ಬಯಲರಿವು

Update: 2024-10-06 04:55 GMT

ಮನುಷ್ಯನ ಮನಸ್ಸು ಅವನ ಬಯಕೆ, ಆಯ್ಕೆ, ಆಸಕ್ತಿ, ಅಭಿರುಚಿಗೆ ತಕ್ಕಂತೇನೂ ತಯಾರಾಗಿರುವುದಿಲ್ಲ. ಆದರೆ ಸಮಯ ಸರಿದಂತೆ ತಾನೇ ಬಯಸುವ ಬಯಕೆ, ಮಾಡಬೇಕೆನ್ನುವ ಆಯ್ಕೆ, ಹುಟ್ಟಲಿರುವ ಆಸಕ್ತಿ, ಬೆಳೆಸಿಕೊಳ್ಳುವ ಅಭಿರುಚಿಗಳನ್ನು ತನ್ನ ಮನಸ್ಸೇ ಒಪ್ಪುವುದಿಲ್ಲ.

ತನಗೆ ಬೇಕಾದುದನ್ನು ಪಡೆಯುವುದಕ್ಕೆ ತನ್ನ ಮನಸ್ಸೇ ಸಹಕರಿಸುವುದಿಲ್ಲ.

ಏಕೆಂದರೆ ಮನುಷ್ಯನ ಮನಸ್ಥಿತಿಯು ನಿರ್ಮಾಣಗೊಳ್ಳುವುದು ಅವನ ಇಚ್ಛೆಯಂತಲ್ಲ. ವಂಶವಾಹಿಗುಣಗಳು, ಕೌಟುಂಬಿಕ ಮತ್ತು ಸಾಮಾಜಿಕ ಪರಿಸರ, ಧಾರ್ಮಿಕ ಸಂಸ್ಕಾರಗಳು, ಸಾಂಸ್ಕೃತಿಕ ಪ್ರಭಾವಗಳು, ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣಗಳು, ರಾಜಕೀಯ ಮತ್ತು ಆರ್ಥಿಕ ಸ್ಥಿತಿಗತಿಗಳು, ಭಿನ್ನ ಪ್ರಾದೇಶಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳೊಡನೆ ಸಂಪರ್ಕ ಮತ್ತು ಒಡನಾಟಗಳು, ಮಾಹಿತಿ ಮತ್ತು ತಂತ್ರಜ್ಞಾನಗಳು, ತನ್ನದೇ ಮೆದುಳು ಮತ್ತು ನರಗಳ ರಚನೆ ಮತ್ತು ರಾಸಾಯನಿಕ ಕ್ರಿಯೆಗಳು; ಹೀಗೆ ಅನೇಕ ಮೂಲವಸ್ತುಗಳಿಂದ ಆಲೋಚನೆ ಮಾಡುವ ವ್ಯಕ್ತಿಯೊಬ್ಬನ ಮನಸ್ಸು ನಿರ್ಮಾಣವಾಗುತ್ತದೆ. ವ್ಯಕ್ತಿಯ ಇಚ್ಛೆಗಳನ್ನು, ಅವನ ವ್ಯಕ್ತಿಗತವಾದ ಒಪ್ಪಿಗೆ ಮತ್ತು ತಿರಸ್ಕಾರಗಳನ್ನೂ ಅವು ನಿರ್ಧರಿಸುತ್ತವೆ.

ತನ್ನ ಉಳಿಯುವಿಕೆ ಮತ್ತು ಅಳಿಯುವಿಕೆಯ ಆಧಾರದಲ್ಲಿ ವಿಷಯಗಳನ್ನು ಒಪ್ಪಿಕೊಳ್ಳುವ ಮತ್ತು ತಿರಸ್ಕರಿಸುವ ರೂಢಿಯನ್ನು ಮನುಷ್ಯ ಮಾಡಿಕೊಂಡ. ಹಾಗೆ ಅದಕ್ಕೆ ಅನುಕೂಲಕರವಾಗಿರುವ ಮಾದರಿಯನ್ನು ಕಂಡುಕೊಂಡಾದ ಮೇಲೆ ಅದನ್ನು ಶಿಸ್ತಾಗಿ ಅನುಸರಿಸಲು ತೊಡಗಿದ. ಅದನ್ನು ತಿರಸ್ಕರಿಸಿದರೆ ತಾನುಳಿಯುವುದಿಲ್ಲ ಎಂಬ ಭಯ ಅವನಿಗೆ. ಹಾಗಾಗಿಯೇ ವ್ಯಕ್ತಿಗಳು ಸಾಮೂಹಿಕವಾಗಿ ಆ ಸಿದ್ಧಪಡಿಸಿದ ಮಾದರಿಗಳಿಗೆ ಆತುಕೊಂಡ.

ಮಾದರಿಗಳೇನೋ ಸಿದ್ಧವಾದವು.

ಆ ಮಾದರಿಗಳನ್ನು ಅನುಸರಿಸುವುದರಿಂದ ವ್ಯಕ್ತಿಗಳಿಗೆ ಬದುಕುವುದಕ್ಕೆ ಸಾಧ್ಯವೂ ಆಗುತ್ತಿತ್ತು. ಆದರೆ ಜಗತ್ತು ಸದಾ ಬದಲಾವಣೆಗೆ ಒಳಗಾಗುತ್ತಿರುತ್ತದೆ. ಮಾದರಿಗಳು ಕೂಡಾ ಬದಲಾಗಬೇಕಿತ್ತು, ಆಗುತ್ತಿದ್ದವೂ ಕೂಡಾ. ಆದರೆ ಒಂದಕ್ಕೆ ರೂಢಿಯಾಗಿರುವುದರಿಂದ ಹೊರಕ್ಕೆ ಬರಲು ಎಲ್ಲರಿಗೂ ಏಕಕಾಲದಲ್ಲಿ ಸಾಧ್ಯವಾಗುತ್ತಿರಲಿಲ್ಲ. ಸಿದ್ಧ ಮಾದರಿಗಳ ಮೇಲೆ ತಮ್ಮ ಬದುಕನ್ನು ಸಾಗಿಸುವಂತಹ ಪರಾವಲಂಬಿ ಮನಸ್ಸುಗಳಿಗೆ ಸಿದ್ಧ ಮಾದರಿಗಳಿಗೆ ಅಂಟಿಕೊಂಡಿರುವುದೇ ಒಂದು ಆರಾಮ. ಅವರಿಗೆ ಮಾದರಿಗಳನ್ನು ಮುರಿಯುವುದಕ್ಕೋ, ಮರುಕಟ್ಟುವುದಕ್ಕೋ, ತಿರಸ್ಕರಿಸುವುದಕ್ಕೋ ಭಯವೇಕೆಂದರೆ, ಅದರ ಫಲದ ಬಗ್ಗೆ ಅನಿಶ್ಚಿತತೆ. ಸಿದ್ಧ ಮಾದರಿಯನ್ನು ಅವಲಂಬಿಸುವಂತಹ ಜನರಿಗೆ ನಿಶ್ಚಿತ ಮತ್ತು ಅಪೇಕ್ಷಿತ ಫಲವಿರಬೇಕು.

ಪ್ರತಿಫಲದ ಬಗ್ಗೆ ಅನಿಶ್ಚಿತತೆ ತಲೆದೋರಿದರೆ ಅವರಿಗೆ ಆತಂಕವಾಗುತ್ತದೆ. ತಮ್ಮ ಬದುಕಿನ ಸುಗಮ ನಿರ್ವಹಣೆ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ದಿಗಿಲು ಅವರದಾಗಿರುತ್ತದೆ. ಆದ್ದರಿಂದಲೇ ಯಾವುದೇ ಸಿದ್ಧ ಮಾದರಿಯನ್ನು ಪ್ರಶ್ನಿಸುವಾಗ, ಅದನ್ನು ಮೀರುವ, ಒಡೆಯುವ, ಮರುಕಟ್ಟಲು ಹೋದಾಗ ಸಮಾಜದ ದೊಡ್ಡ ಸಮೂಹ ಕನಲುತ್ತದೆ. ವಿರೋಧಿಸುತ್ತದೆ.

ಆದರೆ ವಿಪರ್ಯಾಸವೆಂದರೆ ಜೀವನ ನಿರ್ವಹಣೆಯ ವಿಷಯದಲ್ಲಿ ಅವರೇ ಬದಲಾವಣೆಗೆ ಒಳಗಾಗಿರುತ್ತಾರೆ. ಬಳಸುವ ವಸ್ತುಗಳು, ಸಂಪರ್ಕ, ಸಂಚಾರ ಸಾಧನಗಳು, ಕೆಲಸವನ್ನು ಸುಲಭಗೊಳಿಸುವ ಸಲಕರಣೆಗಳು ಅನುಕೂಲಕರವಾಗಿ ಬದಲಾವಣೆಗೊಂಡಿದ್ದು, ಅವುಗಳನ್ನು ವ್ಯಕ್ತಿಗಳು ಮತ್ತು ಸಮೂಹಗಳು ಬಳಸುತ್ತಿರುತ್ತಾರೆ. ಆದರೆ ಮಾನಸಿಕವಾಗಿ ಅಂಟಿಕೊಂಡಿರುವಂತಹ ಸಿದ್ಧ ಮಾದರಿಗಳು ಮಾತ್ರ ಗೀಳಾಗಿ ಪರಿಣಮಿಸಿಬಿಡುತ್ತವೆ.

ಚಾಲನೆಯಲ್ಲಿರುವ ಸಿದ್ಧ ಮಾದರಿಗಳನ್ನು ಆಯಾ ಕಾಲಘಟ್ಟಕ್ಕೆ, ತಿಳುವಳಿಕೆಯ ಮಟ್ಟಕ್ಕೆ ಅಪ್ರಸ್ತುತವೆಂದು ಒಡೆದು ಕಟ್ಟುವಾಗ ಮತ್ತೊಂದು ಮಾದರಿಯನ್ನು ಪರ್ಯಾಯವಾಗಿ ಕಟ್ಟುವಂತಹ ಅನಿವಾರ್ಯತೆ ಒದಗುತ್ತದೆ. ಹಳೆಯ ಮಾದರಿಗಳಿಗೆ ಬಂಡಾಯವೆದ್ದು ಹೊಸ ಮಾದರಿಗಳನ್ನು ಕಟ್ಟಿದ ನಂತರ ಅವುಗಳೂ ಕೂಡಾ ವ್ಯಕ್ತಿಗಳ ಮತ್ತು ಸಮೂಹಗಳ ಮೋಹಕ್ಕೆ ಒಳಗಾದಂತೆ ಅವು ಕೂಡಾ ಮತ್ತೊಂದು ಗಟ್ಟಿ ಪದರದ ಮಾದರಿಯಾಗಿಬಿಡುತ್ತದೆ. ಅದರ ಸೈದ್ಧಾಂತಿಕ ಸಂಮೋಹನಕ್ಕೆ ಒಳಗಾಗಿರುವವರು ಅದರ ಶ್ರೇಷ್ಠತೆ ಮತ್ತು ವಿಶಿಷ್ಟತೆಗಳನ್ನು ಎತ್ತಿಹಿಡಿಯುತ್ತಾ, ಅವುಗಳನ್ನು ಅನಿವಾರ್ಯತೆಗಳನ್ನಾಗಿ ಬಿಂಬಿಸುತ್ತಾರೆ. ಅಲ್ಲಿಗೆ ಮತ್ತೊಂದು ಮಾದರಿಗೆ ಗೀಳುಗಟ್ಟಿದಂತಾಗುವುದು.

ಹೀಗೆಯೇ ಮಾದರಿಗಳಿಂದ ಮಾದರಿಗೆ ಗೀಳುಗಟ್ಟುವುದು ಮನಸ್ಸಿನ ಒಂದು ಸಾಮಾನ್ಯ ರೂಢಿಯಾಗಿದ್ದು, ಅದು ಸದಾ ಒಂದು ಚೌಕಟ್ಟಿನ ಸಿದ್ಧ ಮಾದರಿಯಲ್ಲಿಯೇ ಸ್ಥಾನ ಬದಲಾವಣೆ ಮಾಡಿಕೊಳ್ಳುತ್ತಿರುತ್ತದೆ.

ಒಂದು ಚೌಕಟ್ಟಿನ ಮಾದರಿಯನ್ನು ಧಿಕ್ಕರಿಸಿ ಮತ್ತೊಂದು ಚೌಕಟ್ಟಿಗೆ ಒಳಗಾಗುವುದು ಅದರ ಪರಾವಲಂಬಿತನದ ದೌರ್ಬಲ್ಯ. ಚೌಕಟ್ಟುಗಳಿಂದ ಹೊರಗೆ ಬರುವುದೆಂದರೆ ಮತ್ತೊಂದು ಚೌಕಟ್ಟಿನಲ್ಲಿ ಬಂಧಿತವಾಗುವುದಲ್ಲ. ಅವನಿಗೇ ತಿಳಿಯದೇ ಯಾವುದೋ ಒಂದು ಚೌಕಟ್ಟಿನಲ್ಲಿ ಸಿಲುಕುತ್ತಾನೆ. ಪದಗಳು, ವಾಕ್ಯಗಳು, ಆಲೋಚನೆಯ ಕ್ರಮಗಳು, ವಿಚಾರಗಳು; ಹೀಗೆ ಹಲವು ಸೀಮೆಗಳು ಅವನಿಗೆ. ಮಾನಸಿಕವಾಗಿ ಸೀಮಾತೀತನಾಗಿರುವ ಅವನಿಗೆ ಭೌತಿಕ ಜಗತ್ತಿನಲ್ಲಿ ಸೀಮೆಯಿಲ್ಲದೆ ವ್ಯವಹಾರವೇ ಇಲ್ಲ.

ಆ ಸೀಮಿತ ಚೌಕಟ್ಟುಗಳಿಗೆ ವಿನ್ಯಾಸವಿರುತ್ತದೆ, ಅವುಗಳಲ್ಲಿ ಜ್ಞಾನವಿರುತ್ತದೆ, ಅವಕ್ಕೆ ಇತಿಹಾಸವಿರುತ್ತದೆ, ಅದರಲ್ಲಿರುವವರ ಸಂಖ್ಯೆಯೂ ಕೂಡಾ ದೊಡ್ಡದಾಗಿ, ಅವರು ಅದರ ಬಗ್ಗೆ ಆಕರ್ಷಕವಾಗಿ ಮತ್ತು ಭಾವುಕವಾಗಿ ಮಾತಾಡುತ್ತಿರುತ್ತಾರೆ, ಪ್ರಚಾರ ಮಾಡುತ್ತಿರುತ್ತಾರೆ. ಹಾಗಾಗಿ ಸಿದ್ಧ ಮಾದರಿಯ ಚೌಕಟ್ಟುಗಳನ್ನು ಬೀಡುಬೀಸಾಗಿ ತಟ್ಟನೆ ತಿರಸ್ಕರಿಸಲು, ಎಸೆದು ಬಿಡಲು ಮನಸ್ಸುಗಳಿಗೆ ಕಷ್ಟವಾಗುತ್ತದೆ.

ಆದರೆ ಎಚ್ಚರಿಕೆಯಿಂದ ಗಮನಿಸಬೇಕಾದ ಅಂಶವೆಂದರೆ, ಮಾದರಿಗಳ ಚೌಕಟ್ಟುಗಳು ಮನುಷ್ಯ ನಿರ್ಮಿತ. ಈ ಮನುಷ್ಯ ಸಮೂಹವೋ ಜಗತ್ತಿನ ಅತ್ಯಂತ ಸಣ್ಣಾತಿಸಣ್ಣ ಭಾಗ. ಅವನ ನಿರ್ಮಾಣವು ಇತಿಮಿತಿಗಳಿಂದಲೂ ಮತ್ತು ದೋಷಗಳಿಂದಲೂ ಕೂಡಿರುವುದು ತೀರಾ ಸಹಜ. ಯಾವುದೇ ವ್ಯಕ್ತಿಯು ಅಥವಾ ವ್ಯಕ್ತಿಗಳ ಗುಂಪುಗಳು ಏನನ್ನೇ ಆಲೋಚಿಸಿದರೂ, ನಿರ್ಮಿಸಿದರೂ, ರಚಿಸಿದರೂ ಅದರದೇ ಆದಂತಹ ಇತಿಮಿತಿಗಳನ್ನು ಹೊಂದಿರುತ್ತದೆ. ಆದರೆ ಆಯಾ ಕಾಲಘಟ್ಟಕ್ಕೆ ಮತ್ತು ಅವರ ಸೀಮಿತ ಸಾಮರ್ಥ್ಯಕ್ಕೆ ಪೂರ್ಣವಾಗಿರುತ್ತದೆ. ಹಾಗಾಗಿಯೇ ಸದಾ ವಿಕಾಸವಾಗುತ್ತಿರುವ ಈ ಜಗತ್ತಿನಲ್ಲಿ ಯಾವುದೇ ಮನುಷ್ಯ ರೂಪಿತ ಸಿದ್ಧಾಂತಗಳು, ಮಾದರಿಗಳು, ನಿರೂಪಣೆಗಳು, ವ್ಯಾಖ್ಯಾನಗಳು, ಸಂಶೋಧನೆಗಳು ಅಂತಿಮವಾಗಲು ಸಾಧ್ಯವಿಲ್ಲ. ಅವೆಲ್ಲವೂ ಹಳತಾಗುತ್ತವೆ, ಮಾಸುತ್ತವೆ, ಬಲಹೀನವಾಗುತ್ತವೆ ಮತ್ತು ಒಂದಲ್ಲ ಒಂದು ರೀತಿಯಲ್ಲಿ ಅಪ್ರಸ್ತುತವಾಗುತ್ತವೆ.

ಈ ವಾಸ್ತವದಿಂದಾಗಿ ಮನಸ್ಸು ಕನಲುತ್ತದೆ. ಈ ಅಸ್ತಿತ್ವದ ಭಾಗವಾಗಿ ಸ್ವಭಾವತಃ ವಿಕಾಸಕ್ಕೆ ಒಳಗಾಗಬೇಕಾಗುವ ಮನಸ್ಸನ್ನು ಮಾದರಿಗಳು, ಚೌಕಟ್ಟುಗಳು, ಸಿದ್ಧಾಂತಗಳು, ಧರ್ಮ, ಸಂಸ್ಕೃತಿಗಳು ಬಂಧಿಸುವ ಮತ್ತು ಅಂಕೆಯಲ್ಲಿರಿಸಿಕೊಳ್ಳುವ ಕಾರಣದಿಂದ ಅದು ಒತ್ತಡಕ್ಕೆ ಸಿಕ್ಕು ಕನಲುತ್ತಿರುತ್ತದೆ ಮತ್ತು ನರಳುತ್ತಿರುತ್ತದೆ.

ಇಂತಹ ಒತ್ತಡಗಳಿಂದ ಬಿಡುಗಡೆಗೆ ಹಾತೊರೆಯುತ್ತಿರುತ್ತದೆ. ನಮಗೆ ದಾರಿಗಳೇ ಗುರಿಗಳಲ್ಲ ಎಂಬ ಜಾಗೃತಭಾವದಲ್ಲಿ ನಿರ್ಗುರಿಯೇ ಗುರಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು