‘ಪ್ರಜ್ವಲ’ ಪಾಳೇಗಾರಿಕೆಯ ಬೇರುಗಳು ಮತ್ತು ಉದಾರವಾದಿ ಕುರುಡುಗಳು

ಊಳಿಗಮಾನ್ಯ ದರ್ಪ, ಪುರುಷಾಧಿಪತ್ಯ, ಬಲಿಷ್ಠ ಜಾತಿ ಕೊಡುವ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಅಧಿಕಾರ ಇವುಗಳನ್ನು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಕೂಡಾ ಸೆಕ್ಯುಲರ್ ಆಗಿರಲು ಸಾಧ್ಯವೇ? ಸೆಕ್ಯುಲರ್ ಎಂದರೆ ಬಿಜೆಪಿಯ ಚುನಾವಣಾತ್ಮಕ ವಿರೋಧ ಮಾತ್ರವೇ? ಇಂತಹ ಬ್ರಾಹ್ಮಣೀಕರಣಗೊಳ್ಳುತ್ತಿರುವ ಬಲಿಷ್ಠ ಜಾತಿಗಳ ಪಕ್ಷ ಊಳಿಗಮಾನ್ಯ ಪಾಳೇಗಾರಿಕೆ ಮತ್ತು ಪುರುಷಾಧಿಪತ್ಯವನ್ನೇ ತತ್ವ ಪ್ರಣಾಳಿಕೆಯನ್ನಾಗಿಸಿಕೊಂಡಿರುವ ಬಿಜೆಪಿ ಮತ್ತು ಸಹಜ ಮಿತ್ರರಾಗುವುದು ಕಷ್ಟವೇನಲ್ಲ ಎಂಬುದು ಕರ್ನಾಟಕದಲ್ಲಿ ಎರಡು ಮೂರು ಬಾರಿ ರುಜುವಾತಾಗಿಲ್ಲವೇ? ಪ್ರಜಾತಾಂತ್ರಿಕವಾಗದೆ ಸೆಕ್ಯುಲರ್ ಆಗಲು ಸಾಧ್ಯವೇ? ಆ ಅರ್ಥದಲ್ಲಿ ಕಾಂಗ್ರೆಸ್ ಕೂಡಾ ಎಷ್ಟು ಸೆಕ್ಯುಲರ್ ಎಂಬ ಪ್ರಶ್ನೆಗಳು ಈಗಲಾದರೂ ಬರಬೇಕಲ್ಲವೇ?

Update: 2024-05-22 05:10 GMT

ಪ್ರಜ್ವಲ್ ರೇವಣ್ಣ ನಡೆಸಿರುವ ಅಮಾನುಷ, ಅನಾಗರಿಕ, ಲೈಂಗಿಕ ಹಿಂಸಾಚಾರ ಮತ್ತು ಅತ್ಯಾಚಾರಗಳು ಇಡೀ ದೇಶವನ್ನೇ ದಿಗ್ಭ್ರಾಂತಗೊಳಿಸಿದೆ. ಈಗ ಅದನ್ನು ದಕ್ಕಿಸಿಕೊಳ್ಳಲು ದೇವೇಗೌಡರ ಕುಟುಂಬ ಮಾಡುತ್ತಿರುವ ಪ್ರಯತ್ನ, ಎಗ್ಗುಸಿಗ್ಗಿಲ್ಲದ ಬಿಜೆಪಿ ಏಕಕಾಲದಲ್ಲಿ ದೇವೇಗೌಡ ಕುಟುಂಬಕ್ಕೆ ಬೆಂಬಲವನ್ನು ಕೊಡುತ್ತಾ ಮತ್ತು ಜೆಡಿಎಸ್ ಎದುರಿಸುತ್ತಿರುವ ಈ ಬಿಕ್ಕಟ್ಟಿನಿಂದ ಲಾಭ ಪಡೆಯುವ ಷಡ್ಯಂತ್ರಗಳನ್ನು ಹೆಣೆಯುತ್ತಿದೆ. ಕಾಂಗ್ರೆಸ್ ಪಕ್ಷವೂ ಈ ಪ್ರಕರಣದಲ್ಲಿ ಜೆಡಿಎಸ್ ಅನ್ನು ಅಮಾನ್ಯಗೊಳಿಸಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವ ಎಲ್ಲಾ ಅವಕಾಶಗಳನ್ನು ಕಾಣುತ್ತಿದೆ ಮತ್ತು ತನ್ನ ಸರಕಾರದ ಮೂಲಕ ಆ ನಿಟ್ಟನಲ್ಲಿ ಕ್ರಮ ತೆಗೆದುಕೊಳ್ಳುತ್ತಿದೆ.

ಇಂತಹ ಕೊಳಕು ರಾಜಕೀಯ ಸಂದರ್ಭದಲ್ಲಿ ಅಮಾಯಕ ಮತ್ತು ಅಸಹಾಯಕ ಹೆಣ್ಣುಮಕ್ಕಳ ಮಾನ-ಪ್ರಾಣಗಳು ರಾಜಕೀಯದ ದಾಳವಾಗದಂತೆ ನೋಡಿಕೊಳ್ಳಲು ಮತ್ತು ಪ್ರಜ್ವಲ್ ರೇವಣ್ಣ ಆದಿಯಾಗಿ ಸಂಬಂಧ ಪಟ್ಟ ಎಲ್ಲಾ ಅಪರಾಧಿಗಳಿಗೂ ಶಿಕ್ಷೆಯಾಗುವಂತೆ ಒತ್ತಡ ತರಲು ನಾಡಿನ ಎಲ್ಲಾ ಪ್ರಗತಿಪರ ಮತ್ತು ಆರೋಗ್ಯಕರ ಮನಸ್ಸುಗಳೂ ಧ್ವನಿ ಎತ್ತುತ್ತಿರುವುದು ಒಂದು ಸಮಾಧಾನಕರ ಸಂಗತಿ.

ಹಾಸನದಲ್ಲಿ ಮೇ 30ರಂದು ಬೃಹತ್ ಆಗ್ರಹ ಸಮ್ಮೇಳನವನ್ನೂ ಒಳಗೊಂಡಂತೆ ಸರಕಾರದ ಮೇಲೆ ಮತ್ತು ಪಕ್ಷಗಳ ಮೇಲೆ ಒತ್ತಡ ತರಲು ಹಲವಾರು ಪ್ರತಿಭಟನೆಗಳು ರೂಪುಗೊಳ್ಳುತ್ತಿರುವುದು ಕೂಡಾ ಆಶಾದಾಯಕ ಬೆಳವಣಿಗೆಯಾಗಿದೆ.

ಆದರೆ ಇದೇ ಸಂದರ್ಭದಲ್ಲಿ ಕೆಲವು ಅಹಿತಕರವಾದ ಮತ್ತು ಕೆಲವು ಆಳವಾದ ಪ್ರಶ್ನೆಗಳನ್ನು ನಾಗರಿಕ ಸಮಾಜ ಕೇಳಿಕೊಳ್ಳಬೇಕಿದೆ.

1. ಪ್ರಜ್ವಲ್ ಪ್ರಕರಣದಲ್ಲಿನ ಅಮಾನುಷ ವಿಕೃತಿ ಮತ್ತು ಪ್ರಮಾಣಗಳು ಎಲ್ಲರಿಗೂ ಶಾಕ್ ನೀಡಿವೆ. ಹೀಗಾಗಿಯೇ ಪ್ರಾರಂಭದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿಯವರೂ ರೇವಣ್ಣ ಕುಟುಂಬದಿಂದ ಅಂತರ ಕಾಪಾಡಿಕೊಳ್ಳುವ ಮಾತಾಡಿದ್ದರು. ಈ ಪ್ರಕರಣದ ವಿಕೃತಿ ಮತ್ತು ಪ್ರಮಾಣಗಳು ಅತಿರೇಕವೇ ಆಗಿದ್ದರೂ ಅದು ಸಾಧ್ಯವಾಗಿದ್ದು ಅದರ ಆಳದಲ್ಲಿರುವ ಶಿಕ್ಷಾ ಭೀತಿಯಿಲ್ಲದ ಅಧಿಕಾರ ಮದ. ಅದನ್ನು ಸಾಧ್ಯಗೊಳಿಸಿರುವ ಬಲಿಷ್ಠ ಜಾತಿ ಬಲ. ಅದರ ಮೂಲಕ ಪಡೆದಿರುವ ಅಧಿಕಾರ ಮತ್ತು ಸಂಪತ್ತು..ಇತ್ಯಾದಿಗಳು.

ಪ್ರಬಲ ಜಾತಿಗಳ ಜಾತಿ ಪ್ರತಿಷ್ಠೆಗಳು ಜಾತಿ ಆಧಾರಿತ ಸಾಮಾಜಿಕ ಅಧಿಕಾರದ ಅಭಿವ್ಯಕ್ತಿಯಾಗಿವೆ. ಈ ಪಾಳೇಗಾರಿ ಜಾತಿ ಪ್ರತಿಷ್ಠೆಗೆ ಮುಕ್ಕು ಬರುತ್ತದೆ ಎಂದಾದರೆ ಮಾನವೀಯ ಮೌಲ್ಯಗಳು, ಕಾನೂನುಗಳು ಸಂವಿಧಾನ ಎಲ್ಲವೂ ಹಿನ್ನೆಲೆಗೆ ಸರಿಯುತ್ತವೆ. ಪ್ರಜ್ವಲ್‌ನ ವಿಕೃತಿಯ ಬಗ್ಗೆ ಅಸಮಾಧಾನವಿದ್ದರೂ, ಪ್ರಜ್ವಲ್ ಜಾತಿ ಪ್ರತಿಷ್ಠೆಯ ಪ್ರತೀಕವಾದರೆ ಶತಾಯ ಗತಾಯ ಆತನನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತದೆ.

ಕುಮಾರಸ್ವಾಮಿಯವರು ಮಾಡುತ್ತಿರುವ ಕಸರತ್ತು, ದೇವೇಗೌಡರ ಮೌನ, ‘ಅಪರಾಧ ಸಾಬೀತಾದರೆ ಶಿಕ್ಷೆಗೆ ನಮ್ಮ ತಕರಾರಿಲ್ಲ’ ಎಂಬ ಪಾಳೇಗಾರಿ ಎಚ್ಚರಿಕೆಗಳು ಇವೆಲ್ಲಾ ಪ್ರಜ್ವಲ್‌ನ ಸಾಮಾಜಿಕ ವಿಕೃತಿಯನ್ನು ಜಾತಿ ಮತ್ತು ಪಕ್ಷದ ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸುವ ಪ್ರತಿತಂತ್ರದ ಭಾಗವೇ ಆಗಿದೆ. ಒಮ್ಮೆ ಅದು ಜಾತಿ ಪ್ರತಿಷ್ಠೆಯ ಪ್ರಶ್ನೆಯಾದರೆ ಪಕ್ಷಾತೀತ ಜಾತಿ ಬೆಂಬಲವೂ ಸಿಗುತ್ತದಲ್ಲವೇ?

ಹೀಗಾಗಿ ಏನು ಮಾಡಿದರೂ ದಕ್ಕಿಸಿಕೊಳ್ಳಬಹುದು ಎಂಬ ದರ್ಪದ ಮೂಲವಿರುವುದು ಈ ಸಾಮಾಜಿಕ-ರಾಜಕೀಯ ವಿದ್ಯಮಾನದಲ್ಲಿ. ಪ್ರಜ್ವಲ್‌ನ ಅತಿರೇಕ ಮತ್ತ ವಿಕೃತಿಯ ಪ್ರಮಾಣಗಳು ಈ ವಿದ್ಯಮಾನದ ಪ್ರತಿಫಲ.

ಆದರೆ ಸಮಾಜ ಪ್ರಜ್ವಲ್‌ನ ಅತಿರೇಕವನ್ನು ಅಸಹ್ಯಪಟ್ಟುಕೊಳ್ಳುವ ರೀತಿ, ಪ್ರಜಾತಂತ್ರದ ಮುಸುಕಿನಲ್ಲಿರುವ ಈ ಪಾಳೇಗಾರಿಕೆ ರಾಜಕೀಯ ಮತ್ತು ಆರ್ಥಿಕತೆಗಳನ್ನು ವಿರೋಧಿಸುವುದಿಲ್ಲ? ಪ್ರಜಾತಂತ್ರದ ಮುಸುಕಿನಲ್ಲಿ ಬೇರುಬಿಟ್ಟಿರುವ ಈ ಊಳಿಗಮಾನ್ಯ ಪಾಳೇಗಾರಿಕೆ ನಾಶವಾಗದೆ ಅದರ ಅತಿರೇಕದ ವಿದ್ಯಮಾನಗಳಾಗಿರುವ ಪ್ರಜ್ವಲ್‌ನ ವಿಕೃತಿಗಳಿಗೆ ಕಡಿವಾಣ ಹಾಕಬಹುದೇ?

2. ಅಷ್ಟೇ ಮುಖ್ಯವಾದ ಪ್ರಶ್ನೆ ಈ ಊಳಿಗಮಾನ್ಯ ದರ್ಪ, ಪುರುಷಾಹಂಕಾರ, ಆಧಿಪತ್ಯಗಳು ಕೇವಲ ಜೆಡಿಎಸ್‌ಗೆ ಮಾತ್ರ ಸೀಮಿತವೇ? ಪ್ರಜ್ವಲ್‌ನಷ್ಟು ಪ್ರಮಾಣದಲ್ಲಿ ಮತ್ತು ವಿಕೃತಿಯಲ್ಲಿ ಅಲ್ಲದಿದ್ದರೂ ಅದರ ಪೂರ್ವಭಾವಿ ಹಂತಗಳು ವಿಶೇಷವಾಗಿ ಮಹಿಳೆಯರ ಬಗೆಗಿನ ಧೋರಣೆ ಮತ್ತು ಅಧಿಕಾರ ದುರ್ಬಳಕೆಗಳು ಎಲ್ಲಾ ಪಕ್ಷಗಳಲ್ಲೂ ಇವೆಯಲ್ಲವೇ? ಆ ಧೋರಣೆಯಿಂದಾಗಿಯೇ ಪ್ರಜ್ವಲ್‌ನನ್ನು ಉಳಿಸಿಕೊಳ್ಳಲು ಪಕ್ಷಾತೀತ ಪ್ರಯತ್ನಗಳು ನಡೆಯುತ್ತಿಲ್ಲವೇ?

3. ಜೆಡಿಎಸ್ ಈಗ ಬಿಜೆಪಿಯ ಜೊತೆ ಸಖ್ಯದಲ್ಲಿರುವುದು ಕೂಡಾ ಪ್ರಗತಿಪರ ಸಮುದಾಯಕ್ಕೆ ಯಾವುದೇ ಮುಲಾಜಿಲ್ಲದೆ ಪ್ರಜ್ವಲ್‌ನ ಪ್ರಕರಣವನ್ನು ಎದುರಿಸಲು ಸುಲಭವಾಗಿದೆ.

ಆದರೆ ಜೆಡಿಎಸ್ ಪ್ರಜ್ವಲ್‌ನ ಈ ಕುಕೃತ್ಯಗಳಿಗೆ ಕನಿಷ್ಠ ಹತ್ತು ವರ್ಷಗಳ ಇತಿಹಾಸವಿದೆ. ಅದು ದೇವೇಗೌಡರ ಸಕಲ ಕುಟುಂಬಗಣಕ್ಕೂ ತಿಳಿದಿತ್ತು. ಕಾಂಗ್ರೆಸ್ ಮತ್ತು ಬಿಜೆಪಿಗೂ ತಿಳಿದಿತ್ತು. ಆದರೂ ಅದು 2019ರಲ್ಲಿ ಪ್ರಜ್ವಲ್‌ನನ್ನು ಹಾಸನದ ಕಾಂಗ್ರೆಸ್- ಜೆಡಿಎಸ್ ಜಂಟಿ ಅಭ್ಯರ್ಥಿ ಮಾಡಲು ಅಡ್ಡಿ ಮಾಡಲಿಲ್ಲ. 2024ರಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಮಾಡಲು ಅಡ್ಡಿಯಾಗಲಿಲ್ಲ. ಈಗಲೂ ಜೆಡಿಎಸ್ ಕಾಂಗ್ರೆಸ್‌ನ ಸಖ್ಯದಲ್ಲಿದ್ದಿದ್ದರೆ ಇದು ಇಷ್ಟು ಬಹಿರಂಗವಾಗುತ್ತಿತ್ತೇ? ಮತ್ತು ಪ್ರಗತಿಪರ ಸಮುದಾಯವಾಗಿ ನಾವು ಇಷ್ಟೇ ತೀವ್ರ ಬಹಿರಂಗ ಆಕ್ರೋಶದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದೆವೇ ?

4. ಜೆಡಿಎಸ್ ಹೆಸರಿನಲ್ಲೇ ಸೆಕ್ಯುಲರ್ ಎಂಬ ಹೆಸರಿರುವುದರಿಂದ ಜೆಡಿಎಸ್ ಪಕ್ಷವನ್ನು ಬಹಳ ಕಾಲ ಎಡ ಮತ್ತು ಜಾತ್ಯತೀತ ಐಕ್ಯರಂಗಗಳಲ್ಲಿ ಸೆಕ್ಯುಲರ್ ಕೋಟಾದಲ್ಲಿ ಪ್ರಮುಖ ಪಕ್ಷವಾಗಿ ಈ ದೇಶದ ಫ್ಯಾಶಿಸ್ಟ್ ವಿರೋಧಿ ರಾಜಕಾರಣ ಹಾಗೂ ಉದಾರವಾದಿ ಪಂಡಿತಗಣ ಪರಿಗಣಿಸುತ್ತಾ ಬಂದಿತ್ತು.

ಆದರೆ ಊಳಿಗಮಾನ್ಯ ದರ್ಪ, ಪುರುಷಾಧಿಪತ್ಯ, ಬಲಿಷ್ಠ ಜಾತಿ ಕೊಡುವ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಅಧಿಕಾರ ಇವುಗಳನ್ನು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಕೂಡಾ ಸೆಕ್ಯುಲರ್ ಆಗಿರಲು ಸಾಧ್ಯವೇ? ಸೆಕ್ಯುಲರ್ ಎಂದರೆ ಬಿಜೆಪಿಯ ಚುನಾವಣಾತ್ಮಕ ವಿರೋಧ ಮಾತ್ರವೇ? ಇಂತಹ ಬ್ರಾಹ್ಮಣೀಕರಣಗೊಳ್ಳುತ್ತಿರುವ ಬಲಿಷ್ಠ ಜಾತಿಗಳ ಪಕ್ಷ ಊಳಿಗಮಾನ್ಯ ಪಾಳೇಗಾರಿಕೆ ಮತ್ತು ಪುರುಷಾಧಿಪತ್ಯವನ್ನೇ ತತ್ವ ಪ್ರಣಾಳಿಕೆಯನ್ನಾಗಿಸಿಕೊಂಡಿರುವ ಬಿಜೆಪಿ ಮತ್ತು ಸಹಜ ಮಿತ್ರರಾಗುವುದು ಕಷ್ಟವೇನಲ್ಲ ಎಂಬುದು ಕರ್ನಾಟಕದಲ್ಲಿ ಎರಡು ಮೂರು ಬಾರಿ ರುಜುವಾತಾಗಿಲ್ಲವೇ? ಪ್ರಜಾತಾಂತ್ರಿಕವಾಗದೆ ಸೆಕ್ಯುಲರ್ ಆಗಲು ಸಾಧ್ಯವೇ? ಆ ಅರ್ಥದಲ್ಲಿ ಕಾಂಗ್ರೆಸ್ ಕೂಡಾ ಎಷ್ಟು ಸೆಕ್ಯುಲರ್ ಎಂಬ ಪ್ರಶ್ನೆಗಳು ಈಗಲಾದರೂ ಬರಬೇಕಲ್ಲವೇ?

ಶೂದ್ರ ಮೇಲ್ಚಲನೆ-ಗೇಟ್ ಕೀಪರ್‌ಗಳಲ್ಲ- ಸ್ಟೇಕ್ ಹೋಲ್ಡರುಗಳು

ಭಾರತದ ಸಾಮಾಜಿಕ ವಿದ್ಯಮಾನದಲ್ಲಿ ಬ್ರಾಹ್ಮಣ್ಯದಿಂದ ಅವಮಾನ ಹಾಗೂ ತಾರತಮ್ಯಗಳಿಗೆ ಪ್ರಧಾನವಾಗಿ ಗುರಿಯಾದವರು ದಲಿತರು. ನಂತರದ ಸ್ಥಾನದಲ್ಲಿ ಅಸ್ಪಶ್ಯರಲ್ಲದ ಶೂದ್ರ ಜಾತಿಗಳು.

ಆದರೆ ಇತಿಹಾಸದಲ್ಲಿ ಈ ಶೂದ್ರ ಜಾತಿಗಳ ಮೇಲ್‌ಸ್ತರಗಳಿಗೆ, ಭೂಮಿ ಒಡೆತನ ಮತ್ತು ಅದರಿಂದಾಗ ಶಿಕ್ಷಣ ಮತ್ತು ಅಧಿಕಾರಗಳು ಸಿಗುತ್ತಿದ್ದಂತೆ ಬ್ರಾಹ್ಮಣೀಕರಣಗೊಳ್ಳತೊಡಗಿದವು. ಬಲಿಷ್ಠ ಜಾತಿಗಳ ಬಡವರ ಬದುಕಿನಲ್ಲಿ ಯಾವ ವ್ಯತ್ಯಾಸಗಳು ಬರದಿದ್ದರೂ ಜಾತಿ ಪ್ರತಿಷ್ಠೆಯ ಸಾಂಕೇತಿಕ ಮೇಲರಿಮೆಯ ಶಿಕಾರಿಗಳಾದರು.

ಗ್ರಾಮೀಣ ಪ್ರದೇಶದಲ್ಲಿ ಭಾರತೀಯ ಫ್ಯಾಶಿಸಂನ ಸಾಧನವಾದ ಬ್ರಾಹ್ಮಣ್ಯದ ಪ್ರಧಾನ ವಾಹಕರು ಈ ಮೇಲ್ಚಲನೆಯುಳ್ಳ ಊಳಿಗಮಾನ್ಯ ಜಾತಿಗಳ ಬಲಿಷ್ಠರೇ ಆಗತೊಡಗಿದರು. ಹೀಗಾಗಿ 90ರ ನಂತರ ಹಿಂದುತ್ವದ ಮುಖವಾಡದ ಬ್ರಾಹ್ಮಣ್ಯದ ರಾಜಕಾರಣದಲ್ಲಿ ಈ ಮೇಲ್‌ಸ್ತರದ ಶೂದ್ರ ಜಾತಿಗಳು ಒಳಗೊಂಡರು. ಗೇಟ್ ಕೀಪರ್‌ಗಳಾಗಿ ಅಲ್ಲ. ಸ್ಟೇಕ್ ಹೋಲ್ಡರುಗಳಾಗಿ.

ಪ್ರಬಲಜಾತಿಗಳ ಮೇಲ್ ಸ್ತರದಲ್ಲಿ ಕಳೆದ ಮೂರು-ನಾಲ್ಕು ದಶಕಗಳಲ್ಲಿ ಈ ಬ್ರಾಹ್ಮಣಮುಖಿ ಚಲನೆ ನಡೆಯುತ್ತಿದೆ. ಈ ಶೂದ್ರ ಜಾತಿಗಳ ಮೇಲ್‌ಸ್ತರದ ಈ ಹಿಂದುತ್ವವಾದಿ, ಬಂಡಾವಾಳವಾದಿ, ಸಮಾಜವಾದಿ ವಿರೋಧಿ ಚಲನೆಯನ್ನು ಗುರುತಿಸದೆ ಹಳೆಯ ಮಾರ್ಕರ್‌ಗಳಲ್ಲಿ ಮಾತ್ರ ಈ ವಿದ್ಯಮಾನವನ್ನು ವ್ಯಾಖ್ಯಾನ ಮಾಡುವ ಒಂದು ಉದಾರವಾದಿ ಕುರುಡು ಪಂಡಿತ ವಲಯದಲ್ಲಿ ವ್ಯಾಪಕವಾಗಿದೆ. ಈ ಕುರುಡು ಕೂಡ ಫ್ಯಾಶಿಸ್ಟ್ ವಿರೋಧಿ ಹೋರಾಟ ಕಟ್ಟುವಲ್ಲಿ ಅಡ್ಡಿಯಾಗಬಹುದು.

ಏಕೆಂದರೆ ಬಿಜೆಪಿಗೆ ಪ್ರಬಲ ಶೂದ್ರ ಜಾತಿಗಳ ಮೇಲ್‌ಸ್ತರದಲ್ಲಿ ಸಿಗುತ್ತಿರುವ ಬೆಂಬಲ ಕೇವಲ ಚುನಾವಣಾತ್ಮಕವಾದುದಲ್ಲ. ಅದು ಸೈದ್ಧಾಂತಿಕ ಪುರುಷವಾದಿ, ಬ್ರಾಹ್ಮಣವಾದಿ -ದಲಿತ ವಿರೋಧಿ, ಪ್ರಜಾತಂತ್ರ ವಿರೋಧಿ ನೆಲೆಯದು. ಹೀಗಾಗಿ ಬಿಜೆಪಿಗಾಗಲೀ, ಜೆಡಿಎಸ್‌ಗಾಗಲೀ ಪ್ರಜ್ವಲ್‌ನ ಪ್ರಕರಣ ಹೆಚ್ಚೆಂದರೆ ಪುರುಷಾತಿರೇಕವೇ ವಿನಾ ಮಹಿಳಾ ಶೋಷಣೆಯಲ್ಲ. ಪಾಳೇಗಾರಿಕೆಯಲ್ಲ.ಆದ್ದರಿಂದ ಪ್ರಜ್ವಲ್‌ನ ಪ್ರಕರಣದಲ್ಲಿ ಸಾಮಾಜಿಕ ಪ್ರತಿರೋಧವು ಕೇವಲ ಅದರ ಅತಿರೇಕದಿಂದ ಮಾತ್ರ ಪ್ರೇರಿತಗೊಳ್ಳದೆ ಅದರ ಸಾಮಾಜಿಕ ಬೇರುಗಳನ್ನು ಕಿತ್ತುಹಾಕುವ ದಿಕ್ಕಿನಲ್ಲಿ ಸಾಗುವ ಅಗತ್ಯವಿದೆ. ಅದಾಗಬೇಕೆಂದರೆ ಪ್ರಬಲ ಜಾತಿಗಳ ಮೇಲ್‌ಸ್ತರದ ಈ ರಾಜಕೀಯ ಚಲನೆಯನ್ನು ಉದಾರವಾದಿ ಕುರುಡಿನಿಂದ ಹೊರಬಂದು ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಅಂತಹ ಒಂದು ಉದಾರವಾದಿ ಕುರುಡು ಹಾಗೂ ಭಾರತದ ಅಬ್ರಾಹ್ಮಣ ಆದರೆ ಬಲಿಷ್ಠ ಊಳಿಗಮಾನ್ಯ ಜಾತಿಗಳೊಳಗಿನ ಬ್ರಾಹ್ಮಣಮುಖಿ ಚಲನೆಯನ್ನು ನಿರಾಕರಿಸುವ ಧೋರಣೆಯೂ ಕರ್ನಾಟಕದ ಖ್ಯಾತ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಬರೆದಿರುವ ದೇವೇಗೌಡರ ಜೀವನ ಚರಿತ್ರೆ ‘Furrows In A Field- The Unexplored Life Of HD Devegowda’ಯಲ್ಲಿ ಎದ್ದುಕಾಣಿಸುತ್ತದೆ.

ಪ್ರಸಕ್ತ ‘ಸೆಕ್ಯುಲರ್’ ಸಂದರ್ಭದ ವಿಪರ್ಯಾಸಗಳನ್ನು ಹಾಗೂ ಅದನ್ನು ಗುರುತಿಸಲಾಗದ ಉದಾರವಾದಿ ಕುರುಡುಗಳನ್ನು ಅರ್ಥಮಾಡಿಕೊಳ್ಳಲು ದೇವೇಗೌಡರ ಬದುಕಿನ ಬಗ್ಗೆ ಸುಗತರ ಪುಸ್ತಕದ ವಿಮರ್ಶೆ ಸಹಾಯ ಮಾಡುತ್ತದೆಂದು ನನಗೆ ಅನಿಸುತ್ತದೆ. ಹೀಗಾಗಿ ಈ ಬಾರಿಯ ಅಂಕಣದಲ್ಲಿ ಅದರ ಸ್ಥೂಲ ತಾತ್ಪರ್ಯವನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

(ಈ ಪುಸ್ತಕದ ಬಗೆಗಿನ ನನ್ನ ವಿಮರ್ಶೆಯು ವರ್ಷದ ಕೆಳಗೆ ಪುಸ್ತಕ ವಿಮರ್ಶೆಗೆ ಮುಡಿಪಾಗಿರುವ ‘ಬಹುವಚನ’ ಮ್ಯಾಗಝಿನ್‌ನಲ್ಲಿ ಪ್ರಕಟಗೊಂಡಿತ್ತು.)

ನೇಗಿಲ ಗೆರೆಗಳು ಮೂಡಿಸುವ ಅಂತಿಮ ಚಿತ್ತಾರ

ದೇವೇಗೌಡರ ಬದುಕಿನ ಬಗ್ಗೆ ನಾಡಿನ ಪ್ರಖ್ಯಾತ ಹಾಗೂ ಹಿರಿಯ ಪತ್ರಕರ್ತ, ಮಾಧ್ಯಮ ಸಮೂಹಗಳ ಮಾಜಿ ಸಂಪಾದಕ ಸುಗತ ಶ್ರೀನಿವಾಸರಾಜು ಅವರು ಬರೆದಿರುವ ‘Furrows In A Field- The Unexplored Life Of HD Devegowda’ ಎಂಬ ಇಂಗ್ಲಿಷ್ ಪುಸ್ತಕವನ್ನು ಕನ್ನಡದ ಖ್ಯಾತ ಕವಯಿತ್ರಿ ಮತ್ತು ಹೆಸರಾಂತ ಅನುವಾದಕಿ ರೋಸಿ ಡಿ’ಸೋಜಾ ಅವರು: ಎಚ್.ಡಿ. ದೇವೇಗೌಡರ ಬದುಕು ಮತ್ತು ದುಡಿಮೆ-ನೇಗಿಲ ಗೆರೆಗಳು ಎಂಬ ಶೀರ್ಷಿಕೆಯಲ್ಲಿ ಅತ್ಯಂತ ಚಂದವಾಗಿ ಕನ್ನಡೀಕರಿಸಿದ್ದಾರೆ.

ಸುಗತ ಶ್ರೀನಿವಾಸರಾಜುರವರು ಈ ಕೃತಿಯಲ್ಲಿ ದೇವೇಗೌಡರ ಬದುಕಿನ ಕಥನದ ಜೊತೆಗೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇವೇಗೌಡರೆಂಬ ಒಂದು ವಿದ್ಯಮಾನ ಘಟಿಸಲು ಕಾರಣವಾದ ಸಂದರ್ಭದ ಕಥನವನ್ನು ಕೂಡ ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಅತ್ಯಂತ ಪರಿಶ್ರಮದಿಂದ ಮಾಡಿದ್ದಾರೆ.

ಹಾಸನದ ಹೊಳೆನರಸೀಪುರದ ಹರದನಹಳ್ಳಿ ಎಂಬ ಕುಗ್ರಾಮಕ್ಕೆ ಸೇರಿದ, ಭಾರತೀಯ ವರ್ಣಾಶ್ರಮ ವ್ಯವಸ್ಥೆಯಲ್ಲಿ ಕೆಳಹಂತದ ಶೂದ್ರ ವರ್ಣಕ್ಕೆ ಸೇರಿದ ಹಾಗೂ ಬಡತನದ ತುಂಬುಕುಟುಂಬದಲ್ಲಿ ಹುಟ್ಟಿದ, ಇಂಗ್ಲಿಷ್, ಜಾತಿ ಅಥವಾ ಹಣಕಾಸಿನ ಯಾವ ಬಲವೂ ಇಲ್ಲದ ದೇವೇಗೌಡ ಎಂಬ ಒಬ್ಬ ವ್ಯಕ್ತಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ತಾಲೂಕು ಪತ್ತಿನ ಸಹಕಾರ ಸಂಘದಿಂದ ರಾಜಕಾರಣವನ್ನು ಪ್ರಾರಂಭಿಸಿ ಹಂತಹಂತವಾಗಿ ಮೇಲೇರುತ್ತಾ ಸೋಲು-ಗೆಲುವು, ರಾಜಕೀಯದ ತಂತ್ರ-ಕುತಂತ್ರಗಳಿಗೆ ಬಲಿಯಾಗುತ್ತಾ , ಪ್ರತಿತಂತ್ರ ರೂಪಿಸಿ ಮೇಲೇರುತ್ತಾ ಅತ್ಯುನ್ನತವಾದ ಪ್ರಧಾನಿ ಗದ್ದುಗೆಯನ್ನು ಮುಟ್ಟಿದ ಕಥನವನ್ನು ಈ ಕೃತಿಯಲ್ಲಿ ಸುಗತ ಕಟ್ಟಿಕೊಡುತ್ತಾರೆ ಮತ್ತು ಅದು ದೇವೇಗೌಡರನ್ನು ಉದಾಹರಣೆಯನ್ನಾಗಿರಿಸಿಕೊಂಡು ಭಾರತದ ಪ್ರಜಾತಂತ್ರವು ಎದುರಿಸುತ್ತಿರುವ ಏಳು-ಬೀಳುಗಳನ್ನು ಹೇಳುವ ಕಥನವೂ ಆಗಿದೆ. ಏಕೆಂದರೆ ಈ ಕಥನವು ಎಷ್ಟು ವ್ಯಕ್ತಿ ಕೇಂದ್ರಿತ ಕಥನವೋ ಅಷ್ಟೇ ಸಂದರ್ಭದ ಕಥನವೂ ಆಗಿದೆ. ಹಾಗೆ ಆಗುವಂತೆ ಲೇಖಕರು ಪ್ರಜ್ಞಾಪೂರ್ವಕವಾಗಿ ಶ್ರಮಿಸಿದ್ದಾರೆ.

ಈ ಕೃತಿಗಾಗಿ ಸುಗತ ಅವರು ದೇವೇಗೌಡರ ಜೊತೆ ಹಲವಾರು ದಿನಗಳ ಕಾಲ ಸುದೀರ್ಘ ಮಾತುಕತೆಯಲ್ಲಿ ತೊಡಗಿಕೊಂಡಿದ್ದು ಮಾತ್ರವಲ್ಲದೆ, ಅವರ ರಾಜಕೀಯ ಜೀವನದಲ್ಲಿ ಬೇರೆಬೇರೆ ಹಂತಗಳಲ್ಲಿ ಜೊತೆಗಿದ್ದ ರಾಜಕೀಯ ಮತ್ತು ವೈಯಕ್ತಿಕ ಸ್ನೇಹಿತರು, ಅವರು ರಾಜ್ಯದಲ್ಲಿ ಮಂತ್ರಿ ಮತ್ತು ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಪ್ರಧಾನಿಯಾಗಿದ್ದಾಗ ಅವರ ಜೊತೆಗೆ ಕೆಲಸ ಮಾಡಿದ ಹಲವಾರು ಉನ್ನತಾಧಿಕಾರಿಗಳನ್ನು ಒಳಗೊಂಡಂತೆ 83 ಜನರ ಸುದೀರ್ಘ ಸಂದರ್ಶನ ಮಾಡಿದ್ದಾರೆ. ಹಾಗೆಯೇ ದೇವೇಗೌಡರ ಬಗ್ಗೆ ಮತ್ತು ಅವರ ಕಾಲದ ಬಗ್ಗೆ ಉಲ್ಲೇಖವಿರುವ ಹಲವಾರು ಸಮಕಾಲೀನರ ಬರಹಗಳನ್ನು, ವರದಿಗಳನ್ನು ಪರಾಂಬರಿಸಿದ್ದಾರೆ. ದೇವೇಗೌಡರು 1962ರಲ್ಲಿ ಮೊದಲ ಬಾರಿಗೆ ಸ್ವತಂತ್ರ ಉಮೇದುವಾರರಾಗಿ ಶಾಸನಸಭಾ ಸದಸ್ಯರಾಗಿ ಆಯ್ಕೆಯಾದ ಮೇಲೆ ಮಾಡಿದ ಮೊದಲ ಭಾಷಣದಿಂದ ಹಿಡಿದು, 1972-78ರವರೆಗೆ ಅವರು ವಿರೋಧ ಪಕ್ಷದ ನಾಯಕರಾಗಿ ವಿಧಾನ ಸಭೆಯಲ್ಲಿ ಮಾಡಿದ ಭಾಷಣಗಳು, ಎತ್ತಿದ ಪ್ರಶ್ನೆಗಳು, 1992ರಲ್ಲಿ ಅವರು ಮೊದಲ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾದಾಗ ಮಾಡಿದ ಭಾಷಣದಿಂದ ಹಿಡಿದು, 96-97ರ ನಡುವೆ 10 ತಿಂಗಳ ಕಾಲ ಪ್ರಧಾನಿಯಾಗಿದ್ದಾಗ ಸಂಸತ್ತಿನಲ್ಲಿ ಮತ್ತು ದೇಶ-ವಿದೇಶಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಮಾಡಿದ ಭಾಷಣಗಳು, 1997ರಲ್ಲಿ ಪ್ರಧಾನಿಯಾಗಿ ರಾಜೀನಾಮೆ ನೀಡಿದ ನಂತರ ಸಂಸತ್ ಸದಸ್ಯರಾಗಿ ಅವರು ಈವರೆಗೆ ಸಂಸತ್ತಿನಲ್ಲಿ ವಿವಿಧ ವಿಷಯಗಳಲ್ಲಿ ಮಾಡುತ್ತಲೇ ಬಂದಿರುವ ಮಧ್ಯಪ್ರವೇಶಗಳ ಕಡತಗಳನ್ನು ಸುಗತ ಅವರು ಅಧ್ಯಯನ ಮಾಡಿದ್ದಾರೆ ಮತ್ತು ಅವನ್ನು ತಮ್ಮ ಬರಹಕ್ಕೆ ಸಮರ್ಥನೆಯಾಗಿ ವಿಪುಲವಾಗಿ ಉಲ್ಲೇಖಿಸುತ್ತಾರೆ.

ಇದರ ಜೊತೆಗೆ ಅವರು 1969ರಲ್ಲಿ ಇಂದಿರಾ ಕಾಂಗ್ರೆಸ್‌ಗೆ ವಿರುದ್ಧವಾದ ಸಂಸ್ಥಾ ಕಾಂಗ್ರೆಸನ್ನು ಸೇರಿದಾಗ, ನಂತರ 1977ರಲ್ಲಿ ಜನತಾ ಪಕ್ಷವಾದ ಮೇಲೆ ಅದರ ರಾಜ್ಯ ಅಧ್ಯಕ್ಷರಾಗಿ, ಆನಂತರ ಜನತಾ ದಳದ ಮುಖ್ಯಸ್ಥರಾಗಿ ರಾಷ್ಟ್ರೀಯ ನಾಯಕರುಗಳಾದ ಮೊರಾರ್ಜಿ ದೇಸಾಯಿ, ಚಂದ್ರಶೇಖರ್ ಇನ್ನಿತರರ ಜೊತೆ ನಡೆಸಿದ ನಿರಂತರ ಪತ್ರ ಸಂವಾದಗಳ ಸಹಾಯವನ್ನು ಸುಗತ ತೆಗೆದುಕೊಂಡಿದ್ದಾರೆ. ಒಮ್ಮೊಮ್ಮೆ ಅನಗತ್ಯ, ಅತಿ ದೀರ್ಘ ಎನಿಸಿದರೂ ಇದರಿಂದ ಈ ಬಯಾಗ್ರಫಿಗೆ ವಿಶಾಲವಾದ ಭಿತ್ತಿ ಮತ್ತು ಒಂದು ಅಧಿಕೃತತೆ ಬಂದೊದಗಿದೆ. ಇವೆಲ್ಲವನ್ನು ಆಧರಿಸಿ ಲೇಖಕರು ತಾವು ಕಂಡುಕೊಂಡ ದೇವೇಗೌಡರನ್ನು ಓದುಗರಿಗೆ ಪದರ, ಪದರವಾಗಿ ಪರಿಚಯಿಸುತ್ತಾ ಹೋಗುತ್ತಾರೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ಶಿವಸುಂದರ್

contributor

Similar News