ಮಲೆನಾಡಿನ ಪರಿಸರದ ಕಥೆ ಹೇಳುವ ‘ಕಾಳಿಂಗ ಕಥನ’

Update: 2024-02-27 08:42 GMT

ಚಳವಳಿ, ಹೋರಾಟ, ರಾಜಕಾರಣ, ಪತ್ರಿಕೋದ್ಯಮದ ಜೊತೆ ಬಿಡಲಾರದ ನಂಟನ್ನು ಹೊಂದಿರುವ ನೆಂಪೆ ದೇವರಾಜ್ ತೀರ್ಥಹಳ್ಳಿಯವರು. ಒಂದಷ್ಟು ಕಾಲ ತುಮಕೂರು ಮತ್ತು ಶಿವಮೊಗ್ಗದಲ್ಲಿ ಪತ್ರಿಕೋದ್ಯಮದ ಉಪನ್ಯಾಸಕರಾಗಿ ಕೆಲಸ ಮಾಡುತ್ತಾ ಹಲವು ಪ್ರತಿಭಾವಂತ ಪತ್ರಕರ್ತರನ್ನು ರೂಪಿಸಿದವರು. ತೀರ್ಥಹಳ್ಳಿ ಸಮೀಪದ ಹಾರೋಗೊಳಿಗೆಯಲ್ಲಿ ವಾಸವಿರುವ ಇವರ ಕೃಷಿಯ ಜೊತೆಗಿನ ಒಡನಾಟ ವಿಶಿಷ್ಟವಾದುದು. ಕೃಷಿಯಲ್ಲಿ ತೊಡಗಿಸಿಕೊಂಡು ಬರಹವೆಂಬ ತಪಸ್ಸಿನಲ್ಲಿ ಒಳಗೊಳ್ಳುವುದು ತುಸು ಕಷ್ಟದ ಕೆಲಸ. ಆದರೂ ದೇವರಾಜ್ ಏಗುವ ಬಗೆ ಅಪರೂಪದ್ದು. ಪಶ್ಚಿಮ ಘಟ್ಟದ ಒಡಲೊಳಗಿನ ಸಸ್ಯ, ಪ್ರಾಣಿ ಮತ್ತು ಪಕ್ಷಿಲೋಕವನ್ನು ಪೂರ್ಣ ಪ್ರಮಾಣದಲ್ಲಿ ಪರಿಚಯ ಮಾಡಿಕೊಳ್ಳಲು ಇವರು ನಡೆಸುವ ಒದ್ದಾಟ-ಗುದ್ದಾಟಗಳು ಗಮನಾರ್ಹವಾದವುಗಳು. ತೀರ್ಥಹಳ್ಳಿ ಭಾಗದಲ್ಲಿ ನೂರಾರು ಹೋರಾಟಗಳನ್ನು ರೂಪಿಸಿರುವ ಹೆಗ್ಗಳಿಕೆ ಇವರಿಗಿದೆ. ರೈತರು, ಪರಿಸರ, ಭಾಷೆ ಸೇರಿದಂತೆ ಹಲವು ಪ್ರಗತಿಪರ ಚಳವಳಿಗಳಲ್ಲಿ ನೇರವಾಗಿ ಭಾಗವಹಿಸಿದ್ದು ಮಾತ್ರವಲ್ಲದೆ ಅದನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ವಿಶ್ಲೇಷಿಸುತ್ತಾ ಬರುತ್ತಿದ್ದಾರೆ.

ಇವರ ನೂತನ ಕಥಾನಕ ‘ಕಾಳಿಂಗ ಕಥನ’ ಇದೀಗ ಹೊರಬಂದಿದೆ. ಒಂದು ಹಂತದಲ್ಲಿ ಕಳಚಿಹೋಗಿದ್ದ ತೀರ್ಥಹಳ್ಳಿ ಪರಿಸರದ ಸಾಹಿತ್ಯವನ್ನು ಮತ್ತೊಮ್ಮೆ ಜೋಡಿಸುವ ನಿಟ್ಟಿನಲ್ಲಿ ಇವರು ಗಳಿಸಿರುವ ದಟ್ಟ ಅನುಭವಗಳನ್ನು ‘ಕಾಳಿಂಗ ಕಥನ’ದಲ್ಲಿ ಸೃಜನಶೀಲಗೊಳಿಸುವ ಮೂಲಕ ಮತ್ತೊಮ್ಮೆ ಓದುಗರಿಗೆ ಪರಿಸರದ ಸಾಹಿತ್ಯವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಥಾನಕದ ನಾಯಕ ರಾಜೀವನ ಮೂಲಕ ಮಲೆನಾಡಿನ ಪರಿಸರವನ್ನು ಆಸ್ವಾದಿಸುತ್ತಲೇ ಇಲ್ಲಿನ ಅನೇಕ ಬವಣೆಗಳನ್ನು, ಸ್ವಾರಸ್ಯಕರ ಘಟನೆಗಳನ್ನು ಲೇಖಕರು ತೆರೆದಿಡುತ್ತಾ ಹೋಗಿದ್ದಾರೆ. ಇಲ್ಲಿನ ಹಕ್ಕಿಗಳ ಬದುಕಿನ ವೈಶಿಷ್ಟ್ಯಗಳನ್ನು ಗುರುತಿಸಬಲ್ಲ ತಜ್ಞತೆ ರಾಜೀವನಿಗೆ ಇದೆ. ತನ್ನ ರೈತಾಪಿ ಬದುಕಿನ ಗೋಜಲುಗಳ ನಡುವೆಯೂ ಮರಕುಟಿಕ ಹಕ್ಕಿಯ ಬದುಕನ್ನು ಗಮನಿಸಬಲ್ಲ ಸೂಕ್ಷ್ಮತೆಯು ಕೂಡಾ ಈತನಿಗಿದೆ. ಪುಂಡು ದನಗಳ ಬೀಡಾಡಿ ಗುಣಗಳನ್ನು ಈತ ಸ್ವಾರಸ್ಯಕರವಾಗಿ ವಿವರಿಸಬಲ್ಲ. ಹೂವು, ಜೇನು, ಚಿಗುರು, ಮಳೆ, ಮೀನು, ಶಿಕಾರಿ ಎಲ್ಲದರ ಹಿಂದಿನ ರಹಸ್ಯಗಳನ್ನು ಭೇದಿಸುವ ಸಂಶೋಧಕ ಪ್ರವೃತ್ತಿ ಇವನಿಗಿದೆ.

ರೈತರಿಗೆ ವಿನಾ ಕಾರಣ ಕಷ್ಟ ಕೊಡುವ ಸರಕಾರಿ ವ್ಯವಸ್ಥೆಯ ಬಗ್ಗೆ ಇವನಿಗೆ ಅತೀವ ಆಕ್ರೋಶವಿದೆ. ಮಲೆನಾಡಿಗೆ ಬೇಡವಾದ ಅನೇಕ ಸರಕಾರಿ ಯೋಜನೆಗಳ ಅಪ್ರಸ್ತುತತೆಯ ಬಗ್ಗೆ ಈತ ವಿವರಿಸುತ್ತಾನೆ. ಇದರಲ್ಲಿ ಮಂಕಿ ಪಾರ್ಕ್ ಎಂಬ ಮೂರ್ಖ ಯೋಜನೆಯೂ ಕೂಡಾ ಒಂದು.ಕೋಕೋ ಬೆಳೆಯ ವಿಷಯದಲ್ಲಿ ರೈತರನ್ನು ಮೂರ್ಖರನ್ನಾಗಿಸುವ ರಾಜಕಾರಣವನ್ನೂ, ಅದರ ಹಿಂದಿನ ಬಂಡವಾಳಶಾಹಿಗಳ ಲಾಭಕೋರತನವನ್ನೂ ವಿಶ್ಲೇಷಿಸುವ ಮಟ್ಟಿಗೆ ಈತ ಪ್ರಜ್ಞಾವಂತ ರೈತ. ಹೋರಾಟದ ಮನೋಭಾವವೂ ಈತನಲ್ಲಿ ಮಿಳಿತವಾಗಿರುವ ಕಾರಣ ಸರಕಾರದ ಅನೇಕ ನಿರುಪಯುಕ್ತ ಪ್ರಯೋಗಗಳನ್ನು ವಿರೋಧಿಸುವ ಜಾಗೃತ ಗುಣ ಇವನಿಗಿದೆ. ಪ್ರಕೃತಿಯ ದಟ್ಟ ಅನುಭವಗಳನ್ನು ದಾಖಲಿಸುವ ರಾಜೀವನ ವಿವರಗಳಲ್ಲಿ ಖಚಿತತೆ ಇದೆ.

ಕಾಡಿನ ಗಿಡ, ಮರ, ಬಳ್ಳಿ, ಬೀಜ, ಹಣ್ಣು, ಬೆಳೆ ಎಲ್ಲವನ್ನೂ ದೇಸಿ ನುಡಿಗಟ್ಟಿನಲ್ಲಿ ಹೇಳಲು ಪ್ರಯತ್ನಿಸಿರುವುದು ಈ ಕಥನಕ್ಕಿರುವ ಹೆಚ್ಚುಗಾರಿಕೆ.

ಹಾವುಗಳ ಬಗ್ಗೆ ಜನರಿಗೆ ಇರುವ ಭಯ, ಮೂಢನಂಬಿಕೆಗಳನ್ನು ಕಥಾನಕದಲ್ಲಿ ಚರ್ಚಿಸಲಾಗಿದೆ.ಅನೇಕ ಘಟನೆಗಳ ವಿವರಗಳನ್ನು ಕೊಟ್ಟು ಹಾವಿನ ಬದುಕಿನ ನಾನಾ ಮಜಲುಗಳನ್ನು ವಿವರಿಸಲಾಗಿದೆ.ಹಾವಿನ ವಿಸ್ಮಯ ಸಂಗತಿಗಳನ್ನು ಸಂಶೋಧನೆಯ ಕಣ್ಣುಗಳಿಂದ, ಅನುಭವದ ಆಧಾರದಿಂದ ನೋಡುವ ಬರಹಗಳೇ ಕನ್ನಡ ಸಾಹಿತ್ಯದಲ್ಲಿ ವಿರಳ. ಈ ಕೆಲಸವನ್ನು ಕಾಳಿಂಗ ಕಥನ ಹೊಸ ಬಗೆಯಲ್ಲಿ ದಾಖಲಿಸಿದೆ.

ಮಲೆನಾಡಿನ ಹಳ್ಳಿಗನೊಬ್ಬನ ಕನ್ನಡದಲ್ಲಿ ಸೃಷ್ಟಿಯಾಗಿರುವ ರಾಜೀವನ ಬದುಕಿನ ಸ್ಮತಿಯ ನೆನಪಿನ ಸುರುಳಿಗಳ ಈ ಕಥನ ಒಂದೊಂದು ಘಟನೆಗಳ ಮೂಲಕ ಹಿಂದಕ್ಕೆ ಚಲಿಸಿದಂತೆ ಕಾಣುತ್ತದೆ. ಅನೇಕ ಸಂಗತಿಗಳನ್ನು ಒಂದೇ ಕಥಾ ಹಂದರದಲ್ಲಿ ತಂದಿರುವ ನೆಂಪೆ ದೇವರಾಜ್ ಬರಹಗಳಲ್ಲಿ ಪ್ರಕೃತಿಯ ವರ್ಣನೆಗಳು ತುಸು ಭಾರವೆನಿಸುವಷ್ಟು ಖಂಡಿತಾ ಇವೆ.

ಕಥಾನಕದಲ್ಲಿ ಹಾವಿನ ವರ್ಣನೆಯ ಕೆಲ ಸಾಲುಗಳು ಹೀಗಿವೆ, ‘‘ಕಿಟಾರನೆ ಕಿರುಚಿಕೊಳ್ಳುವಷ್ಟು ಆ ಹಾವಿನ ಕೆಲವು ಭಾಗಗಳು ವಿಕಾರಗೊಂಡಿದ್ದವು. ಅದೇ ಶಕ್ತಿಯಲ್ಲಿ ಹಾವನ್ನು ಪಂಚಾಯ್ತಿ ಕಚೇರಿ ಎದುರು ಎಳೆದು ತಂದು ಹಾಕಿದ್ದೇ ತಡ, ಮನೆಯಲ್ಲಿದ್ದ ಹೆಂಗಸರು, ಮಕ್ಕಳು ಮತ್ತು ಅಂಗಡಿ ಕಟ್ಟೆಯಲ್ಲಿದ್ದ ಗಂಡಸರುಗಳಾದಿಯಾಗಿ ಬಂದು ಹಾವಿನ ಸುತ್ತ ದೂರ ದೂರವೇ ನಿಂತರು. ಇವರುಗಳ ಭಯ ಮಿಶ್ರಿತ ಕಣ್ಣೋಟಗಳು ಇಳಿ ಸಂಜೆಯನ್ನು ಪೂರ್ಣ ಭಯಗೊಳಿಸಿತ್ತು. ಈ ಹಂತದಲ್ಲಿ ಮೌನದ ಕಟ್ಟೆ ಒಡೆಯಲೇ ಬೇಕಿತ್ತು. ತಮ್ಮ ಮನಸ್ಸಿಗೆ ತೋಚಿದ ಯಾವ್ಯಾವ ಹೆಸರುಗಳು ತೂರಿ ಬಂದವೋ ಅಂತಹ ಹೆಸರುಗಳನ್ನೆಲ್ಲ ಹಾವಿನ ಮೇಲೆ ಆರೋಪಿಸ ಹತ್ತಿದರು. ಸರೀಸೃಪದ ಎಲ್ಲ ಲಕ್ಷಣಗಳನ್ನು ಹೊಂದಿದ ಕಾರಣಕ್ಕೆ ಇದನ್ನು ಹಾವು ಎನ್ನಬಹುದಿತ್ತೇ ವಿನಃ ಹೆಬ್ಬಾವು, ಕಾಳಿಂಗ, ದಾಸದಂತಹ ಬೃಹದಾಕಾರದ ಹಾವುಗಳಲ್ಲಿರಬಹುದಾದ ಯಾವುದೇ ಸಣ್ಣ ಪುಟ್ಟ ಲಕ್ಷಣಗಳನ್ನೂ ಮೈ ಮೇಲೆ ಹೊತ್ತುಕೊಳ್ಳದಂತಹ ಮತ್ತು ಆಕಾರದಲ್ಲಿ ಇವಾವುಗಳಿಗೂ ಹೋಲಿಕೆಯಾಗದ ಹಾವನ್ನು ಆಜು ಬಾಜಿನಲ್ಲಿ ಇಲ್ಲಿಯವರೆಗೆ ಕಂಡವರಾರೂ ಅಲ್ಲಿರಲಿಲ್ಲ. ದೂಮನಂತೂ ಹಾವನ್ನೆಳೆದು ಕೊಂಡು ಬಂದ ಸುಸ್ತಿನಲ್ಲಿ ಏದುಸಿರು ಬಿಡುವುದರಲ್ಲೇ ಮಗ್ನನಾಗಿದ್ದ. ಹಾವಿನ ಆಕಾರ ಮತ್ತು ಅದು ಕಾಡು ಕುರಿಯೊಂದನ್ನು ನುಂಗುವ ಸಂದರ್ಭದಲ್ಲಿ ತನ್ನ ಕತ್ತಿಯ ಮೂಲಕ ಹಾವಿನ ಬಾಯಿ ಸಿಗಿದು ಕಾಡು ಕುರಿಯನ್ನು ಬಿಡಿಸಿದ ಆ ಬೀಭತ್ಸ ಘಟನೆಯ ಅಕ್ಷರ ಅಕ್ಷರಕ್ಕೂ ಧೋಖಾ ಮಾಡದೆ ತನಗೊದಗಿದ ಏದುಸಿರಿನಲ್ಲಿ ಹೇಳುತ್ತಿದ್ದಾಗ ಗುಂಪಿನೊಳಗಿದ್ದ ರಾಜೀವನ ಎಳೆಯ ಮನಸ್ಸು ದೂಮನ ಸಾಹಸದ ಬಗ್ಗೆ ತನ್ನೊಳಗೆ ಬಹುದೊಡ್ಡ ಕಲ್ಪನೆಯೊಂದನ್ನು ಹೆಣೆಯಲಾರಂಭಿಸಿತ್ತು’’.

ತೀರ್ಥಹಳ್ಳಿ ಭಾಗದಲ್ಲಿ ನೂರಾರು ಹೋರಾಟಗಳನ್ನು ರೂಪಿಸಿರುವ ಹೆಗ್ಗಳಿಕೆ ಲೇಖಕರಿಗಿದೆ. ರೈತರು, ಪರಿಸರ, ಭಾಷೆ ಸೇರಿದಂತೆ ಹಲವು ಪ್ರಗತಿಪರ ಚಳವಳಿಗಳಲ್ಲಿ ನೇರವಾಗಿ ಭಾಗವಹಿಸಿದ್ದು ಮಾತ್ರವಲ್ಲದೆ ಅದನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ವಿಶ್ಲೇಷಿಸುತ್ತಾ ಬರುತ್ತಿರುವ ಲೇಖಕರ ಈ ಕೃತಿ ಸರಾಗವಾಗಿ ಒಂದೇ ಹಿಡಿತದಲ್ಲಿ ಓದಿಸಿಕೊಂಡು ಹೋಗುತ್ತದೆ. ಈ ಕೃತಿಯನ್ನು ಮೈಸೂರಿನ ಭಾಗ್ಯಶಂಕರ ಪ್ರಕಾಶನ ಪ್ರಕಟಿಸಿದೆ. 100 ಪುಟಗಳನ್ನು ಹೊಂದಿರುವ ಈ ಪುಸ್ತಕದ ಮುಖ ಬೆಲೆ 150 ರೂಪಾಯಿಗಳು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಅಮ್ಮಸಂದ್ರ ಸುರೇಶ್

contributor

Similar News