‘ಒಂದು ದೇಶ-ಒಂದು ಚುನಾವಣೆ’: ಸಂಘಿಗಳ ಸರ್ವಾಧಿಕಾರಕ್ಕೆ ಚಿತಾವಣೆ

Update: 2023-09-06 05:24 GMT

ಇರುವ ಎಲ್ಲಾ ಸಮಸ್ಯೆಗಳನ್ನು ತನ್ನ ಪ್ರಜಾತಂತ್ರವಿರೋಧಿ ಸರ್ವಾಧಿಕಾರಿ ನೀತಿಗಳಿಂದ ಮತ್ತಷ್ಟು ಹದಗೆಡಿಸುತ್ತಾ ಭಾರತವನ್ನು ಸರ್ವಾಧಿಕಾರಿ ಫ್ಯಾಶಿಸ್ಟ್ ದೇಶವನ್ನಾಗಿ ಪರಿವರ್ತಿಸುತ್ತಿರುವ ಮೋದಿ ಸರಕಾರ ೨೦೨೪ರ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೊಂದು ಸಲ್ಲದ ಹಾಗೂ ಸಾಂವಿಧಾನಾತ್ಮಕ ವಾಗಿಯೇ ದೇಶದ ಫೆಡರಲಿಸಂ ಅನ್ನು ನಾಶ ಮಾಡುವ ಚರ್ಚೆಯನ್ನು ಹುಟ್ಟುಹಾಕಿದೆ.

ದೇಶದ ಲೋಕಸಭೆ ಮತ್ತು ಶಾಸನ ಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ‘ಒಂದು ದೇಶ- ಒಂದು ಚುನಾವಣೆ’ಯ ಸಾಧ್ಯತೆಯ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಮೊನ್ನೆ ಮೋದಿ ಸರಕಾರ ಮಾಜಿ ರಾಷ್ಟ್ರಪತಿ ಕೋವಿಂದ್ ಅವರ ನೆಪ ಮಾತ್ರದ ನೇತೃತ್ವದಲ್ಲಿ ಹಾಗೂ ಗೃಹಮಂತ್ರಿ ಅಮಿತ್ ಶಾ ಅವರ ನೈಜ ಮುಖಂಡತ್ವದಲ್ಲಿ ಎಂಟು ಜನರ ಸಮಿತಿಯನ್ನು ಘೋಷಿಸಿದೆ.

ಅಧ್ಯಯನ ಸಮಿತಿಯೋ? ಸಂಘಿ ಅಜೆಂಡಾಗೆ ರುಜು ಹಾಕುವ ಸಮಿತಿಯೋ?

ಈ ಸಮಿತಿಯ ಅಥವಾ ವಿಷಯದ ಕೂಲಂಕಶ ಚರ್ಚೆಯ ಬಗ್ಗೆ ವಿರೋಧ ಪಕ್ಷಗಳ ಜೊತೆ ಮತ್ತು ರಾಜ್ಯ ಸರಕಾರಗಳ ಜೊತೆ ಅನೌಪಚಾರಿಕವಾಗಿಯೂ ಒಮ್ಮೆಯೂ ಚರ್ಚಿಸದ ಮೋದಿ ಸರಕಾರ ದಿಢೀರನೇ ಈ ಸಮಿತಿಯನ್ನು ಘೋಷಿಸಿದ್ದಲ್ಲದೆ, ಅದರ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಮತ್ತು ಪರಿಶೀಲಿಸಬೇಕಾದ ಅಂಶಗಳ ಪಟ್ಟಿಯನ್ನು ಅಧಿಕೃತವಾಗಿ ಮತ್ತು ಅವಸರ ಅವಸರವಾಗಿ ಹೊರಡಿಸಿದೆ.

(https://www.livelaw.in/pdf_upload/248519-1-490216.pdf)

ಮೇಲಿನ ವೆಬ್ ವಿಳಾಸದಲ್ಲಿರುವ ಗೆಜೆಟ್ ನೋಟಿಫಿಕೇಶನ್ ಅನ್ನು ಒಮ್ಮೆ ಗಮನಿಸಿದರೂ ಈ ಪ್ರಸ್ತಾಪದ ಹಿಂದೆ ಇರುವ ಹುನ್ನಾರಗಳು ಸ್ಪಷ್ಟವಾಗುತ್ತದೆ. ಮೊದಲನೆಯದಾಗಿ ಸಮಿತಿಯ ಎಂಟು ಜನ ಪ್ರಸ್ತಾಪಿತ ಸದಸ್ಯರಲ್ಲಿ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿಯವರನ್ನು ಬಿಟ್ಟರೆ ಸಮಿತಿಯ ಅಧ್ಯಕ್ಷ ಮಾಜಿ ರಾಷ್ಟ್ರಾಧ್ಯಕ್ಷ ಕೋವಿಂದ್, ಗೃಹ ಮಂತ್ರಿ ಶಾ, ಈ ಹಿಂದೆ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದರೂ ಈಗ ಕಾಶ್ಮೀರದಲ್ಲಿ ಬಿಜೆಪಿಯ ಜೊತೆ ರಾಜಕೀಯ ಸರಸವಾಡುತ್ತಿರುವ ಗುಲಾಂ ನಬಿ ಆಝಾದ್, ಬಿಜೆಪಿಯ ಕಾನೂನು ರಕ್ಷಕ ಹಿರಿಯ ವಕೀಲ ಹರೀಶ್ ಸಾಳ್ವೆ, ಬಿಜೆಪಿಯಿಂದ ನೇಮಕವಾಗಲ್ಪಟ್ಟಿದ್ದ ೧೫ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ. ಸಿಂಗ್, ಮಾಜಿ ಸಿವಿಸಿ ಸಂಜಯ್ ಕೊಥಾರಿ, ಲೋಕಸಭೆಯ ಮಾಜಿ ಕಾರ್ಯದರ್ಶಿ ಸುಭಾಶ್ ಕಶ್ಯಪ್ ಎಲ್ಲರೂ ಬಿಜೆಪಿಯ ಆಸ್ಥಾನ ಜೀವಿಗಳೆ. ಈ ಹುನ್ನಾರವನ್ನು ಅರ್ಥಮಾಡಿಕೊಂಡು ಅಧೀರ್ ರಂಜನ್ ಚೌಧರಿ ಸಮಿತಿಯ ಭಾಗವಾಗುವುದಿಲ್ಲವೆಂದು ಘೋಷಿಸಿದ ಮೇಲೆ ಅದು ಸಂಪೂರ್ಣ ಬಿಜೆಪಿ ಸಮಿತಿಯೇ ಆಗಿದೆ.

ತಮ್ಮ ಈ ಪಕ್ಷಪಾತಿ ಹರಕತ್ತು ಯಾರಿಗೂ ಅರ್ಥವಾಗಬಾರದೆಂಬ ಉದ್ದೇಶದಿಂದಲೇ ಎಲ್ಲಾ ಸಂಸದೀಯ ಪ್ರಜಾತಂತ್ರದ ರೀತಿ ರಿವಾಜು ಗಳನ್ನು ಗಾಳಿಗೆ ತೂರಿ ಮಾಜಿ ರಾಷ್ಟ್ರಪತಿಯೊಬ್ಬರನ್ನು ಒಂದು ಸರಕಾರಿ ಪಕ್ಷಪಾತಿ ಸಮಿತಿಯ ಅಧ್ಯಕ್ಷರನ್ನಾಗಿ ಮೋದಿ ಸರಕಾರ ನೇಮಿಸಿದೆ.

ಇದಲ್ಲದೆ ಈ ಸಮಿತಿ ಅಧ್ಯಯನ ಮಾಡಲು ನಿಗದಿಯಾಗಿರುವ ಅಂಶಗಳನ್ನು ಗಮನಿಸಿದರೆ ಈಗಾಗಲೇ ಸರಕಾರ ‘ಒಂದು ದೇಶ ಒಂದು ಚುನಾವಣೆ’ ಮಾಡಲೇ ಬೇಕು ಎಂದು ತೀರ್ಮಾನಕ್ಕೆ ಬಂದು ಅದಕ್ಕೆ ತಕ್ಕಂತೆ ಒಂದು ವರದಿಯನ್ನು ಬರೆದು ಕೊಡಲು ಸಮಿತಿಯನ್ನು ನೇಮಿಸಿದಂತಿದೆ. ಏಕೆಂದರೆ ಈ ಸಮಿತಿಯ ಅಗತ್ಯವನ್ನು ಹೇಳುವಾಗಲೇ ‘‘in the national interest it is desirable to have simultaneous elections in the country’’ ಎಂದು ತನ್ನ ಉದ್ದೇಶವನ್ನು ಚರ್ಚೆ ಹಾಗೂ ಪರಿಶೀಲನೆಗೆ ಮುಂಚೆಯೇ ಸರಕಾರ ಘೋಷಿಸಿಬಿಟ್ಟಿದೆ.

ಮೂರನೆಯದಾಗಿ ಭಾರತದ ಸಂಸದೀಯ ವ್ಯವಸ್ಥೆಯಲ್ಲೇ ಆಮೂಲಾಗ್ರ ಬದಲಾವಣೆಯನ್ನು ತರುವ ಈ ಬದಲಾವಣೆಗಳು ಜಾರಿಗೆ ಬರಬೇಕೆಂದರೆ ಸಂವಿಧಾನಕ್ಕೆ ಹಲವಾರು ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ. ಅವು ರಾಜ್ಯ ಶಾಸನ ಸಭಾ ಚುನಾವಣೆಗಳ ವೇಳಾಪಟ್ಟಿ-ಅವಧಿ ಇತ್ಯಾದಿಗಳ ಮೇಲೂ, ಭಾರತದ ಫೆಡರಲ್ ರಚನೆಯ ಮೇಲೂ ಪ್ರಭಾವ ಬೀರುವುದರಿಂದ ಇಂತಹ ಸಂವಿಧಾನ ತಿದ್ದುಪಡಿಗಳಿಗೆ ಕೇವಲ ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಬಹುಮತ ಪಡೆದರೆ ಸಾಲದು ದೇಶದ ಅರ್ಧಕ್ಕೂ ಹೆಚ್ಚು ರಾಜ್ಯ ಶಾಸನ ಸಭೆಗಳು ಬಹುಮತದಿಂದ ಅನುಮೋದನೆ ಕೊಡಬೇಕಾಗುತ್ತದೆ. ಉದಾಹರಣೆಗೆ ದೇಶದಲ್ಲಿ ಜಿಎಸ್‌ಟಿ ಶಾಸನವಾದದ್ದು ಈ ಪ್ರಕ್ರಿಯೆಯ ಮೂಲಕವೇ.

ಆದರೆ ಏಕಕಾಲಿಕ ಚುನಾವಣೆಯ ಬಗ್ಗೆ ಅಧ್ಯಯನ ಮಾಡಲು ನೇಮಕವಾದ ಸಮಿತಿಗೆ ಈ ರೀತಿ ಸಂವಿಧಾನ ತಿದ್ದುಪಡಿ ಜಾರಿಗೆ ತರಲು ರಾಜ್ಯಗಳ ಶಾಸನ ಸಭೆಗಳ ಅನುಮೋದನೆ ಅಗತ್ಯವೇ ಎಂದು ಪರಿಶೀಲಿಸಲು ಕೇಳಿಕೊಳ್ಳಲಾಗಿದೆ. ಅರ್ಥಾತ್ ಮೋದಿ ಸರಕಾರ ತಾನು ಮಾಡ ಬಯಸುತ್ತಿರುವ ಸಂಸದೀಯ ವಿಚ್ಛಿದ್ರಕಾರಿತನಕ್ಕೆ ಫೆಡರಲ್ ಪ್ರಕ್ರಿಯೆಯನ್ನು ಶಾರ್ಟ್ ಸರ್ಕ್ಯೂಟ್ ಮಾಡುವ ದಾರಿ ಹುಡುಕಿಕೊಳ್ಳುತ್ತಿದೆ. ಇಂತಹ ಸಂವಿಧಾನ ವಿರೋಧಿ ಕೃತ್ಯದ ದಾರಿಗಳನ್ನು ಹುಡುಕಿಕೊಡಲು ಮಾಜಿ ರಾಷ್ಟ್ರಪತಿಗಳನ್ನೇ ಸಮಿತಿಯ ಅಧ್ಯಕ್ಷ್ಷರನ್ನಾಗಿಸಿದೆ.

ಹೀಗಾಗಿ ಮೇಲ್ನೋಟಕ್ಕೆ ಮೋದಿ ಸರಕಾರದ ಹುನ್ನಾರಗಳು ಸ್ಪಷ್ಟಗೊಂಡಿವೆ.

ಆದರೂ ಭಾರತದಲ್ಲಿ ಏಕಕಾಲದಲ್ಲಿ ಚುನಾವಣೆ ಇದ್ದದ್ದು ನಂತರ ಏಕಿಲ್ಲವಾಯಿತು? ಈಗ ಬಲವಂತವಾಗಿ ಏಕಕಾಲೀನಗೊಳಿಸಿದರೆ ಅದರಿಂದ ಈ ದೇಶದ ಸಂಸದೀಯ ಪ್ರಜಾತಂತ್ರಕ್ಕೆ ಒದಗುವ ಅಪಾಯವೇನು? ಮತ್ತು ಈವರೆಗೆ ಈ ಸಂಬಂಧ ಬೇರೆಬೇರೆ ವರದಿಗಳು ಏನು ಹೇಳಿವೆ ಎಂಬುದನ್ನು ಒಮ್ಮೆ ಗಮನಿಸಿದರೆ ಮೋದಿ ಸರಕಾರದ ಸರ್ವಾಧಿಕಾರಿ ಉದ್ದೇಶ ಇನ್ನಷ್ಟು ಸ್ಪಷ್ಟವಾಗುತ್ತದೆ.

ಒಂದು ದೇಶ- ಒಂದೇ ಪಕ್ಷ- ಒಂದೇ ಧರ್ಮ- ಒಂದೇ ನಾಯಕ ಎಂಬ ಆರೆಸ್ಸೆಸ್‌ನ ಸಂವಿಧಾನ ವಿರೋಧಿ ಯೋಜನೆಗೆ ‘ಒಂದು ದೇಶ-ಒಂದು ಚುನಾವಣೆ’ ಎಂಬುದು ಮೊದಲನೇ ಮೈಲಿಗಲ್ಲಾಗಿದೆ. ಆದ್ದರಿಂದಲೇ ಮೋದಿ ಸರಕಾರ ೨೦೧೪ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಈ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಹಾಗೂ ಈ ಸಾಂವಿಧಾನಿಕ ದಾಳಿಗೆ ಲಾ ಕಮಿಷನ್, ಚುನಾವಣಾ ಆಯೋಗ ಹಾಗೂ NITI ಆಯೋಗಗಳನ್ನೂ ಬಳಸಿಕೊಳ್ಳುತ್ತಿದೆ.

ಮೋದಿ ಸರಕಾರ ಒಂದೇ ಚುನಾವಣೆಯ ಬಗ್ಗೆ ಮುಂದಿಡುತ್ತಿರುವ ವಾದಗಳ ಹುರುಳನ್ನು ಅರ್ಥಮಾಡಿಕೊಳ್ಳುವ ಮುನ್ನ ಒಂದು ದೇಶ ಹಲವು ಚುನಾವಣೆಗಳ ಸಂದರ್ಭ ಏಕೆ ಸೃಷ್ಟಿಯಾಯಿತು ಎಂಬುದನ್ನು ಗಮನಿಸೋಣ.

ಒಂದು ದೇಶ- ಹಲವು ಚುನಾವಣೆ ಆಗಿದ್ದೇಕೆ?

ಹಾಗೆ ನೋಡಿದರೆ, ೧೯೫೨ರ ಮೊದಲ ಸಾರ್ವತ್ರಿಕ ಚುನಾವಣೆಯಿಂದ ೧೯೬೭ರ ಸಾರ್ವತ್ರಿಕ ಚುನಾವಣೆಯ ತನಕವೂ ಭಾರತದಲ್ಲಿ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ಶಾಸನಸಭೆಗಳಿಗೆ ಏಕಕಾಲದಲ್ಲೇ ಚುನಾವಣೆಗಳು ನಡೆಯುತ್ತಿದ್ದವು ಹಾಗೂ ಕೇಂದ್ರದಲ್ಲಿ ಮತ್ತು ಬಹುಪಾಲು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವೇ ಬಹುಮತದೊಂದಿಗೆ ಅಧಿಕಾರ ಪಡೆಯುತ್ತಿತ್ತು.

ಇದಕ್ಕೆ ಸಡ್ಡುಹೊಡೆದದ್ದು ೧೯೫೭ರ ಚುನಾವಣೆಯಲ್ಲಿ ಕಮ್ಯುನಿಸ್ಟ್ ಕೇರಳ. ಆದರೆ ಇಂದಿರಾಗಾಂಧಿಯವರ ವಿಶೇಷ ಮುತುವರ್ಜಿಯೊಂದಿಗೆ ನೆಹರೂ ಸರಕಾರ ೧೯೫೯ರಲ್ಲಿ ಕಮ್ಯುನಿಸ್ಟ್ ಕೇರಳ ಸರಕಾರವನ್ನು ವಜಾ ಮಾಡಿತು ಹಾಗೂ ೧೯೬೦ರಲ್ಲಿ ಅಲ್ಲಿ ಮರುಚುನಾವಣೆ ನಡೆಸಿತು. ಹೀಗೆ ಕೇಂದ್ರದ ಸರ್ವಾಧಿಕಾರದ ಕಾರಣದಿಂದಾಗಿಯೇ ರಾಜ್ಯ ಹಾಗೂ ಕೇಂದ್ರಗಳಲ್ಲಿ ಏಕಕಾಲಿಕ ಚುನಾವಣೆ ಎಂಬ ಸರಣಿ ಸಣ್ಣದಾಗಿ ೧೯೫೯ರಲ್ಲೇ ಕಳಚಿಕೊಂಡಿತ್ತು.

ಆದರೆ ಭಾರತದ ಪ್ರಜಾತಂತ್ರ ಪ್ರಬುದ್ಧತೆಯನ್ನು ಪಡೆಯುತ್ತಿದ್ದಂತೆ ಈ ಪ್ರವೃತ್ತಿಗೆ ೧೯೬೭ರ ಚುನಾವಣೆಯ ಫಲಿತಾಂಶ ದೊಡ್ಡ ಶಾಕ್ ನೀಡಿತು. ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೂ ಶಕ್ತಿ ಕ್ಷೀಣಿಸಿತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ತಮಿಳುನಾಡು, ಕೇರಳ, ಪ. ಬಂಗಾಳ, ಒಡಿಶಾ ಹಾಗೂ ಇನ್ನಿತರ ಒಂಭತ್ತು ರಾಜ್ಯಗಳಲ್ಲಿ ಮೊತ್ತಮೊದಲ ಬಾರಿಗೆ ಕಾಂಗ್ರೆಸೇತರ ಸರಕಾರ ಅಧಿಕಾರಕ್ಕೆ ಬಂದಿತು. ಇದಕ್ಕೆ ಹಲವು ಕಾರಣಗಳಿದ್ದವು. ಅ) ನೆಹರೂ ನಂತರ ಕಾಂಗ್ರೆಸ್ ಪಕ್ಷದೊಳಗೆ ಸೃಷ್ಟಿಯಾದ ಬಿಕ್ಕಟ್ಟು ಆ) ಹಾಗೂ ಕಾಂಗ್ರೆಸ್ ಪಕ್ಷ ೨೦ ವರ್ಷಗಳ ಕಾಲ ಸತತವಾಗಿ ಕೇಂದ್ರದಲ್ಲಿ ಮತ್ತು ಬಹುಪಾಲು ರಾಜ್ಯಗಳಲ್ಲಿ ಅಧಿಕಾರ ನಡೆಸಿದ್ದರೂ ಜನರ ನಿರೀಕ್ಷೆಗಳನ್ನು ಈಡೇರಿಸದೆ ಹಳೆಯ ಶೋಷಕ ವ್ಯವಸ್ಥೆ ಮತ್ತೊಂದು ರೀತಿಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದ್ದು ಇ) ಹಾಗೂ ಭಾರತದ ಭಾಷೆ, ಸಂಸ್ಕೃತಿ ಹಾಗೂ ಪ್ರಾದೇಶಿಕ ಬಹುತ್ವಗಳನ್ನು ಗುರುತಿಸದೆ ಕಾಂಗ್ರೆಸ್ ಸರಕಾರ ಏಕರೂಪತೆಯ ಸರ್ವಾಧಿಕಾರವನ್ನು ಹೇರುತ್ತಿದ್ದದ್ದು.

ಹೀಗಾಗಿ ಈ ೧೯೬೭ರ ಚುನಾವಣೆಯ ಪರಿಣಾಮಗಳು ಏಕಪಕ್ಷ ಅಧಿಕಾರವನ್ನು ತಿರಸ್ಕರಿಸುವ ಮೂಲಕ ಭಾರತದ ಪ್ರಜಾತಂತ್ರ ಪಕ್ವಗೊಳ್ಳುತ್ತಿದ್ದುದನ್ನೇ ತೋರಿಸುತ್ತಿತ್ತು.

ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಆಗಿನ ಕಾಂಗ್ರೆಸ್ ಸರಕಾರ ಈ ಭಿನ್ನತೆ ಮತ್ತು ಬಹುತ್ವಗಳನ್ನು ಗೌರವಿಸದೆ ಸಾಮ, ದಾನ, ಭೇದ ಮತ್ತು ದಂಡ ಮಾರ್ಗಗಳನ್ನು ಅನುಸರಿಸಿ ಆರ್ಟಿಕಲ್ ೩೫೬ರನ್ನು ದುರ್ಬಳಕೆ ಮಾಡಿಕೊಂಡು ಬಹುಪಾಲು ಎಲ್ಲಾ ಕಾಂಗ್ರೆಸೇತರ ಸರಕಾರಗಳನ್ನು ವಜಾ ಮಾಡಿತು. ಆದ್ದರಿಂದ ಆ ರಾಜ್ಯಗಳಲ್ಲಿ ವಿಧಾನಸಭೆಗಳಿಗೆ ೧೯೬೯ರಲ್ಲೇ ಮತ್ತೊಮ್ಮೆ ಚುನಾವಣೆಗಳು ನಡೆಯುವಂತಾಯಿತು. ಕಾಂಗ್ರೆಸೇತರ ಸರಕಾರಗಳ ಮೇಲಿನ ದಾಳಿಗಳು ೧೯೮೦ರ ದಶಕದಲ್ಲೂ ಮುಂದುವರಿಯಿತು. ಈ ಧೋರಣೆ ಬಲವಾದ ಪ್ರಾದೇಶಿಕ ಪಕ್ಷಗಳ ಹುಟ್ಟಿಗೆ ಕಾರಣವಾಗಿ ಭಾರತದ ಚುನಾವಣಾ ಪ್ರಜಾತಂತ್ರವನ್ನು ಮೇಲಿನಿಂದ ಒಂದಷ್ಟು ಪ್ರಜಾತಾಂತ್ರೀಕರಿಸಿತು. ಇಂದಿರಾಗಾಂಧಿ ನಿಧನಾನಂತರ ಭಾರತದ ರಾಜಕಾರಣದಲ್ಲಿ ಕಾಂಗ್ರೆಸ್ ಆಧಿಪತ್ಯ ಮಾದರಿ ಕುಸಿದು ಮೈತ್ರಿ ಸರಕಾರಗಳ ಸಂಕ್ರಮಣ ಅವಧಿಯಲ್ಲಿ ಏಳು ಲೋಕಸಭೆಗಳೂ ಸಹ ಬಹುಮತವನ್ನು ಕಳೆದುಕೊಂಡು ಅವಧಿಯನ್ನು ಪೂರೈಸದೆ ಚುನಾವಣೆಯನ್ನು ಎದುರಿಸಬೇಕಾಯಿತು.

೨೦೧೪ರ ನಂತರ ಭಾರತದ ಚುನಾವಣಾ ರಾಜಕಾರಣದಲ್ಲಿ ರೂಪುಗೊಳ್ಳುತ್ತಿರುವ ಬಿಜೆಪಿ ಪ್ರಾಧಾನ್ಯತೆಯ ಅವಧಿಯಲ್ಲಿ ಬಿಜೆಪಿಯು ಕಾಂಗ್ರೆಸ್ ಅನುಸರಿಸಿದ ಕುತಂತ್ರಗಳನ್ನು ಇನ್ನಷ್ಟು ವೇಗವಾಗಿ ಮತ್ತು ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿದೆ. ಕಾರ್ಪೊರೇಟ್ ಕಪ್ಪುಹಣದ ಬಲದೊಂದಿಗೆ ಅದು ಪ್ರಾರಂಭಿಸಿರುವ ಆಪರೇಷನ್ ಕಮಲದ ಕುತಂತ್ರವು ಸಂವಿಧಾನಿಕ ಪ್ರಜಾತಂತ್ರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಒಟ್ಟಿನಲ್ಲಿ ಮೇಲೆ ಹೇಳಿದ ಎಲ್ಲಾ ಕಾರಣಗಳಿಂದಾಗಿ ಲೋಕಸಭೆ ಹಾಗೂ ಶಾಸನಸಭೆಗಳ ವೇಳಾಪಟ್ಟಿ ಭಿನ್ನವಾದವು.

ಸರ್ವಾಧಿಕಾರಿ ಸ್ಥಿರತೆಯೋ? ಉತ್ತರದಾಯಿ ಅಸ್ಥಿರತೆಯೋ?

ಆದರೆ ಈ ಬೆಳವಣಿಗೆಯನ್ನು ಹೇಗೆ ನೋಡಬೇಕು? ಸರಕಾರದ ಸ್ಥಿರತೆಯ ದೃಷ್ಟಿಯಿಂದ ನೋಡಿದರೆ ಇದು ಸಮಸ್ಯಾತ್ಮಕ.

ಆದರೆ ಪ್ರಜಾತಂತ್ರವೆಂದರೆ ಪ್ರಜೆಗಳ ಅಭಿಪ್ರಾಯಕ್ಕೆ ತಕ್ಕಂತೆ ಸರಕಾರ ಮಾಡುವುದೋ? ಅಥವಾ ಜನರ ಅಭಿಪ್ರಾಯವನ್ನು ಔಪಚಾರಿಕಗೊಳಿಸಿ ಸ್ಥಿರ ಸರ್ವಾಧಿಕಾರಿ ಸರಕಾರವನ್ನು ರಚಿಸುವುದೋ?

ಪ್ರಜಾತಂತ್ರದ ಬಗೆಗಿನ ಈ ಮೂಲಭೂತ ಪ್ರಶ್ನೆಗಳನ್ನು ಗಣನೆಗೂ ತೆಗೆದುಕೊಳ್ಳದ ಮೋದಿ ಸರಕಾರ ಏಕಕಾಲಿಕ ಚುನಾವಣೆಗಳ ಬಗ್ಗೆ ಈ ಸರ್ವಾಧಿಕಾರಿ-ತಾಂತ್ರಿಕ ವಾದಗಳನ್ನು ಮಂಡಿಸುತ್ತದೆ.

ಅ) ಏಕಕಾಲಕ್ಕೆ ಎಲ್ಲಾ ಚುನಾವಣೆಗಳು ಮುಗಿದುಹೋದರೆ ಸರಕಾರಗಳು ನಿರಾತಂಕವಾಗಿ ಆಡಳಿತದ ಕಡೆ ಗಮನಹರಿಸಬಹುದು ಮತ್ತು ಪ್ರತೀ ಚುನಾವಣೆ ಘೋಷಿಸಿದಾಗ ‘ಮಾದರಿ ನೀತಿ ಸಂಹಿತೆ’ಗಳು ಜಾರಿಗೆ ಬಂದು ಹಲವಾರು ತಿಂಗಳು ಅಭಿವೃದ್ಧಿ ಕೆಲಸಗಳು ನಿಂತುಹೋಗುವುದನ್ನು ತಡೆಯಬಹುದು.

ಸರಕಾರದ ಈ ವಾದದ ಹಿಂದೆ ಚುನಾವಣೆಗಳು ಅರ್ಥಾತ್ ಜನರನ್ನು ಪದೇಪದೇ ಮುಖಾಮುಖಿಯಾಗುವುದು ಸರಕಾರ ನಡೆಸಲು ಅಡ್ಡಿಯೆಂಬ ಸರ್ವಾಧಿಕಾರಿ-ಫ್ಯಾಶಿಸ್ಟ್ ತಿಳುವಳಿಕೆ ಇದೆ. ವಾಸ್ತವದಲ್ಲಿ ಪ್ರಬುದ್ಧ ಪ್ರಜಾತಂತ್ರಗಳು ಚುನಾವಣೆಯ ಸಮಯದಲ್ಲಿ ಮಾತ್ರವಲ್ಲದೆ ಜನರ ಬದುಕನ್ನು ಪ್ರಭಾವಿಸುವ ಯಾವುದೇ ನೀತಿಗಳನ್ನು ಜಾರಿ ಮಾಡುವಾಗಲೂ ಜನಮತಗಣನೆ ನಡೆಸುತ್ತವೆ. ಆದರೆ ಬಿಜೆಪಿ-ಆರೆಸ್ಸೆಸ್-ಕಾರ್ಪೊರೇಟ್ ಕೂಟವು ಜನರು ಒಮ್ಮೆ ಚುನಾವಣೆಯಲ್ಲಿ ವೋಟು ಕೊಟ್ಟ ನಂತರ ಉಳಿದ ಐದು ವರ್ಷಗಳ ಕಾಲ ತಟಸ್ಥ ಪ್ರೇಕ್ಷಕರಾಗಿ ಉಳಿಯಬೇಕೆಂದು ನಿರೀಕ್ಷಿಸುತ್ತವೆ.

ಎರಡನೆಯದಾಗಿ ಮಾದರಿ ನೀತಿ ಸಂಹಿತೆಯಿಂದಾಗಿ ಕೆಲವು ತಿಂಗಳ ಕಾಲ ಆಡಳಿತ ಯಂತ್ರಾಂಗ ನಿಷ್ಕ್ರಿಯವಾಗುತ್ತದೆ ಎಂಬ ವಾದವನ್ನು ಆಡಳಿತರೂಢ ಪಕ್ಷವು ತಮ್ಮ ಐದು ವರ್ಷಗಳ ನಿಷ್ಕ್ರಿಯತೆಗೆ ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿವೆ ಎಂಬುದು ಎಳೆ ಮಕ್ಕಳಿಗೂ ಅರ್ಥವಾಗುತ್ತದೆ. ಇಷ್ಟಾಗಿ ಅದು ತೊಡಕಾಗಿದ್ದರೆ, ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಆಯೋಗವನ್ನು ಭೇಟಿಯಾಗಿ ಪರಿಹರಿಸಿಕೊಳ್ಳಬಹುದಾದಷ್ಟು ಚಿಲ್ಲರೆ ಸಮಸ್ಯೆ ಅದು. ಹಾಗೆ ನೋಡಿದರೆ, ಮಾದರಿ ಸಂಹಿತೆ ಇದ್ದರೂ ಬಾಲಾಕೋಟ್ ದಾಳಿಯಾಗಲಿಲ್ಲವೇ? ಸೈನಿಕ ವಿಜಯವನ್ನು ಮೋದಿ ವಿಜಯವೆಂದು ಪ್ರಚಾರ ಮಾಡಲಿಲ್ಲವೇ?

ಆ) ವೆಚ್ಚಗಳು ಕಡಿಮೆಯಾಗುತ್ತವೆ!

ಮೋದಿ ಸರಕಾರದ ಪ್ರಕಾರ ೨೦೧೪ರ ಚುನಾವಣೆ ನಡೆಸಲು ಭಾರತ ಸರಕಾರಕ್ಕೆ ಅಧಿಕೃತವಾಗಿ ೩,೮೭೦ ಕೋಟಿ ರೂ. ವೆಚ್ಚವಾಯಿತು. ಆಗಲೇ ಎಲ್ಲಾ ರಾಜ್ಯಗಳಲ್ಲೂ ಚುನಾವಣೆಗಳು ನಡೆದಿದ್ದರೆ ಹೆಚ್ಚುವರಿಯಾಗಿ ೫೦೦ ಕೋಟಿ ರೂ. ಮಾತ್ರ ಖರ್ಚಾಗುತ್ತಿತ್ತು. ಆದರೆ ಪ್ರತ್ಯೇಕವಾಗಿ ಎಲ್ಲಾ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ೩-೪,೦೦೦ ಕೋಟಿ ರೂ. ವೆಚ್ಚ ಹೆಚ್ಚುವರಿಯಾಗಿದೆ.

ಆದರೆ ಇದೊಂದು ಹಸಿ ಸುಳ್ಳು. ಚುನಾವಣಾ ಆಯೋಗದ ಮತ್ತೊಂದು ಲೆಕ್ಕಾಚಾರದ ಪ್ರಕಾರವೇ ಏಕಕಾಲದಲ್ಲಿ ಚುನಾವಣೆ ನಡೆದರೆ ೨೦೧೯ರ ಲೆಕ್ಕಾಚಾರದಲ್ಲಿ ೧೦ ಲಕ್ಷ ಬೂತುಗಳಲ್ಲಿ ಎರಡೆರಡು ಇವಿಎಂ ಯಂತ್ರಗಳಂತೆ ೨೦ ಲಕ್ಷ ಯಂತ್ರಗಳು ಹಾಗೂ ೩-೪ ಲಕ್ಷ ವಿವಿಪಾಟ್ ಯಂತ್ರಗಳಿಗಾಗಿ ಒಟ್ಟಾರೆಯಾಗಿ ೧೦,೦೦೦ ಕೋಟಿ ರೂ. ಬೇಕಾಗುತ್ತವೆ. ಈ ಎಲ್ಲಾ ಯಂತ್ರಗಳನ್ನು ಪ್ರತೀ ೧೫ ವರ್ಷಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ!

ಇ) ಕಪ್ಪುಹಣ ಚಲಾವಣೆ ನಿಯಂತ್ರಣಕ್ಕೆ ಬರುತ್ತದೆ

ಬಿಜೆಪಿ ಈ ವಾದವನ್ನು ಮುಂದಿಡುತ್ತಿರುವುದೇ ಅತ್ಯಂತ ಹಾಸ್ಯಾಸ್ಪದವಾದ ಸಂಗತಿ. ಇಂದು ಚುನಾವಣೆಗಳಲ್ಲಿ ಅಪಾರವಾದ ಕಪ್ಪುಹಣವನ್ನು ಬಳಸುತ್ತಿರುವ ಪಕ್ಷಗಳಲ್ಲಿ ಬಿಜೆಪಿ ಕಾಂಗ್ರೆಸನ್ನು ತುಂಬಾ ಹಿಂದಕ್ಕೆ ಹಾಕಿದೆ. ಕಾರ್ಪೊರೇಟ್ ಶಕ್ತಿಗಳು ತಮ್ಮ ಪರವಾದ ಸರಕಾರ-ನೀತಿಗಳು ಜಾರಿಗೆ ಬರಲು ಪಕ್ಷಗಳಿಗೆ ನೀಡುವ ದೇಣಿಗೆಯನ್ನು ಎಲೆಕ್ಟೋರಲ್ ಬಾಂಡ್ ಯೋಜನೆಯ ಮೂಲಕ ಅಪಾರದರ್ಶಕಗೊಳಿಸಿದ್ದು ಮತ್ತು ಅದರ ಅತ್ಯಂತ ದೊಡ್ಡ ಫಲಾನುಭವಿಯಾಗಿರುವುದೂ ಬಿಜೆಪಿಯೇ ಆಗಿದೆ. ಐದು ವರ್ಷಕ್ಕೊಮ್ಮೆ ಮಾತ್ರ ನಡೆಯುವ ಗ್ರಾಮ ಪಂಚಾಯತ್ ಚುನಾವಣೆಗಳಲ್ಲೂ ಕಪ್ಪುಹಣದ ಹೊಳೆ ಹರಿಸಿದ ಕೀರ್ತಿ ಬಿಜೆಪಿಗೇ ಸಲ್ಲಬೇಕು. ಎಲ್ಲಿಯತನಕ ಎಲೆಕ್ಟೋರಲ್ ಬಾಂಡ್ ಪದ್ಧತಿ ರದ್ದಾಗುವುದಿಲ್ಲವೋ, ಸರಕಾರವೇ ಪಕ್ಷಗಳ ವೆಚ್ಚವನ್ನು ವಹಿಸಿಕೊಂಡು ಪಕ್ಷಗಳ ಎಲ್ಲಾ ಚುನಾವಣಾ ವೆಚ್ಚಗಳು ರದ್ದಾಗುವುದಿಲ್ಲವೋ ಅಲ್ಲಿಯತನಕ ಚುನಾವಣೆಯಲ್ಲಿ ಕಪ್ಪುಹಣ ಚಲಾವಣೆ ನಿಲ್ಲುವುದಿಲ್ಲ. ಅದು ಏಕಕಾಲಿಕ ಚುನಾವಣೆಯಾದರೂ ಅಷ್ಟೆ..ಭಿನ್ನ ಚುನಾವಣೆಯಾದರೂ ಅಷ್ಟೆ.

ಮೇಲಾಗಿ ಒಂದು ಸ್ವತಂತ್ರ ಅಧ್ಯಯನದ ಪ್ರಕಾರ ಬಿಜೆಪಿಯೊಂದೇ ೨೦೧೯ರ ಚುನಾವಣೆಯಲ್ಲಿ ೨೭,೦೦೦ ಕೋಟಿ ಹಣವನ್ನು ವೆಚ್ಚ ಮಾಡಿದೆ. ಅದು ಕಪ್ಪುಹಣವಲ್ಲದೆ ಮತ್ತೇನು?

(https://thewire.in/video/watch-bjps-poll-expenditure-the-highest-nearly-rs-27,000-crore-spent)

ಬಿಜೆಪಿಗೆ ಇಷ್ಟು ಹಣ ಎಲ್ಲಿಂದ ಬಂತು? ಯಾವುದಕ್ಕೆ ವೆಚ್ಚ ಮಾಡಿತು? ಅದರ ಆಪರೇಷನ್ ಕಮಲಗಳಿಗೆ ಸುರಿಯಲಾಗುತ್ತಿರುವ ಹಣದ ಮೂಲಗಳೇ ಈ ದೇಶದ ಪ್ರಜಾತಂತ್ರವನ್ನು ಭ್ರಷ್ಟಗೊಳಿಸುತ್ತಿರುವುದು. ಬಿಜೆಪಿಯ ಚುನಾವಣಾ ವೆಚ್ಚದ ಅರ್ಧ ಭಾಗದಲ್ಲಿ ಚುನಾವಣಾ ಆಯೋಗವು ಲೋಕಸಭೆಗೆ ಹಾಗೂ ರಾಜ್ಯ ಶಾಸನಸಭೆಗಳಿಗೆ ಬೇರೆಬೇರೆ ಸಮಯದಲ್ಲಿ ಬಹಳ ಸುಲಭವಾಗಿ ಚುನಾವಣೆ ನಡೆಸಬಹುದು. ಆ ವೆಚ್ಚಗಳನ್ನು ಮುಚ್ಚಿಹಾಕಲೆಂದೇ ಮೋದಿ ಸರಕಾರ ಏಕಕಾಲಿಕ ಚುನಾವಣೆಯಿಂದ ಹಣ ಉಳಿತಾಯ ಎಂಬ ಸಬೂಬು ಮುಂದಿಡುತ್ತಿದೆ.

ಹೀಗೆ ಏಕಕಾಲಿಕ ಚುನಾವಣೆಗಳ ಬಗ್ಗೆ ಸರಕಾರ ಮುಂದಿಡುತ್ತಿರುವ ಎಲ್ಲಾ ವಾದಗಳೂ ಅಸಂಬದ್ಧವಾಗಿವೆ. ಅಸಂಗತವಾಗಿವೆ.

ಆದರೆ ಏಕಕಾಲಿಕ ಚುನಾವಣೆಗಳು ಸಾಂವಿಧಾನಿಕ ಪ್ರಜಾತಂತ್ರಕ್ಕೆ ಮತ್ತು ಭಾರತದ ಫೆಡರಲ್ ವ್ಯವಸ್ಥೆಗೆ ಮಾಡುವ ಅಪಾಯ ಮಾತ್ರ ಅಪಾರವಾಗಿದೆ.

ಸಂವಿಧಾನ ನಾಶಕ ಪರಿಹಾರಗಳು

ಏಕಕಾಲಿಕ ಚುನಾವಣೆ ನಡೆದರೂ ಚುನಾಯಿತ ಪಕ್ಷ ಸದನದ ವಿಶ್ವಾಸ ಕಳೆದುಕೊಂಡಾಗ ಏಕಕಾಲಿಕ ವ್ಯವಸ್ಥೆ ಮುರಿಯುತ್ತದೆ. ಅದನ್ನು ತಡೆಯಲು ಚುನಾವಣಾ ಆಯೋಗ ಮತ್ತು ನೀತಿ ಆಯೋಗ ಹಾಗೂ ಬಿಜೆಪಿ ಮುಂದಿಡುತ್ತಿರುವ ಪರಿಹಾರ ಸಮಸ್ಯೆಗಿಂತ ಭೀಕರವಾಗಿದೆ.

ಅ) ವಿಶ್ವಾಸ ಇದ್ದರೆ ಮಾತ್ರ ಅವಿಶ್ವಾಸ?

ಈಗಿರುವ ಪ್ರಜಾತಾಂತ್ರಿಕ ನಿಯಮಗಳಂತೆ ಐದು ವರ್ಷಗಳ ಕಾಲ ಆಡಳಿತ ನಡೆಸಲು ಚುನಾಯಿತವಾದ ಸರಕಾರವೊಂದು ಶಾಸನಸಭೆಯ ವಿಶ್ವಾಸವನ್ನು ಕಳೆದುಕೊಂಡರೆ ಅದು ಬಹುಮತವನ್ನು ಸಾಬೀತುಪಡಿಸಬೇಕು ಅಥವಾ ಅಧಿಕಾರ ಬಿಟ್ಟುಕೊಡಬೇಕು. ಬೇರೊಂದು ಪಕ್ಷದ ನಾಯಕರ ನೇತೃತ್ವದಲ್ಲಿ ಬಹುಮತವಿರುವ ಸರಕಾರ ಸ್ಥಾಪನೆಯಾಗಬೇಕು. ಅದಾಗದಿದ್ದಲ್ಲಿ ರಾಜ್ಯಪಾಲ/ರಾಷ್ಟ್ರಪತಿ ಆಡಳಿತ ಜಾರಿಯಾಗಿ ಆದಷ್ಟು ಬೇಗ ಮರುಚುನಾವಣೆ ನಡೆಯುತ್ತದೆ. ಅದರಲ್ಲಿ ಗೆದ್ದುಬಂದವರು ಮುಂದಿನ ಐದು ವರ್ಷಗಳ ಕಾಲ ಅಧಿಕಾರ ನಡೆಸುತ್ತಾರೆ.

ಆದರೆ ‘ಒಂದು ದೇಶ-ಒಂದು ಚುನಾವಣೆ’ ಜಾರಿಗೆ ಬರಬೇಕೆಂದರೆ ವಿಧಾನಮಂಡಲದ ಅವಧಿ ಚುನಾವಣೆಗಳಿಗೆ ತಕ್ಕಂತೆ ನಿಗದಿಯಾಗದೆ, ಪೂರ್ವ ನಿಗದಿಯಾದ ಅವಧಿಗೆ ತಕ್ಕಂತೆ ಚುನಾವಣೆಗಳು ನಡೆಯಬೇಕೆಂದು ಲಾ ಕಮಿಷನ್‌ನ ೧೭೦ನೇ ವರದಿ ಸಲಹೆ ಮಾಡುತ್ತದೆ.

(https://lawcommissionofindia.nic.in/lc170.htm)

ಚುನಾವಣಾ ಆಯೋಗ ಹಾಗೂ ಲಾ ಕಮಿಷನ್ ೨೦೧೮ರಲ್ಲಿ ಕೊಟ್ಟ ವರದಿಯಲ್ಲಿ ಒಂದು ವೇಳೆ ಸದನದಲ್ಲಿ ಆಳುವ ಸರಕಾರದ ಬಗ್ಗೆ ಅವಿಶ್ವಾಸ ಗೊತ್ತುವಳಿ ಮಂಡಿಸಬೇಕೆಂದರೆ ಕಡ್ಡಾಯವಾಗಿ ಅದರ ಜೊತೆಗೆ ಯಾರ ನೇತೃತ್ವದ ಸರಕಾರದ ಬಗ್ಗೆ ವಿಶ್ವಾಸ ಇದೆಯೆಂಬುದನ್ನು ಕೂಡಿಸಿ ಮಂಡಿಸಬೇಕೆಂದು ಸಲಹೆ ಮಾಡಿದೆ.

(http://164.100.47.5/newcommittee/reports/EnglishCommittees/Committee on Personnel, PublicGrievances, Law and Justice/79.pdf)

NITI ಆಯೋಗವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ೧೪ ದಿನಗಳ ಒಳಗೆ ಬದಲಿ ಸರಕಾರವನ್ನು ರಚಿಸುವ ಸಾಧ್ಯತೆ ಇಲ್ಲದಿದ್ದರೆ ಅವಿಶ್ವಾಸ ಗೊತ್ತುವಳಿಗೆ ಅವಕಾಶವೇ ಕೊಡಕೂಡದೆಂದು ಸಲಹೆ ಮಾಡಿದೆ.

(http://niti.gov.in/writereaddata/files/document_publication/Note on Simultaneous Elections.pdf)

ಅವಧಿ ಕಡಿತ-ಸರಕಾರದ ತಪ್ಪು-ಜನರಿಗೆ ಶಿಕ್ಷೆ

ಒಂದು ವೇಳೆ ಬದಲಿ ಸರಕಾರ ರಚಿಸಲು ಸಾಧ್ಯವೇ ಆಗದೆ ಹೋದಲ್ಲಿ ಏನು ಮಾಡಬೇಕು? ಆಗ ಆ ಸದನದ ಅವಧಿ ಮುಗಿದುಹೋಗಲು ಕಡಿಮೆ ಕಾಲಾವಧಿ ಇದ್ದಲ್ಲಿ ರಾಷ್ಟ್ರಪತಿ/ರಾಜ್ಯಪಾಲರ ಆಡಳಿತ ಜಾರಿಯಾಗಬೇಕು. ಒಂದು ವೇಳೆ ಆಯಾ ಲೋಕಸಭಾ/ ಶಾಸನಸಭಾ ಅವಧಿ ಇನ್ನೂ ಹೆಚ್ಚು ಕಾಲವಿದ್ದರೆ ಹೊಸ ಚುನಾವಣೆ ನಡೆಯಬೇಕು. ಆದರೆ ಆಗ ಚುನಾಯಿತವಾಗುವ ಸರಕಾರದ ಅವಧಿ ಐದು ವರ್ಷಗಳಾಗಿರುವುದಿಲ್ಲ. ಬದಲಿಗೆ ಉಳಿಕೆ ಅವಧಿಗೆ ಮಾತ್ರ ಹೊಸ ಸರಕಾರದ ಆಡಳಿತ ಅವಧಿ ಸೀಮಿತವಾಗಿರುತ್ತದೆ!

ಅಂದರೆ ಏಕಕಾಲಿಕ ಚುನಾವಣೆಯನ್ನು ಸಾಧ್ಯಗೊಳಿಸಲು ಈ ಬಗೆಯ ಅಪಾಯಕಾರಿ ತಾಂತ್ರಿಕ ಪರಿಹಾರಗಳನ್ನು ಒದಗಿಸುತ್ತಿರುವ ಬಿಜೆಪಿ ಸರಕಾರ ಇದರಿಂದ ಜನರ ಸಾಂವಿಧಾನಿಕ ಹಕ್ಕುಗಳು ಹೇಗೆ ಬಲಿಯಾಗುತ್ತಿವೆ ಎಂಬುದನ್ನು ಮರೆಸುತ್ತಿದೆ.

ಸಾಂವಿಧಾನಿಕ ಸರ್ವಾಧಿಕಾರದ ಹುನ್ನಾರಗಳು

ಅಸಲು ಬಿಜೆಪಿ ಸರಕಾರಕ್ಕೆ ‘ಒಂದು ದೇಶ ಒಂದು ಚುನಾವಣೆ’ಯ ವಿಷಯ ಏಕೆ ಮುಖ್ಯವಾಗಿದೆ?

IDFC Institute ಎಂಬ ಸಂಸ್ಥೆಯು ೧೯೯೯, ೨೦೦೪, ೨೦೦೯ ಮತ್ತು ೨೦೧೪ರ ಸಾರ್ವತ್ರಿಕ ಚುನಾವಣೆಗಳಲ್ಲಿ ಲೋಕಸಭೆ ಮತ್ತು ರಾಜ್ಯಗಳ ಶಾಸನಸಭೆಗಳಿಗೆ ಏಕಾಕಾಲದಲ್ಲಿ ಚುನಾವಣೆ ನಡೆದ ರಾಜ್ಯಗಳ ಮತದಾನದ ಸ್ವರೂಪವನ್ನು ಅಧ್ಯಯನ ಮಾಡಿದೆ. ಅದರ ಪ್ರಕಾರ ಏಕಕಾಲದಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಚುನಾವಣೆ ನಡೆದರೆ ಮತದಾರರು ಒಂದೇ ಪಕ್ಷಕ್ಕೆ ವೋಟು ಹಾಕುವ ಸಾಧ್ಯತೆ ಶೇ.೭೭ರಷ್ಟು ಹೆಚ್ಚು. ಕೆಲವು ರಾಜ್ಯಗಳಲ್ಲಿ ಅದು ಶೇ.೮೫ರಷ್ಟು!! ೧೯೬೭ರ ಪೂರ್ವದ ಅವಧಿಯಲ್ಲೂ ಇದೇ ಸ್ವರೂಪದಲ್ಲೇ ಮತದಾನವಾಗಿವೆ.

ಅಮೆರಿಕದ ಮತ್ತೊಂದು ಅಧ್ಯಯನ ಸಂಸ್ಥೆಯ ಪ್ರಕಾರ ೨೦೧೪ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಜೊತೆಗೇ ಎಲ್ಲಾ ರಾಜ್ಯಗಳ ಶಾಸನಸಭಾ ಚುನಾವಣೆಗಳು ನಡೆದಿದ್ದರೆ ಬಹುಪಾಲು ರಾಜ್ಯಗಳಲ್ಲಿ ಬಿಜೆಪಿ ಅಪಾರ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿತ್ತು. ಆದರೆ ಒಂದು ವರ್ಷದ ನಂತರ ದಿಲ್ಲಿ ವಿಧಾನಸಭೆಗೆ ಮತ್ತು ಬಿಹಾರ ವಿಧಾನಸಭೆಗೆ ಚುನಾವಣೆ ನಡೆದದ್ದರಿಂದ ಆ ರಾಜ್ಯಗಳಲ್ಲಿ ಲೋಕಸಭೆಯಲ್ಲಿ ಅಪಾರ ಬಹುಮತ ಪಡೆದಿದ್ದ ಬಿಜೆಪಿ ಪಕ್ಷಕ್ಕೆ ಹೋಲಿಕೆಯಲ್ಲಿ ಅತ್ಯಂತ ಕಡಿಮೆ ವೋಟು ಮತ್ತು ಸೀಟುಗಳು ಮಾತ್ರ ದಕ್ಕಿದವು.

ಇದಕ್ಕೆ ಮುಖ್ಯ ಕಾರಣ ಲೋಕಸಭೆಯ ಚುನಾವಣೆಗಳಲ್ಲಿ ರಾಷ್ಟ್ರ, ಧರ್ಮ, ಭದ್ರತೆಯಂಥ ಭಾವನಾತ್ಮಕ ವಿಷಯಗಳು ಪ್ರಾಧಾನ್ಯತೆಯನ್ನು ಪಡೆದರೆ, ಸಾಮಾನ್ಯವಾಗಿ ರಾಜ್ಯಗಳ ಶಾಸನಸಭಾ ಚುನಾವಣೆಗಳಲ್ಲಿ ಬದುಕಿಗೆ ಸಂಬಂಧಪಟ್ಟ ವಿಷಯಗಳು ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತವೆ.

ಹೀಗಾಗಿ ಏಕಕಾಲದಲ್ಲಿ ಚುನಾವಣೆ ನಡೆದಾಗ ಬದುಕಿಗೆ ಸಂಬಂಧಪಟ್ಟ ವಿಷಯಗಳನ್ನು ಭಾವನಾತ್ಮಕ ವಿಷಯಗಳು ನುಂಗಿಹಾಕುತ್ತವೆ ಹಾಗೂ ಪ್ರಾದೇಶಿಕ ಪಕ್ಷಗಳಿಗಿಂತ ರಾಷ್ಟ್ರೀಯ ಪಕ್ಷಗಳೇ ಹೆಚ್ಚಿನ ಮನ್ನಣೆಯನ್ನು ಪಡೆದುಕೊಳ್ಳುತ್ತವೆ.

ಇದು ಪ್ರಜಾತಂತ್ರದಲ್ಲಿ ಪ್ರಬುದ್ಧ ಮತದಾರರ ಪಾತ್ರವನ್ನು ಮತ್ತಷ್ಟು ಗೌಣಗೊಳಿಸಿ ಸರ್ವಾಧಿಕಾರಿ, ಹುಸಿ ರಾಷ್ಟ್ರವಾದಿ ರಾಜಕಾರಣಕ್ಕೆ ದಾರಿ ಮಾಡಿಕೊಡುತ್ತದೆ.

2024ರಲ್ಲಿ ಚುನಾಯಿತ ಸರ್ವಾಧಿಕಾರದ ಗುರಿ?

ಆರೆಸ್ಸೆಸ್-ಬಿಜೆಪಿ ಪಕ್ಷಗಳು ಮತ್ತು ಮೋದಿ ಸರಕಾರ ಈ ವ್ಯವಸ್ಥೆಯನ್ನು ೨೦೧೯ರ ಚುನಾವಣೆಯಲ್ಲೇ ಜಾರಿಗೆ ತರಬೇಕೆಂದಿದ್ದವು ಆದರೆ ಅವು ಜಾರಿಯಾಗಬೇಕೆಂದರೆ ಸಂವಿಧಾನದ ೮೩, ೧೭೨ನೇ ವಿಧಿಗಳಿಗೆ ಸಾಂವಿಧಾನಿಕ ತಿದ್ದುಪಡಿಗಳನ್ನೂ ತರಬೇಕಾಗುತ್ತದೆ. ಆದರೆ ಇದು ಭಾರತದ ಸಂವಿಧಾನದ ಮೂಲರಚನೆಯಾಗಿರುವ ಫೆಡರಲ್ ವ್ಯವಸ್ಥೆಯನ್ನೂ ಬದಲಿಸುತ್ತದೆ. ಸಂಸತ್ತಿಗೆ ಸಂವಿಧಾನದ ಮೂಲರಚನೆಯನ್ನು ಬದಲಿಸುವ ಅವಕಾಶವಿಲ್ಲ. ಹೀಗಾಗಿ ೨೦೧೯ರಲ್ಲಿ ಅದು ಸಾಧ್ಯವಾಗಲಿಲ್ಲ.

ಈಗ ೨೦೨೪ಕ್ಕಾದರೂ ‘ಒಂದು ದೇಶ, ಒಂದು ಚುನಾವಣೆ’ಯೆಂಬ ಸರ್ವಾಧಿಕಾರಿ ವ್ಯವಸ್ಥೆಯನ್ನು ಜಾರಿ ಮಾಡಲು ಆರೆಸ್ಸೆಸ್-ಬಿಜೆಪಿ-ಕಾರ್ಪೊರೇಟ್ ಕೂಟವು ೨೦೧೯ರಲ್ಲಿ ಮೋದಿ ಸರಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ಒಂದು ತಿಂಗಳಿಂದಲೇ ಪ್ರಯತ್ನಗಳನ್ನು ಪ್ರಾರಂಭಿಸಿವೆ. ಈ ಹಿಂದೆ ಕರ್ನಾಟಕದ ವಿಧಾನ ಸಭೆಯಲ್ಲೂ ಇದರ ಬಗ್ಗೆ ಒಂದು ವಿಫಲ ಚರ್ಚೆಯನ್ನು ಬಿಜೆಪಿ ಮಾಡಿತ್ತು.

ಕಾಂಗ್ರೆಸ್‌ನ ಜಡ-ಅವಕಾಶವಾದಿ ರಾಜಕಾರಣಕ್ಕೂ ಬಿಜೆಪಿಯ ಫ್ಯಾಶಿಸ್ಟ್ ರಾಜಕಾರಣಕ್ಕೂ ದೊಡ್ಡ ವ್ಯತ್ಯಾಸ ಇರುವುದು ಇಲ್ಲೇ.

ಈ ಫ್ಯಾಶಿಸ್ಟ್ ಕಥನಕ್ಕೆ ಪ್ರತಿಯಾಗಿ ಪ್ರಜಾತಾಂತ್ರಿಕ ಪ್ರತಿಕಥನವನ್ನು ರೂಪಿಸುತ್ತಾ ಜನಪರಶಕ್ತಿಗಳು ಸಾಂವಿಧಾನಿಕ ಸರ್ವಾಧಿಕಾರ ಜಾರಿಯಾಗದಂತೆ ತಡೆಯಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಶಿವ ಸುಂದರ್

contributor

Similar News