ಕರ್ನಾಟಕದ ನಡೆ-ನುಡಿಯ ಉಳಿವು
ಅಧಿಕಾರ ಎಂಬುದು ಒಂದು ಉರುಳು ಸೇವೆ; ಮಾಮೂಲು ಅರ್ಥದಲ್ಲಲ್ಲ. ಇಲ್ಲಿ ಪರಸ್ಪರರನ್ನು ಉರುಳಿಸಿಕೊಂಡು ಜನಸೇವೆ ಮಾಡುತ್ತೇವೆ ಎಂಬ ಭ್ರಮೆ ಮತ್ತು ಭ್ರಾಂತಿಯಲ್ಲಿ ರಾಜಕಾರಣಿಗಳು ಮಾಡುತ್ತಿರುವುದು ಜನವಂಚನೆಯೇ ಹೊರತು ಬೇರೆ ಏನೂ ಅಲ್ಲ. ಸರಕಾರ ನಡೆಸುವ ಒಳ್ಳೆಯ ಕೆಲಸಗಳನ್ನು ಮೆಚ್ಚಿಕೊಳ್ಳದೆ ಎಲ್ಲವನ್ನೂ ರಾಜಕೀಯದ ಬಣ್ಣದಗಾಜಿನಲ್ಲಿ ನೋಡುವುದರಿಂದ ಜನಹಿತ ಸಾಧ್ಯವಾಗದು. ಬಹುತೇಕ ಪ್ರತಿಪಕ್ಷಗಳಿಗೆ ಅಧಿಕಾರ ಹಿಡಿಯಬೇಕಾದ್ದು ಮುಖ್ಯವೇ ಹೊರತು ಜನರ, ಭಾಷೆಯ, ನಾಡಿನ ಏಳಿಗೆ ಅಲ್ಲ.
ಮೊನ್ನೆ ರವಿವಾರ ಬೆಂಗಳೂರಿನಿಂದ ವಾಪಸ್ ಬರಬೇಕಾದರೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಆಗಷ್ಟೇ ಸಂಪನ್ನಗೊಂಡ ಪ್ರತಿಪಕ್ಷಗಳ ಪಾದಯಾತ್ರೆಯ ದೊಡ್ಡದೊಡ್ಡ ಕಟೌಟುಗಳು, ಪ್ರಚಾರ ಫಲಕಗಳು ರಸ್ತೆಯ ಪಕ್ಕದಲ್ಲಿ ರಾರಾಜಿಸುತ್ತಿದ್ದವು. ಸಾಮಾನ್ಯವಾಗಿ ಇವು ಜಾಹೀರಾತಿನ ಮೂಲಕ ರಂಜಿಸುವ ರಾಜಸ ಪ್ರದರ್ಶನಗಳು. ಯಾರನ್ನು ಉದ್ದೇಶಿಸಿವೆಯೋ ಅವರು ಇವನ್ನು ಕ್ಯಾರೇ ಅನ್ನುವುದಿಲ್ಲ. ಆದರೆ ಜನಸಾಮಾನ್ಯರಿಗೆ ಇದೊಂದು ವಿಸ್ಮಯ; ಕೆಲವರಿಗೆ ಕುತೂಹಲ. ಕೆಲವರಿಗೆ ಮನರಂಜನೆ. ಅವುಗಳಲ್ಲಿ ಒಂದು ನನ್ನ ಗಮನವನ್ನು ಉಳಿದ ಫಲಕಗಳಿಗಿಂತ ಹೆಚ್ಚು ಸೆಳೆಯಿತು. ಅದರಲ್ಲಿ ಪ್ರತಿಪಕ್ಷಗಳ ಕೈಬೆರಳೆಣಿಕೆಯ ನಾಯಕರ ಭಿತ್ತಿಚಿತ್ರಗಳೊಂದಿಗೆ ‘ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಿರಿ; ಕರ್ನಾಟಕವನ್ನು ಉಳಿಸಿ!’ ಎಂದು (ಪದವ್ಯತ್ಯಾಸವಿರಬಹುದು, ಆದರೆ ಆಶಯ ಅದೇ) ಬರೆದಿತ್ತು. ಅಲ್ಲಿ ಬೃಹತ್ತಾಗಿ ನೆರೆದ, ಮೆರೆದ, ಸಾರ್ವಜನಿಕಗೊಂಡ ನಾಯಕರಲ್ಲಿ ಕನಿಷ್ಠ ಒಬ್ಬಿಬ್ಬರಾದರೂ - ಹಿಂದೆ ರಾಜ್ಯವನ್ನಾಳಿದವರು ಅಥವಾ ಅವರ ನೇರ ಕುಟುಂಬಸ್ಥರು- ತಮ್ಮ ಅಧಿಕಾರಾವಧಿಯಲ್ಲಿ ವೈಯಕ್ತಿಕ, ಕೌಟುಂಬಿಕ, ಜಾತಿಯ ಹಿತಕ್ಕಾಗಿ (‘ಹಿತಕ್ಕಾಗಿ’ ಎಂಬ ಪದ ತಪ್ಪಾಗಬಹುದು, ಅದನ್ನು ‘ಸ್ವಾರ್ಥಕ್ಕಾಗಿ’ ಎಂದು ಓದಿಕೊಳ್ಳಬಹುದು!) ಕರ್ನಾಟಕವನ್ನು ಅಳಿಸಹೊರಟು ಹಗರಣಗಳಲ್ಲಿ ಸಿಕ್ಕಿ ಜೈಲು ಸೇರಿದವರೇ. ಜಾಮೀನು ಪಡೆದು ಹೊರಬಂದು ಬದಲಾದ ಪರಿಸ್ಥಿತಿಯಲ್ಲಿ ರಾಜಕೀಯ ಕ್ಷಮಾದಾನದಿಂದಾಗಿ ಮತ್ತೆ ಜೈಲು ಸೇರದೆ ಹೊರಗೆ ಉಳಿದವರು. ಅವರೀಗ ಕರ್ನಾಟಕವನ್ನು ಉಳಿಸಹೊರಟಿದ್ದಾರೆ. ಇದೊಳ್ಳೇ ತಮಾಷೆಯಾಗಿ ಕಂಡಿತು. ಕನ್ನಡ-ಕರ್ನಾಟಕವನ್ನು ಅಳಿಸುವಲ್ಲಿ ರಾಜಕಾರಣಿಗಳ ಪಾತ್ರ ಬಹಳ ದೊಡ್ಡದಿದೆ. ಇದರಲ್ಲಿ ಅಧಿಕಾರಸ್ಥರು, ಪ್ರತಿಪಕ್ಷದವರು ಎಂಬ ಭೇದ ಬಹುತೇಕ ನಗಣ್ಯ. ಆಯಾಯ ಸಂದರ್ಭಗಳಲ್ಲಿ ಯಾರು ಜನರಿಗೆ ಕಡಿಮೆ ಕಿಡಿಗೇಡಿಗಳು ಎಂದು ಅನ್ನಿಸುವುದೋ ಅವರು ಆಯ್ಕೆಯಾಗುತ್ತಾರೆ. ಇದು ಮಾತ್ರ ಗಮನಿಸಬೇಕಾದ ಅಂಶ. ಹೀಗಿರುವಾಗ ಈ ನಾಯಕರು ತಮ್ಮ ಅಧಿಕಾರದ ಸಂಪಾದನೆ ಮತ್ತು ಉಳಿವನ್ನು ಮತ್ತು ಅಭಿವೃದ್ಧಿಯನ್ನು ಹೊರತುಪಡಿಸಿ ಉಳಿಸುವುದಾದರೂ ಏನನ್ನು?
ಸಾಂದರ್ಭಿಕವಾಗಿ ಹೇಳುವುದಾದರೆ ಕರ್ನಾಟಕದ ಹೃದಯವಾದ ಕನ್ನಡವನ್ನು ಉಳಿಸಿದ್ದಾಯಿತು; ಬೆಳೆಸಿದ್ದಾಯಿತು; ಅಭಿವೃದ್ಧಿ ಪಡಿಸುವುದಕ್ಕೆ ಕೋಟ್ಯನುಕೋಟಿ ಹಣವನ್ನು ವೆಚ್ಚಮಾಡಿದ್ದೂ ಆಯಿತು. ಹೀಗೆ ಹೇಳುವವರಲ್ಲಿ ಬಹಳಷ್ಟು ಮಂದಿ ತಮ್ಮ ಮಕ್ಕಳನ್ನು, ಬಂಧು-ಬಳಗವನ್ನು ಆಂಗ್ಲಮಾಧ್ಯಮ ಶಾಲೆಗಳಲ್ಲಿ ಓದಿಸುವುದು ಮಾತ್ರವಲ್ಲ, ವಿದೇಶಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕಳಿಸಿ ಹೆಮ್ಮೆ ಪಡುವವರು. (ಅಮೆರಿಕವನ್ನು ಬೈದು ಅಮೆರಿಕದ ಸಂಸ್ಥೆಯಲ್ಲಿ ದುಡಿಯುತ್ತಾರಲ್ಲ, ಹಾಗೆ!) ಹೀಗಾಗಿ ಕನ್ನಡ ಮತ್ತು ಇತರ ಭಾಷೆಗಳ ಬಹಳಷ್ಟು ಮಟ್ಟಿಗೆ ಇಂಗ್ಲಿಷ್ ಭಾಷೆಯ ನಡುವಣ ಸ್ಪರ್ಧೆಯಲ್ಲಿ ಕನ್ನಡ ಸೋತು ಸುಸ್ತಾಗಿದೆ. ರಾಜ್ಯವನ್ನು ಪ್ರತಿನಿಧಿಸುವ ಬೆಂಗಳೂರಿನಲ್ಲಿ ಕನ್ನಡವನ್ನು ಹೊರತುಪಡಿಸಿ ಇತರ ಯಾವುದೇ ಭಾಷೆಯನ್ನು ಬಲ್ಲವರು ನಿರ್ವಿಘ್ನವಾಗಿ ವ್ಯವಹರಿಸಬಹುದು. ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಇಂಗ್ಲಿಷ್ ಪಂಡಿತರು ಕನ್ನಡವನ್ನು ಮಾತ್ರ ಬಲ್ಲವರ ಬಗ್ಗೆ ಒಂದು ತಾತ್ಸಾರದ ಧೋರಣೆಯನ್ನು ತಾಳುವುದನ್ನು ನೇರ ಬರಿಗಣ್ಣಿನಲ್ಲಿ ನೋಡಬಹುದು. ಪಂಚೆಯುಟ್ಟ ಗ್ರಾಮೀಣ ವ್ಯಕ್ತಿಯೊಬ್ಬರನ್ನು ಈಚೆಗೆ ಬೆಂಗಳೂರಿನ ಮಾಲ್ ಒಂದಕ್ಕೆ ಪ್ರವೇಶಿಸಲು ಎಡೆಕೊಡದೆ ಅವಮಾನಿಸಲಾಯಿತೆಂದು ಮಾಧ್ಯಮಗಳಲ್ಲಿ ನೋಡಿದ್ದೇವೆ. ಇದೊಂದು ಸಂಕೇತ ಮಾತ್ರ. ನಗರವಾಸಿಗಳು ಗ್ರಾಮಸ್ಥರನ್ನು ಹೇಗೆ ಕಾಣುತ್ತಾರೆಂದರೆ ವರ್ಣಾಶ್ರಮ ಧರ್ಮದಲ್ಲಿ ಉಚ್ಚಕುಲದವರೆಂದು ಸ್ವಯಂಘೋಷಿಸಿಕೊಂಡವರು ತಾವು ಕೀಳೆಂದು ಪರಿಗಣಿಸುವ ಇತರರನ್ನು ಕಾಣುವಂತೆ ಅಥವಾ ರಾಜಕಾರಣಿಗಳು ಚುನಾವಣೆಯ ಹೊರತಾದ ಸಂದರ್ಭಗಳಲ್ಲಿ ಜನರನ್ನು ಕಾಣುವಂತೆ ಇದೆ. ನುಡಿಯೆಂದರೆ ಭಾಷೆಯೆಂದಷ್ಟೇ ಅಲ್ಲ. ಹೇಳುವುದು ಕೂಡಾ ನುಡಿಯೇ.
ಇಂತಹ ಕರ್ನಾಟಕದಲ್ಲಿ (ಅಥವಾ ಈ ಪರಿಯ ಯಾವುದೇ ರಾಜ್ಯದಲ್ಲಿ) ಯಾರನ್ನು ಯಾರು ಮತ್ತು ಯಾವುದನ್ನು ಯಾವುದು ಉಳಿಸಲು ಸಾಧ್ಯ ಎಂಬುದು ಗಂಭೀರ ಸಂಶಯಕ್ಕೆ ದಾರಿ ಮಾಡುವ ವಿಚಾರ. ಉದಾತ್ತವಾದಂತಹ ಆದರ್ಶಗಳನ್ನು ಹೇಳುವುದು, ಕೇಳುವುದು ಬೇರೆ, ಅನುಸರಿಸುವುದು ಬೇರೆ. ಇಂತಹ ತಾರತಮ್ಯ, ಕೃತಕತೆ ಬದುಕಿನ ಎಲ್ಲಾ ಹಂತಗಳಲ್ಲಿ ಮತ್ತು ಆಯಾಮಗಳಲ್ಲಿ ಕಂಡುಬರುತ್ತವೆ. ಹೀಗಿರುವಾಗ ಆಧುನಿಕ ಅಥವಾ ವರ್ತಮಾನ ಕಾಲದಲ್ಲಿ ಸಮಾಜದ ಅತ್ಯಂತ ಧೂರ್ತ ಕ್ಷೇತ್ರವೆಂದೇ ಪರಿಗಣನೆಯಾ(ಗಬೇಕಾ)ದ ರಾಜಕಾರಣದಲ್ಲಿ ಉಳಿವು, ಅಭಿವೃದ್ಧಿ ಇವನ್ನು ಕಾಣಲು ಸಾಧ್ಯವೇ?
ಯಾವುದೇ ಸರಕಾರ ಹಗರಣಗಳಿಂದ ಮುಕ್ತವಾಗಿಲ್ಲ. ಇದು ನಮ್ಮ ಪ್ರತಿನಿಧಿಗಳ ಮತ್ತು ಅವರನ್ನು ಓಲೈಸುವ ಇಲ್ಲವೇ ಅವರ ಕೈಕೆಳಗೆ ಕೆಲಸ ಮಾಡುವ ಅಧಿಕಾರಿಗಳ ಯೋಗ್ಯತೆ ಮತ್ತು ಹಣೆಬರಹವನ್ನು ಸಾಬೀತು ಮಾಡುತ್ತದೆ. ರಾಜಕಾರಣದಲ್ಲಿ ಒಳಿತೆಂಬುದು ಸ್ವಾತಿಮುತ್ತು. ಕೇಡಿನ ಸಂಕೇತವೇ ಆಗಿರುವ ನಾಯಕರನ್ನು ದಿನಾ ನೋಡುತ್ತೇವೆ. ಆದರೆ ಸಮಾಜದಲ್ಲಿ ಹೆಚ್ಚು ಪಾಲು ಜನರೇ ಧೂರ್ತರು, ಸ್ವಾರ್ಥಿಗಳು, ದಡ್ಡರು ಆಗಿರುವಾಗ ಇವರೆಲ್ಲರ ಪ್ರತಿನಿಧಿಯಾಗಿ ಹೋಗುವ ವ್ಯಕ್ತಿಯು ಹಾಗೆಯೇ ಇರಬೇಕಲ್ಲವೇ? ಸದ್ಯ ಕಳೆದ ಒಂದು ವರ್ಷದಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಮತ್ತು ಅದಕ್ಕೆ ಮೊದಲು ಈಗ ಪ್ರತಿಪಕ್ಷವಾಗಿರುವವರು ಅಧಿಕಾರದಲ್ಲಿದ್ದ ಸರಕಾರಗಳು ಅಧಿಕಾರ ಸಹಜವಾಗಿಯೇ ಕೆಲವು ಹಗರಣಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾಗಿವೆ. ಯಾವ ಸರಕಾರವೂ ಈ ದೇಶದ ಯಾವುದೇ ಹಂತದಲ್ಲಿ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ. ಜನಸಾಮಾನ್ಯರು ತಮ್ಮ ಆದಾಯ-ವೆಚ್ಚವನ್ನು ತೂಗಿಸಿಕೊಂಡು ಬದುಕಲು ಪ್ರಯತ್ನಿಸಿದರೆ ಅದಕ್ಕೆ ಸಾಕ್ಷಿಯಾಗುವುದು ಅವರ ಕ್ಷೇತ್ರವಾದ ಗದ್ದೆ-ತೋಟಗಳು. ಆದರೆ ರಾಜಕಾರಣವೆಂಬ ಕ್ಷೇತ್ರ ಸ್ವರ್ಗ ಸದೃಶ ಸೌಕರ್ಯದ ಪಾಪಕೂಪ. ಅಲ್ಲಿ ಇಷ್ಟೇ ಹಣ ವೆಚ್ಚ ಮಾಡಬೇಕು ಮತ್ತು ಅದರಿಂದ ಇಷ್ಟು ಫಲ ಪ್ರಾಪ್ತವಾಗಬೇಕು ಎಂಬ ಸಾಮಾನ್ಯ ಲೆಕ್ಕಾಚಾರಕ್ಕೆ ಉಳಿವಿಲ್ಲ. ಅದು ಜನಸಾಮಾನ್ಯರ ಹಣವನ್ನು ಹಿಂಡಿ ಪರಸ್ಪರ ಮೇಲುಗೈಯನ್ನು ಸಾಧಿಸಲು ಇರುವ ಅಖಾಡ.
ಯಾರು ಗೆಲ್ಲುತ್ತಾರೋ ಅವರಲ್ಲಿ ಆಡಳಿತದ ಹಿಡಿತ ಇರುತ್ತದೆ. ಹಾಗಾದರೇ ಸೋತವರು? ಚುನಾವಣೆಯೆಂದರೆ ಒಂದು ಗೊತ್ತಾದ ಅವಧಿಗೆ ಅಧಿಕಾರವನ್ನು ಒಂದು ಪಕ್ಷವೆಂಬ ಅಥವಾ ಪಕ್ಷಗಳೆಂಬ ಸಮುದಾಯಕ್ಕೆ ಒಡೆತನ ನೀಡುವ ವಿದ್ಯಮಾನ. ಆ ಅವಧಿಯಲ್ಲಿ ಅವರು ಏನು ಮಾಡಿದರೂ ಅದನ್ನು ಮುಂದಿನ ಚುನಾವಣೆಯಲ್ಲಿ ಇಲ್ಲವೇ ಕಾನೂನಿನಡಿ ಸರಿಪಡಿಸಬೇಕು. ಅದರ ಬದಲು ಅವರ ಅಧಿಕಾರಾವಧಿಯನ್ನು ಮೊಟಕುಗೊಳಿಸಲು ಯತ್ನಿಸುವುದು ಪ್ರಜಾಸತ್ತಾತ್ಮಕವೆಂದು ಯಾವ ಬೃಹಸ್ಪತಿ ಹೇಳಿದನೋ ಗೊತ್ತಿಲ್ಲ. ಅದೀಗ ಎಲ್ಲ ಪ್ರತಿಪಕ್ಷಗಳ ಆದ್ಯ ಕರ್ತವ್ಯವಾಗಿ ಮಾರ್ಪಟ್ಟಿದೆ. ಅವರು ಪ್ರತಿಪಕ್ಷದಲ್ಲಿ ಕುಳಿತು ಸರಕಾರದ ಧೋರಣೆಗಳನ್ನು ಟೀಕಿಸುವುದು ಮತ್ತು ಸರಿದಾರಿಗೆ ತರುವುದು ತಮ್ಮ ಕರ್ತವ್ಯವೆಂಬ ರೀತಿಯಲ್ಲಿ ವ್ಯವಹರಿಸಬೇಕು. ಇದು ಮಾದರಿ ಪ್ರಜಾಪ್ರಭುತ್ವದ ಅಲಿಖಿತ ನಿಯಮಾವಳಿ. ಆದರೆ ಈ ಪ್ರತಿಪಕ್ಷಗಳು ಕೂಡಾ ಅವಧಿಪೂರ್ವವಾಗಿ ಅಧಿಕಾರಕ್ಕಾಗಿಯೇ ರಾಜಕೀಯ ಮಾಡುವುದು ಜನತಾ ಪ್ರಾತಿನಿಧ್ಯ ಕಾನೂನು ಮತ್ತು ಈ ಕಾನೂನಿನ ಮೂಲವಾದ ಸಂವಿಧಾನ ಮತ್ತು ಮುಖ್ಯವಾಗಿ ಇವೆಲ್ಲ ಅನ್ವಯಿಸುವ ಪ್ರಜೆಗಳಿಗೆ/ಮತದಾರರಿಗೆ ಮಾಡುವ ಅಪಮಾನ. ಪಕ್ಷಾಂತರ ಕೂಡಾ ಚುನಾವಣಾ ಸಂದರ್ಭದ ಹಣ, ಹೆಂಡ ಮತ್ತು ಜಾತಿ ರಾಜಕೀಯದಿಂದ ಕೀಳಾದದ್ದು. ಅವಧಿ ಪೂರ್ವವಾಗಿ ಯಾವನೇ ಜನಪ್ರತಿನಿಧಿ ಪಕ್ಷವನ್ನು ತೊರೆದರೆ ಆತನು ಮುಂದೆ ಸ್ಪರ್ಧಿಸಲು ಅವಕಾಶವಾಗಬಾರದು. ಏಕೆಂದರೆ ಅಂತಹವರಿಗೆ ನಾಡು-ಮತ್ತು ನಾಡಿನ ಕಾನೂನು, ಮತದಾರರು ಒಟ್ಟಿನಲ್ಲಿ ತನ್ನನ್ನು ಆರಿಸಿದ ಒಟ್ಟಾರೆ ವ್ಯವಸ್ಥೆಯ ಕುರಿತು ಯಾವ ಅಭಿಮಾನವಾಗಲಿ, ಆಸಕ್ತಿಯಾಗಲಿ ಇಲ್ಲವೆಂದೇ ಅರ್ಥ.
ಒಂದು ನಿಗದಿತ ಅವಧಿಗೆ ಆಯ್ಕೆ ಆದವರನ್ನು ಆ ಅವಧಿಯು ಪೂರ್ಣವಾಗುವ ವರೆಗೆ ಅಧಿಕಾರದಲ್ಲಿರಲು ಬಿಡೆವು ಎಂಬ ಹಠಮಾರಿತನದ ಸಾಧನೆಯೇ ಪ್ರತಿಪಕ್ಷಗಳ ಹೆಗ್ಗುರಿ ಮತ್ತು ಹೆಗ್ಗುರುತು. ಒಂದು ಕೃತಿಯ ಪೂರ್ಣ ಓದು ಮುಗಿಯದೆ ಅದರ ವಿಮರ್ಶೆ ಸಲ್ಲದು. ಆದರೆ ಈ ಪ್ರವೃತ್ತಿಗೆ ಕಾರಣವೆಂದರೆ ಇವರಲ್ಲಿ ಅನೇಕರು ಒಂದಲ್ಲ ಒಂದು ಸಂದರ್ಭದಲ್ಲಿ ಅಧಿಕಾರದ ರುಚಿ ಕಂಡವರೇ. ಹುಲಿ ಒಮ್ಮೆ ಮನುಷ್ಯನ ರಕ್ತದ ರುಚಿ ಸವಿಯಿತೆಂದರೆ ಅದು ನರಭಕ್ಷಕನಾಗುತ್ತದೆ. ಕಾಡಿನಲ್ಲೇ ತನ್ನ ಬೇಟೆಯನ್ನು ಅರಸಿ ಬದುಕುವ ಹುಲಿ ಈ ವಿಕೃತಿಯನ್ನು ಅನುಭವಿಸುವುದಿಲ್ಲ ಮತ್ತು ಲೋಕಕಂಟಕವಾಗುವುದಿಲ್ಲ. ತನ್ನ ಪಾಡಿಗೆ ಪ್ರಕೃತಿ ತನಗೆ ಒದಗಿಸಿದ ಮಿಕವನ್ನು ಬೇಟೆಯಾಡಿ ಹೊಟ್ಟೆತುಂಬಿಸಿಕೊಳ್ಳುತ್ತದೆ. ಅದಕ್ಕೆ ದುರಾಸೆಯೆಂಬುದಿರುವುದಿಲ್ಲ. ಹೊಟ್ಟೆ ತುಂಬಿದ ಮೇಲೆ ಅದು ಮತ್ತೆ ಹಸಿವೆಯಾಗುವವರೆಗೆ ವಿರಮಿಸುತ್ತದೆ. ಆದರೆ ಮನುಷ್ಯ ಹೀಗಲ್ಲ. ಸದಾ ದಾಹ, ಹಸಿವು, ಹಾಗೂ ದುರಾಸೆಯ ಸಾಕಾರ ಮತ್ತು ಸಹಕಾರ ರೂಪ. ಆತನಿಗೆ ಮನ್ನಣೆಯೂ ಬೇಕು; ಲೌಕಿಕದ ಎಲ್ಲಾ ಸುಖಗಳೂ ಬೇಕು. ಇದಕ್ಕಾಗಿ ಇನ್ನೊಬ್ಬರನ್ನು ಪೀಡಿಸುವುದು ಅಗತ್ಯವಾದರೆ ಮನುಷ್ಯನು ಹಿಂಜರಿಯಲಾರ. ಮನುಷ್ಯಕುಲದಲ್ಲೇ (ಇದನ್ನು ಯಾಕೆ ಮನುಕುಲ ಎಂದು ಕರೆದರೋ ಕಾಣೆ.) ಅತೀ ಧೂರ್ತತನ ಬರುವುದು, ಇರುವುದು, ರಾಜಕಾರಣದಲ್ಲೇ ಎಂಬ ಬಗ್ಗೆ ವಿವಾದ ಇರಲಿಕ್ಕಿಲ್ಲ. ದೇಶದ ಇಲ್ಲವೇ ರಾಜ್ಯದ ಮುನ್ನಡೆಗೆ ತಾವೇ ಕಾರಣವೆಂದು ಹೇಳಿಕೊಂಡರೂ ಜನರು ಅವರನ್ನು ಎಷ್ಟು ದೂಷಿಸುತ್ತಿದ್ದಾರೆಂದು ಅವರಿಗೆ ಅರಿವಿಲ್ಲದೆ ಇಲ್ಲ. ಆದರೆ ತಮಗೆ ಆಗದಿರುವುದನ್ನು ರಾಜಕಾರಣಿಗಳು ಗುರುತಿಸುವುದಿಲ್ಲ ಮತ್ತು ಗುರುತಿಸಿದರೂ ಅಲಕ್ಷಿಸಿರುತ್ತಾರೆ. ಇದರಿಂದಾಗಿ ಜನಸಾಮಾನ್ಯರ ಪಾಡು ಎಲ್ಲಿಗೆ ತಲುಪಿದೆ ಎಂದರೆ ಅವರ ಮುಂದೆ ಹತ್ತಾರು ಬಗೆಯ ವಿಷಗಳನ್ನು ಖಾದ್ಯಗಳಂತೆ ಇಟ್ಟು ಇವುಗಳಲ್ಲಿ ಬೇಕಾದ್ದನ್ನು ಆರಿಸಿಕೊಳ್ಳಿ ಎಂದು ಹೇಳಿದಂತಿದೆ. ಅನೇಕರು ನೋವುಪಟ್ಟು ಸಾಯುವುದಕ್ಕಿಂತ ನೋವಿಲ್ಲದೇ ಸಾಯುವುದು ಒಳಿತೆಂದು ಸುಮ್ಮನಾಗುತ್ತಾರೆ. ಪ್ರತಿಭಟಿಸಿದವನಿಗೆ, ಟೀಕಿಸಿದವನಿಗೆ, ದಂಡನೆಯ ರೂಪದಲ್ಲಿ ಸಾವೇ ಎದುರಾಗುತ್ತದೆಯೋ ಗೊತ್ತಿಲ್ಲ ಆದರೇ ನೋವಂತೂ ಖಾತ್ರಿ. ಆತ ತನ್ನ ಕಾಲಕ್ಕೆ ತನ್ನ ದೇಶಕ್ಕೆ ನೆರವಾಗುತ್ತಿದ್ದೇನೆ ಎಂದು ತಿಳಿದರೂ ಆತನ ಬದುಕು ಆತನ ಮಟ್ಟಿಗೆ ಭೌತಿಕವಾಗಿ ವ್ಯರ್ಥಗೋಳಾಗಿರುತ್ತದೆ.
ಮತ್ತೆ ಪಾದಯಾತ್ರೆಯ ವಿಷಯಕ್ಕೆ ಮರಳಿದರೆ ಕರ್ನಾಟಕವನ್ನು ಉಳಿಸುವುದಕ್ಕೆ ಈ ಪ್ರತಿಪಕ್ಷಗಳು ಪಾದಯಾತ್ರೆ ಮಾಡಿದಂತಿಲ್ಲ. ಅಧಿಕಾರದ ಸಂಗೀತ ಕುರ್ಚಿಯ ಆಟದಲ್ಲಿ ಅಧಿಕಾರಗ್ರಹಣದ ಕಸರತ್ತಿನ, ಸ್ಪರ್ಧೆಯ, ಒಂದು ಅನಿಷ್ಟಭಾಗವಾಗಿ ಈ ಮನೋರಂಜಕ ಪ್ರದರ್ಶನ ನಡೆಯುತ್ತಿದೆಯೇ ಹೊರತು ಇದರಲ್ಲಿ ರಾಜ್ಯದ ಅಳಿವು-ಉಳಿವಿನ ಪ್ರಶ್ನೆ ಇಲ್ಲ. ಸಾರ್ವಜನಿಕರ ಗಮನವನ್ನು ಇಂತಹ ಯಾತ್ರೆಗಳು ಸಳೆಯುತ್ತವೆ ಎಂದು ತಿಳಿದರೆ ಅದಕ್ಕಿಂತ ದೊಡ್ಡ ಮೂರ್ಖತನ ಬೇರೆ ಇಲ್ಲ. ಜನರು ಇವನ್ನು ನೋಡಿನೋಡಿಯೇ ಬಸವಳಿದಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹೋಗುವುದರ ಮೂಲಕ ಕರ್ನಾಟಕ ಉಳಿಯುವುದಾದರೆ ಈ ಎರಡು ನಗರಗಳ ನಡುವೆ ರಸ್ತೆ, ರೈಲ್ವೆ ಸೌಕರ್ಯಗಳನ್ನು ನಿಲ್ಲಿಸಿ ಎಲ್ಲರೂ ಪಾದಯಾತ್ರೆ ಹೋಗಬಹುದು. ಪುಣ್ಯಕ್ಷೇತ್ರಗಳೆಂದು ಹೆಸರಾದ ಸ್ಥಳಗಳಿಗೆ ಹೋದರೆ ಪಾಪವೆಲ್ಲ ಕಳೆದು ಪುಣ್ಯಸಂಪಾದನೆಯಾಗುತ್ತದೆಯಾದರೆ ಅಲ್ಲಿಗೆ ನಿತ್ಯ ಪ್ರಯಾಣಮಾಡುವ ಬಸ್ ಚಾಲಕರು ಇಷ್ಟು ಹೊತ್ತಿಗೆ ಲೋಕದಲ್ಲಿ ಅತ್ಯಂತ ಪುಣ್ಯವಂತರಾಗಿರಬೇಕಿತ್ತು ಎಂದು ಚಿಂತಕ ಡಾ. ನರಸಿಂಹಯ್ಯ ಹೇಳಿದ್ದರು. ಈ ಯಾತ್ರೆಗಳನ್ನು ಅದಕ್ಕಿಂತ ದೊಡ್ಡ ಸ್ವರೂಪದಲ್ಲಿ ಕಾಣಲಾಗದು. ಅಧಿಕಾರ ಎಂಬುದು ಒಂದು ಉರುಳು ಸೇವೆ; ಮಾಮೂಲು ಅರ್ಥದಲ್ಲಲ್ಲ. ಇಲ್ಲಿ ಪರಸ್ಪರರನ್ನು ಉರುಳಿಸಿಕೊಂಡು ಜನಸೇವೆ ಮಾಡುತ್ತೇವೆ ಎಂಬ ಭ್ರಮೆ ಮತ್ತು ಭ್ರಾಂತಿಯಲ್ಲಿ ರಾಜಕಾರಣಿಗಳು ಮಾಡುತ್ತಿರುವುದು ಜನವಂಚನೆಯೇ ಹೊರತು ಬೇರೆ ಏನೂ ಅಲ್ಲ. ಸರಕಾರ ನಡೆಸುವ ಒಳ್ಳೆಯ ಕೆಲಸಗಳನ್ನು ಮೆಚ್ಚಿಕೊಳ್ಳದೆ ಎಲ್ಲವನ್ನೂ ರಾಜಕೀಯದ ಬಣ್ಣದಗಾಜಿನಲ್ಲಿ ನೋಡುವುದರಿಂದ ಜನಹಿತ ಸಾಧ್ಯವಾಗದು. ಬಹುತೇಕ ಪ್ರತಿಪಕ್ಷಗಳಿಗೆ ಅಧಿಕಾರ ಹಿಡಿಯಬೇಕಾದ್ದು ಮುಖ್ಯವೇ ಹೊರತು ಜನರ, ಭಾಷೆಯ, ನಾಡಿನ ಏಳಿಗೆ ಅಲ್ಲ. ದುರದೃಷ್ಟವೆಂದರೆ ಈ ಮಹಾನುಭಾವರು ತಮ್ಮ ಅಧಿಕಾರದ ಅವಧಿಯಲ್ಲಿ ತಮಗಾಗಿ ಏನು ಮಾಡಿಕೊಂಡಿದ್ದಾರೆ ಮತ್ತು ಜನರಿಗಾಗಿ ಏನು ಮಾಡಿದ್ದಾರೆ ಎಂಬುದರ ಕುರಿತು ಸರಕಾರ ಕ್ಲಪ್ತ ಸಮಯದಲ್ಲಿ ತೀಕ್ಷ್ಣ ಕ್ರಮ ಕೈಗೊಂಡಿದ್ದರೆ ಈ ಪಾದಯಾತ್ರೆಯು ಬೆತ್ತಲೆಸೇವೆ ಆಗುತ್ತಿತ್ತು. ಆದರೆ ಪರಸ್ಪರ ‘ಹೋಗಲಿ ಬಿಡು’ ರಾಜಕೀಯ ಹೆಚ್ಚು ಕುಪ್ರಸಿದ್ಧವಾಗಿರುವುದರಿಂದ ಬಡವರ ಬಿನ್ನಪವನ್ನಾರು ಕೇಳುವರು?
ಈಗ ಪ್ರತಿಪಕ್ಷದಲ್ಲಿರುವ ಮಾಜಿ ಮುಖ್ಯಮಂತ್ರಿಯೊಬ್ಬರಲ್ಲಿ ನೀವು ಐದುನೂರು ಕೋಟಿ ರೂ. ವಂಚನೆ ಮಾಡಿದ್ದಿರಂತಲ್ವ ಎಂಬ ಪ್ರಶ್ನೆಗೆ ಅವರು ತಾನು ಹಾಗೆ ಮಾಡಿಲ್ಲ ಎನ್ನಲಿಲ್ಲ; ಬದಲಿಗೆ ತನ್ನ ಪ್ರತಿಸ್ಪರ್ಧಿ ರಾಜಕಾರಣಿ ಒಬ್ಬರ ಹೆಸರನ್ನು ಹೇಳಿ(ಅವರೂ ಮಾಜಿ ಮುಖ್ಯಮಂತ್ರಿಯೇ!) ಅವರು ಏಳುನೂರು ಕೋಟಿ ರೂ. ವಂಚನೆ ಮಾಡಿದ್ದಾರಲ್ಲ ಎಂದರು. ಈ ಮತ್ತು ಇಂತಹ ರಾಜಕಾರಣಿಗಳು ಮೊನ್ನೆಯ ಪಾದಯಾತ್ರೆಯಲ್ಲಿ ಜೊತೆಯಲ್ಲೇ ನಡೆದು ಪ್ರಚಾರ ಪಡೆದರು. ಅಂತೂ ಪಾದಯಾತ್ರೆ ಮುಗಿಯಿತು. ಕರ್ನಾಟಕ ಮತ್ತದರ ನಡೆ-ನುಡಿ ಉಳಿಯಿತು. 999 ಇಲಿಗಳನ್ನು ತಿಂದ ಬೆಕ್ಕು ತಾನೇ ವಾಸಿಯೆಂದು ಮತ್ತೆ ತೀರ್ಥಯಾತ್ರೆ ಹೊರಟಿತು.
ಇವರೆಲ್ಲರಿಂದ ತಮ್ಮನ್ನು ರಕ್ಷಿಸು ದೇವರೇ ಎಂಬ ಶ್ರೀಸಾಮಾನ್ಯರ ಪ್ರಾರ್ಥನೆಯನ್ನು ಆಲಿಸುವ ಕೇಳುವ ದೇವರುಗಳಿದ್ದರೆ ಸಂತೋಷ.