ಮುಸ್ಲಿಮರ ಒಬಿಸಿ ಮೀಸಲಾತಿ ಮತ್ತು ಮೋದಿಯವರ ಕೋಮುದ್ವೇಷ

Update: 2024-05-03 05:02 GMT
Editor : Thouheed | Byline : ಶಿವಸುಂದರ್

ಭಾಗ- 2

ಭಾರತೀಯ ಸಮಾಜದಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬಡತನಕ್ಕೆ ದೂಡಲ್ಪಟ್ಟಿರುವುದು ಹಾಗೂ ಅಧಿಕಾರ-ಸಂಪತ್ತುಗಳ ನಿರಾಕರಣೆಯು ಸಾಮಾಜಿಕ ಮತ್ತು ಶಿಕ್ಷಣಿಕ ಹಿಂದುಳಿದಿರುವಿಕೆಗೆ ಕಾರಣ ಎಂದು ಚಿನ್ನಪ್ಪರೆಡ್ಡಿ ಆಯೋಗವು ಪರಿಗಣಿಸಿತು ಮತ್ತು ಈ ಹಿಂದುಳಿದಿರುವಿಕೆಯು ಜ್ಞಾನ ಮತ್ತು ಸಂಪತ್ತಿನ ಸಾಪೇಕ್ಷ ಕೊರತೆಯಲ್ಲಿ ವ್ಯಕ್ತವಾಗುತ್ತದೆ. ಇವೆಲ್ಲಕ್ಕೂ ಬಡತನ ಕಾರಣವಾಗಿದ್ದರೆ ಜಾತಿಯು ಅದರ ಮುಮ್ಮುಖವಾಗಿರುತ್ತದೆ. ಜಾತಿ ಶ್ರೇಣೀಕರಣದಲ್ಲಿ ಕೆಳಗಿದ್ದಷ್ಟು ಜ್ಞಾನ ಮತ್ತು ಸಂಪತ್ತಿನಿಂದ ದೂರವಾಗುತ್ತಾ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿಯುತ್ತಾ ಹೋಗುವುದು ಭಾರತ ಸಮಾಜದ ನಿರ್ದಿಷ್ಟ ಲಕ್ಷಣ ಎಂದು ಆಯೋಗವು ಪರಿಗಣಿಸಿತು.

ಈ ಹಿಂದುಳಿದಿರುವಿಕೆಯನ್ನು ಅಳೆಯಲು ಪ್ರಧಾನವಾಗಿ ಮೂರು ಮಾನದಂಡಗಳನ್ನು ರೂಪಿಸಿತು ಮತ್ತು ಅದರ ಸುತ್ತ ಕ್ಷೇತ್ರ ಅಧ್ಯಯನ ಮಾಡಿ ಹಾಗೂ ಅಂಕಿಅಂಶಗಳನ್ನು ಸಂಗ್ರಹಿಸಿತು:

1. ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡವರ ರಾಜ್ಯದ ಜನಸಂಖ್ಯೆಯ ಸರಾಸರಿಗೆ ಮತ್ತು ಪಾಸಾದವರ ಸರಾಸರಿಗೆ ಅಯಾ ಜಾತಿ ಮತ್ತು ಸಮುದಾಯಗಳ ಸರಾಸರಿಯನ್ನು ಹೋಲಿಸುವುದು.

2. ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದವರ ಜಾತಿವಾರು ಸರಾಸರಿ.

3. ಸರಕಾರದ ಎ.ಬಿ.ಸಿ.ಡಿ. ಶ್ರೇಣಿಗಳ ಉದ್ಯೋಗಗಳಲ್ಲಿ, ಸರಕಾರಿ ಕಾರ್ಖಾನೆ, ವಿಶ್ವವಿದ್ಯಾನಿಲಯಗಳ ನೌಕರರ ಜಾತಿವಾರು ಪ್ರಮಾಣದ ಅಂಕಿಅಂಶ...ಇತ್ಯಾದಿಗಳು.

ಇವೆಲ್ಲದರ ಬಗ್ಗೆ ಅಧ್ಯಯನ ಮಾಡುವಾಗಲೂ ಹಿಂದೂ ಸಮುದಾಯದ ಜಾತಿವಾರು ಅಂಕಿಅಂಶಗಳನ್ನು ಸಂಗ್ರಹಿಸುವುದರ ಜೊತೆಗೆ ಹಿಂದೂಯೇತರ ಸಮುದಾಯಗಳಾದ ಮುಸ್ಲಿಮ್, ಕ್ರಿಶ್ಚಿಯನ್, ಬೌದ್ಧ ಮತ್ತು ಸಿಖ್ ಸಮುದಾಯಗಳ ಅಂಕಿಅಂಶಗಳನ್ನು ಆಯೋಗವು ಸಂಗ್ರಹಿಸಿತು. ಇವೆಲ್ಲಕ್ಕೂ 1988ರ ಅಂಕಿಅಂಶಗಳನ್ನು ಬಳಸಿಕೊಂಡಿತು.

ಈ ಅಂಕಿಅಂಶಗಳು: ‘JUSTICE: Journey Of The Karnataka Backward Classes’ ಎಂಬ ಶೀರ್ಷಿಕೆಯ-‘Report of the Karnataka Third Backward Classes Commission- Vol-1ರಲ್ಲಿ ವಿಷದವಾಗಿ ದಾಖಲಾಗಿದೆ.

ಚಿನ್ನಪ್ಪರೆಡ್ಡಿ ಆಯೋಗವು ಮೇಲಿನ ಮೂರೂ ಪ್ರಶ್ನೆಗಳ ಸುತ್ತ ಕರ್ನಾಟಕದ 102 ಜಾತಿ ಮತ್ತು ಸಮುದಾಯಗಳಿಗೆ ಸಂಬಂಧಪಟ್ಟ ಅಂಕಿಅಂಶವನ್ನೂ ಪ್ರತ್ಯೇಕವಾಗಿ ಸಂಗ್ರಹಿಸಿ ನಂತರ ಅವುಗಳನ್ನು ಸಾಪೇಕ್ಷ ತುಲನೆ ಮಾಡಿ ಹಿಂದುಳಿದಿರುವಿಕೆಯ ದೂರವನ್ನು ನಿಶ್ಚಿತಗೊಳಿಸಿ ತಲಾವಾರು ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಿತು.

ಆದರೆ ಈ ಲೇಖನದಲ್ಲಿ ಅವೆಲ್ಲದರ ವಿವರಗಳನ್ನು ಚರ್ಚಿಸಿಲ್ಲ. ಬದಲಿಗೆ ಈ ಎಲ್ಲಾ ಮಾನದಂಡಗಳಲ್ಲಿ ಸಮಾಜದಲ್ಲಿ ಅತ್ಯಂತ ಮುಂದುವರಿದ ಸಮುದಾಯವಾಗಿರುವ ಬ್ರಾಹ್ಮಣ ಜಾತಿಯ ಅಂಕಿಅಂಶಗಳನ್ನು ಹಾಗೂ ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾಗಿರುವ ಪರಿಶಿಷ್ಟ ಜಾತಿಗಳ ಅಂಕಿಅಂಶಗಳನ್ನು ಒದಗಿಸಲಾಗಿದೆ ಮತ್ತು ಅದರ ಹೋಲಿಕೆಯಲ್ಲಿ ಮುಸ್ಲಿಮ್ ಸಮುದಾಯದ ಸಂಬಂಧಪಟ್ಟ ಅಂಕಿಅಂಶಗಳನ್ನು ನೀಡಲಾಗಿದೆ.

ಬೊಮ್ಮಾಯಿ ಸರಕಾರ ಮುಸ್ಲಿಮರನ್ನು ಅತ್ಯಂತ ಮುಂದುವರಿದ ಬ್ರಾಹ್ಮಣರ ಜೊತೆಗೆ ಸ್ಪರ್ಧೆಗೊಡ್ಡಿರುವುದು ಇದಕ್ಕೆ ಒಂದು ಕಾರಣವಾದರೆ ಮುಸ್ಲಿಮರ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಸರಿಯಾಗಿ ಗ್ರಹಿಸುವಲ್ಲಿ ಇದು ಒಂದು ಉತ್ತಮ ಸಾಧನವಾಗಬಹುದು ಎಂದು ನಾನು ಭಾವಿಸುತ್ತೇನೆ.

ಶೈಕ್ಷಣಿಕ ಹಿಂದುಳಿದಿರುವಿಕೆ

ಕರ್ನಾಟಕದ ಹಿಂದುಳಿದ ವರ್ಗಗಳ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಮಾತ್ರವಲ್ಲದೆ ಒಟ್ಟಾರೆ ಸಾಮಾಜಿಕ ಹಿಂದುಳಿದಿರುವಿಕೆಯ ಪ್ರಮಾಣವನ್ನು ಅಂದಾಜು ಮಾಡಲು ಚಿನ್ನಪ್ಪರೆಡ್ಡಿ ಆಯೋಗವು ರಾಜ್ಯದ ಜನಸಂಖ್ಯೆಯಲ್ಲಿ 1988ರಲ್ಲಿ ಒಟ್ಟಾರೆಯಾಗಿ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದವರ ಪ್ರಮಾಣವನ್ನು ಮತ್ತು ಪ್ರತಿ ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದವರ ಪ್ರಮಾಣವನ್ನು ಹೋಲಿಸುತ್ತದೆ.

ಹಾಗೆಯೇ ಪಾಸಾದವರ ಪ್ರಮಾಣವನ್ನು ಹೋಲಿಸಿದರೂ ತೇರ್ಗಡೆಯಾಗಲು ಜಾತಿಯೊಳಗಿನ ವ್ಯಕ್ತಿಗಳ ಸಾಮರ್ಥ್ಯವೂ ಒಂದು ಪಾತ್ರ ವಹಿಸುವುದರಿಂದ ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡವರ ಪ್ರಮಾಣವು ಅತ್ಯಂತ ಕೀಲಕವಾದದ್ದು ಎಂದು ಪರಿಗಣಿಸುತ್ತದೆ. ಆ ನಂತರದ ಉನ್ನತ ಶಿಕ್ಷಣ, ಅದರಿಂದ ಸಿಗುವ ಉದ್ಯೋಗಾವಕಾಶ ಎಲ್ಲಕ್ಕೂ ಎಸೆಸೆಲ್ಸಿ ಪರೀಕ್ಷೆ ಪ್ರಮುಖ ಹಂತವಾಗಿರುವುದರಿಂದ ಅದನ್ನು ಅತ್ಯಂತ ಪ್ರಮುಖ ಮಾನದಂಡವಾಗಿ ಚಿನ್ನಪ್ಪರೆಡ್ಡಿ ಆಯೋಗ ಪರಿಗಣಿಸುತ್ತದೆ.

1988ರಲ್ಲಿ ಕರ್ನಾಟಕದ ಜನಸಂಖ್ಯೆ 4.4 ಕೋಟಿ ಎಂದು ಆಯೋಗ ವೈಜ್ಞಾನಿಕವಾಗಿ ಅಂದಾಜಿಸುತ್ತದೆ. ಅಲ್ಲದೆ ವೆಂಕಟಸ್ವಾಮಿ ಆಯೋಗವು 1984-86ರಲ್ಲಿ 60 ಲಕ್ಷ ಜನರನ್ನು ಭೇಟಿ ಮಾಡಿ 1931ರ ಕೊನೆಯ ಜಾತಿ ಸೆನ್ಸಸ್ ಅನ್ನು ಗಮನದಲ್ಲಿಟ್ಟುಕೊಂಡು ಮುಂದಿರಿಸಿದ ಜಾತಿವಾರು ಜನಸಂಖ್ಯೆಯ ಅಂದಾಜನ್ನು ಸರಕಾರವು ಒಪ್ಪಿಕೊಂಡಿತ್ತು. ಚಿನ್ನಪ್ಪರೆಡ್ಡಿ ಆಯೋಗವು ಆ ಅಂದಾಜನ್ನು ಒಪ್ಪಿಕೊಳ್ಳುತ್ತದೆ.

ಅದರಂತೆ 1988ರ ವೇಳೆಗೆ ಬ್ರಾಹ್ಮಣರು ಕರ್ನಾಟಕದ ಜನಸಂಖ್ಯೆಯ ಶೇ. 3.4ರಷ್ಟು (15.23 ಲಕ್ಷ), ಪರಿಶಿಷ್ಟ ಜಾತಿ - ಶೇ. 16.7 (73.7 ಲಕ್ಷ) ಮತ್ತು ಮುಸ್ಲಿಮರು ಕರ್ನಾಟಕದ ಜನಸಂಖ್ಯೆಯ ಶೇ. 11.67ರಷ್ಟು (51.47 ಲಕ್ಷ) ಇದ್ದರೆಂದು ಆಯೋಗವು ಅಂದಾಜಿಸುತ್ತದೆ.

1988 ರಲ್ಲಿ ಕರ್ನಾಟಕದಲ್ಲಿ ಒಟ್ಟು 3.4 ಲಕ್ಷ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದರು. ಅರ್ಥಾತ್ ಎಸೆಸೆಲ್ಸಿ ವರೆಗೆ ತಲುಪಿದರು. ಇದು ಕರ್ನಾಟಕದ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದಲ್ಲಿ ಶೇ.0.77ರಷ್ಟು. ಇದರಲ್ಲಿ 1,34,160 ವಿದ್ಯಾರ್ಥಿಗಳು ತೇರ್ಗಡೆಯಾದರು. ಎಂದರೆ ಶೇ. 0.39 ರಷ್ಟು. ಇವು ರಾಜ್ಯದ ಒಟ್ಟಾರೆ ಸರಾಸರಿ.

ಯಾವ ಜಾತಿಗಳ ಸರಾಸರಿ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದ ರಾಜ್ಯದ ಸರಾಸರಿಯನ್ನು ಮೀರಿರುತ್ತದೋ ಆ ಜಾತಿಗಳು ರಾಜ್ಯದ ಸರಾಸರಿಗಿಂತ ಕಡಿಮೆ ಪ್ರಮಾಣದಲ್ಲಿ ಇರುವ ಜಾತಿಗಳಿಗಿಂತ ಸಾಪೇಕ್ಷವಾಗಿ ಶೈಕ್ಷಣಿಕವಾಗಿ ಮುಂದುವರಿದ ಜಾತಿಗಳೆಂದು ಆಯೋಗವು ಪರಿಗಣಿಸಿತು.

ಅದರಂತೆ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದವರಲ್ಲಿ ರಾಜ್ಯದ ಸರಾಸರಿ ಶೇ.0.77 ಇದ್ದರೆ ಬ್ರಾಹ್ಮಣರ ಜಾತಿಯ ಸರಾಸರಿ ಶೇ. 1.41 ಅಂದರೆ ರಾಜ್ಯದ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿತ್ತು. ಪರಿಶಿಷ್ಟ ಜಾತಿಗಳ ಸರಾಸರಿ 0.59. ಅಂದರೆ ರಾಜ್ಯದ ಸರಾಸರಿಗಿಂತ ಶೇ. 30ರಷ್ಟು ಕಡಿಮೆ.

ಮುಸ್ಲಿಮರ ಸರಾಸರಿ ಶೇ.0.48 ಮಾತ್ರ

ಅಂದರೆ ಶೈಕ್ಷಣಿಕವಾಗಿ ಮುಸ್ಲಿಮರ ಪರಿಸ್ಥಿತಿ ಪರಿಶಿಷ್ಟ ಜಾತಿಗಳಿಗಿಂತ ಹೀನಾಯ ಮತ್ತು ಬ್ರಾಹ್ಮಣರ ಸರಾಸರಿಗಿಂತ ನಾಲ್ಕುಪಟ್ಟು ಕಡಿಮೆ. ಅಂದರೆ ಮುಸ್ಲಿಮರಿಗಿಂತ ಬ್ರಾಹ್ಮಣರು ನಾಲ್ಕುಪಟ್ಟು ಶೈಕ್ಷಣಿಕವಾಗಿ ಮುಂದುವರಿದ ಜಾತಿಯಾಗಿದೆ. ಈಗ ಅವರೊಡನೆ ಸರಿಸಮವಾಗಿ ಪೈಪೋಟಿ ಮಾಡಲು ಮುಸ್ಲಿಮರನ್ನು ದೂಡಲಾಗಿದೆ.

ಹಾಗೆಯೇ ರಾಜ್ಯದ ಜನಸಂಖ್ಯೆಗೆ ಹೋಲಿಸಿದಲ್ಲಿ ಬ್ರಾಹ್ಮಣರ ಜನಸಂಖ್ಯೆ ಕೇವಲ ಶೇ. 3.4 ಮಾತ್ರ ಇದ್ದರೂ, ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡ ವಿದ್ಯಾರ್ಥಿಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಪ್ರಮಾಣ ಶೇ. 6.37. ಆದರೆ ಪರಿಶಿಷ್ಟ ಜಾತಿಗಳ ಜನಸಂಖ್ಯೆ ರಾಜ್ಯದ ಜನಸಂಖ್ಯೆಯ ಶೇ. 16.7ರಷ್ಟಿದ್ದರೂ ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡವರಲ್ಲಿ ಪರಿಶಿಷ್ಟ ಜಾತಿಗಳ ಪ್ರಮಾಣ ಕೇವಲ ಶೇ. 7.41ರಷ್ಟು.

ಆದರೆ ಮುಸ್ಲಿಮರು ಜನಸಂಖ್ಯೆಯ ಶೇ. 11.6ರಷ್ಟಿದ್ದರೂ ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡವರಲ್ಲಿ ಕೇವಲ ಶೇ. 7.41 ಮಾತ್ರ ಮುಸ್ಲಿಮರು.

ಹಾಗೆಯೇ ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವಿಗಳನ್ನು ಅಧ್ಯಯನ ಮಾಡುತ್ತಿರುವವರ ಜಾತಿವಾರು ತಲಾವಾರು ಪ್ರಮಾಣವನ್ನು ಆಯೋಗವು ಪರಿಶೀಲಿಸಿತು.

-ಬ್ರಾಹ್ಮಣರ ಜನಸಂಖ್ಯೆ ಕೇವಲ ಶೇ. 3.4 ಇದ್ದರೂ ಈ ಒಟ್ಟಾರೆ ಉನ್ನತ ಶಿಕ್ಷಣದಲ್ಲಿ ಬ್ರಾಹ್ಮಣರ ಸಂಖ್ಯೆ ಶೇ. 21.46.

- ಲಿಂಗಾಯತರ ಜಾತಿವಾರು ಪ್ರಮಾಣ ಶೇ. 15.3 ಇದ್ದರೆ ಉನ್ನತ ಶಿಕ್ಷಣದಲ್ಲಿ ಶೇ. 15.68ರಷ್ಟು ವಿದ್ಯಾರ್ಥಿಗಳು ಆ ಸಮುದಾಯಕ್ಕೆ ಸೇರಿದವರು.

- ಒಕ್ಕಲಿಗರು ರಾಜ್ಯದ ಜನಸಂಖ್ಯೆಯ ಶೇ. 10.8ರಷ್ಟಿದ್ದರೂ ಉನ್ನತ ಶಿಕ್ಷಣದಲ್ಲಿ ಅವರ ಪಾಲು ಶೇ. 11.63.

ಆದರೆ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಶೇ. 16.7ರಷ್ಟಿದ್ದರೂ ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟರ ಪ್ರಮಾಣ 14.44. ಅಂದರೆ ಅವರ ಜನಸಂಖ್ಯೆಯ ಪ್ರಮಾಣಕ್ಕಿಂತ ಕಡಿಮೆ.

ಆದರೆ ಇದರಲ್ಲೂ ಮುಸ್ಲಿಮರ ಪರಿಸ್ಥಿತಿ ತುಂಬಾ ದಾರುಣ.

ಮುಸ್ಲಿಮರ ಜನಸಂಖ್ಯೆ ಶೇ. 11.6ರಷ್ಟಿದ್ದರೂ ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ಪಾಲು ಕೇವಲ 5.71.

ಇದು ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ದೊರಕುತ್ತಿದ್ದಾಗ ಇದ್ದ ಪರಿಸ್ಥಿತಿ. ಇನ್ನು ಪ್ರತ್ಯೇಕ ಮೀಸಲಾತಿ ಕಿತ್ತುಹಾಕಿ ಬ್ರಾಹ್ಮಣರೊಂದಿಗೆ ಸ್ಪರ್ಧಿಸುವಂತೆ ಮಾಡಿದರೆ!?

ಆರ್ಥಿಕ-ಸಾಮಾಜಿಕ ಹಿಂದುಳಿದಿರುವಿಕೆ

ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಅಂದಾಜಿಸಿದ ನಂತರ ಸಾಮಾಜಿಕ-ಆರ್ಥಿಕ ಹಿಂದುಳಿದಿರುವಿಕೆಯನ್ನು ಅಂದಾಜಿಸುವ ಚಿನ್ನಪ್ಪರೆಡ್ಡಿ ಆಯೋಗ ಬೆಂಗಳೂರಿನ ಐಎಸ್‌ಇಸಿ ಸಂಸ್ಥೆಯ ಪ್ರೊ. ಜಿ. ತಿಮ್ಮಯ್ಯ ಅವರ ವರದಿಯನ್ನು ಪ್ರಮಾಣವಾಗಿ ಬಳಸುತ್ತದೆ.

ಅದರ ಪ್ರಕಾರ 1974-75ರ ಸುಮಾರಿಗೆ ಶೇ. 56.5ರಷ್ಟು ಮುಸ್ಲಿಮರು ಬಡತನ ರೇಖೆಗಿಂತ ಕೆಳಗಿದ್ದರು. ಒಟ್ಟಾರೆ 102 ಜಾತಿ-ಸಮುದಾಯಗಳಲ್ಲಿ ಮುಸ್ಲಿಮರಿಗಿಂತ ಹೆಚ್ಚಿನ ಬಡತನವನ್ನು ಅನುಭವಿಸುತ್ತಿದ್ದದ್ದು ಪರಿಶಿಷ್ಟ ಜಾತಿಗಳು (ಶೇ. 58.4) ಮತ್ತು ಪರಿಶಿಷ್ಟ ಬುಡಕಟ್ಟುಗಳು (ಶೇ. 66.3) ಮಾತ್ರ. ಅಂದರೆ ಮುಸ್ಲಿಮರ ಆರ್ಥಿಕ-ಸಾಮಾಜಿಕ ಪರಿಸ್ಥಿತಿ ದಲಿತರಿಗೆ ಅತ್ಯಂತ ಸಮೀಪವಾಗಿತ್ತು. ಸಮೀಪವಾಗಿದೆ!

ಇದಲ್ಲದೆ ಸರಕಾರದ ಸೇವೆಗಳಲ್ಲಿ 1988ರಲ್ಲಿದ್ದ ಸಮುದಾಯವಾರು ಪ್ರಾತಿನಿಧ್ಯವನ್ನು ಸಹ ಚಿನ್ನಪ್ಪರೆಡ್ಡಿ ಆಯೋಗ ಪರಿಶೀಲಿಸಿದೆ.

ಸರಕಾರದ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಲ್ಲಿ ಶೇ. 3.4ರಷ್ಟಿರುವ ಬ್ರಾಹ್ಮಣರು ಶೇ.69.3ರಷ್ಟಿದ್ದರೆ, ಒಕ್ಕಲಿಗರು ಶೇ. 12.4, ಲಿಂಗಾಯತರು ಶೇ. 9.9, ಪರಿಶಿಷ್ಟ ಜಾತಿಗಳ ಪ್ರಮಾಣ ಶೇ. 3.8ರಷ್ಟಿದ್ದರೆ ಮುಸ್ಲಿಮರ ಪ್ರಮಾಣ ಕೇವಲ ಶೇ. 2.9 ಮಾತ್ರ.

ಕರ್ನಾಟಕದ ವಿವಿಧ ವಿಶ್ವವಿದ್ಯಾನಿಲಯ ಗಳಲ್ಲಿ ಗ್ರೂಪ್ I, II, III ಹುದ್ದೆಗಳಲ್ಲಿ ಶೇ. 17ರಷ್ಟು ಬ್ರಾಹ್ಮಣರು, ಶೇ. 25 ಲಿಂಗಾಯತರು, ಶೇ. 17.5ರಷ್ಟು ಒಕ್ಕಲಿಗರು, ಶೇ. 8.3ರಷ್ಟು ಪರಿಶಿಷ್ಟ ಜಾತಿಗಳು.

ಮುಸ್ಲಿಮರು ಶೇ. 4.2ರಷ್ಟು ಮಾತ್ರ!

ಈ ಎಲ್ಲಾ ಕಾರಣಗಳಿಂದ ನ್ಯಾ. ಚಿನ್ನಪ್ಪರೆಡ್ಡಿ ಆಯೋಗವು ಹೀಗೆ ಅಭಿಪ್ರಾಯ ಪಡುತ್ತದೆ:

“The picture presented by the Muslim Community as a whole is that of a Socially and Educationally Backward Class”

(p 170, Volume 1)

ಎಂದರೆ:

ಒಟ್ಟಾರೆ ಈ ಅಧ್ಯಯನವು ಮುಸ್ಲಿಮರು ಒಂದು ಸಮುದಾಯವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವಾಗಿದ್ದಾರೆ ಎಂಬ ಚಿತ್ರಣವನ್ನು ನೀಡುತ್ತದೆ ಎಂದು ಘೋಷಿಸುತ್ತದೆ.

ಮತ್ತು ಒಟ್ಟಾರೆ ಹಿಂದುಳಿದ ಜಾತಿಗಳನ್ನು ಮೂರು ಪ್ರವರ್ಗಗಳಾಗಿ ಚಿನ್ನಪ್ಪರೆಡ್ಡಿ ಆಯೋಗವು ವಿಂಗಡಿಸಿ ಮುಸ್ಲಿಮರನ್ನು IIನೇ ಪ್ರವರ್ಗದಲ್ಲಿ ಸೇರಿಸಿತು. ಆ ಪ್ರವರ್ಗದಲ್ಲಿ ಬೌದ್ಧರನ್ನು ಕೂಡ ಸೇರಿಸಿತು.

ಹೀಗಾಗಿ ಮೋದಿಯವರ ಮುಸ್ಲಿಮ್ ಮೀಸಲಾತಿ ವಿರೋಧಿ ಪ್ರಚಾರವು ಕೋಮುವಾದಿ ದುರುದ್ದೇಶದ್ದು. ಸಂವಿಧಾನ ವಿರೋಧಿ. ಸಾಮಾಜಿಕ ನ್ಯಾಯದ ವಿರೋಧಿ. ಒಬಿಸಿ ವಿರೋಧಿ. ಅದರ ಹಿಂದೆ ಸಂಘೀ ಕೋಮುದ್ವೇಷ ಬಿಟ್ಟು ಬೇರೆ ಏನೂ ಇಲ್ಲ.

ಸಾಮಾಜಿಕ ನ್ಯಾಯದ ಮೇಲಿನ ಈ ದಾಳಿಯನ್ನು ಸಾಮಾಜಿಕ ನ್ಯಾಯದ ಫಲಾನುಭವಿಗಳಾಗಿರುವ ಎಲ್ಲರೂ, ನ್ಯಾಯವಂತರೂ ಒಟ್ಟಾಗಿ ಸೋಲಿಸಬೇಕು.

ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News