ಸಾಮಾಜಿಕ ಸ್ವಾಸ್ಥ್ಯಕ್ಕೆ ತುಡಿಯುವ ‘ಇದು ಬರಿ ಬರಹವಲ್ಲ’ ಕೃತಿ

Update: 2024-01-24 12:47 GMT

ವೃತ್ತಿಯಲ್ಲಿ ಪತ್ರಿಕೆಯ ವರದಿಗಾರರಾದ ಯುವ ಬರಹಗಾರ, ಹಸನಡೋಂಗ್ರಿ ಎಚ್. ಬೇಪಾರಿ ‘ಬರಹದ ಬೆಳಕು’ ಕೃತಿಯ ನಂತರ ಇದೀಗ ಮತ್ತೊಂದು ಕೃತಿ ‘ಇದು ಬರಿ ಬರಹವಲ್ಲ’ ಓದುಗರ ಕೈಗಿತ್ತಿದ್ದಾರೆ.

ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಸದಾ ಹಂಬಲಿಸುವ ಹಸನಡೋಂಗ್ರಿ ಅವರ ಪ್ರವೃತ್ತಿಯನ್ನು ಪತ್ರಿಕೆಯಲ್ಲಿನ ಅವರ ವರದಿಗಳಲ್ಲಿ ಯಾರಾದರೂ ಸಹಜವಾಗಿಯೇ ಗುರುತಿಸಬಹುದಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ತುಂಬ ಅಪರೂಪವೆನಿಸುವ ಅನೇಕ ಪತ್ರಿಕಾ ವರದಿಗಳಿಗೆ, ಲೇಖನಗಳಿಗೆ ಹೊಸದೊಂದು ರೂಪ ಕೊಟ್ಟು ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿರುವುದು ನಿಜಕ್ಕೂ ಅನುಕರಣೀಯ ನಡೆಯಾಗಿದೆ.

ಪ್ರಾದೇಶಿಕ ಮಟ್ಟದಿಂದ ಹಿಡಿದು ಜಾಗತಿಕ ಮಟ್ಟದವರೆಗೂ ವ್ಯಾಪಿಸಿಕೊಂಡಿರುವ ಇಲ್ಲಿರುವ ವರದಿ ರೂಪದ ಲೇಖನಗಳು ಸಮಕಾಲೀನ ಸಂದರ್ಭದ ಹತ್ತು ಹಲವು ಸಮಸ್ಯೆಗಳನ್ನು ಚರ್ಚೆಗೆ ಗ್ರಾಸವಾಗಿಸುತ್ತವೆ. ಅವುಗಳಿಗೆ ಪರಿಹಾರ ಕೊಡುವ ತುಡಿತವನ್ನು ತೋರುತ್ತವೆ. ಬಾಲ್ಯವಿವಾಹ ತಡೆಗೆ ಡಿ.ಸಿ. ಪತ್ರಾಂದೋಲನ, ಆತ್ಮಹತ್ಯೆ ತಡೆಯಲು ಜಾಗೃತಿ ಅವಶ್ಯ, ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಿ.. ಈ ರೀತಿಯ ಹಲವು ಲೇಖನಗಳು ಮಾನವೀಯ ಮುಖಗಳನ್ನು ಮತ್ತೆ ಮತ್ತೆ ಅನಾವರಣಗೊಳಿಸುತ್ತಲೇ ಓದುಗರಲ್ಲೂ ಒಂದು ರೀತಿಯ ಹೊಸ ಹೊಳಹು ಹೊಳೆಯಿಸಲು ಕಾರಣವಾಗುತ್ತವೆ. ಗುಡುಗಿಗೆ ನಡುಗುತ್ತಿದೆ ಗುಡೂರ ಸರಕಾರಿ ಶಾಲೆ, ಪ್ರಯಾಣಿಕರಿಗೆ ಬಯಲೇ ಬಸ್ ತಂಗುದಾಣ ಎನ್ನುವ ಕೆಲವು ಲೇಖನಗಳ ಶೀರ್ಷಿಕೆಗಳಂತೂ ತುಂಬಾ ನಾಜೂಕಿನಿಂದಲೇ ಸಂಬಂಧ ಪಟ್ಟವರಿಗೆ ಚಾಟಿ ಬೀಸುತ್ತ ಸಾಮಾಜಿಕ ಕಾಳಜಿಯನ್ನು ತೋರ್ಪಡಿಸುತ್ತವೆ.

‘ದೇಶ ಸೇವೆ ಅರ್ಧಕ್ಕೆ ಬಿಟ್ಟಲ್ಯೋ ಮಗನೆ’ ಎಂಬ ಲೇಖನದಲ್ಲಿ ಬಿ.ಎಸ್.ಎಫ್. ಯೋಧನೊಬ್ಬ ಕರ್ತವ್ಯದಲ್ಲಿದ್ದಾಗ ವಿದ್ಯುತ್ ಅವಘಡಕ್ಕೆ ತುತ್ತಾಗಿ ಮರಣಹೊಂದುತ್ತಾನೆ. ಯೋಧನ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸಿದಾಗ ಅಲ್ಲಿನ ಜನರ ಕಣ್ಣೀರು ಕಡಲಾಗಿ ಹರಿಯುತ್ತದೆ. ಹೆತ್ತ ಕರುಳಿನ ಮುಟ್ಟುವ ಆಕ್ರಂದನ ಕಲ್ಲು ಹೃದಯದವರನ್ನು ಕರಗಿಸಿ ಬಿಡುತ್ತದೆ. ದೇಶ ಸೇವೆ ಅರ್ಧಕ್ಕೆ ಬಿಟ್ಯಲ್ಲೋ ಮಗನೇ ಎಂಬ ತಾಯಿಯ ಕರುಳಿನ ನೋವಿನ ಮಾತು ಸ್ವಾತಂತ್ರ್ಯ ಯೋಧ ಭಗತ್‌ಸಿಂಗ್‌ನ ತಾಯಿ ಮಾತನ್ನು ನೆನಪಿಸಿ ಕರುಳು ಹಿಂಡುತ್ತದೆ. ಇಲ್ಲಿನ ಬಹುತೇಕ ಲೇಖನಗಳು ಒಟ್ಟಾರೆ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕಾಳಜಿಗಳಿಗೆ ಸಾಕ್ಷಿಯಾಗುತ್ತವೆ.

ಪತ್ರಿಕೆಯ ಮಿತಿಗೆ ಒಳಪಟ್ಟು ಹೊರ ಹೊಮ್ಮಿದ ಇಲ್ಲಿನ ಲೇಖನಗಳೆಲ್ಲವೂ ಸಹಜವಾಗಿಯೇ ತೀರ ಸಾಂದರ್ಭಿಕವಾದ ಚಿತ್ರಣಗಳನ್ನು ಚಿಕ್ಕದಾಗಿ ನಮ್ಮ ಮುಂದೆ ತೆರೆದಿಡುತ್ತವೆ. ಆಕಾರದಲ್ಲಿ ಸಣ್ಣದೆಂದು ಮೇಲ್ನೋಟಕ್ಕೆ ಇಲ್ಲಿನ ಬರಹಗಳು ತೋರಿದರೂ ಅವೆಲ್ಲವುಗಳೂ ಸತ್ವಯುತವಾಗಿವೆ. ಮಾನವೀಯತೆ ಅಂಶಗಳಿಂದ ಅಲಂಕೃತಗೊಂಡಿವೆ. ಚಿಂತನಾಪರವಾದ ಶೈಲಿಗೆ ಒಗ್ಗಿಕೊಂಡು ಒಡಮೂಡಿವೆ. ಹಾಗಂತ ಅಗತ್ಯವಾದ ಸಂದರ್ಭಗಳಲ್ಲಿ ಬಹು ಸೂಕ್ಷ್ಮವಾಗಿಯೇ ಕಟಕಿಯಾಡದೆ ಬಿಡುವುದಿಲ್ಲ. ವರದಿಯ ಮೊನಚು, ಬುದ್ಧಿಯ ಮಿಂಚು, ಭಾವದ ಬೆರಗುಗಳ ಮೂಲಕ ಮನಸ್ಸಿಗೆ ನಾಟುತ್ತವೆ. ಇಂದಿನ ಸುದ್ದಿ, ನಾಳಿನ ರದ್ದಿ ಎನ್ನುವ ಹಲವರ ಮಾತಿನಾಚೆಯೂ ತಮ್ಮ ಬೆಲೆಯನ್ನು ಉಳಿಸಿಕೊಳ್ಳುತ್ತವೆ. ಭಾಷೆಯ ಸಾಮರಸ್ಯದ ಅನುಭವಕ್ಕೆ ಸಾಫಲ್ಯತೆ ಒದಗಿಸುತ್ತವೆ. ಕಾಲದ ಹಂಗು ಮೀರಿ ಮನಸ್ಸಿನಾಳದಲ್ಲಿ ಜೀವಂತಿಕೆಯನ್ನು ಉಳಿಸಿಕೊಳ್ಳುತ್ತವೆ. ತಮ್ಮ ಅನುಭವಗಳನ್ನು ಹಲವು ಮಗ್ಗಲುಗಳಿಂದ ಪರೀಕ್ಷಿಸುವ ಬೇಪಾರಿ ಅವರ ಚಾಕಚಕ್ಯತೆಯನ್ನು ಹಲವು ಲೇಖನಗಳಲ್ಲಿ ಕಾಣಸಿಗುತ್ತವೆ.

ಪತ್ರಿಕಾ ಪರಂಪರೆಯ ಸತ್ವಯುತ ಸಾರವನ್ನು ಹೀರಿಕೊಂಡು ಅದರ ಧಾಟಿ-ಧೋರಣೆಗಳನ್ನು ಅನುಸರಿಸಿಯೂ ಎಲ್ಲೂ ಅನುಕರಣವಾಗದಂತೆ ಬದುಕಿಗೆ ತೀರ ಅಗತ್ಯವಾದ ಸಂಗತಿಗಳನ್ನು ತಮಗೆ ಹತ್ತಿರವಾದ ಅನುಭವಗಳನ್ನು ಪ್ರಾಮಾಣಿಕ ಪರಿಶ್ರಮದಿಂದ, ನಿಸ್ಸಂಕೋಚವಾಗಿ ಹಿಡಿದಿಟ್ಟಿರುವುದು ಇದು ಬರಿ ಬರಹವಲ್ಲ ಕೃತಿಯ ವಿಶಿಷ್ಟ ಮತ್ತು ಶ್ಲಾಘನೀಯ ಸಂಗತಿಯಾಗಿದೆ. ಕಾಲಕ್ರಮೇಣ ಹಸನ್ ಇನ್ನಷ್ಟು ಉತ್ತಮ ಕೃತಿಗಳನ್ನು ಕೊಡಬಲ್ಲರು ಎಂಬ ಭರವಸೆಯನ್ನು ಹುಟ್ಟಿಸಿದ್ದಾರೆ. ಅವರ ಮುಂದಿನ ಪಯಣ ಇನ್ನಷ್ಟು ಫಲಪ್ರದವಾಗಲಿ ಎಂದು ಮನಸಾರೆ ಹಾರೈಸುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಮಹಾದೇವ ಬಸರಕೋಡ

contributor

Similar News