ಮೌನದ ಬಲ

Update: 2024-12-01 03:31 GMT

ಮಾನಸಿಕ ಆರೋಗ್ಯದ ವಿಷಯದಲ್ಲಿ ಮೌನದ ಪಾತ್ರ ಮಹತ್ವದ್ದು. ಮೌನವು ಮನಸ್ಸನ್ನು ವಿಶ್ರಾಂತಗೊಳಿಸಲು, ಪುನಶ್ಚೇತನಗೊಳಿಸಲು ಮತ್ತು ಆಲೋಚನೆಗಳನ್ನು ಹಾಗೂ ಭಾವನೆಗಳನ್ನು ಪ್ರತಿಫಲಿಸಲು ನೆರವಾಗುತ್ತದೆ.

ವ್ಯಕ್ತಿಗಳು ದೈಹಿಕವಾಗಿ ಕೆಲಸದಲ್ಲಿ ತೊಡಗಿರಲಿ, ತೊಡಗಿರದಿರಲಿ ಮನಸ್ಸಂತೂ ಸದಾ ಕಾರ್ಯನಿರತವಾಗಿಯೇ ಇರುತ್ತದೆ. ಅದಕ್ಕೆ ಆಲೋಚನೆ ಮಾಡದಿದ್ದರೆ ತಾನು ಸತ್ತೇ ಹೋಗುತ್ತೇನೇನೋ ಅನ್ನುವಷ್ಟು ಭಯ! ತಾನು ಜೀವಂತವಾಗಿದ್ದೇನೆ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ಸದಾ ಒಂದಿಲ್ಲೊಂದು ಆಲೋಚನೆಯಲ್ಲಿ ತೊಡಗಿರುತ್ತದೆ. ಹಿಂದಿನದರ ಬಗ್ಗೆಯೋ, ಮುಂದಿನದರ ಬಗ್ಗೆಯೋ, ಇರುವುದರ ಬಗ್ಗೆಯೋ, ಇಲ್ಲದಿರುವುದರ ಬಗ್ಗೆಯೋ ಆಲೋಚನೆಗಳನ್ನು ಮಾಡುತ್ತಿರುತ್ತದೆ. ಆ ಆಲೋಚನೆಗಳು ಭಾವನೆಗಳನ್ನು ಹುಟ್ಟಿಸುತ್ತಿರುತ್ತವೆ. ಮಾಡುವ ಆಲೋಚನೆಗಳ, ಮಾಡಿಕೊಳ್ಳುವ ನೆನಪುಗಳ ಆಧಾರದಲ್ಲಿ ಸಂತೋಷವೋ, ದುಃಖವೋ, ಬೇಸರವೋ, ಜಿಗುಪ್ಸೆಯೋ, ಕೋಪವೋ, ಅಸಹನೆಯೋ, ಅನುಮಾನವೋ, ಅಪಮಾನವೋ, ಸೇಡೋ, ಕರುಣೆಯೋ; ಎಂತದ್ದೋ ಭಾವನೆಗಳು ಹುಟ್ಟುತ್ತಲೇ ಇರುತ್ತವೆ.

ಆಯಾಯ ಭಾವನೆಗಳ ಸ್ವರೂಪದಿಂದ ಮೆದುಳಿನ ಮೇಲೂ ಪ್ರಭಾವವನ್ನು ಬೀರುತ್ತಿರುತ್ತವೆ. ಇಂತಹ ಭಾವನೆಗಳ ನಿರಂತರತೆಯಿಂದಾಗಿ ಮಾನಸಿಕವಾಗಿ ಆಯಾಸ, ಒತ್ತಡ ಮತ್ತು ಆತಂಕಗಳು ಉಂಟಾಗುತ್ತಿರುತ್ತವೆ. ಇವುಗಳು ಬರೀ ಹಾದುಹೋದುವುಗಳಲ್ಲದೆ ಒಂದರಲ್ಲೊಂದು ಹೆಣೆದುಕೊಂಡು ಗೊಂದಲವಾಗುತ್ತದೆ. ಅದರೊಟ್ಟಿಗೆ ಭಯವಾಗಬಹುದು, ಖಚಿತತೆ ಇಲ್ಲದೇ ಹೋಗಿ ಮೇಲ್ಮಟ್ಟದ್ದಲ್ಲೇ ವಸ್ತು ವಿಷಯಗಳನ್ನು ಗಮನಿಸಿ ತೀರ್ಮಾನಕ್ಕೆ ಬರಬಹುದು, ಉತ್ತಮಗುಣಮಟ್ಟದ ಗ್ರಹಿಕೆ ಸಾಧ್ಯವಾಗದಿರಬಹುದು ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವುದರಲ್ಲಿ ಹಿನ್ನೆಡೆ ಉಂಟಾಗಬಹುದು ಅಥವಾ ತಪ್ಪಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಮನಸ್ಸು ನಿರಾಳವಾಗಿ, ಸ್ಪಷ್ಟವಾಗಿ ಮತ್ತು ವಸ್ತು ವಿಷಯಗಳನ್ನು ಪಾರದರ್ಶಕವಾಗಿ ಕಾಣಲು ಹಾಗೂ ಗ್ರಹಿಸಲು ಮೌನದ ಅಭ್ಯಾಸ ಅಗತ್ಯವಾಗಿ ಬೇಕಾಗುತ್ತದೆ. ಮನಸ್ಸು ಮೌನದ ಅಭ್ಯಾಸ ಮಾಡಿಕೊಂಡಷ್ಟೂ ವಿಶ್ರಾಂತ ಸ್ಥಿತಿಯನ್ನು ಹೊಂದುವುದಲ್ಲದೇ ವಿಷಯಗಳ ಬಗ್ಗೆ ಪೂರ್ವಗ್ರಹವಿಲ್ಲದೆ ಗಮನ ಕೊಡಲು, ಏಕಾಗ್ರತೆ ಸಾಧಿಸಲು ನೆರವಾಗುತ್ತದೆ. ಇದು ತಮ್ಮ ಬಗ್ಗೆ ತಮ್ಮಲ್ಲೇ ಪ್ರಜ್ಞೆಯನ್ನುಂಟು ಮಾಡುವುದಲ್ಲದೇ ಆತ್ಮಾವಲೋಕನಕ್ಕೆ ಸಹಾಯಕವಾಗುತ್ತದೆ. ಸೃಜನಶೀಲತೆಗೂ ಅವಕಾಶ ತೆರೆದುಕೊಳ್ಳುವುದಲ್ಲದೇ ಸಮಸ್ಯೆ ಪರಿಹರಿಸಿಕೊಳ್ಳುವ ಕೌಶಲ್ಯಗಳನ್ನು ಕೂಡಾ ಬೆಳೆಸಿಕೊಳ್ಳಲು ಸಾಧ್ಯ.

ಮನಸ್ಸು ಮೌನವಾಗುವ ಅಭ್ಯಾಸ ಮಾಡಿಕೊಳ್ಳುವುದರಿಂದ ನಮ್ಮಲ್ಲಿ ಉಂಟಾಗುವ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ಗಮನಿಸಿಕೊಳ್ಳಲು ಸಾಧ್ಯ. ಹಾಗೆ ಭಾವನೆಗಳ ಹುಟ್ಟಿಗೆ ಕಾರಣವಾಗುವ ಅಂಶಗಳನ್ನು ಗುರುತಿಸುವುದರಿಂದ ಅವುಗಳನ್ನು ನಿರ್ವಹಿಸಲು ಮತ್ತು ಅಗತ್ಯ ಬಿದ್ದಲ್ಲಿ ನಿಯಂತ್ರಿಸಲೂ ಕೂಡಾ ಭಾವಕೌಶಲ್ಯಕ್ಕೆ (ಎಮೋಶನಲ್ ಇಂಟೆಲಿಜೆನ್ಸ್) ಪೂರಕವಾಗಿರುತ್ತದೆ.

ಮೌನದ ಅಭ್ಯಾಸವು ತನ್ನ ಇತಿಮಿತಿಗಳನ್ನು ಮತ್ತು ಸಾಮರ್ಥ್ಯಗಳನ್ನು ಅರಿಯಲು ಅವಕಾಶವನ್ನು ಒದಗಿಸುತ್ತದೆ. ಮೆದುಳಿನಲ್ಲಿನ ಕಾರ್ಟಿಸಲ್ ಎಂಬ ಒತ್ತಡದ ಹಾರ್ಮೋನುಗಳನ್ನು ತಗ್ಗಿಸಿದರೆ, ನಿದ್ರೆಗೆ ಅಗತ್ಯವಿರುವ ಮೆಲಾಟನಿನ್ ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಮೆದುಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ನ್ಯೂರೋಪ್ಲ್ಯಾಸ್ಟಿಸಿಟಿಯನ್ನೂ (ನರಗಳಲ್ಲಿ ಸಲಿಲತೆ) ಉತ್ತೇಜಿಸುತ್ತದೆ.

ಈಗ ಮೌನವಾಗಿರುವುದು ಹೇಗೆ ಎಂದು ಗಮನಿಸೋಣ.

ಮೌನವಾಗಿರುವುದು ಎಂದರೆ ಗಲಾಟೆ ಮಾಡದೆ ಇರುವುದು ಅಥವಾ ಮಾತಾಡದೇ ಇರುವುದು ಮಾತ್ರ ಅಲ್ಲ. ಮನಸ್ಸು ತನ್ನೆಲ್ಲಾ ಚಟುವಟಿಕೆಗಳನ್ನೂ ರೂಢಿಯ ಮೇಲೆಯೇ ರೂಪಿಸಿಕೊಂಡು ಅದನ್ನೇ ತನ್ನ ಸ್ವಭಾವವನ್ನಾಗಿಸಿಕೊಳ್ಳುತ್ತದೆ. ಹಾಗಾಗಿ ಮನಸ್ಸಿಗೆ ಕೊಂಚ ಕಾಲ ಸಂಪೂರ್ಣ ಮೌನವಾಗಿರುವುದನ್ನು ಕಲಿಸಿಕೊಡಬೇಕು. ಮೌನವಾಗಿರುವುದೊಂದು ತರಬೇತಿಯ ಫಲ.

ಮೊದಮೊದಲು ಕಡಿಮೆ ಅವಧಿಯಾದರೂ ಸರಿಯೇ ಪ್ರಾರಂಭಿಸಬೇಕು. ಒಂದೆರಡು ನಿಮಿಷಗಳಿಂದ ಪ್ರಾರಂಭಿಸಿ ಕ್ರಮೇಣವಾಗಿ ಸಮಯವನ್ನು ಹೆಚ್ಚಿಸುತ್ತಾ ಹತ್ತು ಹದಿನೈದು ನಿಮಿಷಗಳವರೆಗೂ ಸಾಧಿಸಬೇಕು. ಯಾವುದಾದರೊಂದು ಸಮಯವನ್ನು ನಿಗದಿಪಡಿಸಿಕೊಂಡು ಆ ಸಮಯದಲ್ಲಿ ಮರೆಯದೇ ಮೌನದ ಅಭ್ಯಾಸ ಮಾಡಬೇಕು. ಬೆಳಗ್ಗೆ ಧ್ಯಾನ ಎಂದೇನಾದರೂ ಸಮಯ ನಿಗದಿಪಡಿಸಿಕೊಂಡಿದ್ದ ಪಕ್ಷದಲ್ಲಿ ಆಗಾದರೂ ಸರಿಯೇ ಅಥವಾ ರಾತ್ರಿ ಮಲಗುವ ಮುನ್ನವಾದರೂ ಸರಿಯೇ. ಆದರೆ ರಾತ್ರಿ ಮಲಗುವ ಮುನ್ನ ಮೌನದ ಅಭ್ಯಾಸವೆಂದರೆ ದಿನವೆಲ್ಲಾ ಏನಾಯಿತು, ಹೇಗಾಯಿತು, ನಾಳೆ ಏನು ಮಾಡಬೇಕು ಎಂದು ಆಲೋಚನೆಗಳನ್ನು ಮತ್ತು ಯೋಜನೆಗಳನ್ನು ಮಾಡುವುದಲ್ಲ. ಯಾವುದೂ ಆಲೋಚನೆಗಳು, ಯೋಜನೆಗಳು, ನೆನಪುಗಳು, ಕನವರಿಕೆಗಳು, ಕನಸುಗಳು ಇಲ್ಲದೇ ಇರುವುದು.

ಮೊದಮೊದಲು ಯಾವುದೂ ನಮ್ಮ ಗಮನ ಸೆಳೆಯದಂತಹ ಮತ್ತು ಚಂಚಲತೆಗೆ ಆಸ್ಪದವಾಗದಂತಹ ಜಾಗವನ್ನು ಆಯ್ದುಕೊಳ್ಳಬೇಕು. ಆ ನಂತರ ಮೌನದ ರೂಢಿಯಾದ ಮೇಲೆ ಸಂತೆಯಲ್ಲಿಯೂ ಕೂಡಾ ಮೌನವಾಗಿರಲು ಸಾಧ್ಯ.

ಮೌನವಾಗಿರುವ ಅಭ್ಯಾಸವೆಂದರೆ ಸಂಗೀತ ಕೇಳಿಕೊಂಡು ಆರಾಮವಾಗಿರುವುದೂ ಅಲ್ಲ. ಸುಮ್ಮನೆ ಇರುವುದು. ಯಾವುದೇ ಪೂರ್ವನಿರ್ಧಾರಗಳಿಲ್ಲದೆ, ಲೆಕ್ಕಾಚಾರಗಳಿಲ್ಲದೆ, ಒಳ್ಳೆಯದು, ಕೆಟ್ಟದು, ದೇವರು, ಮುಕ್ತಿ, ನರಕ, ಸ್ವರ್ಗ; ಯಾವುದೇ ಆಲೋಚನೆಗಳಿಲ್ಲದೆ ಸುಮ್ಮನೆ ಕುಳಿತುಕೊಳ್ಳುವುದು. ಶಬ್ದಗಳು, ಮಾತುಗಳು, ಯಾವುದೇ ಸದ್ದುಗಳು ಕೇಳುತ್ತಿದ್ದರೂ ಸುಮ್ಮನೆ ಇರುವುದು. ಮನಸ್ಸಿನಲ್ಲಿ ಒಂದರಹಿಂದೆ ಒಂದು ಆಲೋಚನೆಗಳು ಬರುತ್ತಿದ್ದರೂ ಅದನ್ನು ಬರದಿರುವಂತೆ ಅಥವಾ ಹಿಂದಕ್ಕಟ್ಟುವಂತೆ ಏನೂ ಮಾಡುವುದು ಬೇಡ. ಬರುವುದೆಲ್ಲಾ ಬರಲಿ. ಅದನ್ನು ತೀರ್ಪುಗೀಡು ಮಾಡುವಂತೆ ನೋಡುವುದು ಬೇಡ ಅಷ್ಟೇ. ಸುಮ್ಮನೇ ಸಾಕ್ಷೀಕರಿಸುವಂತೆ ಆ ಎಲ್ಲಾ ಆಲೋಚನೆಗಳನ್ನೂ ಸುಮ್ಮನೆ ಬರಲು ಬಿಡಬೇಕು. ಹಾಗೆಯೇ ಯಾರಾದರೂ ಬಂದು ಮಾತಾಡಿಸಿದರೆ ಅಥವಾ ಫೋನ್ ಸದ್ದು ಮಾಡಿದರೆ ಮೌನ ಭಂಗವಾಯಿತೆಂದುಕೊಳ್ಳುವಷ್ಟೇನಿಲ್ಲ. ಸುಮ್ಮನೆ ಇದ್ದರಾಯಿತು. ಉಸಿರಾಟವು ಸರಾಗವಾಗಿರಲಿ. ಉಸಿರು ಎಳೆದುಕೊಳ್ಳುವಾಗ ಮತ್ತು ಬಿಡುವಾಗ ಗಮನ ಕೊಡುವುದೇನೂ ಬೇಡ. ಇದು ಪ್ರಾಣಾಯಾಮ ಅಥವಾ ಉಸಿರಿನ ವ್ಯಾಯಾಮವೇನಲ್ಲ. ಉಸಿರು ಅದರ ಪಾಡಿಗೆ ಅದಾಡಿಕೊಂಡಿರಲಿ. ಸುಮ್ಮನೆ ನಿರಾಳವಾಗಿ ಇರುವುದು ಅಷ್ಟೇ.

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅತಿಶಯಕಾರರು
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು