ಅಂಜುಗೇಡಿತನ

Update: 2024-10-27 08:08 GMT

ಅಂಜಿಕೆ ಎನ್ನುವುದು ನಕಾರಾತ್ಮಕವೇನಲ್ಲ. ವ್ಯಕ್ತಿ ಒದಗಬಹುದಾದ ಅಪಾಯ, ತೊಂದರೆ ಅಥವಾ ಅವಘಡಗಳಿಂದ ತಪ್ಪಿಸಿಕೊಳ್ಳಲು ಮನೋಜೈವಿಕವಾದಂತಹ ಎಚ್ಚರಿಕೆಯೇ ಹೆದರಿಕೆ. ಆದರೆ ಹೆದರಿಕೆ ಅಕಾರಣವಾಗಿದ್ದರೆ ಮತ್ತು ಸದಾ ಕಾಡುತ್ತಿದ್ದರೆ ಅದು ಅಂಜುಗೇಡಿತನ.

ಸಮುದಾಯ ವಿಮುಖ ಸಮಸ್ಯೆ (ಸೋಶಿಯಲ್ ಆಂಕ್ಸೈಟಿ ಡಿಸಾರ್ಡರ್) ರೀತಿಯಲ್ಲಿಯೇ ವ್ಯಕ್ತಿಗತವಾದ ಫೋಬಿಯಾ ಅಥವಾ ಅಕಾರಣ ಅಂಜಿಕೆಗಳು ಇರುವವರೂ ಕೂಡಾ ಅಂಜುಗೇಡಿಗಳೇ. ಆದರೆ ಅಂಜುಗೇಡಿಗಳೆನ್ನುವುದು ಎಲ್ಲದಕ್ಕೂ ಹೆದರುವವರಿಗೆ. ಇದು ಪ್ಯಾಂಟೋಫೋಬಿಯಾ. ಹಾಗೆಯೇ ಜನರನ್ನು ಎದುರಿಸಲೂ ಹೆದರುವವರೂ ಈ ಹೆಸರಿನಡಿಯಲ್ಲೇ ಬರುತ್ತಾರೆ. ಇದು ಆ್ಯಂಥ್ರೋಪೋಫೋಬಿಯಾ.

ವ್ಯಕ್ತಿಗಳಿಗೆ ಎದುರಾಗಿ ಅಗತ್ಯವಿರುವುದನ್ನು ಮಾತಾಡಲು ಹೆದರುವುದು. ಅಂಗಡಿಗೆಲ್ಲಾದರೂ ಹೋದಾಗ ಕೇಳಬೇಕಾಗಿರುವುದನ್ನು ಪೇಲವ ದನಿಯಲ್ಲಿ ಕೇಳುವುದು. ಯಾವುದೋ ಒಂದು ವಿಷಯದಲ್ಲಿ ಹಿಂದೆ ನಕಾರಾತ್ಮಕ ಅನುಭವವಾಗಿರದಿದ್ದರೂ ಈಗ ಏನೋ ಹೇಗೋ ಎಂದು ಹೆದರುವುದು. ಯಾವುದಾದರಲ್ಲಿ ತೊಡಗಲು ಹೋದರೆ ಅದರಲ್ಲಿ ವಿಫಲವಾದರೆ ಎಂದು ಹೆದರುವುದು. ತಾನು ಅಪಮಾನಿತರಾದರೆ? ತನ್ನ ನೋಡಿ ಎಲ್ಲಾ ನಕ್ಕುಬಿಟ್ಟರೆ? ವೇದಿಕೆ ಹತ್ತಿದಾಗ ಮರೆತುಬಿಟ್ಟರೆ? ಮನೆಯಲ್ಲಿ ಒಬ್ಬರೇ ಇರಲು, ಒಬ್ಬರೇ ಹೊರಗೆ ಹೋಗಲು, ಗುಂಪುಗಳಲ್ಲಿ ಅಥವಾ ಸಾಲುಗಳಲ್ಲಿ ತಾವೊಬ್ಬರೇ ಹೋಗುವುದು, ನಿರ್ಜನ ಪ್ರದೇಶದಲ್ಲಿ ನಡೆದಾಡುವುದು, ಒಬ್ಬರೇ ವಾಹನಗಳಲ್ಲಿ ಹೋಗುವುದಕ್ಕೆ; ಹೀಗೆ ಸಾಮಾನ್ಯವಾಗಿ ಅಂಜುಗೇಡಿಗಳು ಎಲ್ಲದಕ್ಕೂ ಹಿಂದೇಟು ಹಾಕುತ್ತಿರುತ್ತಾರೆ.

ಕೆಲಸಗಳಲ್ಲಿ ಆತಂಕಗೊಳ್ಳುವುದು, ಬಿಳಚಿಕೊಳ್ಳುವುದು, ಬೆದರುವುದು, ಎದೆಯ ಬಡಿತ ಹೆಚ್ಚಾಗುವುದು, ದೇಹ ಬಿಗಿಗೊಳ್ಳುವುದು, ಧ್ವನಿ ಹೊರಡದೇ ಇರುವುದು, ಸಣ್ಣ ಪ್ರಮಾಣದಲ್ಲಿ ತಲೆ ಸುತ್ತುವುದು ಅಥವಾ ನಡುಗುವುದು, ಬೆವರುವುದು, ಮುಖ ಅಥವಾ ಕೆನ್ನೆಗಳು ತಟ್ಟನೆ ಕೆಂಪಾಗುವುದು, ಹೊಟ್ಟೆಯಲ್ಲಿ ಗುಡುಗುಡು ಅನ್ನುವುದು, ಮೂತ್ರ ಅಥವಾ ಮಲ ವಿಸರ್ಜನೆಗೆ ಒತ್ತಡವುಂಟಾಗುವುದು, ದೇಹದ ಮೇಲೆ ಅಥವಾ ಹಿಡಿತಗಳಲ್ಲಿ ನಿಯಂತ್ರಣ ತಪ್ಪುತ್ತಿರುವಂತೆ ಭಾಸವಾಗುವುದು, ಸತ್ತೇ ಹೋಗಿಬಿಡುವೆನೋ ಎಂದೆನಿಸುವುದು; ಕೂಡಾ ಪ್ರಧಾನವಾಗಿ ಕಾಣುವಂತಹ ಲಕ್ಷಣಗಳು. ಅಂಜುಗೇಡಿಗಳಲ್ಲಿ ಮೇಲೆ ಹೇಳಿರುವಂತಹ ಎಲ್ಲಾ ಲಕ್ಷಣಗಳೂ ಇರಬಹುದು ಅಥವಾ ಕೆಲವು ಇರಬಹುದು.

ಕೆಲವೊಮ್ಮೆ ಈ ಅಂಜುಗೇಡಿತನ ಸಾಂದರ್ಭಿಕವಾಗಿರಬಹುದು ಅಥವಾ ಸದಾ ಇರಬಹುದು. ಬಾಲ್ಯದ ಭಯದ, ಅತಿ ನಿಯಂತ್ರಣ ಮತ್ತು ಅತಿಶಿಸ್ತಿನ ಪ್ರಭಾವಗಳು, ನಡೆದಿರುವಂತಹ ದುರ್ಘಟನೆಗಳಿಂದ, ಕೆಲಸದ ಒತ್ತಡದಿಂದ, ಯಾರಿಗೆ ಕೆಲಸ ಮಾಡಿಕೊಡಬೇಕೋ ಅವರ ನಿರೀಕ್ಷೆಯನ್ನು ಪೂರೈಸಲಾರೆವೇನೋ ಎಂಬ ಭಯದಿಂದ, ಶಿಕ್ಷೆಯ ಭಯದಿಂದ, ನಷ್ಟ ಅಥವಾ ವೈಫಲ್ಯದ ಭಯದಿಂದ, ಮತ್ತೂ ಕೆಲವೊಮ್ಮೆ ಜೆನಿಟಿಕ್ (ವಂಶವಾಹಿ) ಸಮಸ್ಯೆ, ವ್ಯಕ್ತಿತ್ವದ ಮಾದರಿ ಕೂಡಾ ಇರಬಹುದು.

ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗುವುದು, ಮಾಡಬೇಕಾದ ಕೆಲಸಗಳನ್ನು ಮಾಡದೇ ಹೋಗುವುದು, ಕೆಲಸಗಳನ್ನು ಮುಂದೂಡುವುದು ಅಥವಾ ಕೆಲಸದಿಂದ ತಪ್ಪಿಸಿಕೊಳ್ಳಲು ನೆಪಗಳನ್ನು ಒಡ್ಡುವುದು, ತಮ್ಮ ಬಯಕೆಗಳನ್ನು ಹತ್ತಿಕ್ಕಿಕೊಂಡು ಒತ್ತಡಕ್ಕೆ ಒಳಗಾಗುವುದು, ಆತ್ಮಹತ್ಯೆಯ ಆಲೋಚನೆಗಳು, ಪರಾವಲಂಬತನ, ಎಲ್ಲದಕ್ಕೂ ಒಬ್ಬರ ಮೇಲೆ ಆಶ್ರಯಿಸುವುದು, ಮಾತುಕತೆಗಳನ್ನು ನೇರವಾಗಿ ಮತ್ತು ಸ್ಪಷ್ಟವಾಗಿ ಮಾಡದೇ ಇತರರಿಗೆ ಕಿರಿಕಿರಿ ಉಂಟು ಮಾಡುವುದು, ಇದರಿಂದ ಅವರೇನಾದರೂ ನಕಾರಾತ್ಮಕ ಪ್ರತಿಕ್ರಿಯೆ ಕೊಟ್ಟರೆ ಮತ್ತಷ್ಟು ಖಿನ್ನತೆ ಅಥವಾ ಆತಂಕಕ್ಕೆ ಒಳಗಾಗುವುದು, ದುಃಖವನ್ನು, ನಿರಾಶೆಗಳಂತ ಭಾವಗಳನ್ನು ಸರಿಯಾಗಿ ವ್ಯಕ್ತಪಡಿಸದೇ ಮಂಕಾಗಿರುವುದು, ಇತರರು ಕೇಳಿದರೆ ಹೇಳದಿರುವುದು, ಇಂತಹ ವಿಷಯಗಳ ಒತ್ತಡ ಮತ್ತು ಬಾಧೆಯಿಂದ ಹೊರಬರುವ ಸಲುವಾಗಿ ಮದ್ಯಪಾನ, ಧೂಮಪಾನ ಮತ್ತು ಮಾದಕವಸ್ತುಗಳಿಗೆ ವ್ಯಸನಿಗಳಾಗುವುದು; ಹೀಗೆ ಹತ್ತು ಹಲವು ಸಮಸ್ಯೆಗಳು ಎದುರಾಗುವವು.

ಅಂಜುಗೇಡಿತನ ಇತರರಲ್ಲಿ ಕಂಡರೆ ಅವರನ್ನು ಪುಕ್ಕಲ ಅಥವಾ ಅಂಜುಕುಳಿ ಎಂದು ಹೀಯಾಳಿಸಬಾರದು. ವ್ಯಂಗ್ಯ ಮತ್ತು ಅಪಹಾಸ್ಯಗಳಿಂದ ಎಂದಿಗೂ ಅಪಮಾನಿಸಬಾರದು. ಬದಲಾಗಿ ಅವರಿಗೆ ಅವರ ಅಂಜುಕುಳಿತನ ಇರುವುದು ಗಮನಕ್ಕೆ ತರಬೇಕು. ಹಾಗೂ ಅದನ್ನು ಮೀರಲು ತಾವು ಸಹಾಯಕ್ಕಿದ್ದೇನೆ ಎಂಬುದನ್ನು ಸ್ಪಷ್ಟವಾಗಿ ಮತ್ತು ಆತ್ಮೀಯವಾಗಿ ಹೇಳಬೇಕು.

‘‘ಇಷ್ಟು ಮಾತ್ರ ಮಾಡಕ್ಕಾಗಲ್ವಾ? ಹೋದ್ರೆ, ಮಾಡಿದ್ರೆ ಏನಾಗಿಬಿಡತ್ತೆ? ಇಷ್ಟು ದೊಡ್ಡವರಾಗಿ ಹೆದರುತ್ತೀಯಲ್ಲಾ? ಇದಕ್ಕೆಲ್ಲಾ ಹೆದರುತ್ತಾರಾ? ಆ ಸಣ್ಣ ಮಗು ಕೂಡಾ ಹೆದರಲ್ಲ, ನೀನಿಷ್ಟು ಹೆದರುತ್ತೀಯಲ್ಲಾ? ಏನಾಗತ್ತೆ ಮಾಡು ನೋಡೋಣ’’ ಈ ಬಗೆಯ ಮಾತುಗಳು ಅವೈಜ್ಞಾನಿಕ ಮತ್ತು ಅಮಾನವೀಯ.

ಸಂದರ್ಭ ಮತ್ತು ಪ್ರಸಂಗಕ್ಕೆ ಅನುಗುಣವಾಗಿ ಸಣ್ಣ ಪ್ರಮಾಣದಲ್ಲಿ ಅವರ ಪ್ರಯತ್ನದಲ್ಲಿ ಯಶಸ್ಸನ್ನು ಗಳಿಸಿಕೊಳ್ಳಲು ಸಹಕರಿಸಬೇಕು. ಹಲವು ಬಾರಿ ನೀಡುವಂತಹ ಸಕಾರಾತ್ಮಕ ಪ್ರೇರಣೆ ಮತ್ತು ನೆರವಿನಿಂದ ಪಡೆಯುವ ಯಶಸ್ಸುಗಳು ಅವರಿಗೆ ಅಂಜುಗೇಡಿತನದಿಂದ ಹೊರಬರಲು ಸಾಧ್ಯವಾಗುತ್ತದೆ.

ಅಂಜುಗೇಡಿತನ ನಮ್ಮಲ್ಲೇ ಇದೆ ಎಂಬುದು ನಮ್ಮ ಗಮನಕ್ಕೆ ಬಂದರೆ ಚಿಕಿತ್ಸೆಯ ಹಂತದ ಮೊದಲ ಯಶಸ್ವಿ ಹಂತ. ಅದು ಎಷ್ಟರ ಮಟ್ಟಿಗೆ ಅಕಾರಣ ಅಥವಾ ಸಕಾರಣ ಎಂಬುದನ್ನು ಗಮನಿಸಬೇಕು. ತಮ್ಮನ್ನು ತಾವು ವಿಶ್ರಾಂತಗೊಳಿಸಿಕೊಳ್ಳುವ ತಂತ್ರಗಳನ್ನು ಮತ್ತು ಸಣ್ಣ ಸಣ್ಣ ಪ್ರಯತ್ನಗಳು ಯಶಸ್ವಿಯಾಗುವುದನ್ನು ಗಮನಿಸಬೇಕು. ತಮ್ಮನ್ನು ತಾವು ಪ್ರೇರೇಪಿಸಿಕೊಳ್ಳುವುದು ಬಹಳ ಮುಖ್ಯ. ನಿಧಾನವಾಗಿ ಉಸಿರಾಡುವುದು. ತಮಗೆ ಅಂಜಿಕೆ ಎನಿಸುವ ವಿಷಯದಲ್ಲಿ ಪ್ರವೇಶಿಸುವ ಮುನ್ನ ದೊಡ್ಡದಾದ ನಿಟ್ಟುಸಿರನ್ನು ಬಿಟ್ಟು, ಬೆನ್ನನ್ನು ನೇರ ಮಾಡಿ, ಮುಖದಲ್ಲಿ ನಗುವನ್ನು ತಂದುಕೊಂಡು ಆತ್ಮವಿಶ್ವಾಸದ ಭಾವದಲ್ಲಿ ಹೆಜ್ಜೆಗಳನ್ನು ಇಡಬೇಕು. ‘‘ಆದ್ರೆ ಆಗ್ಲಿ, ಹೋದ್ರೆ ಹೋಗ್ಲಿ, ಇದರಿಂದ ಯಾರ ತಲೇನೂ ಹೋಗಲ್ಲ’’ ಎಂಬ ಧೋರಣೆಯಿಂದ ಮುಖದಲ್ಲಿ ನಸುನಗುವನ್ನಿಟ್ಟುಕೊಂಡು ಮುಂದಾಗುವುದು. ಸಣ್ಣ ಪ್ರಮಾಣದ ಯಶಸ್ಸು ಕಂಡರೂ ಸಂಭ್ರಮಿಸುವುದು. ಒಂದು ವೇಳೆ ವಿಫಲವಾದರೆ, ಹೋದರೆ ಹೋಗಲಿ, ಮುಂದಿನ ಸಲ ಪ್ರಯತ್ನಿಸುತ್ತೇನೆ ಎಂದು ಪ್ರಜ್ಞಾಪೂರ್ವಕವಾಗಿ ಹೇಳಿಕೊಳ್ಳುವುದು. ನಿರಾತಂಕವಾಗಿರುವುದರ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸುವುದು.

ಸಂಭ್ರಮದ ಸಿದ್ಧತೆ ಹೆಚ್ಚಿನ ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ಕೊಡುತ್ತದೆ. ಸಣ್ಣ ಸಣ್ಣ ಪ್ರಯತ್ನಗಳ ಯಶಸ್ಸು ದೊಡ್ಡ ಪ್ರಯತ್ನಕ್ಕೆ ಪ್ರೇರಣೆಯಾಗುವುದು. ಯಶಸ್ಸು ಮತ್ತು ವೈಫಲ್ಯಗಳನ್ನು ಕ್ರೀಡಾಮನೋಭಾವದಿಂದ ಮತ್ತು ವಾಸ್ತವದ ನೆಲೆಗಟ್ಟಿನಿಂದ ನೋಡುವುದು.

ಅಂಜುಗೇಡಿತನ ಹೊರಬರಲಾಗದಂತಹ ಸಮಸ್ಯೆ ಏನಲ್ಲ. ನಿಧಾನ ಮತ್ತು ಸಣ್ಣ ಪ್ರಮಾಣದ ಪ್ರೇರಣೆ, ಪ್ರಯತ್ನ ಮತ್ತು ತನಗೆ ತಾನೇ ಹೇಳಿಕೊಳ್ಳುವಂತಹ ರೂಢಿ ಕೆಲಸಕ್ಕೆ ಬರುತ್ತದೆ. ಹೊಸ ಹೊಸ ಕೌಶಲ್ಯಗಳನ್ನು ಮತ್ತು ಕಲೆಗಳನ್ನು ತಮ್ಮ ಮಟ್ಟಿಗಾದರೂ ಕಲಿಯುವುದು ಸೂಕ್ತ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಯೋಗೇಶ್ ಮಾಸ್ಟರ್,

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಮನದರಿವು
ಬಯಲರಿವು