ಬಿಜೆಪಿಯೇತರ ರಾಜ್ಯ ಸರಕಾರಗಳ ಮುಗಿಯದ ಹೋರಾಟ

ಜಗನ್ ರೆಡ್ಡಿಯವರ ಮೃದುವಾದ ವಿಮರ್ಶಾತ್ಮಕ ನಿಲುವು ಇನ್ನಷ್ಟು ಉಗ್ರರೂಪ ತಾಳಬಹುದೇ ಅಥವಾ ತೆಲಂಗಾಣದ ಹೊಸ ಕಾಂಗ್ರೆಸ್ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೆಚ್ಚಿನ ತೆರಿಗೆ ಪಾಲು ಮತ್ತು ಕೇಂದ್ರದ ನ್ಯಾಯಯುತ ನಡೆಗಾಗಿ ಕರ್ನಾಟಕದ ತಮ್ಮ ಪಕ್ಷದ ಸಹವರ್ತಿಗಳೊಂದಿಗೆ ಬೇಡಿಕೆಯಿಡುತ್ತಾರೆಯೇ ಎಂದು ಹೇಳುವುದು ಕಷ್ಟ. ಆದರೆ ಈ ಇಬ್ಬರು ಮುಖ್ಯಮಂತ್ರಿಗಳು ದೂರವೇ ಉಳಿದಿದ್ದರೂ, ಬಿಜೆಪಿ ಪ್ರಾಬಲ್ಯದ ಕೇಂದ್ರ ಸರಕಾರ ಮತ್ತು ಬಿಜೆಪಿಯೇತರ ರಾಜ್ಯಗಳಾದ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಪಂಜಾಬ್ ನಡುವೆ ನಡೆಯುತ್ತಿರುವ ಸಂಘರ್ಷವು ತೀವ್ರ ಕಳವಳಕಾರಿಯಾಗಿದೆ. ನಾನು ಈಗಾಗಲೇ ಕೇಳಿರುವಂತೆ, ಈ ಸಂಘರ್ಷಗಳು ಎಲ್ಲಿಗೆ ಮುಟ್ಟಬಹುದು?

Update: 2024-02-24 04:39 GMT

2019ರಲ್ಲಿ ನರೇಂದ್ರ ಮೋದಿ ಮತ್ತು ಅವರ ಪಕ್ಷವು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದಂದಿನಿಂದಲೂ ಕೇಂದ್ರ ಸರಕಾರ ಮತ್ತು ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳ ನಡುವಿನ ಸಂಘರ್ಷ ತೀವ್ರಗೊಂಡಿದೆ. ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ಈ ಮೂರು ರಾಜ್ಯಗಳಂತೂ ಸಂಘರ್ಷದ ಅಧಿಕೇಂದ್ರವಾಗಿವೆ. ಪ್ರತಿ ಪ್ರಕರಣದಲ್ಲೂ, ದಿಲ್ಲಿಯಿಂದ ನೇಮಕಗೊಂಡ ರಾಜ್ಯಪಾಲರು ಕೇಂದ್ರದಲ್ಲಿನ ಆಡಳಿತಾರೂಢ ಪಕ್ಷದ ಪರವಾಗಿ ಪಕ್ಷಪಾತದಿಂದ ನಡೆದುಕೊಳ್ಳುತ್ತಿದ್ದಾರೆ. ಪ್ರತಿಯೊಂದು ಸಂದರ್ಭದಲ್ಲೂ, ಬಿಜೆಪಿಯೇತರ ಆಡಳಿತವಿರುವ ಈ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯಕ್ಕೆ ಬರಬೇಕಿರುವ ಹಣದ ನಿರಾಕರಣೆ, ತಮ್ಮ ರಾಜ್ಯದ ಸಾಂಸ್ಕೃತಿಕ ಪರಂಪರೆಯ ಕಡೆಗಣನೆ ಇತ್ಯಾದಿಯಾಗಿ ಕೇಂದ್ರ ಸರಕಾರದ ವಿರುದ್ಧ ಮಾಡಿರುವ ದೂರುಗಳ ಸರಮಾಲೆಯೇ ಇದೆ.

ಕೇಂದ್ರ ಮತ್ತು ಈ ಮೂರು ರಾಜ್ಯಗಳ ನಡುವಿನ ಸಂಘರ್ಷಗಳು ಅತ್ಯಂತ ಕಹಿಯಾಗಿವೆ. ಎರಡೂ ಕಡೆಯವರಲ್ಲಿ ಯಾರೊಬ್ಬರೂ ಬಿಟ್ಟುಕೊಟ್ಟಿಲ್ಲ. ರಾಜಕೀಯ ಬದ್ಧತೆ ಮತ್ತು ವಿವಾದಗಳ ವಿಷಯದಲ್ಲಿ, ಬಿಜೆಪಿಯ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಟಿಎಂಸಿಯ ಮಮತಾ ಬ್ಯಾನರ್ಜಿ, ಡಿಎಂಕೆಯ ಎಂ.ಕೆ. ಸ್ಟಾಲಿನ್ ಮತ್ತು ಸಿಪಿಐ (ಎಂ)ನ ಪಿಣರಾಯಿ ವಿಜಯನ್ ಅವರಲ್ಲಿ ತಮ್ಮ ಎದುರಾಳಿಗಳನ್ನು ನೋಡುತ್ತಿರುವಂತಿದೆ.

ಇತ್ತೀಚಿನ ತಿಂಗಳುಗಳಲ್ಲಿ, ಇನ್ನೆರಡು ರಾಜ್ಯಗಳು ಈ ಭಿನ್ನಮತೀಯರ ಸಾಲನ್ನು ಸೇರಿಕೊಂಡಿವೆ. ಅವುಗಳೆಂದರೆ ಈಗ ಆಮ್ ಆದ್ಮಿ ಪಕ್ಷದ ಆಡಳಿತವಿರುವ ಪಂಜಾಬ್ ಮತ್ತು ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ. ಪಂಜಾಬ್ ರಾಜ್ಯಪಾಲರು ಮುಖ್ಯಮಂತ್ರಿ ಭಗವಂತ ಸಿಂಗ್ ಮಾನ್ ಅವರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ. ಕರ್ನಾಟಕದ ವಿಚಾರವನ್ನು ನೋಡುವುದಾದರೆ, ಕಳೆದ ಮೇ ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಕೇಂದ್ರದೊಂದಿಗೆ ಸಂಘರ್ಷ ನಡೆಸುತ್ತಲೇ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೋದಿ ಸರಕಾರ ತೆರಿಗೆ ಪಾಲಿಗೆ ಸಂಬಂಧಿಸಿದಂತೆ ಕರ್ನಾಟಕದ ವಿರುದ್ಧ ತಾರತಮ್ಯ ಮಾಡುತ್ತಿದೆ ಮತ್ತು ಬರಗಾಲದಿಂದ ಹಾನಿಗೊಳಗಾದ ರೈತರ ಸಂಕಷ್ಟಗಳ ಬಗ್ಗೆ ಅಸಡ್ಡೆ ತೋರುತ್ತಿದೆ ಎಂದು ಆರೋಪಿಸಿದ್ದಾರೆ. ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ಪ್ರತಿಭಟನಾ ಸಭೆಯನ್ನು ಕೂಡ ನಡೆಸುವುದರೊಂದಿಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಈ ವಿಚಾರವನ್ನು ರಾಷ್ಟ್ರ ರಾಜಧಾನಿಗೆ ಕೊಂಡೊಯ್ದರು. ಕೆಲ ದಿನಗಳ ನಂತರ ಕೇರಳದ ಮುಖ್ಯಮಂತ್ರಿ ಕೂಡ ತಮ್ಮ ರಾಜ್ಯದ ಪರವಾಗಿ ಇದೇ ರೀತಿಯ ಪ್ರತಿಭಟನೆಯನ್ನು ನಡೆಸಿದರು.

ಕೇಂದ್ರ ಸರಕಾರ ಮತ್ತು ಈ ರಾಜ್ಯ ಸರಕಾರಗಳ ನಡುವಿನ ಉದ್ವಿಗ್ನತೆ ಪತ್ರಿಕೆಗಳಲ್ಲಿ ವರದಿಯಾಗಿದ್ದರೂ, ಅವು ಎಷ್ಟರ ಮಟ್ಟಿಗೆ ಚರ್ಚೆಯಾಗಬೇಕಿತ್ತೋ ಆ ಮಟ್ಟದಲ್ಲಿ ಆಗಲಿಲ್ಲ. ಕೇರಳ, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನ ಒಟ್ಟಾರೆ ಜನಸಂಖ್ಯೆ 30 ಕೋಟಿಗಿಂತಲೂ ಹೆಚ್ಚಿದೆ. ಅಂದರೆ, ಭಾರತದ ಜನಸಂಖ್ಯೆಯ ಐದನೇ ಒಂದು ಭಾಗಕ್ಕಿಂತ ಹೆಚ್ಚು. ಜನಸಂಖ್ಯೆಗಿಂತಲೂ ಮುಖ್ಯವಾಗಿ, ಪ್ರತೀ ರಾಜ್ಯವು ಅದರದ್ದೇ ಸಾಂಸ್ಕೃತಿಕ ಇತಿಹಾಸದ ಆಧಾರದಲ್ಲಿ ವಿಶಿಷ್ಟವಾದ ಅಸ್ಮಿತೆಯನ್ನು ಹೊಂದಿದೆ. ಹಿಂದಿ ಅಥವಾ ಗುಜರಾತಿ ಭಾಷಿಕರಿಗೆ ಇದನ್ನು ಗ್ರಹಿಸಲು ಕಷ್ಟವಾಗಬಹುದಾದರೂ, ತಮಿಳು, ಮಲಯಾಳಂ, ಕನ್ನಡ, ಬಂಗಾಳಿ ಮತ್ತು ಪಂಜಾಬಿ ಭಾಷಿಕರು ತಮ್ಮ ಭಾಷೆ ಮತ್ತು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗಳ ಕುರಿತಾಗಿ ಹೊಂದಿರುವ ಪ್ರೇಮ ಸಮರ್ಥನೀಯವಾಗಿದೆ. ಇದಲ್ಲದೆ, ಈ ಪ್ರತಿಯೊಂದು ರಾಜ್ಯವೂ ದೇಶಕ್ಕೆ ತನ್ನದೇ ಕೊಡುಗೆಯ ವಿಚಾರವಾಗಿ ಹೆಮ್ಮೆಯುಳ್ಳದ್ದಾಗಿದೆ.

ಶಿಕ್ಷಣ, ಆರೋಗ್ಯ ಮತ್ತು ಲಿಂಗ ಸಮಾನತೆಯ ವಿಷಯದಲ್ಲಿ ಕೇರಳ ಮತ್ತು ತಮಿಳುನಾಡು ದೇಶದಲ್ಲೇ ಅತ್ಯಂತ ಪ್ರಗತಿಶೀಲ ರಾಜ್ಯಗಳಾಗಿವೆ. ತಮಿಳುನಾಡು ಕೈಗಾರಿಕಾ ಶಕ್ತಿ ಕೇಂದ್ರವೂ ಆಗಿದೆ. ಕರ್ನಾಟಕವು ವೈಜ್ಞಾನಿಕ ಸಂಶೋಧನೆಯಲ್ಲಿ ಬಹಳ ಹಿಂದಿನಿಂದಲೂ ಮತ್ತು ಇತ್ತೀಚಿನ ದಶಕಗಳಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದೆ. ನಮ್ಮನ್ನು ಬ್ರಿಟಿಷರು ಆಳುತ್ತಿದ್ದಾಗ ಕೆಲವು ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ಕೊಟ್ಟಿದ್ದ ಬಂಗಾಳವು, ಸ್ವಾತಂತ್ರ್ಯದ ನಂತರ ಕೆಲವು ಅತ್ಯುತ್ತಮ ಸಂಗೀತಗಾರರು, ಚಲನಚಿತ್ರ ನಿರ್ಮಾಪಕರು ಮತ್ತು ವಿದ್ವಾಂಸರನ್ನು ನೀಡಿದೆ. ಪಂಜಾಬ್‌ನ ಸಿಖ್ಖರು ನಮ್ಮ ಆಹಾರ ಭದ್ರತೆಗೆ ಮತ್ತು ನಮ್ಮ ಸಶಸ್ತ್ರ ಪಡೆಗಳಿಗೆ ಬಹುಶಃ ದೇಶದ ಯಾವುದೇ ಸಮುದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡಿದ್ದಾರೆ.

ಐದೂ ರಾಜ್ಯಗಳು ಸಾಕಷ್ಟು ದೊಡ್ಡ ಜನಸಂಖ್ಯೆಯನ್ನು ಹೊಂದಿರುವುದರ ಜೊತೆಗೆ, ಹಿಂದೆಯೂ ಈಗಲೂ ದೇಶಕ್ಕೆ ವೈವಿಧ್ಯಮಯ ಮತ್ತು ವಿಶಿಷ್ಟ ಕೊಡುಗೆಗಳನ್ನು ನೀಡಿವೆ ಮತ್ತು ಪ್ರತಿಯೊಂದು ರಾಜ್ಯವೂ ವಿಭಿನ್ನ ಪಕ್ಷದಿಂದ ಆಳಲ್ಪಟ್ಟಿವೆ. ಈ ರಾಜ್ಯಗಳು ಮತ್ತು ಕೇಂದ್ರದ ನಡುವೆ ನಡೆಯುತ್ತಿರುವ ಸಂಘರ್ಷ ನಿಜವಾಗಿಯೂ ನಮ್ಮ ದೇಶದ ಹಿತಾಸಕ್ತಿಯದ್ದಾಗಿದೆಯೆ?

ಆ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುವ ಮೊದಲು, ಒಂದು ಹೊಸ ಬೆಳವಣಿಗೆಯ ಬಗ್ಗೆ ಹೇಳಬೇಕಿದೆ. ಅದು ಸಾಕಷ್ಟು ಮಹತ್ವದ ಬ್ರೇಕಿಂಗ್ ನ್ಯೂಸ್. ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ, ಮುಂದಿನ ಸಾರ್ವತ್ರಿಕ ಚುನಾವಣೆ ಬಿಜೆಪಿಗೆ ಸಂಸತ್ತಿನಲ್ಲಿ ಸತತ ಮೂರನೇ ಗೆಲುವನ್ನು ತರಬಾರದು ಎಂಬುದು ತಮ್ಮ ಆಸೆ ಎಂದಿದ್ದಾರೆ. ಫೆಬ್ರವರಿ ಆರಂಭದಲ್ಲಿ ತನ್ನ ರಾಜ್ಯದ ಮಧ್ಯಂತರ ಬಜೆಟ್ ಕುರಿತು ಮಾತನಾಡಿದ ರೆಡ್ಡಿ, ಕೇಂದ್ರದ ಆಡಳಿತಾರೂಢ ಪಕ್ಷವು ಅಸ್ತಿತ್ವಕ್ಕಾಗಿ ಇತರ ಪಕ್ಷಗಳ ಮೇಲೆ ಅವಲಂಬಿತವಾಗಿದ್ದರೆ ಆಂಧ್ರದ ವಿಶೇಷ ಸ್ಥಾನಮಾನ ಕುರಿತ ಬಹುಕಾಲದ ಬೇಡಿಕೆ ಈಡೇರಲು ಉತ್ತಮ ಅವಕಾಶವಿರಲಿದೆ ಎಂದು ಹೇಳಿದ್ದರು. ಕೆಲವು ದಿನಗಳ ನಂತರ, ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ನೀಡಿದ ಉತ್ತರದಲ್ಲಿ ಅವರು ತಮ್ಮ ಅದೇ ಆಶಯವನ್ನು ಪುನರುಚ್ಚರಿಸಿದರು. ಒಂದು ಸುದ್ದಿ ಸೈಟ್ ವರದಿ ಮಾಡಿರುವ ಪ್ರಕಾರ, ಕೇಂದ್ರದಲ್ಲಿ ಯಾವುದೇ ಪಕ್ಷವು ಸಂಪೂರ್ಣ ಬಹುಮತವನ್ನು ಪಡೆಯಬಾರದು ಎಂಬುದು ನನ್ನ ಬಯಕೆ. ಆಗ ನಮ್ಮ ಬೆಂಬಲವನ್ನು ನೀಡಲು, ಅದಕ್ಕೆ ಪ್ರತಿಯಾಗಿ ವಿಶೇಷ ಸ್ಥಾನಮಾನವನ್ನು ನಾವು ಕೇಳಬಹುದು ಎಂದು ರೆಡ್ಡಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ, ಎಂ.ಕೆ. ಸ್ಟಾಲಿನ್ ಅಥವಾ ಪಿಣರಾಯಿ ವಿಜಯನ್ ಅವರಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎಂದಿಗೂ ನರೇಂದ್ರ ಮೋದಿ, ಬಿಜೆಪಿ ಅಥವಾ ಕೇಂದ್ರ ಸರಕಾರದ ವಿರುದ್ಧ ನಿಂತದ್ದಿಲ್ಲ. ವಾಸ್ತವವಾಗಿ, ಅವರು ವಿಧೇಯವಾಗಿರದಿದ್ದರೂ ಅಸಾಧಾರಣ ಅನುಸರಣೆಯ ಧೋರಣೆಯನ್ನು ಹೊಂದಿದ್ದಾರೆ. 370ನೇ ವಿಧಿ ರದ್ದತಿ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ರಾಜ್ಯ ಸ್ಥಾನದಿಂದ ಕೇಂದ್ರಾಡಳಿತ ಪ್ರದೇಶವಾಗಿಸುವುದನ್ನು ಅವರು ಉತ್ಸಾಹದಿಂದಲೇ ಬೆಂಬಲಿಸಿದ್ದರು. ನರೇಂದ್ರ ಮೋದಿಯವರ ಆಡಳಿತ ಕೌಶಲ್ಯವನ್ನು ಹೊಗಳಿದ್ದರಲ್ಲದೆ, ಅವರನ್ನು ದೂರದೃಷ್ಟಿ ಯುಳ್ಳವರೆಂದು ಕರೆದಿದ್ದರು. ತಮ್ಮ ಮತ್ತು ಪ್ರಧಾನಿ ನಡುವಿನ ಬಾಂಧವ್ಯ ಗಟ್ಟಿಯಾಗಿದೆ ಎಂದಿದ್ದರು. ಆದರೆ ಈಗ ಅವರು ಕೂಡ ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳ ಬಗೆಗಿನ ಮೋದಿ ಸರಕಾರದ ದುರಹಂಕಾರದ, ಅತಿರೇಕದ ಮತ್ತು ನಿಜವಾಗಿಯೂ ಸರ್ವಾಧಿಕಾರಿ ಧೋರಣೆಯ ನಡೆಯನ್ನು ಕುರಿತು ಚಿಂತಿತರಾಗಿರುವಂತೆ ಕಾಣುತ್ತಿದೆ.

ಕೇಂದ್ರದ ಸಮ್ಮಿಶ್ರ ಸರಕಾರಗಳು ಒಕ್ಕೂಟ ವ್ಯವಸ್ಥೆಗೆ ಉತ್ತಮ ಎಂಬ ಆಂಧ್ರ ಮುಖ್ಯಮಂತ್ರಿಯ ಅಭಿಪ್ರಾಯ ಸಂಪೂರ್ಣವಾಗಿ ಸರಿ. ಈ ಅಂಕಣಗಳಲ್ಲಿ ನಾನು ಹಿಂದೆ ವಾದಿಸಿದಂತೆ ಅವು ನ್ಯಾಯಾಂಗದ ಸ್ವಾಯತ್ತತೆಗೆ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಮತ್ತು ಸಮತೋಲಿತ ಆರ್ಥಿಕ ಬೆಳವಣಿಗೆಗೆ ಕೂಡ ಹೆಚ್ಚು ಅನುಕೂಲಕರವಾಗಿವೆ.

ಜಗನ್ ರೆಡ್ಡಿಯವರ ಮೃದುವಾದ ವಿಮರ್ಶಾತ್ಮಕ ನಿಲುವು ಇನ್ನಷ್ಟು ಉಗ್ರರೂಪ ತಾಳಬಹುದೇ ಅಥವಾ ತೆಲಂಗಾಣದ ಹೊಸ ಕಾಂಗ್ರೆಸ್ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೆಚ್ಚಿನ ತೆರಿಗೆ ಪಾಲು ಮತ್ತು ಕೇಂದ್ರದ ನ್ಯಾಯಯುತ ನಡೆಗಾಗಿ ಕರ್ನಾಟಕದ ತಮ್ಮ ಪಕ್ಷದ ಸಹವರ್ತಿಗಳೊಂದಿಗೆ ಬೇಡಿಕೆಯಿಡುತ್ತಾರೆಯೇ ಎಂದು ಹೇಳುವುದು ಕಷ್ಟ. ಆದರೆ ಈ ಇಬ್ಬರು ಮುಖ್ಯಮಂತ್ರಿಗಳು ದೂರವೇ ಉಳಿದಿದ್ದರೂ, ಬಿಜೆಪಿ ಪ್ರಾಬಲ್ಯದ ಕೇಂದ್ರ ಸರಕಾರ ಮತ್ತು ಬಿಜೆಪಿಯೇತರ ರಾಜ್ಯಗಳಾದ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಪಂಜಾಬ್ ನಡುವೆ ನಡೆಯುತ್ತಿರುವ ಸಂಘರ್ಷವು ತೀವ್ರ ಕಳವಳಕಾರಿಯಾಗಿದೆ. ನಾನು ಈಗಾಗಲೇ ಕೇಳಿರುವಂತೆ, ಈ ಸಂಘರ್ಷಗಳು ಎಲ್ಲಿಗೆ ಮುಟ್ಟಬಹುದು?

ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಸಚಿವರ ಮಾತುಗಳು ಹಾಗೂ ನಡೆಗಳನ್ನು ಗಮನಿಸಿದರೆ, ಬಿಜೆಪಿಯು ಈ ರಾಜ್ಯಗಳಿಗೆ ಹೆಚ್ಚನ್ನು (ಯಾವುದೇ ಕಾರಣದಿಂದಲೂ) ಬಿಟ್ಟುಕೊಡಲು ಬಯಸುವುದಿಲ್ಲ ಎಂದೇ ತೋರುತ್ತದೆ. ಇತರ ಪಕ್ಷಗಳ ಸರಕಾರಗಳಿರುವ ರಾಜ್ಯಗಳ ಹಿತಾಸಕ್ತಿ ಮತ್ತು ಆಶಯಗಳಿಗೆ ವಿರುದ್ಧವಾಗಿ ತನ್ನನ್ನು ತಾನು ಇನ್ನಷ್ಟು ದೃಢವಾಗಿ ಪ್ರತಿಪಾದಿಸಲು ಅದು ತನ್ನ ಬತ್ತಳಿಕೆಯಲ್ಲಿ ಮೂರು ತಂತ್ರಗಳನ್ನು ಹೊಂದಿದೆ, ಮೂರು ವಿಧಾನಗಳನ್ನು ಹೊಂದಿದೆ. ಮೊದಲನೆಯದು, ತನ್ನ ಮೂಗಿನ ನೇರಕ್ಕೇ ನಡೆಯುವುದು ಮತ್ತು ಕೋವಿಡ್ ಹೊತ್ತಿನಿಂದ ತನ್ನ ಹೆಚ್ಚುತ್ತಿರುವ ಅಧಿಕಾರವನ್ನು ಪ್ರತಿಪಕ್ಷಗಳ ಸರಕಾರಗಳಿರುವ ರಾಜ್ಯಗಳಿಗೆ ಸಂಪನ್ಮೂಲಗಳನ್ನು ಮತ್ತಷ್ಟು ನಿರಾಕರಿಸಲು ಮತ್ತು ಅವುಗಳ ಸ್ವಾಯತ್ತ ಕಾರ್ಯನಿರ್ವಹಣೆಯನ್ನು ಇನ್ನಷ್ಟು ನಿಗ್ರಹಿಸಲು ಬಳಸುವುದು. ಎರಡನೆಯದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಇತರ ಪಕ್ಷಗಳಿಗೆ ಬದಲಾಗಿ ಬಿಜೆಪಿಗೆ ಮತ ನೀಡುವಂತೆ ಜನರನ್ನು ಕೇಳುವುದು ಮತ್ತು ಡಬಲ್ ಇಂಜಿನ್ ಸರಕಾರವನ್ನು ಆರಿಸಿದರೆ ಅವರಿಗೆ ಹೆಚ್ಚು ಅನುಕೂಲಕರ ಆಡಳಿತದ ಭರವಸೆಯನ್ನು ನೀಡುವುದು. ಮೂರನೆಯದು ಸಿಬಿಐ ಮತ್ತು ಈ.ಡಿ.ಯನ್ನು ದುರ್ಬಳಕೆ ಮಾಡಿಕೊಂಡು, ಬಿಜೆಪಿಗೆ ಸೇರಲು ಇತರ ಪಕ್ಷಗಳ ಶಾಸಕರನ್ನು ಒತ್ತಾಯಿಸುವುದು.

ಈ ಮೂರು ವಿಧಾನಗಳು ಸಾಮಾನ್ಯವಾಗಿ ಒಟ್ಟೊಟ್ಟಿಗೇ ಚಾಲ್ತಿಯಲ್ಲಿರುತ್ತವೆ. ಇಲ್ಲಿಯವರೆಗೆ ಅದು ಭಾಗಶಃ ಯಶಸ್ಸನ್ನು ಹೊಂದಿದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ವಿರೋಧ ಪಕ್ಷಗಳ ಮೈತ್ರಿಯ ರಾಜ್ಯ ಸರಕಾರವನ್ನು ಬೀಳಿಸಲು ಬಿಜೆಪಿಗೆ ಸಾಧ್ಯವಾಗಿದೆ; 2019ರಲ್ಲಿ ಕರ್ನಾಟಕದಲ್ಲಿ, 2022ರಲ್ಲಿ ಮಹಾರಾಷ್ಟ್ರ ಮತ್ತು ಇತ್ತೀಚೆಗೆ ಬಿಹಾರದಲ್ಲಿ. ಆದರೆ ಬಿಜೆಪಿಯೇತರ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಇರುವಲ್ಲಿ (ಪಶ್ಚಿಮ ಬಂಗಾಳ, ಕೇರಳ ಅಥವಾ ತಮಿಳುನಾಡಿನಂತೆ) ಇದುವರೆಗೆ ಅದು ವಿಫಲವಾಗಿದೆ. ಇದಲ್ಲದೆ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದ ಕಾನೂನುಬದ್ಧ ಚುನಾಯಿತ ಸರಕಾರಗಳ ವಿರುದ್ಧದ ಕೇಂದ್ರದ ಸ್ಪಷ್ಟ ಹಗೆತನವು ಅನೇಕ ಬಂಗಾಳಿಗಳು, ತಮಿಳರು ಮತ್ತು ಮಲಯಾಳಿಗಳಲ್ಲಿ ಆಳವಾದ (ಮತ್ತು ನನಗೆ ಅನ್ನಿಸುವಂತೆ ಹೆಚ್ಚು ಸಮರ್ಥನೀಯವಾದ) ಅಸಮಾಧಾನಕ್ಕೆ ಕಾರಣವಾಗಿದೆ.

ಭಾರತದ ಒಕ್ಕೂಟ ವ್ಯವಸ್ಥೆಯ ಮೇಲಿನ ಒತ್ತಡಗಳನ್ನು ಗೋದಿ ಮೀಡಿಯಾಗಳು ಎಂದಿಗೂ ಚರ್ಚಿಸಿಲ್ಲ. ಇನ್ನಾದರೂ ಪಕ್ಷ ಭೇದವಿಲ್ಲದೆ ಚಿಂತನಶೀಲ ಭಾರತೀಯರು ಅದರತ್ತ ಹೆಚ್ಚು ಗಮನ ಹರಿಸಬೇಕು. ಏಕೆಂದರೆ, (ಪ್ರಸ್ತುತ ಕಾಣಿಸುತ್ತಿರುವಂತೆ) ಜಗನ್ ರೆಡ್ಡಿ ಅವರ ಆಶಯ ಈಡೇರದಿದ್ದರೂ ಮತ್ತು ನರೇಂದ್ರ ಮೋದಿ ಮತ್ತು ಬಿಜೆಪಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸತತ ಮೂರನೇ ಗೆಲುವನ್ನು ಸಾಧಿಸಿದರೂ, ಈ ಸಂಘರ್ಷಗಳು ಮುಂದುವರಿಯುತ್ತವೆ ಮತ್ತು ಬಹುಶಃ ತೀವ್ರಗೊಳ್ಳುತ್ತವೆ. ಅದು ನಮ್ಮ ಗಣತಂತ್ರದ ಭವಿಷ್ಯಕ್ಕೆ ಶುಭಸೂಚಕವಂತೂ ಅಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಮಚಂದ್ರ ಗುಹಾ

contributor

Similar News