ನ್ಯಾ. ಕೃಷ್ಣ ದೀಕ್ಷಿತರ ಸನಾತನವಾದಿ ಅಭಿಪ್ರಾಯಗಳು ಮತ್ತು ಸಮಾನತಾವಾದಿ ಸಂವಿಧಾನದ ಆಶಯಗಳು

ಸಂವಿಧಾನವನ್ನು ರಕ್ಷಿಸಬೇಕಿರುವ ಹಿರಿಯ ನ್ಯಾಯಾಧೀಶರುಗಳು ಸಂವಿಧಾನದ ಮೌಲ್ಯಗಳಿಗೆ ತದ್ವಿರುದ್ಧವಾದ ಮನುವಾದಿ ವ್ಯಾಖ್ಯಾನಗಳನ್ನು ಮಾಡುತ್ತಿರುವುದು ಅಪಾಯಕಾರಿ. ಅದನ್ನು ನ್ಯಾಯಾಂಗ ಸಮುದಾಯ ಮತ್ತು ಪ್ರಜ್ಞಾವಂತ ಸಮಾಜ ವಿರೋಧಿಸಲೇ ಬೇಕು. ಅದು ಸಂವಿಧಾನವೇ ಈ ದೇಶದ ನಾಗರಿಕರಿಗೆ ಕೊಟ್ಟಿರುವ ಹಕ್ಕು. ಏಕೆಂದರೆ ಈ ಸಂವಿಧಾನ ರಚಿಸಿದ್ದು ನಾವು ಈ ದೇಶದ ಜನತೆ.

Update: 2024-08-14 04:22 GMT
Editor : Thouheed | Byline : ಶಿವಸುಂದರ್

‘‘ನಮ್ಮ ದೇಶದ ಸಾಂವಿಧಾನಿಕ ಕಾನೂನುಗಳ ಮೂಲವೂ ಧರ್ಮವೇ ಆಗಿದೆ. ಉದಾಹರಣೆಗೆ ಮನುಸ್ಮತಿ ಎಲ್ಲಾ ನಾಗರಿಕರಿಗೂ ಸಮಾನವಾದ ಆಚಾರ, ವ್ಯವಹಾರ ಮತ್ತು ಪ್ರಾಯಶ್ಚಿತ್ತವನ್ನು ಬೋಧಿಸುತ್ತದೆ.’’

-ಜಸ್ಟಿಸ್ ಕೃಷ್ಣ ದೀಕ್ಷಿತ್,

‘ಧರ್ಮ ಮತ್ತು ಕಾನೂನು’ ವಿಚಾರ ಸಂಕಿರಣದಲ್ಲಿ.

‘‘ಭಾರತದ ಉಜ್ವಲ ಪರಂಪರೆಯಲ್ಲಿ ಅದ್ಭುತವಾದ ಕಾನೂನು ದರ್ಶನವನ್ನು ನೀಡಿದ ಮನುಸ್ಮತಿ, ಕೌಟಿಲ್ಯ, ಯಾಜ್ಞವಲ್ಕ್ಯ ..ಇನ್ನಿತರರನ್ನು ಮರೆತಿರುವುದರಿಂದಲೇ ಸ್ವಾತಂತ್ರ್ಯೋತ್ತರ ಭಾರತದಲ್ಲೂ ಕಾನೂನಿನ ವಸಾಹತೀಕರಣ ಮುಂದುವರಿದಿದೆ.’’

-ಜಸ್ಟಿಸ್ ಅಬ್ದುಲ್ ನಝೀರ್, (ಈಗ ಆಂಧ್ರದ ರಾಜ್ಯಪಾಲರು)

‘‘ಭಾರತದ ಸಂವಿಧಾನದ ಬಗ್ಗೆ ಅತ್ಯಂತ ಹೀನಾಯವಾದದ್ದು ಏನೆಂದರೆ ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ವಾಸ್ತವವಾಗಿ ನಮ್ಮ ಮನುಸ್ಮತಿ ಅತ್ಯಂತ ಪ್ರಾಚೀನವಾಗಿದ್ದು, ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರವನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ.’’

-ಆರ್ಗನೈಸರ್, ಆರೆಸ್ಸೆಸ್‌ನ ಮುಖಪತ್ರಿಕೆ, 1949.

‘‘ನಾವು ಅತ್ಯಂತ ಉದ್ದೇಶಪೂರ್ವಕವಾಗಿಯೇ ಮನುಸ್ಮತಿಯನ್ನು ಸಾಮೂಹಿಕವಾಗಿ ಸುಟ್ಟುಹಾಕಿದೆವು. ಏಕೆಂದರೆ ಮನುಸ್ಮತಿಯು ನಮ್ಮನ್ನು ಶತಮಾನಗಳಿಂದ ತುಳಿದಿಟ್ಟ ವ್ಯವಸ್ಥೆಯ ಪ್ರತೀಕವಾಗಿದೆ.’’

-ಡಾ. ಬಿ.ಆರ್. ಅಂಬೇಡ್ಕರ್, ಡಿಸೆಂಬರ್ 27, 1927

‘‘ಅತ್ಯಂತ ಅಮಾನವೀಯ, ಅಸಮಾನ ಹಾಗೂ ಅನ್ಯಾಯಯುತವಾದ ಮೌಲ್ಯಗಳನ್ನು ಒಳಗೊಂಡ ಮನುಸ್ಮತಿಯಂಥ ಪುರಾತನ ಗ್ರಂಥಗಳು ಭಾರತದ ಸಂವಿಧಾನದ ಧ್ಯೇಯೋದ್ದೇಶಗಳಿಗೆ ತದ್ವಿರುದ್ಧವಾದವು. ಡಾ. ಅಂಬೇಡ್ಕರ್ 1927ರಲ್ಲಿ ಮನುಸ್ಮತಿಯನ್ನು ಸುಟ್ಟುಹಾಕಿದ್ದರು. ಇಂದು ಅದೇ ರೀತಿ ಮನುಸ್ಮತಿಯ ವಿರುದ್ಧ ಬಂಡೇಳುವ ಧೈರ್ಯ ನಮಗಿದೆಯೇ?’’

-(ದಿ)ಜಸ್ಟಿಸ್ ಪಿ.ಬಿ. ಸಾವಂತ್, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು.

ಕೊನೆಯ ಹೇಳಿಕೆ ದಿವಂಗತರಾದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾ. ಪಿ.ಬಿ. ಸಾವಂತ್ ಅವರದ್ದು. ಈಗ ಇಂಥ ಹೇಳಿಕೆಯನ್ನು ಕೊಡಬಲ್ಲ ನ್ಯಾಯಾಧೀಶರು ಅತ್ಯಂತ ವಿರಳ ಮಾತ್ರವಲ್ಲ, ಅದಕ್ಕೆ ತದ್ವಿರುದ್ಧವಾಗಿ ಪೀಠದಲ್ಲಿದ್ದುಕೊಂಡೇ ಸಂವಿಧಾನ ವಿರೋಧಿ ಆಶಯಗಳುಳ್ಳ ಭಗವದ್ಗೀತೆ, ಮನುಸ್ಮತಿ ಇತ್ಯಾದಿ ಬ್ರಾಹ್ಮಣೀಯ ಮೌಲ್ಯಗಳ ಗ್ರಂಥವನ್ನು ಎತ್ತಿಹಿಡಿಯುವ ನ್ಯಾಯಾಧೀಶರ ಸಂಖ್ಯೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಹೆಚ್ಚಾಗುತ್ತಿದೆ.

ಸಂವಿಧಾನದ ಮೌಲ್ಯಗಳು ಮತ್ತು ನ್ಯಾ. ದೀಕ್ಷಿತರ ಅಭಿಪ್ರಾಯಗಳು

ಅದಕ್ಕೆ ಇತ್ತೀಚಿನ ಉದಾಹರಣೆ ಮೊನ್ನೆ ಬೆಂಗಳೂರಿನಲ್ಲಿ ವಿ. ತಾರಕರಾಮ್ ನೆನಪಿನ ಕಾರ್ಯಕ್ರಮದಲ್ಲಿ ಕರ್ನಾಟಕ ಹೈಕೋರ್ಟ್ ನ ಹಿರಿಯ ನ್ಯಾಯಾಧೀಶ ನ್ಯಾ. ಕೃಷ್ಣ ದೀಕ್ಷಿತರು ‘ಕಾನೂನು ಮತ್ತು ಧರ್ಮ’ದ ಕುರಿತು ಮಾಡಿದ ಭಾಷಣ. ತಮ್ಮ ಭಾಷಣದಲ್ಲಿ ನ್ಯಾ. ದೀಕ್ಷಿತರು ಸಂವಿಧಾನಕ್ಕೂ ಮೂಲವಾದದ್ದು ಧರ್ಮವೆಂದು ಹೇಳಿದ್ದು ಮಾತ್ರವಲ್ಲದೆ, ಆ ಧರ್ಮ ಮನುಸ್ಮತಿಯೆಂದು ನೇರವಾಗಿಯೇ ಸೂಚಿಸಿದ್ದಾರೆ. ಮನುಸ್ಮತಿ ಎಲ್ಲಾ ನಾಗರಿಕರಿಗೂ, ಅಂದರೆ ಪುರುಷ-ಮಹಿಳೆ, ಬ್ರಾಹ್ಮಣ-ಶೂದ್ರ ಎಲ್ಲರಿಗೂ ಸಮಾನವಾದ ನಾಗರಿಕ ಆಚಾರ, ವ್ಯವಹಾರ, ಪ್ರಾಯಶ್ಚಿತ್ತ ಅರ್ಥಾತ್ ಕಾನೂನು ಬೋಧಿಸುತ್ತದೆ ಎಂದು ಹೇಳಿದ್ದಾರೆ. ಹಾಗೆಯೇ ಎಲ್ಲಾ ಧರ್ಮಗಳಲ್ಲೂ ಕರ್ಮಠರು ಇರುತ್ತಾರೆ ಆದರೆ ಅದು ಹಿಂದೂಗಳಲ್ಲಿ ಕಡಿಮೆ ಎಂದು ಹೇಳುತ್ತಾ ತಮ್ಮ ಹಿಂದುತ್ವದ ಒಲುಮೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

(https://www.prajavani.net/news/karnataka-news/varnas-are-not-castes-manu-is-not-brahmin-justice-krishna-s-dixit-2924403)

ನ್ಯಾ. ದೀಕ್ಷಿತರು ಈ ಹಿಂದೆಯೂ ಆರೆಸ್ಸೆಸ್‌ನ ಒಲವಿನ ವಕೀಲರ ಸಂಘಗಳು ಆಯೋಜಿಸಿದ್ದ ಸಭೆಗಳಲ್ಲಿ ಹಿಂದೂ ಧರ್ಮ, ಮನುಸ್ಮತಿಗಳ ಶ್ರೇಷ್ಠತೆಯ ಬಗ್ಗೆ ಸಾಕಷ್ಟು ಮಾತಾಡಿದ್ದಾರೆ. ಅಷ್ಟೆ ಅಲ್ಲ, ತಮ್ಮ ಹಲವಾರು ನ್ಯಾಯಾದೇಶಗಳಲ್ಲೂ ಅದರ ಪ್ರಭಾವವನ್ನು ಕಾಣಿಸಿದ್ದಾರೆ.

ಉದಾಹರಣೆಗೆ 2022ರಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗೆ ಜಾಮೀನು ನೀಡುತ್ತಾ ಅತ್ಯಾಚಾರಕ್ಕೆ ಬಲಿಯಾದ ಹೆಂಗಸು ಅತ್ಯಾಚಾರಕ್ಕೆ ಬಲಿಯಾದ ನಂತರ ಭಾರತೀಯ ನಾರಿ ಸಂಸ್ಕೃತಿಯ ರೀತಿ ನಡೆದುಕೊಂಡಿಲ್ಲವಾದ್ದರಿಂದ ಅತ್ಯಾಚಾರದ ಸಾಧ್ಯತೆಯ ಬಗ್ಗೆಯೇ ಅನುಮಾನವನ್ನು ವ್ಯಕ್ತಪಡಿಸಿದ್ದರು. ನ್ಯಾ. ದೀಕ್ಷಿತರ ಈ ಅಸಂಬದ್ಧ ಹಾಗೂ ಅವಮಾನಕಾರಿ ಪುರುಷ ಧೋರಣೆಯ ವಿರುದ್ಧ ರಾಜ್ಯಾದ್ಯಂತ ಹೋರಾಟಗಳು ನಡೆದ ನಂತರ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ನ್ಯಾ. ದೀಕ್ಷಿತರ ಆದೇಶದಲ್ಲಿದ್ದ ಆಕ್ಷೇಪಕಾರಿ ಅಂಶಗಳನ್ನು ತೆಗೆದುಹಾಕಿದ್ದರು.

ಹಿಜಾಬ್ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ ತ್ರಿಸದಸ್ಯ ಪೀಠದ ಸದಸ್ಯರಾಗಿದ್ದ ನ್ಯಾ. ದೀಕ್ಷಿತರು ಉದ್ದಕ್ಕೂ ಶಾಲಾ ಚೌಕಟ್ಟಿನಲ್ಲಿ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿರುವ ಹಿಂದೂ ಸಂಪ್ರದಾಯಗಳನ್ನು ಗಮನಕ್ಕೆ ತಂದು ಹಿಜಾಬ್ ಕೂಡ ಮತ್ತೊಂದು ಧಾರ್ಮಿಕ ರಿವಾಜೇ ಅಲ್ಲವೇ ಎಂಬ ವಾದಗಳನ್ನು ಅತ್ಯಂತ ಅಸಹನೆಯಿಂದ ಆಕ್ಷೇಪಿಸಿದ್ದು ಕೂಡ ಪತ್ರಿಕೆಗಳಲ್ಲಿ ಚರ್ಚೆಯಾಗಿತ್ತು.

ಮೊನ್ನೆ ವಿ.ತಾರಕಾರಾಮ್ ಅವರ ನೆನಪಿನ ವಿಚಾರ ಸಂಕಿರಣದಲ್ಲಿ ಸಂಬಂಧಪಟ್ಟವರು ‘ಧರ್ಮ ಮತ್ತು ಕಾನೂನು’ ಎಂಬ ವಿಷಯವನ್ನು ಆಯ್ಕೆ ಮಾಡಿದ್ದು ಮತ್ತು ಅದರ ಬಗ್ಗೆ ಮಾತಾಡಲು ನ್ಯಾ. ಕೃಷ್ಣ ದೀಕ್ಷಿತರನ್ನು ಆಹ್ವಾನಿಸಿದ್ದೆಲ್ಲವೂ ಕಳೆದ ಹತ್ತು ವರ್ಷಗಳಲ್ಲಿ ನ್ಯಾಯಾಂಗದ ಹಿರಿಯ ಪೀಠಾಧೀಶರುಗಳು ಹೊಸದಾಗಿ ಅನುಸರಿಸುತ್ತಿರುವ ಪ್ರವೃತ್ತಿಯ ಬಗ್ಗೆ ದೇಶದ ಪ್ರಜ್ಞಾವಂತರು ವ್ಯಕ್ತಪಡಿಸುತ್ತಿರುವ ಆತಂಕವನ್ನು ಹೆಚ್ಚಿಸುವಂತೇ ಇದ್ದವು.

ಸಂವಿಧಾನದ ಅಪವ್ಯಾಖ್ಯಾನ ಮತ್ತು ಹಿಂದುತ್ವೀಕರಣ

ಈ ಹೊಸ ಆತಂಕಕಾರಿ ಬೆಳವಣಿಗೆಯ ಉದ್ದೇಶ ಮತ್ತು ಪರಿಣಾಮಗಳನ್ನು ಹಿರಿ ಕಾನೂನು ಪರಿಣಿತ, ಸುಪ್ರೀಂ ಕೋರ್ಟ್‌ನ ಅಮಿಕಸ್ ಕ್ಯೂರಿ ಮತ್ತು ವಿದ್ವಾಂಸ ಮೋಹನ್ ಗೋಪಾಲ್ ಅವರು ಕಳೆದ ವರ್ಷ ತಮ್ಮ ವಿದ್ವತ್ಪೂರ್ಣ ಬರಹ-ಭಾಷಣವೊಂದರಲ್ಲಿ ಅತ್ಯಂತ ಸ್ಪಷ್ಟವಾಗಿ ದೇಶದ ಗಮನಕ್ಕೆ ತಂದಿದ್ದರು.

(https://www.youtube.com/watch?v=T_lNLYuJtLg)

ಶ್ರೀ ಮೋಹನ್ ಗೋಪಾಲ್ ಅವರು 2004-14ರಲ್ಲೂ ಯುಪಿಎ ಅವಧಿಯಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳಿಗೆ ನೇಮಕವಾದ ನ್ಯಾಯಾಧೀಶರು ಹಾಗೂ 2014-23ರ ಮೋದಿ ಅವಧಿಯಲ್ಲಿ ನೇಮಕವಾದ ನ್ಯಾಯಾಧೀಶರುಗಳು ಕೊಟ್ಟ ನ್ಯಾಯಾದೇಶಗಳನ್ನು ಮತ್ತು ಅದಕ್ಕೆ ಅವರು ಬಳಸಿಕೊಳ್ಳುವ ಆಕರಗಳನ್ನು ಅಧ್ಯಯನ ಮಾಡಿದ್ದಾರೆ. ತಮ್ಮ ಅಧ್ಯಯನದಲ್ಲಿ ಅವರು ಸಂವಿಧಾನಕ್ಕೆ ನಿಷ್ಠರಾಗಿರುವ ನ್ಯಾಯಾದೇಶಗಳು ಮತ್ತು ಸಂವಿಧಾನಕ್ಕೆ ಹೊರತಾದ ಧಾರ್ಮಿಕ ಆಕರಗಳಿಂದ ಪ್ರೇರಣೆ ಪಡೆದು ನೀಡಿರುವ ನ್ಯಾಯಾದೇಶಗಳೆಂಬ ಎರಡು ವಿರುದ್ಧ ಬಗೆಯ ಪ್ರವೃತ್ತಿ ಇರುವುದನ್ನು ಗಮನಿಸುತ್ತಾರೆ ಹಾಗೂ ಮೋದಿ ಅವಧಿಯಲ್ಲಿ ಸಂವಿಧಾನವನ್ನು ಮೂಲ ಕಾನೂನಿನ ಆಕರಗಳೆಂದು ಪರಿಗಣಿಸದೆ ಹಿಂದೂ ಪುರಾಣ, ಸ್ಮತಿ, ಶೃತಿಗಳನ್ನು ಸಂವಿಧಾನಕ್ಕೂ ಮೀರಿದ ಕಾನೂನಿನ ಆಕರಗಳೆಂದು ಪರಿಗಣಿಸುವ ನ್ಯಾಯಾಧೀಶರ ಸಂಖ್ಯೆ ಹೆಚ್ಚಿರುವುದನ್ನು ದಾಖಲಿಸುತ್ತಾರೆ. ಹಿಜಾಬ್ ಪ್ರಕರಣದಲ್ಲಿ ನ್ಯಾ. ಕೃಷ್ಣ ದೀಕ್ಷಿತ್ ಒಳಗೊಂಡ ಕರ್ನಾಟಕ ಹೈಕೋರ್ಟ್ ತೀರ್ಪು ಮತ್ತು ಸುಪ್ರೀಂ ಕೋರ್ಟ್‌ನ ದ್ವಿ ಸದಸ್ಯ ಪೀಠದಲ್ಲಿ ನ್ಯಾ. ಹೇಮಂತ್ ಗುಪ್ತಾ ಅವರು ತಮ್ಮ ಆದೇಶದಲ್ಲಿ ಕೊಟ್ಟ ಹಿಂದೂ ವ್ಯಾಖ್ಯಾನಗಳು ಇದಕ್ಕೆ ಕೆಲವು ಉದಾಹರಣೆಯೆಂದು ಅವರು ಉಲ್ಲೇಖಿಸುತ್ತಾರೆ.

ಇದರಲ್ಲಿ ಅತ್ಯಂತ ಅಪಾಯಕಾರಿಯಾದದ್ದು ಹಿಂದೂ ಎಂಬುದು ಧರ್ಮವಲ್ಲ - ಅದೊಂದು ಜೀವನ ವಿಧಾನ ಎಂದು ದಶಕಗಳ ಹಿಂದೆ ಸುಪ್ರೀಂ ಕೋರ್ಟ್ ಕೊಟ್ಟ ಆಭಿಪ್ರಾಯವನ್ನು ಹಿಗ್ಗಿಸಿ, ಬಗ್ಗಿಸಿ ಹಿಂದುತ್ವದ ಪರವಾಗಿ ನ್ಯಾಯಾಧೀಶರು ಮಾಡುತ್ತಿರುವ ಆದೇಶಗಳು ಅತ್ಯಂತ ಅಪಾಯಕಾರಿಯಾದದ್ದು. ಮೋಹನ್ ಗೋಪಾಲ್ ಅವರು ಅಧ್ಯಯನ ಮಾಡಿರುವ ಇಂಥ ನ್ಯಾಯಾಧೀಶರ ಆದೇಶಗಳಲ್ಲಿ ಈ ತರ್ಕವನ್ನು ಬಳಸಿಕೊಂಡು ಹಿಂದೂ ಗ್ರಂಥಗಳು ಸಂವಿಧಾನಕ್ಕಿಂತ ಹಿರಿದಾದದ್ದು ಎಂದು ವಾದಿಸುತ್ತಿರುವುದನ್ನು ಆತಂಕದಿಂದ ಉಲ್ಲೇಖಿಸುತ್ತಾರೆ. ಹಿಂದೂ ಒಂದು ಧರ್ಮವಲ್ಲ, ಜೀವನ ರೀತಿ ಎಂದು ಕೋರ್ಟ್ ಹೇಳಿರುವುದರಿಂದ ಧರ್ಮ ನಿರಪೇಕ್ಷತೆಯ ಪರಿಕಲ್ಪನೆ ಇಸ್ಲಾಮ್, ಕ್ರಿಶ್ಚಿಯನ್ ಇತ್ಯಾದಿ ಧರ್ಮಗಳಿಗೆ ಅನ್ವಯಸುತ್ತದೆಯೇ ವಿನಾ ಹಿಂದೂ ಧರ್ಮದ ರೀತಿ ರಿವಾಜುಗಳಿಗೆ ಅಲ್ಲ ಎಂಬ ಕುತ್ಸಿತ ವಾದ ಸರಣಿಯನ್ನು ನ್ಯಾಯಾಲಯಗಳು ಎತ್ತಿ ಹಿಡಿಯುತ್ತಿವೆ.

ಹೀಗೆ, ನ್ಯಾಯಾಲಯದಲ್ಲಿ ಹಿಂದೂ ಧರ್ಮಗ್ರಂಥಗಳನ್ನು ಸಂವಿಧಾನಕ್ಕಿಂತ ಉನ್ನತ ಸ್ಥಾನದಲ್ಲಿ ನಿಲ್ಲಿಸುವುದು ಹಾಗೂ ಎಲ್ಲಾ ಹಿಂದೂ ತಾರತಮ್ಯಗಳನ್ನು ಆ ಮೂಲಕ ಸಾಂವಿಧಾನಿಕವಾಗಿ ಸಮರ್ಥಿಸಿಕೊಳ್ಳುವುದು ನ್ಯಾಯಾಂಗದ ಮೂಲಕ ಹಿಂದೂ ರಾಷ್ಟ್ರವನ್ನು ಜಾರಿಗೆ ತರುವ ಅಪಾಯಕಾರಿ ಪ್ರಯತ್ನವೆಂದು ಮೋಹನ್ ಗೋಪಾಲ್ ಪುರಾವೆಗಳ ಸಮೇತ ದೇಶದ ಮುಂದಿಟ್ಟಿದ್ದಾರೆ.

ಹೀಗಾಗಿಯೇ ಕಳೆದ ಹತ್ತುವರ್ಷಗಳಲ್ಲಿ ಮನುಸ್ಮತಿಯನ್ನು ತಮ್ಮ ಆದೇಶಗಳಲ್ಲೇ ಎತ್ತಿಹಿಡಿಯುವ, ಮನುಸ್ಮತಿಯನ್ನು ಉಲ್ಲೇಖಿಸುತ್ತಾ ಸಂವಿಧಾನವು ಈ ದೇಶದ ಮಹಿಳೆಯರಿಗೆ, ಶೂದ್ರ, ದಲಿತರಿಗೆ ನೀಡಿರುವ ಸಮಾನ ಹಕ್ಕುಗಳನ್ನು ನಿರಾಕರಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗೆಯೇ ಅಯೋಧ್ಯಾ ಆದೇಶವನ್ನು ಒಳಗೊಂಡಂತೆ ಈ ದೇಶದಲ್ಲಿ ಅಲ್ಪಸಂಖ್ಯಾತರಿಗಿಂತ ಹಿಂದೂಗಳು ಪ್ರಥಮ ಪ್ರಾಶಸ್ತ್ಯದ ನಾಗರಿಕರೆಂಬ ಜನಾಂಗೀಯವಾದಿ ಹಿಂದುತ್ವವಾದಿ ಸಿದ್ಧಾಂತಕ್ಕೂ ನ್ಯಾಯಿಕ ಮಾನ್ಯತೆ ಒದಗಿಸಿಕೊಡುವ ಪ್ರಯತ್ನಗಳು ನಡೆಯುತ್ತಿವೆ.

ಈ ಹಿನ್ನೆಲೆಯಲ್ಲಿ ಮೊನ್ನೆ ನಡೆದ ‘ಧರ್ಮ ಮತ್ತು ಕಾನೂನು’ (ಸಂವಿಧಾನ ಮತ್ತು ಕಾನೂನು ಅಲ್ಲ) ಎಂಬ ಸ್ಮಾರಕ ಉಪನ್ಯಾಸ ಹಾಗೂ ಅಲ್ಲಿ ನ್ಯಾ. ದೀಕ್ಷಿತರು ಮಾಡಿದ ಭಾಷಣಗಳು ಈ ದೇಶದ ಸಂವಿಧಾನ ಮತ್ತು ಸಮಾನತೆಯ ನೆಲೆಗಟ್ಟಿನ ಭವಿಷ್ಯದ ಬಗ್ಗೆ ಆತಂಕ ಹುಟ್ಟಿಸುತ್ತದೆ.

ಹಾಲಿ ಪೀಠದಲ್ಲಿರುವ ನ್ಯಾ. ದೀಕ್ಷಿತರು ತಮ್ಮ ಭಾಷಣದಲ್ಲಿ ‘‘ಈ ದೇಶದಲ್ಲಿ ಪರಂಪರಾನುಗತವಾಗಿ ಧರ್ಮವೇ ಕಾನೂನುಗಳ ಮೂಲ. ಸಂವಿಧಾನಕ್ಕೂ ಧರ್ಮವೇ ಮೂಲ’’ ಎಂದು ವ್ಯಾಖ್ಯಾನ ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ಈ ದೇಶದಲ್ಲಿ ತಾರತಮ್ಯ ಮತ್ತು ದಾಸ್ಯವನ್ನು ಕಾನೂನು ಮಾಡಿದ ಮನುಸ್ಮತಿಯನ್ನು ಎಲ್ಲಾ ನಾಗರಿಕರಿಗೂ ಸಮಾನವಾಗಿ ಆಚಾರ, ವ್ಯವಹಾರ ಮತ್ತು ಪ್ರಾಯಶ್ಚಿತ್ತವನ್ನು ಬೋಧಿಸುವ ಗ್ರಂಥವೆಂದು ಆರೆಸ್ಸೆಸಿಗರಂತೆ ಕೊಂಡಾಡಿದ್ದಾರೆ. ಅದೇ ಮನುಸ್ಮತಿಯಲ್ಲಿ ಕರ್ಮದ ಬಗ್ಗೆಯೂ, ಶಿಕ್ಷೆಗಳ ಬಗ್ಗೆಯೂ ವರ್ಣಾಧಾರಿತ ವ್ಯವಸ್ಥಿತ ತಾರತಮ್ಯವಿರುವುದರ ಬಗ್ಗೆಯೂ ಮೌನವಹಿಸಿದ್ದಾರೆ.

ಇನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮತ್ತು ನಿವೃತ್ತಿಯ ನಂತರ ಮೋದಿ ಸರಕಾರದಿಂದ ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಿಸಲ್ಪಟ್ಟ ನ್ಯಾ. ಅಬ್ದುಲ್ ನಝೀರ್ ಅವರಂತೂ ತಾವು ನಿವೃತ್ತರಾಗುವ ಒಂದು ವರ್ಷ ಮುಂಚೆ ಆರೆಸ್ಸೆಸ್‌ನ ಒಲವಿನ ವಕೀಲರ ಸಂಘಗಳಲ್ಲಿ ಮಾತಾಡುತ್ತಾ ‘‘ಈ ದೇಶದ ಕಾನೂನುಗಳು ವಸಾಹತುಶಾಹಿ ಪ್ರಭಾವವನ್ನು ಹೊಂದಿವೆ. ಅವನ್ನು ಭಾರತೀಯಗೊಳಿಸಲು ನಾವು ಮತ್ತೆ ಕೌಟಿಲ್ಯ ಹಾಗೂ ಮನುವಿಗೆ ಹಿಂದಿರುಗಬೇಕು’’ ಎಂದು ಅಪ್ಪಣೆ ಕೊಡಿಸಿದ್ದರು.

ಮೊನ್ನೆಯ ಭಾಷಣದಲ್ಲಿ ನ್ಯಾ. ದೀಕ್ಷಿತರು ವರ್ಣಗಳು ಜಾತಿಗಳಲ್ಲ. ವರ್ಣ ವ್ಯವಸ್ಥೆಯಲ್ಲಿ ತಮ್ಮ ಗುಣಕರ್ಮಗಳಿಗೆ ತಕ್ಕಂತೆ ಜನರು ಮೇಲ್ಚಲನೆಯನ್ನು ಪಡೆಯುತ್ತಿದ್ದರು ಎಂಬ ಆರೆಸ್ಸೆಸ್‌ನ ಬ್ರಾಹ್ಮಣೀಯ ವ್ಯಾಖ್ಯಾನವನ್ನೇ ಕಾನೂನಿನ ಭಾಷೆಯಲ್ಲಿ ಪುನರುಚ್ಚರಿಸಿದ್ದಾರೆ. ಅದಕ್ಕೆ ಭಗವದ್ಗೀತೆಯಲ್ಲಿ ಕೃಷ್ಣನ ಉಪದೇಶವನ್ನು ಉದ್ಧರಿಸಿದ್ದಾರೆ.

ಮನುಸ್ಮತಿ-ಭಗವದ್ಗೀತೆಗಳ ಬಗ್ಗೆ ಅಂಬೇಡ್ಕರ್ ಹೇಳುವುದೇನು?

ಈ ಪುರಾಣ, ಮೌಢ್ಯ, ಸ್ಮತಿ, ಶೃತಿ, ಇತ್ಯಾದಿಗಳ ಮೂಲಕ ಈ ದೇಶದ ಶೂದ್ರ, ದಲಿತ, ಮಹಿಳೆಯರನ್ನು ಬೌದ್ಧ ಪ್ರಭಾವದಿಂದ ಹೊರತಂದು ಮತ್ತೊಮ್ಮೆ ವೈದಿಕ ದಾಸ್ಯಕ್ಕೆ ಒಳಪಡಿಸುವ ವೈದಿಕ ಕುತಂತ್ರವನ್ನು ಸ್ಪಷ್ಟವಾಗಿ ಬಯಲಿಗೆಳೆದಿರುವ ಅಂಬೇಡ್ಕರ್ ಅವರು, ಬಹಳ ಹಿಂದೆಯೇ ನ್ಯಾ. ದೀಕ್ಷಿತರಂತಹವರ ವಾದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.

‘ಸಾಮಾಜಿಕ ಉಪಯುಕ್ತತೆ’ ಹಾಗೂ ‘ನ್ಯಾಯ-ಸಮಾನತೆ’ ಎರಡೂ ಮಾನದಂಡಗಳಿಂದಲೂ ಭಗವದ್ಗೀತೆಯು ಒಂದು ಆಧುನಿಕ ಕಾಲದ ನೀತಿ ಸಂಹಿತೆಯಾಗಲು ನಾಲಾಯಕ್ಕಾಗಿದೆ ಎಂದು ಅಂಬೇಡ್ಕರ್ ಅಭಿಪ್ರಾಯ ಪಡುತ್ತಾರೆ. ಭಗವದ್ಗೀತೆಯು ಹೇಗೆ ಮನುಸ್ಮತಿಯ ಸಾರಸಂಗ್ರಹವಷ್ಟೇ ಆಗಿದೆ ಎಂದು ಸಾಬೀತು ಪಡಿಸಲು ಅಂಬೇಡ್ಕರ್ ಕೊಟ್ಟಿರುವ ಹತ್ತಾರು ಪುರಾವೆಗಳಲ್ಲಿ ಈ ಕೆಳಗಿನ ಅಂಶಗಳು ಅತ್ಯಂತ ಮುಖ್ಯವಾಗಿವೆ:

ನೀತಿ ಶ್ಲೋಕಗಳೋ? ಅನ್ಯಾಯ-ಅಧರ್ಮದ ಕಾನೂನುಗಳೋ?

1. ಚಾತುರ್ವರ್ಣ್ಯಂ ಮಯಾ ಸೃಷ್ಟ್ಯಂ-ಗುಣಕರ್ಮ ವಿಭಾಗಶಃ

‘‘ಚಾತುರ್ವರ್ಣ್ಯವೆಂದು ಹೆಸರಾಗಿರುವ ಗೊತ್ತುಪಾಡನ್ನು (ಅಂದರೆ ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರವೆಂದು ನಾಲ್ಕು ಭಾಗಗಳನ್ನಾಗಿ ವಿಂಗಡಿಸುವುದು) ನಾನೇ ಸೃಷ್ಟಿಸಿದವನು ಮತ್ತು ನಾನೇ ಅವರವರ ಜಾಯಮಾನಕ್ಕನುಗುಣವಾಗಿ ವಿವಿಧ ಕಸುಬುಗಳನ್ನು ಅವರಿಗೆ ವಹಿಸಿದವನು. ಈ ಚಾತುರ್ವರ್ಣ್ಯವನ್ನೂ ನಾನೇ ಸೃಷ್ಟಿಸಿದವನು.’’ (ಗೀತೆ ಅಧ್ಯಾಯ IV. ಶ್ಲೋಕ 13)

ಈ ಶ್ಲೋಕದ ಅಗತ್ಯ ಹಾಗೂ ಪರಿಣಾಮಗಳ ಬಗ್ಗೆ ಅಂಬೇಡ್ಕರ್ ಹೀಗೆ ವಿವರಿಸುತ್ತಾರೆ:

ಭಗವದ್ಗೀತೆ ಮತ್ತು ಮಹಾಭಾರತಗಳ ಹುಟ್ಟಿನ ಪೂರ್ವದಲ್ಲಿ ಸಮಾಜವು ಅಪ್ಪಿಕೊಂಡಿದ್ದ ಬೌದ್ಧ ಧರ್ಮ ಬ್ರಾಹ್ಮಣ್ಯವನ್ನು ಮತ್ತದರ ಮೇಲುಕೀಳು ಸಿದ್ಧಾಂತವನ್ನು ಆಧ್ಯಾತ್ಮಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಸೋಲಿಸಿ, ಸಮಾನತೆಯ ಆಶಯ ಮತ್ತು ಬದುಕನ್ನು ಸೃಷ್ಟಿಸಿತ್ತು.

ಪುಷ್ಯಮಿತ್ರನ ನೇತೃತ್ವದಲ್ಲಿ ಬ್ರಾಹ್ಮಣ್ಯದ ದಿಗ್ವಿಜಯವು ನಡೆದ ಮೇಲೆ ತತ್ವಶಾಸ್ತ್ರದಲ್ಲಿದ್ದ ಬುದ್ಧಪೂರ್ವದ ಜೈನಮುನಿಯ ಪೂರ್ವ ಮೀಮಾಂಸೆ ಹಾಗೂ ಸಾಂಖ್ಯ ದರ್ಶನದಲ್ಲಿದ್ದ ಗುಣಾಧಾರಿತ ಸಮಾಜ ವಿಭಜನೆ, ದೇಹ-ಆತ್ಮಗಳ ಪ್ರತ್ಯೇಕತೆಗಳನ್ನು ಭಗದ್ಗೀತೆಯು ಮತ್ತೆ ಬಳಸಿಕೊಂಡು ಮೇಲು ಕೀಳನ್ನು ಪುನರ್ ಸ್ಥಾಪಿಸಿತು ಮತ್ತು ಈ ಕ್ರೂರ ವರ್ಣ ವಿಭಜನೆಗೆ ಬೌದ್ಧ ಪೂರ್ವದಲ್ಲಿ ಇಲ್ಲದಿದ್ದ ದೈವಿಕ ಒಪ್ಪಿಗೆಯನ್ನು ಭಗವದ್ಗೀತೆಯ ಮುಖಾಂತರ ಒದಗಿಸಿ ಅದರ ವಿರುದ್ಧ ಧ್ವನಿ ಎತ್ತದಂತೆ ಮಾಡಲಾಯಿತು. ಹಾಗೆಯೇ ಅದರ ಜೊತೆಜೊತೆಗೆ ಮನುಸ್ಮತಿ, ಶೃತಿ, ಕರ್ಮ ಸಿದ್ಧಾಂತ ಹಾಗೂ ಕರ್ಮಾಧಾರಿತ ಪುನರ್ಜನ್ಮ ಸಿದ್ಧಾಂತಗಳನ್ನು ಬಳಸಿಕೊಂಡು ಕರ್ಮಫಲದಂತೆ ಬದುಕು ಎಂಬ ಸಮ್ಮತಿಯನ್ನು ರೂಢಿಸಿತು ಎಂದು ಅಂಬೇಡ್ಕರ್ ತೋರಿಸಿಕೊಡುತ್ತಾರೆ.

2. ಸ್ವಧರ್ಮೇ ನಿಧನಂ ಶ್ರೇಯಃ- ತಮ್ಮ ತಮ್ಮ ಧರ್ಮವನ್ನು ಅನುಸರಿಸುತ್ತಾ ಸಾಯುವುದೇ ಲೇಸು

‘‘ಬೇರೆ ವರ್ಣದವರ ಕಸುಬನ್ನು ಅನುಸರಿಸುವುದು ಸುಲಭವಾಗಿದ್ದರೂ ತನ್ನದೇ ವರ್ಣದ ಕಸುಬನ್ನು ಅನುಸರಿಸುವುದೇ ಜಾಣತನ. ಸಾಕಷ್ಟು ದಕ್ಷತೆಯಿಂದ ಅದನ್ನು ಒಬ್ಬನು ನಿರ್ವಹಿಸಲಾಗದಿದ್ದರೂ ತನ್ನ ವರ್ಣದ ಕಸುಬೇ ಶ್ರೇಯಸ್ಕರವಾದುದು. ಒಬ್ಬನು ತನ್ನ ವರ್ಣದ ಕಸುಬನ್ನು ಅನುಸರಿಸುವುದರಲ್ಲಿ ಆನಂದವಿದೆ. ಇದರ ಫಲವಾಗಿ ಅವನಿಗೆ ಸಾವು ಸಂಭವಿಸಿದರೂ ಚಿಂತೆಯಿಲ್ಲ. ಆದರೆ ಬೇರೆ ವರ್ಣದವರ ಕಸುಬನ್ನು ಅನುಸರಿಸುವುದು ಮಾತ್ರ ಅಪಾಯಕಾರಿ.’’

(ಅಧ್ಯಾಯ-III, ಶ್ಲೋಕ 35)

ಒಂದೆಡೆ ವರ್ಣಾಶ್ರಮವೆಂದರೆ ಜಾತಿಪದ್ಧತಿಯಂತೆ ಜಡವಲ್ಲ. ಯಾರು ಬೇಕಾದರೂ ಯಾವವರ್ಣಕ್ಕೆ ಬೇಕಾದರೂ ಸೇರಿಕೊಳ್ಳಬಹುದು. ಆದರೆ ಅದಕ್ಕೆ ಬೇಕಾದಂತಹ ಗುಣವನ್ನು ರೂಢಿಸಿಕೊಳ್ಳಬೇಕಷ್ಟೆ ಎಂದು ಭಗವದ್ಗೀತೆಯನ್ನು ಮತ್ತು ಹಿಂದೂ ಧರ್ಮದ ತತ್ವಶಾಸ್ತ್ರವನ್ನು ಸಮರ್ಥಿಸಿಕೊಳ್ಳುತ್ತಿದ್ದ ಗಾಂಧಿ, ತಿಲಕರಿಗೆ ಈ ಶ್ಲೋಕವನ್ನು ಉದ್ಧರಿಸಿ ಅಂಬೇಡ್ಕರ್ ಪಾಟಿ ಸವಾಲು ಹಾಕುತ್ತಾರೆ.

ಯಾರು ಯಾವ ವರ್ಣವನ್ನು ಬೇಕಾದರೂ ಸೇರಬಹುದಾಗಿದ್ದರೆ, ಆಯಾ ಧರ್ಮಗಳಲ್ಲೇ ಇದ್ದು ಸಾಯಬೇಕೆಂದು ಹೇಳುವ ಅಗತ್ಯವೇನಿತ್ತು. ಇಲ್ಲಿ ಧರ್ಮವೆಂದರೆ ಕುಲಧರ್ಮವೇ ಹೊರತು ವಿಶಾಲಾರ್ಥದಲ್ಲಿ ಬಳಸಿಲ್ಲ ಎಂದು ಅಂಬೇಡ್ಕರ್ ಇತರ ಹಲವಾರು ಶ್ಲೋಕಗಳನ್ನು ಉದ್ಧರಿಸಿ ಸಾಬೀತು ಪಡಿಸುತ್ತಾರೆ.

3.‘‘ತಮ್ಮ ಕಸುಬುಗಳಿಗೆ ಚೆನ್ನಾಗಿ ಹೊಂದಿಕೊಂಡಿರುವ ಅವಿದ್ಯಾವಂತರ ನಂಬಿಕೆಗಳನ್ನು ವಿದ್ಯಾವಂತರು ಅಭದ್ರಗೊಳಿಸಬಾರದು. ಅವನ ವರ್ಣಕ್ಕನುಸಾರವಾದ ಕಸುಬಿನಲ್ಲಿ ಅವನೇ ಮೊದಲು ತೊಡಗಬೇಕು.

ಬಳಿಕ ಇತರರೂ ಅವರವರ ವರ್ಣಾನುಸಾರವಾದ ಕಸುಬನ್ನು ಅಂಗೀಕರಿಸುವಂತೆ ಮಾಡಬೇಕು. ಒಬ್ಬ ವಿದ್ಯಾವಂತನು ತನ್ನ ಉದ್ಯೋಗಕ್ಕೆ ಅಂಟಿಕೊಳ್ಳದೆ ಇರಬಹುದು. ಆದರೆ ಅವಿದ್ಯಾವಂತರೂ, ಮಂದಮತಿಗಳೂ ಆದವರು ತಮ್ಮ ಕಸುಬಿಗೆ ಅಂಟಿಕೊಂಡಿರುತ್ತಾರೆ. ವಿದ್ಯಾವಂತರು ಅವರನ್ನು ಕೆಡಿಸಬಾರದು. ಅವರ ಕಸುಬನ್ನು ತ್ಯಜಿಸಿ ಅಡ್ಡಹಾದಿ ಹಿಡಿಯುವಂತೆ ಅವರನ್ನು ಪ್ರೇರೇಪಿಸಬಾರದು.’’ (ಅಧ್ಯಾಯ III, ಶ್ಲೋಕ 26, 29)

ಜಗತ್ತಿನಲ್ಲಿ ಧರ್ಮ ಎಂದು ಕರೆಸಿಕೊಳ್ಳುವ ಇತರ ಯಾವುದೇ ಧರ್ಮಗಳು ತಮ್ಮ ಧರ್ಮಶಾಸ್ತ್ರದ ಭಾಗವಾಗಿಯೇ ಸಮಾಜದ ಇತರರಿಗೆ ತಾನು ಪಡೆದ ಜ್ಞಾನವನ್ನು ವಿಸ್ತರಿಸಿಕೊಳ್ಳಬಾರದು ಎಂದು ಬೋಧಿಸುವುದಿಲ್ಲ. ಅಷ್ಟು ಮಾತ್ರವಲ್ಲ, ತನ್ನ ಪ್ರತಿಭೆಯನ್ನು ಬಳಸಿಕೊಂಡೂ ಕೂಡ ಒಬ್ಬ ಅಬ್ರಾಹ್ಮಣನು ಮೇಲಕ್ಕೇರುವುದನ್ನು ಅಡ್ಡಹಾದಿ, ಪಾಪ ಎಂದು ಭಗವದ್ಗೀತೆಯೆಂಬ ದೈವವಾಣಿಯ ಮೂಲಕ ಬ್ರಾಹ್ಮಣರು ಸ್ಥಾಪಿಸುತ್ತಾರೆ ಎಂದು ಅಂಬೇಡ್ಕರ್ ಗೀತೆಯ ಅಸಲಿ ಹುನ್ನಾರವನ್ನು ಬಯಲು ಮಾಡುತ್ತಾರೆ.

ಹೀಗಾಗಿಯೇ ನಮ್ಮ ಸಂವಿಧಾನಕ್ಕೂ ಪ್ರೇರಣೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವೆಂಬ ಬುದ್ಧ ತತ್ವ ಹಾಗೂ ಆಧುನಿಕ ಪ್ರಜಾತಂತ್ರದ ಸಮಾನತವಾದಿ ಆಶಯಗಳೇ ವಿನಾ ಯಾವುದೇ ಸನಾತನವಾದಿ ಮನುವಾದಿ ಸಿದ್ಧಾಂತಗಳಲ್ಲ.

ಸಂವಿಧಾನವನ್ನು ರಕ್ಷಿಸಬೇಕಿರುವ ಹಿರಿಯ ನ್ಯಾಯಾಧೀಶರುಗಳು ಸಂವಿಧಾನದ ಮೌಲ್ಯಗಳಿಗೆ ತದ್ವಿರುದ್ಧವಾದ ಮನುವಾದಿ ವ್ಯಾಖ್ಯಾನಗಳನ್ನು ಮಾಡುತ್ತಿರುವುದು ಅಪಾಯಕಾರಿ. ಅದನ್ನು ನ್ಯಾಯಾಂಗ ಸಮುದಾಯ ಮತ್ತು ಪ್ರಜ್ಞಾವಂತ ಸಮಾಜ ವಿರೋಧಿಸಲೇ ಬೇಕು. ಅದು ಸಂವಿಧಾನವೇ ಈ ದೇಶದ ನಾಗರಿಕರಿಗೆ ಕೊಟ್ಟಿರುವ ಹಕ್ಕು. ಏಕೆಂದರೆ ಈ ಸಂವಿಧಾನ ರಚಿಸಿದ್ದು ನಾವು ಈ ದೇಶದ ಜನತೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News