ತಮ್ಮು ಅಚ್ಚಯ್ಯ ಮತ್ತು ಭಾರತೀಯ ಆಹಾರ ಚರಿತ್ರೆ

ಉತ್ತಮ ಆಹಾರ ಇತಿಹಾಸಕಾರ ಮತ್ತು ಬರಹಗಾರ ವಿಕ್ರಂ ಡಾಕ್ಟರ್, ಅಚ್ಚಯ್ಯ ಅವರ ಸಾಹಿತ್ಯ ಪರಂಪರೆಯ ಬಗ್ಗೆ ಹೇಳುತ್ತಾರೆ: ‘‘ಆಹಾರದ ಉಲ್ಲೇಖಗಳನ್ನು ವಿವಿಧ ಪಠ್ಯಗಳಲ್ಲಿ ದಾಖಲಿಸುವ ಅವರ ಕೆಲಸ ತುಂಬಾ ವ್ಯಾಪಕ ಮತ್ತು ಸಮಗ್ರವಾಗಿದೆ. ಯಾವುದೇ ಆಹಾರದ ಬಗ್ಗೆ ಬರೆಯುವಾಗಲೂ ಅದರ ಬಗ್ಗೆ ಅವರೇನು ಹೇಳಿದ್ದಾರೆ ಎಂದು ನೋಡುವಂತಾಗಿದೆ.’’ ಇದನ್ನು ಓದುವಾಗ, ನಾನು ಅವರ ಮಾನಸಪುತ್ರನೆಂಬ ಕಾರಣಕ್ಕೆ ಹೆಮ್ಮೆ ಮತ್ತು ಸಮಾಧಾನದ ಭಾವನೆ ಮೂಡುತ್ತದೆ.

Update: 2023-10-08 05:59 GMT

ನನ್ನ ಮೊದಲ ಸಂಪಾದಕ ರುಕುನ್ ಅಡ್ವಾಣಿ ಒಮ್ಮೆ ತಮ್ಮನ್ನು ‘ಭಾರತೀಯ ಮತ್ತು ಆಂಗ್ಲೋ-ಯುರೋಪಿಯನ್ ಸಂಯೋಜಿತ ಹೈಬ್ರಿಡ್’ ಎಂದು ಬಣ್ಣಿಸಿಕೊಂಡರು. ಜಾತಿವಾದಿ ರಾಷ್ಟ್ರೀಯವಾದಿಗಳು ಕೇವಲ ವಿರೋಧಾಭಾಸಗಳಾಗಿ ನೋಡಬಹುದಾದ ವಿಭಿನ್ನ ಸಾಂಸ್ಕೃತಿಕ ಪ್ರಭಾವಗಳನ್ನು ಅವರು ತಮ್ಮೊಳಗೆ ಸಮನ್ವಯಗೊಳಿಸಲು ಪ್ರಯತ್ನಿಸುತ್ತಿದ್ದರು. ಈ ಸ್ವಯಂ ರೂಪಿಸಿಕೊಳ್ಳುವಿಕೆಯನ್ನು ನಾನು ನನ್ನದೂ ಹೌದೆಂದು ಪ್ರತಿಪಾದಿಸಬಹುದು. ನನ್ನಲ್ಲಿರುವ ಒಂದು ಆಂಗ್ಲೋ-ಯುರೋಪಿಯನ್ ಗುರುತು ಏನೆಂದರೆ, ಸ್ವದೇಶಿ ಜಾಗರಣ್ ಮಂಚ್ ಸದಸ್ಯರಂತೆ, ನಾನು ಕೇವಲ ಚಿಕ್ಕಪ್ಪ ಮತ್ತು ಚಿಕ್ಕಮ್ಮ, ಪೋಷಕರು ಮತ್ತು ಅಜ್ಜಿಯರನ್ನು ಮಾತ್ರ ಹೊಂದಿರಲಿಲ್ಲ. ನನಗೆ ಒಬ್ಬ ಗಾಡ್‌ಫಾದರ್ ಕೂಡ ಇದ್ದರು. ಈ ವಾರ ಅವರ ಜನ್ಮ ಶತಮಾನೋತ್ಸವವಾಗಿರುವುದರಿಂದ ಮತ್ತು ನನಗೆ ಗಾಡ್‌ಫಾದರ್ ಆಗಿದ್ದುದು ಅವರ ವಿಭಿನ್ನತೆಗಳಲ್ಲಿ ಕಡೆಯದಾಗಿದ್ದುದರಿಂದ ಅವರ ಬಗ್ಗೆ ನಾನಿಲ್ಲಿ ಬರೆಯುತ್ತಿದ್ದೇನೆ.

ಅಕ್ಟೋಬರ್ 6, 1923ರಂದು ಜನಿಸಿದ ಕೆ.ಟಿ. ಅಚ್ಚಯ್ಯ ಅವರು, ಭಾರತ ಸರಕಾರವು ಕೊಳ್ಳೇಗಾಲದಲ್ಲಿ ನಡೆಸುತ್ತಿದ್ದ ರೇಷ್ಮೆ ಫಾರ್ಮ್ ಅನ್ನು ನಿರ್ವಹಿಸುತ್ತಿದ್ದ ಒಬ್ಬ ಪರಿಣಿತ ರೇಷ್ಮೆ ಕೃಷಿಕರ ಮಗನಾಗಿದ್ದರು. ತಮ್ಮ ಹುಟ್ಟೂರಿನ ಹೆಸರನ್ನು ತಮ್ಮ ಹೆಸರಿನ ಮೊದಲಿಗೆ ಇಟ್ಟುಕೊಂಡಿದ್ದರು. ಅವರನ್ನು ಎಲ್ಲರೂ ಕರೆಯುತ್ತಿದ್ದುದು ತಮ್ಮು ಎಂದೇ. ಅವರು ನನ್ನ ತಂದೆಯ ಹಳೆಯ ಸ್ನೇಹಿತರಲ್ಲಿ ಒಬ್ಬರಾಗಿದ್ದರು. ಹಾಗಾಗಿಯೇ ನಾನು ಅವರ ಮಾನಸಪುತ್ರನಾದೆ. ಅವರಿಬ್ಬರೂ ಮೊದಲು ಭೇಟಿಯಾದದ್ದು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿ. ಅಲ್ಲಿ ಇಬ್ಬರೂ ರಸಾಯನಶಾಸ್ತ್ರ ಅಧ್ಯಯನ ಮಾಡಿದರು. ಅವರಿಬ್ಬರೂ ನಂತರ ಎಂ.ಎಸ್ಸಿ.ಗಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ಗೆ ಹೋದರು ಮತ್ತು ತಮ್ಮ ಬಿಡುವಿನ ಸಮಯದಲ್ಲಿ ಮೈಸೂರಿನ ಹಳ್ಳಿಯಲ್ಲಿ ಸೈಕಲ್ ತುಳಿಯುತ್ತ ಕಳೆಯುತ್ತಿದ್ದರು. ನನ್ನ ತಂದೆ ತಮ್ಮ ಪಿಎಚ್‌ಡಿಗಾಗಿ ಐಐಎಸ್‌ಸಿಯಲ್ಲೇ ಉಳಿದರು. ತಮ್ಮು ಅಚ್ಚಯ್ಯ ಲಿವರ್‌ಪೂಲ್‌ನಲ್ಲಿ ಡಾಕ್ಟರೇಟ್ ಪಡೆದರು. ಅವರು ಭಾರತಕ್ಕೆ ಹಿಂದಿರುಗಿದ ನಂತರ ಇಬ್ಬರ ನಡುವೆಯೂ ಸ್ನೇಹ ಮುಂದುವರಿಯಿತು. ಮತ್ತು ಆ ಗೆಳೆತನ 2002ರಲ್ಲಿ ತಮ್ಮು ನಿಧನರಾಗುವವರೆಗೂ ಉಳಿದಿತ್ತು.

ತಮ್ಮು ಅಚ್ಚಯ್ಯ ಅವರು ಆಹಾರ ವಿಜ್ಞಾನಿಯಾಗಿದ್ದರು. ಎಣ್ಣೆಕಾಳುಗಳ ತಜ್ಞರಾಗಿದ್ದರು. ವಿಜ್ಞಾನದ ಹಿನ್ನೆಲೆ ಮತ್ತು ಸಂತೋಷದ ಕಾಲೇಜು ನೆನಪುಗಳನ್ನು ಹೊಂದಿದ್ದರೂ, ನನ್ನ ತಂದೆ ಮತ್ತು ಅವರ ವ್ಯಕ್ತಿತ್ವಗಳು ವಿಭಿನ್ನವಾಗಿದ್ದವು. ತಮ್ಮು ಜೀವಮಾನ ಬ್ರಹ್ಮಚಾರಿ. ನನ್ನ ತಂದೆ ಅರವತ್ತು ವರ್ಷಗಳ ಕಾಲ ವೈಭವಯುತವಾದ ಸಂತೋಷದ ದಾಂಪತ್ಯವನ್ನು ಹೊಂದಿದ್ದರು. ನನ್ನ ತಂದೆ ತಮ್ಮ ಡಾಕ್ಟರೇಟ್ ನಂತರದ ಎಲ್ಲಾ ಸಂಶೋಧನೆಗಳನ್ನು ಒಂದೇ ಸ್ಥಳದಲ್ಲಿ, ಡೆಹ್ರಾಡೂನ್‌ನಲ್ಲಿರುವ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ಮಾಡಿದರು. ಆದರೆ ತಮ್ಮು ಲಿವರ್‌ಪೂಲ್‌ನಿಂದ ಮರಳಿದ ನಂತರ ಹೈದರಾಬಾದ್, ಮುಂಬೈ, ಮೈಸೂರು ಮತ್ತು ಬೆಂಗಳೂರಿನಲ್ಲಿ ಉದ್ಯೋಗಗಳಲ್ಲಿದ್ದರು. ನನ್ನ ತಂದೆಗೆ ಸಂಗೀತವೆಂದರೆ ಅಷ್ಟಕ್ಕಷ್ಟೆ. ತಮ್ಮು ಶಾಸ್ತ್ರೀಯ ಸಂಗೀತದಲ್ಲಿ ಗಂಭೀರವಾದ ಆಸಕ್ತಿಯನ್ನು ಹೊಂದಿದ್ದರು ಮತ್ತು ಜಾಝ್ ಮತ್ತು ಬ್ಲೂಸ್‌ಗಳನ್ನೂ ಇಷ್ಟಪಡುತ್ತಿದ್ದರು. ನನ್ನ ತಂದೆಗೆ ಭಾಷೆ ಇಷ್ಟವೇ ಹೊರತು ಸಾಹಿತ್ಯವಲ್ಲ; ಅದಕ್ಕಾಗಿಯೇ ಡೆಹ್ರಾಡೂನ್‌ನಲ್ಲಿರುವ ನಮ್ಮ ಮನೆಯಲ್ಲಿ ಹೆಚ್ಚಿನ ಪುಸ್ತಕಗಳು ನಿಘಂಟುಗಳಾಗಿದ್ದವು. ಆದರೆ ತಮ್ಮು ಕಾದಂಬರಿ ಮತ್ತು ಕೆಲವು ಕವನಗಳನ್ನೂ ಓದಿದ್ದರು.

ತಮ್ಮು ಅಚ್ಚಯ್ಯ ಅವರು ಕೊಡವ ಜನಾಂಗದವರಾಗಿದ್ದರು. ತಮ್ಮ ಸಮರ ಶೌರ್ಯದ ಬಗ್ಗೆ ಹೆಮ್ಮೆಪಡುವ ಮತ್ತು ಸೇನಾ ಅಧಿಕಾರಿಗಳು, ಹಾಕಿ ಆಟಗಾರರನ್ನು ಕೊಟ್ಟ ಸಮುದಾಯದಲ್ಲಿ ಜನಿಸಿದ್ದರು. ತಮ್ಮು ಅವರ ಸಹೋದರ ಅರಣ್ಯಾಧಿಕಾರಿಯಾಗಿದ್ದರು ಮತ್ತು ಅವರ ಇಬ್ಬರು ಸಹೋದರಿಯರು ಸೇನಾಧಿಕಾರಿಗಳನ್ನು ವಿವಾಹವಾಗಿದ್ದರು. ಒಬ್ಬ ವಿದ್ವಾಂಸ, ಓದುಗ ಮತ್ತು ಸಂಗೀತ ಪ್ರೇಮಿಯಾಗಿ, ನನ್ನ ಗಾಡ್ ಫಾದರ್ ಪೂರ್ಣವಾಗಿ ವಿಶಿಷ್ಟ ಕೊಡವರಾಗಿದ್ದರು. ನಾನು ಗುಹಾರ ಮಗನಾದ ಕಾರಣ, ಅವರು ನನ್ನನ್ನು ಆಪ್ತತೆಯಿಂದ ಕಂಡರು. ಗುಹಾಗಿಂತ ಭಿನ್ನವಾಗಿ ನಾನು ಸಂಗೀತವನ್ನು ಆಲಿಸಿದ್ದರಿಂದ ಇನ್ನೂ ಆಪ್ತತೆ ತೋರಿಸಿದರು. ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಅವರು ನನಗೆ ಪಾಲ್ ರೋಬ್ಸನ್ ಅವರನ್ನು ಪರಿಚಯಿಸಿದರು. ನಾನು ಅವರ ಮುಂಬೈ ಫ್ಲ್ಯಾಟ್‌ನಲ್ಲಿ ಅವರನ್ನು ಭೇಟಿ ಮಾಡಿದಾಗ ಗ್ರಾಮಾಫೋನ್‌ನಲ್ಲಿ ನನಗೆ ‘ಜೋ ಹಿಲ್’ ಕೇಳಿಸಿದರು. ಆದರೆ ನನ್ನ ಮೂವತ್ತರ ಹರೆಯದಲ್ಲಿ ನಾನು ಅವರನ್ನು ಚೆನ್ನಾಗಿ ಪರಿಚಯ ಮಾಡಿಕೊಂಡಿದ್ದು, ಅವರು ಮತ್ತು ನನ್ನ ತಂದೆ-ತಾಯಿ ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಲು ಬಂದ ನಂತರ. 1980 ಮತ್ತು 1990ರ ದಶಕದಲ್ಲಿ ನಾನು ಇಂದಿರಾನಗರದಲ್ಲಿನ ಅವರ ಅಪಾರ್ಟ್ ಮೆಂಟ್‌ನಲ್ಲಿ ಅವರನ್ನು ನೋಡಲು ಆಗಾಗ ಹೋಗು ತ್ತಿದ್ದೆ. ಅಲ್ಲಿ ಅವರು ತಮ್ಮ ಪುಸ್ತಕಗಳು, ಅವರ ರೆಕಾರ್ಡ್ ಗಳು ಮತ್ತು ಅವರ ಬೆಕ್ಕುಗಳ ನಡುವೆ ಇರುತ್ತಿದ್ದರು.

ನನಗೆ ತಮ್ಮು ಅವರು ತಮ್ಮ ಸಮಯ, ಅವರ ವಸ್ತುಗಳು ಮತ್ತು ಪ್ರೋತ್ಸಾಹವನ್ನು ನೀಡುವ ವಿಚಾರದಲ್ಲಿ ತುಂಬಾ ಉದಾರಿಯಾಗಿದ್ದರು. ಅವರು ನನಗೆ ಕೆಲವು ಪುಸ್ತಕಗಳನ್ನೂ ಉಡುಗೊರೆಯಾಗಿ ನೀಡಿದ್ದರು. ಅವುಗಳಲ್ಲಿ ಎಸ್. ಗೋಪಾಲ್ ಅವರು ಬರೆದ ಅವರ ತಂದೆ, ತತ್ವಜ್ಞಾನಿ ಎಸ್. ರಾಧಾಕೃಷ್ಣನ್ ಅವರ ಅತ್ಯುತ್ತಮ ಜೀವನಚರಿತ್ರೆಯ, ಸಹಿ ಮಾಡಿದ ಮೊದಲ ಆವೃತ್ತಿಯೂ ಒಂದು. ನಾನು ಮೊದಲು ಪತ್ರಿಕಾ ಮಾಧ್ಯಮದಲ್ಲಿ ಹೋರಾಟಗಳ ಬಗ್ಗೆ ಬರೆಯಲು ಪ್ರಾರಂಭಿಸಿದಾಗ, ನನ್ನ ಮಧ್ಯಮ ವರ್ಗದ, ರಾಜಕೀಯದಿಂದ ದೂರವಿದ್ದ ಪೋಷಕರು ಹೆದರಿದ್ದರು. ಆದರೆ ಅವರು ನನಗೆ ದಿಟ್ಟತನದಿಂದ ಇರಲು ಹೇಳುತ್ತಲೇ ನನ್ನ ಪೋಷಕರ ಭಯವನ್ನೂ ನಿವಾರಿಸಿದ್ದರು.

ತಮ್ಮು ಅಚ್ಚಯ್ಯ ಅವರ ವ್ಯಕ್ತಿತ್ವದಲ್ಲಿ ಭಾರತೀಯ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ವಿಲಕ್ಷಣ ಸಂಯೋಜನೆ ಇತ್ತು. ಆದರೂ ರುಕುನ್ ಅಡ್ವಾಣಿ ಅಥವಾ ನನಗಿಂತ ಹೆಚ್ಚಿನ ಮಟ್ಟದ್ದಾಗಿತ್ತು. ಅವರು ಪಟ್ಟಮಾಲ್ ಮತ್ತು ಪವರೊಟ್ಟಿ, ಬೋದಿಲೇರ್ ಮತ್ತು ಭಾರತಿ ಹಾಗೂ ಅತ್ಯುತ್ತಮ ರಸಂ ಮತ್ತು ಅತ್ಯುತ್ತಮವಾದ ಕೆಂಪು ವೈನ್‌ನ ಸೂಕ್ಷ್ಮತೆಗಳನ್ನು ಪ್ರಶಂಸಿಸಬಲ್ಲವರಾಗಿದ್ದರು. ಒಂಟಿ ವ್ಯಕ್ತಿಯಾದ ಡಾ. ಅಚ್ಚಯ್ಯ ಅವರು ಅಡುಗೆಯ ಬಗ್ಗೆಯೂ ಉತ್ಸಾಹವನ್ನು ಬೆಳೆಸಿಕೊಂಡಿದ್ದರು. ಅವರು ಭಾರತ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದರು ಮತ್ತು ವಿವಿಧ ಪಾಕಪದ್ಧತಿಗಳನ್ನು ಪ್ರಯೋಗಿಸಿ ನೋಡಿದ್ದರು. ಇದು ಅವರಿಗೆ ಆಹಾರ ಚರಿತ್ರೆಯಲ್ಲಿ ಆಸಕ್ತಿ ಮೂಡಲು ಕಾರಣವಾಯಿತು. ಉದಾಹರಣೆಗೆ, ಮೆಣಸಿನಕಾಯಿ ಉಪಖಂಡಕ್ಕೆ ಹೇಗೆ ಬಂತು, ದಕ್ಷಿಣ ಭಾರತದ ಪ್ರಮುಖ ಆಹಾರವಾದ ಇಡ್ಲಿಯ ಮೂಲ ಯಾವುದು, ಮೊಗಲ್ ಚಕ್ರವರ್ತಿಗಳು ಕೂಡ ಏಕೆ ಗಂಗಾಜಲವನ್ನು ಕುಡಿಯಲು ಇಷ್ಟಪಡುತ್ತಿದ್ದರು ಇತ್ಯಾದಿಗಳತ್ತ ಕುತೂಹಲ ಹೊರಳಿತು.

ಪ್ರೊಟೀನ್ ರಸಾಯನಶಾಸ್ತ್ರದ ಮೇಲೆ ಮಹತ್ವದ ಕೆಲಸ ಮಾಡಿದ ನಂತರ, ‘ಕೆಮಿಕಲ್ ಡೆರಿವೇಟಿವ್ಸ್ ಆಫ್ ಕ್ಯಾಸ್ಟರ್ ಆಯಿಲ್’ ಎಂಬಿತ್ಯಾದಿ ಪ್ರಬಂಧಗಳನ್ನು ಪ್ರಕಟಿಸಿದ ನಂತರ, ಡಾ. ಅಚ್ಚಯ್ಯ ಅವರು ತಮ್ಮ ನಿವೃತ್ತಿ ಜೀವನದಲ್ಲಿ ಸಾಮಾನ್ಯ ಓದುಗರಿಗಾಗಿ ಪ್ರಬಂಧಗಳನ್ನು ಬರೆಯಲು ಪ್ರಾರಂಭಿಸಿದರು. 1988ರಲ್ಲಿ ಅವರ ಫ್ಲ್ಯಾಟ್‌ಗೆ ಹೋದಾಗ, ನನಗೆ ನೆನಪಿರುವಂತೆ, ಅವರು ನನಗೆ ತೋರಿಸಲು ಝೆರಾಕ್ಸ್ ಪ್ರತಿಗಳ ಕಟ್ಟೊಂದನ್ನು ತೆಗೆದಿದ್ದರು. ಅದು, ಅವರು ಉತ್ತಮ ಪತ್ರಕರ್ತರಾಗಿದ್ದ ಮತ್ತು ಈಗ ಯಾರೂ ನೆನಪಿಸಿಕೊಳ್ಳದ ಸುರೇಂದ್ರ ಝಾ ಸಂಪಾದಕತ್ವದ ಮತ್ತು ಮುಂಬೈನ ನೆಹರೂ ಕೇಂದ್ರದಿಂದ ಪ್ರಕಟಿಸಲಾಗುತ್ತಿದ್ದ ಸೈನ್ಸ್ ಏಜ್ ಜರ್ನಲ್‌ಗಾಗಿ ಭಾರತೀಯ ಆಹಾರದ ಇತಿಹಾಸದ ಕುರಿತು ಬರೆದ ಹದಿನೆಂಟು ಲೇಖನಗಳ ಸರಣಿಯಾಗಿತ್ತು. ಇದನ್ನು ಮನೆಗೆ ತೆಗೆದುಕೊಂಡು ಹೋಗಿ ಓದಬಹುದೇ? ಪುಸ್ತಕವಾಗಿ ಪ್ರಕಟಿಸುವ ಯೋಚನೆ ಇದೆಯೇ? ಎಂದು ನಾನವರನ್ನು ಕೇಳಿದ್ದೆ.

ನಾನು ಅದನ್ನು ಮನೆಗೆ ತೆಗೆದುಕೊಂಡು ಹೋಗಿ ನೋಡಿದೆ. ನಂತರ ನಾನು ತಮ್ಮು ಮಾಮಾಗೆ ಕರೆ ಮಾಡಿ, ಪ್ರಬಂಧಗಳು ಆಸಕ್ತಿದಾಯಕವಾಗಿವೆ. ನನ್ನ ಸ್ನೇಹಿತ, ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್‌ನ ರುಕುನ್ ಅಡ್ವಾಣಿ ಅದನ್ನು ಪುಸ್ತಕ ಮಾಡುತ್ತಾರೆಯೇ ಎಂದು ಕೇಳಬಹುದು. ಅವರಿಗೆ ಮಾತಾಡಲೇ ಎಂದು ಕೇಳಿದೆ. ಅವರು ಒಪ್ಪಿದರು. ನಾನು ಮಾತಾಡಿದೆ. ಬಳಿಕ ಬೆಂಗಳೂರಿಗೆ ಬಂದ ರುಕುನ್ ಅಡ್ವಾಣಿ ಅವರು ಡಾ. ಅಚ್ಚಯ್ಯ ಅವರನ್ನು ಭೇಟಿಯಾದರು ಮತ್ತು ಝೆರಾಕ್ಸ್ ಪ್ರತಿಗಳ ಕಟ್ಟನ್ನು ದಿಲ್ಲಿಗೆ ಒಯ್ದರು. ಶೀಘ್ರದಲ್ಲೇ ನನ್ನ ಗಾಡ್‌ಫಾದರ್ ಮತ್ತು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ನಡುವೆ ಆ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಬಗ್ಗೆ ಒಪ್ಪಂದವಾಯಿತು. ಸಾಮಾನ್ಯ ಓದುಗರಿಗೆ ಭಾರತೀಯ ಆಹಾರದ ಬಗ್ಗೆ ಹೇಳುವ ಅಪರೂಪದ ಕೃತಿ ಎಂದು ಅದರ ಸಂಪಾದಕರು ‘ಇಂಡಿಯನ್ ಫುಡ್: ಎ ಹಿಸ್ಟಾರಿಕಲ್ ಕಂಪ್ಯಾನಿಯನ್’ ಬಗ್ಗೆ ಉಲ್ಲೇಖಿಸಿದ್ದರು. ಅದಾದ ಬಳಿಕ ಡಾ. ಅಚ್ಚಯ್ಯ ಅವರ ಮತ್ತೆರಡು ಪುಸ್ತಕಗಳಾದ ‘ಎ ಹಿಸ್ಟಾರಿಕಲ್ ಡಿಕ್ಷನರಿ ಆಫ್ ಇಂಡಿಯನ್ ಫುಡ್’ ಮತ್ತು ‘ದಿ ಫುಡ್ ಇಂಡಸ್ಟ್ರೀಸ್ ಆಫ್ ಬ್ರಿಟಿಷ್ ಇಂಡಿಯಾ’ ಕೂಡ ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್‌ನಿಂದಲೇ ಪ್ರಕಟಗೊಂಡವು.

ಈ ಪುಸ್ತಕಗಳು ಅವರ ಜೀವಿತಾವಧಿಯ ಸಂಶೋಧನೆ, ಓದುವಿಕೆ ಮತ್ತು ಪ್ರಯೋಗಗಳ ಫಲಗಳಾಗಿದ್ದವು. ಡಾ ಅಚ್ಚಯ್ಯ ಅವರು ವಿವಿಧ ವಿದ್ವತ್ಪೂರ್ಣ ವಲಯಗಳು ಮತ್ತು ಭಾಷೆಗಳಿಂದ ಇವೆಲ್ಲವುಗಳ ಮೂಲವನ್ನು ಹುಡುಕಿ ತೆಗೆದಿದ್ದರು. ಮಾನವಿಕ ವಿಷಯಗಳಲ್ಲಿ ಆಳವಾದ ಆಸಕ್ತಿ ಹೊಂದಿದ್ದ ವಿಜ್ಞಾನಿ, ಸ್ವತಃ ಕನ್ನಡ, ತಮಿಳು, ಇಂಗ್ಲಿಷ್, ಕೊಡವ ಮತ್ತು ಹಿಂದಿ ಭಾಷೆಗಳನ್ನು ಚೆನ್ನಾಗಿ ತಿಳಿದವರಾಗಿದ್ದರು. ಸಂಸ್ಕೃತ, ಉರ್ದು ಮತ್ತು ತೆಲುಗು ಭಾಷೆಗಳನ್ನೂ ಸ್ವಲ್ಪ ಮಟ್ಟಿಗೆ ತಿಳಿದಿದ್ದರು.

ತಮ್ಮು ಮಾಮಾ 2002ರಲ್ಲಿ ನಿಧನರಾದರು. ಆದರೆ ಅವರ ಬೌದ್ಧಿಕ ಪರಂಪರೆ ಜೀವಂತವಾಗಿದೆ. ನಾನು ಇತ್ತೀಚೆಗೆ ಓದಿದ, ನಂದಿತಾ ಹಕ್ಸರ್ ಅವರ ‘The Flavors of Nationalism: Recipes for Love, Hate and Friendship’ (ಸ್ಪೀಕಿಂಗ್ ಟೈಗರ್, 2018) ಕೃತಿಯಲ್ಲಿ ಅವರ ಸಂಶೋಧನೆಯ ಬಗ್ಗೆ ಅನೇಕ ಮೆಚ್ಚುಗೆಯ ಉಲ್ಲೇಖಗಳಿವೆ. ಗೋವು ಸೇರಿದಂತೆ ಅನೇಕ ಪ್ರಾಣಿಗಳ ಮಾಂಸವನ್ನು ಮಾರಾಟ ಮಾಡಿದ ಪ್ರಾಚೀನ ಭಾರತದಲ್ಲಿನ ಆಹಾರ ಮಾರುಕಟ್ಟೆಗಳ ಕುರಿತ ಅವರ ದಾಖಲಾತಿಯ ಬಗ್ಗೆ ಹಕ್ಸರ್ ಹೀಗೆ ಹೇಳಿದ್ದಾರೆ: ‘‘ಕೆ.ಟಿ. ಅಚ್ಚಯ್ಯ ಅವರು ಈಗ ಇಲ್ಲ. ಇದ್ದಿದ್ದರೆ ಅವರಿಗೆ ಹಿಂದೂ ತೀವ್ರವಾದಿಗಳು ದೇಶವಿರೋಧಿ ಎಂಬ ಪಟ್ಟ ಕಟ್ಟಿರುತ್ತಿದ್ದರು.’’

ದಿಲ್ಲಿ ಮೂಲದ ಲೇಖಕಿ ಮರಿಯಮ್ ರೇಶಿ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಅಚ್ಚಯ್ಯ ಅವರ ಬಗ್ಗೆ ಹೀಗೆ ಬರೆದಿದ್ದಾರೆ: ‘‘ಭಾರತೀಯ ಪಕ್ಷಿವಿಜ್ಞಾನಕ್ಕೆ ಸಲೀಂ ಅಲಿ ಹೇಗೆ ಶ್ರೇಷ್ಠರೋ, ಭಾರತೀಯ ಪಾಕ ಚರಿತ್ರೆಗೆ ಶ್ರೇಷ್ಠರು ಕೊಳ್ಳೇಗಾಲ ತಮ್ಮು ಅಚ್ಚಯ್ಯ.’’ ಅವರು ಹೇಳಿರುವ ಮತ್ತೊಂದು ಮಾತು: ‘‘ಅವರು ವೈಯಕ್ತಿಕವಾಗಿ ತರಬೇತಿ ಪಡೆಯದವರಿರಬಹುದು ಅಥವಾ ಕಲಿಸದಿರಬಹುದು. ಆದರೆ ಹೆಚ್ಚಿನ ಆಹಾರ ಉದ್ಯಮದ ವೃತ್ತಿಪರರು, ಬಾಣಸಿಗರು ಮತ್ತು ಆಹಾರ ಬರಹಗಾರರ ಪಾಲಿಗೆ ಅಚ್ಚಯ್ಯ ಅವರು ಆಚಾರ್ಯರಾಗಿ ಉಳಿದಿದ್ದಾರೆ.’’

ಉತ್ತಮ ಆಹಾರ ಇತಿಹಾಸಕಾರ ಮತ್ತು ಬರಹಗಾರ ವಿಕ್ರಂ ಡಾಕ್ಟರ್, ಅಚ್ಚಯ್ಯ ಅವರ ಸಾಹಿತ್ಯ ಪರಂಪರೆಯ ಬಗ್ಗೆ ಹೇಳುತ್ತಾರೆ: ‘‘ಆಹಾರದ ಉಲ್ಲೇಖಗಳನ್ನು ವಿವಿಧ ಪಠ್ಯಗಳಲ್ಲಿ ದಾಖಲಿಸುವ ಅವರ ಕೆಲಸ ತುಂಬಾ ವ್ಯಾಪಕ ಮತ್ತು ಸಮಗ್ರವಾಗಿದೆ. ಯಾವುದೇ ಆಹಾರದ ಬಗ್ಗೆ ಬರೆಯುವಾಗಲೂ ಅದರ ಬಗ್ಗೆ ಅವರೇನು ಹೇಳಿದ್ದಾರೆ ಎಂದು ನೋಡುವಂತಾಗಿದೆ.’’ ಇದನ್ನು ಓದುವಾಗ, ನಾನು ಅವರ ಮಾನಸಪುತ್ರನೆಂಬ ಕಾರಣಕ್ಕೆ ಹೆಮ್ಮೆ ಮತ್ತು ಸಮಾಧಾನದ ಭಾವನೆ ಮೂಡುತ್ತದೆ. ತಮ್ಮುಮಾಮಾ ಅವರನ್ನು ರುಕುನ್ ಅಡ್ವಾಣಿಗೆ ಪರಿಚಯಿಸುವ ಮೂಲಕ ನಾನು ಇಬ್ಬರಿಗೂ ಸಲ್ಲಿಸಬೇಕಾಗಿದ್ದ ಋಣವನ್ನು ಸ್ವಲ್ಪವಾದರೂ ತೀರಿಸಿದಂತಾಯಿತು ಎನ್ನಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ರಾಮಚಂದ್ರ ಗುಹಾ

contributor

Similar News