭಾಷಿಕರ ಆತಂಕ ಮತ್ತು ವಿರೋಧಗಳೂ ಕೂಡ ಭಾಷಿಕ ಸಂವಹನದ ವಿಷಯವಾಗದೆ ದೇಶದ ಭದ್ರತೆಗೆ ಆತಂಕ ತರುವ ವಿಷಯವಾಗಿ ಪರಿಗಣಿಸಲ್ಪಡುತ್ತಿದೆ. ಇದು ನಮ್ಮ ರಾಷ್ಟ್ರ ನಿರ್ಮಾಣದಲ್ಲಿರುವ ಒಂದು ದೊಡ್ಡ ಪೂರ್ವಗ್ರಹದ ಸಂಕೇತವೂ ಆಗಿದೆ. ಅಷ್ಟು ಮಾತ್ರವಲ್ಲ. ಈ ಹೇರಿಕೆ ಮತ್ತು ಪೂರ್ವಗ್ರಹವನ್ನು ನಮ್ಮ ಸಂವಿಧಾನದ 344ನೇ ವಿಧಿ ಸಂವಿಧಾನಬದ್ಧಗೊಳಿಸುತ್ತದೆ. ಇದರಿಂದ ಹಿಂದಿಯೇತರ ಭಾಷಿಕರು ಸಾಂವಿಧಾನಿಕವಾಗಿಯೇ ದ್ವಿತೀಯ ದರ್ಜೆ ಭಾಷಿಕರಾಗಿ ಸಾಂಸ್ಥಿಕ ತಾರತಮ್ಯಕ್ಕೆ ಗುರಿಯಾಗುವಂತಾಗಿದೆ. ಹೀಗಾಗಿ ಹಿಂದಿ ಹೇರಿಕೆಯೆನ್ನುವುದು ಕೇವಲ ಭಾಷಾ ಹೇರಿಕೆಯ ಸಮಸ್ಯೆಯಲ್ಲ. ಅದು ನಮ್ಮ ರಾಷ್ಟ್ರದ ಘಟಕಗಳ ನಡುವಿನ ಸಂಬಂಧದ ವಿಷಯವೂ ಆಗಿದೆ. ಅರ್ಥಾತ್ ಭಾರತ ರಾಷ್ಟ್ರದ ಸಾಂವಿಧಾನಿಕ ರಚನೆಯ ಸಮಸ್ಯೆಯೇ ಆಗಿದೆ.

Update: 2024-09-11 05:25 GMT
Editor : Thouheed | Byline : ಶಿವಸುಂದರ್

ಭಾಗ-  1

ಸೆಪ್ಟಂಬರ್ 13ರ ಹಿಂದಿ ದಿವಸ್ ಹತ್ತಿರ ಬರುತ್ತಿದ್ದಂತೆ, ದೇಶದ ಎಲ್ಲಾ ಭಾಷಿಕರ ಮೇಲೆ ಹಿಂದಿಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೇರುತ್ತಾ ಬಂದಿರುವ ಗೃಹಮಂತ್ರಿ ಅಮಿತ್ ಶಾರನ್ನು, ಇದೇ ಸೆಪ್ಟಂಬರ್ 9, 2024ರಂದು ಅಧಿಕೃತ ಭಾಷೆಯ ಬಗೆಗಿನ ಸಂಸದೀಯ ಸಮಿತಿಯು ಸರ್ವಸಮ್ಮತಿಯಿಂದ ತನ್ನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿಕೊಂಡಿದೆ.

ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅಮಿತ್ ಶಾ ಅವರು ಭಾರತದ ಮೇಲೆ ಹಿಂದಿ ಹೇರಿಕೆಯನ್ನು 2047ರೊಳಗೆ ಪೂರ್ಣಗೊಳಿಸುವ ನೀಲನಕ್ಷೆಯನ್ನು ಮುಂದಿಟ್ಟಿದ್ದಾರೆ. ಯಾವ ರೀತಿ ಮೋದಿ ಸರಕಾರ ಕಳೆದ ಹತ್ತು ವರ್ಷಗಳಲ್ಲಿ ಅತ್ಯಂತ ದಮನಕಾರಿ ಏಕಾಧಿಪತ್ಯದ ಆಡಳಿತ ನಡೆಸುತ್ತಾ ಮಾತಿನಲ್ಲಿ ಮಾತ್ರ ‘ಸಹಕಾರಿ ಫೆಡರಲಿಸಂ’ ಬಗ್ಗೆ ಸೋಗಲಾಡಿ ಘೋಷಣೆಗಳನ್ನು ಮಾಡುತ್ತಾ ಬಂದಿದೆಯೋ, ಅದೇ ರೀತಿಯಲ್ಲೇ ಅಮಿತ್ ಶಾ ಅವರೂ ಇತರ ಭಾರತೀಯ ಭಾಷೆಗಳ ಜೊತೆಗೆ ಮೈತ್ರಿಯನ್ನು ಬೆಳೆಸುತ್ತಾ ಇತರ ಭಾಷಿಕರೇ ಹಿಂದಿಯನ್ನು ‘ಒಪ್ಪಿಕೊಳ್ಳುವಂತೆ ಮಾಡುವ’ ಅಪಾಯಕಾರಿ ಘೋಷಣೆಗಳನ್ನು ಮಾಡಿದ್ದಾರೆ.

ಅದನ್ನು ಸಾಧ್ಯಗೊಳಿಸಲು ಅವರು ಮುಂದಿಟ್ಟಿರುವ ‘ರಾಜ್ ಮಾರ್ಗ’ವಿದು:

- 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವಷರ್ಗಳಾಗುವ ಹೊತ್ತಿಗಾದರೂ ಭಾರತದ ಆಡಳಿತವು ಭಾರತೀಯ ಭಾಷೆಯಿಂದಲೇ ಆಗಬೇಕು. ಪರಭಾಷೆ ಸಂಪೂರ್ಣವಾಗಿ ಆಡಳಿತದಿಂದ ಹೊರಗಾಗಬೇಕು.

- ಅದಕ್ಕಾಗಿ ಹಿಂದಿ ಭಾಷೆಯನ್ನು ಸಂಪೂರ್ಣವಾಗಿ ಸನ್ನದ್ಧಗೊಳಿಸಬೇಕು.

-ಅದನ್ನು ಸಾಧಿಸಲು ವಿವಿಧ ಭಾಷೆಗಳಿಂದ ಎರವಲು ಪಡೆದ ಸಾವಿರಾರು ಪಾರಿಭಾಷಿಕ ಪದಗಳುಳ್ಳ ಹಲವಾರು ಸಂಪುಟಗಳ ‘ಪಾರಿಭಾಷಿಕ ಶಬ್ದಕೋಶ’ವನ್ನು ತ್ವರಿತವಾಗಿ ಸಿದ್ಧಪಡಿಸಲಾಗುತ್ತಿದೆ.

-1963ರಲ್ಲಿ ಹಿಂದಿ ವಿಸ್ತರಣಾವಾದಿ ಯೋಜನೆಗಳನ್ನೇ ಮುಂದಿಟ್ಟ ಕೆ.ಎಂ. ಮುನ್ಷಿ-ಅಯ್ಯಂಗಾರ್ (ಇಬ್ಬರೂ ಹಿಂದುತ್ವವಾದಿಗಳೇ) ವರದಿಯನ್ನು ಮಾರ್ಗದರ್ಶಿ ಎಂದು ಘೋಷಿಸಿದ್ದಾರೆ.

-ಮೋದಿ ಅವಧಿಯ ಕಳೆದ ಹತ್ತು ವರ್ಷಗಳಲ್ಲಿ ಬ್ಯಾಂಕು, ರೈಲ್ವೆ, ಇನ್ನಿತ್ಯಾದಿ ಕಡೆ ಹೇರಿದ ‘ಹಿಂದಿ ಮಾತ್ರ ನೀತಿ’ಯನ್ನು ಭಾರತೀಯ ಭಾಷಾ ಸ್ನೇಹಿ ಹಿಂದಿ ನೀತಿಯೆಂದು ಬಣ್ಣಿಸಿ ಅದನ್ನೇ ಮುಂದಿನ ವರ್ಷಗಳಲ್ಲೂ ಪರಿಣಾಮಕಾರಿಯಾಗಿ ಜಾರಿ ಮಾಡುವುದಾಗಿ ಘೋಷಿಸಿದ್ದಾರೆ ಮತ್ತು

-ಈ ಉದ್ದೇಶಪೂರ್ವಕವಾಗಿಯೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯನ್ನು ರೂಪಿಸಿರುವುದಾಗಿ ಘೋಷಿಸಲಾಗಿದೆ.

ಸೆಪ್ಟಂಬರ್ 9, 2024ರಂದು ಹೊಸದಾಗಿ ರಚಿಸಲಾದ 30 ಸದಸ್ಯರ ಸಂಸದೀಯ ರಾಜ್ ಭಾಷಾ ಸಮಿತಿಯಲ್ಲಿ ವಿರೋಧ ಪಕ್ಷಗಳ ಸದಸ್ಯರೂ ಇದ್ದರು. ಹಾಗೆ ನೋಡಿದರೆ 1963 ರಿಂದ ಮುನ್ಶಿ-ಅಯ್ಯಂಗಾರ್ ಅವರ ಹಿಂದಿ ವಿಸ್ತರಣಾ ವರದಿಯನ್ನು 2014ರ ತನಕ ಎಷ್ಟು ಕಾರ್ಯಸಾಧುವೋ ಅಷ್ಟರಮಟ್ಟಿಗೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಜಾರಿ ಮಾಡುತ್ತಲೇ ಬಂದವು. ಏಕೆಂದರೆ ಹಿಂದಿಯನ್ನು ಏಕಮಾತ್ರ ಆಡಳಿತ ಭಾಷೆಯನ್ನಾಗಿ ಮಾಡುವ ಮೂಲಕ ಮಾತ್ರ ಹಲವಾರು ಭಿನ್ನಭಿನ್ನ ರಾಷ್ಟ್ರೀಯತೆಗಳ ಸಂಗಮವಾಗಿರುವ ಈ ಭಾರತ ಉಪಖಂಡ ಒಂದು ರಾಷ್ಟ್ರವಾಗಲು ಸಾಧ್ಯ ಎಂಬ ಅತ್ಯಂತ ಅಪ್ರಜಾತಾಂತ್ರಿಕ ಅಭಿಪ್ರಾಯ ಅಂದಿನ ಬಹುಪಾಲು ಎಲ್ಲಾ ರಾಜಕೀಯ ಪಕ್ಷಗಳ ಮತ್ತು ರಾಜಕೀಯ ನಾಯಕರ ಅಭಿಪ್ರಾಯವೂ ಆಗಿತ್ತು.

ಹೀಗೆ ಹಿಂದಿ ಹೇರಿಕೆ ಎನ್ನುವುದು ಕೇವಲ ಭಾಷಾ ಹೇರಿಕೆಯಾಗಿ ಮಾತ್ರವಲ್ಲದೆ ಒಂದು ಅಪ್ರಜಾತಾಂತ್ರಿಕ ತಳಹದಿಯಲ್ಲಿ ರಾಷ್ಟ್ರ ನಿರ್ಮಾಣ ಮಾಡುವ ಯೋಜನೆಯೂ ಆಗಿತ್ತು. ಆದ್ದರಿಂದಲೇ ಹಿಂದಿ ಅನುಷ್ಠಾನವನ್ನು ಭಾಷೆ ಅಥವಾ ಸಂಸ್ಕೃತಿ ಇಲಾಖೆಗೆ ನೀಡದೆ ಗೃಹ ಇಲಾಖೆಯ ಭಾಗವನ್ನಾಗಿ ಮಾಡಲಾಯಿತು.

ಆದರೆ 1967ರಲ್ಲಿ ಈ ಹಿಂದಿ ಹೇರಿಕೆ ಇತ್ಯಾದಿಗಳ ವಿರುದ್ಧ ತಮಿಳುನಾಡು ಹಾಗೂ ಇತರ ದಕ್ಷಿಣ ರಾಜ್ಯಗಳ ಉಗ್ರ ಪ್ರತಿಭಟನೆಯು ಕಾಂಗ್ರೆಸ್‌ಗೆ ರಾಜಕೀಯ ನಷ್ಟವನ್ನು ಉಂಟು ಮಾಡಿದ ಕಾರಣ ಅದರ ಅನುಷ್ಠಾನದ ವೇಗ ಕಡಿಮೆಯಾಯಿತು.

ಆದರೆ ಮೋದಿ ಸರಕಾರದ ಕಳೆದ ಹತ್ತು ವರ್ಷಗಳಲ್ಲಿ ಹಿಂದಿ ಹೇರಿಕೆಯು, ಹಿಂದುತ್ವದ ಹೇರಿಕೆ ಮತ್ತು ಒಂದು ದೇಶ-ಒಂದು ಭಾಷೆ, ಒಂದು ದೇಶ -ಒಂದೇ ಮತ, ಒಂದೇ ಪಕ್ಷ-ಒಂದೇ ನಾಯಕ ಇನ್ನಿತ್ಯಾದಿ ಹಿಂದುತ್ವವಾದಿ ಫ್ಯಾಶಿಸ್ಟ್ ರಾಜಕೀಯದ ಜೊತೆಗೆ ಬೆಸಗೊಂಡಿದೆ. ಹೀಗಾಗಿ ಸ್ವಾತಂತ್ರ್ಯಾನಂತರದಲ್ಲೇ ಅತ್ಯಂತ ತೀವ್ರಗತಿಯಲ್ಲಿ ಮತ್ತು ಬಲವಂತದ ರೂಪದಲ್ಲಿ ಜಾರಿಯಾಗುತ್ತಿದೆ.

ಈಗ 2024ರಲ್ಲಿ ಅದಕ್ಕೆ ತಾತ್ಕಾಲಿಕ ಹಿನ್ನಡೆಯಾಗಿರುವುದರಿಂದ ಬಿಜೆಪಿ ತನ್ನ ಮಾತಿನ ವರಸೆಯನ್ನು ಇತರ ಭಾಷೆಗಳೊಂದಿಗೆ ಮೈತ್ರಿಯೊಂದಿಗೆ ಹಿಂದಿಯನ್ನು ಒಪ್ಪಿಸಬೇಕು ಎನ್ನುವ ರೀತಿ ಬದಲಿಸಿಕೊಂಡಿದೆಯೇ ವಿನಾ ನೀತಿಯ ಹೂರಣ ಬದಲಾಗಿಲ್ಲ.

ಈ ನಿಟ್ಟಿನಲ್ಲಿ ಬಹುತ್ವವು ಭಾರತೀಯತೆಗೆ ಅಡ್ಡಿ ತರಬಹುದೆಂಬ ಕಾಂಗ್ರೆಸ್ ನೇತೃತ್ವದ ಭಾರತ ರಾಷ್ಟ್ರವಾದಿಗಳ ಹಿಂದಿ ಹೇರಿಕೆಗೂ, ಭಾರತವನ್ನು ಒಳಭೇದವಿಲ್ಲದ ಏಕಸ್ವರೂಪಿ ಹಿಂದುತ್ವ ರಾಷ್ಟ್ರವನ್ನಾಗಿಸಬೇಕೆಂಬ ಫ್ಯಾಶಿಸ್ಟರ ಹಿಂದಿ ಹೇರಿಕೆಗೂ ಹೆಚ್ಚು ಗುಣಾತ್ಮಕ ವ್ಯತ್ಯಾಸ ಕಂಡು ಬರದು.

ಏಕೆಂದರೆ ಹಿಂದಿ ಹೇರಿಕೆಯ ಮೂಲವಿರುವುದು ಹಲವು ಭಾಷಾ ರಾಷ್ಟ್ರೀಯತೆಗಳ ಅಸ್ಮಿತೆಯನ್ನು ಬಲವಂತದಿಂದ ಅಥವಾ ಯೋಜಿತವಾಗಿ ಅಳಿಸಿ ಹಾಕಿ ಬಲವಂತದ ಏಕಸ್ವರೂಪಿ ಹಿಂದಿ ಭಾಷಿಕ ಏಕ ಭಾರತವನ್ನು ಕಟ್ಟ ಬೇಕೆಂಬ ರಾಷ್ಟ್ರ ನಿರ್ಮಾಣ ಯೋಜನೆಯಲ್ಲಿ. ಹೀಗಾಗಿ ಹಿಂದಿ ಹೇರಿಕೆ ಕೇವಲ ಭಾಷಾ ಹೇರಿಕೆಯ ಸಮಸ್ಯೆ ಅಲ್ಲವೇ ಅಲ್ಲ. ಅದರ ಮೂಲ ಭಾರತ ರಾಷ್ಟ್ರ ನಿರ್ಮಾಣ ಯೋಜನೆಯಲ್ಲೂ ಇದೆ. ಸಂವಿಧಾನದಲ್ಲೂ ಇದೆ.

ಹಿಂದಿಯೇತರ ಭಾಷೆಗಳ ಅಸ್ಮಿತೆ ಭಾರತದ ಐಕ್ಯತೆಗೆ ಗಂಡಾಂತರವೇ?

ಉದಾಹರಣೆಗೆ ಭಾರತದ ಸಂವಿಧಾನದಲ್ಲಿ ಹಿಂದಿಗೆ ನೀಡಲಾಗಿರುವ ‘ರಾಜ’ ಮರ್ಯಾದೆಯನ್ನು ನೋಡಿ.

ಹಿಂದಿಯೇತರ ಇತರ ಭಾರತೀಯ ಭಾಷೆಯ ಬಗೆಗಿನ ಎಲ್ಲಾ ವಿಷಯಗಳು ಸಂಸ್ಕೃತಿ ಮತ್ತು ಶಿಕ್ಷಣ ಇಲಾಖೆಗಳ ಭಾಗವಾಗಿ ನಿರ್ವಹಿಸಲ್ಪಟ್ಟರೆ ರಾಜ್‌ಭಾಷಾ ಅರ್ಥಾತ್ ಹಿಂದಿ ಭಾಷಾ ಅನುಷ್ಠಾನದ ವಿಷಯವು ಮಾತ್ರ ಗೃಹ ಇಲಾಖೆಯು ಅರ್ಥಾತ್ ದೇಶದ ಭದ್ರತೆಯನ್ನು ನಿರ್ವಹಿಸುವ ಇಲಾಖೆಯಡಿ ನಿರ್ವಹಿಸಲ್ಪಡುತ್ತದೆ.

ಅಂದರೆ ಹಿಂದಿ ಭಾಷೆಯ ಬಳಕೆಯನ್ನು ಈ ದೇಶದ ಸಂವಿಧಾನ ಒಂದು ದೇಶದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಯ ವಿಷಯವನ್ನಾಗಿ ಪರಿಗಣಿಸುತ್ತದೆ. ಹೀಗಾಗಿಯೇ ಹಿಂದಿಯೇತರ ಭಾಷಿಕರ ಆತಂಕ ಮತ್ತು ವಿರೋಧಗಳೂ ಕೂಡ ಭಾಷಿಕ ಸಂವಹನದ ವಿಷಯವಾಗದೆ ದೇಶದ ಭದ್ರತೆಗೆ ಆತಂಕ ತರುವ ವಿಷಯವಾಗಿ ಪರಿಗಣಿಸಲ್ಪಡುತ್ತಿದೆ. ಇದು ನಮ್ಮ ರಾಷ್ಟ್ರ ನಿರ್ಮಾಣದಲ್ಲಿರುವ ಒಂದು ದೊಡ್ಡ ಪೂರ್ವಗ್ರಹದ ಸಂಕೇತವೂ ಆಗಿದೆ. ಅಷ್ಟು ಮಾತ್ರವಲ್ಲ. ಈ ಹೇರಿಕೆ ಮತ್ತು ಪೂರ್ವಗ್ರಹವನ್ನು ನಮ್ಮ ಸಂವಿಧಾನದ 344ನೇ ವಿಧಿ ಸಂವಿಧಾನಬದ್ಧಗೊಳಿಸುತ್ತದೆ. ಇದರಿಂದ ಹಿಂದಿಯೇತರ ಭಾಷಿಕರು ಸಾಂವಿಧಾನಿಕವಾಗಿಯೇ ದ್ವಿತೀಯ ದರ್ಜೆ ಭಾಷಿಕರಾಗಿ ಸಾಂಸ್ಥಿಕ ತಾರತಮ್ಯಕ್ಕೆ ಗುರಿಯಾಗುವಂತಾಗಿದೆ.

ಹೀಗಾಗಿ ಹಿಂದಿ ಹೇರಿಕೆಯೆನ್ನುವುದು ಕೇವಲ ಭಾಷಾ ಹೇರಿಕೆಯ ಸಮಸ್ಯೆಯಲ್ಲ. ಅದು ನಮ್ಮ ರಾಷ್ಟ್ರದ ಘಟಕಗಳ ನಡುವಿನ ಸಂಬಂಧದ ವಿಷಯವೂ ಆಗಿದೆ. ಅರ್ಥಾತ್ ಭಾರತ ರಾಷ್ಟ್ರದ ಸಾಂವಿಧಾನಿಕ ರಚನೆಯ ಸಮಸ್ಯೆಯೇ ಆಗಿದೆ.

ಭಾರತವು ತನ್ನ ವಿವಿಧ ಭಾಷಿಕ ಹಾಗೂ ಆಡಳಿತಾತ್ಮಕ ಘಟಕಗಳ ನಡುವೆ ಸರಿಸಮದ ಹಾಗೂ ಪರಸ್ಪರ ಸಮ್ಮತಿಯಾಧಾರಿತ ‘ಫೆಡರಲ್’ ಸಂಬಂಧವನ್ನು ಹೊಂದಿದೆಯೋ ಅಥವಾ ಶಾಸನ ಬಲದ ಮೂಲಕ ‘ಹಿಡಿದಿಟ್ಟುಕೊಳ್ಳುವ’ ಏಕಕೇಂದ್ರ ಸ್ವರೂಪದ-ಯೂನಿಯನಿಸ್ಟಿಕ್-ರಚನೆಯನ್ನು ಹೊಂದಿದೆಯೇ ಎನ್ನುವುದೇ ಹಿಂದಿ ಹೇರಿಕೆ, ಕೇಂದ್ರದ ಏಕಾಧಿಪತ್ಯ, ಅಸಮತೋಲಿತ ಅಭಿವೃದ್ಧಿ ಇನ್ನಿತ್ಯಾದಿಗಳ ಹಿಂದಿರುವ ಸಮಸ್ಯೆಯ ಮೂಲ.

ಆದ್ದರಿಂದ ಭಾರತದ ಸಂವಿಧಾನ ಸಭೆ ಇದರ ಬಗ್ಗೆ ಯಾವ ಚರ್ಚೆಯನ್ನು ಮಾಡಿ ಯಾವ ತೀರ್ಮಾನಕ್ಕೆ ತಲುಪಿತು, ಸಂವಿಧಾನ ಕರ್ತರು ಅಂದು ವಿಧಿಸಿ ಕೊಟ್ಟ ಸಂವಿಧಾನದ ಕಲಮುಗಳು ಏನು ಹೇಳುತ್ತವೆ ಮತ್ತು 75 ವರ್ಷಗಳ ನಮ್ಮ ಅನುಭವದಲ್ಲಿ ಆ ತೀರ್ಮಾನದ ಪರಿಣಾಮಗಳೇನಾಗಿವೆ ಎಂಬುದನ್ನು ಈಗ ಪರಿಶೀಲನೆಗೆ ಒಡ್ಡಬೇಕಿದೆ. ಸಾರದಲ್ಲಿ ನಮ್ಮ ಒಕ್ಕೂಟವು ‘ಫೆಡರಲ್’ ಹೌದೋ ಅಲ್ಲವೋ ಎಂಬುದೇ ಈ ಪರಾಮರ್ಶೆಯ ಅಡಿಗಲ್ಲು ಆಗಬೇಕಿದೆ.

ಯೂನಿಯನ್ ಎಂದರೆ ಫೆಡರೇಶನ್ ಅಲ್ಲ

ಭಾರತ ಸಂವಿಧಾನದ ಆರ್ಟಿಕಲ್ 1- ಭಾರತವನ್ನು ಇಂಡಿಯಾ ಅಂದರೆ ಭಾರತವು ರಾಜ್ಯಗಳ ಯೂನಿಯನ್ ಆಗಿರುತ್ತದೆ (India- That is Bharath, shall be Union Of States) ಎಂದು ಹೇಳುತ್ತದೆ. ಆನಂತರದಲ್ಲೂ ಸಂವಿಧಾನದಲ್ಲಿ ಎಲ್ಲಿಯೂ ಭಾರತ ಸರಕಾರವನ್ನು ಸೂಚಿಸುವಾಗ ಕೇಂದ್ರ ಸರಕಾರ ಎಂದೂ ಗುರುತಿಸಿಲ್ಲ ಎಂಬುದು ಎಷ್ಟು ನಿಜವೋ ಒಕ್ಕೂಟ ಸರಕಾರ- ಫೆಡರಲ್ ಸರಕಾರ ಎಂತಲೂ ಸೂಚಿಸಿಲ್ಲ ಎಂಬುದೂ ಅಷ್ಟೇ ನಿಜ.

ಭಾರತದ ಸಂವಿಧಾನ ಭಾರತವನ್ನು ಯೂನಿಯನ್ ಎಂದು ಮಾತ್ರ ನಮೂದಿಸಿದೆ. ಹಾಗೂ ಯೂನಿಯನ್ ಎಂದರೆ ಫೆಡರಲ್ ಎಂದರ್ಥವಲ್ಲ! ಇದೇ ಸಮಸ್ಯೆಯ ಮೂಲವೂ ಆಗಿದೆ.

ಹಾಗಿದ್ದಲ್ಲಿ ಭಾರತ ಸಂವಿಧಾನದಲ್ಲಿ ಪ್ರಸ್ತಾಪಿತವಾಗಿರುವ ಯೂನಿಯನ್‌ನ ಅರ್ಥವೇನು? ಭಾರತದ ಸಂವಿಧಾನದ ಸ್ವರೂಪವೇನು? ಮೋದಿ ಸರಕಾರದಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರಿ ಧೋರಣೆಗಳಿಗೆ ಸಾಂವಿಧಾನಿಕ ಮಾನ್ಯತೆಯಿದೆಯೇ? ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಅವರು ಸಂವಿಧಾನದ ಮೂಲಕವೇ ಸರ್ವಾಧಿಕಾರಿ ಹಿಂದೂರಾಷ್ಟ್ರ ತರುವ ಮಾತುಗಳನ್ನಾಡುತ್ತಿದ್ದಾರೆಯೇ? ಹಾಗಿದ್ದಲ್ಲಿ ಯೂನಿಯನ್ ಅನ್ನು ಒಕ್ಕೂಟ ಎಂದು ಭಾಷಾಂತರ ಮಾತ್ರ ಮಾಡಿಕೊಂಡು ಸಮಾಧಾನಿಸಿಕೊಳ್ಳುವುದು ಐತಿಹಾಸಿಕವಾಗಿ ಹಾಗೂ ಆಗಬೇಕಿರುವ ಬದಲಾವಣೆಯ ದೃಷ್ಟಿಯಿಂದ ಸರಿಯಾದ ರಾಜಕೀಯ ನಡೆಯಾಗುತ್ತದೆಯೇ?

ಇವೆಲ್ಲಕ್ಕೂ ಸರಿಯಾದ ಉತ್ತರವನ್ನು ಕಂಡುಕೊಳ್ಳಬೇಕೆಂದರೆ ಆಧುನಿಕ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಪ್ರಜಾತಾಂತ್ರಿಕ ಸಂವಿಧಾನದ ಮಾದರಿಗಳನ್ನೂ, ಭಾರತದ ಸಂವಿಧಾನ ರಚನೆಯಾಗುತ್ತಿದ್ದಾಗ ಇದ್ದ ಸಂದರ್ಭವನ್ನೂ ಹಾಗೂ ಈ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳ ಸಾರವನ್ನು ಗಮನಿಸಬೇಕಾಗುತ್ತದೆ.

ಒಪ್ಪಂದದ ಒಕ್ಕೂಟ ಮತ್ತು ಬಲವಂತದ ಕೂಟ

ಫೆಡರಲ್-ಎಂಬ ಪದದ ಮೂಲ Foedus ಎಂಬ ಲ್ಯಾಟಿನ್ ಪದವಾಗಿದ್ದು ಒಪ್ಪಂದ ಎಂಬ ಅರ್ಥವನ್ನು ಕೊಡುತ್ತದೆ. ಹೀಗಾಗಿ ಹಲವು ಭಿನ್ನ ಘಟಕಗಳು ಪರಸ್ಪರ ಒಪ್ಪಂದದ ಮೂಲಕ ಒಗ್ಗೂಡಿ ಏರ್ಪಡುವ ಘಟಕವನ್ನು ಫೆಡರಲ್- ಒಕ್ಕೂಟ ಎಂದು ಕರೆಯಲಾಗುತ್ತದೆ. ಇಲ್ಲಿ ಭಿನ್ನ ಘಟಕಗಳು ಒಪ್ಪಂದದ ಆಧಾರದ ಮೇಲೆ ‘ಒಗ್ಗೂಡಲು ಮುಂದೆ ಬರುತ್ತವೆ’ (Coming Together) ಹಾಗೂ ಅಂಥ ಏರ್ಪಾಡಿನಲ್ಲಿ ಭಿನ್ನ ಘಟಕಗಳಿಗೆ ಅತಿ ಹೆಚ್ಚು ಸ್ವಾಯತ್ತತೆ ಇರುತ್ತದೆ.

ಆದರೆ ಕೆಲವೊಮ್ಮೆ ಹಲವು ಭಿನ್ನ ಘಟಕಗಳನ್ನು ಒಂದಾಗಿ ‘ಹಿಡಿದಿಡಲಾಗುತ್ತದೆ’ (Holding Together). ಅಲ್ಲಿ ಒಪ್ಪಂದವಿರುವುದಿಲ್ಲ. ಹೀಗಾಗಿ ಅಲ್ಲಿನ ಉಪ ಘಟಕಗಳಿಗೆ ಫೆಡರಲ್ ಸ್ವರೂಪದ ರಚನೆಗಳಲ್ಲಿರುವಷ್ಟು ಸ್ವಾಯತ್ತತೆ ಇರುವುದಿಲ್ಲ.

ಆಧುನಿಕ ಜಗತ್ತಿನ ಇತಿಹಾಸದಲ್ಲಿ ಫೆಡರಲ್ ಸಂವಿಧಾನಗಳಿಗೆ ಅತಿ ದೊಡ್ಡ ಉದಾಹರಣೆ ಅಮೆರಿಕ ಸಂಯುಕ್ತ ಸಂಸ್ಥಾನದ ಫೆಡರಲ್ ಒಕ್ಕೂಟ. ಅಲ್ಲಿ ವಿವಿಧ ಪ್ರಾಂತೀಯ ಘಟಕಗಳು ಪೂರ್ವ ಷರತ್ತು ಹಾಗೂ ಪೂರ್ವ ಒಪ್ಪಂದಗಳ ಅನ್ವಯ ಒಂದು ಫೆಡರಲ್ ಒಕ್ಕೂಟವಾಗಿ ಏರ್ಪಟ್ಟವು. ಹೀಗಾಗಿ ಅಲ್ಲಿನ 50 ಭಿನ್ನ ರಾಜ್ಯಗಳು ಸಂಪೂರ್ಣ ಸ್ವಾಯತ್ತೆಯನ್ನು ಹೊಂದಿವೆ. ಅಮೆರಿಕದ ಫೆಡರಲ್ ಸರಕಾರ ಕೊಡುವ ನಾಗರಿಕತ್ವದ ಜೊತೆಗೆ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರತ್ಯೇಕ ನಾಗರಿಕತ್ವವನ್ನು ಕೊಡುತ್ತದೆ. ಹಾಗೆಯೇ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರತ್ಯೇಕ ಚುನಾವಣಾ ವ್ಯವಸ್ಥೆ ಹಾಗೂ ಆಯೋಗವನ್ನು ಹೊಂದಿದೆ. ಒಕ್ಕೂಟ ಸರಕಾರಕ್ಕೆ ಸೀಮಿತ ಅಧಿಕಾರವಿದೆ. ಸಂವಿಧಾನದಲ್ಲಿ ಹೇಳದೆ ಉಳಿದುಹೋದ ಅಥವಾ ಹೊಸದಾಗಿ ಉದ್ಭವಿಸುವ ವಿಷಯಗಳ ಮೇಲೆ ಶಾಸನ ಮಾಡುವ ಅಂತಿಮ ಅಧಿಕಾರ ರಾಜ್ಯಗಳಿಗೇ ನೀಡಲಾಗಿದೆ. ರಾಜ್ಯಗಳ ಗಡಿಗಳ ಮೇಲೆ ಪರಮಾಧಿಕಾರವೂ ಆಯಾ ರಾಜ್ಯಗಳದ್ದೇ ಆಗಿದೆ.

ಹಾಗೆಯೇ ಈ ಹಿಂದಿನ ಸೋವಿಯತ್ ಗಣರಾಜ್ಯಗಳ ಒಕೂಟವೂ ತನ್ನ ಘಟಕಗಳಿಗೆ ಸಂವಿಧಾನದಲ್ಲಿ ಸಂಪೂರ್ಣ ಸ್ವಾಯತ್ತೆಯನ್ನು ಘೋಷಿಸಿತ್ತು ಮತ್ತು ಸ್ವನಿರ್ಣಯ ಅಧಿಕಾರದ ಜೊತೆಗೆ ಒಕ್ಕೂಟದಿಂದ ಬೇರ್ಪಡುವ ಹಕ್ಕು ಆ ಸಂವಿಧಾನದಲ್ಲಿ ಅಂತರ್ಗತವಾಗಿತ್ತು.

ಇದರ ಜೊತೆಗೆ ಕೆನಡಾ ಮತ್ತು ಸ್ವಿಟ್ಸರ್‌ಲ್ಯಾಂಡ್ ಸಂವಿಧಾನಗಳು ಯೂನಿಯನ್ ಎಂಬ ಹೆಸರಿಟ್ಟುಕೊಂಡಿದ್ದರೂ ಪರಿಪೂರ್ಣ ಫೆಡರಲ್ ಸಂವಿಧಾನಗಳಾಗಿವೆ. ಆಸ್ಟ್ರೇಲಿಯ ಕೂಡ ಒಕ್ಕೂಟದ ಪಟ್ಟಿಗೆ ಸೇರಿಕೊಳ್ಳುತ್ತವೆ.

ಆದರೆ ವರ್ಣಭೇದದ ದ. ಆಫ್ರಿಕಾ ಸಂವಿಧಾನ ಇದಕ್ಕೆ ತದ್ವಿರುದ್ಧವಾಗಿ ಭಿನ್ನಘಟಕಗಳನ್ನು ಒಗ್ಗೂಡಿಸಿ ಮಾಡಿದ ಯೂನಿಯನ್ ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News