ಕರ್ನಾಟಕ ಮಾದರಿಯ ಸಮಸ್ಯೆಗಳು ಮತ್ತು ವೈರುಧ್ಯಗಳು

Update: 2023-09-21 05:45 GMT

► ಭಾಗ - 2

2) ಅರಸು ಮಾದರಿ ಭೂಸುಧಾರಣೆ ಎಷ್ಟು ಕ್ರಾಂತಿಕಾರಿ?

ಅದೇ ರೀತಿ ಕರ್ನಾಟಕ ಮಾದರಿಯ ಪ್ರಶ್ನೆ ಬಂದಾಗಲೆಲ್ಲಾ ದೇವರಾಜ ಅರಸು ಅವರು ತಮಗಿದ್ದ ಮಿತಿಗಳ ನಡುವೆಯೂ ಜಾರಿ ಮಾಡಿದ ಭೂ-ಸುಧಾರಣೆ ಮತ್ತು ಅವರು ರಾಜಕೀಯ ಪಡಸಾಲೆಯನ್ನು ಮೇಲ್ಜಾತಿಗಳ ಯಾಜಮಾನ್ಯದಿಂದ ವಿಮುಕ್ತಿಗೊಳಿಸಿದ ರಾಜಕೀಯ ಪ್ರಜಾತಂತ್ರೀಕರಣವನ್ನು ಮಾದರಿಯಾಗಿ ಮುಂದಿಡಲಾಗುತ್ತದೆ.

ಆದರೆ ಈಗಾಗಲೇ ಹಲವಾರು ಅಧ್ಯಯನಗಳು ಸಾಬೀತು ಪಡಿಸಿರುವಂತೆ ಕರ್ನಾಟಕದಲ್ಲಿ ಭೂ ಸುಧಾರಣೆಗಳು ಅಂತಹ ಯಶಸ್ಸನ್ನೇನೂ ಪಡೆದಿಲ್ಲ. ಪ್ರಖ್ಯಾತ ರಾಜಕೀಯ ಶಾಸ್ತ್ರಜ್ಞ ಅತುಲ್ ಕೊಹ್ಲಿ ತಮ್ಮ "Regime Types and Poverty Reforms in India' ಎಂಬ ಅಧ್ಯಯನದಲ್ಲಿ ತೋರಿಸಿಕೊಡುವಂತೆ:

1) ಒಂದು ಕ್ರಾಂತಿಕಾರಿ ಭೂ ಸುಧಾರಣಾ ನೀತಿ,

2) ಒಂದು ಕ್ರಾಂತಿಕಾರಿ ರಾಜಕೀಯ ನಾಯಕತ್ವ ಮತ್ತು

3) ತಳಮಟ್ಟದ ಜನ ಚಳವಳಿ ಇದ್ದಾಗ ಮಾತ್ರ ಭೂ ಸುಧಾರಣೆಗಳು ಯಶಸ್ವಿಯಾಗಿವೆ.

ಎರಡನೆಯದನ್ನು ಬಿಟ್ಟರೆ ಮಿಕ್ಕೆರಡು ಇಲ್ಲದ ಕರ್ನಾಟಕದಲ್ಲಿ ಮೂರೂ ಇದ್ದ ಪ. ಬಂಗಾಳ ಮತ್ತು ಕೇರಳದಲ್ಲಿ ನಡೆದಂಥ ಭೂ ಸುಧಾರಣೆಗಳು ನಡೆಯಲಿಲ್ಲ ಎಂಬುದು ಅವರ ಅಧ್ಯಯನದ ಸಾರಾಂಶ. ಮೇಲಿನ ಮೂರೂ ಇಲ್ಲದ ಅಂದಿನ ಉತ್ತರ ಪ್ರದೇಶದ ಪರಿಸ್ಥಿತಿ ಕರ್ನಾಟಕಕ್ಕಿಂತ ಬಹಳ ಅದ್ವಾನ.

(https://www.jstor.org/stable/2758596)

ಪ. ಬಂಗಾಳ ಮತ್ತು ಕೇರಳಗಳ ಮಾದರಿಗಳಿಗೂ ಮಿತಿಗಳಿತ್ತು. ಆದರೆ ಪ್ರಧಾನವಾಗಿ ಅದು ಕಾಲ ಮತ್ತು ಸಂದರ್ಭದ ಮಿತಿಗಳು.

ಐವತ್ತು ವರ್ಷಗಳ ನಂತರ ಕರ್ನಾಟಕದ ಮಾದರಿಯನ್ನು ಹುಡುಕುವಾಗ ಅರಸು ನೀತಿ ಮತ್ತದರ ಕಾಲ-ಸಂದರ್ಭಗಳ ಮಿತಿಗಳು ಇತರ ಮಾದರಿಗಳ ಜೊತೆ ತುಲನಾತ್ಮಕವಾಗಿ ಚರ್ಚೆಯಾಗಬೇಕಲ್ಲವೇ?

3.ಅರಸು-ಮಂಡಲ್ ಮಾದರಿಯ ಅಡ್ಡಪರಿಣಾಮಗಳನ್ನು ನಿವಾರಿಸಿಕೊಳ್ಳುವುದು ಹೇಗೆ?

ಹಾಗೆಯೇ ಈಗ ಹಿಂದಿರುಗಿ ನೋಡಿದಾಗ ಮಂಡಲ್ ಕ್ರಾಂತಿಗೆ ಮುಂಚೆಯೇ ಅರಸು ಕ್ರಮಗಳು ಕರ್ನಾಟಕದಲ್ಲಿ ಉಂಟು ಮಾಡಿದ ಬಲಹೀನ ಜಾತಿಗಳ ರಾಜಕೀಯ ಸಬಲೀಕರಣ ತನ್ನಂತೆ ತಾನೇ ಒಂದು ಪ್ರಜಾತಾಂತ್ರಿಕ ಮುನ್ನ್ನಡೆಯಾದರೂ ಇದರಿಂದ ಆಯಾ ಸಮುದಾಯಗಳ ಸಾಮಾನ್ಯರ ರಾಜಕೀಯ-ಆರ್ಥಿಕ ಸಬಲೀಕರಣ ಏಕಾಗಲಿಲ್ಲ ಎಂದು ವಿಶ್ಲೇಷಿಸದೆ ಅದನ್ನು ಯಥಾವತ್ ಈಗಲೂ ಒಂದು ಮಾದರಿಯೆಂದು ಒಪ್ಪಿಕೊಳ್ಳಬಹುದೇ?

ಮತ್ತೊಂದು ಕಡೆ ಭೂ ಒಡೆತನ ಉಳ್ಳ ಶೂದ್ರ ಜಾತಿಗಳ ರಾಜಕೀಯ-ಆರ್ಥಿಕ ಸಬಲೀಕರಣ ದಲಿತ ವಿರೋಧಿ ಸಾಮಾಜಿಕತೆಯನ್ನು ಆ ಮೂಲಕ ನವ ಬ್ರಾಹ್ಮಣ್ಯ ಹಾಗೂ ಆ ನಂತರ ಹಿಂದುತ್ವವನ್ನು ಗಟ್ಟಿಗೊಳಿಸಿದ ಪರಿಯನ್ನು ಹಾಗೂ ಅದಕ್ಕೆ ಪರಿಹಾರವನ್ನು ವಿಶ್ಲೇಷಿಸದೆ 70-90ರ ಮಾದರಿಯನ್ನು ಈಗಲೂ ಮಾದರಿಯೆಂದು ಒಪ್ಪಿಕೊಳ್ಳಬಹುದೇ?

ಈ ಭೂ-ಸುಧಾರಣೆಗಳು ಮತ್ತು ಆ ನಂತರದ ಹಸಿರು ಕ್ರಾಂತಿ ಮತ್ತು ಮಂಡಲ್ ಕ್ರಾಂತಿಗಳು ಪರಿಣಾಮದಲ್ಲಿ ಶೂದ್ರ ಜಾತಿಗಳೊಳಗಿನ ಮೇಲ್ ಸ್ತರವನ್ನು ಮತ್ತಷ್ಟು ಬಲಿಷ್ಠಗೊಳಿಸಿ ದಲಿತರನ್ನು ಮತ್ತು ದಲಿತರಿಗೆ ಸಮೀಪವಾಗಿದ್ದ ದಲಿತರಂಥ ಅಸಹಾಯಕ ಜಾತಿಗಳನ್ನು ಇನ್ನಷ್ಟು ನಿತ್ರಾಣಗೊಳಿಸಿದವು. 1967ರಿಂದ ಪ್ರಾರಂಭವಾದ ಕಿಲ್ವೇನ್ಮನಿಯಿಂದ 2006ರ ಖೈರ್ಲಾಂಜಿವರೆಗಿನ ಭಾರತದ ಕಥನ ಇದೆ ಅಲ್ಲವೇ?

(ಆನಂದ್ ತೇಲ್ತುಂಬ್ಡೆಯವರು ಈ ಬಗ್ಗೆ ಸಾಕಷ್ಟು ವಿದ್ವತ್ಪೂರ್ಣವಾಗಿ ಚರ್ಚಿಸಿದ್ದಾರೆ. https://navayana.org/products/the-persistence-of-caste/?v=c86ee0d9d7ed)

ಹಾಗಿದ್ದಲ್ಲಿ 2023ರಲ್ಲಿ ನಿಂತು ದೇವರಾಜ ಅರಸು ಮಾದರಿ ಅಥವಾ ಕರ್ನಾಟಕ ಮಾದರಿಯ ಬಗ್ಗೆ ಮಾತಾಡುವಾಗ ಭೂ ಸುಧಾರಣೆಯ ರಾಜಕೀಯ ಆರ್ಥಿಕತೆಯ ಈ ಇತಿಹಾಸವನ್ನು ಮರೆತು ಮಾತಾಡಲು ಸಾಧ್ಯವೇ?

ಕರ್ನಾಟಕದ ಮಾದರಿಯೊಂದು ವರ್ತಮಾನದಲ್ಲಿ ಈ ಎಲ್ಲಾ ಮೂಲಭೂತ ನ್ಯೂನತೆಗಳನ್ನು ಸರಿಪಡಿಸಿಕೊಳ್ಳದೆ ಹುಟ್ಟಿಕೊಳ್ಳುವುದು ಸಾಧ್ಯವೇ?

4) ಸೌಹಾರ್ದ ಪರಂಪರೆಗೆ ವರ್ತಮಾನದಲ್ಲಿ ಕಸುವೇಕಿಲ್ಲ?

ಕರ್ನಾಟಕ ಮಾದರಿಯ ಬಗೆಗಿನ ಹೆಮ್ಮೆಯು ನಮ್ಮ ಕರ್ನಾಟಕದ ಸಮಾಜದ ಸೌಹಾರ್ದ ಪರಂಪರೆಯ ಹೆಮ್ಮೆಯನ್ನೂ ಒಳಗೊಳ್ಳುತ್ತದೆ

ಆದರೆ ಇಂದು ನವ ಉದಾರವಾದ ಮತ್ತು ಹಿಂದುತ್ವ ಫ್ಯಾಶಿಸಂ ಹಿಂದಿ ಬೆಲ್ಟನ್ನು ಮಾತ್ರವಲ್ಲದೆ ಕಮ್ಯುನಿಸ್ಟ್ ಕೇರಳ, ದ್ರಾವಿಡ ತಮಿಳುನಾಡು, ಪ್ರಗತಿಪರ ಕರ್ನಾಟಕ, ಅಂಬೇಡ್ಕರ್ ವಾದಿ ಮಹಾರಾಷ್ಟ್ರ, ಕ್ರಿಶ್ಚಿಯನ್ ಈಶಾನ್ಯ ಭಾರತ ..ಎಲ್ಲೆಡೆಯಲ್ಲೂ ಬಲವಾದ ನೆಲೆಯನ್ನು ಪಡೆದುಕೊಳ್ಳುತ್ತಿದೆ. ಆಯಾ ಪ್ರದೇಶಗಳ ಸಂದರ್ಭಕ್ಕೆ ತಕ್ಕಂತೆ ಅಲ್ಲಿನ ಇತಿಹಾಸವನ್ನು ಸಂಘಪರಿವಾರ ಹಿಂದುತ್ವಕ್ಕೆ ಒಗ್ಗಿಸುತ್ತಿದೆ.

ಹಿಂದುತ್ವ ಮತ್ತು ಹಿಂದೂ ಧರ್ಮಗಳ ನಡುವೆ ಹಲವು ಮೂಲಭೂತ ವ್ಯತ್ಯಾಸಗಳಿವೆಯಾದರೂ ಹಿಂದುತ್ವ ಅರಳಿರುವುದು ಹಿಂದೂ ಧರ್ಮದ ಕೊರಕಲಿನೊಳಗಿಂದಲೇ ಅಲ್ಲವೇ?

ಅಂಬೇಡ್ಕರ್ ಅವರು ಗುರುತಿಸುವಂತೆ ಜಾತಿ-ಅಸ್ಪಶ್ಯತೆಯ ಅನಾಗರಿಕತೆಯೇ ಹಿಂದೂ ಇತಿಹಾಸ.

ಹೀಗಾಗಿ ನಾವು ಇಂದು ಪ್ರಗತಿಪರ ಎಂದು ಆತುಕೊಳ್ಳುತ್ತಿರುವ ಪರಂಪರೆಯನ್ನು ಭಾಗಗಳನ್ನೂ ಕೂಡ ಹಿಂದುತ್ವವಾದಿಗಳು ಬಹಳ ಸುಲಭವಾಗಿ ಬ್ರಾಹ್ಮಣೀಯ ಹಾಗೂ ಹಿಂದುತ್ವವಾದಿಗೊಳಿಸುತ್ತಿದ್ದಾರೆ.

(https://thewire.in/politics/karnataka-election-lingayat-hindutva)

ಹೀಗಾಗಿ ನಮ್ಮ ವರ್ತಮಾನಕ್ಕೆ ಪರಂಪರೆಯು ಕಸುವು ಕೊಡುವ ಬಗೆ ಹೇಗೆ?

ಈ ವಿದ್ಯಮಾನದಲ್ಲಿ ಕರ್ನಾಟಕದಲ್ಲಿ ಪ್ರಮಾಣಾತ್ಮಕ ವ್ಯತ್ಯಾಸಗಳಿರಬಹುದೇ ವಿನಾ ಗುಣಾತ್ಮಕ ವ್ಯತ್ಯಾಸಗಳಲ್ಲ. ಏಕೆ ನಮ್ಮ ನಾಡಿನ ಅಬ್ರಾಹ್ಮಣ ಬೌದ್ಧ, ಜೈನ, ಲಿಂಗಾಯತ, ಶಾಕ್ತ, ಭಕ್ತಿ ಪರಂಪರೆಗಳು ಬ್ರಾಹ್ಮಣೀಯ ಹಿಂದುತ್ವವನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುತ್ತಿಲ್ಲ? ಏಕೆ ಆ ಶ್ರಮಣ ಪರಂಪರೆಯನ್ನು ಹಿಂದುತ್ವ ತನ್ನ ಭಾಗವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ ?

ಕರ್ನಾಟಕದ ಸೌಹಾರ್ದ ಪರಂಪರೆಯ ಬಗ್ಗೆ ಹೆಮ್ಮೆ ಪಡಬಹುದಾದರೂ, ಮೇಲಿನ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೆ ಕೇವಲ ಸೌಹಾರ್ದ ಚರಿತ್ರೆಯನ್ನು ನೆನಪಿಗೆ ತರುವುದರಿಂದಲೇ ವರ್ತಮಾನದಲ್ಲಿ ಜೀವಂತ ಮೌಲ್ಯವಾಗುವುದೇ?

ಏಕೆಂದರೆ ಪರಂಪರೆಯನ್ನು re enact ಮಾಡಲು ಸಾಧ್ಯವಿಲ್ಲ. ಊಳಿಗಮಾನ್ಯ ಇತಿಹಾಸದ ಕಾಲಘಟ್ಟದಲ್ಲಿ ರಾಜಕೀಯ ಪ್ರಭುತ್ವ, ಧಾರ್ಮಿಕ ಪ್ರಭುತ್ವ ಮತ್ತು ಆರ್ಥಿಕ ಹಿಡಿತಗಳು ಒಂದೇ ಕೇಂದ್ರದಿಂದ ಸಂಭವಿಸುತ್ತಿತ್ತು. ಹೀಗಾಗಿ ಆಗ ಜನಪರ ಬಂಡಾಯ ಧರ್ಮಗಳೂ ಸಾರದಲ್ಲಿ ಆರ್ಥಿಕ, ರಾಜಕೀಯ ಬಂಡಾಯಗಳಾಗಿರುತ್ತಿದ್ದವು. ಆಧುನಿಕ ಬಂಡವಾಳಶಾಹಿ ಕಾಲದಲ್ಲಿ ಈ ಶಕ್ತಿಗಳು ಸ್ವಾಯತ್ತ ಹಾಗೂ ಸಂಯೋಜಿತ ಕೇಂದ್ರಗಳಾಗಿರುವಾಗ ವರ್ತಮಾನದಲ್ಲಿ ಹಿಂದುತ್ವ ಸಾಂಸ್ಕೃತಿಕ ಯಾಜಮಾನ್ಯವನ್ನು ಎದುರುಗೊಳ್ಳುವುದು ಹೇಗೆ?

5) ಸುಧಾರಣೆಗಳು ಬದಲಾವಣೆ ತರದ ಸಂದರ್ಭದ ಮಾದರಿ ಯಾವುದು?

ಅಂಬೇಡ್ಕರ್ ಅವರು ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ಈ ದೇಶದ ದಮನಿತ ಜನತೆಯ ಶತ್ರುಗಳೆಂದು ಗುರುತಿಸುತ್ತಾರೆ. ಹೀಗಾಗಿ ಬಂಡವಾಳಶಾಹಿಯನ್ನು ಮಣಿಸಲು ಪ್ರಭುತ್ವ ಸಮಾಜವಾದ ಹಾಗೂ ಬ್ರಾಹ್ಮಣಶಾಹಿಯನ್ನು ಮಣಿಸಲು ಜಾತಿ ನಿರ್ಮೂಲನೆಯನ್ನು ಕಾರ್ಯಕ್ರಮವನ್ನಾಗಿ ಮುಂದಿಡುತ್ತಾರೆ.

ಭಾರತಕ್ಕೂ ಹಾಗೂ ಕರ್ನಾಟಕಕ್ಕೂ ಇದೇ ಮಾದರಿಯಾಗಬೇಕಲ್ಲವೇ?

ಇದನ್ನು ಬಿಟ್ಟು ಬೇರೆ ಮಾದರಿಗಳು ಡೈವರ್ಶನ್ ಅಥವಾ ರಾಜಿ ಆಗುವುದಿಲ್ಲವೇ?

ಉದಾಹರಣೆಗೆ ಅಂಬೇಡ್ಕರ್ ಅವರು ಭೂ-ಸುಧಾರಣೆ ನೀತಿಗಳಿಂದ ಈ ದೇಶದಲ್ಲಿ ಜಾತಿ ವ್ಯವಸ್ಥೆ ಗಟ್ಟಿಗೊಳ್ಳುತ್ತದೆ ಮತ್ತು ದಲಿತರಿಗೆ ವಿಮೋಚನೆಯಾಗುವುದಿಲ್ಲ ಎಂದು ಅದನ್ನು ವಿರೋಧಿಸಿದ್ದರು. ಅದರ ಬದಲಿಗೆ ತಾನು ಕಮ್ಯುನಿಸ್ಟ್ ವಿರೋಧಿಯಾದರೂ ರಶ್ಯ ಮಾದರಿಯಲ್ಲಿ ಭೂಮಿಯ ರಾಷ್ಟ್ರೀಕರಣ ಮತ್ತು ಸಾಮೂಹಿಕ ಕೃಷಿ ಜಾರಿಯಾಗಬೇಕು ಎಂದು ಪ್ರತಿಪಾದಿಸಿದ್ದರು.

((BAWS, Vol. 1, p. 408) ಮತ್ತು (BAWS, Vol. 15, p. 960).

ಹಾಗಿದ್ದಲ್ಲಿ ದೇವರಾಜ ಅರಸು ಅವರ ಸುಧಾರಣೆ ಮತ್ತು ಅಂಬೇಡ್ಕರ್ ಅವರ ಕ್ರಾಂತಿಕಾರಿ ಬದಲಾವಣೆ ಇವೆರಡರಲ್ಲಿ ಕರ್ನಾಟಕದ ಮಾದರಿ ಯಾವುದಾಗಬೇಕು ಎಂಬ ಪ್ರಶ್ನೆಯನ್ನು ಚರ್ಚಿಸಬೇಕಲ್ಲವೇ?

6) ಸಂವಿಧಾನವನ್ನು ಬೆಳೆಸದೆ ಉಳಿಸಲು ಸಾಧ್ಯವೇ?

ಎಲ್ಲಕ್ಕಿಂತ ಮುಖ್ಯವಾಗಿ ಅಂಬೇಡ್ಕರ್ ಅವರೇ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾದರೂ, ಸಂವಿಧಾನದ ಮುನ್ನುಡಿಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳನ್ನು ಪ್ರತಿಫಲಿಸಿದರೂ...

ಸಂವಿಧಾನದ ಕೀಲಕ ಭಾಗಗಳಲ್ಲಿ ಬಂಡವಾಳಶಾಹಿ ನಾಶ ಮತ್ತು ಜಾತಿ ವ್ಯವಸ್ಥೆಯ ನಾಶಗಳು ಸೇರ್ಪಡೆಯಾಗಲಿಲ್ಲ... ಅದು ನಮ್ಮ ಸ್ವಾತಂತ್ರ್ಯ ಹಾಗೂ ಸಂವಿಧಾನದ ಮಿತಿಯಲ್ಲವೇ? ಬದಲಿಗೆ ಅವುಗಳ ಅಮಾನವೀಯ ಅಭಿವ್ಯಕ್ತಿಗಳನ್ನು ನಿಯಂತ್ರಿಸುವ ಅಧಿಕಾರವನ್ನು ಮಾತ್ರ ಸಂವಿಧಾನ ಪ್ರಭುತ್ವಕ್ಕೆ ಕೊಡುತ್ತದೆ.

ಹೀಗಾಗಿ ಹಿಂದಿರುಗಿ ನೋಡಿದರೆ ದೇವರಾಜ ಅರಸು, 69ರ ಇಂದಿರಾ ಗಾಂಧಿ, ಬಂಗಾಲ್ ಮತ್ತು ಕೇರಳಗಳ ಸಂಸದೀಯ ಕಮ್ಯುನಿಸ್ಟ್ ಮಾದರಿಗಳೆಲ್ಲಾ ಸಂವಿಧಾನದ ಆಶಯಗಳನ್ನು ಪೂರೈಸಲು ವಿಫಲವಾದವು ಎಂದಾಗುವುದಿಲ್ಲವೇ? ಹೀಗಾಗಿ ಈ ಮಾದರಿಗಳು ಸಾರದಲ್ಲಿ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿ ಶಕ್ತಿಗಳ ಉಳಿವು ಮತ್ತು ಬೆಳವನ್ನು ನಿರ್ಮೂಲನೆ ಮಾಡುವಲ್ಲಿ ವಿಫಲವಾಗಿವೆ ಎಂದಾಗುವುದಿಲ್ಲವೇ? ಅವುಗಳು ರೂಪು ಮಾತ್ರ ಬದಲಾಗಿ ಮತ್ತಷ್ಟು ಪ್ರಬಲವಾಗಿ ಮುಂದುವರಿಯಲು ಸಹಾಯಕವಾಗಿವೆ ಎಂದು ಹೇಳಬಹುದೇ?

ಒಂದರ್ಥದಲ್ಲಿ ಕಳೆದ 75 ವರ್ಷಗಳಲ್ಲಿ ರಾಜಕೀಯ ಪ್ರಜಾತಂತ್ರವೇ ಸಾಮಾಜಿಕ ಪ್ರಜಾತಂತ್ರವನ್ನು ಹಾಗೂ ಆರ್ಥಿಕ ಪ್ರಜಾತಂತ್ರದ ಸಾಧ್ಯತೆಯನ್ನು ನಾಶ ಮಾಡುತ್ತಾ ಬಂದಿದೆ. ಹೀಗಾಗಿ ಇದೀಗ ನಮ್ಮ ಸಂವಿಧಾನದ ಸಂದಿಯಿಂದಲೇ ಸಂವಿಧಾನ ಬದ್ಧವಾಗಿ ಬ್ರಾಹ್ಮಣಶಾಹಿ ಹಿಂದುತ್ವ ಹಾಗೂ ನರಹಂತಕ ಕಾರ್ಪೊರೇಟ್ ಬಂಡವಾಳಶಾಹಿಯ ಹಿಂದುತ್ವ ಫ್ಯಾಶಿಸಂ ದೇಶವನ್ನು ಆವರಿಸುತ್ತಿವೆ.

ಆದ್ದರಿಂದ ಬದಲಾವಣೆಯ ಯಾವುದೇ ಮಾದರಿ ಸಂವಿಧಾನದ ಅಪರಿಪೂರ್ಣತೆಯನ್ನು ನಿವಾರಿಸುವಷ್ಟು ಕ್ರಾಂತಿಕಾರಿಯಾಗದೆ ಫ್ಯಾಶಿಸಂ ಅನ್ನು ಸೋಲಿಸಬಲ್ಲದೇ?

7) ಬಿಜೆಪಿಯೇತರ ಮಾದರಿಗಳ ಮೇಲಿರುವ ಹಿಂದುತ್ವ ಯಾಜಮಾನ್ಯದ ಸಮಸ್ಯೆ

ಅಷ್ಟೇ ಮುಖ್ಯವಾಗಿ ಕಾಂಗ್ರೆಸನ್ನು ಒಳಗೊಂಡಂತೆ ಎಲ್ಲಾ ವಿರೋಧ ಪಕ್ಷಗಳ ಮೇಲೂ ಇರುವ ನವಉದಾರವಾದದ ಮತ್ತು ಬ್ರಾಹ್ಮಣೀಯ ಹಿಂದುತ್ವದ ಯಜಮಾನಿಕೆಯಿಂದಾಗಿಯೇ ಇಂದು ಹಿಂದುತ್ವ ಫ್ಯಾಶಿಸಂ ಬೆಳೆಯುತ್ತಿರುವುದಲ್ಲವೇ? ಮತ್ತು ಚುನಾವಣಾ ಪ್ರಜಾತಂತ್ರ ವೆಂಬುದು ಹಿಂದುತ್ವ ಫ್ಯಾಶಿಸಂ ಅನ್ನು ನವೀಕರಿಸುವ ಸಾಧನವಾಗಿಬಿಟ್ಟಿಲ್ಲವೇ?

ಹೀಗಾಗಿ ಬದಲಾವಣೆಯ ಮಾರ್ಗದ ಮಾದರಿಗಳು ಕೂಡ ಇಲ್ಲಿಯವರೆಗೆ ಅನುಸರಿಸಿಕೊಂಡು ಬಂದ ಮಾದರಿಗಳಿಗಿಂತ ಭಿನ್ನವಾಗಿರಬೇಕಿಲ್ಲವೇ?

8) ಜಾಗತಿಕ ಸವಾಲಿಗೆ ಜಾಗತಿಕ ಮಾದರಿಯೇ?

ಕೊನೆಯದಾಗಿ ಸರ್ವರಿಗೂ ಸಮಪಾಲು ಮತ್ತು ಸಮಬಾಳಿನ ಆಶಯಗಳನ್ನು ಇಂದಿನ ಜಾಗತಿಕ ಆರ್ಥಿಕತೆ ಮತ್ತು ಸರ್ವ ವ್ಯಾಪಿ ಹಿಂದುತ್ವಗಳ ವಿರುದ್ಧ ಸೆಣೆಸುತ್ತಾ ಸಾಧಿಸಬೇಕು ಎಂದಾದರೆ ಅದನ್ನು ಒಂದು ರಾಜ್ಯ, ಒಂದು ದೇಶ, ಒಂದು ಸಮುದಾಯ, ಒಂದು ಮಾದರಿಯಲ್ಲಿ ಮಾಡಲು ಸಾಧ್ಯವೇ?

ಇವೇ ಇನ್ನಿತ್ಯಾದಿ ಪ್ರಶ್ನೆಗಳನ್ನು-ಪರಿಹಾರಗಳನ್ನು ಒಳಗೊಳ್ಳದ ಕರ್ನಾಟಕದ ಮಾದರಿ ಮತ್ತದರ ಬಗೆಗಿನ ಚರ್ಚೆ ಸಮಸ್ಯಾತ್ಮಕವಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಶಿವಸುಂದರ್

contributor

Similar News