ಉತ್ತಮ ಪ್ರಭುತ್ವ ಲೊಳಲೊಟ್ಟೆ

ಅಂತ್ಯಕ್ರಿಯೆಗಳಿಗೆ, ಉತ್ತರಕ್ರಿಯೆಗಳಿಗೆ, ಜಿಎಸ್‌ಟಿ ವಿಧಿಸುವುದಿಲ್ಲವೆಂದು ಅರ್ಥಮಂತ್ರಿ ಆಶ್ವಾಸನೆ ನೀಡಿದ್ದಾರೆ. ಸತ್ತವರಿಗೆ ನಡೆಸುವ ವಾರ್ಷಿಕ ವಿಧಿವಿಧಾನಗಳಿಗೂ ತೆರಿಗೆ ಹೊರೆ ಈಗಿನ್ನೂ ಪ್ರಸ್ತಾವವಾಗಿಲ್ಲ. ಹೆರಿಗೆಗಿನ್ನೂ ತೆರಿಗೆ ಹಾಕಿಲ್ಲ. ಮನುಷ್ಯನ ಉಸಿರಾಟಕ್ಕೆ, ಹುಟ್ಟುಸಾವಿಗೆ ಇನ್ನೂ ತೆರಿಗೆ ವಿಧಿಸಿಲ್ಲ. ಯಾವನಾದರೊಬ್ಬ ಆಡಳಿತ ಸೇವೆಯ ಮಹಾನುಭಾವನಿಗೆ ಇದು ನೆನಪಾದರೆ ಅದಕ್ಕೂ ತೆರಿಗೆ ಬಿದ್ದೀತು. ವಿಶೇಷವೆಂದರೆ ತಾನು ಹೇರುವ, ಹೇರಿದ ಈ ಹೊರೆಯನ್ನು ಅದು ಹಗುರೆಂದು ಪ್ರಚಾರಮಾಡುವ ಒಂದು ತಂಡವನ್ನೇ ಅರ್ಥಸಚಿವರು ನೇಮಿಸಿಕೊಂಡಂತಿದೆ.

Update: 2024-08-01 06:42 GMT

ಪುರಂದರದಾಸರ ಕಾಲದಿಂದಲೇ ಈ ಉತ್ತಮಪ್ರಭುತ್ವ ಲೊಳಲೊಟ್ಟೆ ಎಂಬ ಪದಪುಂಜವು ಬಳಕೆಯಲ್ಲಿರುವುದರಿಂದ ಇದನ್ನು ರಾಷ್ಟ್ರಕ್ಕೆ ಅನ್ವಯಿಸಿ ಭಾರತೀಯ ಪರಂಪರೆ, ಭಾರತೀಯ ಸಂಸ್ಕೃತಿ ಎಂದು ತಿಳಿದರೆ ತಪ್ಪಿಲ್ಲ. ಯು.ಆರ್.ಅನಂತಮೂರ್ತಿಯವರು ಈ ಶೀರ್ಷಿಕೆಯಲ್ಲೇ ತಮ್ಮ ಚಿಂತನವನ್ನು ದಾಖಲಿಸಿದ್ದರೆಂದು ನೆನಪು. ಪುರಂದರದಾಸರ ಕಾಲಕ್ಕಿಂತಲೂ ಮೊದಲೇ ಪ್ರಭುತ್ವಕ್ಕಿರುವ ‘ಲೊಳಲೊಟ್ಟೆ’ಯೆಂಬ ಅಥವಾ ಬೇರೆ ಪದಗಳಲ್ಲಿ ವರ್ಣಿತವಾಗಿರುವ ಈ ವಿಶೇಷಣ ಎಲ್ಲ ಕಾಲದ್ದು.

ಎಲ್ಲ ಕಾಲಕ್ಕೂ ಸಲ್ಲುವ ಸತ್ಯವನ್ನು ನಿರ್ಲಕ್ಷಿಸುವುದಾದರೂ ಹೇಗೆ? ಕೆಲವು ಸಂಗತಿಗಳು ಸದಾ ಘಟಿಸುತ್ತಿರುತ್ತವೆ. ಅವನ್ನು ಜನರು ಗಮನಿಸುವುದಿಲ್ಲವೆಂದಲ್ಲ. ಆದರೆ ಅವನ್ನು ಹತಾಶ ಸ್ಥಿತಿಯಲ್ಲಿ ಸಹಿಸಲು ಅಭ್ಯಾಸವಾಗಿದೆ. ಮಾಲಕನಿಂದ ಏಟು ತಿನ್ನುವ ಗುಲಾಮನಂತೆ. ಆಗಾಗ ತನ್ನ ಗಾಯವನ್ನು ನೆಕ್ಕಿ ಶಮನಮಾಡಿಕೊಳ್ಳಲೆತ್ನಿಸುವ, ಸಮಾಧಾನ ಪಟ್ಟುಕೊಳ್ಳುವ ನಾಯಿಯಂತೆ.

ಮೊನ್ನೆ ಮೊನ್ನೆಯಷ್ಟೇ ಭಾರತದ ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್ 2024ರ ಆಯವ್ಯಯ ಮುಂಗಡ ಪತ್ರವನ್ನು ಮಂಡಿಸಿದ ಬಳಿಕ ಮಾಧ್ಯಮಗಳಲ್ಲಿ, ತೀರಾ ಬಡವರ ಹೊರತಾಗಿ ಉಳಿದೆಲ್ಲರ ಚರ್ಚೆಯ ವಿಚಾರವಾಗಿರುವ ತಾತ್ಕಾಲಿಕ ಮೌಲ್ಯದ ‘ಬಜೆಟ್’ನ ನಡುವೆ ಇತರ ವಿಚಾರಗಳೆಲ್ಲ ಗೌಣವಾಗುತ್ತವೆ. ಆದರೂ ಇದನ್ನೇ ಬೇರು ಮತ್ತು ಗುರಿಯಾಗಿಟ್ಟುಕೊಂಡು ಕೆಲವು ಸಂಗತಿಗಳನ್ನು ತಲುಪಬಹುದು ಅಥವಾ ಆ ನಿಟ್ಟಿನಲ್ಲಿ ಹೆಜ್ಜೆ ಹಾಕಬಹುದು.

ಬಜೆಟನ್ನು ಆಯವ್ಯಯ ಪತ್ರವೆಂದು ಹೇಳುವುದು ರೂಢಿ. ಭಾರತೀಯ ಪಂಚಾಂಗದಲ್ಲಿ ‘ವ್ಯಯ’ ಎಂಬ ಸಂವತ್ಸರವಿದೆ; ‘ಆಯ’ ವೆಂಬುದಿಲ್ಲ. ಆದ್ದರಿಂದ ಆಯತಪ್ಪಿದರೆ ಜನರಿಗೆ ಬೇಸರವಿಲ್ಲ. ಒಂದು ವೇಳೆ ಸರಿಪಡಿಸುತ್ತೇವೆಂದು ತಾವೇ ಮುನ್ನುಗ್ಗಿದರೆ ಅಶ್ವಸೇನನ ಹಣೆಬರಹ ಖಾತ್ರಿ. ಆಳುವವರಿಗೆ ಆಯವೂ ಪ್ರಜೆಗೆ ವ್ಯಯವೂ ಆಗಿರುವ ಈ ಕರಾಮತ್ತನ್ನು ನೋಡಿ ಸುಖಿಸುವ ಮಂದಿಯೇ ಹೆಚ್ಚು. ಕೆಲವರು ಮಾತ್ರ ಇದನ್ನು ಚಿಂತಿಸುತ್ತಾರೆ. ಅಪರೂಪಕ್ಕೊಬ್ಬೊಬ್ಬರು ಪ್ರತಿಕ್ರಿಯಿಸುತ್ತಾರೆ. ಮಾಧ್ಯಮದವರು ತಮ್ಮ ಪ್ರಚಾರದ ದೃಷ್ಟಿಯಿಂದ ರಾಜಕಾರಣಿಗಳನ್ನು ಈ ಬಗ್ಗೆ ಪ್ರಶ್ನಿಸುತ್ತಾರೆ. ಅವರು ತಮ್ಮ ಎಂದಿನ ಪಕ್ಷಪ್ರೀತಿ-ಭಕ್ತಿಯಿಂದ ಅಭಿಪ್ರಾಯವನ್ನು ಹೇಳುತ್ತಾರೆ. ಇದು ಸತ್ಯವಲ್ಲ ಎಂಬುದು ಹೇಳುವವನಿಗೂ ಕೇಳುವವನಿಗೂ ಗೊತ್ತಿದ್ದರೂ ಉಭಯತರೂ ಜನರಿಗೆ ಮೋಸಮಾಡುವ ಒಪ್ಪಂದಕ್ಕೆ ಸಾಕ್ಷಿಯಾಗುತ್ತಾರೆ. ಯಾವುದೇ ದೇಶದ, ಯಾವುದೇ ಪಕ್ಷದ ಯಾವುದೇ ಬಜೆಟ್ ಜನರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿರುತ್ತದೆಂದು ನಂಬಬಾರದು. ಏಕೆಂದರೆ ಅದನ್ನು ಮಂಡಿಸುವುದು ಒಬ್ಬ ರಾಜಕಾರಣಿ. ಆತ/ಆಕೆ ಅಧಿಕಾರದ ಉಳಿವಿಗಾಗಿ ಅಥವಾ ತಮ್ಮ ಅಥವಾ ತಮ್ಮ ಪಕ್ಷದ ರಾಜಕೀಯ ಹಿತಾಸಕ್ತಿಯನ್ನು ಕಾಪಾಡುವುದಕ್ಕಾಗಿ ಮತ್ತು ಚುನಾವಣಾ ಕಾಲದಲ್ಲಾದರೆ ಮತಗಟ್ಟೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಒಂದಷ್ಟು ಮರುಳುಮಾಡುವ ಬಜೆಟನ್ನು ದಾಖಲಿಸುತ್ತಾರೆ. ಅದನ್ನು ತಯಾರಿಸುವುದು ಆಡಳಿತ ಪಕ್ಷದ ನಿಯಂತ್ರಣದಲ್ಲಿರುವ ‘ಸರಕಾರಿ ಅಧಿಕಾರಸ್ಥ ಅರ್ಥತಜ್ಞರು’. ಈ ಅಧಿಕಾರಿಗಳ ಸಾಮಾನ್ಯ ಪ್ರವೃತ್ತಿಯೆಂದರೆ ಆಳುವವರನ್ನು ಕಂಡರೆ ಬಾಲವಾಡಿಸುವುದು ಮತ್ತು ಒಮ್ಮೆ ಬಜೆಟನ್ನು ಮಂಡಿಸಿದರೆಂದರೆ ಅದನ್ನು ಗಿಲಿಟು ಹಚ್ಚಿ ಸಮರ್ಥಿಸುವುದು. ಜನರು ಈ ಜಾಯಮಾನಕ್ಕೆ ಎಷ್ಟು ಒಗ್ಗಿಹೋಗಿದ್ದಾರೆಂದರೆ ತಮಗೆ ಏನೇ ಕಷ್ಟ ಒದಗಿದರೂ ಅದು ತಮ್ಮ ಕರ್ಮವೆಂದು ತಿಳಿಯುತ್ತಾರೆಯೇ ಹೊರತು ಅದರಲ್ಲಿ ಮನುಷ್ಯನ ಪಾತ್ರವಿದೆಯೆಂದು ಅದರಲ್ಲೂ ತಾನು ನಂಬಿದ, ತಾನು ಪೂಜ್ಯತೆಯ ಭಾವ ಹೊಂದಿದ ಯಾವುದೇ ವ್ಯಕ್ತಿ-ಶಕ್ತಿಯ ಪಾತ್ರವಿರಬಹುದೆಂದು ಭಾವಿಸುವುದಿಲ್ಲ. ಒಳ್ಳೆಯದಾದರೆ ದೇವರನ್ನು ಹೊಗಳಿ, ಕೇಡಾದರೆ ತನ್ನ (ಪೂರ್ವಾರ್ಜಿತವೆನ್ನಲಾದ) ಕರ್ಮವನ್ನು ತೆಗಳಿ, ಮುಂದುವರಿಯುವುದು ಆಸ್ತಿಕರ ಸ್ವಭಾವವಾದರೆ, ತನಗೇನಾದರೂ ಸರಿಯೆ, ತಾನು ಹೀಗೇ ಇರುತ್ತೇನೆಂಬ ಹಠಸ್ವಭಾವದ ತಂಡ ಇನ್ನೊಂದು. ಇದು ನಮ್ಮ ರಾಜಕೀಯ ವ್ಯವಸ್ಥೆಗೆ ಅನುಕೂಲವಾಗಿದೆ. ಮತ್ತೆ ಬಜೆಟನ್ನು ಅವಲೋಕಿಸಿದರೆ ತಮ್ಮ ರಕ್ತವನ್ನು ಇನ್ನಷ್ಟು ಕೆಂಪಾಗಿಸಿಕೊಳ್ಳುವುದಕ್ಕೆ ಆಳುವವರು ಜನರ ರಕ್ತವನ್ನೇ ಹೀರುತ್ತಿರುತ್ತಾರೆ. ನಮ್ಮ ಪ್ರಜೆಗಳು ರಕ್ತದಾನಿಗಳು. ಭೂಮಿಯಲ್ಲಿ ರಕ್ತದ ಕೋಡಿ ಹರಿದರೂ ಅದನ್ನು ಭೂತಾಯಿಗರ್ಪಿಸಿ ಮತ್ತೆ ಆಳುವವರಿಗೆ ರಕ್ತದಾನಮಾಡುವವರು. ಇಲ್ಲವಾದರೆ ವಾಹನ ವಿಮೆ, ವೈದ್ಯಕೀಯ ವಿಮೆ, ಮುಂತಾದ ಜೀವಪರ ಮತ್ತು ಅನಿವಾರ್ಯ ವೆಚ್ಚಕ್ಕೆ (ಇವುಗಳಲ್ಲಿ ವಾಹನ ವಿಮೆ ಶಾಸನಬದ್ಧವಾದದ್ದು ಮತ್ತು ಕಡ್ಡಾಯವಾಗಿರುವಂಥದ್ದು!) ಶೇ. 18 ಜಿಎಸ್‌ಟಿ ಎಂದು ಉಲ್ಲೇಖವಾಗುವ ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸಿದ್ದನ್ನೂ ನಮ್ಮ ಜನರು ತಾಳಿಕೊಳ್ಳುತ್ತಿರಲಿಲ್ಲ. ಆಸ್ತಿಮಾರಾಟಕ್ಕೆ ವಿಧಿಸುವ ಬಂಡವಾಳ ಲಾಭ (ಕ್ಯಾಪಿಟಲ್ ಗೈನ್ಸ್) ತೆರಿಗೆಯಲ್ಲಾದ ತೀವ್ರ ಹೆಚ್ಚಳವನ್ನು, ಹಿಂದೆ ಜಾರಿಯಲ್ಲಿದ್ದ ಸೂಚ್ಯಂಕವನ್ನು 2001ರ ಬಳಿಕ ಹೊಂದಿ ಆಸ್ತಿಯ ಸಂಬಂಧ ತೆಗೆದುಹಾಕಿದ್ದನ್ನು ಸಹಿಸಿಕೊಳ್ಳುತ್ತಿರಲಿಲ್ಲ. ಅಂತ್ಯಕ್ರಿಯೆಗಳಿಗೆ, ಉತ್ತರಕ್ರಿಯೆಗಳಿಗೆ, ಜಿಎಸ್‌ಟಿ ವಿಧಿಸುವುದಿಲ್ಲವೆಂದು ಅರ್ಥಮಂತ್ರಿ ಆಶ್ವಾಸನೆ ನೀಡಿದ್ದಾರೆ. ಸತ್ತವರಿಗೆ ನಡೆಸುವ ವಾರ್ಷಿಕ ವಿಧಿವಿಧಾನಗಳಿಗೂ ತೆರಿಗೆ ಹೊರೆ ಈಗಿನ್ನೂ ಪ್ರಸ್ತಾವವಾಗಿಲ್ಲ. ಹೆರಿಗೆಗಿನ್ನೂ ತೆರಿಗೆ ಹಾಕಿಲ್ಲ. ಮನುಷ್ಯನ ಉಸಿರಾಟಕ್ಕೆ, ಹುಟ್ಟುಸಾವಿಗೆ ಇನ್ನೂ ತೆರಿಗೆ ವಿಧಿಸಿಲ್ಲ. ಯಾವನಾದರೊಬ್ಬ ಆಡಳಿತ ಸೇವೆಯ ಮಹಾನುಭಾವನಿಗೆ ಇದು ನೆನಪಾದರೆ ಅದಕ್ಕೂ ತೆರಿಗೆ ಬಿದ್ದೀತು. ವಿಶೇಷವೆಂದರೆ ತಾನು ಹೇರುವ, ಹೇರಿದ ಈ ಹೊರೆಯನ್ನು ಅದು ಹಗುರೆಂದು ಪ್ರಚಾರಮಾಡುವ ಒಂದು ತಂಡವನ್ನೇ ಅರ್ಥಸಚಿವರು ನೇಮಿಸಿಕೊಂಡಂತಿದೆ. ನಮ್ಮ ಅಜ್ಞಾನಿ, ಮುಗ್ಧ ಅಮಾಯಕರಿಗೆ ಈ ಹೊರೆ ಅಗತ್ಯ ಮತ್ತು ಅದು ಪ್ರಜಾಪರಿಪಾಲನೆಯ ಒಂದು ಅಂಗವೆಂದು, ಜನಹಿತವೆಂದು ಜನರಿಗೊಪ್ಪಿಸುವ ಪುಣ್ಯಕಾಯಕದಲ್ಲಿ ಒಂದಷ್ಟು ಮಂದಿ ಮಾಧ್ಯಮಗಳ, ಸಾಮಾಜಿಕ ಜಾಲತಾಣಗಳ ಮೂಲಕ, ಜನರನ್ನು ತಲುಪುತ್ತಾರೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಜನರಿಗೆ ತಿಳಿಯದ ರೀತಿಯಲ್ಲಿ ಹೇಳುವುದು ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರ ಮಾತ್ರವೆಂದು ನಾವು ನಂಬಬಹುದು. ಇದರಿಂದಾಗಿಯೇ ನಂಬಿಕೆ ಅನ್ನುವುದು ತರ್ಕಕ್ಕಿಂತ ಮುಖ್ಯವಾಗಿ ಪರಿಣಮಿಸಿದೆ. ದ್ವೈತ-ಅದ್ವೈತ -ವಿಶಿಷ್ಟಾದ್ವೈತಗಳಲ್ಲಿ, ಶಿಯಾ-ಸುನ್ನಿಗಳಲ್ಲಿ, ಕೆಥೊಲಿಕ್-ಪ್ರೊಟೆಸ್ಟಾಂಟ್‌ಗಳಲ್ಲಿ ಅಥವಾ ಇಂತಹದೇ ವಿವಿಧ ಪಂಥಗಳನ್ನು ಹೊಂದಿದ ಪ್ರಪಂಚದ ಯಾವುದೇ ಸಮುದಾಯಗಳಲ್ಲಿ, ಯಾವುದು ಶ್ರೇಷ್ಠ ಎಂಬುದನ್ನು ಸಿದ್ಧಪಡಿಸುವ ಶ್ರಮಕ್ಕೆ ಸಮಾಜ ತೊಡಗಲೇ ಇಲ್ಲ. ಎಲ್ಲವೂ ಇರಲಿ ಎಂಬ, ರಾಜೀಪ್ರವೃತ್ತಿಯ ಹೆಸರಿನಲ್ಲಿ ಸಿದ್ಧವಾದ ಪಲಾಯನಸೂತ್ರದಲ್ಲಿ ಸಮಾಜ ತೃಪ್ತವಾಗಿದೆ. ಈಗ ಈ ಎಲ್ಲ ದೋಣಿಗಳು ಹುಟ್ಟುಹಾಕುತ್ತಲೇ ಇವೆ. ಆದರೆ ನಡುಗಡ್ಡೆಯಲ್ಲಿ ಉಳಿದುಹೋದವನನ್ನು, ಕಳೆದುಹೋದವನನ್ನು, ಪಾರುಮಾಡುವ ಕೆಲಸಕ್ಕೆ ಯಾರೂ ಹೋಗದೆ ಆತನ ಅಸಹಾಯಕತೆಯ ಕೈಬೀಸುವಿಕೆಯನ್ನು ತಮಗೆ ತೋರಿದ ಶುಭಾಶಯವೆಂದು ಬಗೆಯುವವರೇ ಎಲ್ಲರೂ. ಆಳುವವರು ತಾಯಿ ಮಕ್ಕಳನ್ನು ನೋಡುವಂತಿರಬೇಕೆಂಬ ಒಂದು ಪ್ರಮೇಯಕ್ಕೆ ವಿರುದ್ಧವಾಗಿ ಆಳುವವರು ಮಕ್ಕಳನ್ನು ಸರಿದಾರಿಗೊಯ್ಯುವ ನಿಟ್ಟಿನಲ್ಲಿ ನಿರ್ದಯರಾಗುವುದು ಅವರಿಗೆ ಅನಿವಾರ್ಯವೆಂಬ ಸೂತ್ರಕ್ಕೆ ಬದ್ಧರಾಗಿರುವ ಇನ್ನೊಂದು ಸಮೂಹವಿದೆ. ನಮ್ಮ ಪ್ರಜೆಗಳದ್ದು ಹೊರೆ ಅನಿವಾರ್ಯವಾದ ಅಟ್ಲಾಸನ ಕಥೆ. ಇಂತಹ ಜಿಝಿಯಾ ರೀತಿಯ ತೆರಿಗೆಯನ್ನು ಪ್ರಜೆಗಳ ಮೇಲೆ ಹೇರುವ ಸರಕಾರವನ್ನು ದೈವಾನುಗ್ರಹವೆಂದು ಎಲ್ಲಿಯ ವರೆಗೆ ತಿಳಿಯುತ್ತಾರೋ ಅಲ್ಲಿಯ ವರೆಗೆ ಪ್ರಜೆಯ ಪಾಡು ಸರಿಯಾಗದು.

ಈ ಬಾರಿಯ ಬಜೆಟ್‌ನಲ್ಲಿ ಎರಡು ರಾಜ್ಯಗಳನ್ನು ವಿಶೇಷವಾಗಿ ಆರಿಸಿದ್ದನ್ನು (ವಿವರಗಳು ಅಗತ್ಯವಿಲ್ಲ!) ಗಮನಿಸಿದರೆ ಈ ತಾಯ್ತನ ಅರ್ಥವಾಗುತ್ತದೆ. ಕುಂತಿ ತನ್ನ ಮಕ್ಕಳಿಗೆ ಆಹಾರ ನೀಡುವಾಗ ಎರಡು ಪಾಲು ಮಾಡುತ್ತಿದ್ದಳಂತೆ. ಒಂದು ಪಾಲನ್ನು ಭೀಮನಿಗಿಟ್ಟು ಇನ್ನರ್ಧವನ್ನು ಉಳಿದೆಲ್ಲರಿಗೆ ಹಂಚುತ್ತಿದ್ದಳಂತೆ. ಇದರಲ್ಲಿ ಅವರವರ ಅಗತ್ಯದ ಪ್ರಶ್ನೆಯಿತ್ತೇ ಹೊರತು ತನ್ನ ಉಳಿವಿನ ಪ್ರಶ್ನೆಯಿರಲಿಲ್ಲ. ಆದರೆ ಈ ಬಾರಿ ಒಕ್ಕೂಟ ಸರಕಾರವು ಕುಂತಿತನವನ್ನು ತನ್ನ ಅಧಿಕಾರದ ಉಳಿವಿಗಾಗಿ ಬಳಸಿಕೊಂಡಿದೆ. ಕಿಸೆಗಳ್ಳನಾದರೂ ತಾನು ಸಿಕ್ಕಿಬಿದ್ದಾಗ ಒಳಗೊಳಗೇ ನಾಚಿಕೊಳ್ಳುತ್ತಾನೆ. ಆದರೆ ಪ್ರಸಕ್ತ ಸರಕಾರ ಅದಕ್ಕೂ ಲೆಕ್ಕಿಸದೆ ತನ್ನ ಲಜ್ಜೆಗೆಟ್ಟ ಮುಖವನ್ನೆತ್ತಿ ನಿಂತಿದೆ. ಇಲ್ಲವಾದರೆ ಅಧಿಕಾರಕ್ಕೆ ಸಂಚಕಾರ.

ಇಂತಹ ಬಜೆಟ್ ಒಂದು ಚಕ್ರವ್ಯೆಹವೆಂಬ ರೂಪಕವನ್ನು ಸಂಸದ ರಾಹುಲ್ ಗಾಂಧಿ ಸ್ಮರಿಸಿದ್ದು ನಮ್ಮ ಮುಖ್ಯವಾಹಿನಿಗಳಲ್ಲಿ ಅಷ್ಟೇನೂ ಮುಖ್ಯವಾಗಲಿಲ್ಲ. ಎಲ್ಲ ಪ್ರಜೆಗಳೂ ಅಭಿಮನ್ಯುಗಳಾದರೆ ಪಾಂಡವರ ಗೆಲುವೆಲ್ಲಿ?

ರಾಹುಲ್ ಗಾಂಧಿ ಅಂತಲ್ಲ, ಯಾರೇ ಇದನ್ನು ಬಳಸಿದರೂ ಈ ರೂಪಕವು ಸಾರ್ವಕಾಲಿಕ ಮತ್ತು ಸಾರ್ವತ್ರಿಕವಾದದ್ದು. ರಾಷ್ಟ್ರದೊಳಗೆ ಅಥವಾ ರಾಷ್ಟ್ರದ ಹೆಸರಿನಲ್ಲಿ ನಡೆಸುವ ಎಲ್ಲ ಅನ್ಯಾಯಗಳನ್ನೂ ರಾಷ್ಟ್ರೀಯವೆಂದು ಉಲ್ಲೇಖಿಸುವುದನ್ನು ನಾವು ನೋಡುತ್ತಿದ್ದೇವೆ. ಜನರ ಕಷ್ಟಪರಂಪರೆಯನ್ನು ಲೆಕ್ಕಿಸದೆ ತಮ್ಮ ಇಷ್ಟಾನಿಷ್ಟಗಳನ್ನಷ್ಟೇ ಗಮನಿಸುವುದು ರಾಷ್ಟ್ರೀಯತೆಯಾದರೆ ಇಂತಹ ಚಿಂತನೆಯ ಎಲ್ಲ ರಾಜಕಾರಣಿಗಳನ್ನು, ಅವರ ಸೇವೆಯನ್ನೇ ಭಾರತೀಯ ಆಡಳಿತ ಸೇವೆಯೆಂದು ಬಗೆದ ಭ್ರಷ್ಟ ಸರಕಾರಿ ಅಧಿಕಾರಿಗಳನ್ನು ರಾಷ್ಟ್ರೀಯ ಆಡಳಿತ ಸ್ವಯಂಸೇವಕರೆಂದು ಕರೆಯಬಹುದು.

ಕಾಲಾನುಕಾಲಕ್ಕೆ ಬಂದೊದಗುವ ದುರಿತಗಳಿಗೆ ಮನುಷ್ಯನೇ ಕಾರಣವೆಂದು ಬಗೆದರೆ ಮತ್ತು ಅದನ್ನು ಪ್ರತಿಭಟಿಸುವ, ಅದನ್ನು ವಿರೋಧಿಸುವ, ಅದರ ಶಮನಕ್ಕೆ ಬೇಕಾದ ಕ್ರಮಗಳನ್ನು ಜನರು ಕೈಗೊಂಡರೆ ಮಾತ್ರ ಇಂತಹ ವ್ಯತ್ಯಸ್ತ ರಾಜಕೀಯ-ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸಬಹುದು. ಎಲ್ಲ ಕಾಲದಲ್ಲೂ ಅನ್ಯಾಯ ನಡೆಯುತ್ತಿತ್ತು. ಪುರಾಣ, ಇತಿಹಾಸಗಳನ್ನು ತಿಳಿದವರಿಗೆ ಮನುಷ್ಯನ ಭಯಾನಕ ಕ್ರೌರ್ಯ ಹೇಗೆ ಕೆಲವು ಜೀವಸಂಕುಲಗಳನ್ನೇ ನಾಶಗೊಳಿಸಿತು ಮತ್ತು ಜೀವಸೆಲೆಯನ್ನು ನೀಡಿದ, ನೀಡುವ ಪ್ರಕೃತಿಯನ್ನು ಬತ್ತಿಸತೊಡಗಿತು ಎಂಬುದು ಅರ್ಥವಾದೀತು. ಭೂಭಾರ ಹರಣಕ್ಕೆ ದೇವರು ಅವತಾರವೆತ್ತಿ ಬಾರದಿದ್ದಾಗ ಮನುಷ್ಯರೇ ಅಗತ್ಯ ಕ್ರಮದ ಬಗ್ಗೆ ಚಿಂತಿಸಬೇಕು. ಮನುಷ್ಯನೂ ಕೈಯೆತ್ತಿ ಶರಣಾಗತನಾದರೆ? ಆಗ ತನ್ನ ಭಾರವನ್ನು ಕುಗ್ಗಿಸಿಕೊಳ್ಳುವಲ್ಲಿ ಭೂಮಿ ಮತ್ತು ಅದರ ಪೋಷಣೆಯ ಪ್ರಕೃತಿಯು ಅಗತ್ಯ ಕ್ರಮವನ್ನು ಕೈಗೊಳ್ಳುವುದು ಕಾಣುವ ಪವಾಡ. ಇದು ಅಲ್ಲಿ ಇಲ್ಲಿ ಎಂದಲ್ಲ, ಎಲ್ಲೂ ನಡೆಯಬಹುದು. ಖಾಂಡವವನದಹನ ನಡೆದದ್ದು ಅಗ್ನಿಯೆಂಬ ದಿಕ್ಪಾಲಕ ದೇವತೆ(?)ಯ ಅಜೀರ್ಣಶಮನಕ್ಕಾಗಿ. ಅದರಲ್ಲಿ ಬಲಿಯಾದವರು ತಪ್ಪಿತಸ್ಥರಲ್ಲ. ನಿರಪರಾಧಿಗಳು, ಅಮಾಯಕರು. ಆದರೆ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆದುಹೋದ ಅನಾಹುತಕ್ಕೆ ಜನ ದೈವಕೃಪೆಯ ನ್ಯಾಯವನ್ನು ಒದಗಿಸಿಕೊಟ್ಟರು.

ಈ ಲೇಖನವನ್ನು ಸಿದ್ಧಪಡಿಸುತ್ತಿರುವಾಗ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ಮತ್ತು ಅದರಿಂದಾದ ಅಪಾರ ಜೀವಹಾನಿ ಇವು ಕಾಡತೊಡಗಿವೆ. ಮನುಷ್ಯನಿಗೆ ಈ ದುಃಖದೆದುರು ಯಾವುದು ಮುಖ್ಯ, ಯಾವುದು ಅಮುಖ್ಯ ಎಂಬುದು ತಿಳಿಯಬೇಕಾದ ಈ ಸಂದರ್ಭದಲ್ಲಿ ಕತೆ, ಕವಿತೆ, ವಿಮರ್ಶೆ, ಪ್ರಶಸ್ತಿ, ಅಭಿನಂದನೆ, ಪ್ರಚಾರದಲ್ಲಿ ತೊಡಗಿಕೊಂಡವರನ್ನು ಗಮನಿಸಿದರೆ ಅನುಕಂಪ ಹುಟ್ಟುತ್ತದೆ. ಬದುಕನ್ನು ನೋಡುವ ರೀತಿಯ ಬಗ್ಗೆ ಗುಮಾನಿ ಬರುತ್ತದೆ.

‘ಜೀವನಚೈತ್ರ’ ಎಂಬ ಹಳೆಯ ಕನ್ನಡ ಸಿನೆಮಾದ ಒಂದು ಹಾಡು ‘‘ನಾದಮಯ ಲೋಕವೆಲ್ಲಾ..’’ ಎಂದು ಆರಂಭವಾಗುತ್ತದೆ. ಜೀವನವೈಪರೀತ್ಯದ ಈ ಕ್ಷಣಗಳಲ್ಲಿ ಅದನ್ನು ಹತಾಶ ಜನಸಮುದಾಯವು ‘‘ಆರ್ತನಾದಮಯ... ಈ ಲೋಕವೆಲ್ಲಾ...’’ ಎಂದು ಬದಲಾಯಿಸಿದರೆ, ಪ್ರಭುತ್ವ ತನ್ನ ದುಷ್ಟಚತುಷ್ಟಯವನ್ನು ಈಗ ಸಚಿವಸಂಪುಟದ, ಭಕ್ತಸಮು ದಾಯದ ಬಹುಸಂಖ್ಯೆಗೆ ಹಿಗ್ಗಿಸಿಕೊಂಡಿದ್ದು ಅವರೆಲ್ಲರೂ ವೈಪರೀತ್ಯಕ್ಕೆ ಬೆದರಲಾಗದು ಎಂದು ದೊರೆಗೆ ಸಮಾಧಾನ ಹೇಳಬಹುದು.

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News