ಅತಿಶಯಕಾರರು

Update: 2024-12-08 04:50 GMT

ಇಲಿ ಹೋದ್ರೆ ಹುಲಿ ಹೋಯ್ತು ಅನ್ನೋರು ನಮ್ಮಲ್ಲೇನೂ ಕಡಿಮೆ ಇಲ್ಲ. ಇಲಿಯನ್ನು ಹುಲಿಯಾಗಿಸುವ ಕೆಲಸ ಸಾಮಾನ್ಯ ಜನರಿಂದ ಹಿಡಿದು, ಸಾಹಿತ್ಯ, ಸಿನೆಮಾ, ನಾಟಕವೇ ಮೊದಲಾದ ಇತರ ಮಾಧ್ಯಮಗಳವರೆಗೂ ವ್ಯಾಪಿಸಿರುವ ವಿಷಯ. ವಾಸ್ತವದ ಇಲಿಯನ್ನು ಹುಲಿಯನ್ನಾಗಿಸಿ ತೋರಿಸುವ ಮನುಷ್ಯರ ಆ ಬಗೆಯ ವರ್ತನೆಗೆ ಮಾನಸಿಕ, ಸಾಮಾಜಿಕ ಮತ್ತು ಭಾವನಾತ್ಮಕ ಕಾರಣಗಳಿರುತ್ತವೆ. ಅವರನ್ನು ಅತಿಶಯಕಾರರು ಎಂದು ಹೆಸರಿಡೋಣ.

ಕೆಲವರು ತಮ್ಮ ಕಡೆಗೆ ಗಮನ ಸೆಳೆಯುವುದಕ್ಕಾಗಿ ಇರುವ ವಿಷಯವನ್ನು ಉತ್ಪ್ರೇಕ್ಷಿಸಿ ಹೇಳುತ್ತಾರೆ. ತಾವು ಕಂಡ, ಅನುಭವಿಸಿದ ಅಥವಾ ಗಮನಿಸಿದ ವಿಷಯ ಇತರರಿಗೆ ಹೇಳಲು ಅಷ್ಟೇನೂ ಸ್ವಾರಸ್ಯಕರವಾಗಿ ಇಲ್ಲ ಅಂತ ಅನ್ನಿಸಿ, ಆದರೂ ಹೇಳಲೇ ಬೇಕು ಎಂಬ ತುಡಿತವೋ, ತುರಿಕೆಯೋ ಇದ್ದಾಗ ಅತಿಶಯೋಕ್ತಿಗಳಲ್ಲಿ ಹೇಳುತ್ತಾರೆ. ಇತರರಿಗೆ ಅಬ್ಬಾ ಅನ್ನಿಸಬೇಕು ಅಥವಾ ಪಾಪ ಅನ್ನಿಸಬೇಕು, ಚ್ಚುಚ್ಚು ಅನ್ನಬೇಕು ಅಥವಾ ಓ ಅಂತ ಕಣ್ಣರಳಿಸಬೇಕು. ಮೈ ಮೇಲೆ ಗುಳ್ಳೆಗಳ ಸಮೇತ ರೋಮಗಳನ್ನೆಬ್ಬಿಸಬೇಕು; ಒಟ್ಟಿನಲ್ಲಿ ಅವರಿಗೊಂದು ವಿಸ್ಮಯದ ಅಥವಾ ತೀವ್ರವಾದ ಭಾವುಕತೆಯ ಅನುಭವವಾಗಬೇಕು. ಇದು ಅವರ ಉದ್ದೇಶ. ನಿಮ್ಮ ಪಕ್ಕದ ಮನೆಯವರೋ, ಯಾವುದೋ ಸಿನೆಮಾನೋ ಅಥವಾ ನೀವೋ ಇಂತಹ ಅತಿಶಯೋಕ್ತಿಗಳನ್ನು ಬಳಸಿದ್ದನ್ನು ನೆನಪಿಸಿಕೊಳ್ಳಿ.

ಮತ್ತೆ ಕೆಲವರು ಸಾಮಾನ್ಯವಾದ ತಮ್ಮ ಇರುವಿಕೆಯ ಪ್ರಾಮುಖ್ಯತೆಯನ್ನು ಸ್ಥಾಪಿಸಲು ತಮ್ಮ ಬಗ್ಗೆ ದೊಡ್ಡ ಹೀರೋ ತರ ಬಿಲ್ಡಪ್ ಕೊಟ್ಟುಕೊಳ್ಳುವುದೋ ಅಥವಾ ಪಾಪದವರಾಗಿ ಬಲಿಪಶುಗಳಾಗಿರುವಂತೆಯೋ ಇತರರ ಗಮನಕ್ಕೆ ಬರುವಂತೆ ಹೇಳಿಕೊಳ್ಳುತ್ತಾರೆ. ಅಬ್ಬಬ್ಬಾ ಅಂತಾದರೂ ಅವರನ್ನು ನೋಡಬೇಕು ಅಥವಾ ಅಯ್ಯೋ ಪಾಪ ಅನ್ನುವಂತಾದರೂ ನೋಡಬೇಕು. ಅವರಿಗೆ ಕಾಡುವ ಭಯವೇನೆಂದರೆ ಈ ಸ್ಪರ್ಧಾತ್ಮಕ ಸಮಾಜದಲ್ಲಿ ತನ್ನನ್ನು ಪರಿಗಣಿಸುವುದಿಲ್ಲ, ಕಡೆಗಣಿಸಿಬಿಡುತ್ತಾರೆ, ತಾವೋ ಪ್ರತಿಭೆ ಅಥವಾ ಜೀವನದ ಸಾಧನೆಯಲ್ಲಿ ಸಾಧಾರಣ ಮಟ್ಟದಲ್ಲಿ ಇರುವುದು. ಮಾನ್ಯತೆಯನ್ನು ಪಡೆಯಲೋಸುಗ ತಮ್ಮ ವಿಷಯಗಳನ್ನು ಉತ್ಪ್ರೇಕ್ಷೆಯಿಂದ ಹೇಳುತ್ತಾರೆ.

ಮತ್ತೆ ಕೆಲವರು ತಮಗೇ ಗೊತ್ತಿಲ್ಲದಂತೆ ಅಪ್ರಜ್ಞೆಯಿಂದಲೇ ತಮ್ಮ ಭಾವನೆಗಳನ್ನು ವಿಜೃಂಭಿಸಿ ಹೇಳುತ್ತಾರೆ. ಸಣ್ಣ ಭಯವನ್ನು ಜೀವಕ್ಕೇ ಆಪತ್ತು ಬಂದಿರುವಷ್ಟು ದಿಗಿಲಿನಿಂದ ಹೇಳುವಂತಹ ಮಾನಸಿಕ ಸಮಸ್ಯೆಯದಾಗಿರುತ್ತದೆ. ದುಃಖವೂ ಕೂಡಾ ಹಾಗೆಯೇ.

ಮತ್ತೆ ಕೆಲವರಿಗೆ ಇದೊಂದು ಸೃಜನಶೀಲ ಅಭಿವ್ಯಕ್ತಿ. ಬರೀ ಕತೆಗಾರರು ಮತ್ತು ನಾಟಕಕಾರರು ಉತ್ಪ್ರೇಕ್ಷಿಸಿ ಬರೆಯುವುದಲ್ಲ; ಕೆಲವು ಆ ಕ್ಷೇತ್ರದವರಲ್ಲದಿದ್ದರೂ ಇತರರ ಗಮನ ಸೆಳೆಯಲು ಮತ್ತು ಮನರಂಜಿಸಲು ಇಷ್ಟಾಗಿರುವುದನ್ನು ಅಷ್ಟಾಯಿತು ಎಂದು ಬಣ್ಣಿಸಿ ಬಣ್ಣಿಸಿ ಬಣ್ಣಗಳನ್ನು ತುಂಬಿ ಹೇಳುತ್ತಾರೆ.

ಇನ್ನೂ ಕೆಲವರಿಗೆ ಅತಿಶಯೋಕ್ತಿ ಇಲ್ಲದೆ ವಿಷಯಗಳನ್ನು ಹೇಳಲು ಸಾಧ್ಯವೇ ಇಲ್ಲ. ಅವರಿಗೆ ಇದೊಂದು ರೂಢಿಗತವಾಗಿರುವ ಗೀಳು. ಇವರೂ ಅಷ್ಟೇ ಉದ್ದೇಶಪೂರ್ವಕವಾಗಿ ಹೇಳುವುದಿಲ್ಲ. ಅವರಿಗೇ ಗೊತ್ತಿಲ್ಲದಂತೆ ಅಪ್ರಜ್ಞಾವಸ್ಥೆಯಲ್ಲೇ ವರ್ಣಿಸಿಬಿಡುತ್ತಾರೆ.

ಮತ್ತೆ ಕೆಲವು ಅತಿಶಯಕಾರರಿಗೆ ಹೀಗೆ ಮಾತಾಡುವುದು ಮನಸ್ಸಿನ ರಕ್ಷಣಾ ತಂತ್ರವಾಗಿರುತ್ತದೆ. ಅವರ ಅಭದ್ರತೆ, ಭಯ, ನೆಮ್ಮದಿಗೇಡಿನ ಕಾರಣಕ್ಕಾಗಿ ಸಂಗತಿಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಉತ್ಪ್ರೇಕ್ಷಿಸಿ ಹೇಳುತ್ತಾರೆ.

ಅತಿಶಯಕಾರರು ಒಂದಲ್ಲಾ ಒಂದು ರೀತಿಯಲ್ಲಿ ಅಪಾಯಕಾರಿಗಳು.

ಸಾಮಾನ್ಯರಾಗಲಿ, ಸಾಹಿತಿ, ಚಲನಚಿತ್ರ, ಭಾಷಣಕಾರರಾಗಲಿ ಅತಿಶಯಕಾರರು ವ್ಯಕ್ತಿಗತ ಸಮಸ್ಯೆಗಳನ್ನು ಉಂಟುಮಾಡುವುದಷ್ಟೇ ಅಲ್ಲದೆ ಸಮಾಜದ, ಸಂಸ್ಕೃತಿ ಮತ್ತು ದೇಶಗಳ ಪರಂಪರೆಗಳನ್ನೇ ದಿಕ್ಕೆಡಿಸುವಷ್ಟು ಅಪಾಯಕಾರಿಗಳು. ಅವರಿಂದ ವಾಸ್ತವ ಸಂಗತಿಗಳು ಮರೆಯಾಗಿ ಉತ್ಪ್ರೇಕ್ಷೆಯ ಅಧಿಕ ಪ್ರಸಂಗಗಳೇ ವಿಜೃಂಭಿಸಿ, ನಿಜ ಬೀಜ ಅತಿಶಯೋಕ್ತಿಯ ಹೊಟ್ಟಿನ ರಾಶಿಯಲ್ಲಿ ಕಳೆದುಹೋಗುತ್ತವೆ. ಅದರಿಂದ ಸರಿಯಾದ ಸಂವಹನವಾಗದೇ ಮಾಹಿತಿ ಮತ್ತು ಸಂಗತಿಗಳು ಕೇಳುಗರಿಗೆ ಅಥವಾ ನೋಡುಗರಿಗೆ ತಲುಪದೇ ಅವರು ಗೊಂದಲದಲ್ಲಿ ಸಿಲುಕುತ್ತಾರೆ. ವಾಸ್ತವದ ಅರಿವಿಲ್ಲದೇ ಭ್ರಮೆಗಳಲ್ಲಿ ತೊಳಲುತ್ತಾರೆ. ಇದರಿಂದ ಅವರಿಗೆ ಆಗುವ ಮತ್ತೊಂದು ಅಪಾಯವೆಂದರೆ ಜನರಿಗೆ ನಿಜದ ಅರಿವಾದಾಗ ಅವರ ಬಗ್ಗೆ ಇರುವ ವಿಶ್ವಾಸ ಭಂಗವಾಗುತ್ತದೆ. ಕೆಲವೊಂದು ಸಂದರ್ಭಗಳಿಗೆ ಅವರನ್ನು ನಂಬಿಕೆ ದ್ರೋಹಿಗಳೆಂದೇ ಕರೆಯಬಹುದು.

ಇತರರ ಬಗ್ಗೆ, ಸಮಾಜ ಮತ್ತು ಸಮುದಾಯಗಳ ಬಗ್ಗೆ ಮಾಡುವಂತಹ ಅತಿಶಯೋಕ್ತಿಗಳು ವ್ಯಕ್ತಿಗತವಾಗಿಯೂ ಮತ್ತು ಸಾಮಾಜಿಕವಾಗಿಯೂ ಸಂಬಂಧಗಳು ಹದಗೆಟ್ಟು ಸಂಘರ್ಷಗಳಿಗೆ ಕಾರಣವಾಗುತ್ತದೆ.

ಅತಿಶಯಕಾರರೂ ಕೂಡಾ ತಮ್ಮ ಅತಿಶಯೋಕ್ತಿಗಳನ್ನು ದಿಟವೆಂದು ನಂಬಿಸಲು ಒತ್ತಡಕ್ಕೆ ಒಳಗಾಗುತ್ತಾರೆ. ಮಾನಸಿಕವಾಗಿ ಬಳಲುತ್ತಾರೆ.

ಅದೆಲ್ಲಾ ಸರಿ, ಈಗ ನಮ್ಮ ಜೊತೆ ಇರುವ ಅತಿಶಯಕಾರರನ್ನು ನಿಭಾಯಿಸುವುದು ಹೇಗೆ?

ಅವರ ಮಾತುಗಳನ್ನು ತೀರ್ಪುಗೀಡು ಮಾಡದೇ ಮೊದಲು ಕೇಳಬೇಕು. ನಂತರ ಅವರ ಉತ್ಪ್ರೇಕ್ಷಿತ ವಾಕ್ಯಗಳನ್ನು ಸರಳಗೊಳಿಸಲು ನೆರವಾಗಬೇಕು. ನಿಧಾನವಾಗಿ ಮತ್ತು ಸಹನೆಯಿಂದ ಮುಕ್ತ ಪ್ರಶ್ನೆಗಳನ್ನು ಕೇಳುತ್ತಾ ಅವರನ್ನು ವಾಸ್ತವದ ಸಂಗತಿಯ ಕಡೆಗೆ ಸರಿಯುವಂತಹ ಮಾತಿನ ವಾತಾವರಣವನ್ನು ಸೃಷ್ಟಿಸಬೇಕು. ‘‘ನೀವು ಹೇಳುವುದು ತುಂಬಾ ಭಯಾನಕವಾಗಿದೆ. ಈಗ ಹಂತ ಹಂತವಾಗಿ ಏನಾಯಿತು ಅಂತ ನಿಧಾನವಾಗಿ ಹೇಳಿ’’ ಎಂದರೇನೇ ಸಾಕು ಅವರು ತಮ್ಮ ಅತಿಶಯೋಕ್ತಿಯಿಂದ ಕೊಂಚ ಹೊರಬರಲು ಒಂದು ಎಳೆಯನ್ನು ಕೊಟ್ಟಂತಾಗುತ್ತದೆ. ಕೆಲವೊಮ್ಮೆ ‘‘ಇಷ್ಟು ನಾಟಕೀಯ ವಿವರಣೆ ಬೇಡ. ಅಂಶಗಳನ್ನಷ್ಟೇ ಹೇಳಿ’’ ಎಂದು ನಿಷ್ಟುರವಾಗಬೇಕಾಗುತ್ತದೆ. ಆದರೆ ಅದು ಆಪ್ತವಾಗಿಯೂ ಮತ್ತು ಸಹಾನುಭೂತಿಯಿಂದಲೂ ಕೂಡಿರಲಿ. ಅವರು ಕನಲಿದಷ್ಟೂ ತಮ್ಮ ಅತಿಶಯೋಕ್ತಿಗಳನ್ನು ಗಾಢಗೊಳಿಸಿ ನಂಬಿಸಲು, ಸಮರ್ಥಿಸಲು ಯತ್ನಿಸುತ್ತಾರೆ.

ಯಾವಾಗಲೂ ಪ್ರಾಮಾಣಿಕ ಅಭಿವ್ಯಕ್ತಿಗೇ ಗೌರವ ನೀಡುವುದು ಎಂಬುದನ್ನು ನಾವು ಪದೇ ಪದೇ ನಿರೂಪಿಸಬೇಕು. ಹಾಗೆಯೇ ಅತಿಶಯಕಾರರ ಅತಿಶಯೋಕ್ತಿಗಳನ್ನು ಪ್ರಶಂಸಿಸುವುದೋ ಅಥವಾ ನೇರಾನೇರ ಖಂಡಿಸುವುದೋ ಮಾಡದೇ ನಿರ್ಲಕ್ಷಿಸುವುದೂ ಕೂಡಾ ಮತ್ತೊಂದು ಪರಿಣಾಮಕಾರಿಯಾದ ವಿಧಾನ.

ಗಾಸಿಪ್ ಮಾಡುವ ಅಭ್ಯಾಸವಿರುವವರಂತೂ ಅತಿಶಯಗೇಡಿತನ ಒಂದು ಸಾಧಾರಣ ರೋಗ. ಅತಿಶಯಕಾರರೇ ಸಾಮಾನ್ಯವಾಗಿ ಹೆಚ್ಚು ಹೆಚ್ಚು ಗಾಸಿಪ್ ಮಾಡುವುದು ಮತ್ತು ಅದನ್ನು ನಂಬುವುದೂ ಕೂಡಾ. ವಿಪರ್ಯಾಸವೆಂದರೆ ತಾವು ತಮಗೆ ವಿಷಯವನ್ನು ವಿಜೃಂಭಿಸಿ ಹೇಳುತ್ತಿರುವಂತೆ ತನಗೆ ಹೇಳಿದವರೂ ಕೂಡಾ ಹಾಗೆಯೇ ಮಾಡಿದ್ದಾರೆ ಎಂದು ಅವರಿಗೆ ಅನ್ನಿಸುವುದೇ ಇಲ್ಲ.

ಒಟ್ಟಾರೆ ಉತ್ಪ್ರೇಕ್ಷೆ ಎನ್ನುವುದು ಹಾನಿಕಾರಕವೂ ಹೌದು, ಸೃಜನಶೀಲವೂ ಹೌದು. ವ್ಯಕ್ತಿಯೊಂದಿಗೆ ಮತ್ತು ಸಮಾಜದೊಂದಿಗೆ ಸಂವಹನ ಮಾಡುವಾಗ ತಮ್ಮ ತಮ್ಮ ಅತಿಶಯೋಕ್ತಿಗಳು ಒಳಿತನ್ನು ಉಂಟು ಮಾಡುತ್ತದೆಯೋ ಅಥವಾ ನೆಮ್ಮದಿಗೆಡಿಸುತ್ತದೆಯೋ ಎಂಬ ಪ್ರಜ್ಞೆ ಇದ್ದಲ್ಲಿ ಅತಿಶಯಗೇಡಿತನ ಎಂಬುದು ರೋಗಕಾರಕವಾಗಿ ಸಾಂಕ್ರಾಮಿಕ ಸಮಸ್ಯೆಯಾಗದೇ ಕಲಾತ್ಮಕವಾಗಿ ಅಭಿವ್ಯಕ್ತಗೊಳ್ಳಬಹುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು