ವಿನಾಶರೂಪಿ ಅಭಿವೃದ್ಧಿ

ಕೇರಳದ ವಿಜ್ಞಾನಿಗಳ ಈ ವರದಿ ಆನ್‌ಲೈನ್‌ನಲ್ಲಿ ಲಭ್ಯವಿದೆ (ನೋಡಿ:https://www.vizhinjamtheeram.org/report.php). ಆಸಕ್ತ ಓದುಗರು ಇದನ್ನು ಚರ್ಚಿಸಬೇಕೆಂದು ನಾನು ಕೋರುತ್ತೇನೆ. ಅದರ ದಾಖಲೀಕರಣದ ಆಳ ಮತ್ತು ಅದರ ವಾದಗಳ ಬಲದಿಂದ ನಾನು ಪ್ರಭಾವಿತನಾದಂತೆಯೇ ಅವರೂ ಪ್ರಭಾವಿತರಾಗುತ್ತಾರೆ ಎಂದು ನನಗೆ ಖಾತ್ರಿಯಿದೆ. ವರದಿ ಕೇರಳದ ಜನರಿಗೆ ಮಾತ್ರವಲ್ಲದೆ, ಪ್ರಜಾಸತ್ತಾತ್ಮಕ ಮನಸ್ಸಿನ ಪ್ರತಿಯೊಬ್ಬ ಭಾರತೀಯನಿಗೂ ಒಂದು ಉತ್ತಮ ಸಾರ್ವಜನಿಕ ಕೊಡುಗೆಯಾಗಿದೆ. ದೊಡ್ಡ ಸಂಸ್ಥೆಗಳು ಮತ್ತು ಅವನ್ನು ಬೆಂಬಲಿಸುವ ರಾಜಕೀಯದವರು ಮಾಡುವ ಸುಳ್ಳು ಮತ್ತು ತಿರುಚಿದ ವಾದಗಳ ಬಗ್ಗೆ ಜನರು ಹೆಚ್ಚು ಜಾಗರೂಕರಾಗಿರಬೇಕಿದೆ.

Update: 2023-12-30 05:54 GMT

ನನಗೆ ಗೊತ್ತಿರುವ ಈ ದೇಶದ ಎಲ್ಲಾ ರಾಜ್ಯಗಳಲ್ಲಿ ಕೇರಳ ಅತ್ಯಂತ ಸಕ್ರಿಯ ನಾಗರಿಕ ಸಮಾಜ ಸಂಘಟನೆಗಳನ್ನು ಹೊಂದಿದೆ. ಅವು ಸರಕಾರಗಳು ಮತ್ತು ರಾಜಕೀಯ ಪಕ್ಷಗಳಿಂದ ಸ್ವತಂತ್ರವಾಗಿಯೇ ಬೆಳೆದಿರುವಂಥವು. ಈ ಗುಂಪುಗಳು ವಿಜ್ಞಾನ, ಆರೋಗ್ಯ, ಶಿಕ್ಷಣ, ಮತ್ತು ಪರಿಸರ ಸುಸ್ಥಿರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತವೆ. ವಿದ್ವಾಂಸರು ಮತ್ತು ವಿಜ್ಞಾನಿಗಳ ಪಾಲ್ಗೊಳ್ಳುವಿಕೆಯಿಂದ ಈ ಗುಂಪುಗಳ ಕೆಲಸ ಬಹು ಸಮೃದ್ಧವಾಗಿದೆ. ತಜ್ಞರು ಮತ್ತು ವ್ಯಾಪಕ ಸಾರ್ವಜನಿಕರ ನಡುವಿನ ಈ ಪರಸ್ಪರ ಬೆರೆಯುವಿಕೆ ನಮ್ಮಲ್ಲಿ ಬೇರೆಲ್ಲಿಗಿಂತಲೂ ಕೇರಳದಲ್ಲಿ ಹೆಚ್ಚು ಕ್ರಿಯಾಶೀಲ ಮತ್ತು ರಚನಾತ್ಮಕವಾಗಿದೆ.

ಕಳೆದ ಮೂವತ್ತು ವರ್ಷಗಳಲ್ಲಿ, ನಾನು ಸುಮಾರು 25 ಬಾರಿ ಕೇರಳಕ್ಕೆ ಭೇಟಿ ನೀಡಿದ್ದೇನೆ. ಅಲ್ಲಿ ವಿವಿಧ ವಿಷಯಗಳ ಕುರಿತ ಸಾರ್ವಜನಿಕ ಸಭೆಗಳಲ್ಲಿ, ನಾಗರಿಕ ಸಮಾಜಕ್ಕಿರುವ ಮಹತ್ವ ಮತ್ತು ಅದರ ಕ್ರಿಯಾಶೀಲತೆಯನ್ನು ನೇರವಾಗಿ ನೋಡಿದ್ದೇನೆ. ರಾಜ್ಯದ ದಕ್ಷಿಣ ಭಾಗದ ಮೀನುಗಾರರನ್ನು ಪ್ರತಿನಿಧಿಸುವ ಸಂಘಟನೆಯಾದ ‘ಜನಕೀಯ ಸಮರ ಸಮಿತಿ’ಯ ಆಹ್ವಾನದ ಮೇರೆಗೆ ಕಳೆದ ತಿಂಗಳು ಹೋಗಿದ್ದು ನನ್ನ ತೀರಾ ಇತ್ತೀಚಿನ ಭೇಟಿ. ವಿಳಿಂಜಂನಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ಬಂದರನ್ನು ವಿರೋಧಿಸುವಲ್ಲಿ ಸಮಿತಿ ಕೆಲವು ವರ್ಷಗಳಿಂದ ಸಕ್ರಿಯವಾಗಿದೆ. ಈ ಬಂದರು ಭಾರತದ ಸಿಂಗಾಪುರಕ್ಕಿಂತ ಕಡಿಮೆಯಿಲ್ಲ, ಸಮೃದ್ಧಿಗೆ ಕಾರಣವಾಗುತ್ತದೆ ಎಂದೆಲ್ಲ ರಾಜ್ಯ ಸರಕಾರ ಹೇಳಿಕೊಂಡಿದೆ. ಆದರೆ ಇದರ ಬಗ್ಗೆ ಜನರು ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನು ವಿನಾಶಕಾರಿ ಅಭಿವೃದ್ಧಿಗೆ ಒಂದು ಪ್ರಮುಖ ಉದಾಹರಣೆಯಾಗಿ ನೋಡಲಾಗುತ್ತಿದೆ.

ಬಂದರು ಯೋಜನೆಯನ್ನು ಹೆಚ್ಚು ಕೂಲಂಕಷವಾಗಿ ಅರ್ಥಮಾಡಿಕೊಳ್ಳಲು ಪರಿಣಾಮಕಾರಿ ಅಧ್ಯಯನಕ್ಕಾಗಿ ಜನಕೀಯ ಸಮರ ಸಮಿತಿ ವಿದ್ವಾಂಸರ ತಂಡವೊಂದನ್ನು ನಿಯೋಜಿಸಿತ್ತು. ಆ ತಂಡ ತಯಾರಿಸಿದ ವರದಿ, ಅಂಥ ಕೆಲಸಗಳಿಗೆ ಒಂದು ಮಾದರಿಯಾಗಿದೆ. ಅದು ಪರಿಸರಶಾಸ್ತ್ರಜ್ಞರು, ಭೂ ವಿಜ್ಞಾನಿಗಳು, ಹವಾಮಾನ ವಿಜ್ಞಾನಿಗಳು, ಸಮಾಜಶಾಸ್ತ್ರಜ್ಞರು ಮತ್ತು ಅರ್ಥಶಾಸ್ತ್ರಜ್ಞರ ದೃಷ್ಟಿಕೋನವನ್ನು ಒಳಗೊಂಡ ಅತ್ಯುತ್ತಮ ಬಗೆಯ ಅಂತರ್‌ಶಿಸ್ತೀಯ ಸಂಶೋಧನೆಯಾಗಿದೆ. ಹೆಚ್ಚಿನ ಪ್ರಾಯೋಗಿಕ ದತ್ತಾಂಶಗಳು ಮತ್ತು ಬಂದರು ನಿರ್ಮಾಣ ಪ್ರಾರಂಭವಾಗುವ ಮೊದಲು ಮತ್ತು ನಂತರದ ಈ ಪ್ರದೇಶದ ದೃಶ್ಯಗಳ ವಿವರಗಳೊಂದಿಗೆ ಈ ವರದಿಗೆ ಹೆಚ್ಚು ದೃಢತೆ ಸಿಕ್ಕಿದೆ. ಈ ಪ್ರದೇಶದ ಎಲ್ಲಾ ಅಂಶಗಳ ಕುರಿತ ಅಸಾಧಾರಣ ಸಂಖ್ಯೆಯ ವೈಜ್ಞಾನಿಕ ಅಧ್ಯಯನಗಳ ಕಡೆ ವರದಿ ಗಮನ ಸೆಳೆಯುತ್ತದೆ. ಹೊಸ ಕ್ಷೇತ್ರ ಸಂಶೋಧನೆ, ಸಂದರ್ಶನಗಳು, ಸಮೀಕ್ಷೆಗಳು ಮತ್ತು ಸಾರ್ವಜನಿಕ ಸಮಾಲೋಚನೆಗಳಿಂದ ಈ ವಿಶ್ಲೇಷಣೆ ಮತ್ತಷ್ಟು ಪುಷ್ಟೀಕರಿಸಲ್ಪಟ್ಟಿದೆ.

ಕೇರಳದ ಈ ಉತ್ತಮ ಮತ್ತು ಸಾರ್ವಜನಿಕ ಮನೋಭಾವದ ವಿಜ್ಞಾನಿಗಳು ತಯಾರಿಸಿದ ವರದಿಯ ಶೀರ್ಷಿಕೆ: ನಮ್ಮ ಕಡಲತೀರಗಳು, ನಮ್ಮ ಸಮುದ್ರ: ಮೀನುಗಾರಿಕಾ ಸಮುದಾಯಗಳ ಪರಂಪರೆ; ನಾಗರಿಕರ ಪ್ರಯೋಜನ: ಕಡಲತೀರಗಳ ಮೇಲೆ ವಿಳಿಂಜಂ ಅಂತರ್‌ರಾಷ್ಟ್ರೀಯ ಬಂದರಿನ ಪ್ರಭಾವ, ಕರಾವಳಿ ಸಮುದ್ರ, ಜೀವವೈವಿಧ್ಯ ಮತ್ತು ತಿರುವನಂತಪುರಂ ಜಿಲ್ಲೆಯ ಮೀನುಗಾರಿಕೆ ಸಮುದಾಯಗಳ ಜೀವನೋಪಾಯಗಳು. ಭಾರತದಲ್ಲಿನ ಕೆಲವು ವಿಶ್ವವಿದ್ಯಾನಿಲಯಗಳು ಇಂತಹ ಕಠಿಣವಾಗಿ ಸಂಶೋಧಿಸಲ್ಪಟ್ಟ ಅಧ್ಯಯನವನ್ನು ನಡೆಸಲು ಸಮರ್ಥವಾಗಿರುತ್ತವೆಯೇ ಹೊರತು ಖಂಡಿತವಾಗಿಯೂ ಯಾವುದೇ ಸರಕಾರಿ ಇಲಾಖೆಯಲ್ಲ. ಇಲ್ಲಿ ಪ್ರಸ್ತುತಪಡಿಸಲಾದ ದತ್ತಾಂಶ ಮತ್ತು ವಿಶ್ಲೇಷಣೆ ವಿಳಿಂಜಂ ಬಂದರು ಕೇರಳದ ಜನರಿಗೆ ಪ್ರಯೋಜನಕ್ಕಿಂತ ಹೆಚ್ಚಿನ ಹಾನಿಯನ್ನು ಉಂಟುಮಾಡುತ್ತದೆ ಎಂಬುದನ್ನು ಋಜುವಾತುಪಡಿಸುತ್ತದೆ.

ಬಂದರು ನಿರ್ಮಾಣ ಪ್ರಾರಂಭವಾಗುವ ಮೊದಲು, ವಿಳಿಂಜಂ ಕೇರಳದ ಅತಿದೊಡ್ಡ ಮತ್ತು ಪ್ರಮುಖ ಮೀನುಗಾರಿಕಾ ಗ್ರಾಮವಾಗಿತ್ತು. ಇದು ಸುಮಾರು 4,500 ಮೀನುಗಾರ ಕುಟುಂಬಗಳಿಗೆ ಮತ್ತು ಹಲವಾರು ಸಾವಿರ ದೋಣಿಗಳಿಗೆ ನೆಲೆಯಾಗಿತ್ತು. ಮಳೆಗಾಲದಲ್ಲಿ ಇದು ಇತರ ಗ್ರಾಮಗಳ ಮೀನುಗಾರರಿಗೆ ಸುರಕ್ಷಿತ ಬಂದರು ಎನಿಸಿಕೊಂಡಿತ್ತು. ಸಮುದಾಯದಲ್ಲಿನ ಅನೇಕ ವಿದ್ಯಾವಂತ ಯುವಕರು ಉದ್ದೇಶಪೂರ್ವಕವಾಗಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸಮರ್ಥನೀಯ ಮತ್ತು ಲಾಭದಾಯಕ ಸ್ವ-ಉದ್ಯೋಗ ಆಯ್ಕೆಯಾಗಿ ಅದಕ್ಕಿರುವ ಮಹತ್ವವೇ ಕಾರಣ. ಅವರು ಆಧುನಿಕ, ಸಣ್ಣ-ಪ್ರಮಾಣದ, ತಂತ್ರಜ್ಞಾನ ಚಾಲಿತ ಮೀನುಗಾರಿಕೆ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಾರೆ ಮತ್ತು ತಮ್ಮ ಸ್ಥಾಪಿತ ಸಾಂಸ್ಥಿಕ ವ್ಯವಸ್ಥೆಗಳ ಮೂಲಕ ಗ್ರಾಹಕರೊಂದಿಗೆ ನೇರವಾಗಿ ಸಂಪರ್ಕದಲ್ಲಿರಲು ನವೀನ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ತೀರ ಮತ್ತು ಕಡಲಿನ ಸಾಂಸ್ಕೃತಿಕ ಹೆಚ್ಚುಗಾರಿಕೆ ಅವರಿಗೆ ತಿಳಿದಿದೆ ಎಂಬುದನ್ನು ಈ ವರದಿ ಮುಖ್ಯವಾಗಿ ಗಮನಿಸುತ್ತದೆ.

ಅಗತ್ಯವಿರುವ ಪರಿಸರ ಅನುಮತಿಯನ್ನು ಪಡೆಯಲು ಪ್ರವರ್ತಕ ಸಂಸ್ಥೆ ವಿಳಿಂಜಂ ಇಂಟರ್‌ನ್ಯಾಶನಲ್ ಸೀಪೋರ್ಟ್ ಲಿಮಿಟೆಡ್ (ವಿಐಎಸ್‌ಎಲ್) ಹೇಗೆ ದತ್ತಾಂಶವನ್ನು ಅಡಗಿಸಿದೆ, ಬದಲಿಸಿದೆ ಮತ್ತು ತಪ್ಪಾಗಿ ನಿರೂಪಿಸಿದೆ ಎಂಬುದನ್ನು ವರದಿ ದಾಖಲಿಸುತ್ತದೆ. ಅದರ ಪರಿಸರ ಪರಿಣಾಮದ ಮೌಲ್ಯಮಾಪನ ವರದಿಯಲ್ಲಿ ಜೀವವೈವಿಧ್ಯತೆಯ ಮೇಲೆ ಯೋಜನೆಯ ಪರಿಣಾಮವನ್ನು ಸಮರ್ಪಕವಾಗಿ ಹೇಳಿಲ್ಲ. ಮೀನುಗಾರಿಕೆಗೆ ಆಗುವ ನಷ್ಟವನ್ನು ತೀವ್ರ ಕಡಿಮೆ ಪ್ರಮಾಣದಲ್ಲಿ ಅಂದಾಜು ಮಾಡಿದೆ. ಜೀವನೋಪಾಯ, ಪ್ರವಾಸೋದ್ಯಮದ ಮೇಲಾಗುವ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ತೋರಿಸಿದೆ. ಯೋಜನೆಯಿಂದ ಆಗುವ ಕರಾವಳಿ ಸವೆತವನ್ನು ನಿರ್ಲಕ್ಷಿಸಲಾಗಿದೆ. ಬಂಡೆಗಳು ಮತ್ತು ಕಡಲತೀರಗಳ ಸೌಂದರ್ಯದ ಮೌಲ್ಯವನ್ನು ಕಡೆಗಣಿಸಿದೆ. ಬಂದರು ನಿರ್ಮಾಣದ ನಂತರ ಇದೆಲ್ಲವೂ ಶಾಶ್ವತವಾಗಿ ಇಲ್ಲವಾಗುತ್ತದೆ.

ವಿಜ್ಞಾನಿಗಳ ಈ ವರದಿ ಅದಾನಿ ಸಮೂಹದ ಪ್ರಸ್ತಾವಿತ ಯೋಜನೆ ನಾಲ್ಕು ಪ್ರಮುಖ ದೃಷ್ಟಿಯಿಂದ ಹೇಗೆ ದೋಷಪೂರಿತವಾಗಿದೆ ಎಂಬುದನ್ನು ನಿಖರವಾಗಿ ತೋರಿಸುತ್ತದೆ:

ಆರ್ಥಿಕವಾಗಿ, ಈ ಯೋಜನೆ ಸಮಯದ ವಿಳಂಬ, ಮಿತಿಮೀರಿದ ವೆಚ್ಚ ಮತ್ತು ಭವಿಷ್ಯಕ್ಕೆ ಮಾರಕವಾಗುವ ಮೂಲಕ ದುಷ್ಪರಿಣಾಮ ಬೀರಲಿದೆ.

ಸಾಮಾಜಿಕವಾಗಿ, ಯೋಜನೆ ಮೀನುಗಾರರ ಸ್ಥಳಾಂತರದ ಮೂಲಕ ಮತ್ತು ಶ್ರೀಮಂತರು ಮತ್ತು ಕಾರ್ಮಿಕ ವರ್ಗದ ನಡುವಿನ ಅಂತರವನ್ನು ಹೆಚ್ಚಿಸುವು ದರೊಂದಿಗೆ ಅಸಮಾನತೆಯನ್ನು ತೀವ್ರಗೊಳಿಸುತ್ತದೆ. ಈ ಯೋಜನೆ ಕರಾವಳಿ ಗ್ರಾಮಗಳ ಮಹಿಳೆಯರ ಕಷ್ಟವನ್ನು ಹೆಚ್ಚಿಸುತ್ತದೆ. ಅವರು ಬದುಕಲು ಬೇರೆಡೆಗೆ ಹೋಗಿ ಮನೆಗೆಲಸ ಮಾಡಬೇಕಾಗುತ್ತದೆ.

ಪರಿಸರ ವಿಜ್ಞಾನದ ದೃಷ್ಟಿಯಿಂದ, ಯೋಜನೆ ಕಡಲತೀರಗಳು ಮತ್ತು ಸಮುದ್ರ ಜೀವಿಗಳ ನಾಶ ಮತ್ತು ನೀರಿನ ಮೂಲಗಳ ಮಾಲಿನ್ಯದ ಮೂಲಕ ತೀವ್ರ ಹಾನಿಕಾರಕ ಪರಿಣಾಮಗಳನ್ನು ತರಲಿದೆ. ಈ ಪರಿಸರ ತೊಂದರೆಗಳು ಮೀನುಗಾರರ ಜೀವನೋಪಾಯದ ಭವಿಷ್ಯವನ್ನು ಇನ್ನಷ್ಟು ಘಾಸಿಗೊಳಿಸುತ್ತವೆ. ಕರಾವಳಿ ಪರಿಸರ ವ್ಯವಸ್ಥೆಗಳು ಅಂತರ್ಗತವಾಗಿ ದುರ್ಬಲವಾಗಿರುತ್ತವೆ ಮತ್ತು ಇಂಥ ಬೃಹತ್ ಯೋಜನೆಗಳು ಬದಲಿಸಲಾಗದ ಹಾನಿಯನ್ನು ಉಂಟುಮಾಡಬಹುದು. ಅಲ್ಲದೆ, ಹವಾಮಾನ ಬದಲಾವಣೆಯ ಅಪಾಯ ಈಗಾಗಲೇ ಕಾಡುತ್ತಿರುವಾಗ, ಚಂಡಮಾರುತಗಳಂತಹ ಅನಿರೀಕ್ಷಿತ ಹವಾಮಾನ ವಿದ್ಯಮಾನಗಳು ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ವಿನಾಶವನ್ನು ಉಂಟುಮಾಡುತ್ತವೆ.

ಮೀನುಗಾರಿಕೆ, ಕರಾವಳಿ ರಕ್ಷಣೆ, ಪ್ರವಾಸೋದ್ಯಮ, ನೀರಿನ ಗುಣಮಟ್ಟ, ಸಂಸ್ಕೃತಿ ಮತ್ತು ಸೌಂದರ್ಯದ ಮೌಲ್ಯಗಳ ಸಂರಕ್ಷಣೆ ಮುಂತಾದ ಚಟುವಟಿಕೆಗಳನ್ನು ಒಳಗೊಂಡಿರುವ ಪರಿಸರ ವ್ಯವಸ್ಥೆಯಲ್ಲಿನ ನಷ್ಟ ಪ್ರತೀ ವರ್ಷ ಅಂದಾಜು 2,027 ಕೋಟಿ ರೂ. ಈ ಅಂಕಿ ಅಂಶವು ಕೇರಳಕ್ಕೆ ಈ ಯೋಜನೆಯಿಂದ ಆರ್ಥಿಕವಾಗಿ ಲಾಭವಿಲ್ಲ ಎಂಬುದನ್ನು ಹೇಳುತ್ತದೆ.

ಅಂತಿಮವಾಗಿ, ರಾಜಕೀಯ ದೃಷ್ಟಿಯಿಂದ, ರಹಸ್ಯವಾದ, ಪಾರದರ್ಶಕವಲ್ಲದ ಮತ್ತು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ವಿಧಾನಗಳ ಬಳಕೆಯಿಂದ ಯೋಜನೆಯನ್ನು ತರಲಾಗಿದೆ. ಕೇಂದ್ರದ ಬಿಜೆಪಿ ಸರಕಾರ ಮತ್ತು ಕೇರಳದ ಕಾಂಗ್ರೆಸ್ ನೇತೃತ್ವದ ಮತ್ತು ಎಡ ಸರಕಾರಗಳು ಈ ಪ್ರಜಾಸತ್ತಾತ್ಮಕ ತತ್ವ ಮತ್ತು ಕಾರ್ಯವಿಧಾನದ ಸಂಪೂರ್ಣ ಉಲ್ಲಂಘನೆಯಲ್ಲಿ ತಪ್ಪಿತಸ್ಥರು.

ಹೀಗೆ, ಆರ್ಥಿಕ ಕ್ಷಮತೆ, ಸಾಮಾಜಿಕ ನ್ಯಾಯ, ಪರಿಸರ ಸುಸ್ಥಿರತೆ ಮತ್ತು ಪ್ರಜಾಸತ್ತಾತ್ಮಕ ಕಾರ್ಯ ವಿಧಾನದ ದೃಷ್ಟಿಕೋನದಿಂದ, ಅದಾನಿ ಪ್ರಾಯೋಜಿತ ವಿಐಎಸ್‌ಎಲ್ ಯೋಜನೆ ಕೇರಳ ಮತ್ತು ಭಾರತದ ನಾಗರಿಕರಿಗೆ ವಿರುದ್ಧವಾಗಿದೆ ಎಂದು ಈ ವರದಿ ತೋರಿಸುತ್ತದೆ.

ಇವಲ್ಲದೆ, ಅದರ ವಿರುದ್ಧ ಹೋರಾಟದಲ್ಲಿ ಪರಿಗಣಿಸಲಾಗುತ್ತಿರುವ ಇತರ ಅಂಶಗಳೂ ಇವೆ. ಉದಾಹರಣೆಗೆ, ಸೌಂದರ್ಯದ ಆಯಾಮವಿದೆ. ಈ ಯೋಜನೆ ಪ್ರಸ್ತುತ ಪ್ರತಿಯೊಬ್ಬ ನಾಗರಿಕರ ಪಾಲಿನ ಸ್ವರ್ಗದಂತಿರುವ, ಸಾಮಾಜಿಕ ಮತ್ತು ಆಧ್ಯಾತ್ಮಿಕ ನೆಲೆಯಂತಿರುವ, ಸಂಗೀತ, ಕ್ರೀಡೆ ಮತ್ತು ಉತ್ಸವಗಳ ಸ್ಥಳವಾಗಿರುವ ಅನೇಕ ಕಡಲತೀರಗಳನ್ನು ನಾಶಪಡಿಸುತ್ತದೆ. ಅಂತಿಮವಾಗಿ, ರಾಷ್ಟ್ರೀಯ ಭದ್ರತಾ ಆಯಾಮವಿದೆ. ಅದಾನಿ ಸಮೂಹ ಈಗಾಗಲೇ ಹದಿಮೂರು ಬಂದರುಗಳು ಮತ್ತು ಎಂಟು ವಿಮಾನ ನಿಲ್ದಾಣಗಳನ್ನು ನಿಯಂತ್ರಿಸುತ್ತಿದೆ. ಭಾರತದಾದ್ಯಂತ ಮತ್ತು ಭಾರತ ಮತ್ತು ವಿಶ್ವದ ನಡುವೆ ಮಾನವ, ವಾಣಿಜ್ಯ ಮತ್ತು ವಾಹನ ದಟ್ಟಣೆಯ ಅಂತಹ ನಿರ್ಣಾಯಕ ವಲಯವನ್ನು ಹೊಂದಲು ಒಂದೇ ಖಾಸಗಿ ಸಂಸ್ಥೆಗೆ ಅನುಮತಿ ನೀಡುವುದು ಮತ್ತು ಪ್ರೋತ್ಸಾಹಿಸುವುದು ಖಂಡಿತವಾಗಿಯೂ ದೇಶದ ಭದ್ರತೆ ಮತ್ತು ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ.

ಈ ದುರುದ್ದೇಶಪೂರಿತ ಯೋಜನೆಯಿಂದ ಪ್ರತಿಕೂಲ ಪರಿಣಾಮಕ್ಕೆ ತುತ್ತಾಗುವ ಪ್ರದೇಶದ ಬಗ್ಗೆ ಕೂಡ ವರದಿ ಗಮನಿಸುತ್ತದೆ: ‘ಕರಾವಳಿ ಪ್ರದೇಶಗಳಲ್ಲಿ ಆಳವಾಗಿ ಬೇರೂರಿರುವ ಈ ಸಮುದಾಯಗಳು ತಲೆಮಾರುಗಳಿಂದ ಸಮುದ್ರದ ಕಾವಲುಗಾರರಾಗಿದ್ದಾರೆ. ಸುಸ್ಥಿರ ಮೀನುಗಾರಿಕೆ ವಿಧಾನಗಳಲ್ಲಿ ಅವರ ಅನುಭವ ಪರಿಸರ ಜ್ಞಾನದ ದಾರಿದೀಪ. ಅದು ಸಮುದ್ರ ಸಂಪನ್ಮೂಲಗಳನ್ನು ರಕ್ಷಿಸುತ್ತದೆ ಮತ್ತು ಹೆಚ್ಚಿನ ಕೇರಳೀಯರು ಅವಲಂಬಿಸಿರುವ ರುಚಿಕರ ಸಮುದ್ರಾಹಾರದ ರೂಪದಲ್ಲಿ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ. ಅವರ ಶ್ರಮ ಅಮೂಲ್ಯವಾದ ಸಮುದ್ರಾಹಾರ ರಫ್ತುಗಳಲ್ಲೂ ಪಾಲು ಹೊಂದಿದ್ದು, ಅದು ದೇಶಕ್ಕೆ ಗಣನೀಯ ವಿದೇಶಿ ವಿನಿಮಯವನ್ನು ತರುತ್ತದೆ. ಅವರ ಸಂಪ್ರದಾಯಗಳು ಕೇರಳದ ಸಾಂಸ್ಕೃತಿಕ ಸಂರಚನೆಯನ್ನು ಉನ್ನತಗೊಳಿಸಿವೆ. ಇದು ಪ್ರವಾಸಿಗರಿಗೆ ಅನನ್ಯ ಮತ್ತು ಆಕರ್ಷಕ ತಾಣವಾಗಿದೆ.’

ಮತ್ತೊಂದೆಡೆ ವರದಿ ಹೇಳುವುದು ಹೀಗಿದೆ: ‘ತೀರಗಳೆಂದರೆ ಭೂಮಿ ಮತ್ತು ಸಮುದ್ರದ ಸಂಗಮದಲ್ಲಿನ ಕೇವಲ ಮರಳು ಭೂಪ್ರದೇಶಗಳಷ್ಟೇ ಅಲ್ಲ ಎಂಬುದನ್ನು ನಾವು ಒತ್ತಿಹೇಳುತ್ತೇವೆ. ಅವುಗಳನ್ನು ಖಾಸಗಿ ಹಿತಾಸಕ್ತಿಗಳಿಗೆ ಸರಕುಗಳಾಗಿ ಪರಿಗಣಿಸಬಾರದು ಅಥವಾ ಸೂಕ್ತವಲ್ಲದ ಮೂಲಸೌಕರ್ಯ ಅಭಿವೃದ್ಧಿಗೆ ಅವನ್ನು ತುತ್ತಾಗಿಸಬಾರದು. ಕಡಲತೀರಗಳು ಮತ್ತು ಪಕ್ಕದ ಕರಾವಳಿ ನೀರೇ ಜೀವನೋಪಾಯವಾಗಿರುವ ಸಕ್ರಿಯ ಮೀನುಗಾರರ ಮೂಲಭೂತ ಹಕ್ಕನ್ನು ಎತ್ತಿಹಿಡಿಯಬೇಕು, ಅವರ ವಂಶಪಾರಂಪರ್ಯ ಹಕ್ಕನ್ನು ಗುರುತಿಸಬೇಕು ಮತ್ತು ಮುಖ್ಯವಾಗಿ ನಮ್ಮ ದೇಶದ ಎಲ್ಲಾ ನಾಗರಿಕರಿಗೆ ಈ ಪ್ರಮುಖ ಸಂಪನ್ಮೂಲಗಳನ್ನು ಪೋಷಿಸುವ ಮತ್ತು ಆನಂದಿಸುವ ಅವಕಾಶವನ್ನು ಒದಗಿಸಬೇಕು.’

ಗಮನಾರ್ಹ ಅಂಶವೆಂದರೆ, ಈ ವರದಿ ಕೇವಲ ವಿಮರ್ಶೆಯ ಮನೋಭಾವದಿಂದ ರೂಪುಗೊಂಡಿಲ್ಲ. ಇದು ಯೋಜನೆಯ ಸಾಮಾಜಿಕ ಮತ್ತು ಪರಿಸರದ ಹಾನಿಗಳನ್ನು ತಗ್ಗಿಸಲು ರಚನಾತ್ಮಕ ಸಲಹೆಗಳ ಸಾಲನ್ನೇ ನೀಡುತ್ತದೆ. ಲೇಖಕರು ತಮ್ಮ ವರದಿ ಅಭಿವೃದ್ಧಿಯನ್ನು ತಡೆಯುವ ಅನ್ವೇಷಣೆಯಲ್ಲ; ಬದಲಿಗೆ, ಇದು ಕೇರಳಕ್ಕೆ ಮಾತ್ರ ಕಾರ್ಯಸಾಧ್ಯವಾಗಿರುವ ಪರಿಸರ ಮತ್ತು ಸಾಮಾಜಿಕವಾಗಿ ಸುಸ್ಥಿರ ಅಭಿವೃದ್ಧಿ ಕುರಿತ ಕೋರಿಕೆಯಾಗಿದೆ ಎನ್ನುತ್ತಾರೆ. ‘ನಾವು ಎದುರಿಸುತ್ತಿರುವುದು ಪರಿಸರದ ರಕ್ಷಣೆಯಿಲ್ಲದ ಬೃಹತ್ ಯೋಜನೆ. ಅದು ಕೇವಲ ಖಾಸಗಿ ಲಾಭದಿಂದ ನಡೆಸಲ್ಪಡುವ ಕಾರ್ಪೊರೇಟ್ ಹಿತಾಸಕ್ತಿಗಳಿಂದ ನಿಯಂತ್ರಿಸಲ್ಪಡುತ್ತದೆ. ದುರ್ಬಲವಾದ ಪರಿಸರ ವ್ಯವಸ್ಥೆ ಮತ್ತು ಸಾಂಪ್ರದಾಯಿಕ ಉದ್ಯೋಗಗಳ ನಷ್ಟದ ಬಗ್ಗೆ ಸ್ವಲ್ಪವೂ ಪರಿಗಣಿಸುವುದಿಲ್ಲ’ ಎಂದೂ ವರದಿ ಹೇಳುತ್ತದೆ. ಲೇಖಕರು ಗಮನಿಸುವ ಮತ್ತೊಂದು ವಿಚಾರ: ‘ಹೆಚ್ಚಿನ ಹೂಡಿಕೆ ಕೇರಳ ಸರಕಾರದ್ದೇ ಹಣವಾಗಿದೆ. ಅದು ಹಣಕಾಸು ಸಂಸ್ಥೆಗಳಿಂದ ಹೆಚ್ಚು ಸಾಲವನ್ನು ಪಡೆಯುತ್ತದೆ. ಆದರೆ ಮೀನುಗಾರ ಸಮುದಾಯಗಳ ಜೀವನೋಪಾಯಗಳು ಮತ್ತು ಸಾಮಾನ್ಯ ಜನರ ಸುಸ್ಥಿರ ಹಿತಾಸಕ್ತಿಗಳನ್ನು ಅಜಾಗರೂಕತೆಯಿಂದ ಅಡವಿಡಲಾಗಿದೆ’.

ಕೇರಳದ ವಿಜ್ಞಾನಿಗಳ ಈ ವರದಿ ಆನ್‌ಲೈನ್‌ನಲ್ಲಿ ಲಭ್ಯವಿದೆ (ನೋಡಿ:https://www.vizhinjamtheeram.org/report.php). ಆಸಕ್ತ ಓದುಗರು ಇದನ್ನು ಚರ್ಚಿಸಬೇಕೆಂದು ನಾನು ಕೋರುತ್ತೇನೆ. ಅದರ ದಾಖಲೀಕರಣದ ಆಳ ಮತ್ತು ಅದರ ವಾದಗಳ ಬಲದಿಂದ ನಾನು ಪ್ರಭಾವಿತನಾದಂತೆಯೇ ಅವರೂ ಪ್ರಭಾವಿತರಾಗುತ್ತಾರೆ ಎಂದು ನನಗೆ ಖಾತ್ರಿಯಿದೆ. ವರದಿ ಕೇರಳದ ಜನರಿಗೆ ಮಾತ್ರವಲ್ಲದೆ, ಪ್ರಜಾಸತ್ತಾತ್ಮಕ ಮನಸ್ಸಿನ ಪ್ರತಿಯೊಬ್ಬ ಭಾರತೀಯನಿಗೂ ಒಂದು ಉತ್ತಮ ಸಾರ್ವಜನಿಕ ಕೊಡುಗೆಯಾಗಿದೆ. ದೊಡ್ಡ ಸಂಸ್ಥೆಗಳು ಮತ್ತು ಅವನ್ನು ಬೆಂಬಲಿಸುವ ರಾಜಕೀಯದವರು ಮಾಡುವ ಸುಳ್ಳು ಮತ್ತು ತಿರುಚಿದ ವಾದಗಳ ಬಗ್ಗೆ ಜನರು ಹೆಚ್ಚು ಜಾಗರೂಕರಾಗಿರಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ರಾಮಚಂದ್ರ ಗುಹಾ

contributor

Similar News