ಹಿಂದೂ ರಾಜ್: ಭಾರತದ ಅವನತಿ
ಮಂದಿರದ ಬಗೆಗಿನ ನನ್ನ ಮಿಶ್ರ ಭಾವನೆಗಳು, ಒಂದು ಕಾಲದಲ್ಲಿ ಅಲ್ಲಿದ್ದ ಮಸೀದಿಯ ಕುರಿತ ಸೈದ್ಧಾಂತಿಕ ಸಮರ್ಥನೆಯಲ್ಲ. ಬಾಬರಿ ಮಸೀದಿ ಧಾರ್ಮಿಕ ಮತ್ತು ಮಿಲಿಟರಿ ವಿಜಯದ ಸಂಕೇತವಾಗಿತ್ತು; ಅದಕ್ಕಾಗಿಯೇ ಆ ಹೆಸರು. ಆದರೆ ಹೊಸ ಮಂದಿರ ಕೂಡ ಧಾರ್ಮಿಕ ವಿಜಯೋತ್ಸವದ ಸಂಕೇತವಾಗಿರುತ್ತದೆ, ಹಿಂದೆಂದಿಗಿಂತಲೂ ಹೆಚ್ಚಾಗಿ ಹಿಂದೂ ಆದ್ಯತೆಯ ರಾಷ್ಟ್ರವಾಗುತ್ತಿರುವುದರ ಸಂಕೇತವಾಗಿರುತ್ತದೆ. ರಾಮನಿಗಾಗಿ ಅಲ್ಲಿ ಒಂದು ಮಂದಿರವನ್ನು ನಿರ್ಮಿಸಬೇಕಿದ್ದರೂ, ಅದು ಸ್ಮಾರಕವಾಗಬೇಕಾಗಿರಲಿಲ್ಲ ಮತ್ತು ಅದು ಆಡಳಿತ ಪಕ್ಷದ ಮತ್ತು ಸ್ವತಃ ಪ್ರಧಾನಿಯ ಅಬ್ಬರದ ಅನುಮೋದನೆಯೊಂದಿಗೆ ಆಗಬೇಕಿರಲಿಲ್ಲ.
ಒಂದು ವೇಳೆ ಹಿಂದೂ ರಾಜ್ ಅಸ್ತಿತ್ವಕ್ಕೆ ಬಂದರೆ, ಅದು ಈ ದೇಶಕ್ಕೆ ದೊಡ್ಡ ವಿಪತ್ತಾಗುವುದರಲ್ಲಿ ಸಂದೇಹವಿಲ್ಲ.
-ಬಿ.ಆರ್. ಅಂಬೇಡ್ಕರ್
ಬರಹಗಾರ ಪರಕಾಲ ಪ್ರಭಾಕರ್ ಅವರು ರಾಜಕೀಯ ಮಾತುಗಾರಿಕೆಯ ಬದಲಾಗುತ್ತಿರುವ ಭಾಷೆಯ ಬಗ್ಗೆ ತಮ್ಮ ಗ್ರಹಿಕೆಗಳನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಮಾಡಿದ ಭಾಷಣವೊಂದರಲ್ಲಿ ಮುಂದಿಟ್ಟರು. 1980ರ ದಶಕದ ಉತ್ತರಾರ್ಧದಲ್ಲಿ ಭಾರತೀಯ ಜನತಾ ಪಕ್ಷವು ಮೊದಲ ಬಾರಿಗೆ ದೇಶದ ರಾಜಕೀಯದಲ್ಲಿ ಮಹತ್ವದ ಶಕ್ತಿಯಾಗುತ್ತಿದ್ದಾಗ, ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಸಕಾರಾತ್ಮಕ ಜಾತ್ಯತೀತತೆಯ ಪರವಾಗಿ ತಾವು ನಿಲ್ಲುವುದಾಗಿ ಹೇಳಿದ್ದರು. ಕಾಂಗ್ರೆಸ್‌ನದ್ದು ಬೋಗಸ್ ಜಾತ್ಯತೀತತೆ ಎಂದು ವಾದಿಸಿದ್ದ ಅಡ್ವಾಣಿ, ತಮ್ಮದು ಯಾರನ್ನೂ ಓಲೈಸುವುದಾಗಿರದೆ ಎಲ್ಲರಿಗೂ ನ್ಯಾಯದ ಭರವಸೆ ನೀಡುವ ನಿಜವಾದ ಜಾತ್ಯತೀತತೆಯಾಗಿದೆ ಎಂದಿದ್ದರು.
ಹೀಗೆ ಸ್ವಾತಂತ್ರ್ಯದ ನಲವತ್ತು ವರ್ಷಗಳ ನಂತರ, ಎತ್ತಿಹಿಡಿಯಲು ಮತ್ತು ಪಾಲಿಸಲು ಜಾತ್ಯತೀತತೆ ಒಂದು ಆದರ್ಶವಾಗಿತ್ತು. ಎಷ್ಟರ ಮಟ್ಟಿಗೆ ಎಂದರೆ, ಒಬ್ಬ ಬಿಜೆಪಿ ನಾಯಕ ತನ್ನನ್ನು ತಾನು ಅಧಿಕೃತ ಜಾತ್ಯತೀತತೆಯ ನಿಜವಾದ ಮುಂಚೂಣಿ ಪ್ರತಿಪಾದಕ ಎಂದು ಬಿಂಬಿಸಿಕೊಳ್ಳುತ್ತಿದ್ದುದಿತ್ತು. ಆದರೆ ಈಗ, ಬಿಜೆಪಿ ಅಥವಾ ಕಾಂಗ್ರೆಸ್‌ನ ಯಾವುದೇ ಪ್ರಮುಖ ರಾಜಕಾರಣಿಗಳು ಜಾತ್ಯತೀತತೆಯನ್ನು ಸಾರ್ವಜನಿಕವಾಗಿ ಪ್ರತಿಪಾದಿಸಲು ಬಯಸುವುದಿಲ್ಲ. ಬದಲಿಗೆ ಅವರು ನಿಜವಾದ ಹಿಂದೂಗಳೆಂದು ತೋರಿಸಿಕೊಳ್ಳಲು ಬಯಸುತ್ತಾರೆ. ಹೀಗಾಗಿ, ಇಂದಿನ ಸರಕಾರದ ರಾಜಕೀಯವನ್ನು ವಿರೋಧಿಸುವ ರಾಹುಲ್ ಗಾಂಧಿ ಕೂಡ, ಆರೆಸ್ಸೆಸ್‌ನ ಕಪಟ ಹಿಂದುತ್ವವನ್ನು ವಿರೋಧಿಸುವ ತಮ್ಮದೇ ನಿಜವಾದ ಹಿಂದೂ ಧರ್ಮ ಎಂದು ಪ್ರತಿಪಾದಿಸುತ್ತಾರೆ. ಹಿಂದೂ ನಂಬಿಕೆಗೆ ನಿಷ್ಠೆ ತೋರುವ ಈ ಸಾರ್ವಜನಿಕ ದೃಢೀಕರಣವನ್ನು ರಾಹುಲ್ ಗಾಂಧಿಯ ಸಲಹೆಗಾರರು ಉತ್ಸಾಹದಿಂದಲೇ ಬೆಂಬಲಿಸಿದ್ದಾರೆ. ಅವರು ರಾಹುಲ್ ಅವರನ್ನು ಶಿವಭಕ್ತ ಮತ್ತು ಜನಿವಾರ ಧರಿಸಿರುವ ಹಿಂದೂ ಎಂದು ಘೋಷಿಸುತ್ತಾರೆ.
ಪರಕಾಲ ಪ್ರಭಾಕರ್ ಹೇಳಿದಂತೆ, ಇದು ಎಲ್ಲಿಂದ ಶುರುವಾಯಿತೋ ಅಲ್ಲಿಗೇ ಬಂದು ನಿಂತಿದೆ. ಒಂದು ಕಾಲದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್‌ನಲ್ಲಿನ ತಮ್ಮ ವಿರೋಧಿಗಳಿಗಿಂತಲೂ ತಾವು ಉತ್ತಮ ಜಾತ್ಯತೀತವಾದಿಗಳು ಎಂದು ತೋರಿಸಿಕೊಳ್ಳುವುದಕ್ಕೆ ಬಯಸಿದ್ದರು. ಈಗ, ಕಾಂಗ್ರೆಸ್ ನಾಯಕರು ಬಿಜೆಪಿಯಲ್ಲಿನ ತಮ್ಮ ವಿರೋಧಿಗಳಿಗಿಂತಲೂ ತಾವು ಹೆಚ್ಚು ನಿಷ್ಠಾವಂತ ಹಿಂದೂಗಳು ಎಂದು ತೋರಿಸಿಕೊಳ್ಳಲು ಬಯಸುತ್ತಾರೆ. ಮಧ್ಯಪ್ರದೇಶದಲ್ಲಿ ಕಮಲ್‌ನಾಥ್ ಅವರ ಪ್ರಚಾರ ತಂತ್ರವು ಈ ನಿಟ್ಟಿನಲ್ಲಿನ ಒಂದು ಉದಾಹರಣೆ. ಬಿಜೆಪಿ ಮುಖ್ಯಮಂತ್ರಿಗಿಂತ ನಾಥ್ ಅವರು ಹಿಂದೂ ಧರ್ಮದಲ್ಲಿ ಹೆಚ್ಚು ನಿಷ್ಠೆಯುಳ್ಳವರು ಎಂದು ಬಿಂಬಿಸಲು ಅದು ಪ್ರಯತ್ನಿಸಿತು.
ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಮಾತುಗಾರಿಕೆಯ ಈ ಹಿಂದೂ ಕಲ್ಪನೆಯು ಹೆಚ್ಚು ತೀವ್ರಗೊಂಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುವುದರೊಂದಿಗೆ ಇದು ಮತ್ತಷ್ಟು ಬಲಗೊಳ್ಳಲಿದೆ. ಆ ಘಟನೆಯನ್ನು ಸಹಜವಾಗಿಯೇ ಬಿಜೆಪಿಯು ಮಹಾನ್ ವಿಜಯೋತ್ಸವವಾಗಿ ಆಚರಿಸುತ್ತದೆ. ಆದರೆ ಜಾತ್ಯತೀತ ಎಂದು ಹೇಳಿಕೊಳ್ಳುವ ಇತರ ಕೆಲವು ಪಕ್ಷಗಳು ನೂತನ ಮಂದಿರವನ್ನು ಅಷ್ಟೇ ಉತ್ಸಾಹದಿಂದ ಸ್ವಾಗತಿಸುತ್ತವೆ. ಮೋದಿ-ಶಾ ಆಡಳಿತದ ಕೃಪಾ ದೃಷ್ಟಿಗೆ ಪಾತ್ರವಾಗಲು ಪ್ರಯತ್ನಿಸುವ ಸಣ್ಣ ಪಕ್ಷಗಳು ಇಂತಹ ಚೀಯರ್‌ಲೀಡರ್‌ಗಳಾಗಲಿವೆ. ಕರ್ನಾಟಕದಲ್ಲಿ ತಮ್ಮ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಭಾಷಣವನ್ನು ‘ಜೈ ಶ್ರೀ ರಾಮ್’ ಎಂಬ ಘೋಷಣೆಯೊಂದಿಗೆ ಕೊನೆಗೊಳಿಸಿದ್ದಾರೆ.
ನಾನು ಈ ಅಂಕಣವನ್ನು ಬರೆಯುತ್ತಿರುವಾಗ, ಭಾರತ ರಾಷ್ಟ್ರ ಸಮಿತಿಯ ನಾಯಕಿ ಕೆ.ಕವಿತಾ ಅವರು ‘‘ಮಂದಿರ ನಿರ್ಮಾಣದೊಂದಿಗೆ ಕೋಟ್ಯಂತರ ಹಿಂದೂಗಳ ಕನಸುಗಳು ಈಡೇರಿದಂತಾಗಿದೆ’’ ಎಂದು ಟ್ವೀಟ್ ಮಾಡಿದ್ದಾರೆ. ವಿವಾದಿತ ಸ್ಥಳದಲ್ಲಿ ರಾಮನ ಪೂಜಾ ಸ್ಥಳವನ್ನು ತೆರೆಯಲು ಪ್ರಧಾನಿಯಾಗಿ ಮೊದಲು ಆದೇಶ ನೀಡಿದ್ದ ರಾಜೀವ್ ಗಾಂಧಿಯವರೇ ಈಗ ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ದೇವಾಲಯದ ಮೂಲ ವಾಸ್ತುಶಿಲ್ಪಿಯೇ ಹೊರತು ಎಲ್.ಕೆ. ಅಡ್ವಾಣಿ ಅಥವಾ ನರೇಂದ್ರ ಮೋದಿ ಅಲ್ಲ ಎಂದು ಕಾಂಗ್ರೆಸ್‌ನ ನಾಯಕರು ಬಹುಶಃ ಇನ್ನು ಹೇಳತೊಡಗುತ್ತಾರೆ.
ನಾನೊಬ್ಬ ಹಿಂದೂವಾಗಿ, ಈ ಹೊಸ ಮಂದಿರದ ಬಗ್ಗೆ ಸಂಭ್ರಮಪಡಲು ನನಗೆ ಸಾಧ್ಯವಾಗುತ್ತಿಲ್ಲ. ಅದಕ್ಕೆ ನನ್ನ ಹಿಂಜರಿಕೆ ಕೂಡ ಒಂದು ಕಾರಣ. ಏಕೆಂದರೆ ಆ ರಕ್ತಸಿಕ್ತ ವರ್ಷಗಳಲ್ಲಿ ನಾನು ಉತ್ತರ ಭಾರತದಲ್ಲಿ ಇದ್ದೆ. ಆ ಸಮಯದಲ್ಲಿ ಸಾವಿರಾರು ಅಮಾಯಕರು, ಹೆಚ್ಚಾಗಿ ಮುಸ್ಲಿಮರು ಮತ್ತು ಕೆಲವು ಹಿಂದೂಗಳು, ಹಿಂದುತ್ವದ ಗುಂಪುಗಳ ನೇತೃತ್ವದ ಉನ್ಮಾದಿತ ಗಲಭೆಯಲ್ಲಿ ಪ್ರಾಣ ಕಳೆದುಕೊಂಡರು. ಅಯೋಧ್ಯೆಯಲ್ಲಿ ಮಸೀದಿ ಧ್ವಂಸಕ್ಕೆ ಅದು ಕಾರಣವಾಯಿತು. 1989ರಲ್ಲಿ ನಡೆದ ಗಲಭೆಯ ನಂತರ ನಾನು ಭಾಗಲ್ಪುರದ ಹಳ್ಳಿಗಳಿಗೆ ಹೋಗಿದ್ದೆ. ನಾನು ನನ್ನದು ಎಂದು ಕರೆಯುವ ಧರ್ಮಕ್ಕೆ ನಿಷ್ಠರು ಎಂದು ಹೇಳಿಕೊಳ್ಳುವ ಗಲಭೆಕೋರರಿಂದ ಧ್ವಂಸಗೊಂಡಿದ್ದ ಮುಸ್ಲಿಮ್ ನೇಕಾರರ ಮಗ್ಗಗಳು ಮತ್ತು ಮುಸ್ಲಿಮ್ ಗ್ರಾಮಸ್ಥರ ಮನೆಗಳನ್ನು ನೋಡಿದೆ.
ಹಿಂದೂವಾಗಿ, ನಾನು ಈ ಹೊಸ ಮಂದಿರದ ಬಗ್ಗೆ ಸಂಭ್ರಮಿಸಲು ಸಾಧ್ಯವಿಲ್ಲ. ಏಕೆಂದರೆ ನನ್ನ ನಂಬಿಕೆಯನ್ನು ದೃಢೀಕರಿಸಲು ಅಥವಾ ಘೋಷಿಸಲು ನಾನು ಸಾವಿರಾರು ಕೋಟಿ ರೂ. ವೆಚ್ಚದ ಬೃಹತ್ ಕಟ್ಟಡದ ಮುಂದೆ ಅಥವಾ ಒಳಗೆ ಹಾಗೆ ಮಾಡಬೇಕು ಎಂಬುದನ್ನು ನಂಬುವುದಿಲ್ಲ. ನಾನು ಚಿಕ್ಕವನಾಗಿದ್ದಾಗ, ರಾಮನ ಭಕ್ತೆಯಾಗಿದ್ದ ನನ್ನ ತಾಯಿ, ಡೆಹ್ರಾಡೂನ್‌ನಲ್ಲಿರುವ ನಮ್ಮ ಮನೆಯಿಂದ ಕಾಲ್ನಡಿಗೆ ದೂರದಲ್ಲಿನ ಕಾಲುವೆಯ ದಡದಲ್ಲಿದ್ದ ಒಂದು ಪುಟ್ಟ ದೇಗುಲಕ್ಕೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಮದುವೆಯ ಬಳಿಕ ಬೆಂಗಳೂರಿಗೆ ಹೋದಾಗ, ರಾಮನ ಭಕ್ತೆಯಾಗಿದ್ದ ನನ್ನ ಅತ್ತೆ ಕೂಡ ಶಿವಾಜಿ ನಗರದ ಜನನಿಬಿಡ ನೆರೆಹೊರೆಯಲ್ಲಿನ ಸಣ್ಣ ರಾಮರ್ ಕೋವಿಲ್‌ಗೆ ನಿಯಮಿತವಾಗಿ ಹೋಗುತ್ತಿದ್ದರು. ನಂತರ, ಗಾಂಧಿಯವರ ಶಿಷ್ಯನಾಗಿ ಮತ್ತು ಜೀವನಚರಿತ್ರೆಕಾರನಾಗಿ, ಗಾಂಧಿಯವರಿಗೆ ತಮ್ಮ ಆರಾಧ್ಯ ದೈವದ ಕುರಿತ ಭಕ್ತಿಯನ್ನು ತೋರಿಸಲು ಯಾವುದೇ ಗಾತ್ರ ಅಥವಾ ಆಕಾರದ ಮಂದಿರದ ಅಗತ್ಯವಿರಲಿಲ್ಲ. ಆತ ಸದಾ ಅವರ ಹೃದಯದಲ್ಲಿದ್ದ ಮತ್ತು ಸಾಯುವಾಗ ಆತನ ಹೆಸರು ಅವರ ತುಟಿಗಳಿಂದ ಹೊಮ್ಮಿತ್ತು ಎಂಬುದನ್ನು ಮೆಚ್ಚಿಕೊಂಡಿದ್ದೆ.
ಮಂದಿರದ ಬಗೆಗಿನ ನನ್ನ ಮಿಶ್ರ ಭಾವನೆಗಳು, ಒಂದು ಕಾಲದಲ್ಲಿ ಅಲ್ಲಿದ್ದ ಮಸೀದಿಯ ಕುರಿತ ಸೈದ್ಧಾಂತಿಕ ಸಮರ್ಥನೆಯಲ್ಲ. ಬಾಬರಿ ಮಸೀದಿ ಧಾರ್ಮಿಕ ಮತ್ತು ಮಿಲಿಟರಿ ವಿಜಯದ ಸಂಕೇತವಾಗಿತ್ತು; ಅದಕ್ಕಾಗಿಯೇ ಆ ಹೆಸರು. ಆದರೆ ಹೊಸ ಮಂದಿರ ಕೂಡ ಧಾರ್ಮಿಕ ವಿಜಯೋತ್ಸವದ ಸಂಕೇತವಾಗಿರುತ್ತದೆ, ಹಿಂದೆಂದಿಗಿಂತಲೂ ಹೆಚ್ಚಾಗಿ ಹಿಂದೂ ಆದ್ಯತೆಯ ರಾಷ್ಟ್ರವಾಗುತ್ತಿರುವುದರ ಸಂಕೇತವಾಗಿರುತ್ತದೆ. ರಾಮನಿಗಾಗಿ ಅಲ್ಲಿ ಒಂದು ಮಂದಿರವನ್ನು ನಿರ್ಮಿಸಬೇಕಿದ್ದರೂ, ಅದು ಸ್ಮಾರಕವಾಗಬೇಕಾಗಿರಲಿಲ್ಲ ಮತ್ತು ಅದು ಆಡಳಿತ ಪಕ್ಷದ ಮತ್ತು ಸ್ವತಃ ಪ್ರಧಾನಿಯ ಅಬ್ಬರದ ಅನುಮೋದನೆಯೊಂದಿಗೆ ಆಗಬೇಕಿರಲಿಲ್ಲ.
ಮುಂದಿನ ತಿಂಗಳು ಉದ್ಘಾಟನೆಗೊಳ್ಳಲಿರುವ ಈ ಬೃಹತ್ ಮಂದಿರವು ದೇಶದ ಭವಿಷ್ಯಕ್ಕಾಗಿ ಏನನ್ನು ಸೂಚಿಸುತ್ತದೆ? ಭಾರತವು ‘ಎರಡನೇ ಗಣರಾಜ್ಯ’ವನ್ನು ರಚಿಸುವ ಸಂಧಿಕಾಲದಲ್ಲಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಸ್ನೇಹಿತರೊಬ್ಬರು ಹೇಳಿದರು. ಅದು ರಾಜಕೀಯ ಮತ್ತು ನೀತಿ ನಿರ್ಮಾಣದ ಹಿಂದೂ ಆದ್ಯತೆಯ ಮಾದರಿಗೆ ಅಂಟಿಕೊಂಡದ್ದಾಗಿದೆ ಮತ್ತು 1950ರ ಸಂವಿಧಾನದಿಂದ ಅಸ್ತಿತ್ವಕ್ಕೆ ಬಂದ ‘ಮೊದಲ ಗಣರಾಜ್ಯ’ವನ್ನು ಬದಲಿಸುತ್ತದೆ ಮತ್ತು ಅತಿಕ್ರಮಿಸುತ್ತದೆ. ಮಾತ್ರವಲ್ಲ, ದೇಶದ ವಿಶಿಷ್ಟ ಸ್ವರೂಪವನ್ನು ವ್ಯಾಖ್ಯಾನಿಸಲು, ಅದರ ಬಹುಸಂಖ್ಯಾತ ನಾಗರಿಕರ ಧಾರ್ಮಿಕ ನಂಬಿಕೆಯ ಆಧಾರದ ಮೇಲೆ ಜಾಣತನದಿಂದಲೇ ನಿರಾಕರಿಸಿದೆ.
ಕಳೆದ ದಶಕದ ಘಟನೆಗಳು ಆಡಳಿತ ಪಕ್ಷದ ಆ ದಿಕ್ಕಿನ ದೃಢವಾದ ನಡೆಯನ್ನು ಸೂಚಿಸುತ್ತವೆ. ಪ್ರತಿಪಕ್ಷಗಳ ಪಾಲುದಾರಿಕೆಯೂ ಇದರಲ್ಲಿ ಇದೆ. ರಾಮಮಂದಿರ ಯೋಜನೆಯಲ್ಲಿ ಸರಕಾರವು ತೊಡಗಿಸಿಕೊಂಡಿರುವುದು, ಭಾರತವು ಎಲ್ಲಕ್ಕಿಂತ ಹೆಚ್ಚಾಗಿ ‘ಹಿಂದೂ’ ದೇಶ ಎಂಬ ಕಲ್ಪನೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಆದರೂ ‘ಗಣರಾಜ್ಯ’ ಪದದ ಬಳಕೆಯೊಂದಿಗೆ ಒಂದು ಎಚ್ಚರಿಕೆ ಅಗತ್ಯವಾಗಿದೆ. ಅಯೋಧ್ಯೆ ಮಂದಿರದ ಎಲ್ಲ ವಿಧಿಗಳಲ್ಲಿನ ಆಚರಣೆಗಳಲ್ಲಿ ಪ್ರಧಾನಿ ಪ್ರಮುಖ ಪಾತ್ರವನ್ನು ವಹಿಸುವುದರೊಂದಿಗೆ, ಅವುಗಳಿಗೆ ನಿರ್ಣಾ ಯಕ ರಾಜಪ್ರಭುತ್ವದ ಸ್ವರೂಪ ಬರುತ್ತದೆ ಅಥವಾ ಇದು ಈ ನಿರ್ದಿಷ್ಟ ಮಂದಿರಕ್ಕೆ ಸೀಮಿತವಾಗಿಲ್ಲ. 2021ರ ಡಿಸೆಂಬರ್‌ನಲ್ಲಿ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ಕೆಲವು ಧಾರ್ಮಿಕ ಸಮಾರಂಭಗಳ ನೇತೃತ್ವ ವಹಿಸಿದಾಗ, ಅಲ್ಲಿ ನೆರೆದಿದ್ದ ಪುರೋಹಿತರು ‘ರಾಜಾ ಸಾಹೇಬ್ ಕಿ ಜೈ’ - ‘ರಾಜನಿಗೆ ಜಯವಾಗಲಿ’ ಎಂದು ಒಕ್ಕೊರಲಿನಿಂದ ಘೋಷಣೆ ಕೂಗಿದರು. ಆದರೆ ಬಹುಶಃ ನರೇಂದ್ರ ಮೋದಿಯವರ ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆಗಳಿಗೆ ಅತ್ಯಂತ ಅಸಾಧಾರಣ ಉದಾಹರಣೆಯೆಂದರೆ ಹೊಸ ಸಂಸತ್ತಿನ ಉದ್ಘಾಟನೆ. ಅಲ್ಲಿ ಪ್ರಧಾನಿ ಏಕಾಂಗಿಯಾಗಿ ವಿಜಯಶಾಲಿಯಂತೆ ನಿಂತಿದ್ದರು. ಪ್ರಾರ್ಥಿಸುವ ಪುರೋಹಿತರಷ್ಟೇ ಅವರನ್ನು ಸುತ್ತುವರಿದಿದ್ದರು. ಜನರ ಇಚ್ಛೆಯನ್ನು ಪ್ರತಿನಿಧಿಸುವ ಕಟ್ಟಡದಲ್ಲಿ ಶಾಹೆನ್‌ಶಾನಂತೆ ಕಾಣಿಸಿಕೊಂಡಿದ್ದರು.
ಇಂದು ಭಾರತದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಒಂದು ಮಾರ್ಗವೆಂದರೆ ಅದನ್ನು ನಮ್ಮ ನೆರೆಹೊರೆಯ ಇತರ ದೇಶಗಳ ಸಂದರ್ಭದಲ್ಲಿ ಇಟ್ಟು ನೋಡುವುದು. ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಸ್ವಯಂ ಘೋಷಿತ ಇಸ್ಲಾಮಿಕ್ ರಾಜ್ಯಗಳಾಗಿವೆ. ಅಲ್ಲಿ ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಎರಡನೇ ದರ್ಜೆಯ ನಾಗರಿಕರಾಗಿದ್ದಾರೆ. ಶ್ರೀಲಂಕಾ ಮತ್ತು ಮ್ಯಾನ್ಮಾರ್ ಸ್ವಯಂ ಘೋಷಿತ ಬೌದ್ಧ ರಾಜ್ಯಗಳು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡ ಸರಕಾರಿ ಪ್ರಾಯೋಜಿತ ಹಿಂಸಾಚಾರಕ್ಕೆ ಅವೆರಡೂ ಸಾಕ್ಷಿಯಾಗಿರುವುದು ಆಕಸ್ಮಿಕವಲ್ಲ. ಒಂದು ಕಾಲದಲ್ಲಿ ತನ್ನ ನಂಬಿಕೆಯ ಪ್ರತ್ಯೇಕತೆಯ ವಿಷಯದಲ್ಲಿ ರಾಜಕಾರಣದಿಂದ ಬೇರೆಯಾಗಿ ನಿಂತಿದ್ದ ಭಾರತವು ಈಗ ಈ ದಕ್ಷಿಣ ಏಶ್ಯದ ಕ್ಲಬ್‌ಗೆ ಸೇರಿದೆ.
ನಮ್ಮ ರಾಜಕೀಯ ಮತ್ತು ನೀತಿ ನಿರೂಪಣೆಯನ್ನು ಹೆಚ್ಚು ಹಿಂದೂ ಕೇಂದ್ರಿತವಾಗಿ ಮಾಡುವುದು ಭಾರತಕ್ಕೆ ನೆರವಾಗುತ್ತದೆಯೇ? ಇತರ ದೇಶಗಳ ಸ್ವಾತಂತ್ರ್ಯಾನಂತರದ ಇತಿಹಾಸವು ನೆಮ್ಮದಿಯ ಸೂಚನೆಗಳನ್ನು ತೋರಿಸುವುದಿಲ್ಲ. ಶ್ರೀಲಂಕಾ ಅಂಥ ನಿರ್ದಿಷ್ಟ ವರ್ತಮಾನದ ಎಚ್ಚರಿಕೆಯ ಕಥೆಯಾಗಿದೆ. ದಕ್ಷಿಣ ಏಶ್ಯದ ಎಲ್ಲಾ ರಾಷ್ಟ್ರಗಳಲ್ಲಿ, ಶ್ರೀಲಂಕಾ ಅತ್ಯುತ್ತಮ ಮಾನವ ಅಭಿವೃದ್ಧಿ ಸೂಚಕಗಳನ್ನು ಹೊಂದಿದೆ - ಅತ್ಯುತ್ತಮ ವಿದ್ಯಾವಂತ ಜನಸಂಖ್ಯೆ, ಅತ್ಯುತ್ತಮ ಆರೋಗ್ಯ ಸೇವೆಗಳು, ಮಹಿಳೆಯರ ವಿರುದ್ಧ ಕನಿಷ್ಠ ತಾರತಮ್ಯ ಹೀಗೆ. ಇದು ಹೆಚ್ಚು ನುರಿತ ವೃತ್ತಿಪರ ವರ್ಗ, ಪ್ರವಾಸಿಗರನ್ನು ಆಕರ್ಷಿಸಲು ಸುಂದರವಾದ ಕಡಲತೀರಗಳು ಮತ್ತು ಐತಿಹಾಸಿಕ ತಾಣಗಳನ್ನು ಹೊಂದಿತ್ತು ಮತ್ತು ಹಿಂಸಾಚಾರದಿಂದ ಗುರುತಿಸದ ವಸಾಹತುಶಾಹಿ ಕಾಲವನ್ನು ಕಂಡಿತ್ತು (ವಿಭಜನೆಯ ಭಯಾನಕತೆಯಿಂದ ಪಾರಾಗಿತ್ತು). ಸಿಂಹಳೀಯ ಬೌದ್ಧ ಮತೀಯವಾದಿಗಳು ತಮಿಳು ಅಲ್ಪಸಂಖ್ಯಾತರ ಜೊತೆ ಹೊಂದಿಕೊಳ್ಳದೆ (ಅವರು ಹೆಚ್ಚಾಗಿ ಹಿಂದೂಗಳು), ಹೀಗೆ ಘೋರ ಅಂತರ್ಯುದ್ಧವನ್ನು ಹುಟ್ಟುಹಾಕದೇ ಇದ್ದಿದ್ದರೆ, ಶ್ರೀಲಂಕಾ ಇಂದು ಏಶ್ಯದ ಅತ್ಯಂತ ಸಮೃದ್ಧ ಮತ್ತು ಶಾಂತಿಯುತ ದೇಶಗಳಲ್ಲಿ ಒಂದಾಗಿರುತ್ತಿತ್ತು.
ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದೆ ಎಂದು ನಮ್ಮ ನಾಯಕರು ಹೆಮ್ಮೆಪಡುತ್ತಾರೆ. ಆದರೂ, ತಲಾ ಆದಾಯ, ಶಿಶು ಮರಣ, ಉದ್ಯೋಗಿಗಳಲ್ಲಿ ಮಹಿಳೆಯರ ಶೇಕಡಾವಾರು ಇತ್ಯಾದಿಗಳಂತಹ ನಿಜವಾಗಿಯೂ ಮುಖ್ಯವಾದ ಸೂಚಕಗಳ ವಿಷಯದಲ್ಲಿ ಭಾರತವು ತುಂಬಾ ಕೆಳಮಟ್ಟದಲ್ಲಿದೆ. ಒಟ್ಟಾರೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಏಶ್ಯದಲ್ಲಿ ಉತ್ತಮ ಸಾಧನೆ ತೋರುವ ದೇಶಗಳೆಂದರೆ, ಜಪಾನ್, ಸಿಂಗಾಪುರ್ ಮತ್ತು ದಕ್ಷಿಣ ಕೊರಿಯಾ. ಇವುಗಳಲ್ಲಿ ಜಪಾನ್ ಮತ್ತು ದಕ್ಷಿಣ ಕೊರಿಯಾ ಸ್ಪಷ್ಟವಾಗಿ ಪ್ರಜಾಪ್ರಭುತ್ವವಾದರೆ, ಸಿಂಗಾಪುರ ಭಾಗಶಃ ಪ್ರಜಾಪ್ರಭುತ್ವ. ಮೂರು ದೇಶಗಳಲ್ಲಿನ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಧರ್ಮದ ಉಪಸ್ಥಿತಿಯು ಈಗಲೂ ಅತ್ಯಂತ ಗೌಣವಾಗಿದೆ. ಅಯೋಧ್ಯೆಯಲ್ಲಿ ಭವ್ಯವಾದ ಹೊಸ ಮಂದಿರದ ಉದ್ಘಾಟನೆಯನ್ನು ಸಂಭ್ರಮಿಸಲು ರಾಜಕಾರಣಿಗಳು ಧಾವಿಸುತ್ತಿರುವಾಗ ಈ ಗಮನಾರ್ಹ ಸಂಗತಿಯು ನಮ್ಮನ್ನು ಒಂದು ಕ್ಷಣ ತಡೆದು ನಿಲ್ಲಿಸಬೇಕು.