ಗದ್ದುಗೆಯ ಬೆಕ್ಕುಗಳು

ಗಾಂಧಿಯ ಜೊತೆಗೆ ಯಾರನ್ನೂ ಹೋಲಿಸಲಾಗದು. ಆದರೆ ಹಿರಿಯ ವಕೀಲರೆಂಬ ಬಿರುದು ಹೊತ್ತು ಆಳುವ ಪಕ್ಷದ ಜೊತೆಗೆ ಸಂಪೂರ್ಣವಾಗಿ ಗುರುತಿಸಿಕೊಂಡು ಒಂದು ರಾಜ್ಯದ ರಾಜ್ಯಪಾಲರಾದ ಪಕ್ಷರಾಜಕಾರಣಿಯೊಬ್ಬರು ಗಾಂಧಿಯ ಜೊತೆ ಮೋದಿಯನ್ನು ಹೋಲಿಸುವಾಗ ಅದು ದೇಶದ್ರೋಹಕ್ಕಿಂತಲೂ ಕಳಪೆ ಮಾತೆನ್ನಿಸಬೇಕಲ್ಲವೇ? ಜಗದೀಪ್ ಧನ್ಕರ್ ಅವರನ್ನು ಗಮನಿಸಿದರೆ ಹಾಗನ್ನಿಸುವುದಿಲ್ಲ. ಏಕೆಂದರೆ ಅವರು ದುರುದ್ದೇಶದಿಂದಲೇ ಹಾಗೆ ಹೇಳಿರುತ್ತಾರೆ.

Update: 2023-11-30 08:26 GMT

Photo: PTI

ಭಾರತದ ಘನವೆತ್ತ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನ್ಕರ್ ತಮ್ಮ ಭಾಷಣವೊಂದರಲ್ಲಿ ಗಾಂಧಿ ರಾಷ್ಟ್ರಪಿತ ಇರಬಹುದು; ಆದರೆ ನವಭಾರತದ ಪಿತ ಪ್ರಧಾನಿ ಮೋದಿ ಎಂದು ಹೇಳುವುದರ ಮೂಲಕ ತನ್ನ ಸ್ಥಾನದ ಗೌರವಕ್ಕಿಂತ ಹೆಚ್ಚಾಗಿ ಅದರ ಸುಭದ್ರತೆಯನ್ನು ಮತ್ತು ರಾಜಕೀಯ ಭವಿಷ್ಯದ ಜೀವವಿಮಾ ಕಂತನ್ನು ಪಾವತಿಸಿದ್ದಾರೆ. ಇದೇ ರೀತಿ ಅವರು ಮುಂದುವರಿದರೆ ಪ್ರಾಯಃ ಮುಂದಿನ ರಾಷ್ಟ್ರಪತಿ ಚುನಾವಣೆಯಲ್ಲಿ ಅವರೇ ಭಾಜಪದ ಅಭ್ಯರ್ಥಿಯಾಗಬಹುದು ಇಲ್ಲವೇ ಮೋದಿ ಸರಕಾರ ಮತ್ತೆ ಆಯ್ಕೆಯಾದರೆ ಅವರು ತನ್ನ ಈಗಿನ ಸ್ಥಾನವನ್ನು ಬಿಟ್ಟುಕೊಟ್ಟು ಮೋದಿ ಸಂಪುಟದ ಸಚಿವರಾಗಬಹುದು.

ಹೀಗಾಗಬಹುದೆಂದು ಊಹಿಸುವುದು ರಾಜಕಾರಣಿಗಳ ಕುರಿತು ಮಾತ್ರ. ಉಪರಾಷ್ಟ್ರಪತಿಗಳ ಹುದ್ದೆ ಸಾಂವಿಧಾನಿಕವಾಗಿ ದೇಶದ ಎರಡನೆಯ ಅತ್ಯುನ್ನತ ಹುದ್ದೆ. ಇದನ್ನು ತ್ಯಜಿಸುವ ವೈರಾಗ್ಯ ಒಬ್ಬ ಘನವೆತ್ತ ವ್ಯಕ್ತಿಗೆ ಬರಬಹುದೇ? ಆದರೆ ಧನ್ಕರ್ ಅವರ ಜೀವನ ಚರಿತ್ರೆಯನ್ನು ಗಮನಿಸಿದರೆ ಅವರಿಂದ ಇದನ್ನು ನಿರೀಕ್ಷಿಸಬಹುದು. ಈ ಬಗ್ಗೆ ಕೆಲವು ಮಾಹಿತಿ ಹೀಗಿದೆ:

ಜಗದೀಪ್ ಧನ್ಕರ್ ರಾಜಸ್ಥಾನದವರು. ಜಾಟ್ ಜನಾಂಗಕ್ಕೆ ಸೇರಿದವರು. ಹುಟ್ಟು: 18/05/1951. ಜೈಪುರದ ಕಾನೂನು ಕಾಲೇಜಿನಿಂದ ಕಾನೂನು ಪದವಿಯನ್ನು ಪಡೆದು 1979ರಲ್ಲಿ ಅಲ್ಲಿ ವೃತ್ತಿ ಜೀವನ ಆರಂಭಿಸಿದರು. ವೃತ್ತಿಯ ಆರಂಭದಿಂದಲೇ (ಪ್ರಾಯಃ ವಿದ್ಯಾರ್ಥಿ ದೆಸೆಯಿಂದಲೇ) ರಾಜಕೀಯದ ಸೋಂಕನ್ನು ಅಂಟಿಸಿಕೊಂಡವರು. ಶಕ್ತ ರಾಜಕಾರಣಿಯಾಗಿದ್ದಿರಬೇಕು. ಹೀಗಾಗಿ 1989ರಲ್ಲಿ ಅವರು ರಾಜಸ್ಥಾನದ ಝುಂಝಿನು ಲೋಕಸಭಾ ಕ್ಷೇತ್ರದಿಂದ ಆಗಿನ ಜನತಾದಳದ ಟಿಕೆಟ್ ಪಡೆದು ಗೆದ್ದರು. ಅಚ್ಚರಿಯ ಬೆಳವಣಿಗೆಯಲ್ಲಿ 1990ರಲ್ಲಿ ರಚನೆಗೊಂಡ ಚಂದ್ರಶೇಖರ್ ಸರಕಾರದಲ್ಲಿ ಅಷ್ಟೇ ಅಚ್ಚರಿಯ ಆಯ್ಕೆಯಲ್ಲಿ ಸಂಸದೀಯ ಖಾತೆಯ ರಾಜ್ಯ ಸಚಿವರಾದರು. ಅದು ಅಲ್ಪಾವಧಿಯದ್ದು. ಸರಕಾರ ಪತನವಾದ ಬಳಿಕ 1991ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. 1993ರಿಂದ 1998ರ ವರೆಗೆ ರಾಜಸ್ಥಾನದ ಕಿಷನ್‌ಘರ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದರು. ಮುಂದೆ 1998ರಲ್ಲಿ ಕಿಷನ್‌ಘರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. 2003ರಲ್ಲಿ ಭಾಜಪವನ್ನು ಸೇರಿದರು. 2008ರ ರಾಜಸ್ಥಾನ ಚುನಾವಣಾ ಪ್ರಚಾರ ಸಮಿತಿಯ ಪ್ರಮುಖರಾದರು. ಆನಂತರ ಭಾಜಪದ ಕಾನೂನು ಮತ್ತು ಕಾನೂನು ವ್ಯವಹಾರಗಳ ಪ್ರಮುಖರಾದರು. ಭಾಜಪಕ್ಕೆ ತೋರಿದ ನಿಷ್ಠೆ ಫಲಕಾರಿಯಾಯಿತು. 2019ರಲ್ಲಿ ಪಶ್ಚಿಮ ಬಂಗಾಳ ರಾಜ್ಯದ ರಾಜ್ಯಪಾಲರಾಗಿ ನೇಮಕಗೊಂಡರು. ಜುಲೈ 2022ರಲ್ಲಿ ಭಾಜಪದ ಪರವಾಗಿ ಉಪರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾದ ಬಳಿಕ ತಮ್ಮ ಉದ್ಯೋಗಕ್ಕೆ ರಾಜೀನಾಮೆ ಘೋಷಿಸಿದರು. ಆನಂತರ ನಡೆದ ಚುನಾವಣೆಯಲ್ಲಿ (ಅವರ ಪ್ರತಿಸ್ಪರ್ಧಿ ಕಾಂಗ್ರೆಸಿನ ಮಾರ್ಗರೆಟ್ ಆಳ್ವ) ನಿರೀಕ್ಷೆಗೂ ಮೀರಿ ಬಹುಮತ ಪಡೆದು (528-197) ಆಯ್ಕೆಯಾದರು. ತನ್ಮಧ್ಯೆ 1990ರಲ್ಲಿ ಹಿರಿಯ ವಕೀಲರೆಂದು ರಾಜಸ್ಥಾನದ ಉಚ್ಚ ನ್ಯಾಯಾಲಯದಿಂದ ನಾಮಕರಣಗೊಂಡರು. ಅಲ್ಲಿನ ವಕೀಲರ ಸಂಘದ ಅಧ್ಯಕ್ಷರೂ ಆದರು. ರಾಜಸ್ಥಾನದ ಉಚ್ಚ ನ್ಯಾಯಾಲಯ ಮಾತ್ರವಲ್ಲ, ಸರ್ವೋಚ್ಚ ನ್ಯಾಯಾಲಯದ ಮುಂದೆಯೂ ವೃತ್ತಿಯನ್ನು ನಡೆಸಿದರು. 2015ರ ಸಟ್ಲೆಜ್ ನದಿ ನೀರಿನ ವಿವಾದದಲ್ಲಿ ಹರ್ಯಾಣ ಸರಕಾರದ ಪರವಾಗಿ ವಾದಿಸಿದ್ದರು. (ಈ ಮತ್ತು ಇನ್ನು ಕೆಲವು ವಿವರಗಳು ಅಂದರೆ ಅವರ ಪತ್ನಿ ಮೆಟ್ರಿಕ್ಯುಲೇಷನ್‌ವರೆಗಷ್ಟೇ ಓದಿದ್ದರೂ 2013-2022ರ ಅವಧಿಯಲ್ಲಿ ರಾಜಸ್ಥಾನದ ಬನಸ್ಥಲೀ ವಿಶ್ವವಿದ್ಯಾನಿಲಯದಿಂದ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪದವಿಗಳನ್ನು ಪಡೆದ ದಾಖಲೆಯೂ ಗೂಗಲ್‌ನಲ್ಲಿವೆ.)

ಪ್ರಾಯಃ ಭಾಜಪವನ್ನು ಸೇರುವ ವರೆಗೆ ಅವರು ತನ್ನ ಘನತೆಯನ್ನು ಹೊತ್ತು ಅಷ್ಟೇನೂ ಪ್ರಚಾರ ಪಡೆದಿರಲಿಲ್ಲ. ಭಾಜಪದ ರಾಜಕಾರಣಿಯಾಗಿ ಮೊದಲ ಕೆಲ ವರ್ಷಗಳಲ್ಲೂ ಅವರು ಅಗ್ರಪಂಕ್ತಿಗೆ ಬಂದಿರಲಿಲ್ಲ. ಆದರೆ 2019ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಕಳುಹಿಸಲ್ಪಟ್ಟಾಗ ಅವರ ಶಕ್ತಿಯ ಅರಿವಾಯಿತು. (ಆಗ ಕಾಂಗ್ರೆಸ್ ಈಗಿನಷ್ಟೂ ಶಕ್ತವಾಗಿರಲಿಲ್ಲ ಮತ್ತು ಸಂಸತ್ತಿನಲ್ಲಿ ಕಳೆಗುಂದಿ ತೃಣಮೂಲ ಕಾಂಗ್ರೆಸ್, ಡಿಎಂಕೆ, ಮತ್ತಿತರ ಪ್ರತಿಪಕ್ಷಗಳಷ್ಟೂ ಪ್ರಭಾವವನ್ನು ಹೊಂದಿರಲಿಲ್ಲ.) ಧನ್ಕರ್ ಅವರನ್ನು ಭಾಜಪದ ಬದ್ಧ ಎದುರಾಳಿ ತೃಣಮೂಲ ಕಾಂಗ್ರೆಸಿನ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಮಣಿಸಲು ಅವರನ್ನು ಕಳುಹಿಸಲಾಗಿತ್ತೆಂದು ಆನಂತರದ ಬೆಳವಣಿಗೆಗಳು ಸಾರಿದವು. ಅವರು ರಾಜಕಾರಣಿಯಾಗಿ ಮಾಡದೇ ಇದ್ದದ್ದನ್ನು ಈಗ ಮಾಡತೊಡಗಿದರು. ಮಮತಾ ಬ್ಯಾನರ್ಜಿ ನಾಯಕತ್ವದ ಸರಕಾರವನ್ನು ಬಹಿರಂಗವಾಗಿಯೇ ಟೀಕಿಸತೊಡಗಿದರು. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸದಾ ರಾಜ್ಯ ಸರಕಾರವನ್ನು ಟೀಕಿಸತೊಡಗಿದರು. ಎಲ್ಲಿ ತಡೆಯೊಡ್ಡಬಹುದೋ ಅಂತಹ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ಬಹುಪಾಲು ಕೇಂದ್ರ ಸರಕಾರದ ಗೂಢಚಾರರಂತೆಯೋ, ಸೇವಾ ಧುರಂಧರನಂತೆಯೋ ವರ್ತಿಸಿ ತನ್ನ ಸ್ವಾಮಿನಿಷ್ಠೆಯನ್ನು ತೋರಿದರು. ಇದು ಎಲ್ಲಿಯ ವರೆಗೆ ತಲುಪಿತೆಂದರೆ ಮಮತಾ ಅವರನ್ನು ‘ವಿರೋಧ ಪಕ್ಷದ ನಾಯಕರು’ ಎಂದು ಬಹಿರಂಗವಾಗಿಯೇ ಹೇಳಿದರು.

ರಾಜ್ಯಪಾಲರ ಹಕ್ಕು ಮತ್ತು ಕರ್ತವ್ಯಗಳನ್ನು ಸಂವಿಧಾನದ 153-162, 175, 176 ಮುಂತಾದ ವಿಧಿಗಳು ಸ್ಪಷ್ಟವಾಗಿ ನಿರೂಪಿಸಿವೆ. ಅವರು ಏನಿದ್ದರೂ ಸರಕಾರದ ಗೌರವ ಫಲಕಗಳು; ಆಲಂಕಾರಿಕ ಕಿರೀಟಗಳು. ಕಾರ್ಯಾಂಗವಾಗಿರುವ ಸಚಿವ ಸಂಪುಟವು ಮಾಡಿದ ನಿರ್ಧಾರಗಳಿಗೆ ಔಪಚಾರಿಕವಾಗಿ ಕಾನೂನಿನ ಅಧಿಕೃತತೆಯನ್ನು ನೀಡಬೇಕಾದವರು. ದೇಶಕ್ಕೆ ರಾಷ್ಟ್ರಪತಿಗಳು ಹೇಗೋ ಹಾಗೆ ರಾಜ್ಯಗಳಿಗೆ ರಾಜ್ಯಪಾಲರು. ಒಂದು ರೀತಿಯಲ್ಲಿ ರಾಷ್ಟ್ರಪತಿ-ಉಪರಾಷ್ಟ್ರಪತಿ ಹುದ್ದೆಗಳು ಇವುಗಳಿಗಿಂತ ಹೆಚ್ಚು ಪ್ರಜಾಸತ್ತಾತ್ಮಕವಾಗಿವೆ. ಅಲ್ಲೊಂದು ಚುನಾವಣೆಯೆಂಬ ಪ್ರಹಸನವಾದರೂ ಇದೆ. ರಾಷ್ಟ್ರಪತಿಗಳಿಗೆ ಕೇಂದ್ರ ಸಚಿವ ಸಂಪುಟದ ಸಲಹೆಗನುಗುಣವಾಗಿ ತುರ್ತುಪರಿಸ್ಥಿತಿಯನ್ನು, ಯಾವುದೇ ರಾಜ್ಯಗಳಲ್ಲಿ ಆಯಾಯ ರಾಜ್ಯಪಾಲರ ಗೋಪ್ಯ ವರದಿಯ ಶಿಫಾರಸನ್ನು ಗಮನಿಸಿ ಅಗತ್ಯವಾದರೆ ಆಯಾ ರಾಜ್ಯಗಳಲ್ಲಿ ತನ್ನ ಆಡಳಿತವನ್ನು (ಅಂದರೆ ಕೇಂದ್ರ ಸರಕಾರದ ಆಡಳಿತವನ್ನು) ಮಾಡುವ ಹಕ್ಕಿದೆ. ರಾಜ್ಯಪಾಲರಿಗೆ ಅದೂ ಇಲ್ಲ. ಅವರು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಣ ಒಂದು ಕೊಂಡಿ ಮಾತ್ರ. ನಿವೃತ್ತ ಅಥವಾ ರಾಜಕೀಯದಿಂದ ಹೊರತಳ್ಳಲ್ಪಟ್ಟ ಆದರೆ ದೂರಸರಿಸಲಾಗದ ರಾಜಕಾರಣಿಗಳು ಮತ್ತು ಇನ್ನು ಕೆಲವೊಮ್ಮೆ ಸರಕಾರದ ಕೃಪಾಕಟಾಕ್ಷದಲ್ಲಿದ್ದುಕೊಂಡೇ ನಿವೃತ್ತಿಯಾದ ಹಿರಿಯ ಅಧಿಕಾರಿಗಳು ರಾಜ್ಯಪಾಲರಾಗಿ ನೇಮಕಗೊಳ್ಳುತ್ತಾರೆ. ಈ ಕಾರ್ಯಭಾರವನ್ನು ಹೊಣೆಯರಿತು ನಿರ್ವಹಿಸಿದ ರಾಜಕಾರಣಿಗಳೂ, ಹಿರಿಯ ಅಧಿಕಾರಿಗಳೂ ಇದ್ದಾರೆ. ಆದರೆ ಇತ್ತೀಚೆಗಿನ ದಶಕಗಳಲ್ಲಿ ಈ ಹುದ್ದೆಗಳು ಸಾಂವಿಧಾನಿಕವಾಗಿಯೂ ಇಲ್ಲ, ಜನಹಿತವಾಗಿಯೂ ಇಲ್ಲ. ಬದಲಾಗಿ ಕೇಂದ್ರದ ಜೀ ಹುಜೂರ್ ಸಂಸ್ಕೃತಿಯ ಚೇಲಾಗಿರಿಯಾಗುತ್ತಿದೆ. ರಾಜ್ಯ ಸರಕಾರಗಳು ಮಂಡಿಸಿದ ಮಸೂದೆಗಳನ್ನು ಅಧಿಕೃತತೆಗಾಗಿ ಕಳುಹಿಸಿದರೆ ರಾಜ್ಯಪಾಲರು ಅವುಗಳನ್ನು ತಿರಸ್ಕರಿಸುವುದು, ಇಲ್ಲವೇ ವರ್ಷಾನುಗಟ್ಟಲೆ ಸಹಿಹಾಕದೆ ಅವುಗಳ ಅನುಷ್ಠಾನಕ್ಕೆ ತಡೆಯೊಡ್ಡುವುದು ಮುಂತಾದವು ನಡೆಯುತ್ತಿವೆ. ಒಂದು ನಿಗದಿತ ಅವಧಿಗೆ ನೇಮಿಸಲ್ಪಟ್ಟವರು ಅಷ್ಟೊಂದು ವಿಪರೀತವಾಗಿ ವರ್ತಿಸುವುದೆಂದರೆ ಅದು ಪ್ರಜಾತಂತ್ರಕ್ಕೆಸಗುವ ಅವಮಾನ; ರಾಜ್ಯಪಾಲರೆಂಬ ವಸಾಹತುಶಾಹಿ ಏಜಂಟರ ಪಳೆಯುಳಿಕೆ ಹುದ್ದೆಯ ಘನತೆಯ ನಿರ್ನಾಮ.

ಈಚೆಗೆ ಸರ್ವೋಚ್ಚ ನ್ಯಾಯಾಲಯವು ರಾಜ್ಯಪಾಲರ ಇಂತಹ ನಿರ್ನಾಮತಂತ್ರವನ್ನು ಕಟುವಾಗಿ ಟೀಕಿಸಿದೆ ಮತ್ತು ಅವರ ಲಕ್ಷ್ಮಣರೇಖೆಯ ಗೆರೆಯನ್ನು ಮತ್ತೊಮ್ಮೆ ಗುರುತಿಸಿದೆ. ಕೇರಳ, ತಮಿಳುನಾಡು, ಪಂಜಾಬ್, ದಿಲ್ಲಿ ಸರಕಾರಗಳು ರಾಜ್ಯಪಾಲರುಗಳನ್ನು ಕಟಕಟೆಗೆ ತಳ್ಳಿವೆ. ಅಲಂಕಾರಸ್ವರೂಪ ವಿರೂಪವಾಗಿ ಬದಲಾಗುವುದೆಂದರೆ ಮತ್ತು ಪೀಠಭದ್ರರು ಪಟ್ಟಭದ್ರರಾಗುವುದೆಂದರೆ ಇದೇ.

ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಜಗದೀಪ್ ಧನ್ಕರ್ ಅವರ ಆಯ್ಕೆ ಮಮತಾ ಬ್ಯಾನರ್ಜಿಯವರು ಸ್ವಲ್ಪ ನಿರಾತಂಕವಾಗಿ ಉಸಿರಾಡುವಂತೆ ಮಾಡಿತು. ಈ ಆಯ್ಕೆಗೆ ಎರಡು ಪ್ರಬಲ ಕಾರಣಗಳಿದ್ದಿರಬಹುದು: 1. ಮೋದಿ ಸರಕಾರದ ಎಲ್ಲ ಪ್ರಯತ್ನ ಹಾಗೂ ಜಗದೀಪ್ ಧನ್ಕರ್ ಅವರ ಬಹಿರಂಗ ಬೆಂಬಲವಿದ್ದರೂ 2021ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ 2/3 ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ್ದು; 2. ಜಗದೀಪ್ ಧನ್ಕರ್ ಉಪರಾಷ್ಟ್ರಪತಿಯಾಗುವುದರೊಂದಿಗೆ ಹಿರಿಯ ಸಮರ್ಥ ವಕೀಲರೂ ಆಗಿರುವುದರಿಂದ ರಾಜ್ಯಸಭಾದಲ್ಲಿ ಪ್ರತಿಪಕ್ಷಗಳನ್ನು ಕಟ್ಟಿಹಾಕುವ ಶಕ್ತಿಪಡೆಯುವುದು ಮತ್ತು ಅವರು ಬಹಿರಂಗವಾಗಿ ಪ್ರತಿಪಕ್ಷಗಳನ್ನು ಟೀಕಿಸುವುದರಲ್ಲಿಯೂ, ಮೋದಿಯವರನ್ನು ಸಮರ್ಥಿಸುವುದರಲ್ಲಿಯೂ ರಾಜಕಾರಣಿಗಳನ್ನೂ ನಾಚಿಸುವಷ್ಟು ಮುಂದುವರಿದದ್ದು. (ಸಾಲಿಸಿಟರ್ ಜನರಲ್ ಆಗಿರುವ ಗುಜರಾತಿನ ತುಷಾರ್ ಮೆಹ್ತಾ ಮತ್ತು ಜಗದೀಪ್‌ಧನ್ಕರ್ ಭಾಜಪದ ಕಾನೂನಿನ ಅಸ್ತ್ರಗಳಾಗಿ ಬದಲಾಗಿರುವುದು ವಿಶೇಷ ಬೆಳವಣಿಗೆ!)

ರಾಜ್ಯಸಭಾ ಆಧ್ಯಕ್ಷರಾಗಿ ಜಗದೀಪ್ ಧನ್ಕರ್ ಪ್ರತಿಪಕ್ಷಗಳನ್ನು ಟೀಕಿಸುವುದರಲ್ಲಿ ಮತ್ತು (ತನ್ನ) ಸರಕಾರವನ್ನು ಸಮರ್ಥಿಸುವಲ್ಲಿ ಸಿಕ್ಕಿದ ಯಾವ ಅವಕಾಶವನ್ನೂ ಕಳೆದುಕೊಳ್ಳಲಾರರು. ರಾಜಕೀಯ ರಹಿತ ವೇದಿಕೆಗಳಲ್ಲೂ ಅವರು ರಾಜಕೀಯವನ್ನು ಮಿಶ್ರಮಾಡಿ ಮಾತನಾಡುವಲ್ಲಿ ನಿಸ್ಸೀಮರು. ಹೀಗೆ ಟೀಕಿಸುವಾಗ ತನ್ನ ವೈಯಕ್ತಿಕ ವರ್ಚಸ್ಸನ್ನು ರಾಜಕೀಯ ಪುರೋಭಿವೃದ್ಧಿಗಾಗಿ ತ್ಯಾಗಮಾಡುವವರು. ಉಪರಾಷ್ಟ್ರಪತಿಯ ಹುದ್ದೆ ಪ್ರಧಾನಿ ಹುದ್ದೆಗಿಂತ ಸಾಂವಿಧಾನಿಕವಾಗಿ ಹಿರಿದು. ಆದರೆ ಸದ್ಯ ಅವರು ಪ್ರಧಾನಿಯವರನ್ನು ತನ್ನ ನಾಯಕರೆಂದು ಒಪ್ಪಿಕೊಂಡೇ ಮಾತನಾಡುತ್ತಾರೆ. ಪ್ರಧಾನಿಯವರ ಬೆಂಬಲಕ್ಕೆ ವೈಯಕ್ತಿಕವಾಗಿಯೂ ಪದನಿಮಿತ್ತವಾಗಿಯೂ ನಡೆದುಕೊಳ್ಳುತ್ತಾರೆ. ಈಚೆಗೆ ನ್ಯಾಯಾಂಗದ ಹಕ್ಕುಗಳನ್ನು ಮಿತಿಗೊಳಿಸಬೇಕೆಂಬ ಪ್ರಯಾಸದ ಪ್ರಮೇಯವನ್ನು ಅವರು ಆರಂಭಿಸಿದರು. ಸಂವಿಧಾನ ಮತ್ತು ಕಾನೂನಿನ ರಚನೆ, ಪಾಲನೆ ಮತ್ತು ತಿದ್ದುಪಡಿಯಲ್ಲಿ ಸಂಸತ್ತೇ ಸಾರ್ವಭೌಮವೆಂದೂ ನ್ಯಾಯಾಂಗವು ತಲೆಹಾಕಬಾರದೆಂದೂ ಆಕ್ಷೇಪಿಸಿದರು. ಅಗತ್ಯ ಬಿದ್ದರೆ ಸಂವಿಧಾನವನ್ನು ಈ ದಿಕ್ಕಿನಲ್ಲಿ ತಿದ್ದುಪಡಿಮಾಡಬೇಕೆಂದೂ ಸಲಹೆ ಮಾಡಿದರು. ಭಾರತದ ಸಂವಿಧಾನ ಚರಿತ್ರೆಯಲ್ಲಿ ‘ಧ್ರುವನಕ್ಷತ್ರದಂತಿರುವ’ (ಈ ರೂಪಕವು ಭಾರತದ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಚೂಡ್ ಅವರದ್ದು) ಶ್ರೀ ಕೇಶವಾನಂದ ಭಾರತೀ ಸ್ವಾಮಿ ಪ್ರಕರಣದ ತೀರ್ಪು ಸಂವಿಧಾನವನ್ನು ಸರಿಯಾಗಿ ಅರ್ಥವಿಸಿಲ್ಲ ಹಾಗೂ ಸಂವಿಧಾನವನ್ನು ಅದರ ಮೂಲಸ್ವರೂಪವೂ ಸೇರಿದಂತೆ ಬದಲಾಯಿಸಲು ಸಂಸತ್ತಿಗೆ ಅಧಿಕಾರವಿದೆ ಎಂದು ಪ್ರತಿಪಾದಿಸಿದರು.(ಅವರು ಅನಿವಾರ್ಯವಾಗಿ ಅಥವಾ ಬಲವಂತವಾಗಿ ‘ಸರಕಾರಕ್ಕೆ’ ಎಂಬ ಪದದ ಬದಲಾಗಿ ಈ ‘ಸಂಸತ್ತಿಗೆ’ ಎಂಬ ಪದವನ್ನು ಹಾಕಿದಂತೆ ಕಾಣಿಸುತ್ತದೆ!)

ಮುಗ್ಧರು, ಧೂರ್ತರು ಮತ್ತು ಸ್ವಾರ್ಥಿಗಳು ಎಲ್ಲಿಯವರೆಗೆ ತಮಗೆ ಒಲಿಯುತ್ತಾರೋ ಅಲ್ಲಿಯವರೆಗೆ ಸತ್ಯದ ಮೊರೆ ಹೋಗಬೇಕಾಗಿಲ್ಲವೆಂಬುದನ್ನು ಇಂದಿನ ಭಾರತೀಯ ರಾಜಕಾರಣದ ಮಾತ್ರವಲ್ಲ ಸಾಮಾಜಿಕ, ಸಾಂಸ್ಕೃತಿಕ ಪರಿಸರದ ನಡವಳಿಕೆಗಳು ಮೂಲತತ್ವವಾಗಿ ಸ್ವೀಕರಿಸಿವೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರವನ್ನು ಮತ್ತು ಅಭಿವ್ಯಕ್ತಿಯ ಹಕ್ಕು-ಸ್ವಾತಂತ್ರ್ಯವನ್ನು ಪಡೆದವರು ಮಾತನಾಡುವ ಹುಂಬತನ ನೋಡಿದರೆ ಬೇಸರ ಮಾತ್ರವಲ್ಲ, ಜಿಗುಪ್ಸೆಯಾಗುತ್ತದೆ.

ಗಾಂಧಿಯ ಜೊತೆಗೆ ಯಾರನ್ನೂ ಹೋಲಿಸಲಾಗದು. ಆದರೆ ಹಿರಿಯ ವಕೀಲರೆಂಬ ಬಿರುದು ಹೊತ್ತು ಆಳುವ ಪಕ್ಷದ ಜೊತೆಗೆ ಸಂಪೂರ್ಣವಾಗಿ ಗುರುತಿಸಿಕೊಂಡು ಒಂದು ರಾಜ್ಯದ ರಾಜ್ಯಪಾಲರಾದ ಪಕ್ಷರಾಜಕಾರಣಿಯೊಬ್ಬರು ಗಾಂಧಿಯ ಜೊತೆ ಮೋದಿಯನ್ನು ಹೋಲಿಸುವಾಗ ಅದು ದೇಶದ್ರೋಹಕ್ಕಿಂತಲೂ ಕಳಪೆ ಮಾತೆನ್ನಿಸಬೇಕಲ್ಲವೇ? ಜಗದೀಪ್‌ಧನ್ಕರ್ ಅವರನ್ನು ಗಮನಿಸಿದರೆ ಹಾಗನ್ನಿಸುವುದಿಲ್ಲ. ಏಕೆಂದರೆ ಅವರು ದುರುದ್ದೇಶದಿಂದಲೇ ಹಾಗೆ ಹೇಳಿರುತ್ತಾರೆ. ಇದು ಮಾತಿನ ದ್ಯೂತ. ದೇಶವು ಪ್ರತಿಪಕ್ಷಮುಕ್ತವಾಗಬೇಕೆಂದು ಪ್ರಧಾನಿಯೇ ಹೇಳುವ, ಸರಕಾರದ ಟೀಕೆಯೇ ದೇಶದ್ರೋಹವೆಂದು ಪರಿಗಣಿಸಲ್ಪಡುವ, ಎಲ್ಲ ಸ್ವತಂತ್ರ ಶೋಧನಾ/ತನಿಖಾ ಸಂಸ್ಥೆಗಳನ್ನೂ ಅಲಿಖಿತವಾಗಿ ರಾಷ್ಟ್ರೀಕರಿಸಿರುವ, ಸರಕಾರದ ಉನ್ನತಾಧಿಕಾರಿಯಾಗಿ ಆಗಾಗ ಹೊಸಪಿತರನ್ನು ತರುವುದು ಯಾವ ಸಂಸಾರಕ್ಕೂ ಭೂಷಣವಲ್ಲ. ಹಾಗಿರುವಾಗ ಒಂದು ರಾಷ್ಟ್ರಕ್ಕೆ ಹೇಗಾದೀತು? ಅದು ಒಂದಷ್ಟು ಮುಗ್ಧ, ಧೂರ್ತ ಮತ್ತು ಸ್ವಾರ್ಥಿ ಬೆಂಬಲಿಗರ ಕೈಚಪ್ಪಾಳೆಯನ್ನು ಪಡೆಯಬಹುದು. ಆದರೆ ಇತಿಹಾಸದ ಓದಿನಲ್ಲಿ ತಮ್ಮ ಮುಖಕ್ಕೇ ತಾವು ಮಸಿಬಳಿದುಕೊಂಡಷ್ಟೇ ಆಗಬಹುದು. ಕಾಯವಳಿದರೂ ಕೀರ್ತಿ ಉಳಿಯಬೇಕು. ಆದರೆ ಕಾಯವಳಿಯುವ ಮುನ್ನವೇ ಕೀರ್ತಿಯಳಿದರೆ? ವೃದ್ಧರು ಜ್ಞಾನಶೂನ್ಯರಾದರೆ ಇತಿಹಾಸ ಹೀಗೇ ಮುಂದುವರಿಯುತ್ತದೆ.

ಪ್ರಸಿದ್ಧ ಕವಿ ಎಕ್ಕುಂಡಿಯವರ ದಾಸಿಮಯ್ಯ ಮತ್ತು ಬೆಕ್ಕು ಕವನದ

ಗದ್ದುಗೆಯ ಬಳಿಗೊಂದು ಬೆಕ್ಕು ಕೂತಿತ್ತು|

ಧ್ಯಾನದಲಿ ಎಂಬಂತೆ ಕಣ್ಣುಮುಚ್ಚಿ|

ಬಿಲದಿಂದ ಇಲಿಯೊಂದು ಓಡಿರಲು| ಛಂಗನೆ

ಹಾರಿತ್ತು ಹಿಡಿದು ಆ ಇಲಿಯ ಕಚ್ಚಿ|

ದಾಸಿಮಯ್ಯನು ನುಡಿದ ಅಯ್ಯಗಳೆ ಕಂಡಿರೇ

ಬರಿ ಸಟುಗನ ಭಕ್ತಿಯಾಟ ಇಂದು|

ಕಣ್ ಮುಚ್ಚಿದವರೆಲ್ಲ ಧ್ಯಾನ ಮಾಡುವುದಿಲ್ಲ|

ಯಾವುದೋ ಇಲಿಗೆ ಕಾದಿರುವರೆಂದು|

ಬಿಲ್ವಮಠ ಈಗೀಗ ಬಿಲದ ಮಠವಾಗಿಹುದು|

ಯಾರಲ್ಲಿಯೂ ಇಲ್ಲ, ಶಿವನ ಹುಚ್ಚು|

ಸಿಕ್ಕಿದ್ದು ಸಿಕ್ಕಷ್ಟು ಮುಕ್ಕಿ ಕಣ್ಮರೆಯಾಗಿ|

ಬದುಕಿರುವ ಇಲಿಗಳೆ ಇಲ್ಲಿ ಹೆಚ್ಚು|

ಈ ಸಾಲುಗಳು ರಾಜಕೀಯ ಜೀವನದ ಹಗುರುತನವನ್ನು, ಭೋಳೇತನವನ್ನು, ಕುಟಿಲತನವನ್ನು, ಹೇಳಿವೆ. ಕಣ್ಣುಮುಚ್ಚಿ ಹಾಲುಕುಡಿಯುವ ಬೆಕ್ಕುಗಳಿಗೂ ಇದು ಅನ್ವಯವಾಗುತ್ತದೆ. ಜಗದೀಪ್ ಧನ್ಕರ್ ಈ ಹೊಸ ಸಂಪ್ರದಾಯದ ಅಗ್ರಪುರೋಹಿತರಲ್ಲೊಬ್ಬರೆಂದು ಸಾಬೀತುಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News