ನಮ್ಮ ಕ್ರಿಕೆಟ್ ಸಾಧಕರಿಗೆ ಸಲ್ಲಬೇಕಿರುವ ಗೌರವ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕರ್ನಾಟಕದ ಹಿಂದಿನ ಶ್ರೇಷ್ಠ ಕ್ರಿಕೆಟಿಗರನ್ನು ಗೌರವಿಸಲು ಇನ್ನೂ ಸ್ಥಳ ಒದಗಿಲ್ಲ ಎಂಬುದು ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ತಪ್ಪಿತಸ್ಥ ಭಾವನೆಯನ್ನು ಮೂಡಿಸುತ್ತದೆ. ಬಹುಶಃ ಕೆಎಸ್‌ಸಿಎ ಈ ಅನ್ಯಾಯದ ಬಗ್ಗೆ ಎಚ್ಚೆತ್ತುಕೊಂಡು ತಡವಾಗಿಯಾದರೂ ಸರಿಪಡಿಸಬಹುದು. ಅಕ್ಟೋಬರ್ 20ರಂದು ಬೆಂಗಳೂರಿನಲ್ಲಿ ನಡೆಯಲಿರುವ ಐದು ವಿಶ್ವಕಪ್ ಪಂದ್ಯಗಳಲ್ಲಿ ಮೊದಲನೆಯ ಪಂದ್ಯದ ವೇಳೆ ಚಂದ್ರು, ಪ್ರಾಸ್, ಶಾಂತಾ ಮತ್ತು ವಿಶಿ ಹೆಸರಿನ ಸ್ಟ್ಯಾಂಡ್‌ಗಳನ್ನು ಅನಾವರಣಗೊಳಿಸಬಹುದು.

Update: 2023-09-23 06:55 GMT

ನಾನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕ್ರಿಕೆಟ್ ಪಂದ್ಯಕ್ಕೆ ಮೊದಲ ಸಲ ಹೋದದ್ದು ಮಾರ್ಚ್ 1974ರಲ್ಲಿ, ನನ್ನ ಹದಿನಾರನೇ ಹುಟ್ಟುಹಬ್ಬಕ್ಕೂ ಸ್ವಲ್ಪ ಮುಂಚೆ. ಆನಂತರ ಕ್ಲಬ್‌ಗಳು, ರಾಜ್ಯಗಳು ಮತ್ತು ದೇಶಗಳ ನಡುವಿನ ಲೆಕ್ಕವಿಲ್ಲ ದಷ್ಟು ಪಂದ್ಯಗಳನ್ನು ನಾನು ಅಲ್ಲಿ ವೀಕ್ಷಿಸಿದ್ದೇನೆ. ಇದು ದೇಶದಲ್ಲೇ ಅತ್ಯಂತ ಸುಂದರವಾದ ಅಥವಾ ಸುಸಜ್ಜಿತವಾದ ಕ್ರೀಡಾಂಗಣವಾಗಿರದೆ ಇರಬಹುದು; ಆದರೆ ಇದು ನಾನು ಕ್ರಿಕೆಟ್ ವೀಕ್ಷಿಸಲು ಹೆಚ್ಚು ಇಷ್ಟಪಡುವ ಸ್ಥಳವಾಗಿದೆ. ಏಕೆಂದರೆ ನಾನು ಕರ್ನಾಟಕ ರಣಜಿ ಟ್ರೋಫಿ ತಂಡದ ಆಜೀವ ಅಭಿಮಾನಿ. ಅಲ್ಲದೆ ಇದು ಅದರ (ಮತ್ತು ನನ್ನ) ತವರು ಮೈದಾನವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣ ನನ್ನ ಮನೆಯಿಂದ ಕೇವಲ ಹದಿನೈದು ನಿಮಿಷಗಳಷ್ಟು ನಡಿಗೆಯ ದೂರದಲ್ಲಿದೆ. ಮಾತ್ರವಲ್ಲ, ಬಹಳ ಹಿಂದಿನಿಂದಲೂ ನನ್ನ ಮನಸ್ಸನ್ನು ಆವರಿಸಿಕೊಂಡಿರುವ ನನ್ನ ನೆಚ್ಚಿನ ಉದ್ಯಾನವನದಿಂದ ಮತ್ತು ನನ್ನ ನೆಚ್ಚಿನ ಕೆಫೆಯಿಂದ ಕ್ರಿಕೆಟ್ ಬಾಲ್ ಎಸೆಯುವ ಖುಷಿಯನ್ನು ಇದು ಇನ್ನಷ್ಟು ಹೆಚ್ಚಿಸುತ್ತದೆ.

ಕ್ರೀಡಾಂಗಣಕ್ಕೆ ಅದನ್ನು ನಿರ್ಮಿಸಲು ಕಾರಣಕರ್ತರಾದ ವ್ಯಕ್ತಿಯ ಹೆಸರನ್ನೇ ಇಡಲಾಗಿದೆ. ವೃತ್ತಿಯಲ್ಲಿ ವಕೀಲರಾಗಿದ್ದ ಎಂ. ಚಿನ್ನಸ್ವಾಮಿ ಒಬ್ಬ ವಿಶಿಷ್ಟ ಬಗೆಯ ಕ್ರಿಕೆಟ್ ನಿರ್ವಾಹಕರಾಗಿದ್ದರು. ಅದೇನೆಂದರೆ, ಅವರು ಭ್ರಷ್ಟಾಚಾರ ಅಥವಾ ಕ್ರೋನಿಸಂನಂಥ ಕಳಂಕ ಅಂಟಿಸಿಕೊಂಡವರಾಗಿರಲಿಲ್ಲ. ಅವರು ಕ್ರಿಕೆಟ್ ಆಟಕ್ಕೆ ಮತ್ತು ವಿಶೇಷವಾಗಿ ಕರ್ನಾಟಕ ಕ್ರಿಕೆಟ್‌ಗಾಗಿ ಸಂಪೂರ್ಣ ತೊಡಗಿಸಿಕೊಂಡಿದ್ದರು.

1960ರ ದಶಕದ ಆರಂಭದಿಂದಲೂ, ಆಗ ಮೈಸೂರು ಎಂದು ಕರೆಯಲ್ಪಡುತ್ತಿದ್ದ ಕರ್ನಾಟಕ, ಭಾರತೀಯ ತಂಡಕ್ಕೆ ಕ್ರಿಕೆಟಿಗರ ದಂಡನ್ನು ನಿರಂತರವಾಗಿ ಕಳುಹಿಸಲು ಪ್ರಾರಂಭಿಸಿತ್ತು. ಹಾಗಿದ್ದರೂ, ತಮಿಳುನಾಡು, ಬಾಂಬೆ, ದಿಲ್ಲಿ ಮತ್ತು ಪಶ್ಚಿಮ ಬಂಗಾಳದಂತಹ ಇತರ ಬಲಿಷ್ಠ ರಣಜಿ ತಂಡಗಳಿಗಿಂತ ಭಿನ್ನವಾಗಿ, ರಾಜ್ಯದ ತಂಡವು ತನ್ನದೇ ಆದ ಮೈದಾನವನ್ನು ಹೊಂದಿರಲಿಲ್ಲ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ತನ್ನ ತವರು ಪಂದ್ಯಗಳನ್ನು ಆಡುತ್ತಿತ್ತು. ಈ ಕೊರತೆ ತುಂಬಲು ಚಿನ್ನಸ್ವಾಮಿ ಏಕಾಂಗಿಯಾಗಿ ಮುಂದಾದರು. ನಗರದ ಹೃದಯಭಾಗದಲ್ಲಿ (ಹಿಂದೆ ಖಾಲಿಯಿದ್ದ, ಆದರೆ ತಾಂತ್ರಿಕವಾಗಿ ಸೇನೆಯ ನಿಯಂತ್ರಣದಲ್ಲಿದ್ದ) ಒಂದು ತುಂಡು ಭೂಮಿಯನ್ನು ದೀರ್ಘಾವಧಿ ಗುತ್ತಿಗೆಗೆ ನೀಡುವಂತೆ ಅವರು ಸರಕಾರವನ್ನು ಒಪ್ಪಿಸಿದರು. ಆಗ ಇನ್ನೂ ಮೈಸೂರು ರಾಜ್ಯ ಕ್ರಿಕೆಟ್ ಸಂಸ್ಥೆ ಎಂದೇ ಇತ್ತು ಮತ್ತು ಅವರು ಕಾರ್ಯದರ್ಶಿಯಾಗಿದ್ದರು. ಗುತ್ತಿಗೆಗೆ ಸಂಬಂಧಿಸಿದ ದಾಖಲೆಗಳ ಕೆಲಸ ಪೂರ್ಣಗೊಂಡಿತು. ವಾಸ್ತುತಜ್ಞರು ಮತ್ತು ಗುತ್ತಿಗೆದಾರರನ್ನು ನೇಮಿಸಿಕೊಂಡ ಬಳಿಕ ಅಸೋಸಿಯೇಷನ್ ಕಾರ್ಯದರ್ಶಿಯ ಮೇಲ್ವಿಚಾರಣೆಯಲ್ಲಿ ಕೆಲಸ ನಡೆಯಿತು. ಅವರ ಕಾರಣದಿಂದಾಗಿ ಯಾವುದೇ ಲಂಚದ ವ್ಯವಹಾರದ ಪ್ರಶ್ನೆಯೇ ಬರಲಿಲ್ಲ.

ಗುಜರಾತ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್‌ನ ತವರು ಮೈದಾನವು ನರೇಂದ್ರ ಮೋದಿಯವರ ಹೆಸರನ್ನು ಹೊತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇನ್ನೊಂದೆಡೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ತವರು ಮೈದಾನಕ್ಕೆ ಎಂ.ಚಿನ್ನಸ್ವಾಮಿ ಹೆಸರಿರುವುದು ಅಷ್ಟೇ ಸೂಕ್ತವೆನ್ನಿಸಿದೆ. ಆದರೆ, ಮೈದಾನದ ವಿವಿಧ ಸ್ಟ್ಯಾಂಡ್‌ಗಳಿಗೆ ರಾಜ್ಯದ ಶ್ರೇಷ್ಠ ಕ್ರಿಕೆಟಿಗರ ಹೆಸರನ್ನು ಇನ್ನೂ ಇಡದಿರುವುದು ಅಚ್ಚರಿಯ ಜೊತೆಗೆ ನಿರಾಸೆಯನ್ನೂ ತಂದಿದೆ. ಬಾಂಬೆಯ ವಾಂಖೆಡೆ ಸ್ಟೇಡಿಯಂ ಸಚಿನ್ ತೆಂಡುಲ್ಕರ್, ಸುನಿಲ್ ಗವಾಸ್ಕರ್, ವಿಜಯ್ ಮರ್ಚೆಂಟ್ ಮತ್ತು ವಿನೂ ಮಂಕಡ್ ಮತ್ತಿತರರ ಹೆಸರನ್ನು ಹೊಂದಿದೆ. ದಿಲ್ಲಿಯ ಫಿರೋಝ್‌ಶಾ ಕೋಟ್ಲಾ ಮೈದಾನಕ್ಕೆ ಇತ್ತೀಚೆಗೆ (ಮತ್ತು ವಿಷಾದನೀಯ ಎಂಬಂತೆ) ಒಬ್ಬ ರಾಜಕಾರಣಿಯ ಹೆಸರನ್ನು ಇಡಲಾಗಿದೆ; ಆದರೆ ಕನಿಷ್ಠ ಪಕ್ಷ ಬಿಷನ್ ಬೇಡಿ, ಮೊಹಿಂದರ್ ಅಮರನಾಥ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಕೆಲಸಗಳನ್ನು ಸೂಕ್ತವಾಗಿಯೇ ಗೌರವಿಸುತ್ತದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯದ ಕ್ರಿಕೆಟ್ ಮೈದಾನಗಳು ಅಂತೆಯೇ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಶೇನ್ ವಾರ್ನ್, ಅಡಿಲೇಡ್ ಓವಲ್‌ನಲ್ಲಿ ಕ್ಲಾರಿ ಗ್ರಿಮ್ಮೆಟ್, ಲಾರ್ಡ್ಸ್‌ನಲ್ಲಿ ಡೆನ್ನಿಸ್ ಕಾಂಪ್ಟನ್ ಮತ್ತು ಬಿಲ್ ಎಡ್ರಿಚ್, ಓವಲ್‌ನಲ್ಲಿ ಜ್ಯಾಕ್ ಹಾಬ್ಸ್‌ರಂತಹ ಖ್ಯಾತ ಕ್ರಿಕೆಟಿಗರ ಹೆಸರನ್ನು ಹೊಂದಿರುವ ಸ್ಟ್ಯಾಂಡ್‌ಗಳು ಮತ್ತು ದ್ವಾರಗಳಿವೆ. ಆದರೂ, ಬೆಂಗಳೂರಿನಲ್ಲಿ ಪ್ರಮುಖ ಕ್ರಿಕೆಟ್ ಮೈದಾನವು ಜಿ.ಆರ್. ವಿಶ್ವನಾಥ್, ಎರ‌್ರಪಲ್ಲಿ ಪ್ರಸನ್ನ ಮತ್ತು ಭಾಗವತ್ ಚಂದ್ರಶೇಖರ್ ಅವರಂಥ ಗಮನಾರ್ಹ ವ್ಯಕ್ತಿಗಳು ಕರ್ನಾಟಕ ಮತ್ತು ಭಾರತೀಯ ಕ್ರಿಕೆಟ್‌ಗೆ ಕೊಟ್ಟ ಕೊಡುಗೆಗಳನ್ನು ಸಂಭ್ರಮಿಸುವುದಿಲ್ಲ.

ಹಿಂದಿನ ಕಾಲದ ಭಾರತೀಯ ಕ್ರಿಕೆಟ್‌ನಲ್ಲಿ ಕರ್ನಾಟಕವನ್ನು ಶಕ್ತಿಕೇಂದ್ರವನ್ನಾಗಿ ಮಾಡಿದ ಆಟಗಾರರ ಬಗ್ಗೆ ಸಾರ್ವಜನಿಕ ಗೌರವದ ಕೊರತೆಯು ನನ್ನನ್ನು ಮಾತ್ರವಲ್ಲ, ರಾಜ್ಯದ ಎಲ್ಲಾ ಕ್ರಿಕೆಟ್ ಅಭಿಮಾನಿಗಳನ್ನೂ ಬಹಳ ಹಿಂದಿನಿಂದಲೂ ಕಾಡುತ್ತಿದೆ. ನಾನು ಒಮ್ಮೆ ಬ್ರಿಜೇಶ್ ಪಟೇಲ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದೆ. ಅವರು ಕ್ರಿಕೆಟ್ ನಿರ್ವಾಹಕರಾಗುವ ಮೊದಲು, ರಣಜಿ ಟ್ರೋಫಿ ಗೆದ್ದ ಮೊದಲ ಕರ್ನಾಟಕ ತಂಡದಲ್ಲಿ 1974ರಲ್ಲಿ ಆಡಿದ್ದರು. ಸುಮಾರು ಒಂದು ದಶಕದ ಹಿಂದೆ, ಅವರು ಇನ್ನೂ ಕೆಎಸ್‌ಸಿಎ ನಡೆಸುತ್ತಿದ್ದಾಗ ನಾನು ಅವರನ್ನು ವಿಶ್ವನಾಥ್, ಪ್ರಸನ್ನ ಮತ್ತು ಚಂದ್ರಶೇಖರ್ ಅವರ ಹೆಸರನ್ನು ಇಡುವಂತೆ ಒತ್ತಾಯಿಸಿದ್ದೆ. ವಿಶಿ ಅವರ ಬ್ಯಾಟಿಂಗ್ ಮತ್ತು ಪ್ರಾಸ್ ಮತ್ತು ಚಂದ್ರು ಅವರ ಬೌಲಿಂಗ್‌ನಿಂದಾಗಿ ಕರ್ನಾಟಕವು ದಿಲ್ಲಿ ಮತ್ತು ಬಾಂಬೆ ತಂಡಗಳನ್ನು ಸೋಲಿಸಿ ರಣಜಿ ಟ್ರೋಫಿಯನ್ನು ಗೆಲ್ಲಲು ಕಾರಣವಾಗಿತ್ತು. ಇದಕ್ಕೂ ಮೊದಲು 1971ರಲ್ಲಿ ಈ ಮೂವರು ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್‌ನಲ್ಲಿ ಭಾರತದ ಮೊದಲ ಸರಣಿ ಗೆಲುವುಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅವರನ್ನು ಸನ್ಮಾನಿಸುವ ಮೂಲಕ ಕರ್ನಾಟಕ ಕ್ರಿಕೆಟ್‌ಗೇ ಗೌರವ ನೀಡಿದಂತಾಗುತ್ತದೆ.

ಬ್ರಿಜೇಶ್ ಪಟೇಲ್ ನನ್ನ ಸಲಹೆಯನ್ನು ಒಪ್ಪಲಿಲ್ಲ. ಆನಂತರ ಪ್ರತಿಯೊಬ್ಬರೂ ತಮ್ಮ ಹೆಸರನ್ನು ಸ್ಟ್ಯಾಂಡ್‌ಗಳಲ್ಲಿ ಹಾಕುವಂತೆ ಕೇಳಲು ಶುರು ಮಾಡುತ್ತಾರೆ ಎಂದು ಅವರು ಹೇಳಿದರು. ವಿಶಿ, ಪ್ರಾಸ್ ಮತ್ತು ಚಂದ್ರು ಅವರ ಮುಂದೆ ಯಾರೊಬ್ಬರೂ-ವಿಶೇಷವಾಗಿ ನಂತರದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್‌ರಂಥವರೂ ಹೆಚ್ಚಲ್ಲ ಎಂದು ನಾನು ಅವರಿಗೆ ಹೇಳಿದೆ. ದ್ರಾವಿಡ್, ಕುಂಬ್ಳೆ ಮತ್ತು ಶ್ರೀನಾಥ್ ಎಲ್ಲರೂ ಈ ಮೂವರನ್ನು ಆರಾಧಿಸುತ್ತಾ ಬೆಳೆದಿದ್ದವರು ಮತ್ತು ಅವರ ಸರದಿಯನ್ನು ತವಕದಿಂದ ಕಾಯುತ್ತಿದ್ದವರಾಗಿದ್ದರು.

ಪಟೇಲ್ ಅವರಂತೆ ಸ್ವತಃ ಕ್ರಿಕೆಟ್ ನಿರ್ವಾಹಕರಾಗುವ ಮೊದಲು ಕರ್ನಾಟಕ ರಣಜಿ ತಂಡದಲ್ಲಿ ವಿಶಿ, ಪ್ರಾಸ್ ಮತ್ತು ಚಂದ್ರ ಅವರ ಕಿರಿಯ ಸಹೋದ್ಯೋಗಿಯಾಗಿದ್ದ ಕ್ರಿಕೆಟಿಗನೊಂದಿಗೆ ಈ ವರ್ಷದ ಆರಂಭದಲ್ಲಿ ಮತ್ತೊಮ್ಮೆ ನಾನು ಈ ವಿಷಯವನ್ನು ಹೊಸದಾಗಿ ಪ್ರಸ್ತಾಪಿಸಿದೆ. ಅವರು ರೋಜರ್ ಬಿನ್ನಿ. ಇಬ್ಬರೂ ವಿಮಾನ ನಿಲ್ದಾಣದಲ್ಲಿದ್ದೆವು. ಬೆಂಗಳೂರಿಗೆ ಬರಲಿರುವ ವಿಮಾನಕ್ಕಾಗಿ ಚೆಕ್-ಇನ್ ಮಾಡಲು ಕಾಯುತ್ತಿದ್ದೆವು. ‘‘ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸ್ಟ್ಯಾಂಡ್‌ಗಳಿಗೆ ಹಿಂದಿನ ಕರ್ನಾಟಕದ ಶ್ರೇಷ್ಠ ಕ್ರಿಕೆಟಿಗರ ಹೆಸರಿಡುವುದನ್ನು ನೀವು ಬೆಂಬಲಿಸುತ್ತೀರಾ?’’ ಎಂದು ನಾನು ಬಿನ್ನಿಯನ್ನು ಕೇಳಿದೆ.

ನನ್ನ ಪ್ರಶ್ನೆಗೆ ಜಾಣ್ಮೆಯ ಉತ್ತರ ನೀಡಿದ ಬಿನ್ನಿ, ತಾವು ಬಿಸಿಸಿಐನ ಅಧ್ಯಕ್ಷರಾಗಿದ್ದು, ಒಟ್ಟಾರೆಯಾಗಿ ಭಾರತೀಯ ಕ್ರಿಕೆಟ್‌ಗೆ ಜವಾಬ್ದಾರನಾಗಿರುವುದಾಗಿಯೂ, ಅದರೊಳಗಿನ ನಿರ್ದಿಷ್ಟ ರಾಜ್ಯ ಘಟಕಕ್ಕೆ ಅಲ್ಲವೆಂದೂ ಹೇಳಿದರು. ಅವರು ಈ ಹಿಂದೆ ಕೆಎಸ್‌ಸಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದುದನ್ನು ನಾನು ಅವರಿಗೆ ನೆನಪಿಸಿದೆ. ಅದಕ್ಕೆ ಅವರ ಮೌನವೇ ಉತ್ತರವಾಯಿತು. ಇನ್ನೂ ಸರದಿಯಲ್ಲೇ ಇದ್ದೆವಾದ್ದರಿಂದ, ಅವರ ತವರಿನ ಮೈದಾನದಲ್ಲಿ ಸ್ಟ್ಯಾಂಡ್‌ಗಳಿಗೆ ವಿಶಿ, ಪ್ರಾಸ್ ಮತ್ತು ಚಂದ್ರು ಹೆಸರನ್ನು, ಹಾಗೆಯೇ ನಮ್ಮ ರಾಜ್ಯದವರೇ ಆದ, ಭಾರತದ ಮೊದಲ ಶ್ರೇಷ್ಠ ಮಹಿಳಾ ಕ್ರಿಕೆಟಿಗರಾದ ಶಾಂತಾ ರಂಗಸ್ವಾಮಿ ಹೆಸರನ್ನು ಇಡುವ ಸಮಯ ದಾಟಿದೆಯೇ ಎಂದು ನಾನು ಮತ್ತಷ್ಟು ಖಾರವಾಗಿಯೇ ಅವರಿಗೆ ಕೇಳಿದೆ. ಅದು ಅವರು ಹಿರಿಯರ ವಿಚಾರದಲ್ಲಿ ತೀರಿಸಬಹುದಾದ ವೈಯಕ್ತಿಕ ಮತ್ತು ವೃತ್ತಿಪರ ಋಣವಾದೀತು ಎಂದು ನೆನಪಿಸಿದೆ. ನಾನು ಮಾತನಾಡು ವಾಗ ಬಿನ್ನಿಗೆ ಹಿತವೆನ್ನಿಸಲಿಲ್ಲ ಎಂಬುದು ತಿಳಿಯುವಂತಿತ್ತು. ಅವರು ಈ ವಿಚಾರದ ಮಹತ್ವವನ್ನು ಗುರುತಿಸಲಿಲ್ಲ. ಆದರೆ ಸ್ವಲ್ಪ ಮುಜುಗರಕ್ಕಂತೂ ಒಳಗಾದಂತಿತ್ತು.

ರೋಜರ್ ಬಿನ್ನಿ ಮೌನವಾಗಿಯೇ ಇದ್ದುದರಿಂದ, ನಾನು ಹೇಳಬೇಕಾದು ದನ್ನು ಹೇಳಿದೆ. ಸಲ್ಮಾನ್ ರಶ್ದಿ ಅವರು ತಮ್ಮ ಇತ್ತೀಚಿನ ಕಾದಂಬರಿಯಲ್ಲಿ ಮೂರು ಪಾತ್ರಗಳಿಗೆ ಕ್ರಮವಾಗಿ ಎರ್ರಪಲ್ಲಿ, ಗುಂಡಪ್ಪ ಮತ್ತು ಭಾಗವತ್ ಎಂದು ಹೆಸರಿಸಿದ್ದಾರೆ ಎಂದು ನಾನು ಅವರ ಗಮನಕ್ಕೆ ತಂದೆ. ಕರ್ನಾಟಕದ ಬಗ್ಗೆ ಬರೆಯುವಾಗ, ಕ್ರಿಕೆಟ್‌ನಲ್ಲಿ ಯಾವುದೇ ಪೂರ್ವ ಆಸಕ್ತಿಯಿಲ್ಲದ ಆಂಗ್ಲೋ-ಅಮೆರಿಕನ್ ಕಾದಂಬರಿಕಾರ ಕೂಡ ಪ್ರಾಸ್, ವಿಶಿ ಮತ್ತು ಚಂದ್ರು ಅವರನ್ನು ಅವರು ರಾಜ್ಯದ ಇತಿಹಾಸ ಮತ್ತು ಜನರ ಪಾಲಿಗೆ ಏನಾಗಿದ್ದಾರೆಯೋ ಅದನ್ನು ಗೌರವಿಸುತ್ತಾರೆ.

ಕ್ರಿಕೆಟ್ ನಿರ್ವಾಹಕರಾಗಿ ತಮ್ಮ ಅಧಿಕಾರಾವಧಿಯಲ್ಲಿ ಬ್ರಿಜೇಶ್ ಪಟೇಲ್ ಮತ್ತು ರೋಜರ್ ಬಿನ್ನಿ ಇಬ್ಬರೂ ಉತ್ತಮ ಕೆಲಸವನ್ನು ಮಾಡಲು ಸಾಕಷ್ಟು ಅವಕಾಶವನ್ನು ಹೊಂದಿದ್ದರು ಮತ್ತು ತಮಗಿಂತ ಹಿರಿಯರು ಮತ್ತು ಶ್ರೇಷ್ಠರ ಹೆಸರನ್ನು ಸ್ಟ್ಯಾಂಡ್‌ಗಳಿಗೆ ಇರಿಸಬಹುದಾಗಿತ್ತು. ಅವರು ಯಾಕೆ ಹಾಗೆ ಮಾಡಿಲ್ಲ? ಸ್ಥಳೀಯ ಐಪಿಎಲ್ ಫ್ರಾಂಚೈಸಿಯನ್ನು ನಡೆಸುವಂಥ ಪ್ರಾಯೋಜಕರ ವಿಚಾರದಲ್ಲಿನ ಹಿಂಜರಿಕೆ ಇರಬಹುದೇ? ಅಥವಾ ಆಡಳಿತದ ಅಧಿಕಾರದ ದುರಹಂಕಾರದ ಅಮಲಿನಲ್ಲಿ ಅವರು ಇತರ ಕ್ರಿಕೆಟಿಗರನ್ನು ಸಾರ್ವಜನಿಕವಾಗಿ ಪ್ರಶಂಸಿಸಲು ಇಷ್ಟಪಡುತ್ತಿಲ್ಲವೆ?

ಇನ್ನು ಊಹೆ ಬೇಡ. ವಿಶಿ, ಪ್ರಾಸ್, ಚಂದ್ರು ಮತ್ತು ಶಾಂತಾ ಅವರ ಹೆಸರನ್ನು ಆದಷ್ಟು ಬೇಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸ್ಟ್ಯಾಂಡ್‌ಗಳಿಗೆ ಇರಿಸುವುದು ಮತ್ತು ಬಹುಶಃ ಕೆಲವು ವರ್ಷಗಳ ನಂತರ, ಕರ್ನಾಟಕ ಮತ್ತು ಭಾರತೀಯ ಕ್ರಿಕೆಟ್‌ಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ನಾಲ್ವರಾದ ಕಿರ್ಮಾನಿ, ದ್ರಾವಿಡ್, ಶ್ರೀನಾಥ್ ಮತ್ತು ಕುಂಬ್ಳೆ ಅವರ ಹೆಸರುಗಳನ್ನೂ ಇತರ ಸ್ಟ್ಯಾಂಡ್‌ಗಳಿಗೆ ಇಡುವುದೇ ಸರಿಯಾದ ಮತ್ತು ನ್ಯಾಯಯುತವಾದ ಕೆಲಸ ಎಂದು ನಾನು ಭಾವಿಸುತ್ತೇನೆ.

ಮುಂದಿನ ವರ್ಷ, ಕರ್ನಾಟಕ ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದ ಐವತ್ತನೇ ವಾರ್ಷಿಕೋತ್ಸವ. ನಾನು ಬೇರೆಡೆ ವಾದಿಸಿದಂತೆ, ಅದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ನಿಜವಾದ ಸಂಕ್ರಮಣ ಘಟನೆಯಾಗಿದೆ. ಏಕೆಂದರೆ ಬಾಂಬೆಯನ್ನು ಸೋಲಿಸುವ ಮೂಲಕ ನನ್ನ ತಂಡವು ದಿಲ್ಲಿ, ಹೈದರಾಬಾದ್, ತಮಿಳುನಾಡು, ಬರೋಡಾ, ರೈಲ್ವೇಸ್, ಪಂಜಾಬ್, ಹರ್ಯಾಣ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಸೌರಾಷ್ಟ್ರ ಮತ್ತು ಗುಜರಾತ್‌ನಂತಹ ತಂಡಗಳು ನಂತರದ ವರ್ಷಗಳಲ್ಲಿ ಟ್ರೋಫಿಯಲ್ಲಿ ತಮ್ಮ ಹೆಸರು ಮೂಡಿಸುವಂತಾಗಲು ದಾರಿಯನ್ನು ತೆರೆಯಿತು. ಎಂಟು ಬಾರಿ ಕರ್ನಾಟಕವೇ ರಣಜಿ ಚಾಂಪಿಯನ್ ಆಗಿದೆ.

1974ರಲ್ಲಿ ಭಾರತೀಯ ಕ್ರಿಕೆಟ್‌ನ ವಿಕೇಂದ್ರೀಕರಣ ಮತ್ತು ಪ್ರಜಾಸತ್ತಾತ್ಮಕತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರಾರಂಭವಾಯಿತು. ಅದು ಸಂಭವಿಸಿದಾಗ ನಾನು ಅಲ್ಲಿಯೇ ಇದ್ದೆ. ಕರ್ನಾಟಕವು ಬಾಂಬೆಯನ್ನು ಸೋಲಿಸುವಾಗ ಪ್ರತೀ ಬಾಲ್ ಅನ್ನೂ ಗಮನಿಸುತ್ತಿದ್ದೆ. ಆದರೆ, ಈ ಅಂಕಣವನ್ನು ವೈಯಕ್ತಿಕ ಕಾರಣಗಳಿಗಾಗಿ ಬರೆಯಲಾಗಿರಲಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕರ್ನಾಟಕದ ಹಿಂದಿನ ಶ್ರೇಷ್ಠ ಕ್ರಿಕೆಟಿಗರನ್ನು ಗೌರವಿಸಲು ಇನ್ನೂ ಸ್ಥಳ ಒದಗಿಲ್ಲ ಎಂಬುದು ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ತಪ್ಪಿತಸ್ಥ ಭಾವನೆಯನ್ನು ಮೂಡಿಸುತ್ತದೆ. ಬಹುಶಃ ಕೆಎಸ್‌ಸಿಎ ಈ ಅನ್ಯಾಯದ ಬಗ್ಗೆ ಎಚ್ಚೆತ್ತುಕೊಂಡು ತಡವಾಗಿಯಾದರೂ ಸರಿಪಡಿಸಬಹುದು. ಅಕ್ಟೋಬರ್ 20ರಂದು ಬೆಂಗಳೂರಿನಲ್ಲಿ ನಡೆಯಲಿರುವ ಐದು ವಿಶ್ವಕಪ್ ಪಂದ್ಯಗಳಲ್ಲಿ ಮೊದಲನೆಯ ಪಂದ್ಯದ ವೇಳೆ ಚಂದ್ರು, ಪ್ರಾಸ್, ಶಾಂತಾ ಮತ್ತು ವಿಶಿ ಹೆಸರಿನ ಸ್ಟ್ಯಾಂಡ್‌ಗಳನ್ನು ಅನಾವರಣಗೊಳಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ರಾಮಚಂದ್ರ ಗುಹಾ

contributor

Similar News