ಮೋದಿ ಸರಕಾರದ ಮಹಾ ದ್ರೋಹಕ್ಕೆ ಪಾಠ ಕಲಿಸುವುದೇ ಕರ್ನಾಟಕ?
ಭಾಗ- 2
ಕರ್ನಾಟಕಕ್ಕೆ ಮೋದಿ ಸರಕಾರ ಮಾಡುತ್ತಿರುವ ವಂಚನೆಯ ಲೆಕ್ಕಾಚಾರ
ಈಗ ಈ ಎಲ್ಲಾ ಕಾರಣಗಳಿಂದ ಮೋದಿ ಸರಕಾರ ಕರ್ನಾಟಕಕ್ಕೆ ಮಾಡುತ್ತಿರುವ ಹಣಕಾಸು ವಂಚನೆಯ ಲೆಕ್ಕಾಚಾರ ಮಾಡೊಣ.
15ನೇ ಹಣಕಾಸು ಆಯೋಗದ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ಕೇಂದ್ರೀಯ ತೆರಿಗೆಯ ಪ್ರಮಾಣ ರೂ. 135 ಲಕ್ಷ ಕೋಟಿಗಳಾಗಲಿವೆ. ಅದರಲ್ಲಿ ಮೋದಿ ಸರಕಾರವೇ ಹೇಳುವಂತೆ ಶೇ.41ರಷ್ಟು ರಾಜ್ಯಗಳ ಪಾಲಾಗಿದ್ದರೆ ರಾಜ್ಯಗಳಿಗೆ ಮುಂದಿನ ಐದು ವರ್ಷಗಳಲ್ಲಿ ಮೋದಿ ಸರಕಾರ 55 ಲಕ್ಷ ಕೋಟಿ ರೂ.ಗಳನ್ನು ವರ್ಗಾಯಿಸಬೇಕಿತ್ತು.
ಅದರಲ್ಲಿ ಕರ್ನಾಟಕದ ಪಾಲು ಶೇ.4.71 ಅಗಿಯೇ ಉಳಿದಿದ್ದರೆ ಕರ್ನಾಟಕಕ್ಕೆ ಮುಂದಿನ ಐದು ವರ್ಷಗಳಲ್ಲಿ ರೂ. 2.6 ಲಕ್ಷ ಕೋಟಿಗಳು ಸಿಗಬೇಕಿತ್ತು. ಅಂದರೆ ಕೇಂದ್ರವು ಕರ್ನಾಟಕಕ್ಕೆ ವರ್ಷಕ್ಕೆ 51,000 ಕೋಟಿ ರೂ.ಗಳನ್ನು ವರ್ಗಾಯಿಸಬೇಕಿತ್ತು.
ಆದರೆ ಈಗ ರಾಜ್ಯ ಸಭೆಯಲ್ಲಿ ಕೇಂದ್ರವೇ ಒಪ್ಪಿಕೊಂಡಂತೆ ಕೇಂದ್ರದ ತೆರಿಗೆಯಲ್ಲಿ ಸೆಸ್ ಅಂದರೆ ರಾಜ್ಯಗಳು ಹಂಚಿಕೊಳ್ಳದ ಪಾಲು ಶೇ. 28.1. ಆದ್ದರಿಂದ ಕೇಂದ್ರವು ರಾಜ್ಯಗಳ ಜೊತೆ ಹಂಚಿಕೊಳ್ಳುವುದು ರೂ. 55 ಲಕ್ಷ ಕೋಟಿಗಳನ್ನಲ್ಲ. ಬದಲಿಗೆ ಕೇವಲ ಶೇ. 39.1 ಲಕ್ಷ ಕೋಟಿ ರೂ.ಗಳನ್ನು ಮಾತ್ರ.
ಅಂದರೆ ಕರ್ನಾಟಕದಂತಹ ರಾಜ್ಯಗಳಿಗೆ ಮೋದಿ ಸರಕಾರ ಮುಂದಿನ ಐದು ವರ್ಷಗಳಲ್ಲಿ 55-39.1=15 ಲಕ್ಷ ಕೋಟಿಗಳಷ್ಟು ಪಂಗನಾಮ ಹಾಕುತ್ತಿದೆ.
ಅದರಲ್ಲಿ ಕರ್ನಾಟಕದ ಪಾಲು ಶೇ. 4.71ರಿಂದ 3.64ಕ್ಕೆ ಇಳಿದಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ದಕ್ಕುವುದು ಕೇವಲ ರೂ. 1.42 ಲಕ್ಷ ಕೋಟಿಗಳು ಮಾತ್ರ.
ಅಂದರೆ ವರ್ಷಕ್ಕೆ ಕೇವಲ ರೂ. 28,000 ಕೋಟಿಗಳು ಮಾತ್ರ.
ಸೆಸ್ ದ್ರೋಹ ಮತ್ತು ಹಣಕಾಸು ಆಯೋಗದ ವಂಚನೆ ಇಲ್ಲದಿದ್ದರೆ ಕೇಂದ್ರದ ತೆರಿಗೆಯಲ್ಲಿ ಕರ್ನಾಟಕಕ್ಕೆ ಪ್ರತಿವರ್ಷ ರೂ. 51,000 ಕೋಟಿ ಸಿಗಬೇಕಿತ್ತು. ಈಗ ಸಿಗುತ್ತಿರುವುದು ಕೇವಲ ರೂ. 28,000 ಕೋಟಿ.
ಅಂದರೆ ಪ್ರತಿವರ್ಷ ನಿವ್ವಳ 51,000-28,000=23,000 ಕೋಟಿ ವಂಚನೆ. ಹಗಲು ದರೋಡೆ.
ಇದು ಮೋದಿ ಸರಕಾರ ಕರ್ನಾಟಕಕ್ಕೇ ಮಾಡುತ್ತಿರುವ ವಂಚನೆ. ಇದಲ್ಲದೆ ಕೊಡಬೇಕಿರುವುದನ್ನು ಕೊಡದೆ ಸತಾಯಿಸುವುದು ಮತ್ತೊಂದು ರೀತಿಯ ಕಿರುಕುಳ.
ಕಾಂಗ್ರೆಸ್ ಬದಲಿಸಿಕೊಳ್ಳುವುದೇ ನೀತಿ?
ಹಾಗೆಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ರೆಕಾರ್ಡ್ ಕೂಡ ಅನುಕರಣೀಯವೇನೂ ಆಗಿರಲಿಲ್ಲ.
ಉದಾಹರಣೆಗೆ ಮೋದಿ ಸರಕಾರ ಕೇಂದ್ರದ ತೆರಿಗೆಗಳಲ್ಲಿ ಶೇ. 42ರಷ್ಟು ರಾಜ್ಯಗಳಿಗೆ ಹಂಚಲಾಗುವುದು ಎಂದು ಸುಳ್ಳು ಭರವಸೆಯನ್ನು ಕೊಟ್ಟು ಸರಾಸರಿ ಶೇ. 35 ಕೊಡುತ್ತಿದೆ. ಕೆಲವು ವರ್ಷ ಅದು ಶೇ. 29ಕ್ಕಿಳಿದಿದೆ.
ಆದರೆ ಯುಪಿಎ ಸರಕಾರದ ಕಾಲದಲ್ಲೂ ರಾಜ್ಯಗಳ ಪಾಲು ಶೇ. 32ಕ್ಕಿಂತ ಹೆಚ್ಚಾಗಿರಲೇ ಇಲ್ಲ.
ಸೆಸ್ ಮತ್ತು ಸರ್ಚಾರ್ಜ್‌ಗಳಲ್ಲಿ ರಾಜ್ಯಗಳಿಗೆ ಪಾಲಿಲ್ಲ ಎಂಬ ಫೆಡರಲ್‌ವಿರೋಧಿ ಸಂವಿಧಾನ ತಿದ್ದುಪಡಿ ವಾಜಪೇಯಿ ಕಾಲದಲ್ಲಿ ಆಗಿತ್ತು. ಆದರೆ 2004-14ರ ಅವಧಿಯಲ್ಲಿ ಯುಪಿಎ ಸರಕಾರವೇ ಅಧಿಕಾರದಲ್ಲಿದ್ದರೂ ಈ ಅನ್ಯಾಯಯುತ ಫೆಡರಲ್ ವಿರೋಧಿ ಕಾನೂನನ್ನು ಬದಲಾಯಿಸಲಿಲ್ಲ. ಇದರ ನಡುವೆಯೂ ಕೇರಳ ಸರಕಾರ ಪ್ರವಾಹ ಪರಿಹಾರಕ್ಕೆ ಸೆಸ್ ಹಾಕಿತ್ತು.
ಇದೇ ರೀತಿ ಒಡಿಶಾ ಸರಕಾರ ಹಾಕಿದ್ದ ಸೆಸ್ ಬಗ್ಗೆ ಪ್ರಕರಣವೊಂದು ಮುಂದುವರಿದು...ರಾಜ್ಯಗಳಿಗೆ ಸೆಸ್ ಹಾಕುವ ಅಧಿಕಾರವಿದೆಯೇ ಎಂಬ ವಿಷಯ ಈಗ ಸುಪ್ರೀಂ ಕೋರ್ಟ್‌ನ ಒಂಭತ್ತು ಸದಸ್ಯರ ಪೀಠದ ಮುಂದಿದೆ.
ಹೀಗೆ ಒಟ್ಟಾರೆಯಾಗಿ ಮೋದಿ ಸರಕಾರ ಕರ್ನಾಟಕದ ಮೇಲೆ ದ್ವೇಷ ಸಾಧಿಸುತ್ತಿದೆ. ಪರಮ ಅನ್ಯಾಯ ಮತ್ತು ತಾರತಮ್ಯ ಮಾಡುತ್ತಿದೆ.
ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕ ಮೋದಿಯ ಬಿಜೆಪಿಗೆ ವೋಟು ಹಾಕಿದರೆ ಮಹಾ ಆತ್ಮವಂಚನೆಯೇ ಆದೀತು. ಹೀಗಾಗಿ ಕರ್ನಾಟಕ ತನಗಾಗುತ್ತಿರುವ ದ್ರೋಹವನ್ನು ತಡೆಗಟ್ಟಬೇಕೆಂದರೆ ಬಿಜೆಪಿಯನ್ನು ಸೋಲಿಸುವುದು ಮೊದಲ ಹೆಜ್ಜೆ.
ಅದನ್ನು ಕರ್ನಾಟಕ ಮಾಡಲೇ ಬೇಕು.
ಆದರೆ ಅಷ್ಟರಿಂದಲೇ ಕರ್ನಾಟಕಕ್ಕೆ ಆಗುವ ಅನ್ಯಾಯ ನಿಲದ್ಲುವುದಿಲ್ಲ. ಒಂದು ವೇಳೆ ಮುಂದೆಯೂ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬಂದರೂ ಅಥವಾ ಬೇರೆ ಸರಕಾರ ಸರಕಾರ ಅಧಿಕಾರಕ್ಕೆ ಬಂದರೂ ಈ ಕೆಳಗಿನ ಆಗ್ರಹಗಳನ್ನು ಮುಂದಿಟ್ಟುಕೊಂಡು ಜನಾಂದೋಲವನ್ನು ಕಟ್ಟಲೇ ಬೇಕು:
ಕರ್ನಾಟಕ ಜನತೆಯ ಆಗ್ರಹಗಳು ಇವಾಗಬೇಕು
-ಶೇ. 67ರಷ್ಟು ವೆಚ್ಚಗಳ ಜವಾಬ್ದಾರಿ ಹೊಂದಿರುವ ರಾಜ್ಯಗಳಿಗೆ ಶೇ. 67ರಷ್ಟು ತೆರಿಗೆ ಪಾಲು ಸಿಗಬೇಕು.
-ಸೆಸ್ ಹಾಕುವ ಅಧಿಕಾರ ರಾಜ್ಯ ಸರಕಾರಗಳಿಗೂ ನೀಡುವಂತೆ ಕಾನೂನು ತಿದ್ದುಪಡಿ ಮಾಡಬೇಕು.
- ಕೇವಲ ಐಷಾರಾಮಿ ಹಾಗೂ ವಿಲಾಸಿ ಸರಕು ಮತ್ತು ಸೇವೆಗಳ ಮೇಲೆ ಮಾತ್ರ ಸೆಸ್ ಹಾಕುವಂತೆ ಕಾನೂನು ತಿದ್ದುಪಡಿ ತರಬೇಕು.
- ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಬೆಲೆ ಹಣದುಬ್ಬರಕಾರಕ ಸರಕುಗಳ ಮೇಲೆ ಸೆಸ್ ಮತ್ತು ಸರ್ಚಾರ್ಜ್ ನಿಲ್ಲಿಸಬೇಕು.
-ರಾಜ್ಯಗಳಿಗೂ ಕಾರ್ಪೊರೇಟ್ ತೆರಿಗೆ ವಿಧಿಸುವ ಅಧಿಕಾರ ಒದಗಬೇಕು
- ಕೇಂದ್ರದ ಡಿವಿಸಬಲ್ ಪೂಲ್‌ನ ರಾಜ್ಯವಾರು ತೆರಿಗೆ ಹಂಚಿಕೆಯ ಸೂತ್ರವನ್ನು ಕೇಂದ್ರದ ಕ್ಯಾಬಿನೆಟ್ ತೀರ್ಮಾನ ಮಾಡದೆ ರಾಜ್ಯ ಸರಕಾರಗಳ ಸಮಾಲೋಚನೆಯೊಂದಿಗೆ ನಿಗದಿಯಾಗಬೇಕು.
- ಜಿಎಸ್‌ಟಿ ವ್ಯವಸ್ಥೆ ಮಾರ್ಪಾಡಾಗಬೇಕು.
-ದೇಶದ ಒಟ್ಟಾರೆ ತೆರಿಗೆ ಆದಾಯದಲ್ಲಿ ಜಿಎಸ್‌ಟಿ ಪಾಲು ಕಡಿಮೆಯಾಗುತ್ತಾ ಅತಿ ಶ್ರೀಮಂತ, ಶ್ರೀಮಂತ, ಮೇಲ್ಮಧ್ಯಮ ವರ್ಗಗಳ ಮೇಲೆ ವಿಧಿಸುವ ತೆರಿಗೆ ಆದಾಯಗಳು ಹೆಚ್ಚಾಗಬೇಕು.
ಮೋದಿ ನೇತೃತ್ವದ ಬಿಜೆಪಿ ಸರಕಾರದ ದರೋಡೆಯನ್ನು ವಿರೋಧಿಸುತ್ತಲೇ, ಕಾಂಗ್ರೆಸ್ ಆಗಲಿ ಅಥವಾ ಇತರ ವಿರೋಧ ಪಕ್ಷಗಳಾಗಲೀ ಈ ಮೇಲಿನ ಆಗ್ರಹಗಳನ್ನು ಒಪ್ಪಿಕೊಳ್ಳುವಂತೆ ಮಾಡಿದರೆ ಮಾತ್ರ ಕರ್ನಾಟಕಕ್ಕೇ ನ್ಯಾಯ ಸಿಗುತ್ತದೆ. ಅಲ್ಲವೇ?